ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಬಿಜೆಪಿ ಸರ್ಕಾರ ಹೊರಗಿನವರ ಕಪಿಮುಷ್ಟಿಯಲ್ಲಿದೆ: ಕುಮಾರಸ್ವಾಮಿ

Last Updated 14 ಜನವರಿ 2023, 18:33 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಹೊರಗಿನವರ ಕಪಿಮುಷ್ಟಿಯಲ್ಲಿದೆ. ಅದಕ್ಕಾಗಿಯೇ ಅಭಿವೃದ್ಧಿ ವಿಚಾರ ಬಿಟ್ಟು, ಲವ್‌ ಜಿಹಾದ್‌ ಕುರಿತು ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದ ಪ್ರೆಸ್‌ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ರಸ್ತೆ, ಚರಂಡಿ ಬಗ್ಗೆ ಮಾತನಾಡ ಬೇಡಿ, ಲವ್‌ ಜಿಹಾದ್‌ ಬಗ್ಗೆ ಯೋಚಿಸಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಇವರೆಲ್ಲರೂ ಕರ್ನಾಟಕದ ಯುವಜನರ ಭವಿಷ್ಯ ನಾಶಮಾಡಲು ಹೊರಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಅನೇಕ ಮಹನೀಯರ ದುಡಿಮೆ ಯಿಂದ ಈ ರಾಜ್ಯ ಅಭಿವೃದ್ಧಿ ಹೊಂದಿದೆ. ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ ಅವರ ದೂರದೃಷ್ಟಿಯ ಯೋಜನೆಗಳಿಂದ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಬೆಳೆದಿದೆ. ಅದರಿಂದ ಹತ್ತಾರು ಸಾವಿರ ಕೋಟಿ ರೂಪಾಯಿ ವರಮಾನ ಬರುತ್ತಿದೆ. ಆದರೆ, ಈಗಿನ ಸರ್ಕಾರ ಕರ್ನಾಟಕ ವನ್ನು ಉತ್ತರ ಪ್ರದೇಶ, ಬಿಹಾರ ಮಾಡಲು ಹೊರಟಿದೆ‌ ಎಂದು ವಾಗ್ದಾಳಿ ನಡೆಸಿದರು‌.

ಮೈತ್ರಿ ಕುರಿತು ತೀರ್ಮಾನಿಸಿಲ್ಲ: ಯಾವುದೇ ಪಕ್ಷದ ಜತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಕುರಿತು ಈವರೆಗೆ ತೀರ್ಮಾನಿಸಿಲ್ಲ. ಸಮಾನ ಮನಸ್ಕ ಪಕ್ಷಗಳು ಬಯಸಿದರೆ 15ರಿಂದ 20 ಸ್ಥಾನಗಳನ್ನು ಬಿಟ್ಟುಕೊಡಲು ಜೆಡಿಎಸ್‌ ಸಿದ್ಧವಿದೆ. ಆದರೆ, ಈವರೆಗೆ ಅಂತಹ ಯಾವುದೇ ಪ್ರಸ್ತಾವಗಳೂ ತಮ್ಮ ಮುಂದೆ ಬಂದಿಲ್ಲ ಎಂದರು.

‘ಜನಾರ್ದನ ರೆಡ್ಡಿ ನೇತೃತ್ವದ ಪಕ್ಷದ ಜತೆಗೆ ಮೈತ್ರಿ ಕುರಿತು ಚರ್ಚೆಯೇ ನಡೆದಿಲ್ಲ. ನಮ್ಮ ಕೈ– ಅವರ ಕೈ ದೂರ ದೂರ ಇವೆ. ಹೀಗಾಗಿ ಕೈಜೋಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಂಚರತ್ನ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. 45 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಮೂಡಿದೆ ಎಂದರು.

ರೇವಣ್ಣಗೆ ಜವಾಬ್ದಾರಿ: ಹಾಸನದಲ್ಲಿ ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ಸಹೋದರ ಎಚ್.ಡಿ. ರೇವಣ್ಣ ಅವರಿಗೆ ನೀಡಲಾಗಿದೆ. ಅವರ ಅಭಿಪ್ರಾಯ ಆಧರಿಸಿ‌ ಅಲ್ಲಿನ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡ ಲಾಗುತ್ತದೆ ಎಂದು ತಿಳಿಸಿದರು‌.

ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ, ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಇನ್ನೂ ತಮ್ಮ ನಿರ್ಧಾರ ತಿಳಿಸಿಲ್ಲ. ಈ ಕಾರಣಕ್ಕಾಗಿ ಅಲ್ಲಿನ ಅಭ್ಯರ್ಥಿಗಳ ಆಯ್ಕೆ ನಡೆದಿಲ್ಲ ಎಂದರು‌.

‘ರಾಜಕೀಯ ಪಕ್ಷಗಳೇ ಎತ್ತಿ ಕಟ್ಟುತ್ತಿವೆ’
‘ಮೀಸಲಾತಿ ವಿಚಾರದಲ್ಲಿ ರಾಜಕೀಯ ಪಕ್ಷಗಳೇ ಮಠಾಧೀಶರನ್ನು ಎತ್ತಿ ಕಟ್ಟಿ, ಬೀದಿಗೆ ಇಳಿಸಿವೆ. ಸಂವಿಧಾನದಲ್ಲಿ ಅವಕಾಶಗಳಿಲ್ಲದೇ ಇದ್ದರೂ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ’ ಎಂದು‌ ಎಚ್‌.ಡಿ. ಕುಮಾರಸ್ವಾಮಿ ದೂರಿದರು. ‘ಸ್ಪಷ್ಟ ಬಹುಮತ ಬಂದರೆ ಮಾತ್ರ ಒಳ‌ ಮೀಸಲಾತಿ ವಿಷಯದಲ್ಲಿ ಎಲ್ಲರ ಜತೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಸಂಬಂಧಿಸಿದ ಸಂಘಟನೆಗಳ‌ ಮುಖಂಡರಿಗೆ ತಿಳಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT