ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಫೇಸ್‌ಬುಕ್ ನಿರ್ಬಂಧ: ಇಂಟರ್‌ನೆಟ್ ಕಂಪನಿಗಳಿಗೆ ಸರ್ಕಾರದ ಆದೇಶ

Last Updated 4 ಫೆಬ್ರುವರಿ 2021, 3:15 IST
ಅಕ್ಷರ ಗಾತ್ರ

ಯಾಂಗಾನ್‌: ಮಿಲಿಟರಿ ದಂಗೆಯಿಂದಾಗಿ ಮ್ಯಾನ್ಮಾರ್‌ನಲ್ಲಿ ಸೇನೆಯು ದೇಶದ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ಪಡೆದಿರುವ ಬೆನ್ನಲ್ಲೇ ದೇಶದಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ ಎದುರಾಗಿದೆ. ಸರ್ಕಾರಿ ಸ್ವಾಮ್ಯದ ಎಂಪಿಟಿ ಸೇರಿದಂತೆ ಎಲ್ಲ ಇಂಟರ್‌ನೆಟ್‌ ಸೇವಾದಾರರು ಫೇಸ್‌ಬುಕ್‌ ಇಂಕ್‌ ಒಡೆತನದ ಸೇವೆಗಳನ್ನು ಗುರುವಾರ ನಿರ್ಬಂಧಿಸಿವೆ.

ಮ್ಯಾನ್ಮಾರ್‌ನ ಸಂಪರ್ಕ ಮತ್ತು ಮಾಹಿತಿ ಸಚಿವಾಲಯವು ತಡರಾತ್ರಿ ಆನ್‌ಲೈನ್‌ನಲ್ಲಿ ಪತ್ರ ಪ್ರಕಟಿಸಿದ್ದು, 'ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಫೆಬ್ರುವರಿ 7ರ ವರೆಗೂ ಫೇಸ್‌ಬುಕ್‌ ನಿರ್ಬಂಧಿಸಲ್ಪಟ್ಟಿರುತ್ತದೆ' ಎಂದು ತಿಳಿಸಿದೆ.

ಫೇಸ್‌ಬುಕ್‌ ಹಲವು ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಮ್ಯಾನ್ಮಾರ್‌ನ ಕೆಲವು ಬಳಕೆದಾರರು ದೂರಿರುವುದಾಗಿ ವರದಿಯಾಗಿದೆ. 2.3 ಕೋಟಿ ಬಳಕೆದಾರರನ್ನು ಹೊಂದಿರುವ ಸರ್ಕಾರದ ಎಂಪಿಟಿ ಟೆಲಿಕಾಂ ಸಂಸ್ಥೆಯು ಫೇಸ್‌ಬುಕ್‌ ಹಾಗೂ ಅದರ ಮೆಸೆಂಜರ್‌, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಸೇವೆಗಳನ್ನು ನಿರ್ಬಂಧಿಸಿದೆ ಎಂದು ನೆಟ್‌ವರ್ಕ್‌ ನಿರ್ವಹಣಾ ತಂಡ ನೆಟ್‌ಬ್ಲಾಕ್ಸ್‌ ಖಚಿತಪಡಿಸಿದೆ.

ಸೇವೆ ವ್ಯತ್ಯವಾಗಿರುವುದನ್ನು ಫೇಸ್‌ಬುಕ್‌ ವಕ್ತಾರ ಆ್ಯಂಡಿ ಸ್ಟೋನ್‌ ಸಹ ಖಚಿತಪಡಿಸಿದ್ದಾರೆ. 'ಸಂಪರ್ಕ ಮರುಸ್ಥಾಪಿಸುವಂತೆ ಮ್ಯಾನ್ಮಾರ್‌ ಆಡಳಿತಕ್ಕೆ ಆಗ್ರಹಿಸುತ್ತಿದ್ದು, ಅಲ್ಲಿನ ಜನರು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಪ್ರಮುಖ ಮಾಹಿತಿಯನ್ನು ಪಡೆಯಲು ಅನುವಾಗಲಿದೆ' ಎಂದಿದ್ದಾರೆ.

ಮ್ಯಾನ್ಮಾರ್‌ನ 5.3 ಕೋಟಿ ಜನರಲ್ಲಿ ಅರ್ಧದಷ್ಟು ಜನರು ಫೇಸ್‌ಬುಕ್‌ ಬಳಸುತ್ತಿದ್ದಾರೆ, ಅಲ್ಲಿನ ಬಹುತೇಕರಿಗೆ ಫೇಸ್‌ಬುಕ್‌ ಎಂಬುದು ಇಂಟರ್‌ನೆಟ್‌ಗೆ ಸಮನಾರ್ಥಕದಂತಿದೆ.

'ಪ್ರಸ್ತುತ ದೇಶದ ಸ್ಥಿರತೆಗೆ ಹಾನಿ ಮಾಡುತ್ತಿರುವವರು ಫೇಸ್‌ಬುಕ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹಾಗೂ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದು, ಅದರ ಬಳಕೆಯಿಂದಾಗಿ ಜನರಲ್ಲಿ ಅಪಾರ್ಥಕ್ಕೆ ಕಾರಣವಾಗುತ್ತಿದೆ' ಎಂದು ಸಚಿವಾಲಯ ಪತ್ರದಲ್ಲಿ ಹೇಳಿದೆ.

ಸರ್ಕಾರದಿಂದ ಬಂದಿರುವ ನಿರ್ದೇಶನದ ಬಗ್ಗೆ ಕಳವಳ ವ್ಯಕ್ತಪಡಿಸಿರುವ 'ಟೆಲಿನಾರ್‌' ಕಂಪನಿ, ಬುಧವಾರ ದೇಶದ ಎಲ್ಲ ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೇವಾದಾರರಿಗೆ ಫೇಸ್‌ಬುಕ್‌ ನಿರ್ಬಂಧಿಸುವ ಸೂಚನೆ ದೊರೆತಿದೆ ಎಂದಿದೆ. 'ಸರ್ಕಾರದ ಆದೇಶದ ಅನ್ವಯ ಫೇಸ್‌ಬುಕ್‌ ವೆಬ್‌ಸೈಟ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ' ಎಂದು ಬಳಕೆದಾರರಿಗೆ ಸಂದೇಶದ ಮೂಲಕ ತಿಳಿಸಿರುವುದಾಗಿ ಟೆಲಿನಾರ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳನ್ನು ಹರಡುವ ಪೋಸ್ಟ್‌ಗಳನ್ನು ಮಾಡುತ್ತಿರುವ ಬಗ್ಗೆ ಮಂಗಳವಾರ ಸೇನೆಯು ಎಚ್ಚರಿಕೆ ನೀಡಿತ್ತು. ಅದರಿಂದಾಗಿ ಗಲಭೆ ಉಂಟಾಗಬಹುದು ಹಾಗೂ ಅಸ್ಥಿರತೆ ಎದುರಾಗಬಹುದು ಎಂದಿತ್ತು.

ಮ್ಯಾನ್ಮಾರ್‌ನ ಹಿಂಸಾಚಾರದಲ್ಲಿ ಫೇಸ್‌ಬುಕ್‌ನಲ್ಲಿನ ದ್ವೇಷ ಪೂರಿತ ಭಾಷಣವು ಪ್ರಮುಖ ಪಾತ್ರವಹಿಸಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಶೀಲಕರು ಈ ಹಿಂದೆ ಹೇಳಿದ್ದರು. ಮ್ಯಾನ್ಮಾರ್‌ನ ಪರಿಸ್ಥಿತಿಯನ್ನು ತುರ್ತು ಎಂದು ಪರಿಗಣಿಸುವುದಾಗಿ ಹೇಳಿರುವ ಫೇಸ್‌ಬುಕ್‌, ದಂಗೆಯನ್ನು ಬೆಂಬಲಿಸುವ ಅಥವಾ ವಿರೋಧಿಸುವ ವಿಷಯಗಳನ್ನು ತೆಗೆದು ಹಾಕುವಂತಹ ತಾತ್ಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಪಾಯಗಳನ್ನು ನಿಯಂತ್ರಿಸುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT