ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ: ರಾಜ್ಯದಲ್ಲಿ 7 ಸಾವಿರ ದಾಟಿದ ಪ್ರಕರಣ

Published 6 ಜುಲೈ 2024, 20:19 IST
Last Updated 6 ಜುಲೈ 2024, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶನಿವಾರ 175 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಈ ವರ್ಷ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 7,006ಕ್ಕೆ ಏರಿಕೆಯಾಗಿದೆ. 

ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ಓರ್ವ ಮಗು, ಒಂದರಿಂದ 18 ವರ್ಷದೊಳಗಿನ 53 ಮಂದಿ ಹಾಗೂ 18 ವರ್ಷಗಳು ಮೇಲ್ಪಟ್ಟ 121 ಮಂದಿ ಸೇರಿದ್ದಾರೆ. ಸದ್ಯ ಡೆಂಗಿ ಪೀಡಿತರಲ್ಲಿ 352 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ 275 ಡೆಂಗಿ ಶಂಕಿತರಿಗೆ ಪರೀಕ್ಷೆ ಮಾಡಲಾಗಿದ್ದು, 115 ಮಂದಿಗೆ ದೃಢಪಟ್ಟಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,908ಕ್ಕೆ ಏರಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ಈವರೆಗೆ ಬೆಂಗಳೂರಿನಲ್ಲಿ ಒಬ್ಬರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. 

ಬೆಂಗಳೂರಿನಲ್ಲಿ ಡೆಂಗಿ ಶಂಕಿತ 11 ವರ್ಷದ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ. ಆತನಿಗೆ ನಡೆಸಲಾದ ‘ರ್‍ಯಾಪಿಡ್ ಆ್ಯಂಟಿಜನ್’ ಪರೀಕ್ಷೆಯಲ್ಲಿ ಡೆಂಗಿ ದೃಢಪಟ್ಟಿದೆ. ಇದರಿಂದಾಗಿ ‘ಎಲಿಸಾ’ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಇದರಲ್ಲಿಯೂ ಡೆಂಗಿ ದೃಢಪಟ್ಟಲ್ಲಿ ‘ಸಾವಿನ ಲೆಕ್ಕಗಳ ವರದಿ’ ಸಿದ್ಧಪಡಿಸಿ, ಮರಣದ ಬಗ್ಗೆ ಅಧಿಕೃತವಾಗಿ ದೃಢಪಡಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಕೆಲವೆಡೆ ಡೆಂಗಿ ಶಂಕಿತ ಮರಣ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ ‘ಸಾವಿನ ಲೆಕ್ಕಗಳ ವರದಿ’ ಸಿದ್ಧಪಡಿಸಿದ ಬಳಿಕ ಮರಣಕ್ಕೆ ಕಾರಣ ಖಚಿತಪಡಿಸಿ, ಡೆಂಗಿ ದೃಢಪಟ್ಟಲ್ಲಿ ದೈನಂದಿನ ಡೆಂಗಿ ವರದಿಯಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT