ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜನರು ಬಿಜೆಪಿಯನ್ನು ಸೋಲಿಸಲಿದ್ದಾರೆ: ರಾಹುಲ್ ಗಾಂಧಿ

Published 4 ಜೂನ್ 2023, 12:12 IST
Last Updated 4 ಜೂನ್ 2023, 12:12 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಬಳಿಕ, ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ನಮ್ಮ ಪಕ್ಷವು ಬಿಜೆಪಿಯನ್ನು ಸೋಲಿಸಲಿದೆ. ದ್ವೇಷದಿಂದ ಕೂಡಿರುವ ಸಿದ್ಧಾಂತವನ್ನು ಬರೀ ಕಾಂಗ್ರೆಸ್ ಪಕ್ಷವಲ್ಲ, ಭಾರತದ ಜನರೇ ಸೋಲಿಸಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.  

ನ್ಯೂಯಾರ್ಕ್‌ನಲ್ಲಿ ಭಾರತದ ಸಾಗರೋತ್ತರ ಕಾಂಗ್ರೆಸ್‌ (ಅಮೆರಿಕ) ಶನಿವಾರ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಅವರು, ‘ಬಿಜೆಪಿಯನ್ನು ಬುಡಮೇಲು ಮಾಡಬಲ್ಲೆವು ಎಂದು ನಾವು ಕರ್ನಾಟಕದಲ್ಲಿ ತೋರಿಸಿದ್ದೇವೆ. ನಾವು ಅವರನ್ನು ಕೇವಲ ಸೋಲಿಸಿಲ್ಲ. ಅವರನ್ನು ಒಡೆದು ಹಾಕಿದ್ದೇವೆ’ ಎಂದು ತಿಳಿಸಿದ್ದಾರೆ. 

‘ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿಯು ಮಾಧ್ಯಮಗಳು ಸೇರಿದಂತೆ ಎಲ್ಲವನ್ನೂ ತನ್ನ ಪರ ಮಾಡಿಕೊಳ್ಳಲು ಪ್ರಯತ್ನಿಸಿತು. ನಮಗಿಂತ ಹತ್ತು ಪಟ್ಟು ಹೆಚ್ಚಿನ ಹಣವನ್ನು ಅವರು ಹೊಂದಿದ್ದರು. ಅವರ ಬಳಿ ಸರ್ಕಾರವಿತ್ತು. ಅವರ ಬಳಿ ತನಿಖಾ ಸಂಸ್ಥೆಗಳೂ ಇದ್ದವು. ಅವರ ಬಳಿ ಎಲ್ಲವೂ ಇದ್ದವು. ಆದರೆ, ನಾವು ಅವರನ್ನು ಸೋಲಿಸಿದೆವು. ಮುಂದೆ ಅವರನ್ನು ನಾವು ತೆಲಂಗಾಣದಲ್ಲೂ ಸೋಲಿಸುತ್ತೇವೆ’ ಎಂದು ಅವರು ಹೇಳಿದರು. 

‘ಕರ್ನಾಟಕದಲ್ಲಿ ಬಿಜೆಪಿಯು ಚುನಾವಣಾ ಸಂದರ್ಭದಲ್ಲಿ ಸಮುದಾಯಗಳ ನಡುವೆ ಕೋಮು ಧ್ರುವೀಕರಣಗೊಳಿಸಲು, ದ್ವೇಷ ಬಿತ್ತಲು ಪ್ರಯತ್ನಿಸಿತು. ಸ್ವತಃ ಪ್ರಧಾನಿ ಅವರೇ ಇದಕ್ಕೆ ಪ್ರಯತ್ನಿಸಿದರು. ಆದರೆ, ಇದು ಕೆಲಸ ಮಾಡಿತೇ’ ಎಂದು ರಾಹುಲ್ ಸಭಿಕರನ್ನು ಪ್ರಶ್ನಿಸಿದಾಗ ಅವರು ‘ಇಲ್ಲ’ ಎಂದು ಉತ್ತರಿಸಿದರು.

‘ತೆಲಂಗಾಣದ ಚುನಾವಣೆಯ ಬಳಿಕ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿನ ಚುನಾವಣೆಯಲ್ಲೂ ನಾವು ಕರ್ನಾಟಕದಲ್ಲಿ ಮಾಡಿದಂತೆಯೇ ಮಾಡುತ್ತೇವೆ. ಕೇವಲ ಕಾಂಗ್ರೆಸ್ ಪಕ್ಷವೊಂದೇ ಬಿಜೆಪಿಯನ್ನು ಸೋಲಿಸುವುದಿಲ್ಲ. ಬದಲಿಗೆ ಭಾರತದ ಜನರು, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಢದ ಜನರು ಬಿಜೆಪಿಯನ್ನು ಸೋಲಿಸಲಿದ್ದಾರೆ’ ಎಂದು ರಾಹುಲ್ ಹೇಳಿದಾಗ ನೆರೆದವರು ಭಾರಿ ಚಪ್ಪಾಳೆಯ ಮೂಲಕ ಬೆಂಬಲ ವ್ಯಕ್ತಪಡಿಸಿದರು.  

‘ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ದ್ವೇಷದ ರೂಪಕ ಅಥವಾ ಮಾದರಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಭಾರತ ಅರ್ಥಮಾಡಿಕೊಂಡಿರುವುದೇ ಇದಕ್ಕೆ ಕಾರಣ. 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಸೋಲಲಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳ ಜತೆಗೆ ಒಗ್ಗಟ್ಟಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಇದೊಂದು ಸೈದ್ಧಾಂತಿಕ ಹೋರಾಟ. ಒಂದೆಡೆ ಬಿಜೆಪಿಯ ವಿಭಜಕ, ದ್ವೇಷ ತುಂಬಿದ ಸಿದ್ಧಾಂತವಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನ ಪ್ರೀತಿ, ವಾತ್ಸಲ್ಯದ ಸಿದ್ಧಾಂತವಿದೆ’ ಎಂದೂ ಅವರು ಹೇಳಿದರು.

ನ್ಯೂಯಾರ್ಕ್‌ನ ಮೇಯರ್ ಎರಿಕ್ ಆ್ಯಡಮ್ಸ್ ಸೇರಿದಂತೆ ಕಾಂಗ್ರೆಸ್ ಬೆಂಬಲಿಗರು, ಪಕ್ಷದ ಸದಸ್ಯರು ಅಲ್ಲದೆ ಬೃಹತ್‌ ಸಂಖ್ಯೆಯಲ್ಲಿ ಜನರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT