ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ಪ್ರಧಾನಿ ಹುದ್ದೆಗೇರಲು ಭಾರತ ಮೂಲದ ರಿಷಿ ಸುನಕ್‌ಗೆ ಮತ್ತೊಂದು ಅವಕಾಶ?

Last Updated 20 ಅಕ್ಟೋಬರ್ 2022, 14:18 IST
ಅಕ್ಷರ ಗಾತ್ರ

ಲಂಡನ್‌: ಇತ್ತೀಚೆಗಷ್ಟೇ ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ಗುರುವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಸ್ಥಾನದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ವಿರುದ್ಧ ಪರಾಭವಗೊಂಡಿದ್ದ ಭಾರತ ಮೂಲದ ರಿಷಿ ಸುನಕ್‌ ಅವರಿಗೆ ಬ್ರಿಟನ್‌ ಪ್ರಧಾನಿಯಾಗಲು ಈ ಮೂಲಕ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.

ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಮತ್ತೊಮ್ಮೆ ಪೈಪೋಟಿ ನಡೆಸಲಿದ್ದಾರೆ ಎಂದು ವೆಸ್ಟ್‌ಮಿನ್‌ಸ್ಟರ್ ಮತ್ತು ವೈಟ್‌ಹಾಲ್‌ನಲ್ಲಿ ಊಹಾಪೋಹಗಳು ಹರಡಿವೆ. ಆದಾಗ್ಯೂ, ಅವರಿಂದ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅವನತಿಯಲ್ಲಿ ಸುನಕ್‌ ಅವರದ್ದೂ ಪಾತ್ರವಿದೆ ಎಂಬ ಅಪಖ್ಯಾತಿಯ ಹಿನ್ನೆಲೆಯಲ್ಲಿ ಪಕ್ಷದೊಳಗೆ ಅವರಿಗೆ ಶತ್ರುಗಳು ಸೃಷ್ಟಿಯಾಗಿದ್ದಾರೆ. ಹೀಗಾಗಿ ಇದು ಅವರಿಗೆ ಹಿನ್ನಡೆಯಾಗುವ ಅಂಶ. ಇನ್ನೊಂದೆಡೆ, 6 ವಾರಗಳ ಹಿಂದಿನ ಚುನಾವಣೆಯಲ್ಲಿ ಸೋತ ನಂತರ ರಿಷಿ ವರ್ಚಸ್ಸಿಗೆ ತಕ್ಕಮಟ್ಟಿಗೆ ಹಾನಿಯಾಗಿದೆ ಎನ್ನಲಾಗಿದೆ.

ಸುನಕ್ ಅವರ ಹೊರತಾಗಿ, ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಹೌಸ್ ಆಫ್ ಕಾಮನ್ಸ್ ನಾಯಕ ಪೆನ್ನಿ ಮೊರ್ಡಾಂಟ್ ಹೆಸರೂ ಕೂಡ ಪ್ರಧಾನಿ ಸ್ಥಾನಕ್ಕೆ ಕೇಳಿ ಬಂದಿದೆ. ಜಾನ್ಸನ್ ಹೆಸರೂ ಪ್ರಸ್ತಾಪವಾಗುತ್ತಿದೆ. ಈ ಹಿಂದೆ ನಾಯಕತ್ವಕ್ಕಾಗಿ ಸ್ಪರ್ದೆ ಮಾಡಲು ವ್ಯಾಲೇಸ್ ನಿರಾಕರಿಸಿದ್ದರು. ಆದರೆ ಅವರು ಸ್ಪರ್ಧೆ ಮಾಡಿದರೆ, ಮುಂಚೂಣಿ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಬುಧವಾರ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ ಕೂಡ ಮಹತ್ವಾಕಾಂಕ್ಷೆ ಹೊಂದಿರಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ.

ಪ್ರಸ್ತುತ ಚಾನ್ಸೆಲರ್ ಆಗಿರುವ ಜೆರ್ಮಿ ಹಂಟ್ ಅವರು ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.

ಇನ್ನೊಂದೆಡೆ, ಲಿಜ್‌ ಟ್ರಸ್‌ ರಾಜೀನಾಮೆ ಬೆನ್ನಿಗೆ #RishiSunak ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದು, ಅವರಿಗೆ ಮತ್ತೊಂದು ಅವಕಾಶ ಲಭ್ಯವಾಗಿದೆ ಎಂಬ ಅಭಿಪ್ರಾಯಗಳೇ ವ್ಯಕ್ತವಾಗಿವೆ.

ಬ್ರಿಟನ್‌ನಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಕುಸಿತವನ್ನು ನಿಭಾಯಿಸಲು ಆಗದಿದ್ದಕ್ಕೆ ಕನ್ಸರ್ವೇಟಿವ್‌ ಪಕ್ಷದ ಟ್ರಸ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಾನು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಆಗುತ್ತಿಲ್ಲವಾದ್ದರಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಟ್ರಸ್ ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT