ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಉಡಾಯಿಸಿದ್ದು, ಪರೀಕ್ಷಿಸಿದ್ದು ಏನನ್ನು? ಇಲ್ಲಿದೆ ಮಾಹಿತಿ

Last Updated 28 ಫೆಬ್ರುವರಿ 2022, 3:10 IST
ಅಕ್ಷರ ಗಾತ್ರ

ಸೋಲ್‌: ಕಣ್ಗಾವಲು ಉಪಗ್ರಹ ವ್ಯವಸ್ಥೆಯ ಅಭಿವೃದ್ಧಿಗಾಗಿ ಭಾನುವಾರ ಪರೀಕ್ಷೆ ನಡೆಸಿರುವುದಾಗಿ ಉತ್ತರ ಕೊರಿಯಾ ತಿಳಿಸಿದೆ. ಈ ಬಗ್ಗೆ ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ‘ಕೆಸಿಎನ್‌ಎ’ ಸೋಮವಾರ ವರದಿ ಮಾಡಿದೆ.

ಉತ್ತರ ಕೊರಿಯಾ ಸಮುದ್ರದ ಕಡೆಗೆ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್‌ ಭಾನುವಾರ ಅನುಮಾನ ವ್ಯಕ್ತಪಡಿಸಿದ್ದವು.

ಪರೀಕ್ಷೆಗಾಗಿ ಯಾವ ರೀತಿಯ ರಾಕೆಟ್ ಅನ್ನು ಬಳಸಲಾಗಿತ್ತು ಎಂಬುದರ ಬಗ್ಗೆ ಸುದ್ದಿ ಸಂಸ್ಥೆ ಕೆಸಿಎನ್‌ಎ ತಿಳಿಸಿಲ್ಲ. ಉತ್ತರ ಕೊರಿಯಾದ ಪೊಂಗ್ಯಾಂಗ್‌ನಲ್ಲಿರುವ ವಿಮಾನ ನಿಲ್ದಾಣದ ಸಮೀಪದ ಪ್ರದೇಶದಿಂದ ಉಡಾಯಿಸಲಾದ ರಾಕೆಟ್‌ ಖಂಡಾಂತರ ಕ್ಷಿಪಣಿಯಾಗಿರಬಹುದು ಎಂದು ದಕ್ಷಿಣ ಕೊರಿಯಾ ಮತ್ತು ಸೋಲ್‌ನ ಅಧಿಕಾರಿಗಳು ಶಂಕಿಸಿದ್ದಾರೆ.

ಭಾನುವಾರ ಬೆಳಗ್ಗೆ ನಡೆದ ಉಡಾವಣೆಯು ಈ ವರ್ಷ ಉತ್ತರ ಕೊರಿಯಾದಿಂದ ನಡೆದ ಎಂಟನೇ ಪರೀಕ್ಷೆಯಾಗಿದೆ.

‘ಉಪಗ್ರಹದಲ್ಲಿ ಅಳವಡಿಸಲಾದ ಕ್ಯಾಮೆರಾಗಳಿಂದ ಭೂಮಿಯ ಮೇಲಿನ ನಿರ್ದಿಷ್ಟ ಪ್ರದೇಶದ ಲಂಬ ಮತ್ತು ಓರೆಯಾದ ಚಿತ್ರಗಳನ್ನು ತೆಗೆಯುವ ಮೂಲಕ ಹೈ ಡೆಫಿನಿಷನ್ ಛಾಯಾಗ್ರಹಣ, ದತ್ತಾಂಶ ರವಾನೆ ವ್ಯವಸ್ಥೆ ಮತ್ತು ವರ್ತನೆ ನಿಯಂತ್ರಣ ಸಾಧನಗಳ ಕಾರ್ಯಕ್ಷಮತೆಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲಾಯಿತು. ಭಾನುವಾರದ ಪರೀಕ್ಷೆಯಿಂದ ಇದು ಸಾಧ್ಯವಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕಣ್ಗಾವಲು ಉಪಗ್ರಹ ಅಭಿವೃದ್ಧಿಯಲ್ಲಿ ಈ ಪರೀಕ್ಷೆಯು ಮಹತ್ವದ್ದೆನಿಸಿದೆ’ ಎಂದು ವರದಿ ಹೇಳಿದೆ. ಅದೇ ಉಪಗ್ರಹ ತೆಗೆದಿದೆ ಎನ್ನಲಾದ ಕೊರಿಯಾದ ಎರಡು ಬಾಹ್ಯಾಕಾಶ ಚಿತ್ರಗಳನ್ನು ಸುದ್ದಿ ಮಾಧ್ಯಮ ಬಿಡುಗಡೆಗೊಳಿಸಿದೆ.

‘ಇದು ಬಾಹ್ಯಾಕಾಶ ಕಾರ್ಯಕ್ರಮವಲ್ಲ. ಬದಲಿಗೆ, (ಉತ್ತರ ಕೊರಿಯಾ) ಉಪಕಕ್ಷೀಯ ಪಥದಲ್ಲಿ ಹಾರಿಸಲಾದ ಕ್ಷಿಪಣಿಯೊಂದಲ್ಲಿ ಇರಿಸಲಾಗಿದ್ದ ಕ್ಯಾಮೆರಾದ ಪರೀಕ್ಷೆ ಎಂಬಂತೆ ತೋರುತ್ತಿದೆ’ ಎಂದು ‘ಜೇಮ್ಸ್ ಮಾರ್ಟಿನ್ ಸೆಂಟರ್ ಫಾರ್ ನಾನ್‌ಪ್ರೊಲಿಫರೇಶನ್ ಸ್ಟಡೀಸ್‌’ನ ಕ್ಷಿಪಣಿ ಸಂಶೋಧಕ ಜೆಫ್ರಿ ಲೆವಿಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT