ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಡಲ್ಸ್‌ ನಿಷೇಧ: ವಾಸ್ತವ ನಿರ್ಲಕ್ಷಿಸುವಂತಿಲ್ಲ

Last Updated 1 ಆಗಸ್ಟ್ 2018, 9:26 IST
ಅಕ್ಷರ ಗಾತ್ರ

‘ಏನಾದರೂ ಹೊಸತಾಗಿ ಪಡೆದುಕೊಂಡರೆ ಅದಕ್ಕೆ ಪ್ರತಿಯಾಗಿ ಏನನ್ನಾದರೂ ಮರಳಿಸಬೇಕಾಗುತ್ತದೆ. ಮಾನವ ತಿರುಗುವ ಚಕ್ರ ಕಂಡು ಹಿಡಿದ. ಆದರೆ, ನಡೆಯುವುದನ್ನು ಮರೆತ. ಅತ್ಯುತ್ತಮವಾದ ಕೈಗಡಿಯಾರ ಕಟ್ಟಿಕೊಂಡ. ನೌಕಾಯಾನಕ್ಕೆ ನೆರವಾಗುವ ಮಾರ್ಗದರ್ಶಿ ಕ್ಯಾಲೆಂಡರ್ ನಿರ್ಮಿಸಿದ. ಆದರೆ, ಸೂರ್ಯನ ಚಲನೆ ಆಧರಿಸಿ ಸಮಯ ಹೇಳುವ ಮತ್ತು ನಕ್ಷತ್ರಗಳನ್ನು ನೋಡಿ ದಿಕ್ಕು ಗುರುತಿಸುವುದನ್ನು ಮರೆಯುವುದರ ಜತೆಗೆ ಅನೇಕ ಸದ್ಗುಣಗಳನ್ನೂ ಮರೆತ’ ಎಂದು ದಾರ್ಶನಿಕರೊಬ್ಬರು 150 ವರ್ಷಗಳ ಹಿಂದೆಯೇ ಹೇಳಿದ್ದರು. 21ನೇ ಶತಮಾನದಲ್ಲಿ ತಂತ್ರಜ್ಞಾನವು ಮನುಕುಲವನ್ನು ಅದೆಷ್ಟರಮಟ್ಟಿಗೆ ಪ್ರಭಾವಿಸಿದೆ ಎನ್ನುವುದು ನಮ್ಮ ಊಹೆಗೆ ಬಿಟ್ಟ ವಿಚಾರವಾಗಿದೆ.

ಹಲವಾರು ಸಂಶೋಧನೆಗಳು ಮತ್ತು ಅವುಗಳು ನಮ್ಮ ಬದುಕಿನ ಮೇಲೆ ಬೀರಿದ ಪ್ರಭಾವ, ಅವುಗಳ ಮೇಲಿನ ನಮ್ಮ ಅವಲಂಬನೆ ದಿನೇ ದಿನೇ ಹೆಚ್ಚುತ್ತಿದೆ. ಟೆಲಿವಿಷನ್ ಮತ್ತು ಇಂಟರ್ ನೆಟ್‌ನಲ್ಲಿ ಹರಿದು ಬರುತ್ತಿರುವ ಮಾಹಿತಿ ಪ್ರವಾಹದಲ್ಲಿ ನಾವೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದೇವೆ. ಬೆಟ್ಟ ಗುಡ್ಡಗಳನ್ನು ಏರಿಳಿಯುತ್ತ, ನಿಸರ್ಗದ ನಿಗೂಢತೆ ಮತ್ತು ಭವ್ಯತೆಯ ಮಧುರಾನುಭೂತಿ ಪಡೆಯುವ ಬದಲಿಗೆ, ಕುರುಕಲು ತಿಂಡಿ ಚಪ್ಪರಿಸುತ್ತ, ಬಿಯರ್ ಹೀರುತ್ತ ಡಿಸ್ಕವರಿ ಚಾನೆಲ್ ವೀಕ್ಷಿಸುತ್ತ ಕಾಲ ಕಳೆಯುತ್ತಿದ್ದೇವೆ.

ವಿದ್ಯುನ್ಮಾನ ಮಾಧ್ಯಮಗಳಲ್ಲಿನ ‘ಬ್ರೇಕಿಂಗ್ ನ್ಯೂಸ್’ ಮತ್ತು ಅತಿ ಭಾವುಕತೆಯ ಟಿ.ವಿ ಧಾರಾವಾಹಿಗಳೇ ನಮ್ಮ ದಿನನಿತ್ಯದ ಮುಖ್ಯ ಚಟುವಟಿಕೆಗಳಾಗಿವೆ. ಟಾಲ್‌ಸ್ಟಾಯ್, ಪ್ರೇಮ್ ಚಂದ್, ರವೀಂದ್ರನಾಥ ಟ್ಯಾಗೋರ್ ಮತ್ತಿತರ ಖ್ಯಾತ ಲೇಖಕರ ಗ್ರಂಥಗಳನ್ನು ಓದುವುದನ್ನು ಮರೆತೇ ಬಿಟ್ಟಿದ್ದೇವೆ. ದಿನ ಪತ್ರಿಕೆಗಳಲ್ಲಿನ ಆಯ್ದ ವಿಷಯಗಳು, ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳನ್ನು ಓದುವ ಹುಮ್ಮಸ್ಸೂ ಅನೇಕರಲ್ಲಿ ಇಲ್ಲವಾಗುತ್ತಿದೆ. ಸದ್ಯಕ್ಕೆ ನಾವಿರೋದು ಮೊಬೈಲ್ ನಾಗರಿಕತೆಯ ಕಾಲ. ಇಂಟರ್‌ನೆಟ್ ಸುದ್ದಿಗಳು, ಆನ್‌ಲೈನ್ ಸಂಗೀತ ಮತ್ತು ವಿಡಿಯೊ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಎಣೆಇಲ್ಲದ ಮತ್ತು ಎಲ್ಲೆಡೆ ಲಭ್ಯ ಇರುವ ಆನ್‌ಲೈನ್ ಖರೀದಿ ಭರಾಟೆಯಲ್ಲಿ ಬದುಕು ಕಳೆದುಹೋಗುತ್ತಿದೆ.

ಸ್ವಯಂ ಘೋಷಿತ ದೇವಮಾನವರು ಟಿ.ವಿಗಳಲ್ಲಿ ನೀಡುವ ಧಾರ್ಮಿಕ ಬೋಧನೆ, ಪ್ರವಚನಗಳ ಮೂಲಕ ತಕ್ಷಣದ ನಿರ್ವಾಣ ಸ್ಥಿತಿ, ಅಂತರ್ಜಾಲದಲ್ಲಿನ ಯೋಗದ ಪಾಠಗಳು, ಟಿ.ವಿ ಚಾನೆಲ್‌ಗಳಲ್ಲಿನ ಅಡುಗೆ ತಯಾರಿಕೆಯ ಪಾಠಗಳ ಮಧ್ಯೆ ಎರಡೇ ನಿಮಿಷಗಳಲ್ಲಿ ಸಿದ್ಧಗೊಳ್ಳುವ ಮ್ಯಾಗಿ ನೂಡಲ್ಸ್‌ ಮರೆಯಲು ಸಾಧ್ಯವೇ ಇಲ್ಲ.

ತಂತ್ರಜ್ಞಾನ ಬದಲಾದಂತೆ, ಟಿ.ವಿ ಮತ್ತು ನವ ಮಾಧ್ಯಮಗಳು, ಮೊಬೈಲ್‌ಗಳು ನಮ್ಮ ಬದುಕು, ಜೀವನಶೈಲಿ ಮತ್ತು ಹವ್ಯಾಸಗಳು ಎಲ್ಲವನ್ನೂ ಆಮೂಲಾಗ್ರವಾಗಿ ಬದಲಾಯಿಸಿಬಿಟ್ಟಿವೆ. ತಾಜಾ ಹಣ್ಣು, ಹಾಲು, ಮೊಟ್ಟೆ, ರಾಗಿ, ಚಪಾತಿ, ಇಡ್ಲಿ ಸೇವಿಸುವ ಬದಲಿಗೆ, ಜನಪ್ರಿಯ ತಾರೆಗಳು ಪ್ರಚಾರ ಮಾಡುವ ಶಕ್ತಿವರ್ಧಕ ಪಾನೀಯ, ಕ್ಯಾಲ್ಸಿಯಮ್ ಸಮೃದ್ಧ ಬಿಸ್ಕೆಟ್, ಕೆಲ್ಲಾಗ್ ಸೇವಿಸುತ್ತೇವೆ. ಸ್ಥಳೀಯ ತರಕಾರಿಗಳಿಂದ ತಯಾರಿಸಿದ ಬಿಸಿ ಆಹಾರ ಸೇವನೆ ಬದಲಿಗೆ ಮ್ಯಾಗಿ ತಿನ್ನಲು ಮುಂದಾಗಿ ನಮ್ಮಷ್ಟಕ್ಕೆ ನಾವೇ ಹೆಡ್ಡರಾಗುತ್ತಿದ್ದೇವೆ.

ಎರಡು ದಶಕಗಳಿಂದಲೂ ನೂರಕ್ಕೂ ಹೆಚ್ಚು ದೇಶಗಳಲ್ಲಿ ಮ್ಯಾಗಿ ನೂಡಲ್ಸ್ ಮಾರಾಟ ಮಾಡುತ್ತಿರುವ ಬಹುರಾಷ್ಟ್ರೀಯ ಸಂಸ್ಥೆ ನೆಸ್ಲೆಯ ಉತ್ಪನ್ನದ ಮೇಲೆ ಈಗ ಸರ್ಕಾರ ನಿಷೇಧ ಹೇರಿರುವುದು ಮ್ಯಾಗಿ ಬಳಕೆದಾರರು ಸೇರಿ ಇತರ ಜನಸಾಮಾನ್ಯರಲ್ಲೂ ಏಕಪಕ್ಷೀಯ ನಿರ್ಧಾರದಂತೆ ಕಾಣುತ್ತದೆ.

ಪೊಟ್ಟಣದಲ್ಲಿ ಮಾರಾಟ ಮಾಡುವ ಆಹಾರ ಉತ್ಪನ್ನಗಳನ್ನು ಇಷ್ಟಪಡದ, ಪೊಟ್ಟಣ, ಕ್ಯಾನ್‌ಗಳಲ್ಲಿ ಲಭ್ಯ ಇರುವ ಸಂಸ್ಕರಿತ ಆಹಾರ, ಪಾನೀಯಗಳ ಬದಲಿಗೆ ನೈಸರ್ಗಿಕ ಆಹಾರ ಇಷ್ಟಪಡುವ ನನ್ನಂಥ ಅನೇಕರಲ್ಲಿ ಸರ್ಕಾರದ ಈ ನಿರ್ಧಾರ ಏಕಪಕ್ಷೀಯ ಎಂಬ ಭಾವನೆ ಮೂಡಿಸುತ್ತದೆ.

ಸಂಸ್ಕರಿತ ಆಹಾರ, ತಿನಿಸುಗಳ ವಹಿವಾಟಿಗೆ ಆಧುನಿಕ ಸಮಾಜದಲ್ಲಿ ವಿಪುಲ ಅವಕಾಶ ಇದ್ದೇ ಇದೆ. ಟಿ.ವಿ, ಇಂಟರ್‌ನೆಟ್ ಮತ್ತು ಮದ್ಯ, ತಂಬಾಕು, ಕೆಫಿನ್ ಒಳಗೊಂಡ ಪಾನೀಯಗಳು ಹಾನಿಕಾರಕವಾದವುಗಳು ಎನ್ನುವುದು ಗೊತ್ತಿದ್ದರೂ ಅವುಗಳ ಪ್ರಭಾವದಿಂದ ಹೊರಬರಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ.

ಪೊಟ್ಟಣಗಳಲ್ಲಿ ದೊರೆಯುವ ಅಸುರಕ್ಷಿತ ಆಹಾರ ಪದಾರ್ಥಗಳ ಬಳಕೆ ಮತ್ತು ಮಾರಾಟಕ್ಕೆ ಅವಕಾಶ ನೀಡಬಾರದು ಎನ್ನುವುದನ್ನು ಒಪ್ಪಿಕೊಂಡರೂ, ಸರ್ಕಾರವು ಏಕಪಕ್ಷೀಯ ನಿರ್ಧಾರಕ್ಕೆ ಬಂದಿರುವಂತೆ ಭಾಸವಾಗುತ್ತದೆ. ನಿಷೇಧ ಜಾರಿ ಸಂಸ್ಥೆಗಳು ಮ್ಯಾಗಿ ನೂಡಲ್ಸ್ ನಿಷೇಧವನ್ನು ವಸ್ತುನಿಷ್ಠವಾಗಿ ಮತ್ತು ಜಾಣತನದಿಂದ ನಿರ್ವಹಿಸಿಲ್ಲ ಎಂದು ಪೋಷಕಾಂಶತಜ್ಞರು, ಗ್ರಾಹಕರ ಹಕ್ಕುಗಳ ಕಾರ್ಯಕರ್ತರು ಮತ್ತು ಗ್ರಾಹಕರ ರಕ್ಷಣೆ ಸಂಘಟನೆಗಳು ಸೇರಿ ಅನೇಕ ಪರಿಣತರು ವಿಶ್ಲೇಷಿಸುತ್ತಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ, ಮ್ಯಾಗಿ ನೂಡಲ್ಸ್ ಸೇವನೆಯಿಂದ ಹಠಾತ್ ಅಥವಾ ನಿಧಾನ ಸಾವಿನ ಪ್ರಕರಣಗಳೇನೂ ವರದಿಯಾಗಿಲ್ಲ. ಲಕ್ಷಾಂತರ ಮನೆ, ಶಾಲೆ, ರಸ್ತೆ ಬದಿ ತಿನಿಸು ಮಾರಾಟ ಗಾಡಿಗಳು, ಢಾಬಾಗಳು ಸೇರಿದಂತೆ ರಕ್ಷಣಾ ಪಡೆಗಳಲ್ಲಿಯೂ ಮ್ಯಾಗಿ ನೂಡಲ್ಸ್ ಸೇವನೆ ಬಳಕೆಯಲ್ಲಿದೆ. ಇದು ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಇದೇ ಚಿತ್ರಣ ಕಂಡು ಬರುತ್ತದೆ.

ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ತಾನು ರೂಪಿಸಿರುವ ಹೊಸ ಮಾನದಂಡಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದರೆ, ಅದನ್ನು ವ್ಯವಸ್ಥಿತವಾಗಿ ಮಾಡಬಹುದಾಗಿತ್ತು. ಬಹುರಾಷ್ಟ್ರೀಯ ಸಂಸ್ಥೆಗಳಾದ ನೆಸ್ಲೆ, ಹಿಂದೂಸ್ತಾನ್ ಲಿವರ್ ಮತ್ತು ಭಾರತದ ಸಂಸ್ಥೆಗಳಾದ ಬ್ರಿಟಾನಿಯಾ, ಪಾರ್ಲೆ ಸೇರಿದಂತೆ ಇತರ ಸಣ್ಣ ಪುಟ್ಟ ತಯಾರಿಕಾ ಸಂಸ್ಥೆಗಳ ಉತ್ಪನ್ನಗಳನ್ನೂ ಪರೀಕ್ಷೆಗೆ ಒಳಪಡಿಸಬೇಕಿತ್ತು.

ಆಹಾರ ಸುರಕ್ಷತೆ ಪರೀಕ್ಷಿಸುವ ಉದ್ದೇಶದ ಮಾದರಿಗಳ ಆಯ್ಕೆ, ಪರೀಕ್ಷಾ ವಿಧಾನ, ಕಠಿಣ ಸ್ವರೂಪದ ಹಲವಾರು ಮಾನದಂಡಗಳನ್ನು ಅನ್ವಯಿಸುವುದು, ಪ್ರಯೋಗಾಲಯದ ಪರೀಕ್ಷೆ ಮುಂತಾದವು ಪಾರದರ್ಶಕವಾಗಿರಬೇಕು. ಫಲಿತಾಂಶವನ್ನು ಬಹಿರಂಗಪಡಿಸಬೇಕು. ಮ್ಯಾಗಿ ನೂಡಲ್ಸ್ ವಿಷಯದಲ್ಲಿ ಈಗ ಸರ್ಕಾರ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅವಸರದ ನಿರ್ಧಾರಕ್ಕೆ ಬಂದು ಮುಜುಗರಕ್ಕೆ ಒಳಗಾಗಿವೆ.

ಕೆಲವು ರಾಜ್ಯಗಳು ಮ್ಯಾಗಿ ಮಾರಾಟ ನಿಷೇಧಿಸಿದ್ದರೆ, ಇನ್ನೂ ಕೆಲವು ಮಾರಾಟ ನಿಲ್ಲಿಸಿಲ್ಲ. ಪರೀಕ್ಷೆಯ ಫಲಿತಾಂಶಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿನ ಪರೀಕ್ಷೆಯಲ್ಲಿ, ಮ್ಯಾಗಿ ನೂಡಲ್ಸ್ ಸೇವಿಸಲು ಸುರಕ್ಷಿತವಾಗಿದೆ. ಭಾರತದಿಂದ ಆಮದು ಮಾಡಿಕೊಂಡಿರುವ ಮ್ಯಾಗಿ ನೂಡಲ್ಸ್ ಸೇವಿಸಲು ಸುರಕ್ಷಿತವಾಗಿದ್ದು, ಇತರ ದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳಂತೆಯೇ ಉತ್ತಮ ಗುಣಮಟ್ಟ ಒಳಗೊಂಡಿದೆ ಎಂದು ಸಿಂಗಪುರ ಹೇಳಿರುವುದು ಈ ವಿವಾದಕ್ಕೆ ಹೊಸ ತಿರುವು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಕಠಿಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿರುವುದಕ್ಕೆ, ನಿಯಮ ಉಲ್ಲಂಘನೆಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವ, ಆಹಾರ ಸುರಕ್ಷತೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದ ಜಿಗುಟುತನಕ್ಕೆ ವಿಶ್ವದಾದ್ಯಂತ ಖ್ಯಾತವಾಗಿರುವ ಸಿಂಗಪುರ ಸರ್ಕಾರವು ಮ್ಯಾಗಿ ಸುರಕ್ಷತೆಗೆ ಪ್ರಮಾಣ ಪತ್ರ ನೀಡಿರುವುದು ಮಹತ್ವದ ಬೆಳವಣಿಗೆ. ಸಿಂಗಪುರ ಸರ್ಕಾರವು ವಿವೇಕಯುತ ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿನ ವಿವಾದದ ಕಾರಣಕ್ಕೆ ಪ್ರಯೋಗಾಲಯದ ಪರೀಕ್ಷೆ ಮತ್ತು ತನಿಖಾ ವರದಿ ಬರುವವರೆಗೆ ಮ್ಯಾಗಿ ನೂಡಲ್ಸ್ ಮಾರಾಟವನ್ನು ಅಮಾನತುಗೊಳಿಸಿತ್ತು.

ಫಲಿತಾಂಶ ಬರುತ್ತಿದ್ದಂತೆ ಒಂದು ವಾರದಲ್ಲಿ ನಿಷೇಧ ತೆರವುಗೊಳಿಸಿ, ಭಾರತದಿಂದ ಆಮದು ಮಾಡಿಕೊಂಡ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿತು. ಬಹುಶಃ ಭಾರತದ ಅಧಿಕಾರಿಗಳಿಗೆ ಇಲ್ಲೊಂದು ಪಾಠವಿದೆ. ನಮ್ಮಲ್ಲಿ ಆಹಾರ ಗುಣಮಟ್ಟ ನಿಯಂತ್ರಣ ವಿಷಯದಲ್ಲಿ ಬರೀ ಲೋಪದೋಷಗಳೇ ತುಂಬಿರುವುದು, ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಗೊತ್ತಿರುವ ವಿಷಯ. ಪರಿಸರ, ನೆಲ, ಜಲ ಮಾಲಿನ್ಯ ಮತ್ತು ಔಷಧ, ಪೊಟ್ಟಣ ಆಹಾರ ತಯಾರಿಕಾ ಘಟಕಗಳಿಂದ ಆಗುತ್ತಿರುವ ಮಾಲಿನ್ಯದ ಗುಣಮಟ್ಟ ನಿಯಂತ್ರಣ ಹಾಗೂ ಜಾರಿ ವಿಷಯದಲ್ಲಿ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ.

ಲಾಭದಾಯಕವಾಗಿರುವ ಪೊಟ್ಟಣದ ಆಹಾರ ತಯಾರಿಕೆಯಲ್ಲಿ ಸಣ್ಣ-ಪುಟ್ಟ ಉದ್ದಿಮೆಗಳೂ ತೊಡಗಿವೆ. ನೂಡಲ್ಸ್, ಬಿಸ್ಕೆಟ್, ಉಪ್ಪಿನಕಾಯಿ, ಚಿಪ್ಸ್, ಹಪ್ಪಳ, ತಂದೂರಿ ಗರಂ ಮಸಾಲಾ, ಸಂಬಾರ ಪುಡಿ, ಇಡ್ಲಿ, ಗುಲಾಬ್ ಜಾಮೂನು, ರಸಗುಲ್ಲ ತಯಾರಿಕೆಯಲ್ಲಿ ಆಹಾರ ಗುಣಮಟ್ಟ ನಿಯಮಗಳನ್ನು ಅದೆಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದು ಆ ದೇವರಿಗೇ ಗೊತ್ತು.

ದೋಷಗಳನ್ನೆಲ್ಲ ದೂರಮಾಡುವುದು, ವ್ಯವಸ್ಥೆ ಸರಿಪಡಿಸುವುದು, ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹೇಳಿದಷ್ಟು ಸುಲಭದ ಕೆಲಸವಲ್ಲ. ಇವು ಪ್ರಧಾನಿ ನರೇಂದ್ರ ಮೋದಿ ನೀಡಿರುವ ‘ದಕ್ಷ ಆಡಳಿತ’ದ ಭರವಸೆಯ ಭಾಗವಾಗಿವೆ. ಒಂದೇ ಒಂದು ಬಹುರಾಷ್ಟ್ರೀಯ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಉದ್ದೇಶಿತ ಗುರಿ ಈಡೇರದು. ಈ ನಿಟ್ಟಿನಲ್ಲಿ ಸರ್ಕಾರ ಇನ್ನೂ ಸಾಕಷ್ಟು ದೂರ ಸಾಗಬೇಕಾಗಿದೆ. ಆಹಾರ ಗುಣಮಟ್ಟ ನಿಯಂತ್ರಣ ವಿಷಯವು ಸಾಕಷ್ಟು ಸಂಕೀರ್ಣವಾಗಿದೆ. ನಿಯಮಗಳಿಗೆ ಬದ್ಧತೆ ತೋರುವುದರಲ್ಲಿ ರಾಜ್ಯ ಸರ್ಕಾರಗಳ ಸಾಧನೆ ತುಂಬ ಕಳಪೆಯಾಗಿದೆ.

ತನ್ನ ಉತ್ಪನ್ನಗಳಲ್ಲಿ ಹೆಚ್ಚುವರಿಯಾಗಿ ಸೀಸ ಮತ್ತು ಎಂಎಸ್‌ಜಿ ಸೇರ್ಪಡೆ ಮಾಡಿಲ್ಲ ಎಂದು ನೆಸ್ಲೆ ಕೂಡ ಹೇಳಿಕೊಂಡಿದೆ. ಸಂಸ್ಥೆಯು ರೈತರಿಂದ ಖರೀದಿಸುವ ಉತ್ಪನ್ನಗಳಲ್ಲಿ ಸೀಸ ಮತ್ತು ಇತರ ಹಾನಿಕಾರಕ ಲೋಹ ಮತ್ತು ವಿಷಗಳು ಹೊಲ ಗದ್ದೆಗಳಲ್ಲಿಯೇ ಸೇರಿಕೊಂಡಿರುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಜತೆಗೆ ರೈತರು ಕೀಟನಾಶಕಗಳ ರೂಪದಲ್ಲಿ ಫಸಲಿಗೆ ಬಳಸುವ ಡಿಡಿಟಿ, ಬಿಎಚ್‌ಸಿ ಮತ್ತಿತರ ರಾಸಾಯನಿಕ ಗೊಬ್ಬರಗಳೂ ಆಹಾರ ಧಾನ್ಯಗಳಲ್ಲಿ ಸೇರಿಕೊಂಡಿರುತ್ತವೆ.

ಕೀಟನಾಶಕಗಳಲ್ಲಿನ ರಾಸಾಯನಿಕಗಳು ಅಂತರ್ಜಲ, ಬೆಳೆದ ಫಸಲು, ಹಣ್ಣು, ತರಕಾರಿ, ಹಾಲಿನ ಉತ್ಪನ್ನಗಳಲ್ಲಿ ಸೇರಿಕೊಂಡಿರುವುದನ್ನು ತಳ್ಳಿಹಾಕಲಿಕ್ಕಾಗದು. ನೈಸರ್ಗಿಕ ಕೃಷಿ ವಿಧಾನಗಳಿಗೆ ನಾವು ಎಳ್ಳು ನೀರು ಬಿಟ್ಟಿರುವುದೇ ಇಂತಹ ಅವಾಂತರಗಳಿಗೆ ಕಾರಣ.
ಹೀಗೆಂದು ವಾದಿಸುತ್ತ, ಬಹುರಾಷ್ಟ್ರೀಯ ಸಂಸ್ಥೆಗಳ ತಪ್ಪುಗಳನ್ನೆಲ್ಲ ಪಕ್ಕಕ್ಕಿಟ್ಟು, ಅವುಗಳು ನಿರಪರಾಧಿ ಎಂದು ಪ್ರಮಾಣ ಪತ್ರ ನೀಡಲೂ ಸಾಧ್ಯವಿಲ್ಲ. ಇಂತಹ ಸಂಸ್ಥೆಗಳ ಅಪರಾಧಗಳು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಔಷಧಿ ತಯಾರಿಕಾ ರಂಗದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ನಡೆಸುವ ಪ್ರಯೋಗಗಳು ಅದೆಷ್ಟು ಲಕ್ಷಾಂತರ ಜನರ ನಿಧಾನ ಸಾವಿಗೆ ಕಾರಣವಾಗುತ್ತವೆಯೋ ಗೊತ್ತಿಲ್ಲ. ಪೊಟ್ಟಣಗಳಲ್ಲಿ ಸರಬರಾಜು ಮಾಡುವ ಆಹಾರ ಮತ್ತು ಪಾನೀಯಗಳು ಆರೋಗ್ಯಕ್ಕೆ ಪೂರಕವಾಗಿರುತ್ತವೆ ಎಂದು ಉತ್ಪ್ರೇಕ್ಷಿತ ಜಾಹೀರಾತುಗಳ ಮೂಲಕ ಗ್ರಾಹಕರಿಗೆ ಮಂಕುಬೂದಿ ಎರಚುವ ಬಹುರಾಷ್ಟ್ರೀಯ ಸಂಸ್ಥೆಗಳು ಲಾಭದ ದುರಾಸೆಗಾಗಿ ಮನುಕುಲದ ವಿರುದ್ಧವೇ ಅಪರಾಧ ಎಸಗುತ್ತಿವೆ.

ಅಸುರಕ್ಷಿತ ಆಹಾರ ಪದಾರ್ಥಗಳನ್ನು ತಯಾರಿಸುವ, ಭಾರಿ ಪ್ರಮಾಣದಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯ ಈಗ ಉದ್ಭವಿಸಿದೆ. ಆಹಾರ ಸಂಸ್ಕರಣೆ ಉದ್ದಿಮೆಯ ಪ್ರಯೋಜನಗಳನ್ನೂ ನಾವಿಲ್ಲಿ ನಿರ್ಲಕ್ಷಿಸುವಂತಿಲ್ಲ. ಉತ್ತಮ ಗುಣಮಟ್ಟದ, ಆರೋಗ್ಯಕರ ವಾತಾವರಣದಲ್ಲಿ ತಯಾರಿಸುವ, ಆಹಾರ ಸುರಕ್ಷತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದಿಮೆಗಳಿಂದ ರೈತರಿಗೂ ಸಾಕಷ್ಟು ಪ್ರಯೋಜನಗಳು ಲಭಿಸಲಿವೆ.

ಮ್ಯಾಗಿ ನೂಡಲ್ಸ್‌ ವಿವಾದವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಷ್ಟು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಇಲ್ಲದಿದ್ದರೆ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಇದು ತಪ್ಪು ಸಂದೇಶ ರವಾನಿಸಲಿದೆ.

ಸ್ವಿಟ್ಜರ್‌ಲೆಂಡ್‌ ಮೂಲದ ನೆಸ್ಲೆ ಸಂಸ್ಥೆಯ ಉತ್ಪನ್ನಗಳು ಅದರಲ್ಲೂ ವಿಶೇಷವಾಗಿ ಮ್ಯಾಗಿ ನೂಡಲ್ಸ್‌ ಶೇಕಡ ನೂರರಷ್ಟು ಭಾರತೀಯ ಉತ್ಪನ್ನವಾಗಿದೆ. ನೆಸ್ಲೆ ದುಷ್ಟ ಬಹುರಾಷ್ಟ್ರೀಯ ಸಂಸ್ಥೆ ಎಂದು ನಾವು ತಪ್ಪಾಗಿ ಬಿಂಬಿಸುತ್ತಿದ್ದೇವೆ. ಮ್ಯಾಗಿ ತಯಾರಿಕೆಗೆ ಬಳಸುವ ಗೋಧಿ, ಸಕ್ಕರೆ ಮತ್ತಿತರ ಉತ್ಪನ್ನಗಳನ್ನು ದೇಶದ ರೈತರಿಂದಲೇ ಖರೀದಿಸಲಾಗಿರುತ್ತದೆ. ದೇಶದಾದ್ಯಂತ ನೂರಾರು ತಯಾರಿಕಾ ಘಟಕಗಳಲ್ಲಿಯೇ ಮ್ಯಾಗಿ ಸಿದ್ಧಗೊಳ್ಳುತ್ತಿದೆ. ಇಲ್ಲಿ ದುಡಿಯುವ ಸಾವಿರಾರು ನೌಕರರೂ ಭಾರತೀಯರೇ ಆಗಿದ್ದಾರೆ. ಮ್ಯಾಗಿ ನಿಷೇಧಿಸುವ ಮೂಲಕ ರೈತರು, ಉದ್ಯೋಗಿಗಳು ಮತ್ತು ವ್ಯಾಪಾರಿಗಳ ಹಿತಾಸಕ್ತಿಗೂ ಧಕ್ಕೆ ಉಂಟಾಗುತ್ತಿದೆ.

ಸದ್ಯಕ್ಕೆ ಉದ್ಭವಿಸಿರುವ ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರ ತುರ್ತಾಗಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮೋದಿ ಸರ್ಕಾರವು ಆಹಾರ ಸಂಸ್ಕರಣೆ ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವುದಕ್ಕೂ ಎಳ್ಳು ನೀರು ಬಿಡಬೇಕಾಗುತ್ತದೆ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT