ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಪಿನಲ್ಲಿ ಗೋವಿಂದಾ... ಗೋವಿಂದ

Published : 27 ಅಕ್ಟೋಬರ್ 2018, 20:00 IST
ಫಾಲೋ ಮಾಡಿ
Comments

ಸಂಸಾರವೆಂಬ ಹೆಣ ಬಿದ್ದಿರೆ

ತಿನಬಂದ ನಾಯ ಜಗಳವ ನೋಡಿರೆ

ನಾಯ ಜಗಳವ ನೋಡಿ ಹೆಣನೆದ್ದು ನಗುತಿರೆ

ಗುಹೇಶ್ವರನೆಂಬ ಲಿಂಗ ಅಲ್ಲಿಲ್ಲ ಕಾಣಿರೋ.

ಅಲ್ಲಮನ ಈ ವಚನ ಎಷ್ಟೆಲ್ಲವನ್ನು ಹೇಳುತ್ತದೆ. ಯಾರದೋ ಹೆಣ ಬಿದ್ದಿದೆ, ಯಾರನ್ನೋ ಬಡಿದು ಬಿಸಾಕುವುದಕ್ಕೆ ಮತ್ಯಾರೋ ಸಿದ್ಧರಾಗಿದ್ದಾರೆ. ಆ ಹೆಣವನ್ನು ತಿನ್ನಲಿಕ್ಕೆಂದೇ ಬಂದ ನಾಯಿಗಳು ಜಗಳವಾಡುತ್ತಿವೆ. ಈ ಹೆಣ ನನ್ನದು ಅಂತ ಒಂದರ ಜೊತೆಗೊಂದು ಹೊಡೆದಾಡುತ್ತಿವೆ.

ಈ ಕಾಲದ ಚಿತ್ರವನ್ನು ಆ ಕಾಲಕ್ಕೆ ಕೊಟ್ಟಿದ್ದ ಅಲ್ಲಮ. ಅಥವಾ ಆ ಕಾಲದಲ್ಲಿ ಇದೇ ಚಿತ್ರ ಇತ್ತೋ ಏನೋ? ಒಂದಂತೂ ನಿಜ, ಆ ಕಾಲದಿಂದ ಈ ಕಾಲದ ತನಕ ಹೆಣ್ಣಿನ ಪರಿಸ್ಥಿತಿ ಬದಲಾಗಿಲ್ಲ. ಅವಳು ಎದುರಿಸುವ ಸಮಸ್ಯೆ, ಅವಳ ಆತಂಕ, ತಲ್ಲಣ, ಅವಳ ಮುಂದಿರುವ ಗೋಡೆಗಳು, ಭರ್ಜಿಗಳು... ಅವೇ.

ಹಿಂದೆ ಊರಿನ ಮೇಲೆ ದಂಡೆತ್ತಿ ಬಂದ ಸೈನಿಕರುಸಂಪತ್ತನ್ನು ಕೊಳ್ಳೆಹೊಡೆದು ನಂತರ ಊರಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದರಂತೆ. ಅವರನ್ನು ಬೆತ್ತಲಾಗಿಸುತ್ತಿದ್ದರಂತೆ. ಆಗ ಒಂದೂರಿನ ಹೆಣ್ಣುಮಕ್ಕಳು ಅವರು ಬರುತ್ತಿದ್ದಂತೆ ತಾವೇ ಬೆತ್ತಲಾದರು. ಎಲ್ಲರೂ ಬೆತ್ತಲೆಯಾಗಿಯೇ ಅವರ ಮುಂದೆ ನಿಂತರು. ಬೆತ್ತಲಾದವರನ್ನು ಮತ್ಯಾರು ಬೆತ್ತಲಾಗಿಸಲು ಸಾಧ್ಯ?

ಆ ಬೆತ್ತಲೆ ಅಸಹಾಯಕತೆ ಆಗಿರಲಿಲ್ಲ ಪ್ರತಿಭಟನೆಯಾಗಿತ್ತು. ಅವಳ ಕೋಪ ಆ ನಗ್ನತೆಯಲ್ಲಿ ಕಾಣಿಸುತ್ತಿತ್ತು. ಹೆಣ್ಣು ಬೆತ್ತಲಾಗುವುದಕ್ಕೆ ಹತ್ತಾರು ಅರ್ಥಗಳಿವೆ. ಒಂದು ಮಗು ಬೆತ್ತಲಾದರೆ ಅದು ಸುಂದರ ಮುಗ್ಧತೆ, ಹಣಕ್ಕಾಗಿ ಬೆತ್ತಲಾದರೆ ಅದು ಅನಿವಾರ್ಯತೆ, ಪ್ರೀತಿಯಿಂದ ಬೆತ್ತಲಾದರೆ ಅದು ಪ್ರೇಮ, ಈ ಎಲ್ಲವನ್ನೂ ಮೀರಿ ಬೆತ್ತಲಾದರೆ ಜ್ಞಾನ. ಲೋಕವೇ ಅವಳನ್ನು ಬೆತ್ತಲೆ ಮಾಡಿದರೆ ಅದು ಕಾಲದ ಕ್ರೌರ್ಯ.

‘ಇಲ್ಲ, ನೀನು ಹೇಳುತ್ತಿರುವುದು ಸುಳ್ಳು. ನಿನಗೆ ನೋವಾಗಿದ್ದರೆ ತೋರಿಸು. ನಿನ್ನ ಗಾಯಗಳು ಎಲ್ಲಿವೆ ಹೇಳು. ಆ ಗಾಯ ನೀನೇ ಮಾಡಿಕೊಂಡಿದ್ದೂ ಇರಬಹುದಲ್ಲವೇ. ಅವನೇ ಗಾಯ ಮಾಡಿದ್ದಾನೆ ಅನ್ನುವುದಕ್ಕೆ ಸಾಕ್ಷಿ ತೋರಿಸು. ನೀನೇಕೆ ಸುಳ್ಳು ಹೇಳುತ್ತಿರಬಾರದು...?’

ಪ್ರಶ್ನೆಗಳಿಗೆ ಬರವಿಲ್ಲ. ಆ ಪ್ರಶ್ನೆಗಳು ಗಂಡಸಿನವು ಮಾತ್ರವಾಗಿದ್ದರೆ ಉತ್ತರಿಸುವುದು ಸುಲಭವಿತ್ತು. ಮತ್ತೊಬ್ಬ ಹೆಣ್ಣು ಕೂಡ ಅದೇ ಪ್ರಶ್ನೆ ಕೇಳುತ್ತಾಳೆ. ನೊಂದ ಹೆಣ್ಣಿನ ನಡುವೆ ಗಂಡೂ- ಹೆಣ್ಣೂ ಒಂದೇ ಥರ ಯೋಚಿಸುತ್ತಾರೆ. ಅದಕ್ಕೆ ಕಾರಣ ಹೆಣ್ಣು ಕೂಡ ಕ್ರೂರಿಯಾಗಿದ್ದಾಳೆ ಅಂತ ಅಲ್ಲ. ಆಕೆಯನ್ನು ಅದಕ್ಕೋಸ್ಕರವೇ ತಯಾರು ಮಾಡಲಾಗಿದೆ. ತನ್ನ ಗಂಡ ವ್ಯಭಿಚಾರಿಯೆಂದು ಗೊತ್ತಿದ್ದರೂ ಹೆಂಡತಿಯಾದವಳು ಮಾತಾಡದೇ ಅದನ್ನು ಒಪ್ಪಿಕೊಳ್ಳಬೇಕು. ಸಂಸಾರ ಮುಗಿದು ಹೋದ ಮೇಲೂ ಜೊತೆಗೇ ಬದುಕುತ್ತಿರಬೇಕು. ಒಮ್ಮೆ ಮದುವೆಯಾದರೆ ಮುಗಿಯಿತು, ಆಕೆಗೆ ಬೇರೆ ಆಯ್ಕೆಗಳೇ ಇಲ್ಲ. ನಟನೆ ನಿಜಕ್ಕೂ ನಡೆಯುವುದು, ಮುಂದುವರಿದುಕೊಂಡು ಹೋಗುತ್ತಿರುವ ಎಷ್ಟೋ ಸಂಸಾರಗಳಲ್ಲಿ. ಅತ್ಯಾಚಾರ ಆಗುತ್ತಿರುವುದು ಗಂಡ ಹೆಂಡಿರ ನಡುವೆ. ವ್ಯವಸ್ಥೆಯ ಹೊರಗೆ ನಡೆಯುವುದರ ನೂರು ಪಟ್ಟು ಒಳಗೇ ನಡೆಯುತ್ತಿರುವ ದ್ರೋಹದ ಕಲ್ಪನೆ ಯಾರಿಗೂ ಇದ್ದಂತಿಲ್ಲ.

ಗಾಯಗಳನ್ನು ಮಾಡಲು ನಮ್ಮ ಸಮಾಜ ಕಲಿತಿದೆ. ನೊಂದವಳ, ನೊಂದವನ ಗಾಯಗಳನ್ನು ಮಾಗಿಸುವುದರಲ್ಲಿ ಅದಕ್ಕೆ ಆಸಕ್ತಿಯಿಲ್ಲ. ಒಂದೊಂದು ಪ್ರಶ್ನೆಯೂ ಆಕೆಯ ಮೇಲೆ ಮತ್ತಷ್ಟು ಗಾಯಗಳನ್ನು ಮಾಡುತ್ತಲೇ ಇರುತ್ತದೆ. ಒಂದು ಒಲ್ಲದ ಸ್ಪರ್ಶದ ಬಗ್ಗೆ ಮಾತಾಡಿದರೆ ಅದು ರಾಷ್ಟ್ರದ ರಾಜಕಾರಣವನ್ನು ಅಲುಗಾಡಿಸುವ ಸುದ್ದಿಯಾಗುತ್ತದೆ. ಮೂರು ದಶಕಗಳ ಚಾರಿತ್ರ್ಯವಂತ ಜೀವನದ ಮೇಲಿನ ಟೀಕೆಯಾಗುತ್ತದೆ. ಪುರಾವೆಗಳನ್ನು ಕೇಳುತ್ತದೆ ಈ ಲೋಕ.

ಪುರಾವೆಗಳನ್ನು ಕೇಳಲು ಎಲ್ಲರೂ ಆರಂಭಿಸುತ್ತಾರೆ. ಸಂಬಂಧಪಡದೇ ಇದ್ದರೂ ಸಾಕ್ಷಿ ಕೇಳುತ್ತಾರೆ. ಯಾರು ಸಾಕ್ಷಿ ಕೇಳುತ್ತಾರೋ ಅವರು ಅಪರಾಧಿ ಅನ್ನುತ್ತೇನೆ ನಾನು. ಹೆಣ್ಣಿಗೆ ಮನಸ್ಸಾಕ್ಷಿ ಒಂದಿದ್ದರೆ ಸಾಕು, ಗಂಡಿಗೆ ದೇಶವೇ ಸಾಕ್ಷಿ! ಅವನ ಸುತ್ತಲೂ ಇರುವವರಿಗೆ ದುರುದ್ದೇಶವೇ ಸಾಕ್ಷಿ! ಅಂತಸ್ಸಾಕ್ಷಿಯಿಲ್ಲದವರು ಮಾತ್ರ ಕೇಳಬಹುದಾದ ಪುರಾವೆಗಳ ಪಟ್ಟಿ ಅದು. ‘ಅವನು ನಿನ್ನನ್ನು ಮುಟ್ಟಿದ ಅನ್ನುವುದಕ್ಕೇನು ಸಾಕ್ಷಿ’ ಎಂದರೆ ಹೆಣ್ಣು ಏನಂತ ಹೇಳಬೇಕು? ರಾಮ ಮೂರು ಬೆರಳಿನಿಂದ ನೇವರಿಸಿದಾಗ ಅಳಿಲಿನ ಬೆನ್ನ ಮೇಲೆ ಗುರುತು ಮೂಡಿದಂತೆ ಹೆಣ್ಣಿನ ಮೈಮೇಲೆ ಗುರುತು ಮೂಡುವುದಿಲ್ಲವಲ್ಲ. ಆ ಕೆಂಡದಂಥ ಗಾಯ ಮೂಡುವುದು ಅವಳ ಮನಸ್ಸಿನ ಮೇಲೆ. ಅವಳು ಮನಸ್ಸನ್ನು ತೆರೆದು ತೋರಲಾರಳು.

ಗಂಡಿನ ಪುರಾವೆಗಳನ್ನು ನಾವೆಂದಾದರೂ ಕೇಳಿದ್ದೇವೆಯೇ? ಸೀತೆ ಅಗ್ನಿದಿವ್ಯ ತುಳಿಯಬೇಕು. ಹೆಣ್ಣು, ಹುತ್ತಕ್ಕೆ ಕೈಯಿಡಬೇಕು. ಕೆಂಡವನ್ನು ಅಂಗೈಯಲ್ಲಿಟ್ಟು ಪ್ರಮಾಣ ಮಾಡಬೇಕು. ನೀರಲ್ಲಿ ಮುಳುಗಿ ಕೂತು ತನ್ನ ಕನ್ಯತ್ವವನ್ನು ಸಾಬೀತು ಮಾಡಬೇಕು. ಗಂಡಿಗೆ ಇದ್ಯಾವ ಕೋಟಲೆಯೂ ಇಲ್ಲ. ಅದು ಗೊತ್ತಿದ್ದರೂ ಕೂಡ ನಾವು ಅದನ್ನು ಪ್ರಶ್ನಿಸುವುದಿಲ್ಲ.

ಇದನ್ನು ನಾನು ಗುಂಪಿನಲ್ಲಿ ಗೋವಿಂದ ಎಂದೇ ಕರೆಯುವುದು. ಗುಂಪಿನಲ್ಲಿದ್ದಾಗ ಯಾರ ಧ್ವನಿಯೂ ಗುರುತಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೂಗಬಹುದು. ಚೀರಬಹುದು, ಛೀಮಾರಿ ಹಾಕಬಹುದು. ಕೋರಸ್ಸಿಗೆ ಕರುಣೆಯಿಲ್ಲ. ಸಾಮಾಜಿಕ ಜಾಲತಾಣ ಅನ್ನುವುದು ಕೋರಸ್ಸು. ಅಲ್ಲಿ ಯಾರು ಏನೆಂದರು ಅನ್ನುವುದು ಗೊತ್ತಾಗುವುದಿಲ್ಲ. ಚಿವುಟಿದ್ದು ಯಾರೆಂದು ಗೊತ್ತಾಗದ ಜಾತ್ರೆಯ ಗುಂಪಿನಂತೆ ಇಲ್ಲೂ ತಮಗೆ ಬೇಕಾದ ಕಡೆ, ತಮಗೆ ಬೇಕಾದಷ್ಟು ಜಿಗುಟಿ ಹೋಗುತ್ತಾರೆ ಉಗುರು ಬೆಳೆಸಿಕೊಂಡವರು. ಆ ಉಗುರು ಕೂಡ ಸ್ವಂತದ್ದಲ್ಲ.

ದೊಡ್ಡ ದನಿಯಲ್ಲಿ ಮೊನ್ನೆ ಸರ್ವರೂ ಮಾತಾಡುವುದನ್ನು ನೋಡಿದೆ. ಎತ್ತರಿಸಿ ಮಾತಾಡಿದರೆ ಮೌನವಾಗಿಸುವುದು ಸುಲಭ ಎಂಬ ನಂಬಿಕೆ ನಮ್ಮಲ್ಲಿದೆ. ಒಂದು ಹೆಣ್ಣು ತನಗೆ ಅನ್ಯಾಯವಾಗಿದೆ ಅಂದಾಗ ಎಲ್ಲರೂ ಸೇರಿ ಅವಳ ಬಾಯಿ ಮುಚ್ಚಿಸಿಬಿಟ್ಟರೆ ಮತ್ತೆ ಯಾವ ಹೆಣ್ಣೂ ತನಗಾದ ಸಂಕಟವನ್ನು ಹೇಳಿಕೊಳ್ಳುವುದಿಲ್ಲ. ತೆನಾಲಿರಾಮನ ಕತೆಯಿದು. ತನ್ನ ಆಸ್ಥಾನದ ಎಲ್ಲರಿಗೂ ಕೃಷ್ಣದೇವರಾಯ ಒಂದೊಂದು ಬೆಕ್ಕು ಕೊಟ್ಟು, ಅದರ ಹಾಲಿನ ಖರ್ಚಿಗೆಂದು ದುಡ್ಡೂ ಕೊಟ್ಟು, ಬೆಕ್ಕನ್ನು ದಷ್ಟಪುಷ್ಟ ಬೆಳೆಸಿದವರಿಗೆ ಬಹುಮಾನ ಅನ್ನುತ್ತಾನೆ. ಅವಧಿ ಮುಗಿದ ನಂತರ ನೋಡಿದರೆ ಎಲ್ಲರ ಬೆಕ್ಕೂ ಚೆನ್ನಾಗಿ ಬೆಳೆದಿರುತ್ತದೆ. ತೆನಾಲಿರಾಮನ ಬೆಕ್ಕೊಂದು ಮಾತ್ರ ಸೊರಗಿ ಈಗಲೋ ಆಗಲೋ ಸಾಯುವ ಸ್ಥಿತಿಯಲ್ಲಿರುತ್ತದೆ. ತೆನಾಲಿರಾಮ ಬೆಕ್ಕಿಗೆ ಹಾಲೇ ಕುಡಿಸಿಲ್ಲ. ಎಲ್ಲ ಅವನೇ ಕುಡಿದಿದ್ದಾನೆ ಅಂತ ಎಲ್ಲರೂ ಆಕ್ಷೇಪಿಸಿದಾಗ ತೆನಾಲಿರಾಮ ಹೇಳುತ್ತಾನೆ; ನನ್ನ ಬೆಕ್ಕು ಹಾಲೇ ಕುಡಿಯುವುದಿಲ್ಲ. ಕೃಷ್ಣದೇವರಾಯ ಅವನ ಮಾತು ನಂಬದೇ, ಬೆಕ್ಕಿನ ಮುಂದೆ ಒಂದು ಬಟ್ಟಲು ಹಾಲು ತರಿಸಿಡುತ್ತಾನೆ. ಹಾಲು ಕಂಡೊಡನೆ ಬೆಕ್ಕು ಸತ್ತೆನೋ ಕೆಟ್ಟೆನೋ ಎಂದು ಹಾರಿ ಓಡಿಹೋಗುತ್ತದೆ.

ತೆನಾಲಿರಾಮ ಕುದಿಯವ ಹಾಲನ್ನು ಬೆಕ್ಕಿನ ಮುಂದಿಟ್ಟು, ಬೆಕ್ಕು ಹಾಲಿನ ಬಟ್ಟಲಿನ ಎದುರು ನಿಂತಾಗ ಅದರ ಮುಖವನ್ನು ಹಾಲಲ್ಲಿ ಮುಳುಗಿಸಿ ಸುಟ್ಟ ಕತೆ ಯಾರಿಗೂ ಗೊತ್ತಿರುವುದಿಲ್ಲ. ಮುಖ ಸುಡಿಸಿಕೊಂಡ ಬೆಕ್ಕು ಹಾಲು ಕಂಡರೆ ಓಡಿಹೋಗುವ ಸ್ಥಿತಿಗೆ ಬಂದಿರುತ್ತದೆ. ಹೆಣ್ಣು ಅಷ್ಟೇ, ಆ ತೆನಾಲಿರಾಮನ ಬೆಕ್ಕಿನಂತೆ ಆಗಿಹೋಗಿದ್ದಾಳೆ. ನಾವು ಸುಡುವ ಹಾಲನ್ನು ಮುಂದಿಟ್ಟು ಆ ಪರಿಸ್ಥಿತಿಗೆ ಅವಳನ್ನು ನೂಕಿದ್ದೇವೆ.

ನಮ್ಮಲ್ಲಿ ಒಬ್ಬ ಗಂಡಸು ತಪ್ಪು ಮಾಡಲಿಲ್ಲ ಅನ್ನುವುದಕ್ಕೆ ಸಾಕ್ಷಿಯೇನು? ಆತ ಅಷ್ಟೊಂದು ಓದಿಕೊಂಡಿದ್ದಾನೆ. ಆತ ಅಂಥಾ ದೈವಭಕ್ತ. ಆತ ಅಷ್ಟು ದೊಡ್ಡ ಅಧಿಕಾರದಲ್ಲಿದ್ದಾನೆ. ಆತ ಇಷ್ಟು ವರ್ಷ ತಪ್ಪು ಮಾಡಿರಲಿಲ್ಲ. ಹೀಗೆ ಕಾರಣಗಳನ್ನು ಕೊಡುವ ನಮಗೆ ಸತ್ಯ ಚೆನ್ನಾಗಿ ಗೊತ್ತಿದೆ. ಜಾಣನೂ ಅಧಿಕಾರಸ್ಥನೂ ದೈವದ ಬೆಂಬಲ ಇದೆ ಎಂದು ಹೇಳುವವನೂ ಜಾಸ್ತಿ ತಪ್ಪು ಮಾಡುತ್ತಿರುತ್ತಾನೆ. ಮನೆಯೊಳಗೆ ಮತ್ತೊಂದು ಕೋಟು ಇದ್ದವನು ತಾನು ತೊಟ್ಟುಕೊಂಡ ಕೋಟನ್ನು ಕಿತ್ತೆಸೆಯುವಾಗ ಕೊಂಚವೂ ಹಿಂಜರಿಯುವುದಿಲ್ಲ! ತನ್ನ ದಾನಧರ್ಮ, ದೈವಭಕ್ತಿ, ಜನಪ್ರಿಯತೆ ಮತ್ತು ಅಭಿಮಾನಿಸುವ ಜನ- ತನ್ನ ಪಾಪವನ್ನೂ ಗೌರವಿಸುತ್ತಾರೆ ಅಂತ ಕೆಲವರಿಗೆ ಗೊತ್ತಾಗಿರುತ್ತದೆ.

ಬೀರಬಲ್‌ನ ಕತೆಯೊಂದಿಗೆ ಇದನ್ನು ಮುಗಿಸೋಣ. ಒಮ್ಮೆ ಅಕ್ಬರನೊಂದಿಗೆ ಮಾತಾಡುತ್ತಾ ಬೀರಬಲ್‌ ಹೇಳಿದನಂತೆ. ನಮ್ಮ ರಾಜ್ಯದಲ್ಲಿರುವ ಬಹಳಷ್ಟು ಪಾಲು ಮಂದಿ ಒಳ್ಳೆಯವರು. ಆದರೆ ಮೋಸ ಮಾಡುವ ಅವಕಾಶ ಸಿಕ್ಕರೆ ಅವರು ಮೋಸ ಮಾಡುತ್ತಾರೆ. ಅಕ್ಬರ ಇದನ್ನು ಒಪ್ಪಲಿಲ್ಲ. ಬೀರಬಲ್‌ ಆಗೊಂದು ಪರೀಕ್ಷೆ ಇಟ್ಟನಂತೆ.

ರಾಜ್ಯದ ಪ್ರತಿಯೊಬ್ಬನೂ ಅರಮನೆಯ ಮುಂದೆ ಇಟ್ಟಿರುವ ಎರಡಾಳು ಎತ್ತರದ ಹಂಡೆಗೆ ಒಂದೊಂದು ಚೊಂಬು ಹಾಲು ಸುರಿಯಬೇಕು ಎಂಬುದು ರಾಜಾಜ್ಞೆ. ಜನರೆಲ್ಲರೂ ಸಾಲುಗಟ್ಟಿ ನಿಂತು ಹಾಲು ಸುರಿದು ಹೋದರು. ಸಂಜೆ ಹೊತ್ತಿಗೆ ಬೀರಬಲ್‌, ‘ಹಂಡೆಯೊಳಗೇನಿದೆ ಎಂದು ನೋಡಿ’ ಅಂದಾಗ ಅಲ್ಲಿದ್ದದ್ದು ಬರೀ ನೀರು. ‘ಎಲ್ಲರೂ ಹಾಲು ಸುರಿಯುತ್ತಾರೆ, ನಾನೊಬ್ಬ ನೀರು ಸುರಿದರೆ ಗೊತ್ತಾಗುವುದಿಲ್ಲ’ ಎಂದುಕೊಂಡು ಪ್ರತಿಯೊಬ್ಬರೂ ನೀರನ್ನೇ ಸುರಿದಿದ್ದರು.

ಇಲ್ಲೂ ಅಷ್ಟೇ. ಎಲ್ಲರೂ ಕೆಟ್ಟದ್ದೇ ಮಾತಾಡುವಾಗ ನಾನೊಬ್ಬ ಮಾತಾಡಿದರೆ ಗೊತ್ತಾಗುವುದಿಲ್ಲ ಅಂತ ಕೊಂಚ ಒಳ್ಳೆಯವನೂ ಒಂದು ಕೆಟ್ಟ ಮಾತು ಎಸೆದಿರುತ್ತಾನೆ. ಆದರೆ ಚರಿತ್ರೆ ವ್ಯಕ್ತಿಗಳ ಲೆಕ್ಕ ಇಡುವುದಿಲ್ಲ. ಸಮಾಜದ ಕುರಿತು ಮಾತಾಡುತ್ತದೆ. ಆ ಕಾಲದ ಸಮಾಜ ಹೀಗಿತ್ತು ಅನ್ನುತ್ತದೆ. ನಮ್ಮ ಸಮಾಜದ ಕುರಿತು ಒಳ್ಳೇ ಅಭಿಪ್ರಾಯ ಬರಬೇಕಿದ್ದರೆ ನಾವಷ್ಟೇ ಸಭ್ಯರಾಗಿದ್ದರೆ ಸಾಲದು, ಪಕ್ಕದಲ್ಲಿರುವವನ ಪಾತ್ರೆಯಲ್ಲೂ ಹಾಲಿದೆ ಅನ್ನುವುದನ್ನು ನಾವು ಖಾತ್ರಿ ಪಡಿಸಿಕೊಳ್ಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT