ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನ ಹೋರಾಟಗಾರ್ತಿ ನರ್ಗಿಸ್ ಮಹಮ್ಮದಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ

Published 6 ಅಕ್ಟೋಬರ್ 2023, 9:38 IST
Last Updated 6 ಅಕ್ಟೋಬರ್ 2023, 9:38 IST
ಅಕ್ಷರ ಗಾತ್ರ

ಓಸ್ಲೊ/ಜಿನೀವಾ: ಮಹಿಳೆಯರ ಹಕ್ಕುಗಳು, ಪ್ರಜಾತಂತ್ರದ ಪರವಾಗಿ ಹಾಗೂ ಮರಣದಂಡನೆಯ ವಿರುದ್ಧ ಇರಾನ್‌ನಲ್ಲಿ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ನಾರ್ಗಿಸ್ ಮೊಹಮ್ಮದಿ ಅವರಿಗೆ 2023ನೆಯ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿದೆ. ನಾರ್ಗಿಸ್ ಅವರು ಈಗ ಜೈಲಿನಲ್ಲಿದ್ದಾರೆ.

51 ವರ್ಷ ವಯಸ್ಸಿನ ನಾರ್ಗಿಸ್ ಅವರು ಹಲವು ಬಾರಿ ಬಂಧನಕ್ಕೆ ಒಳಗಾಗಿದ್ದರೂ, ವರ್ಷಗಳ ಕಾಲ ಜೈಲಿನಲ್ಲಿದ್ದರೂ ಈ ಹೋರಾಟ ನಡೆಸುತ್ತಿದ್ದಾರೆ. ಅವರು ಈಗ ಟೆಹರಾನ್‌ನ ಕುಖ್ಯಾತ ಎವಿನ್ ಜೈಲಿನಲ್ಲಿ ಇದ್ದಾರೆ. ಪಾಶ್ಚಿಮಾತ್ಯ ದೇಶಗಳ ಜೊತೆ ನಂಟು ಹೊಂದಿರುವವರನ್ನು, ರಾಜಕೀಯ ಕೈದಿಗಳನ್ನು ಈ ಜೈಲಿನಲ್ಲಿ ಇರಿಸಲಾಗಿದೆ.

ನಾರ್ಗಿಸ್ ಅವರು ಇದುವರೆಗೆ 13 ಬಾರಿ ಜೈಲಿಗೆ ಹೋಗಿದ್ದಾರೆ, ಐದು ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅವರನ್ನು ಒಟ್ಟು 31 ವರ್ಷಗಳ ಅವಧಿಗೆ ಸೆರೆವಾಸಕ್ಕೆ ನೂಕಲಾಗಿದೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ 19ನೆಯ ಮಹಿಳೆ, ಇರಾನಿನ ಎರಡನೆಯ ಮಹಿಳೆ ನಾರ್ಗಿಸ್. ಈ ಹಿಂದೆ ಮಾನವ ಹಕ್ಕುಗಳ ಕಾರ್ಯಕರ್ತೆ ಶಿರಿನ್ ಎಬಾದಿ ಅವರಿಗೆ 2003ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿತ್ತು.

ನೊಬೆಲ್ ಪ್ರಶಸ್ತಿಯು 1 ಮಿಲಿಯನ್ ಡಾಲರ್ (ಅಂದಾಜು ₹8.32 ಕೋಟಿ) ನಗದು, ಚಿನ್ನದ ಪದಕ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಡಿಸೆಂಬರ್‌ನಲ್ಲಿ ಪ್ರದಾನ ಮಾಡಲಾಗುತ್ತದೆ.

ಬಿಡುಗಡೆಗೆ ಒತ್ತಾಯ:

ನಾರ್ಗಿಸ್ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ಘೋಷಣೆಯಾದ ನಂತರ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯು, ನಾರ್ಗಿಸ್ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರನ್ನೆಲ್ಲ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಇರಾನ್ ಸರ್ಕಾರವನ್ನು ಒತ್ತಾಯಿಸಿದೆ. ‘ಇರಾನಿನ ಮಹಿಳೆಯರು ಇಡೀ ಜಗತ್ತಿಗೆ ಸ್ಫೂರ್ತಿ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಹೇಳಿದೆ.

(ಪ್ಯಾರಿಸ್ ವರದಿ): ಪ್ರಶಸ್ತಿ ಘೋಷಣೆಯು ‘ಸ್ವಾತಂತ್ರ್ಯಕ್ಕಾಗಿ ಇರಾನ್‌ನಲ್ಲಿ ನಡೆಯುತ್ತಿರುವ ಹೋರಾಟದ ಪಾಲಿಗೆ ಐತಿಹಾಸಿಕ’ ಎಂದು ನಾರ್ಗಿಸ್ ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.

‘ವಿಷಾದದ ಸಂಗತಿಯೆಂದರೆ ಈ ಅಸಾಮಾನ್ಯ ಸಂದರ್ಭದಲ್ಲಿ ನಾರ್ಗಿಸ್ ಅವರು ನಮ್ಮ ಜೊತೆ ಇಲ್ಲ. ಅನ್ಯಾಯವಾಗಿ ಅವರನ್ನು ಜೈಲಿಗೆ ಹಾಕಿರುವ ಕಾರಣ ಅವರು ಸಂತಸಪಡುವುದನ್ನು ನೋಡಲು ನಮ್ಮಿಂದ ಆಗುತ್ತಿಲ್ಲ’ ಎಂದು ಕೂಡ ಕುಟುಂಬದ ಸದಸ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT