ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನು ಉಲ್ಲಂಘನೆ; ನೊಬೆಲ್ ಪುರಸ್ಕೃತ ಬಾಂಗ್ಲಾದೇಶದ ಯೂನಸ್‌ಗೆ ಜೈಲು

Published 1 ಜನವರಿ 2024, 10:43 IST
Last Updated 1 ಜನವರಿ 2024, 10:43 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಕಾರ್ಮಿಕ ಕಾನೂನು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಮೊಹಮ್ಮದ್ ಯೂನಸ್‌ ಅವರನ್ನು ತಪ್ಪಿತಸ್ಥ ಎಂದು ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಆದರೆ ಇದು ರಾಜಕೀಯ ಪ್ರೇರಿತ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.

ಪ್ರೊ. ಯೂನಸ್ ಅವರೊಂದಿಗೆ ಗ್ರಾಮೀಣ್ ಟೆಲಿಕಾಮ್‌ನ ಮೂವರು ಸಹೋದ್ಯೋಗಿಗಳನ್ನೂ ಅಪರಾಧಿಗಳು ಎಂದು ನ್ಯಾಯಾಲಯ ಹೇಳಿದೆ. ನಾಲ್ಕೂ ಜನರಿಗೆ ಆರು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 

ಮೈಕ್ರೊ ಫೈನಾನ್ಸ್‌ ಪ್ರವರ್ತಕ 83 ವರ್ಷದ ಮೊಹಮ್ಮದ್ ಯೂನಸ್ ಸ್ಥಾಪಿಸಿದ ಬಾಂಗ್ಲಾದೇಶ ಕಂಪನಿಯ ಸಿಬ್ಬಂದಿಗೆ ಹಣ ಪಾವತಿಸದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ‘ಬಡವರ ರಕ್ತ ಹೀರುವ ವ್ಯಕ್ತಿ’ ಎಂದು ಆರೋಪಿಸುತ್ತಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗಿನ ದೀರ್ಘ ಕಾಲದ ವೈಷಮ್ಯವನ್ನು ಯೂನಸ್‌ ಅವರು ಹೊಂದಿದ್ದರು. ಹೀಗಾಗಿಯೇ 2006ರ ನೊಬೆಲ್ ಪ್ರಶಸ್ತಿ ವಿಜೇತ ಯೂನಸ್ ವಿರುದ್ಧ ಹಸೀನಾ ಬಹಿರಂಗವಾಗಿಯೇ ಆರೋಪ ಮಾಡುತ್ತಿದ್ದರು ಎಂದು ವರದಿಯಾಗಿದೆ. 

‘ಯೂನಸ್ ವಿರುದ್ಧದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅವರಿಗೆ ಸದ್ಯ 6 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ನ್ಯಾಯಾಲಯ ಇನ್ನೂ ಹೆಚ್ಚಿನ ಶಿಕ್ಷೆಯನ್ನು ವಿಧಿಸುವ ಭರವಸೆ ಇದೆ. ಯೂನಸ್ ವಿರುದ್ಧ  ಕಾರ್ಮಿಕ ಕಾನೂನು ಉಲ್ಲಂಘನೆಯ 100ಕ್ಕೂ ಹೆಚ್ಚು ಪ್ರಕರಣಗಳಿವೆ’ ಎಂದು ಕಾರ್ಮಿಕರ ಪರ ವಕೀಲ ಖುರ್ಷಿದ್ ಆಲಂ ಖಾನ್ ತಿಳಿಸಿದ್ದಾರೆ.

‘ತಾನು ಈವರೆಗೂ 50ಕ್ಕೂ ಹೆಚ್ಚು ಕಂಪನಿಗಳನ್ನು ತೆರೆದಿದ್ದು, ಯಾವುದರಿಂದಲೂ ಲಾಭ ಪಡೆಯುತ್ತಿಲ್ಲ. ನಾನು ಸ್ಥಾಪಿಸಿರುವ ಯಾವುದೇ ಸಂಸ್ಥೆಗಳು ಲಾಭಕ್ಕಾಗಿಯಲ್ಲ’ ಎಂದು ಯೂನಸ್ ಅವರು ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹೇಳಿದ್ದರು.

‘ಈ ತೀರ್ಪು ಆಧಾರ ರಹಿತ, ಸುಳ್ಳು ಮತ್ತು ಕೆಟ್ಟ ಉದ್ದೇಶ ಹೊಂದಿರುವಂತದ್ದು’ ಎಂದು ವಕೀಲ ಖಾಜಾ ತನ್ವೀರ್ ಹೇಳಿದರು.

‘ಯೂನಸ್ ಅವರಿಗೆ ನಿರಂತರವಾಗಿ ನ್ಯಾಯಾಂಗ ಕಿರುಕುಳ ನೀಡಲಾಗುತ್ತಿದೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಅವರನ್ನೂ ಒಳಗೊಂಡಂತೆ 160 ಗಣ್ಯರು ಬಹಿರಂಗ ಪತ್ರ ಬರೆದಿದ್ದರು. ನೊಬೆಲ್ ಪ್ರಶಸ್ತಿ ಪಡೆದ ನೂರಕ್ಕೂ ಹೆಚ್ಚು ಜನರು ಯೂನಸ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದರು.

ಯೂನಸ್ ಅವರಿಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಶೇಖ್ ಹಸೀನಾ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾರ್ಮಿಕ ಕಾನೂನನ್ನು ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೇರು ವ್ಯಕ್ತಿಯ ವಿರುದ್ಧ ಅಸ್ತ್ರವನ್ನಾಗಿ ಬಳಸಿ, ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT