ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯನಗರೀ ಕೃಪಾಜನಿತ ಚಪಾತಿ ಸುಂದರಿ

Last Updated 16 ಜೂನ್ 2018, 9:04 IST
ಅಕ್ಷರ ಗಾತ್ರ

ಇಂದುಮತಿಯ ವಧುಪರೀಕ್ಷೆ ವರನಿಗೆ ಇಕ್ಕಟ್ಟಾಗಿ ಪರಿಣಮಿಸಿ ಅವಳು ಅಮೆರಿಕದ ಸೈಂಟಿಸ್ಟ್ ಅನ್ನು ‘ಹಾಡೋಕೆ, ಮಕ್ಕಳನ್ನ ಆಡಿಸೋಕೆ, ಅಡುಗೆ ಮಾಡೋಕೆ ಬರುತ್ತಾ’ ಅಂತ ತಿರುಗಿಸಿ ಕೇಳಿದ್ದು ಹಳೇ ಕಥೆಯಾಗುತ್ತಾ ಬಂದಿತ್ತು. ಯಥಾ ಪ್ರಕಾರ ಹಾಸ್ಟೆಲಿನ ಊಟ, ದುಡ್ಡಿದ್ದಾಗ ನಾನ್ ವೆಜ್ ಹೋಟೆಲಿನ ಕಡಿಮೆ ಬೆಲೆಯ ವೆಜ್ ಊಟದ ಪಾರ್ಸಲ್ಲು, ಮೊಟ್ಟೆ ಬುರ್ಜಿ, ರಮ್ಯಾ ಹೋಟೆಲಿನ ದೋಸೆ, ಹೆಡ್ ಶೆಫ್ ಮನೋಹರ ಭಟ್ಟಿ ಇಳಿಸುತ್ತಿದ್ದ ನೀರು ಟೀ-ಕಾಫಿ, ಬೇರ್ಪಟ್ಟ ಅವಳಿ-ಜವಳಿ ಸಹೋದರರಂತಿರುತ್ತಿದ್ದ ನುಗ್ಗೆಕಾಯಿ ಮತ್ತು ಹುಳಿ, ಆಗಾಗ ಕೊಡಗು ಚಿಕ್ಕಮಗಳೂರಿನ ಶ್ರೀಮಂತ ಹುಡುಗರು ಬೈಕು ಕಾರುಗಳಲ್ಲಿ ಮಿಂಚುತ್ತಾ ಬಂದು ತಂತಮ್ಮ ಸುಂದರಿ ಗರ್ಲ್ ಫ್ರೆಂಡುಗಳನ್ನು ಮಾತನಾಡಿಸುತ್ತಾ ಗಂಟೆಗಟ್ಟಲೆ ನಿಂತಿರುವುದನ್ನು ನೋಡಿ ಬೇರೆ ಹುಡುಗಿಯರು ಕರುಬುವುದು – ಎಲ್ಲಾ ಯಥಾ ಪ್ರಕಾರವಾಗಿ ಸಾಗಿತ್ತು.

ಆಧುನಿಕರೆನಿಸಿಕೊಂಡ ಕೆಲವರು ಬಹಳ ದುಃಖಕ್ಕೆ ಒಳಗಾದ ದಿನ ಕೊಡವರ ಹುಡುಗೀರ ಬಳಿ ಹೋಗುತ್ತಿದ್ದರು. ಅವರ ಹತ್ತಿರ ಮನೆಯಲ್ಲಿ ಮಾಡಿದ ವೈನು ಹೆಂಗೂ ಸ್ಟಾಕ್ ಇರುತ್ತಿತ್ತು. ಬೇಡಿದರೆ ಕೊಡುವಷ್ಟು ಮೃದು ಹೃದಯಿಗಳು ಕೊಡವರು. ಕುಡಿಯಲು ಕೊಟ್ಟಾರು, ಆದರೆ ಜಪ್ಪಯ್ಯಾ ಅಂದರೂ ಅವರ ಗುಂಪಿಗೆ ಸೇರಿಸಿಕೊಳ್ಳುತ್ತಿರಲಿಲ್ಲ. ‘ದಾಡ’ ಎಂಬ ಪ್ರಶ್ನೆಗೆ ನಿಮ್ಮಲ್ಲಿ ಸೂಕ್ತ ಉತ್ತರ ಇರದಿದ್ದರೆ ಅವರಲ್ಲಿ ನಿಮ್ಮ ಬಗ್ಗೆ ಸಹಾನುಭೂತಿಗಿಂತ ಹೆಚ್ಚಿನ ಸ್ಪಂದನೆ ನಿರೀಕ್ಷಿಸುವುದು ಮೂರ್ಖತನವಾಗುತ್ತಿತ್ತು.

ಆದರೆ, ದಿಲ್ ಜಲ್ತಾ ಇರುವಾಗ ಯಾವಳ ಸಾವಾಸ ಕಟ್ಟಿಕೊಂಡು ಏನಾಗಬೇಕಿತ್ತು? ಯಾರೂ ಮಾತನಾಡಿಸದಿದ್ದರೂ ಸಾಕಾಗುತ್ತಿತ್ತು. ದುಡ್ಡು ಹೆಚ್ಚಿಗೆ ಇದ್ದ ದಿನಗಳಲ್ಲಿ ಕೆಲವರ ರೂಮಿನಲ್ಲಿ ಗೋಲ್ಕೊಂಡಾ ಬಾಟಲು ಅಥವಾ ಕಿಂಗ್ ಫಿಷರ್ರು ರಾರಾಜಿಸುತ್ತಿತ್ತು. ಇನ್ನೂ ಹೆಚ್ಚಿನ ಸಾಹಸಿಗಳು ಆಗಾಗ ಹಳೇ ಸನ್ಯಾಸಿ (ಓಲ್ಡ್ ಮಾಂಕ್)ಯನ್ನೂ ಒಳಗೆ ಕರೆತರುತ್ತಿದ್ದರು. ಕೆಲವೊಮ್ಮೆ ಸ್ಮಿರ್ನಾಫ್ ಇರುತ್ತಿತ್ತು. ಆದರೆ ಹೆಚ್ಚು ಆಲ್ಕೋಹಾಲಿನ ವಾಸನೆ ಬರುವಂಥ ಡ್ರಿಂಕುಗಳನ್ನು ಕಡ್ಡಾಯವಾಗಿ ಶನಿವಾರ ರಾತ್ರಿ ಅಥವಾ ಸರ್ಕಾರಿ ರಜೆಯ ಹಿಂದಿನ ರಾತ್ರಿ ಮಾತ್ರ ಸೇವಿಸಲಾಗುತ್ತಿತ್ತು.

ಇದಕ್ಕೆ ಕಾರಣ ಇಷ್ಟೆ. ಅಕಸ್ಮಾತ್ ಡ್ಯೂಟಿ ಅಟೆಂಡರನಿಗೆ ಇದರ ಸುಳಿವು ಸಿಕ್ಕು ದೂರು ಕೊಡುವ ಪರಿಸ್ಥಿತಿ ಬಂದರೆ ಮಾರನೇ ದಿನ ವಾರ್ಡನ್ ಬಂದ ತಕ್ಷಣ ವರದಿ ಒಪ್ಪಿಸುತ್ತಿದ್ದ. ರಾತ್ರಿಯಿಂದ ಬೆಳಿಗ್ಗೆಯೊಳಗೆ ಯಾರಿಗೂ ಕಾಣದಂತೆ ಬಾಟಲಿಗಳನ್ನು ಸಾಗಿಸುವುದು ಅಥವಾ ಬಚ್ಚಿಡುವುದು ಕಷ್ಟದ ಕೆಲಸ. ಬಹಳ ರಿಸ್ಕು.

ಈಗಿನ ಥರಾ ಮನಸ್ಸಿಗೆ ಬಂದ ತಕ್ಷಣ ವರದಿ ಒಪ್ಪಿಸಲು ಮೊಬೈಲ್ ಇರುವ ಹಾಗೆ ಆಗ ರಾತ್ರೋರಾತ್ರಿ ಚಿಕ್ಕಪುಟ್ಟ ವಿಷಯಕ್ಕೆಲ್ಲ ವಾರ್ಡನ್ ಮನೆಗೆ ಫೋನ್ ಮಾಡುವಂತಿರಲಿಲ್ಲ. ಮರುದಿನ ಅಟೆಂಡರನ ಶಿಫ್ಟ್ ಬದಲಾಗಿ ಇನ್ನೊಬ್ಬ ಬಂದಿರುತ್ತಿದ್ದ. ವಿಷಯ ವಾರ್ಡನ್ನಿಗೆ ಮುಟ್ಟುವ ಸಮಯಕ್ಕೆ ಕ್ರೈಮ್ ಸೀನ್ ಸಂಪೂರ್ಣ ರೂಪಾಂತರಗೊಂಡು ದೇವರ ಫೋಟೊಗಳೂ, ಮಲ್ಲಿಗೆ ಮಾಲೆಗಳೂ, ಅರಿಶಿಣ-ಕುಂಕುಮಗಳೂ ರೂಮಿನಲ್ಲಿ ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತಿದ್ದವು.

ರಾತ್ರಿ ಬಿಯರನ್ನೋ ವೈನನ್ನೋ ರಮ್ಮನ್ನೋ ಕುಡಿದು ಗಂಟಲು ಹರಿಯುವಂತೆ ನಕ್ಕವರು ಒಂದು ವಾರ ಕಾಲ ‘ಸತ್ಸಂಗಿ’ಗಳಾಗಿ ಹಣೆಗೆ ಢಾಳಾಗಿ ಕುಂಕುಮ ಇಟ್ಟು, ಚೂಡಿದಾರ ಧರಿಸಿ ತಲೆ ತಗ್ಗಿಸಿಕೊಂಡು ಓಡಾಡುತ್ತಿದ್ದರು.  ಹಾಗಾಗಿ ವಾರ್ಡನ್ ಹತ್ತಿರ ಕಂಪ್ಲೇಂಟ್ ಹೋಗಿದ್ದು ವಿರಳವೇ.

ಹೆಂಗಸರು ಕುಡಿಯುವುದಕ್ಕೂ ಗಂಡಸರು ಕುಡಿಯುವುದಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ ಮಾತು. ಹೆಣ್ಣುಮಕ್ಕಳು ಕುಡಿದ ತಕ್ಷಣ ಹುಚ್ಚಾಪಟ್ಟೆ ಗಲಾಟೆ ಮಾಡಲು ತೊಡಗುವುದಿಲ್ಲ. ಬಹುತೇಕ ಹೆಂಗಸರು ಕುಡಿದರೆ ಸೈಲೆಂಟಾಗುತ್ತಾರೆ. ಹೆಚ್ಚೆಂದರೆ ಹಾಡು ಗೀಡು ಹೇಳಬಹುದು, ಎಲ್ಲರೂ ಸೇರಿ ನರ್ತಿಸಬಹುದು, ಕೆಲವರು ಅಳಬಹುದು. ಅದು ಸಾಧಾರಣ ಸಂಭ್ರಮಾಚರಣೆಯ ಪರಿ ಎಂದು ಭಾವಿಸಲಾಗುತ್ತದೆ. ಗಂಡಸರ ಥರಾ ಅಸಂಬದ್ಧ ಮಾತನಾಡುವುದಾಗಲೀ, ಜಗಳಕ್ಕೆ ಇಳಿಯುವುದಾಗಲೀ ಅಥವಾ ವಿನಾಕಾರಣ ಗಂಡಸ್ತನದ ಪ್ರದರ್ಶನ ಮಾಡುವ ಹಾಗೆ ಮಂಗಾಟ ಮಾಡುವುದಿಲ್ಲ. ಇದಕ್ಕೆ ಅಪವಾದಗಳೂ ಸಾಕಷ್ಟಿರಬಹುದು.

ಹೈ ಸೊಸೈಟಿ ಹೆಣ್ಣು ಮಕ್ಕಳ ಬೇರೆ ಥರ ಇದ್ದಾರು. ಆದರೆ ಸಾಧಾರಣ ಮಧ್ಯಮ ವರ್ಗದ ಹೆಣ್ಣು ಮಕ್ಕಳು ಹೊಸ್ತಿಲನ್ನು ದಾಟುವ ಹೊತ್ತಿಗೆ ಸಾಮಾಜಿಕ ಮೌಲ್ಯಗಳ ಬಗ್ಗೆ, ಹೆಣ್ಣು ಮಕ್ಕಳಿಗೆಂದೇ ವಿಶೇಷವಾಗಿ ರೂಪಿಸಲ್ಪಟ್ಟಿರುವ ಮಿತಿಗಳ, ಇಟ್ಟುಕೊಳ್ಳಲೇಬೇಕಾದ ಭಯ-ಭಕ್ತಿಗಳ ಬಗ್ಗೆ ಪಾಠ ಎಷ್ಟು ಆಳವಾಗಿ ಆಗಿರುತ್ತದೆಂದರೆ; ಹುಡುಗಿಯರು ಮನೆಯಿಂದ ಹೊರಗೆ ಕಾಲು ಇಟ್ಟಾಗಲೂ ಹೊಸ್ತಿಲು ಅವರೊಂದಿಗೇ ಪ್ರಯಾಣ ಬೆಳೆಸುತ್ತದೆ.

ಹಾಗಾಗಿಯೇ ‘ದಾರಿ ತಪ್ಪಿದ’ ಹೆಣ್ಣುಮಕ್ಕಳು ಮೇಲ್ನೋಟಕ್ಕೆ ‘ಎಲ್ಲಾ ಬಿಟ್ಟವರಂತೆ’ ಕಂಡರೂ, ಒಳಗಿನಿಂದ ಬಹಳ ಏಕಾಂಗಿಗಳಾಗಿರುತ್ತಾರೆ. ಸಮಾಜದೊಂದಿಗೆ ಒಂದು ಬಗೆಯ ತಿಕ್ಕಾಟದಲ್ಲೇ ಇರುತ್ತಾರೆ. ಅವರೊಳಗೆ ಒಂದು ಜ್ವಾಲಾಮುಖಿ ಯಾವಾಗಲೂ ಜೀವಂತವಾಗಿರುತ್ತದೆ.

ಸೈಂಟಿಸ್ಟ್ ವರನಿಗೆ ಉಲ್ಟಾ ಪ್ರಶ್ನೆಯನ್ನು ಕೇಳಿ ಬಂದಿದ್ದರೂ ಇಂದುಮತಿಯ ಮನಸ್ಸು ಅಸಮಾಧಾನದಲ್ಲಿ ಮುಳುಗಿತ್ತು. ಜೀವನವನ್ನು ಹಂಚಿಕೊಳ್ಳಲು ಒಬ್ಬ ಜೊತೆಗಾರ ಬೇಕು ನಿಜ. ಹಾಗಂತ ಅಸ್ಮಿತೆಯನ್ನು ಮೀರುವುದು ಹೇಗೆ? ಒಂದು ಪಕ್ಷ ಬದಲಾದರೂ, ಆ ಬದಲಾವಣೆ ಎಷ್ಟು ದಿನ ತಡೆದೀತು? ಯಾವತ್ತೋ ಒಂದು ದಿನ ಬದಲಾವಣೆಯ ಪರ್ವದ ಸಮಯ ಮೀರಿ ನಮ್ಮೊಳಗಿನ ನೈಜ ರೂಪ ಅನಾಚ್ಛಾದಿತಗೊಂಡರೆ ಸಂಬಂಧಗಳು ಏನಾಗಬಹುದು? ಇವೆಲ್ಲ ಪ್ರಶ್ನೆಗಳು ಇಂದುಮತಿಯನ್ನು ಕೊರೆಯುತ್ತಿದ್ದವು.

ಹಾಗಾಗಿ ಅವಳಿಗೆ ತನ್ನತನದ ಸೀಮೋಲ್ಲಂಘನ ಮಾಡಿ ಯಾವ ವರನನ್ನೂ ಮೆಚ್ಚಿಸುವುದು ಸಮ್ಮತವಿರಲಿಲ್ಲ. ಆದರೆ, ಸಂಗಾತಿಯ ಬಯಕೆ ಯಾರಪ್ಪನ ಮನೆಯ ಸ್ವತ್ತು? ಸಮಾಜದ ಅಳತೆಗೋಲುಗಳಿಗೆಹೊಂದದಿದ್ದರೆ ಸಂಗಾತಿ ಬೇಕೆನ್ನುವ ಕನಸು ಕಾಣುವುದೂ ಅಪರಾಧವೇನು? ಆಗಾಗ ತನ್ನ ಅನುಮಾನ ಬಗೆಹರಿಸಿಕೊಳ್ಳಲು ಸಿಕ್ಕಸಿಕ್ಕವರ ತಲೆ ತಿನ್ನುತ್ತಿದ್ದಳು ಇಂದೂ. ಬಹುತೇಕ ಸಮಯ ಅವಳ ಕೈಗೆ ಸಿಗುತ್ತಿದ್ದುದು ರಿಂಕಿನೇ.

‘ರಿಂಕ್ಸ್, ನನ್ ಮದ್ವೆ ಆಗಲ್ಲಾಂತೀಯಾ?’

‘ಯಾರ್ ಹೇಳಿದ್ರು ಹಂಗಂತ?’

‘ಅಲ್ಲಾ, ನಾನೇ ಕೇಳ್ತಿದೀನಿ’

‘ಅಯ್ಯೋ! ಜಗತ್ತಲ್ಲಿ ಎಲ್ರೂ ಪುಣ್ಯವಂತರೇ ಇರ್ತಾರಾ? ಯಾರೋ ಪಾಪಿಗಳು ಇದ್ದೇ ಇರ್ತಾರೆ ಬಿಡು, ನಿನ್ನ ಮದ್ವೆ ಆಗೋಕೆ’

‘ಯಾವಳೇ? ಕಾಲ್ಮುರಿದು ಬಿಡ್ತೀನಿ’

‘ನೀನೇ ತಾನೇ ಕೇಳಿದ್ದು? ನನಗೆ ಗೊತ್ತಿದ್ದದ್ದು ಹೇಳಿದೆ’

‘ಅದೂ ಸರಿ ಅನ್ನು. ನನ್ ಕರ್ಮಕ್ಕೆ ನೀನಾದ್ರೂ ಏನ್ ಮಾಡೋಕಾಗತ್ತೆ. ಆದ್ರೆ ಒಂದು ಮಾತು ಕಣೆ. ನೀನು ನಾಯಿ ಓಡ್ಸೋ ಕೋಲಿನ್
ಥರಾ ತೆಳ್ಳಗಿದ್ದೀಯಲ್ಲಾ? ಮದ್ವೆ ಆದ್ರೆ ಏನ್ ಗತಿ ನಿಂದು?’

‘ಅಯ್ಯೋ ಹುಡುಗ್ರಿಗೆ ತೆಳ್ಳಗಿರೋ ಹುಡ್ಗೀರೇ ಇಷ್ಟ ಕಣೇ!’

‘ನಿನ್ ಮಕ. ತೆಳ್ಳಗಿರೋ ಹುಡ್ಗೀರು ಬೇರೆ. ನೀನು ತೆಳ್ಳಗಿಲ್ಲ, ರೀಫಿಲ್ ಥರಾ ಇದೀಯಾ. ಅದ್ನ ತೆಳ್ಳಗೆ ಅಂತಾರಾ? ನಿನ್ನಯ್ಯನ್’ ಹೀಗೆ ಬಹಳ ಸಾಧಾರಣ ಮಟ್ಟದಲ್ಲಿ ಶುರುವಾದ ಮಾತುಗಳು ಒಬ್ಬರನ್ನೊಬ್ಬರು ತೆಗಳುವಂತೆ ‘ಬೆತ್ತಲೆ ಪ್ರಪಂಚ’ ತಲುಪುವ ತನಕವೂ ನಡೆಯುತ್ತಿದ್ದವು.

ಹೀಗಿದ್ದಾಗ ರಿಂಕಿ ಒಂದು ದಿನ ಒಂದು ಬ್ರೇಕಿಂಗ್ ನ್ಯೂಸ್ ತಂದಳು. ಇದೇ ಹಾಸ್ಟೆಲಿನಲ್ಲಿ ಇದ್ದ ಡಿಂಪಲ್ ಎನ್ನುವ ಹುಡುಗಿಗೆ ನಿಶ್ಚಿತಾರ್ಥ ಆಗಿದ್ದು ಇಷ್ಟರಲ್ಲೇ ಮದುವೆ ಆಗುವುದಿತ್ತು. ಮೇಲ್ನೋಟಕ್ಕೆ ಇದರಲ್ಲೇನೂ ವಿಶೇಷ ಇಲ್ಲ ಎಂದೆನಿಸಿದರೂ ಇಂದೂ ಹಾಗೂ ಅವಳ ಸ್ನೇಹಿತೆಯರಿಗೆ ಇದು ಬಹಳ ಮುಖ್ಯ ವಿಚಾರವಾಗಿತ್ತು. ಕಾರಣ ಡಿಂಪಲ್ ಇಂದುಮತಿಯಷ್ಟೇ ದಪ್ಪ ಇದ್ದದ್ದು ಮತ್ತು ಬಹಳಷ್ಟು ವಿಚಾರಗಳಲ್ಲಿ ಇಂದೂವನ್ನು ಹೋಲುತ್ತಿದ್ದಳು. ಪುಣೆಯಿಂದ ಮೈಸೂರಿಗೆ ಓದಲು ಬಂದಿದ್ದ ಡಿಂಪಲ್ ಬಹಳ ಚುರುಕಾದ ಹುಡುಗಿ. ಹತ್ತು ಹಲವು ವಿಷಯಗಳ ಬಗ್ಗೆ ಅವಳಿಗೆ ಆಳವಾದ ಜ್ಞಾನ ಇತ್ತು. ಕಲೆಯ ವಿಚಾರದಲ್ಲಿ ಎತ್ತಿದ ಕೈ.

‘ನನ್ನಷ್ಟೇ ದಪ್ಪ ಇದ್ರೂ ಮದ್ವೆ ಹೆಂಗೇ ಫಿಕ್ಸ್ ಆಯ್ತು?’ ಇದು ಇಂದೂಗೆ ಹೊಸ ಜಿಜ್ಞಾಸೆಯಾಗಿ ಪರಿಣಮಿಸಿತು. ಉಳಿದವರು ತಲೆ ಕೆಡಿಸಿಕೊಳ್ಳದಿದ್ದರೂ ಇಂದೂ ಕೂತಲ್ಲಿ ನಿಂತಲ್ಲಿ ಇದೇ ಜಪ ಮಾಡತೊಡಗಿದಳು. ಯಾವಾಗ ವಾರ ಕಳೆದರೂ ಈ ವಿಚಾರದ ಭರಾಟೆ ಇಂದುವಿನ ತಲೆಯಿಂದ ಇಳಿಯಲಿಲ್ಲವೆಂದಾಗ ವಿಜಿ ಒಂದು ಉಪಾಯ ಸೂಚಿಸಿದಳು.

‘ಸುಮ್ನೆ ಕೂತು ತಲೆ ಕೆಡಿಸಿಕೊಂಡ್ರೆ ಏನ್ ಬಂತು? ಹೋಗಿ ಅವಳನ್ನೇ ಕೇಳು. ಹುಡುಗ ನಿನ್ನಲ್ಲಿ ಯಾವ ವಿಚಾರ ಮೆಚ್ಚಿಕೊಂಡ ಅಂತ’
‘ಹಂಗಂತೀಯಾ? ಕೇಳಿದ್ರೆ ಹೇಳ್ತಾಳಾ ಅವಳು?’

‘ನೀನೇನು ಅವಳ ಹುಡುಗನ್ನ ಹೈಜಾಕ್ ಮಾಡಕ್ಕೆ ಬಂದಿಲ್ಲ ಅಂತ ಮೊದ್ಲೆ ಪ್ರಾಮಿಸ್ ಮಾಡ್ಬಿಡು. ಹಂಗಂದ್ರೆ ಎಲ್ಲಾ ಹೇಳ್ತಾಳೆ’ ಎಂದು ತನ್ನ ಜೋಕಿಗೆ ವಿಜಿ ತಾನೇ ನಕ್ಕಳು. ಇಂದೂ ನಗಲಿಲ್ಲ. ಸಂಜೆಗೇ ಕೆಲಸ ಕಾರ್ಯಗತವಾಯಿತು.

ಇಂದೂ ಡಿಂಪಲ್ ರೂಮಿಗೆ ಹೋಗಿ ಬಂದ ಮೇಲೆ ಮರುದಿವಸ ಕ್ಲಾಸ್ ತಪ್ಪಿಸಿ ಒಂದು ಇಡೀ ದಿನ ಅರಸ್ ರೋಡಿಗೆ, ಶಿವಾನಂದ ರಸ್ತೆಗೆ ಮತ್ತೆ ಸಯಾಜಿ ರಾವ್ ರಸ್ತೆಗೆ ಹೋಗಿ ಒಂದಿಷ್ಟು ಸಾಮಾನುಗಳನ್ನು ಖರೀದಿ ಮಾಡಿ ಬಂದಳು. ಕಾನ್ವಾಸು, ಥರ್ಮೋಕೋಲ್, ಕತ್ತರಿ, ಹತ್ತು ಹಲವು ಥರದ ಚಾಕುಗಳು, ಪೇಂಟ್ ಬ್ರಶ್‌ಗಳು, ಬಣ್ಣದ ಡಬ್ಬಿಗಳು, ಎಳೆದು ಕಟ್ಟಲು ಫ್ರೇಮು ಏನೇನೋ. ರೂಮಿನಲ್ಲಿ ಓಡಾಡಲು ಜಾಗವಿಲ್ಲದಾಯಿತು.

‘ಏನೇ ಇದೆಲ್ಲಾ?’ ಎಂದು ಕೇಳಿದರೆ ಇಂದೂ ಸುಮ್ಮನೆ ನಗುತ್ತಿದ್ದಳು.

ಡಿಂಪಲ್ ಇಂದೂಗೆ ತನ್ನ ಮದುವೆ ಫಿಕ್ಸ್ ಆದದ್ದರ ಗುಟ್ಟು ಬಿಟ್ಟುಕೊಟ್ಟಿದ್ದಳೇನೋ ಸರಿ. ಆದರೆ ಇಂದೂ ಹೀಗೆ ಅವಳ ಬೆನ್ನು ಹತ್ತುತ್ತಾಳೆ ಎಂದು ಭಾವಿಸಿರಲಿಲ್ಲವೆನಿಸುತ್ತದೆ. ಇಂದೂ ಬಿಡಬೇಕಲ್ಲ? ಅವರಪ್ಪ ಬರಲ್ಲ ಅಂತ ವರಪರೀಕ್ಷೆಯನ್ನು ತಾನೇ ನೆರವೇರಿಸಿಕೊಂಡಿದ್ದ ಗಟ್ಟಿಗಿತ್ತಿ ತಾನೇ?

ಒಂದು ಮದುವೆ ನಿಶ್ಚಿತವಾಗಲು ಹತ್ತು ಅನುಕೂಲ ಲೆಕ್ಕಾಚಾರಗಳಿದ್ದರೂ, ಸಾವಿರ ಬೇರೆ ಬೇರೆ ಕಾರಣಗಳಿದ್ದರೂ, ತನ್ನ ರೂಪು ಕಂಡು ಹುಡುಗ ತನ್ನ ಮೆಚ್ಚಿದ ಎಂದು ಎಲ್ಲ ಹುಡುಗಿಯರೂ ನಂಬಲು ಬಯಸುತ್ತಾರೆ. ಪುಣೆಯ ಹುಡುಗಿಯೂ ಇದಕ್ಕೆ ಹೊರತಾಗಿರದೆ, ತನ್ನ ನೋಡಲು ಬಂದಿದ್ದ ಹುಡುಗ ತನ್ನ ಕಲಾಸಕ್ತಿಗೆ ಮೆಚ್ಚಿ ಒಪ್ಪಿದ್ದ ಎಂದು ಸರಳವಾಗಿ ಹೇಳಿಬಿಟ್ಟಿದ್ದಳು.

ಅಲ್ಲಿಗೆ ಸುಲಭ ಮದುವೆಗೆ ಒಂದು ದಾರಿಯಂತೂ ಇಂದೂವಿಗೆ ಗೋಚರವಾಗಿತ್ತು. ಇದಕ್ಕೂ ಮಿಕ್ಕಿ ಡಿಂಪಲ್ ತನಗೆ ಗೊತ್ತಿದ್ದ ಕಲೆಗಳನ್ನೆಲ್ಲ ಇಂದೂವಿಗೆ ಧಾರೆ ಎರೆಯಲು ಒಪ್ಪಿದ್ದು ಇವಳಿಗೆ ಮದುವೆ ಫಿಕ್ಸ್ ಆದಷ್ಟೇ ಸಂತೋಷವಾಗಿಬಿಟ್ಟಿತ್ತು. ಮೊದಲಿಗೆ ಪೇಂಟಿಂಗ್‌ನಿಂದ ಶುರುವಾಯಿತು ಕ್ಲಾಸು. ಆಮೇಲೆ ಥರ್ಮೋಕೋಲ್ ಕಲೆ, ಅದು ಮುಗಿದ ಮೇಲೆ ಚಾರ್ಕೋಲ್ ಪೇಂಟಿಂಗ್, ನಂತರ ಗ್ಲಾಸ್ ಪೇಂಟಿಂಗ್ ಹೀಗೆ ಏನೇನೋ ಪಟ್ಟಿ ತಯಾರಾಯಿತು. ಡಿಂಪಲ್ ಎಷ್ಟೆಂದರೂ ಪುಣೇರಿ ಹುಡುಗಿ. ಪುಕ್ಕಟೆ ಹೇಳಿಕೊಟ್ಟಾಳೆಯೇ? ಎಲ್ಲಾ ಕ್ಲಾಸುಗಳಿಗೂ ಸೇರಿಸಿ ಐದು ನೂರು ರೂಪಾಯಿ ಫೀಸಾಗುತ್ತದೆ ಎಂದು ಹೇಳಿದ್ದಳು.

ಇಂದೂ ತನ್ನ ತಂದೆಯ ಹತ್ತಿರ ಮಾತನಾಡಿ ಮೂರು ವಾರ ಯಾವ ಗಂಡೂ ನೋಡಲು ಬರುವುದು ಬೇಡ. ನಂತರ ಬಂದರೆ ಒಳ್ಳೆಯದು ಎಂದು ಒಪ್ಪಿಸಿದ್ದಳು. ಅವಳ ಅಪ್ಪನಿಗೂ ಈ ಟೈಂ ಫ್ರೇಮ್ ಸಮ್ಮತವಾಯಿತು. ಮರುಮಾತಾಡದೆ ಫೀಸಿನ ದುಡ್ಡಿಗಿಂತ ಮೂರು ಪಟ್ಟು ಹೆಚ್ಚಿನ ದುಡ್ಡನ್ನು ಕಳಿಸಿದರು.

ಒಂಥರಾ ಭಗೀರಥ ಪ್ರಯತ್ನದಂತೆ, ಏಕಲವ್ಯನ ನಿಷ್ಠೆಯಿಂದ ಡಿಂಪಲ್ ಹತ್ತಿರ ಅವಳ ಶಿಷ್ಯವೃತ್ತಿ ನಡೆಯಿತು. ಅಷ್ಟೂ ದಿನ ಇಂದೂ ಕಳೆದುಹೋಗಿಬಿಟ್ಟಿದ್ದಾಳೇನೋ ಎನ್ನುವ ಹಾಗೆ ಮೌನವಾಗಿದ್ದಳು. ಎಷ್ಟೆಂದರೂ ಕಲಾರ್ಥಿಯಲ್ಲವೆ? ಮಾತಾಡಿದರೆ ಕಲೆಯ ಔಚಿತ್ಯ ಕಳೆದುಹೋಗಿ ಮತ್ತೆಲ್ಲಿ ಹುಲುಮಾನವಳಾಗಿಬಿಡುತ್ತೇನೋ ಎನ್ನುವ ಭಯ ಇದ್ದಿರಬೇಕು. ಹೊಸದಾಗಿ ಅಗಸ ಬಟ್ಟೆ ಎತ್ತಿ ಎತ್ತಿ ಬೀಸಿದಂತೆ ಕಲೆಯ ಕ್ಲಾಸು ನಡೆಯಿತು. ಮುಗಿಯುವ ಹಂತಕ್ಕೆ ಬಂದಾಗ ಎಲ್ಲ ಕಲಾ ಪ್ರಾಕಾರಗಳಲ್ಲೂ ಒಂದೊಂದು ಪೀಸ್ ತಯಾರಾಗಿದ್ದವು.

ಆ ದಿನ ಸಂಜೆ ಎಲ್ಲ ಮಾಸ್ಟರ್ ಪೀಸುಗಳು ಲೋಕಾರ್ಪಣೆಯಾಗಲಿದ್ದವು. ಇಂದೂವಿನ ರೂಮಿಗೆ ಮೂರು ವಾರಗಳ ನಂತರ ಪ್ರವೇಶ ಸಿಕ್ಕಿತ್ತು. ಅವಳ ಎಲ್ಲಾ ದೇವ ಸೃಷ್ಟಿಗಳನ್ನು ನೋಡಿ ಅಭಿಪ್ರಾಯ ಕೊಡಬೇಕೆಂದು ಆಜ್ಞೆಯಾಗಿತ್ತು. ಎಲ್ಲರೂ ರೂಮಿಗೆ ಹೆದರುತ್ತಲೇ ಕಾಲಿಟ್ಟರೂ, ಅಲ್ಲಿದ್ದ ಕಲಾಶ್ರೀಮಂತಿಕೆಯನ್ನು ಕಂಡು ನಿಬ್ಬೆರಗಾಗಿ ಹೋದರು. ಇಂದು ಒಮ್ಮೆ ಎಲ್ಲರನ್ನೂ ಪರಿಶೀಲಿಸಿದಳು. ಗಂಟಲು ಸರಿಮಾಡಿಕೊಂಡು ಪ್ರಶ್ನೆ ಕೇಳಿದಳು.

‘ಹೆಂಗಿದೆ?’

‘ಎಕ್ಸಲೆಂಟ್ ಮ್ಯಾನ್!’ ರಿಂಕಿ ಉದ್ಗರಿಸಿದಳು.

‘ಸರಿ ಮತ್ತೆ ಒಂದೊಂದೂ ಹೇಗೆ ಕಾಣುತ್ತೆ ಹೇಳು?’

ಇಂದೂ ಗುರುತು ಹಿಡಿಯೆಂದು ಕೇಳಿದ್ದು ರಾಜಾ ರವಿ ವರ್ಮನ ಗೌಳಿಗಿತ್ತಿಯ ಚಿತ್ರದ ನಕಲನ್ನು. ತಾಮ್ರದ ತಂಬಿಗೆ ಹಿಡಿದು ನಿಂತ ಮುಗ್ಧೆಯ ಚಿತ್ರವನ್ನು ಭಟ್ಟಿ ಇಳಿಸಿದ್ದೇನೆನ್ನುವ ನಂಬಿಕೆ ಆಕೆಯದು.

‘ಯೆ ಲೋಟಾ ಲೇಕೆ ಗಾಂವ್ ಸೆ ಬಾಹರ್ ಜಾ ರಹೀ ಹೈ ಕ್ಯಾ?’ (ಚೊಂಬು ತಗೊಂಡು ಊರಾಚೆ ಓಡ್ತಾ ಇದ್ದಾಳಾ?)

‘ಥತ್ ನಾಯಿ. ಇವ್ಳಿಗೆ ಆರ್ಟ್ ಗೊತ್ತಾಗಲ್ಲ ಕಣೆ. ಇದೇನು ಅಂತ ನೀನ್ ಹೇಳೇ’ ಇಂದು ವಿಜಿಗೆ ತಾಕೀತು ಮಾಡಿದಳು.

‘ನಿಜ್ವಾಗಿ ಹೇಳ್ಳಾ?’

‘ಹೇಳಿ ಸಾಯಿ ಅತ್ಲಾಗೆ’

‘ಚಪಾತಿ ಮಡಿಚಿ ಹಿಡ್ಕೊಂಡಿರೋ ಹಂಗಿದೆ ಕಣೆ. ಇದ ತಿಂದಿದ್ಕೇ ಹೊಟ್ಟೆ ನೋವು ಅಂತಿರೊ ಹಾಗಿದೆ’

ದರ್ಪಣ ಸುಂದರಿಯ ಥರ್ಮೋಕೋಲ್ ಕಾಪಿ ಮಾಡಿದ್ದೇನೆ ಅಂದುಕೊಂಡಿದ್ದಳಂತೆ. ಒಂದು ಕೈಯಲ್ಲಿ ಕನ್ನಡಿ, ಇನ್ನೊಂದು ಕೈ ಸೊಂಟದ ಮೇಲೆ ಇಟ್ಟುಕೊಂಡ ಹಾಗೆ ಕಾಣಬೇಕಿತ್ತು. ಆದರೆ, ಇಲ್ಲಿ ಆಭರಣ ಧರಿಸಿದ ಬೇಲೂರ ಸುಂದರಿ ಹೊಟ್ಟೆ ನೋವಿಗೆ ಈ ಚಪಾತಿಯೇ ಕಾರಣ ಅಂತ ಹೇಳಿದಂತಿತ್ತು. ಇಂದೂವಿನ ಕಣ್ಣಲ್ಲಿ ಮೊದಲ ಬಾರಿಗೆ ನೀರು ತುಂಬಿದ್ದನ್ನು ಎಲ್ಲರೂ ಕಂಡರು.

‘ಇಂದೂ, ತಪ್ ತಿಳ್ಕೋಬೇಡ ಕಣೆ. ನೀನು ಆರ್ಟಿಸ್ಟ್ ಅಲ್ಲ ಅಂದ್ರೆ ಅಲ್ಲ. ಮದ್ವೆ ಅನ್ನೋದು ಬಲೆ ಹಾಕಿ ಮೀನು ಹಿಡಿಯೋ ಥರಾನೇನೆ?’
‘ಸಾಯ್ಲಿ ಸೂಳೇಮಕ್ಳು. ನಮ್ಮಪ್ಪಂಗೂ ಹೇಳ್ತೀನಿ. ನನ್ ಮದ್ವೆಗೆ ಖರ್ಚು ಮಾಡೋ ದುಡ್ನ ನಂಗೇ ಕೊಡು, ನಾನ್ ಫಾರಿನ್ನಿಗೆ ಹೋಗಿ ಓದ್ತೀನಿ ಅಂತ’


ಹೀಗೆ ಹೇಳಿದ ಮಾರನೇ ವರ್ಷ ಎಲ್ಲರೂ ಹಾಸ್ಟೆಲ್ ವಾಸ ಮುಗಿಸಿದರು. ಅಲ್ಲಿಂದ ಒಂದು ವರ್ಷಕ್ಕೆ ಸರಿಯಾಗಿ ಇಂದೂ ‘ವಿದ್ಯಾಭ್ಯಾಸ ಮುಂದುವರೆಸಲು ವಿದೇಶಕ್ಕೆ ಹೊರಟಿರುವುದಾಗಿ’ ಯಾರೋ ಶುಭ ಹಾರೈಸಿ ಪತ್ರಿಕೆಯಲ್ಲಿ ಫೋಟೊ ಸಮೇತ ಜಾಹೀರಾತು ಹಾಕಿಸಿದ್ದನ್ನು ಕಂಡು ವಿಜಿ ಉಲ್ಲಸಿತಳಾದಳು. ಇಂದೂಗೆ ಅವಶ್ಯವಿದ್ದ ಅಸ್ಮಿತೆ ಕಡೆಗೂ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT