ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯವೇ ಅಗ್ನಿಶಾಮಕ ಸಿಬ್ಬಂದಿ ನೇಮಕ ವಿಳಂಬಕ್ಕೆ ಕಾರಣ

Last Updated 20 ಸೆಪ್ಟೆಂಬರ್ 2019, 5:39 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ನಿಶಾಮಕ ಇಲಾಖೆಅಧಿಕಾರಿಗಳ ನಿರ್ಲಕ್ಷ್ಯ ಹಾಗೂಸರ್ಕಾರದ ನಿಧಾನಗತಿ ನೀತಿಯೇಇಲಾಖೆಗೆ ಅಗತ್ಯ ಇರುವ 883 ಹುದ್ದೆಗಳ ನೇಮಕಾತಿ ನಾಲ್ಕು ವರ್ಷತಡವಾಗಿ ಆರಂಭವಾಗಲು ಕಾರಣವಾಗಿದೆ.

ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬಹುದು ಎಂದು ಹಣಕಾಸು ಇಲಾಖೆ 2015-16ರ ಸಾಲಿನಲ್ಲಿಯೇ ಒಪ್ಪಿಗೆ ಸೂಚಿಸಿತ್ತು. ಅಗ್ನಿಶಾಮಕದಳ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿಪ್ರಸ್ತಾವವನ್ನು ಕಳುಹಿಸಿಕೊಡಲಿಲ್ಲ. ಈ ಸಂಬಂಧ ಗೃಹ ಇಲಾಖೆ ಹಣಕಾಸು ಇಲಾಖೆಗೆ ಯಾವುದೇ ಅಭಿಪ್ರಾಯ ಹೇಳಲಿಲ್ಲ.

ಗೃಹ ಇಲಾಖೆಯಿಂದಲೇ ಯಾವುದೇ ಪ್ರತಿಕ್ರಿಯೆ ಬಾರದೆ ಇರದ ಕಾರಣ ಹಣಕಾಸು ಇಲಾಖೆಯಲ್ಲಿ ಹುದ್ದೆ ಭರ್ತಿ ಕುರಿತು ಯಾವುದೇ ವಿಷಯವೂ ಪ್ರಸ್ತಾಪವಾಗಲಿಲ್ಲ. 2015-16ರಿಂದ ನಾಲ್ಕು ವರ್ಷಗಳ ನಂತರ ಅಂದರೆ 2019ರ ಜೂನ್ 1ರಂದು ಅಗ್ನಿಶಾಮಕದಳ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ಮತ್ತೆ ಸರ್ಕಾರಕ್ಕೆ ಪತ್ರ ಬರೆದು 2015-16ರಲ್ಲಿ ಮಂಜೂರಾಗಿರುವ 883 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಗೃಹ ಇಲಾಖೆ ಕಾರ್ಯದರ್ಶಿಗೆ ಪ್ರಸ್ತಾವನೆ ಕಳುಹಿಸಿದರು.

ಜೂನ್ 1ರಂದು ಕಳುಹಿಸಿದ ಈ ಪ್ರಸ್ತಾವನೆ ಪರಿಗಣಿಸಿದ ಗೃಹ ಇಲಾಖೆ ಕಾರ್ಯದರ್ಶಿ, ಹಣಕಾಸು ಇಲಾಖೆ 2015-16ರಲ್ಲಿ ಹುದ್ದೆ ಭರ್ತಿ ಮಾಡಲು ಒಪ್ಪಿಗೆ ನೀಡಿತ್ತು. ಆದರೆ, 2019ರ ಸಾಲಿನಲ್ಲಿ ಭರ್ತಿ ಮಾಡಲು ಅವಕಾಶ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ಕಡತವನ್ನು ಹಣಕಾಸು ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಿಕೊಡಲಾಗುವುದು. ಒಪ್ಪಿಗೆ ಪಡೆದ ನಂತರ ಈ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಬಹುದು ಎಂದು ತಿಳಿಸಿತು.

2019 ರ ಜೂನ್ 1ರಿಂದ ಸೆಪ್ಟೆಂಬರ್ 18 ಕಳೆದರೂ ಇನ್ನೂ ಈ ಕಡತ ವಿಧಾನಸೌಧ ಬಿಟ್ಟು ಹೊರಗೆ ಬಂದಿಲ್ಲ. ಗುರುವಾರ ಈ ಕಡತದ ಕುರಿತು 'ಪ್ರಜಾವಾಣಿ' ಗೃಹ ಇಲಾಖೆಯ ಅಧಿಕಾರಿ ಗಿರಿಜಮ್ಮ ಎಂಬುವರನ್ನು ಸಂಪರ್ಕಿಸಿದಾಗ ' ಹಣಕಾಸು ಇಲಾಖೆಯಿಂದ ಕಡತ ಬಂದಿದೆ, ಕಡತವನ್ನು ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡಲಾಗುವುದು' ಎಂದರು.

ಕಡತವನ್ನು ಗೃಹ ಇಲಾಖೆಯಾಗಲೀ, ಹಣಕಾಸು ಇಲಾಖೆಯ ಅಧಿಕಾರಿಗಳಾಗಲೀ ತ್ವರಿತಗತಿಯಲ್ಲಿ ಕಳುಹಿಸಿದ್ದರೆ, ಒಂದು ತಿಂಗಳಲ್ಲಿ ಈ ಪತ್ರ ವ್ಯವಹಾರ ಮುಗಿದು ಅಂತಿಮ ನಿರ್ಧಾರಕ್ಕೆ ಬರಲು ಅವಕಾಶವಿತ್ತು. ಆದರೆ, ನಿಧಾನಗತಿಯ ಸರ್ಕಾರದಿಂದಾಗಿ ನಾಲ್ಕು ವರ್ಷಗಳಿಂದ ಈ ಹುದ್ದೆಗಳ ಭರ್ತಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಈ ವಿಳಂಬ ಹೀಗೆ ಮುಂದುವರಿದರೆ, 2020ರ ಮುಂಗಾರು ಮಳೆ ಬರುವವರೆಗೂ ಈ ಹುದ್ದೆಗಳಿಗೆ ಭರ್ತಿ ಮಾಡುವುದು ಕಷ್ಟ ಎನ್ನುವ ಅಭಿಪ್ರಾಯ ಇಲಾಖೆಯಲ್ಲಿ ವ್ಯಕ್ತವಾಗುತ್ತಿದೆ.

ಈ ಸಂಬಂಧ 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಗೃಹ ಇಲಾಖೆಯ ಕಾರ್ಯದರ್ಶಿ ಬಿ.ಕೆ. ಸಿಂಗ್, ಅಗ್ನಿಶಾಮಕದಳಕ್ಕೆ ಹೆಚ್ಚಿನ ಹುದ್ದೆಗಳ ಭರ್ತಿಗೆ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿಯವರೆ ಕ್ರಮ ಕೈಗೊಳ್ಳುತ್ತಾರೆ, ಗೃಹ ಇಲಾಖೆಯಿಂದ ಒಪ್ಪಿಗೆ ಪಡೆದ ಕಡತವನ್ನು ನಾವು ಕಳುಹಿಸಿಕೊಡುತ್ತೇವೆ. ಶೀಘ್ರದಲ್ಲಿಯೇ ಕಡತ ಕಳುಹಿಸಲಾಗುವುದು ಎಂದು ಹೇಳಿದರು.

ನೇಮಕ ಪ್ರಕ್ರಿಯೆ ಹೀಗೆ ನಡೆಯುತ್ತದೆ

ಗೃಹ ಇಲಾಖೆ ಕಾರ್ಯದರ್ಶಿಯಿಂದ ಒಪ್ಪಿಗೆ ಪಡೆದ ನಂತರ ಕಡತ ಡಿಜಿಪಿ ಮತ್ತು ಐಜಿ ಅವರ ಕಚೇರಿಗೆ ತಲುಪಬೇಕು. ನಂತರ ಕಡತವನ್ನು ಸಿಐಡಿ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ಕಳುಹಿಸಲಾಗುತ್ತದೆ. 2018ರ ನಂತರ ನೇಮಕಾತಿ ಮತ್ತು ತರಬೇತಿ ವಿಭಾಗವನ್ನು ಪ್ರತ್ಯೇಕಿಸಲಾಗಿದೆ. ಸಿಐಡಿ ಎಡಿಜಿಪಿ ಸುನಿಲ್ ಕುಮಾರ್ ಈ ವಿಭಾಗದ ಉಸ್ತುವಾರಿ ವಹಿಸಿದ್ದಾರೆ.ಸಿಐಡಿ ಎಡಿಜಿಪಿ ಅವರಿಂದ ಆದೇಶ ಹೊರಬಿದ್ದ ನಂತರ ಪತ್ರಿಕೆಗಳಲ್ಲಿ ಅರ್ಜಿ ಆಹ್ವಾನಿಸಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅರ್ಜಿಗಳ ಪರಿಶೀಲನೆ ನಡೆದು 1:3 ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ, ಪ್ರಯೋಗಿಕ ಪರೀಕ್ಷೆಗಳು ನಡೆಯಬೇಕು. ನಂತರ ಅಂತಿಮಪಟ್ಟಿ ಪ್ರಕಟಿಸಲಾಗುವುದು. ಅಂತಿಮ ಆಯ್ಕೆ ನಂತರ ಅಭ್ಯರ್ಥಿಗಳಿಗೆ ಆರು ತಿಂಗಳ ತರಬೇತಿ ನೀಡಲಾಗುತ್ತದೆ. ನಂತರ ಇಲಾಖೆಗೆ ಕಳುಹಿಸಲಾಗುತ್ತದೆ.

ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಒಂದು ವರ್ಷವಾದರೂ ಕಾಲಮಿತಿ ಬೇಕಾಗುತ್ತದೆ. ಅಲ್ಲಿಯವರೆಗೆ 2020ರ ಮುಂಗಾರು ಪ್ರವೇಶಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT