ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಮೂಲಕ ವೀರಶೈವ– ಲಿಂಗಾಯತ ಸಮುದಾಯವನ್ನು ಒಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಬಿಜೆಪಿಯ ಲಿಂಗಾಯತ ನಾಯಕರು ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ವೀರಶೈವ–ಲಿಂಗಾಯತ ಸಮುದಾಯದ ಬಿಜೆಪಿ ನಾಯಕರ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ ನಾಯಕರು, ‘ಸಿದ್ದರಾಮಯ್ಯ ಅವರು ಈ ಹಿಂದೆ ಕಾಂತರಾಜ ವರದಿ ಯಾಕೆ ಮಾಡಿಸಿದ್ದರು. ಅದನ್ನು ಯಾಕೆ ಜಾರಿ ಮಾಡುತ್ತಿಲ್ಲ ಎನ್ನುವುದನ್ನು ಜನರಿಗೆ ತಿಳಿಸಬೇಕು. ಕಾಂತರಾಜ ವರದಿ ಜಾರಿ ಮಾಡದಿರಲು ಕಾರಣ ಏನು’ ಎಂದು ನಾಯಕರು ಪ್ರಶ್ನಿಸಿದರು.

ಸಂವಿಧಾನ ಮತ್ತು ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ಸರ್ಕಾರ ಜಾತಿವಾರು ಸಮೀಕ್ಷೆ ನಡೆಸುತ್ತಿದೆ. ಈ ನಿರ್ಧಾರದ ಹಿಂದೆ ಕುತಂತ್ರ ಮತ್ತು ಷಡ್ಯಂತ್ರವೂ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ , ‘ಸಮಾಜದ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕಿದೆ. ಈ ವಿಚಾರದಲ್ಲಿ ಸರಿಯಾದ ಮಾರ್ಗದರ್ಶನ ಮಾಡದಿದ್ದರೆ ಅವರು ನಮ್ಮನ್ನು ಕ್ಷಮಿಸುವುದಿಲ್ಲ. ಸಮೀಕ್ಷೆಯ ಕಾಲಂಗಳಲ್ಲಿ ಏನೆಂದು ನಮೂದಿಸಬೇಕು ಎಂಬುದನ್ನು ಮಠಾಧೀಶರು ಮತ್ತು ಸಮಾಜದ ಮುಖಂಡರು ನಿರ್ಧರಿಸಲಿದ್ದು, ಅವರ ಸೂಚನೆ ಪಾಲಿಸಲು ಸಭೆ ನಿರ್ಧರಿಸಿದೆ’ ಎಂದು ಹೇಳಿದರು.

‘ವೀರಶೈವ ಸಮಾಜವನ್ನು ಒಡೆಯುವ ಕುತಂತ್ರ, ಷಡ್ಯಂತ್ರ ಗಣತಿಯ ಹಿಂದೆ ಇದೆ. ಕಾಲಂಗಳನ್ನು ಗಮನಿಸಿದರೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಜೈನ, ಸಿಖ್, ಬೌದ್ಧ, ಪಾರ್ಸಿ, ನಾಸ್ತಿಕರು, ಇತರೆ ಎಂಬ ವರ್ಗಗಳನ್ನು ಮಾಡಿದ್ದಾರೆ. ‘ಇತರೆ’ ಎಂಬುದು ಕೂಡ ಕಾನೂನುಬಾಹಿರ. ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದರು. ಆಗಲೂ ಕೈ ಸುಟ್ಟುಕೊಂಡಿದ್ದರು’ ಎಂದು ಟೀಕಿಸಿದರು.

‘ಸಮಾಜದಲ್ಲಿನ ಗೊಂದಲ ಸರಿಪಡಿಸಲು, ಸಮಾಜವನ್ನು ಒಗ್ಗೂಡಿಸಲು, ಸಮಾಜವನ್ನು ಸಮರ್ಪಕ ದಿಕ್ಕಿನಲ್ಲಿ ಒಯ್ಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ತೀರ್ಮಾನ ಮಾಡಲಾಗಿದೆ. ಕೆಲವು ಹಿರಿಯರು ವೀರಶೈವ ಮಹಾಸಭಾದ ಪ್ರಮುಖರ ಜೊತೆ ಚರ್ಚೆ ಮಾಡಬೇಕು. ಪಂಚ ಪೀಠಾಧೀಶ್ವರರು, ವಿರಕ್ತ ಮಠದ ಸ್ವಾಮೀಜಿಗಳ ಜೊತೆ ಚರ್ಚಿಸಿ, ಒಳಪಂಗಡ ಮರೆತು ಒಟ್ಟಾಗಿ, ಒಂದಾಗಿ ಸಮಾಜದ ಹಿತದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಯಿಂದ ಮುಂದೆ ಸಾಗಲು ನಿರ್ಧರಿಸಲಾಗಿದೆ’ ಎಂದು ವಿವರ ನೀಡಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೇಂದ್ರ ಸಚಿವ ವಿ.ಸೋಮಣ್ಣ, ಪ್ರಮುಖರಾದ ಪ್ರಭಾಕರ ಕೋರೆ, ವಿಜಯ ಸಂಕೇಶ್ವರ ಭಾಗವಹಿಸಿದ್ದರು. ಯಡಿಯೂರಪ್ಪ ಸೂಚನೆ ಮೇರೆಗೆ ಈ ಸಭೆ ಕರೆಯಲಾಗಿತ್ತು.

ವೀರಶೈವ–ಲಿಂಗಾಯತ ಸಮುದಾಯ ಒಡೆಯಲು ಕಾಂಗ್ರೆಸ್ ಸರ್ಕಾರ ಮತ್ತೊಂದು ಸಮೀಕ್ಷೆಯ ಹೆಸರಿನಲ್ಲಿ ಹುನ್ನಾರ ನಡೆಸುತ್ತಿದೆ. ಸಮಾಜ ಒಡೆಯುವ ರಾಜಕೀಯ ಕುತಂತ್ರಗಳನ್ನು ಮೆಟ್ಟಿ ನಿಲ್ಲಲಾಗುವುದು
ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ಸಮೀಕ್ಷೆಯು ಗಣತಿ ಕಾಯ್ದೆಗೆ ವಿರುದ್ಧ: ಬೊಮ್ಮಾಯಿ

‘ದೇಶದಲ್ಲಿ ಗಣತಿ ಕಾಯ್ದೆ ಇದೆ. ಅದರ ಪ್ರಕಾರ ಕೇಂದ್ರ ಸರ್ಕಾರ ಗಣತಿ ಮಾಡುತ್ತದೆ. ರಾಜ್ಯ ಸರ್ಕಾರ ಸಮೀಕ್ಷೆ ಮಾಡಬಹುದು. ಆದರೆ ಇವರು ಮನೆ ಮನೆಗೆ ಹೋಗುವುದು ಗಣತಿ ಕಾಯ್ದೆಗೆ ವಿರುದ್ದ ಇದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ದೂರಿದರು. ವೀರಶೈವ– ಲಿಂಗಾಯತ ಒಕ್ಕಲಿಗ ಬ್ರಾಹ್ಮಣ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಎಲ್ಲರೂ ಒಗ್ಗಟ್ಟಾಗಿರಬೇಕು. ಈಗ ಕಾಗಿನೆಲೆ ಪೀಠ ಇದೆ. ಮುಂದಿನ ದಿನಗಳಲ್ಲಿ ಕುರುಬ ಕ್ರಿಶ್ಚಿಯನ್ ಪೀಠ ಆರಂಭವಾಗುತ್ತದೆ. ಸಿದ್ದರಾಮಯ್ಯ ಯಾರನ್ನಾದರೂ ಪಾದ್ರಿಯನ್ನು ತಂದು ಕೂಡಿಸುತ್ತಾರೆ ಎಂದು ವ್ಯಂಗ್ಯವಾಡಿದರು. ‘ಒಂದೂವರೆ ಕೋಟಿ ಮನೆಗಳನ್ನು ಹದಿನೈದು ದಿನಗಳಲ್ಲಿ ಗಣತಿ ಮಾಡುತ್ತೇವೆ ಎನ್ನುತ್ತಾರೆ. ಇಷ್ಟು ಕಡಿಮೆ ಸಮಯದಲ್ಲಿ ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ. ಮತ್ತೆ ಕಾಂತರಾಜ ವರದಿಯನ್ನು ಕಟ್ ಆ್ಯಂಡ್ ಪೇಸ್ಟ್ ಮಾಡುತ್ತಾರೆ. ರಾಜಕಿಯ ಉದ್ದೇಶಕ್ಕೆ ಸಮೀಕ್ಷೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಿದ್ದಿಕೊಳ್ಳದಿದ್ದರೆ ನಿಮ್ಮ ರಾಜಕೀಯ ಅಧಃಪತನಕ್ಕೆ ಕಾರಣವಾಗಲಿದೆ’ ಎಂದು ಎಚ್ಚರಿಸಿದರು.

ಕ್ರಿಶ್ಚಿಯನ್ ಜಾತಿಗಳ ಅಗತ್ಯ ಇರಲಿಲ್ಲ: ಯದುವೀರ್

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ನರ ಹಲವಾರು ಜಾತಿಗಳನ್ನು ಸೇರಿಸಿರುವುದು ಸರಿಯಲ್ಲ. ಇದು ಗೊಂದಲಕ್ಕೆ ಎಡೆ ಮಾಡಿಕೊಡಲಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ಮಂಗಳವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪತ್ರವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ನೀಡಿದ ಬಳಿಕ ಅವರು ಮಾತನಾಡಿದರು. ಕ್ರಿಶ್ಚಿಯನ್ನರಲ್ಲಿ ಇಲ್ಲದ ಜಾತಿಗಳನ್ನು ಸಮೀಕ್ಷೆ ವೇಳೆ ಹೊರಗಿಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕಾನೂನು ಮೊರೆ ಹೋಗಲಾಗುವುದು. ಜೊತೆಗೆ ಆಂದೋಲನ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮನವಿ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಹೇಳಿದರು. ಸಭೆಯ ನಿರ್ಣಯಗಳು: * ಮತಾಂತರಗೊಂಡವರಿಗೆ ಒಂದು ಉಪ ಜಾತಿ ಕೋಡ್ ನೀಡಿರುವುದನ್ನು ತಕ್ಷಣ ವಾಪಸ್ ಪಡೆಯಬೇಕು * 47 ಹಿಂದೂ ಉಪ ಜಾತಿ ವಾಚಕ ಶಬ್ಧ ಇರುವ ಕ್ರಿಶ್ಚಿಯನ್ ಪದವನ್ನು ಪಟ್ಟಿಯಿಂದ ಕೈ ಬಿಡಬೇಕು (ಲಿಂಗಾಯತ ಕ್ರಿಶ್ಚಿಯನ್ ವಿಶ್ವಕರ್ಮ ಕ್ರಿಶ್ಚಿಯನ್ ದೇವಾಂಗ ಕ್ರಿಶ್ಚಿಯನ್ ಈಡಿಗ ಕ್ರಿಶ್ಚಿಯನ್ ವಾಲ್ಮೀಕಿ ಕ್ರಿಶ್ಚಿಯನ್ ಕುರುಬ ಕ್ರಿಶ್ಚಿಯನ್ ಮತ್ತು ಇತರೆ) * ತರಾತುರಿಯಲ್ಲಿ ಸಮೀಕ್ಷೆ ನಡೆಸುವುದು ಬೇಡ. ಈ ಬಗ್ಗೆ ಆಯೋಗ ಮರುಚಿಂತನೆ ನಡೆಸಿ ಬೇಸಿಗೆಯಲ್ಲಿ ಸಮೀಕ್ಷೆ ಮಾಡಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.