ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಭದ್ರತೆಗೆ ಕ್ರಮ; ಚೀನಾದಲ್ಲಿ ಹೂಡಿಕೆಗೆ ನಿರ್ಬಂಧ ಹೇರಲು ಮುಂದಾದ ಬೈಡನ್

Published 9 ಆಗಸ್ಟ್ 2023, 3:22 IST
Last Updated 9 ಆಗಸ್ಟ್ 2023, 3:22 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತವು ಚೀನಾದ ಉದ್ಯಮಗಳಲ್ಲಿ ಹೂಡಿಕೆ ಮಾಡುವ ತನ್ನ ದೇಶದ ಉದ್ಯಮಿಗಳಿಗೆ ಹೊಸದಾಗಿ ನಿರ್ಬಂಧಗಳನ್ನು ಹೇರುವ ಯೋಜನೆ ಮಾಡಿಕೊಂಡಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಅಗತ್ಯ ಎಂದು ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ 'ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

ಚೀನಾದೊಂದಿಗೆ ಆರ್ಥಿಕ ಪೈಪೋಟಿ ನಡೆಸುತ್ತಿರುವ ಅಮೆರಿಕ, ಹಣಕಾಸಿನ ಹರಿವಿನ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ಕ್ರಮಗಳಲ್ಲಿ ಇದೂ ಒಂದಾಗಿದೆ. ಈ ಕ್ರಮವು ಮುಂಬರುವ ದಿನಗಳಲ್ಲಿ ಉಭಯ ದೇಶಗಳ ನಡುವಣ ಹೂಡಿಕೆ ಮೇಲೆ ಹಲವು ಹೊಸ ನಿರ್ಬಂಧಗಳಿಗೆ ವೇದಿಕೆಯಾಗಲಿದೆ.

ಅಮೆರಿಕನ್‌ ಡಾಲರ್‌ ಮತ್ತು ಪಾಂಡಿತ್ಯವು ಚೀನಾಗೆ ವರ್ಗಾವಣೆಗೊಳ್ಳುವುದನ್ನು ತಪ್ಪಿಸಲು ಕ್ವಾಂಟಮ್‌ ಕಂಪ್ಯೂಟಿಂಗ್‌, ಕೃತಕ ಬುದ್ದಿಮತ್ತೆ ಮತ್ತು ಸುಧಾರಿತ ಅರೆವಾಹಕಗಳು ಸೇರಿದಂತೆ ಹಲವು ಹೈಟೆಕ್‌ ಉದ್ಯಮಗಳಲ್ಲಿ ಹೂಡಿಕೆ ನಡೆಸಲು ಈಕ್ವಿಟಿ ಮತ್ತು ವೆಂಚರ್‌ ಕ್ಯಾಪಿಟಲ್‌ ಉದ್ಯಮಗಳ ಮೇಲೆ ನಿಯಂತ್ರಣ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೀನಾದ ಉದ್ಯಮಗಳಲ್ಲಿ ವ್ಯಾಪಕ ಶ್ರೇಣಿಯಲ್ಲಿ ಹೂಡಿಕೆ ಮಾಡುವ ಉದ್ಯಮಗಳು, ಉಭಯ ದೇಶಗಳ ನಡುವಣ ಹಣಕಾಸು ವಿನಿಮಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ವರದಿ ಮಾಡುವುದು ಅಗತ್ಯವಾಗಲಿದೆ.

ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಬೆದರಿಕೆಯನ್ನು ನಿಯಂತ್ರಿಸುವ ಸಲುವಾಗಿ ರೂಪಿಸುವ ನಿರ್ಬಂಧ ಕ್ರಮಗಳು ಚೀನಾ ಮಿಲಿಟರಿ ಅಥವಾ ಕಣ್ಗಾವಲು ವ್ಯವಸ್ಥೆಗೆ ನೆರವಾಗುವ ಕೆಲವೇ ಉದ್ಯಮಗಳನ್ನು ಗುರಿಯಾಗಿಸುತ್ತವೆ. ಚೀನಾದೊಂದಿಗಿನ ಕಾನೂನಾತ್ಮಕವಾಗಿ ವ್ಯವಹಾರ ನಡೆಸುವ ಉದ್ಯಮಗಳಿಗೆ ಅಡ್ಡಿಪಡಿಸುವುದಿಲ್ಲ ಎಂಬುದನ್ನು ಬೈಡನ್‌ ಆಡಳಿತ ಒತ್ತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT