ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಗುರಿಯಾಗಿಸಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು

Published 5 ಮಾರ್ಚ್ 2024, 4:35 IST
Last Updated 5 ಮಾರ್ಚ್ 2024, 4:35 IST
ಅಕ್ಷರ ಗಾತ್ರ

ಜೆರುಸಲೇಂ: ಹಿಜ್ಬುಲ್ಲಾ ಉಗ್ರರು ಲೆಬನಾನ್‌ ಕಡೆಯಿಂದ ಇಸ್ರೇಲ್‌ನ ಉತ್ತರ ಗಡಿ ಭಾಗವಾದ ಮಾರ್ಗಲಿಯೂಟ್‌ ಪ್ರದೇಶದ ಮೇಲೆ ಟ್ಯಾಂಕರ್‌ ಅನ್ನು ಹೊಡೆದುರುಳಿಸಬಲ್ಲ ಕ್ಷಿಪಣಿಯ ದಾಳಿ ನಡೆಸಿದ್ದು, ಭಾರತೀಯ ಮೂಲದ ಒಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಇಬ್ಬರು ಭಾರತ ಮೂಲದವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂರೂ ಮಂದಿ ಕೇರಳದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಒಟ್ಟಾರೆ ಏಳು ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ನ ಉತ್ತರ ಭಾಗವಾದ ಮಾರ್ಗಲಿಯೂಟ್‌ ಕೃಷಿ ಪ್ರದೇಶವಾಗಿದ್ದು, ಕೃಷಿಕರೇ ಹೆಚ್ಚಾಗಿ ನೆಲೆಸಿದ್ದಾರೆ. ಈ ಪ್ರದೇಶದ ಮೇಲೆ ಸೋಮವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕ್ಷಿಪಣಿ ದಾಳಿ ನಡೆದಿದೆ ಎಂದು ರಕ್ಷಣಾ ಸೇವೆಗಳ ವಕ್ತಾರ ಜಾಕಿ ಹೆಲ್ಲರ್‌ ಹೇಳಿದ್ದಾರೆ. 

ಉಗ್ರರ ದಾಳಿಗೆ ಇಸ್ರೇಲ್‌ ರಕ್ಷಣಾ ಪಡೆಗಳು ಪ್ರತಿದಾಳಿ ನಡೆಸಿವೆ. ಅವರ ಕ್ಷಿಪಣಿ ಉಡಾವಣಾ ಸ್ಥಳಗಳ ಮೇಲೆ ಫಿರಂಗಿಗಳೊಂದಿಗೆ ಶೆಲ್‌ ದಾಳಿ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರನ್ನು ಕೇರಳದ ಕೊಲ್ಲಂನ ಪಟ್ನಿಬಿನ್‌ ಮ್ಯಾಕ್ಸ್‌ವೆಲ್‌ (30) ಎಂದು ಗುರುತಿಸಲಾಗಿದ್ದು, ಅವರ ದೇಹವನ್ನು ಝಿವ್‌ ಆಸ್ಪತ್ರೆಯಲ್ಲಿ ಇಡಲಾಗಿದೆ. ಗಾಯಗೊಂಡವರನ್ನು ಬುಷ್‌ ಜೋಸೆಫ್‌ ಜಾರ್ಜ್‌ (31) ಮತ್ತು ಪಾಲ್‌ ಮೆಲ್ವಿನ್‌ (28) ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಜಾರ್ಜ್‌ ಅವರ ಮುಖ ಮತ್ತು ದೇಹದ ಮೇಲೆ ಗಾಯಗಳಾಗಿದ್ದು, ಅವರನ್ನು ಪೇಟಾ ಟಿಕ್ವಾದಲ್ಲಿನ ಬೈಲಿನ್ಸನ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಮೆಲ್ವಿನ್‌ ಅವರನ್ನು ಉತ್ತರ ಇಸ್ರೇಲ್‌ನ ಸಫೆಡ್‌ನಲ್ಲಿರುವ ಝಿವ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಇಡುಕ್ಕಿ ಜಿಲ್ಲೆಯವರು ಎಂದು ಮೂಲಗಳು ತಿಳಿಸಿವೆ.

ಹೇಡಿತನದ ದಾಳಿ: ‘ಶಾಂತಿಯುತವಾಗಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರ ಮೇಲೆ ಶಿಯಾ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ಲಾ ನಡೆಸಿರುವ ದಾಳಿ ಹೇಡಿತನದಿಂದ ಕೂಡಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದು ನಮಗೆ ತೀವ್ರ ಆಘಾತ ಮತ್ತು ದುಃಖ ತರಿಸಿದೆ’ ಎಂದು ದೆಹಲಿಯಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ‘ಎಕ್ಸ್‌’ನಲ್ಲಿ ಹೇಳಿದೆ.

‘ಗಾಯಗೊಂಡವರಿಗೆ ಇಸ್ರೇಲ್‌ನಲ್ಲಿ ಪೂರ್ಣ ಪ್ರಮಾಣದ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ’ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT