ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5, 8, 9 ಹಾಗೂ 11ನೇ ತರಗತಿ ಬೋರ್ಡ್‌ ಪರೀಕ್ಷೆ ರದ್ದು: ಸುಪ್ರೀಂ ಕೋರ್ಟ್‌

ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ಅನುಮತಿಸಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.
Published 12 ಮಾರ್ಚ್ 2024, 16:04 IST
Last Updated 12 ಮಾರ್ಚ್ 2024, 16:04 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 5, 8, 9 ಹಾಗೂ 11ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ಅನುಮತಿಸಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶ ರದ್ದುಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸಾ) ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿ ಕುರಿತಂತೆ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.

‘ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಕ್ರಮವು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 30 ಅನ್ನು ಉಲ್ಲಂಘಿಸುತ್ತದೆ. ಈ ಪರೀಕ್ಷೆ ಕಾನೂನುಬಾಹಿರವೆಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಹೇಳಿದೆ. ಪರೀಕ್ಷಾ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಪರೀಕ್ಷೆಯನ್ನು ನಡೆಸಬಾರದು’ ಎಂದು ಸೂಚಿಸಿದೆ. 

‘ನಾವು ಈ ಮೇಲ್ಮನವಿಯನ್ನು ಅಂಗೀಕರಿಸುತ್ತಿದ್ದೇವೆ. ವಿಭಾಗೀಯ ಪೀಠ ನೀಡಿದ ಆದೇಶವನ್ನು ವಜಾಗೊಳಿಸುತ್ತಿದ್ದೇವೆ. ವಿಭಾಗೀಯ ಪೀಠವು ಮುಖ್ಯ ಮೇಲ್ಮನವಿಗಳನ್ನು ಕಾನೂನಿನ ಅನುಸಾರ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಆ ವಿಚಾರಣೆಯು ಅರ್ಜಿಯ ಮೆರಿಟ್‌ ಅನ್ನು ಆಧರಿಸಿರಬೇಕು, ನಾವು ವ್ಯಕ್ತಪಡಿಸಿದ ಅಭಿಪ್ರಾಯಗಳ ಮೇಲಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ.  

ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದೇವದತ್‌ ಕಾಮತ್‌, ‘ವಿಭಾಗೀಯ ಪೀಠವು ಸರಿಯಾದ ಆದೇಶ ನೀಡಿದೆ. ಇದು ವಾಸ್ತವದಲ್ಲಿ ಪರೀಕ್ಷೆಯೂ ಅಲ್ಲ, ಸಂಕಲನಾತ್ಮಕ ಮೌಲ್ಯಮಾಪನ. ಇದರಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಅಗತ್ಯವಿಲ್ಲ. ಇದು ವಿದ್ಯಾರ್ಥಿಗಳನ್ನು ಅವರ ಭವಿಷ್ಯಕ್ಕಾಗಿ ಸಿದ್ಧಪಡಿಸುವುದು ರಾಜ್ಯದ ನೀತಿಯಾಗಿದೆ’ ಎಂದರು.

‘9 ಹಾಗೂ 11ನೇ ತರಗತಿಗಳು ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ವ್ಯಾಪ್ತಿಗೆ ಬರುವುದಿಲ್ಲ. 11ನೇ ತರಗತಿ ಪರೀಕ್ಷೆಗಳು ಈಗಾಗಲೇ ಮುಗಿದಿವೆ’ ಎಂದು ಕಾಮತ್ ವಾದಿಸಿದರು. 

ಆರ್‌ಟಿಇ ಕಾಯ್ದೆಯ ಸೆಕ್ಷನ್‌ 30 ಅನ್ನು ಉಲ್ಲೇಖಿಸಿದ ಕಾಮತ್‌, ‘ಯಾವುದೇ ಮಗು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿಲ್ಲ’ ಎಂದರು. 

‘ವಿದ್ಯಾರ್ಥಿಗಳು ತೇರ್ಗಡೆಯಾಗಬೇಕಿಲ್ಲ ಎಂದರೆ ಪರೀಕ್ಷೆಯನ್ನು ಯಾಕೆ ನಡೆಸುತ್ತೀರಿ’ ಎಂದು ಪೀಠ ಪ್ರಶ್ನಿಸಿತು. ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ಸಮರ್ಥಿಸಿದ ಕಾಮತ್‌, ‘ತರಗತಿಯಲ್ಲಿ ನೀಡುತ್ತಿರುವ ವಿಷಯವು ಗುಣಮಟ್ಟಕ್ಕೆ ತಕ್ಕಂತೆ ಇಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಹಾಗಾಗಿ, ನಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಶಾಲೆಗಳು ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇದನ್ನು ನಿರ್ಣಯಿಸಲು ಏಕರೂಪದ ಮೌಲ್ಯಮಾಪನ ನಡೆಸುವುದು ಉತ್ತಮ ಮಾರ್ಗ’ ಎಂದು ಪ್ರತಿಪಾದಿಸಿದರು. 

ನ್ಯಾಯಮೂರ್ತಿ ಮಿತ್ತಲ್, ‘ನೀವು ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ’ ಎಂದು ಕಟುವಾಗಿ ಹೇಳಿದರು. ಆಗ ಕಾಮತ್‌, ‘ಪರೀಕ್ಷೆಯ ಅಗತ್ಯವಿದೆ. ವಿಭಾಗೀಯ ಪೀಠದ ಆದೇಶದ ವಿರುದ್ಧದ ಮೇಲ್ಮನವಿಗಳನ್ನು ಅಂಗೀಕರಿಸಬಾರದು’ ಎಂದು ಕೋರಿದರು. 

ನ್ಯಾಯಮೂರ್ತಿ ತ್ರಿವೇದಿ, ‘ಬೋರ್ಡ್‌ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಭಯವಿದೆ’ ಎಂದರು. 

ಕಾಮತ್ ವಾದ ಮಂಡಿಸಿ, ‘9ನೇ ತರಗತಿಯು ಆರ್‌ಟಿಇ ವ್ಯಾಪ್ತಿಗೆ ಬರುವುದಿಲ್ಲ. ಈ ವಿದ್ಯಾರ್ಥಿಗಳು 10ನೇ ತರಗತಿಗೆ ತಯಾರಿ ನಡೆಸಬೇಕು. ಹಾಗಾಗಿ, 9ನೇ ತರಗತಿಯ ಬೋರ್ಡ್‌ ಪರೀಕ್ಷೆಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. 

ರುಪ್ಸಾ ಪರ ವಾದ ಮಂಡಿಸಿದ ವಕೀಲ ಕೆ.ವಿ.ಧನಂಜಯ, ‘ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಪರೀಕ್ಷೆಗೆ ಸಂಬಂಧಿಸಿದ ಕಲಂ 22ರ ಪ್ರಕಾರ, ಪರೀಕ್ಷಾ ಪದ್ದತಿಯಲ್ಲಿ ಬದಲಾವಣೆ ಮಾಡಬೇಕಾದರೆ, ಕಾಯ್ದೆಯ ಅನ್ವಯ ಮೊದಲು ನಿಯಮಗಳನ್ನು ರೂಪಿಸಬೇಕು. ಅದು ಶಾಸಕಾಂಗದಲ್ಲಿ ಅನುಮೋದನೆಗೊಂಡ ಬಳಿಕವಷ್ಟೇ ಅಂತಿಮಗೊಳಿಸಿ ಜಾರಿಗೆ ತರಬೇಕು. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಅಂತಹ ವಿಧಾನವನ್ನು ಪಾಲಿಸಿಲ್ಲ’ ಎಂದು ಪೀಠದ ಗಮನಕ್ಕೆ ತಂದರು. 

ಆಗ ಕಾಮತ್‌, ‘ಏಕಸದಸ್ಯ ‍ಪೀಠದ ನ್ಯಾಯಮೂರ್ತಿಯವರು ಕಾಯ್ದೆಯ ಸೆಕ್ಷನ್‌ 22 ಅಥವಾ ಸೆಕ್ಷನ್‌ 15 ಅನ್ನು ಗಮನಿಸಲಿಲ್ಲ. ಕಾಯ್ದೆಯ ನಿಬಂಧನೆಗಳನ್ನು ಗಮನಿಸದೆಯೇ ನಮ್ಮ ಪ್ರಕಾರ ಕಾನೂನುಬಾಹಿರ ಆದೇಶ ಹೊರಡಿಸಲಾಗಿದೆ’ ಎಂದರು. 

ನ್ಯಾಯಪೀಠವು, ‘ಆರ್‌ಟಿಇ ಪ್ರಕಾರ, 8ನೇ ತರಗತಿಯವರೆಗೆ ನಿಯಮಿತ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಪರೀಕ್ಷೆ ಕುರಿತ ಸರ್ಕಾರದ ಅಧಿಸೂಚನೆಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಈಗಾಗಲೇ ಎರಡು ಬಾರಿ ರದ್ದುಗೊಳಿಸಿದೆ. ಆದ್ದರಿಂದ ಹೈಕೋರ್ಟ್‌ ಈ ಕುರಿತು ನಿರ್ಧರಿಸಲಿ’ ಎಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT