ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಜನರಿಗೆ ರೋಗ ಭೀತಿ: ಡಬ್ಲ್ಯುಎಚ್‌ಒ ಎಚ್ಚರಿಕೆ

ಯುದ್ಧದಿಂದ ಪ್ಯಾಲೆಸ್ಟೀನ್‌ನ 6 ಸಾವಿರ ಮಕ್ಕಳ ಸಾವು: ಡಬ್ಲ್ಯುಎಚ್‌ಒ
Published 28 ನವೆಂಬರ್ 2023, 15:34 IST
Last Updated 28 ನವೆಂಬರ್ 2023, 15:34 IST
ಅಕ್ಷರ ಗಾತ್ರ

ಜಿನೀವಾ: ಗಾಜಾ ಪಟ್ಟಿಯಲ್ಲಿ ಆರೋಗ್ಯ ವ್ಯವಸ್ಥೆ ತೀರಾ ಹದಗೆಟ್ಟಿದೆ. ಇದನ್ನು ಸರಿಪಡಿಸದಿದ್ದರೆ ಇಸ್ರೇಲ್‌ನ ಬಾಂಬ್‌ ದಾಳಿಗೆ ಸಿಲುಕಿ ಸತ್ತವರಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರು ರೋಗರುಜಿನದಿಂದ ಬಳಲಿ ಸಾಯುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. 

ಇಸ್ರೇಲ್‌ ಸೇನೆ ನಡೆಸಿದ ದಾಳಿಗೆ ಇಲ್ಲಿಯವರೆಗೂ ಪ್ಯಾಲೆಸ್ಟೀನ್‌ನ 15 ಸಾವಿರಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ. ಇವರಲ್ಲಿ 18 ವರ್ಷದ ಒಳಗಿನ 6 ಸಾವಿರಕ್ಕೂ (ಶೇ 40ರಷ್ಟು) ಹೆಚ್ಚು ಮಕ್ಕಳಿದ್ದಾರೆ. ಅಲ್ಲದೇ, ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಉಲ್ಲೇಖಿಸಿ ಡಬ್ಲ್ಯುಎಚ್‌ಒ ಹೇಳಿಕೆ ನೀಡಿದೆ.

ವಿಶ್ವಸಂಸ್ಥೆಯಲ್ಲಿ ಮಂಗಳವಾರ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಮಾರ್ಗರೇಟ್ ಹ್ಯಾರಿಸ್, ‘ಗಾಜಾದ ಆರೋಗ್ಯ ವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರಬೇಕಿದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟಬುತ್ತಿ. ಸೋಂಕಿನ ಪ್ರಮಾಣ ಹೆಚ್ಚಲಿದೆ. ಅದರಲ್ಲೂ ಅತಿಸಾರದಿಂದ ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆಯಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಉತ್ತರ ಗಾಜಾ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಸಿದ್ಧಪಡಿಸಿರುವ ವರದಿ ಉಲ್ಲೇಖಿಸಿದ ಅವರು, ‘ಅಲ್ಲಿ ಔಷಧ ಪೂರೈಕೆ ಸ್ಥಗಿತಗೊಂಡಿದೆ. ಲಸಿಕೆ ನೀಡುವ ಸಿಬ್ಬಂದಿ ಇಲ್ಲ. ಶುದ್ಧ ಕುಡಿಯುವ ನೀರು, ಆಹಾರ ಸಿಗುತ್ತಿಲ್ಲ. ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ. ಅತಿಹೆಚ್ಚು ಶಿಶುಗಳು ಅತಿಸಾರದಿಂದ ಬಳಲುತ್ತಿವೆ’ ಎಂದು ಹೇಳಿದರು.

ಅಲ್‌ ಶಿಫಾ ಆಸ್ಪತ್ರೆ ಕಟ್ಟಡ ಕುಸಿದು ಬಿದ್ದಿದ್ದು ದುರಂತ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೆಲವು ವೈದ್ಯಕೀಯ ಸಿಬ್ಬಂದಿಯನ್ನು ಇಸ್ರೇಲ್‌ ಸೇನಾ ಯೋಧರು ವಿಚಾರಣೆಗೆ ಒಳಪಡಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಗಾಜಾದ ಆಸ್ಪತ್ರೆಗಳಲ್ಲಿ ಗಾಯಗೊಂಡ ಮಕ್ಕಳು ತುಂಬಿ ಹೋಗಿದ್ದಾರೆ. ಕಲುಷಿತ ನೀರು ಸೇವನೆಯಿಂದ ಜಠರದ ಉರಿಯೂತ ಕಾಯಿಲೆಗೆ ಒಳಗಾಗಿರುವ ಮಕ್ಕಳು ಕೂಡ ದಾಖಲಾಗಿದ್ದಾರೆ’ ಎಂದು ಗಾಜಾದಲ್ಲಿರುವ ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿಯ ವಕ್ತಾರ  ಜೇಮ್ಸ್‌ ಎಲ್ಡರ್ ಹೇಳಿದ್ದಾರೆ.

‘ನಾವು ಸಂತ್ರಸ್ತ ಮಕ್ಕಳ ಹಲವು ಪೋಷಕರನ್ನು ಭೇಟಿ ಮಾಡಿದ್ದೇವೆ. ತಮ್ಮ ಮಕ್ಕಳಿಗೆ ಏನು ಬೇಕಿದೆ ಎಂದು ಅವರೆಲ್ಲರೂ ವಿವರಿಸಿದ್ದಾರೆ. ಅವರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ’ ಎಂದು ಹೇಳಿದ್ದಾರೆ.

‘ಕಾಲು ಮುರಿದು ಹೋದ ಮಗುವೊಂದು ಹಲವು ಗಂಟೆಗಳಿಂದಲೂ ಚಿಕಿತ್ಸೆ ಇಲ್ಲದೆ ಆಸ್ಪತ್ರೆಯ ನೆಲದ ಮೇಲೆ ಮಲಗಿರುವುದನ್ನು ನಾನು ನೋಡಿದ್ದೇನೆ. ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸಿಬ್ಬಂದಿಯ ಕೊರತೆ ತಲೆದೋರಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT