ರಿಂಕಿಗೂ ಇಂದುಮತಿಗೂ ಬಹಳ ಹತ್ತಿರದ ಬಂಧು ಬಳಗ ಅಂತೇನಿರಲಿಲ್ಲ. ಹಾಗಾಗಿಯೇ ಇಬ್ಬರೂ ಆತ್ಮದ ಗೆಳತಿಯರಾಗಿದ್ದರು. ಹಾಗೇ ಇಬ್ಬರಲ್ಲೂ ಗಾಢವಾದ ಆತ್ಮ ರಕ್ಷಣಾ ಮನೋಭಾವವೂ ಕೆಲಸ ಮಾಡುತ್ತಿತ್ತು. ಅವಳು ಹೇಳಿದ್ದನ್ನು ಇವಳು ನಂಬುತ್ತಿರಲಿಲ್ಲ. ಇವಳು ಅರುಹಿದ್ದನ್ನು ಅವಳು ಒಪ್ಪುತ್ತಿರಲಿಲ್ಲ.

ಅನುಮಾನದಲ್ಲೇ ಗಿರಕಿ ಹೊಡೆಯುತ್ತಾ ಇಬ್ಬರೂ ಒಬ್ಬರನ್ನೊಬ್ಬರು ಅವಲಂಬಿಸುತ್ತಿದ್ದರು. ಇಂದುಮತಿಯ ಕನ್ನಡ ಕ್ಲಾಸುಗಳ ಪರಿಣಾಮ ಗೊತ್ತಾದ ಮೇಲೂ ರಿಂಕಿ ಕನ್ನಡ ಕಲಿಯುವುದು ಬಿಟ್ಟಿರಲಿಲ್ಲ. ಆದರೆ ಅವಳ ಕನ್ನಡ ಕಲಿಕೆಯ ಮೆಥಡಾಲಜಿಯಲ್ಲಿ ಮುಖ್ಯವಾಗಿ ಆದ ಮಾರ್ಪಾಟೆಂದರೆ ಇಂದುಮತಿ ಹೇಳಿಕೊಟ್ಟ ಮಾತುಗಳನ್ನು ಇನ್ನೊಬ್ಬರ ಹತ್ತಿರ ಪರಿಶೀಲನೆಗೊಳಪಡಿಸುವುದು. ‘ಈಂದು’ ಹೇಳಿದ ಅರ್ಥ ಮತ್ತು ಇನ್ನೊಬ್ಬರು ಹೇಳಿದ ಅರ್ಥ ಕನಿಷ್ಠ ಹೊಂದಾಣಿಕೆ ಬರದೇ ಹೋದರೆ ಇಂದುಮತಿಯನ್ನು ಬಾಯಿಗೆ ಬಂದಂತೆ ಬಯ್ಯುವುದು.

ಬಹಳ ಅಶ್ಲೀಲವಾದದ್ದನ್ನೇನಾದರೂ ಹೇಳಿಕೊಟ್ಟಿದ್ದರೆ ಇಂದುಮತಿ ಮೂರು ದಿನ ಮಾತೆತ್ತದೆ ಸುಮ್ಮನಿರುತ್ತಿದ್ದಳು. ಆಮೇಲೆ ಮತ್ತೆ ‘ರಿಂಕ್ಸ್...ಬಾ ರೂಮಲ್ಲಿ ಕೊಡಗಿನ ಹುಡುಗೀರು ಇಟ್ಟಿರೋ ವೈನ್ ಇದೆ’ ಅಂತ ನಾಜೂಕಾಗಿ ಸೇತುವೆ ಕಟ್ಟುತ್ತಿದ್ದಳು. ಆಮೇಲೆ ಒಂದೊಂದೇ ಹೆಜ್ಜೆಯಿಟ್ಟು ಸೇತುವೆಯ ಭದ್ರತೆ ಪರೀಕ್ಷೆ ಮಾಡಿ ಮತ್ತೆ ಯಥಾ ಪ್ರಕಾರ ಆಡಬಾರದ ಮಾತುಗಳನ್ನು ರಿಂಕಿಗೆ ಹೇಳಿಕೊಡುತ್ತಿದ್ದಳು. ಆಗಾಗ ಅವಳು ಹೇಳಿಕೊಟ್ಟ ಮಾತುಗಳನ್ನು ಒರೆಗೆ ಹಚ್ಚಲು ರಿಂಕಿ ಬಂದು ಯಾರನ್ನಾದರೂ ಕೇಳುತ್ತಿದ್ದಳು.

‘ವೋ ಯಾರ್ ರಶ್ಮಿ! ಯೆ ‘ಕತೆ’ ಔರ್ ‘ಕತ್ತೆ’ ಮೆ ಫರಕ್ ಕ್ಯಾ ಹೈ ಯಾರ್?’ (‘ಕಥೆ’ಗೂ ‘ಕತ್ತೆ’ಗೂ ವ್ಯತ್ಯಾಸ ಏನು?). ಒತ್ತಕ್ಷರ, ದೀರ್ಘ, ವ್ಯಂಜನ ಇತ್ಯಾದಿಗಳೆಂದರೆ ರಶ್ಮಿಗೂ ಅಷ್ಟಕ್ಕಷ್ಟೆ. ಚೌಕಾಸಿ ಮಾಡಲು, ಅಟೆಂಡರ್ ಹತ್ತಿರ ಮಾತನಾಡಲು ಎಷ್ಟು ಕನ್ನಡ ಬೇಕೋ ಅಷ್ಟನ್ನು ಸಲೀಸಾಗಿ ಮಾತನಾಡುತ್ತಿದ್ದಳು. ಇನ್ನೊಬ್ಬರು ಅವಳು ಮಾತಾಡಿದ ಮಾತನ್ನು ಬಿಡಿಸಿ ಹೇಳು ಅಂತ ಕೇಳಿದಾಗ ಮಾತ್ರ ಅವಳ ಜೀವ ಕುತ್ತಿಗೆಗೆ ಬರುತ್ತಿತ್ತು. ಆದರೆ, ರಿಂಕಿಯಂತಹ ‘ಪರಕೀಯರ’ ಎದುರಿಗೆ ಹಾಗೆಲ್ಲ ಗುಟ್ಟು ಬಿಟ್ಟುಕೊಡುವ ಹಾಗಿರಲಿಲ್ಲ.

‘ರಿಂಕ್ಸ್, ಅಂಥಾ ಏನೂ ವ್ಯತ್ಯಾಸ ಇಲ್ಲ. ಆದರೂ ವಿಜಿ ಬಂದ ಮೇಲೆ ಕೇಳೋಣ’ ಆ ಸಂಜೆ ಡೈನಿಂಗ್ ಹಾಲಿನಲ್ಲಿ ಚಹಾದೊಂದಿಗೆ ಮನುಷ್ಯ ಹೇಗೆ ಕತ್ತೆಯಾಗುವ ಪ್ರಕ್ರಿಯೆಯಲ್ಲಿ ಕತೆ(ಥೆ)ಯಾಗಬಹುದು ಅಂತ ಸಾದ್ಯಂತವಾಗಿ ಚರ್ಚೆಯಾಯಿತು.

‘ತೋ ಬಸ್ ಇತನಾ ಹೈ ಕಿ ಆದ್ಮೀ ಕತೆ ಬನ್ ಸಕ್ತಾ ಹೈ ಔರ್ ಕತ್ತೆ ಭೀ ಬನ್ ಸಕ್ತಾ ಹೈ. ಜೋ ಭಿ ಬನನಾ ಹೈ, ಉಸ್ಕೆ ಹಾತ್ ಮೆ ಹೈ. ಠೀಕ್ ಸಮಝಾ ಮೈನೆ?’ (ಮನುಷ್ಯ ಕತೆಯಾಗಬಹುದು ಅಥವಾ ಕತ್ತೆಯೂ ಆಗಬಹುದು. ಎರಡೂ ಅವನ ನಿಯಂತ್ರಣದಲ್ಲೇ ಇದೆ. ನನಗೆ ಅರ್ಥವಾದದ್ದು ಇಷ್ಟು. ಸರಿ ಇದೆ ಅಲ್ವಾ?) ರಿಂಕಿ ಸರಳವಾಗಿ ಅರ್ಥೈಸಿಕೊಂಡ ಕನ್ನಡ ಪದಗಳ ಬಗ್ಗೆ ಅನುಮಾನ ಪರಿಹಾರಕ್ಕೆ ಪ್ರಶ್ನೆ ಮುಂದಿಟ್ಟಳು.

ಇಂದುಮತಿ ರಶ್ಮಿಯತ್ತ ನೋಡಿದಳು. ರಶ್ಮಿ ಹಲ್ಲು ಕಿರಿಯುತ್ತಾ ವಿಜಿಯತ್ತ ನೋಡಿದಳು. ಸತತವಾಗಿ ಸುಮಾರು ನಲವತ್ತು ನಿಮಿಷಗಳ ಕಾಲ ಕತೆ ಮತ್ತು ಕತ್ತೆಗೆ ಇರುವ ವ್ಯತ್ಯಾಸವನ್ನು ಮನಮುಟ್ಟುವಂತೆ ವಿವರಿಸಿ ಸುಸ್ತಾಗಿದ್ದ ವಿಜಿ ಒಮ್ಮೆ ಒಂದು ಬಾರಿ ತಾರಸಿಯತ್ತ ದಿಟ್ಟಿಸಿದಳು. ಆಮೇಲೆ ದೀರ್ಘವಾದ ಶ್ವಾಸ ಎಳೆದುಕೊಂಡು ತನ್ನ ಎರಡೂ ಹಸ್ತಗಳ ರೇಖೆಗಳನ್ನು ಒಮ್ಮೆ ಪರಿಶೀಲಿಸಿದಳು. ಈ ತೆರನ ಹೆಂಗಸರ ಸಾವಾಸ ಆಗುತ್ತೆ ಅಂತ ಬರ್ದಿದ್ದ ದೇವ್ರೋ ಬ್ರಹ್ಮನೋ ಸಿಗೋ ಹಂಗಿದ್ರೆ ಸರಿಯಾಗ್ ಮಂಗ್ಳಾರತಿ ಮಾಡಬೋದಿತ್ತಲ್ಲ!

ಕುವೆಂಪು ಏನೋ ಬಾರಿಸು ಕನ್ನಡ ಡಿಂಡಿಮವ ಅಂದರು. ಆದರೆ ಇಲ್ಲಿ ಡಿಂಡಿಮ ಹೋಗಿ ಡ್ರಮ್ ಆಗೋ ಲಕ್ಷಣ ಕಾಣ್ತಾ ಇದೆ. ‘ಕನ್ನಡದ ಕಟ್ಟಾಳು’ ಆಗೋಕೆ ಹೊರಟು ‘ಕನ್ನಡದ ಕೆಟ್ಟಾಳು’ ಆಗೋ ಸಾಧ್ಯತೆಗಳು ದಟ್ಟವಾಗುತ್ತಿವೆ. ಇದೇನ್ ಕರ್ಮ ಗುರೂ ಎಂದುಕೊಂಡು ರಿಂಕಿಗೆ ಹೇಳಿದಳು.

‘ಅಲ್ಲಾ ಕಣೇ! ಕನ್ನಡದೋರೇ ತಪ್ ತಪ್ಪಾಗಿ ಮಾತಾಡ್ತಾ ತಿಪ್ಪೆ ಸಾರುಸ್ತಾರೆ. ನಿಂಗ್ಯಾಕೆ ಇಲ್ಲದ ಉಸಾಬರಿ? ನಿಂಗ್ ಹೆಂಗ್ ಬೇಕೋ ಹಂಗ್ ಮಾತಾಡ್ಕೋ ಹೋಗು. ಆದರೆ, ಯಾರಾದರೂ ಕನ್ನಡದೋನ ಹತ್ರ ಲವ್ವು ಗಿವ್ವು ಅಂತ ಆದ್ರೆ, ದಯವಿಟ್ಟು ಎಲ್ಲಾ ವಿಷಯಾನೂ ಇಂಗ್ಲೀಷಲ್ಲೇ ಮಾತಾಡ್ಕೊಂಡು ಬಗೆ ಹರಿಸ್ಕೋ. ಕನ್ನಡ ಮಾತಾಡಿ ಇಂಪ್ರೆಸ್ ಮಾಡಕ್ಕೆ ಹೋಗಿ, ಇಲ್ಲಿರೋ ಯಾವಳೋ ನಿಂಗೆ ಹೇಳ್ಬಾರದ್ದು ಹೇಳ್ಕೊಟ್ಟು ಸುಮ್ನೆ ಕಾಂಪ್ಲಿಕೇಷನ್ ಆಗುತ್ತೆ’ ಎಂದಳು ವಿಜಿ.

ರಿಂಕಿ ಕಿಲಾಡಿ ಹುಡುಗಿ. ಹತ್ತು ಕೆರೆ ನೀರು ಕುಡಿದೋಳು. ಇಪ್ಪತ್ತು ಕೆರೇಲಿ ಸ್ನಾನ ಮಾಡಿದೋಳು. ‘ಅಹಹಹ! ನಂಗೆ ಗೊತ್ತಾಗಲ್ವಾ? ಇಲ್ಲಿರೋ ಯಾರನ್ನಾದ್ರೂ ಸಹಾಯ ಕೇಳ್ಕೊಂಡು ಬಂದ್ರೆ, ಯಾವನ್ನ ಲವ್ ಮಾಡಿದೀನೋ ಅವ್ನನ್ನ ಬಿಟ್ಟು ಅವರಪ್ಪನ್ನೋ ಅವರಜ್ಜನ್ನೋ ಕಟ್ಕೊಳೋ ಹಂಗೆ ಹೇಳ್ಕೊಡ್ತಾರೆ ಅಷ್ಟೇ! ವೈರಿ ಹತ್ರ ಬೇಕಾದ್ರೂ ಹೋಗ್ತೀನಿ, ಇವ್ರ ಹತ್ರ ಬರಲ್ಲ’ ಎಂದು ತುಂಡು ಕೂದಲನ್ನು ಮುಟ್ಟಿಕೊಂಡು ಶಪಥಗೈದಳು.

ಇಂದುಮತಿಯಾಗಲೀ, ರಶ್ಮಿಯಾಗಲೀ ಏನೂ ಮಾತಾಡಲಿಲ್ಲ. ವಿಜಿಗೆ ಈ ಗಲಾಟೆ ಮುಗಿದರೆ ಸಾಕಿತ್ತು. ಸರಿ, ಎಲ್ಲರೂ ಅಲ್ಲಿಂದ ತಂತಮ್ಮ ರೂಮುಗಳಿಗೆ ಹೊರಟರು. ಶ್ರಾವಣ ಮೈಸೂರಿಗೆ ಕಾಲಿಟ್ಟಿತ್ತು. ಮಳೆ-ಗಾಳಿಯ ಆರ್ಭಟ ಒಂದೇ ಎರಡೇ? ಮಳೆಯಲ್ಲಿ ತೊಯ್ದ ಮೈಸೂರಿನ ಸೌಂದರ್ಯ ಬಣ್ಣಿಸಲು ಕನ್ನಡ ರತ್ನಕೋಶದ ಸಹಾಯ ಬೇಕೇಬೇಕು. ಎಲ್ಲಾ ಪದಗಳನ್ನೂ, ಕವಿತೆಗಳನ್ನೂ, ಹಾಯ್ಕುಗಳನ್ನು ಒಟ್ಟು ಸುರಿದರೂ ಟಪಕ್ ಟಪಕ್ ಎಂದು ಬೀಳುತ್ತಾ ರಪ್ ರಪ್ ರಪ್ ರಪ್ ಎಂದು ಬಾರಿಸಿ ಎಲ್ಲಾ ಕಡೆ ನೀರು ತುಂಬುವಂತೆ ಮಾಡಿ ನಿಲ್ಲುವ ಕಾಲಕ್ಕೆ ಟಳಕ್ ಟುಮುಕ್ ಟಳಕ್ ಡುಳುಕ್ ಪಳಕ್ ಎಂದು ಭೂಮಿಯ ಕೊಳೆಯನ್ನೆಲ್ಲಾ ನಾದಬದ್ಧವಾಗಿ ತೊಳೆಯುವ ಸಾಮರ್ಥ್ಯವುಳ್ಳ ಮಳೆ ಹನಿಯಷ್ಟು ಪುಟ್ಟ ಶಕ್ತಿಶಾಲಿ ಅಸ್ತ್ರ ಇನ್ನೊಂದು ಇರಬಹುದಾ ಎಂದು ಯೋಚಿಸಿದರೆ ತಕ್ಷಣಕ್ಕೆ ಉತ್ತರ ಸಿಗಲಾರದು. ಕಾಲಿಟ್ಟ ಶ್ರಾವಣದಂತೆಯೇ ಹಾಸ್ಟೆಲಿನ ಜೀವನದೊಳಗೆ ಒಬ್ಬೊಬ್ಬರಾಗಿ ಹೊಸಬರ ಪ್ರವೇಶ ಆಗತೊಡಗಿತು.

ಅಂತಲೇ ವಿಜಿ-ರಶ್ಮಿಯರು ಅಟೆಂಡರ್ ಮೋನ ‘ಇಜಿ (ವಿಜಿ) ರೊಸ್ಮಿ (ರಶ್ಮಿ)...ಫೋಊಊಊಊನ್’ ಅಂತ ದಿನಕ್ಕೆ ನೂರು ಸಾರಿ ಕೂಗುವ ಹತ್ತು ಹಲವು ಹೆಸರುಗಳಲ್ಲಿ ಒಂದಾಗಿ ಹೋದರು. ಹಾಗೆ ನೋಡಿದರೆ ಫೋನ್ ಬಂದಾಗ ಮೋನ ಕರೆಯುವ ಹೆಸರಿಗೂ, ಅಪ್ಪ ಅಮ್ಮ ಇಟ್ಟಿರಬಹುದಾದ ಹೆಸರಿಗೂ ಸಂಬಂಧವೇ ಇರಲಿಲ್ಲ. ಇರಬೇಕು ಅಂತಲೂ ಏನಿಲ್ಲ. ಆದರೆ, ಕನಿಷ್ಠ ಯಾರನ್ನು ಕರೀತಿದಾನೆ ಅಂತಲಾದರೂ ಗೊತ್ತಾದರೆ ಫೋನ್ ಅಟೆಂಡ್ ಮಾಡಲು ಸಾಧ್ಯವಿತ್ತು ಅನ್ನೋದಷ್ಟೇ ಮಾತು.

ಹುಟ್ಟುತ್ತಲೇ ಮೊಬೈಲು ರಿಂಗ್ ಟೋನುಗಳನ್ನು ಸೆಟ್ ಮಾಡುತ್ತಲೇ ಹುಟ್ಟಿದ ಇತ್ತೀಚೆಗಿನ ಪೀಳಿಗೆಗಳಿಗೆ ಮೊಬೈಲ್ ಇಲ್ಲದ ಕಾಲಹೇಗಿತ್ತು ಎನ್ನುವುದೂ ಕಲ್ಪನೆಗೆ ಮೀರಿದ್ದು ಅನ್ನಿಸುತ್ತೆ. ಮೊಬೈಲ್ ಅಭ್ಯಾಸ ಆದ ಮೇಲೆ, ಅದಿಲ್ಲದೆ ಇರೋದು ಕಷ್ಟವೇ. ಆದರೆ, ಮೊಬೈಲ್ ಬರೋಕೆ ಮೊದಲು ಜೀವನ ಬಹಳ ಸರಳವಾಗಿ, ನೇರವಾಗಿ, ಗೆರೆ ಕೊರೆದ ಹಾಗೆ ನಡೆಯುತ್ತಿತ್ತು.

ಹಾಸ್ಟೆಲಿನ ವರಾಂಡದಲ್ಲಿ ಒಂದು ಫೋನ್ ಇತ್ತು. ಕಾಯಿನ್ ಬೂತ್ ತರದ್ದು. ಅದರಲ್ಲಿ ಒಂದು ರೂಪಾಯಿ ಕಾಯಿನ್ ಹಾಕಿದರೆ ಲೋಕಲ್ ಕಾಲ್ ಮಾಡಬಹುದಿತ್ತು. ಆದರೆ, ಯಾರೋ ಬೃಹಸ್ಪತಿಗಳು ಒಂದು ರೂಪಾಯಿಗೆ ಗತಿಯಿಲ್ಲದೆ ಅದನ್ನು ಉಳಿಸಲೂ ಒಂದು ಉಪಾಯ ಕಂಡುಹಿಡಿದುಕೊಂಡಿದ್ದರು. ರಿಸೀವರ್ ಉಲ್ಟಾ ಹಿಡಿದು ಮಾತಾಡುವ ತುದಿಯಲ್ಲಿ ಕಿವಿಯಿಟ್ಟು, ಕೇಳಿಸಿಕೊಳ್ಳುವ ತುದಿಯಲ್ಲಿ ಜೋರಾಗಿ ಮಾತಾಡಿದರೆ ಅತ್ತಲಿನವರಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಈ ಥರದ ಉಳಿತಾಯ ಯೋಜನೆಗಳೆಲ್ಲ ದೊಡ್ಡವರಿಂದ ಚಿಕ್ಕವರಿಗೆ ಮಾಹಿತಿ ತಂತ್ರಜ್ಞಾನದಂತೆ ಹರಿದು ಬರುತ್ತಿತ್ತು. ಲೋಕಲ್ ಆಗಿ ಮಾತನಾಡಲು ಹುಡುಗಿಯರು ಈ ಥರದ ಹೊಸ ದಿಗಂತಗಳನ್ನು ಹುಡುಕಿಕೊಂಡು ದೇಶಕ್ಕೆ ದುಡ್ಡು ಉಳಿಸುತ್ತಿದ್ದರು. ಹಾಗೆ ಉಳಿಸಿದ ದುಡ್ಡನ್ನು ಸಯಾಜಿ ರಾವ್ ರಸ್ತೆಗೆ ಕೊಂಡೊಯ್ದು ಒಂದಕ್ಕೆರಡು ರೇಟು ಹಾಕುವ ಅಲಿ ಬ್ರದರ್ಸ್ ಅಂಗಡಿಯಲ್ಲಿ ಲಿಪ್ಸ್ಟಿಕ್ ಕೊಂಡು ತರುತ್ತಿದ್ದರು. ಮೊಬೈಲು, ಮಿಸ್ಡ್ ಕಾಲ್ ಇನ್ನೂ ಅವತಾರವೆತ್ತದ ಕಾಲದಲ್ಲಿ ಹುಡುಗಿಯರು ಇಷ್ಟು ಸಾಧನೆ ಮಾಡಿದ್ದೇನು ಸಾಮಾನ್ಯದ ಮಾತೇ?

ಹೀಗಿದ್ದ ಹಾಸ್ಟೆಲಿಗೆ ನಿರ್ಮಲಾ ಎನ್ನುವ ಹೊಸ ಹುಡುಗಿಯೊಬ್ಬಳ ಪ್ರವೇಶವಾಗಿ ಎಲ್ಲರಲ್ಲೂ ಸಂಚಲನವಾಯ್ತು. ಎಲ್ಲಿ ನೋಡಿದರೂ ನಿರ್ಮಲಾಳ ಮಾತೇ. ನಿರ್ಮಲಾ ಹಾಗಂತೆ, ಹೀಗಂತೆ. ಅಷ್ಟು ಓದ್ತಾಳಂತೆ. ಸಿಕ್ಕಾಪಟ್ಟೆ ಜಾಣೆಯಂತೆ. ಎಲ್ಲರ ಜೊತೆಗೂ ಚೆನ್ನಾಗಿರ್ತಾಳಂತೆ. ಜಗಳವೇ ಗೊತ್ತಿಲ್ಲವಂತೆ. ಅಂತೆ ಕಂತೆಗಳ ಸಾಮ್ರಾಜ್ಯವೇ ಸೃಷ್ಟಿಯಾಯಿತು. ಆದರೆ, ನಿರ್ಮಲ ಕಣ್ಣಿಗೇ ಕಾಣುವಂತಿರಲಿಲ್ಲ. ಇದಕ್ಕೆ ಇಂಬು ಕೊಡುವಂತೆ ಒಂದು ದಿನ ಹಾಸ್ಟೆಲ್ ಚೆಕಿಂಗಿಗೆ ಅಂತ ಬಂದ ವಾರ್ಡನ್ನು ರಿಂಕಿ-ರಶ್ಮಿ-ವಿಜಿಯರ ರೂಮನ್ನು ಕಂಡು ಗಾಬರಿಯಾಗಿ ಸ್ವಚ್ಛವಾಗಿಟ್ಟುಕೊಳ್ಳಲು ತಾಕೀತು ಮಾಡಿದರು.

ಅಷ್ಟಕ್ಕೆ ಸುಮ್ಮನಿರದೆ ‘ನೀವ್ ಯಾರೂ ನಿರ್ಮಲ ರೂಮನ್ನ ನೋಡಿಲ್ಲ ಅಂತ ಕಾಣ್ಸುತ್ತೆ. ಹಾಸ್ಟೆಲ್ ರೂಮು ಹೇಗಿಟ್ಟುಕೋಬೇಕು ಅಂತ ಅರ್ಥ ಆಗಬೇಕಾದರೆ ಅವಳ ರೂಮನ್ನ ಒಂದು ದಿನ ನೋಡಿಕೊಂಡು ಬನ್ನಿ. ಆಗಲಾದರೂ ನಿಮ್ಮ ಮನಸ್ಸುಗಳು ಬದಲಾಗಬಹುದು’ ಎಂದು ಒಂದು ಲೋಡು ಅವಮಾನವನ್ನೂ ಹೊರಿಸಿ ಹೋದರು. ರಶ್ಮಿಗೆ ಕಂಡಾಬಟ್ಟೆ ಸಿಟ್ಟು ಬಂತು.

ಸೂರ್ಯ ಮುಳುಗುತ್ತಿದ್ದ ತಂಪಾದ ಸಂಜೆಯಲ್ಲೂ ಕುದಿಯಹತ್ತಿದ ರಶ್ಮಿ ಅದ್ಯಾವಳು ಈ ನಿರ್ಮಲ, ಅವಳ ನಾಮಾಂಕಿತವೇನು, ಅವಳ ಜೀವನದ ಉದ್ದೇಶವೇನು, ತಾನು ರೂಮನ್ನು ಚೆನ್ನಾಗಿಟ್ಟುಕೊಂಡಿದ್ದೇ ಅಲ್ಲದೆ ಊರವರಿಗೆಲ್ಲ ಅವಮಾನ ಮಾಡಿಸುತ್ತಾಳಲ್ಲ ಇವಳನ್ನು ಕಂಡು ಸರಿಯಾಗಿ ಝಾಡಿಸಬೇಕು ಎಂದುಕೊಂಡು ಹೊರಟಳು. ವಿಜಿಯನ್ನು ಬರುತ್ತೀಯೇನೆ ಎಂದು ಕೇಳಿದರೆ ‘ಹೋಗೆಲೆ! ಅವಳ ರೂಮೇನು ಟೂರಿಸ್ಟ್ ಸ್ಪಾಟಾ? ನೀನ್ ಬೇಕಾದ್ರೆ ಹೋಗಿ ನೋಡ್ಕೊಂಡು ಬಾ. ನನಗೆ ಅವೆಲ್ಲ ತಲೆನೋವು ಬೇಡ’ ಅಂದುಬಿಟ್ಟಳು. ಕತ್ತಲಾಗುತ್ತಾ ಬಂದಿತ್ತು.

ನಿರ್ಮಲಾಳ ರೂಮು ಇದ್ದದ್ದು ಕೆಳ ಕಾರಿಡಾರಿನ ತುತ್ತ ತುದಿಯಲ್ಲಿ. ಅಲ್ಲಿಗೆ ಗಾಳಿ ಬರುತ್ತಿತ್ತೇನೋ. ಆದರೆ ಬೆಳಕಿನ ಮಾತೇ ಇಲ್ಲ. ರಶ್ಮಿ ಹೊರಟ ಕೂಡಲೇ ಕರೆಂಟು ಟಪ್ ಎಂದು ಹೋಗಿಬಿಟ್ಟಿತು. ಬೆಳಕಿನ ಇನ್ಯಾವ ಮೂಲವೂ ಹಾಸ್ಟೆಲಿನಲ್ಲಿ ಇಲ್ಲದಿದ್ದರಿಂದ ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ವಿಜಿ ರೂಮಿನ ಬಾಗಿಲು ಹಾಕಿಕೊಂಡು ಕೂತಳು.

ಇಪ್ಪತ್ತು ನಿಮಿಷ ಕಳೆದಿರಬೇಕೇನೋ. ಸ್ವಲ್ಪ ಹೊತ್ತಿನ ನಂತರ ರೂಮಿನೊಳಗೆ ಅಸಾಧ್ಯವಾದ ಶೆಖೆ ತುಂಬತೊಡಗಿದ್ದರಿಂದ ವಿಜಿ ಬಾಗಿಲು ತೆರೆದು ರಶ್ಮಿ ಬಂದಳೇನೋ ಎಂದು ಇಣುಕಿದಳು. ಕಣ್ಣಿಗೆ ಕತ್ತಲೆ ರಪ್ಪೆಂದು ರಾಚಿತು. ಹಾಸ್ಟೆಲಿನ ಕಾರಿಡಾರುಗಳ ಎರಡೂ ಬದಿಯಲ್ಲಿ ಅಲ್ಲಲ್ಲಿ ದೊಡ್ಡ ಸೈಜಿನ ಪ್ಲಾಸ್ಟಿಕ್ಕಿನ ಕಸದ ಡ್ರಮ್ಮುಗಳಿದ್ದವು. ಕೆಲವು ನಿಮಿಷ ಆದ ಮೇಲೆ ಢಬಾರ್ ಢಬಾರ್ ಎಂದು ಡ್ರಮ್ಮುಗಳು ಉರುಳಿದ ಸದ್ದು ಕೇಳಿತು. ಹಿಂದೆಯೇ ಮನುಷ್ಯರ ಮಾತುಗಳೂ ಕೇಳಿ ಬಂದು ಮತ್ತೆ ಮೌನ ಮೈಮುರಿದು ಬಿತ್ತು. ಮತ್ತೆ ಮಾತುಗಳು ಶುರುವಾಗಿ ರೂಮಿನ ಹತ್ತಿರಕ್ಕೇ ಬಂದವು. ಮೊದಲಿಗೆ ರಶ್ಮಿ ರೂಮಿನೊಳಕ್ಕೆ ಬಂದಳು. ಅವಳ ಹಿಂದೆಯೇ ಇನ್ನೊಂದು ಆಕೃತಿಯೂ ಅಡಿಯಿಟ್ಟಿತು.

‘ವಿಜಿ, ನಿರ್ಮಲಾ ರೂಮ್ ನೋಡಕ್ಕೆ ಹೋಗಿದ್ನಲ್ಲಾ? ಕರೆಂಟು ಹೋಯ್ತು. ನೋಡಕ್ಕೇ ಆಗಲಿಲ್ಲ. ಆದರೆ ನಿರ್ಮಲಾ ರೂಮಲ್ಲೇ ಇದ್ಲು, ಇನ್ನೊಂದು ಸಾರಿ ಬಾ ಅಂತ ಹೇಳಿ ಇಲ್ಲೀ ತನಕ ಬಿಟ್ಟು ಹೋಗಕ್ಕೆ ಬಂದ್ಲು’ ಎಂದಳು ರಶ್ಮಿ.

‘ಅಯ್ಯ! ಅದಕ್ಯಾಕೆ ಅವಳಿಗೆ ತೊಂದರೆ ಕೊಟ್ಟೆ? ನಿಂಗೊಬ್ಳಿಗೇ ಬರಕ್ಕೆ ಹೆದರಿಕೆ ಆಯ್ತಾ?’ ಎಂದು ವಿಜಿ ಛೇಡಿಸಿದಳು. ರಶ್ಮಿ ಉತ್ತರ ನೀಡಲು ಬಿಡದಂತೆ ನಿರ್ಮಲಾ ಹೇಳಿದಳು. ‘ಇಲ್ಲಾ ವಿಜಿ, ರಶ್ಮಿಗೆ ನಮ್ಮ ಕಾರಿಡಾರಿನ ಪರಿಚಯ ಇಲ್ಲಾಂತ ಕಾಣ್ಸುತ್ತೆ. ಅಲ್ಲಿ ಬಹಳ ಕತ್ತಲು. ಇವರು ವಾಪಾಸು ಹೋಗುವಾಗ ಎರಡು ಕಸದ ಡ್ರಮ್ಮಿಗೆ ಢಿಕ್ಕಿ ಹೊಡೆದರು. ಅದಕ್ಕೆ ನಾನೇ ನಿಮ್ಮ ರೂಮ್ ನಂಬರ್ ಕೇಳಿಕೊಂಡು ಅವರನ್ನ ಬಿಟ್ಟು ಹೋಗೋಣಾಂತ ಬಂದೆ’

ಯಾಕೋ ಈ ಮಾತುಗಳು ಸ್ವಲ್ಪ ಅತಿಯಾಗಿ ಕೊಚ್ಚಿಕೊಳ್ಳೋ ಹಾಗಿವೆ ಅನ್ನಿಸಿತು ರಶ್ಮಿಗೆ. ‘ಹಂಗೇನೂ ಇಲ್ಲ ನಿರ್ಮಲ. ನಾನೇ ಬರ್ತಿದ್ದೆ. ಕಸದ ಡ್ರಮ್ಮನ್ನ ಯಾರೋ ಅಡ್ಡ ಇಟ್ಟಿದ್ದರು. ಅದಕ್ಕೆ ಎಡವಿದೆ’ ಎಂದು ಸಮಜಾಯಿಶಿ ಕೊಟ್ಟಳು.

ಬಡಪೆಟ್ಟಿಗೆ ಒಪ್ಪದ ನಿರ್ಮಲ ‘ಛೆ! ಹಂಗೇನೂ ಇಲ್ಲ. ಕಸದ್ ಡ್ರಮ್ಮು ಸರಿಯಾದ ಜಾಗದಲ್ಲೇ ಇತ್ತು. ನಿಮಗೆ ಕತ್ತಲಲ್ಲಿ ನಡೆದು ಅಭ್ಯಾಸ ಇಲ್ಲ. ಅದಕ್ಕೆ ಹಂಗಾಯ್ತು. ಇರ್ಲಿ ಬಿಡಿ. ನಾನು ಹೊರಡ್ತೀನಿ’ ಎಂದಳು.

‘ಕೂತ್ಕೊಳಿ ನಿರ್ಮಲಾ. ಕತ್ತಲು ಎಲ್ಲರಿಗೂ ಒಂದೇ. ಕರೆಂಟು ಬಂದ ಮೇಲೆ ಹೊರಡಿ. ಇಲ್ಲಾಂದ್ರೆ ನೀವೂ ಎಡವಿಬಿಡ್ತೀರೇನೋ’ ಎಂದು ವಿಜಿ ವ್ಯಂಗ್ಯವಾಗಿ ತಾಕೀತು ಮಾಡುವುದಕ್ಕೂ ಝಗ್ಗನೆ ಕರೆಂಟು ಬರುವುದಕ್ಕೂ ಸರಿಯಾಯಿತು. ಇಬ್ಬರೂ ನಿರ್ಮಲಾಳನ್ನು ನೋಡಿದರೆ, ನಿರ್ಮಲಾ ಎತ್ತಲೋ ನೋಡುತ್ತಿದ್ದಳು.

‘ನೋಡಿ ಮಾತಾಡ್ತಿರೋ ಹಂಗೇ ಕರಂಟು ಬಂತು, ಈಗ ಬೇಕಾದ್ರೆ ಹೊರಡಿ!’ ಎಂದು ವಿಜಿ ನಕ್ಕಳು. ‘ಓಹ್ ಕರೆಂಟು ಬಂತಾ?’ ಎನ್ನುತ್ತಾ ನಿರ್ಮಲಾ ಎದ್ದು ‘ಸ್ವಲ್ಪ ಬಾಗಿಲ ತನಕ ಬಿಡಿ ಪ್ಲೀಸ್’ ಎಂದು ಕೇಳಿಕೊಂಡಳು.

ವಿಜಿ-ರಶ್ಮಿ ಒಬ್ಬರನ್ನೊಬ್ಬರು ನೋಡಿಕೊಂಡರು. ಮೌನ ಅರ್ಥಮಾಡಿಕೊಂಡವಳಂತೆ ನಿರ್ಮಲಾ ಹೇಳಿದಳು. ‘ನಾನು ಐದು ವರ್ಷದವಳಿದ್ದಾಗಲೇ ಕುರುಡಿ ಆದೆ. ಆದರೆ, ನನ್ನ ಎದೆ ಒಳಗಿನ ಬೆಳಕು ಬಹಳ ಸ್ಟ್ರಾಂಗ್ ಆಗಿದೆ! ಬನ್ನಿ ಯಾವಾಗಲಾದರೂ ನನ್ನ ರೂಮಿಗೆ!’ ಎನ್ನುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ರೂಮಿನಿಂದ ಹೊರಗೆ ಅನಾಯಾಸವಾಗಿ ನಡೆದೇಬಿಟ್ಟಳು. ರಶ್ಮಿ-ವಿಜಿ ಬಹಳ ಹೊತ್ತು ಮಕ್-ಮಕ ನೋಡಿಕೊಳ್ಳುತ್ತಾ ಮೌನವಾಗಿಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.