ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣ್ಣಿಮೆ ರಾತ್ರಿಯಲ್ಲಿ ಅದ್ದಿದ ಐಸ್ ಕ್ರೀಮು...

Last Updated 16 ಜೂನ್ 2018, 9:04 IST
ಅಕ್ಷರ ಗಾತ್ರ

ಸೂರ್ಯ ಕಿತ್ತಳೆ ಬಣ್ಣದಲ್ಲಿ ಮುಳುಗಿದ ಒಂದು ಸುಂದರ ಸಂಜೆ ವಿಜಿ ರಶ್ಮಿಯರಿಗೆ ಹೊಟ್ಟೆ ಹಸಿದಿದ್ದಕ್ಕಿಂತ ನಾಲಿಗೆ ರುಚಿ ಬೇಡುತ್ತಿತ್ತು. ಮೆಸ್ಸಿನ ಸಪ್ಪೆ ಊಟ ಮಾಡೀ ಮಾಡೀ ಆಗಾಗ ಖಾರ-ಖಾರವಾಗಿ ಏನನ್ನಾದರೂ ತಿನ್ನಬೇಕಂತ ಅಗಾಧ ಆಸೆಯಾಗುತ್ತಿತ್ತು. ಮನಸ್ಸಿದ್ದಲ್ಲಿ ಮಾರ್ಗ ಎಂದು ನಂಬಿದವರು ಒಮ್ಮೆ ಆಗಿನ ಮಾನಸಗಂಗೋತ್ರಿಗೂ ಬಂದುಹೋಗಬೇಕಿತ್ತು. ಪುಣ್ಯವಿದ್ದರೆ ದಿನದ ಟೈಮಿನಲ್ಲಿ ಆಗಾಗ ಬಸ್ಸು ಕಾಣಿಸಿಕೊಳ್ಳುತ್ತಿತ್ತು. ಆಟೊ ಕತೆಯಂತೂ ಕೇಳೋದೇ ಬೇಡ. ಹಾಗಾಗಿ, ಆಗೀಗ ಅವರಿವರ ಗಾಡಿಗಳನ್ನು ಎರವಲು ಪಡೆದು ಹುಡುಗಿಯರು ಮನೆಗೆ ಫೋನ್ ಮಾಡಲು ಎಸ್‌ಟಿಡಿ ಬೂತ್‌ಗೋ, ಇಲ್ಲಾ ಬೇಕರಿ ತಿನಿಸುಗಳನ್ನು ತರಲು ಹತ್ತಿರದ ಏರಿಯಾಗಳಿಗೋ ಹೋಗುತ್ತಿದ್ದರು. ಅವರವರ ಯೋಗ್ಯತೆ ಮತ್ತು ಆಯ್ಕೆಗೆ ತಕ್ಕಂತೆ ಕಾಳಿದಾಸ ರಸ್ತೆ ಅಥವಾ ಸರಸ್ವತಿಪುರಂಗೆ ಹೋಗುತ್ತಿದ್ದರು. ಗಾಡಿ ಬೇಕಾದಾಗಲೆಲ್ಲ ವಿಜಿ ಮನೋಹರನನ್ನೇ ಬೇಡುತ್ತಿದ್ದಳು.

‘ಮನೋಹರ್’

‘ಏನ್ರೀ?’

‘ಸ್ವಲ್ಪ ಅರ್ಜೆಂಟ್ ನಿಂ ಲೂನಾ ಬೇಕಿತ್ರೀ’

‘ಅವೆಲ್ಲಾ ಆಗಲ್ಲ. ತಮಾಷೆನಾ? ನಿಂ ಕೈಗೆ ಲೂನಾ ಕೊಡೊಕ್ಕಾಗಲ್ಲ’

‘ನಾನ್ ಓಡ್ಸಲ್ಲರೀ. ರಶ್ಮಿ ಓಡಿಸ್ತಾಳೆ’

‘ಹಂಗ್ ಹೇಳಿ ಮತ್ತೆ. ಏನ್ ಅಂಥಾ ಅರ್ಜೆಂಟೂ?’

‘ಮೆಡಿಸಿನ್ ಬೇಕಿತ್ತು’

‘ಸರಿ ತಗೊಂಡು ಹೋಗಿ. ಬೇಗ್ ಬನ್ನಿ. ಈವತ್ತು ನುಗ್ಗೆ ಕಾಯಿ ಸಾರು. ಊಟ ಬೇಗ ಮುಗ್ದೋಗುತ್ತೆ’

ವಿಜಿಗೆ ಮನೋಹರ ಆ ದಿನ ನುಗ್ಗೆಕಾಯಿ ಸಾರು ಎಂದು ವಿಶೇಷವಾಗಿ ಹೇಳಲು ಕಾರಣವಿತ್ತು. ಸಿಕ್ಕಾಪಟ್ಟೆ ತರಕಾರಿ ಹಾಕಿ ಸಾರು ಮಾಡಿದ ದಿನ ಊಟದ ಟೈಮಿಗೆ ತರಕಾರಿ ಮತ್ತು ಸಾರನ್ನು ಬೇರ್ಪಡಿಸಿ ಇಡಲಾಗುತ್ತಿತ್ತು. ತರಕಾರಿಯನ್ನು ದೊಡ್ಡ ಬೋಗುಣಿಯಲ್ಲಿ ಇಟ್ಟು ಒಬ್ಬೊಬ್ಬರಿಗೆ ಇಂತಿಷ್ಟು ಹೋಳು ಎಂದು ಹಾಕಲಾಗುತ್ತಿತ್ತು. ಪಕ್ಕದಲ್ಲಿ ಸ್ಟೀಲು ಬಕೇಟಿನಲ್ಲಿ ಸಾರು ಹಬೆ ಉಗುಳುತ್ತಾ ಅನಾಥವಾಗಿ ಕೂತಿರುತ್ತಿತ್ತು. ಇದು ಕೂಡ ಇತ್ತೀಚೆಗೆ ಬಂದ ರೂಲ್ ಆಗಿತ್ತು. ಇದಕ್ಕೆ ಕಾರಣ ಪಾವಕ್ಕಿ ಅನ್ನ, ಅರ್ಧ ಲೀಟರ್ ಸಾರು ಉಂಡವರೇ... ಮೊದಲಿಗೆ ಊಟಕ್ಕೆ ಬಂದು ಎಲ್ಲ ತರಕಾರಿಯನ್ನು ಕುತ್ತಿಗೆ ಮಟ್ಟ ಬಾರಿಸುತ್ತಿದ್ದುದರಿಂದ ಈ ರೂಲು ಹಾಸ್ಟೆಲಿನ ಊಟಕ್ಕೂ ತತ್ವಾರ ಆಗುವಂತೆ ಬಂದಿತ್ತು.

‘ನಂ ಪಾಲಿನ್ ನುಗ್ಗೆಕಾಯಿ ಎತ್ತಿಟ್ಟಿರ್ರೀ ಮನೋಹರ್. ಬೇಗ ಬಂದ್ ಬಿಡ್ತೀವಿ...’ ಎಂದು ಹೇಳಿ ವಿಜಿ ಮನೋಹರನ ಲೂನಾ ಬೀಗದ ಕೈ ಅನ್ನು ಎತ್ತಿಕೊಂಡು ಹೊರಟಳು. ಮನೋಹರನ ಕಾಳಜಿ, ಜಗಳಗಂಟತನ ಮತ್ತು ಕಿರಿಕಿರಿ ಮಾಡುವ ಸಂಗತಿಗಳು ಸಾವಿರ ಇದ್ದರೂ ಊಟದ ವಿಷಯದಲ್ಲಿ ಅವನು ಮಾತ್ರ ಸಾಕ್ಷಾತ್ ಅನ್ನಪೂರ್ಣೆ. ವಿಶೇಷ ತರಕಾರಿ ಸಾರು, ಹುಳಿ ಮಾಡಿದ ದಿವಸ ಊಟಕ್ಕೆ ಬೇಗ ಬರುವಂತೆ ಹೇಳುತ್ತಿದ್ದ. ಇನ್ನು ಕೆಲವು ಸಾರಿ ಊಟ ಮುಗಿದು ಹೋದ ಪಕ್ಷದಲ್ಲಿ ಲೇಟಾಗಿ ಬಂದವರಿಗೇಂತ ಮಾಡಿದ ಚಿತ್ರಾನ್ನ, ಪುಳಿಯೋಗರೆ, ಫ್ರೈಡ್ ರೈಸ್ ಇತ್ಯಾದಿಗಳಲ್ಲಿ, ಊಟ ಮುಗಿಸಿಕೊಂಡು ಹೋದ ವಿಜಿ, ರಶ್ಮಿಯರಿಗೂ ಸ್ವಲ್ಪ ಎತ್ತಿಟ್ಟು ನೀಡುತ್ತಿದ್ದ. ರಿಂಕಿ ಬಂದ ಮೇಲೆ ಮನೋಹರನಿಗೆ ಸ್ವಲ್ಪ ಇರಿಸುಮುರುಸಾಗುತ್ತಿತ್ತು. ಇದಕ್ಕೆ ಕೆಲವು ಕಾರಣಗಳೂ ಇದ್ದವು. ಏಕೈಕ ಕಾರಣ ರಿಂಕಿಗೆ ಆದಷ್ಟು ಚೆನ್ನಾಗೇ ಅಡುಗೆ ಮಾಡಲು ಬರುತ್ತಿತ್ತು. ಹಾಗಾಗಿ ಇವನು ಮಾಡಿದ ಅಡುಗೆಯಲ್ಲಿನ ನ್ಯೂನತೆಗಳನ್ನು ಅವನ ಮುಖಕ್ಕೆ ಹೊಡೆಯುವಂತೆ ಹೇಳುತ್ತಿದ್ದಳು.

ಎರಡನೇಯದು ಒಡಿಶಾದಿಂದ ಬಂದಾಕೆಗೆ ಇಲ್ಲಿನ ಕರಿಬೇವು ಅಡುಗೆ ವಾಂತಿ ಬರುವಂತಾಗುತ್ತಿತ್ತು. ‘ಯಾರ್ ತೂ ಕಡೀಪತ್ತಾ ಕಾ ಝಾಡ್ ಡಾಲ್ ದೇತಾ ಹೈ ಖಾನೆ ಮೆ...’ (ಅಯ್ಯಾ, ನೀನು ಕರಿಬೇವಿನ ಗಿಡವನ್ನೇ ಅಡುಗೆಗೆ ಹಾಕುತ್ತೀಯಾ) ಎಂದು ಅವನ ಮುಖದ ಮೇಲಿನ ನಗು ಮಾಸುವ ಹಾಗೆ ರಪ್ಪಂತ ರಾಚಿಬಿಡುತ್ತಿದ್ದಳು. ವಿಜಿ-ರಶ್ಮಿಯರಿಗೆ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎನ್ನುವಂತೆ ನಡೆಯುತ್ತಿತ್ತು. ಏಕೆಂದರೆ, ಅವರಿಬ್ಬರೂ ಮನೋಹರನ ಋಣದಲ್ಲಿ ಇದ್ದರು. ಮತ್ತು ಮನೋಹರ ಸ್ವಲ್ಪ ಮಟ್ಟಿಗೆ ಅವರ ಋಣವೃತ್ತದಲ್ಲಿದ್ದರೂ ಇಲ್ಲದಂತೆ ನಡೆದುಕೊಳ್ಳುವ ಕಲೆ ಅವನಿಗೆ ಸಿದ್ಧಿಸಿತ್ತು.

ಪಕ್ಕದ ರೂಮಿನ ಕಾವೇರಿ, ಬೊಳ್ಳಮ್ಮ, ಇಂದುಮತಿ ತಮ್ಮ ಪಾಡಿಗೆ ಸಾಕಷ್ಟು ಕಿರಿಕಿರಿಯನ್ನೂ ಜಗಳಗಳನ್ನೂ ಆಡಿಕೊಂಡು ಸಾಮಾನ್ಯರಂತೆ ರಿಂಕಿ, ಈಂದುಮಾಟಿ ಅಲಿಯಾಸ್ ಇಂದುಮತಿ ಮತ್ತು ರಶ್ಮಿಯರಿಗೆ ಒಂದು ಬಗೆಯ ಸೇತುವೆ ಬೆಳೆಯುತ್ತಿತ್ತು. ಮೂವರ ಏಕ ರೂಪದ ಸಮಸ್ಯೆ ಎಂದರೆ ಕನ್ನಡ ಗೊತ್ತಿಲ್ಲದೆ ಇರುವುದು. ಮತ್ತು ಎಲ್ಲ ರೀತಿಯ ವ್ಯವಹಾರಕ್ಕೆ ವಿಜಿಯನ್ನೇ ಅವಲಂಬಿಸಬೇಕಾಗಿ ಬಂದುದು.

ಒಂದು ಹಂತಕ್ಕೆ ಬಾಯಿ ಬೊಂಬಾಯಿಯಾದ ವಿಜಿಗೂ ಹಮ್ ಕಿಸೀಸೆ ಕಂ ನಹಿ ಎನ್ನುವ ಈಂದುಮಾಟಿಗೂ ಕೈ ಕೈ ಹತ್ತಿ ಬಂದಿತ್ತು. ಆಮೇಲೆ ಇಬ್ಬರೂ ಎರಡು ವರ್ಷ ಒಬ್ಬರನ್ನೊಬ್ಬರು ನೋಡಿಕೊಂಡು ಇರಬೇಕಲ್ಲಾ ಎನ್ನುವ ಕಟು ಸತ್ಯವನ್ನು ಮನಗಂಡು ಸುಮ್ಮನಾಗಿದ್ದರು. ಅಲ್ಲದೆ, ಹೀಗೆ ಕೈ ಕೈ ಹತ್ತಿಸಿ ಜಗಳ ಆಡಿದರೆ ಹಾಸ್ಟೆಲಿನಿಂದ ಹೊರಗೆ ಹಾಕುತ್ತಾರೆ ಎನ್ನುವ ವಾಸ್ತವ ಬಹಳ ಅರಿವಿಗೆ ಬಂದ ಕ್ಷಣವೇ ಜ್ಞಾನೋದಯವಾಗಿದ್ದು ಸಕಲ ಇಂದ್ರಿಯಗಳನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಂಡಿದ್ದರು.

ಪರಿಸ್ಥಿತಿ ಸುಧಾರಿಸುತ್ತಾ ಹೋಗಿ ಇರುವಷ್ಟು ದಿನವೂ ಚೆನ್ನಾಗಿಯೇ ಇರೋಣ ಎಂದು ಎಲ್ಲರೂ ನಿರ್ಧಾರ ಮಾಡಿದಂತಿತ್ತು. ಹೀಗೆ ಆಗಾಗ ಮನೋಹರನ ಲೂನಾವನ್ನೋ, ಇನ್ಯಾರದೋ ಗಾಡಿಯನ್ನೋ ಎರವಲು ಪಡೆದು ತಿಂಗಳಲ್ಲಿ ಕೆಲವು ಬಾರಿ ಸಿಟಿಯ ಕಡೆ ಹೋಗುತ್ತಿದ್ದರು. ಈವತ್ತೂ ಮನೋಹರನ ಲೂನಾ ತೆಗೆದುಕೊಂಡದ್ದು ಸಿಟಿಗೆ ಹೋಗಬೇಕಂತಲೇ.

ರಶ್ಮಿ ಮತ್ತು ವಿಜಿ ಆವತ್ತು ಹೋಗಬೇಕಂತ ಅನ್ನಿಸಿದ್ದು ಕಾಳಿದಾಸ ರಸ್ತೆಗೆ. ಒಂದು ವೆಜ್ಜೂ ನಾನ್ವೆಜ್ಜೂ ಏಕ ಕಾಲದಲ್ಲಿ ಬೇಯುವಂಥಾ ಜಾಗಕ್ಕೆ ಹೋಗಿ ಮೊಟ್ಟೆ ಪಕೋಡ ತೆಗೆದುಕೊಂಡರು. ದುಡ್ಡು ಪಕೋಡಕ್ಕಾಗುವಷ್ಟಕ್ಕೇ ಇತ್ತು. ಅದರ ಬೆಲೆ 25 ರೂಪಾಯಿ ಇದ್ದಿರಬಹುದೇನೋ. ಇವರಿಬ್ಬರ ಹತ್ತಿರವೂ ಲೆಕ್ಕ ಹಾಕಿ ನೋಡಿದರೆ ಐದು ರೂಪಾಯಿ ಹೆಚ್ಚಿಗೆ ಇತ್ತು. ವಿಜಿ ವೇಟರನ ಟಿಪ್ಸು ಎಂದು ಐದು ರೂಪಾಯಿ ಬಿಟ್ಟಳು. ಆವತ್ತಿಗೆ ತಿಂಗಳಲ್ಲಿ ಅರ್ಧ ದಿನಗಳು ಮಾತ್ರ ಕಳೆದಿದ್ದವು. ಆದರೆ, ಇವರ ಕೈಯ್ಯಲ್ಲಿ ದುಡ್ಡು ನಿಲ್ಲುತ್ತಿರವಾದ್ದರಿಂದ ಅಲ್ಲಿಗೆ ಆ ತಿಂಗಳ ದುಡ್ಡು ಮುಗಿಯಿತು. ಇನ್ನು ಮನೋಹರನ ನುಗ್ಗೆಕಾಯಿ ಸಾರೇ ಪರಮಾನ್ನ ಎಂದುಕೊಂಡು ಮುಂದಿನ ತಿಂಗಳ ತನಕ ಮೊಟ್ಟೆ ಪಕೋಡಾದ ರುಚಿ ನೆನೆಸಿಕೊಳ್ಳುತ್ತಾ ಕಾಲ ಕಳೆಯಬೇಕು ಎಂದುಕೊಂಡು ನಿಟ್ಟುಸಿರು ಬಿಡುತ್ತಾ ಹೋಟೆಲಿನ ಮೆಟ್ಟಿಲು ಇಳಿದರು. ಕೆಳಗೆ ಬಂದಾಗ ನೋಡಿದರೆ, ಲೂನಾ ಬೀಗದ ಕೈ ಇಬ್ಬರ ಕೈಲೂ ಇರಲಿಲ್ಲ.

‘ಅಯ್ಯೋ! ಅಲ್ಲೇ ಟೇಬಲ್ ಮೇಲೆ ಬಿಟ್ ಬಂದ್ವಿ ಕಣೆ’ ಎಂದು ವಿಜಿ ರಶ್ಮಿಗೆ ಹೇಳಲಾಗಿ ರಶ್ಮಿ ಇಲ್ಲದ ಧಾವಂತದಲ್ಲಿ ಹೋಟೆಲಿನ ಮೆಟ್ಟಿಲು ಹತ್ತಲು ಓಡಿದಳು. ಹತ್ತು ನಿಮಿಷಗಳಾದರೂ ರಶ್ಮಿ ಕೆಳಗೆ ಬರಲಿಲ್ಲ.

ಅವಳಿಗೇನಾದರೂ ತೊಂದರೆ ಆಯಿತೋ ಎಂದುಕೊಂಡು ವಿಜಿ ಮೆಟ್ಟಿಲು ಹತ್ತಲು ಹೋಗುವುದಕ್ಕೂ ರಶ್ಮಿ ಕೆಳಗಿಳಿದು ಬರುತ್ತಿರುವುದು ಕಾಣಿಸಿತು.
‘ಯಾಕೆ? ಬೀಗ ಸಿಗಲಿಲ್ವಾ?’

‘ಸಿಕ್ತಪ್ಪಾ! ಅದೆಲ್ಲಿ ಹೋಗುತ್ತೆ?’

‘ಮತ್ತೆ ಇಷ್ಟು ಹೊತ್ತು ಏನ್ ಮಾಡ್ತಿದ್ದೆ?’

‘ವೇಟರ್ ಹತ್ರ ಮಾತಾಡ್ತಿದ್ದೆ’

‘ಯಾವೂರ್ ಬಾಮೈದ ಅವ್ನು ನಿಂಗೆ? ಅವ್ನ್ ಹತ್ರ ನಿಂದೇನು ಮಾತು?’

‘ಏನಿಲ್ಲ. ಸುಮ್ನೆ ಬಾ...ಇಲ್ಲಿಂದ ಮೊದ್ಲು ಹೋಗನ’ ಎನ್ನುತ್ತಾ ರಶ್ಮಿ ಲೂನಾ ಸ್ಟಾರ್ಟ್ ಮಾಡಿದಳು. ಹೆಚ್ಚಿಗೆ ಮಾತು ಬೆಳೆಸದೆ ವಿಜಿ ಪಿಲಿಯನ್ ಏರಿ ಕುಳಿತಳು. ಗಂಗೋತ್ರಿಯಿಂದ ಕಾಳಿದಾಸ ರಸ್ತೆಗೆ ಬರಬೇಕೆಂದರೆ ಕರ್ನಾಟಕ ಓಪನ್ ಯೂನಿವರ್ಸಿಟಿಯ ಹಿಂಭಾಗದ ಗೇಟಿನಿಂದ ವಾಹನಗಳು ಚಲಿಸುವ ಹಾಗೆ ಮಣ್ಣಿನ ದಾರಿ ಇತ್ತು. ಇವರಿಬ್ಬರೂ ಜಯಲಕ್ಷ್ಮೀಪುರಂನ ಮುಖ್ಯರಸ್ತೆಯಲ್ಲಿ ವಾಪಾಸು ಬರುತ್ತಿರುವಾಗ ಸೇಂಟ್ ಜೋಸೆಫ್ ಸ್ಕೂಲಿನ ಹತ್ತಿರ ಒಂದು ಪುಟ್ಟ ಐಸ್ಕ್ರೀಮಿನ ಅಂಗಡಿ ತೆರೆದಿತ್ತು.ರಶ್ಮಿ ಲೂನಾ ನಿಲ್ಲಿಸಿ ವಿಜಿಗೆ ಇಳಿಯುವಂತೆ ಸೂಚಿಸಿದಳು.

‘ಇಲ್ಲೇನ್ ಬಂದೆ?’

‘ಸೀರೆ ನೋಡನಾ ಅಂತ. ಚನ್ನಾಗಿರ್ತವಂತೆ ಇವನ್ ಹತ್ರ ಸಿಲ್ಕ್ ಸೀರೆಗಳು’

‘ಮುಚ್ಚೆ ಬಾಯಿ! ಐಸ್ಕ್ರೀಂ ಅಂಗಡಿ ಮುಂದೆ ಸರೊತ್ತಲ್ಲಿ ನಿಂತ್ಕಂಡು ಸೀರೆ ನೋಡ್ತಳಂತೆ’

‘ಮತ್ತೆ? ನಿನ್ನ್ ಮಕಕ್ಕೆ. ಐಸ್ಕ್ರೀಂ ಅಂಗ್ಡಿ ಅಂತ ಕಾಣುತ್ತೆ ತಾನೆ? ಇಲ್ಲೇನ್ ಬಂದೆ ಅಂದಿದ್ದು ಯಾವಳು?’

‘ಅದ್ ಸರಿ ಕಣೆ. ನಂ ಹತ್ರ ದುಡ್ಡಿಲ್ವಲ್ಲ?’

‘ಇಲ್ಲಾಂತಂದೋರು ಯಾರು?’

‘ನಾವೇ ಲೆಕ್ಕ ಹಾಕ್ಕೊಂಡು ಮೂವತ್ರುಪಾಯಿ ತರಲಿಲ್ವಾ?’

‘ಹೌದು’

‘ಮೊಟ್ಟೆ ಪಕೋಡಾಕ್ಕೆ 25 ರೂಪಾಯಿ ಆಯ್ತಲ್ವಾ?’

ಐದು ರೂಪಾಯಿ ಟಿಪ್ಸೂ ಬಿಟ್ವಿ. ಕೈ ಖಾಲಿ ಅಲ್ವಾ ಈಗ?’

‘ಇಲ್ಲ ಐದು ರೂಪಾಯಿ ಇದೆ’

‘ಯಾರ್ ಕೊಟ್ರು?’

‘ಆಮೇಲೆ ಹೇಳ್ತೀನಿ. ಈಗ ಮೊದ್ಲು ಐಸ್ಕ್ರೀಮ್ ತಗೊಳ್ಳೋಣ ಬಾ. ನಿಂಗೇನು ಬೇಕು? ಕ್ಯಾಂಡೀನಾ? ಅಥ್ವಾ ಕಪ್?’

‘ಯಾವ್ದೋ ಒಂದು ತಗೊಂಡು ಬಾ’.

ರಶ್ಮಿಯೇ ಹೋಗಿ ಐಸ್ಕ್ರೀಂ ತಗೊಂಡು ಬಂದಳು. ಭರ್ರಂತ ಲೂನಾ ಬಿಟ್ಟುಕೊಂಡು ಇಬ್ಬರೂ ಹಾಸ್ಟೆಲ್ ಸೇರಿ ಮೊದಲು ಐಸ್ಕ್ರೀಂ ಸವಿದರು. ನಂತರ ಮೊಟ್ಟೆ ಪಕೋಡಾ ನೆಂಜಿಕೊಂಡು ಅನ್ನ, ನುಗ್ಗೆಕಾಯಿ ಸಾರು ಬಾರಿಸಿದರು. ಹೊಟ್ಟೆ ಮಿತಿ ಮೀರಿ ತುಂಬಿ ಹೋಯಿತು.

‘ವಾಕ್ ಹೋಗೋಣ ಬರ್ತೀಯಾ?’ ರಶ್ಮಿ ವಿಜಿಯನ್ನು ಕೇಳಿದಳು.

‘ನಡಿ’...
ಇಂದು ಕಾಂಕ್ರೀಟ್ ಕಾಡಾಗುವ ಎಲ್ಲ ಲಕ್ಷಣಗಳನ್ನೂ ತೋರುತ್ತಿರುವ ಮಾನಸಗಂಗೋತ್ರಿಯ ಅಂದಿನ ಹುಣ್ಣಿಮೆ ರಾತ್ರಿ ತಂಗಾಳಿಯ ಸಿಹಿ ಸವಿದವರಿಗೇ ಗೊತ್ತು. ವಾಹನಗಳ ಸದ್ದಿಲ್ಲ. ಸುತ್ತಲೂ ಕಾಡಿನಂತೆ ಗಿಡ ಮರಗಳು. ಕತ್ತಲೆಂದರೆ ಕಪ್ಪು ಬಣ್ಣಕ್ಕೇ ಸವಾಲು ಹಾಕುವಂಥ ಕಗ್ಗತ್ತಲು. ಅಲ್ಲಲ್ಲಿ ಗೂಕ್ ಗೂಕ್ ಎನ್ನುವ ಗೂಬೆಗಳು. ಹುಡುಗಿಯರ ಮಾತುಗಳು, ನಗು-ಕೇಕೆ, ಅಲ್ಲಲ್ಲಿ ತೇಲಿ ಬರುವ ಹಾಡುಗಳು, ಹಾಸ್ಟೆಲಿನ ಕಾಂಪೋಂಡಿನ ಒಳಗೇ ವಾಕ್ ಮಾಡುತ್ತಿದ್ದರೂ ಇಡೀ ವಾತಾವರಣಕ್ಕೇ ಒಂದು ರೀತಿ ಸಂಭ್ರಮ. ಹೀಗೇ ನಡೆಯುತ್ತಾ ಇರುವಾಗ ಇದ್ದಕ್ಕಿದ್ದ ಹಾಗೆ ವಿಜಿ ರಶ್ಮಿಯನ್ನು ಕೇಳಿದಳು.
‘ಅಲ್ಲಾ ಕಣೆ, ಐಸ್ಕ್ರೀಮ್ ತಗೊಳ್ಳಕ್ಕೆ ಎಕ್ಸ್ಟ್ರಾ ದುಡ್ಡು ಎಲ್ಲಿಂದ ಬಂತು ನಿನ್ ಹತ್ರ?’

‘ಅಯ್ಯೋ, ಅದನ್ನ ಆಗಲೇ ತಿಂದಾಯ್ತಲ್ಲ. ಅದಾದ ಮೇಲೆ ಒಳ್ಳೆ ಊಟ ಕೂಡ ಆಯ್ತು. ಇನ್ನು ಸ್ವಲ್ಪ ಹೊತ್ತಲ್‌ ಚೆನ್ನಾಗಿ ನಿದ್ದೆ ಮಾಡೋದು ಬಿಟ್ಟು ನಿನ್ನದೆಂಥದ್ದೇ ಪ್ರಶ್ನೆ?’

‘ಹಂಗಲ್ಲ ಕಣೆ. ಸರಿಯಾಗಿ ಎಣಿಸಿಕೊಂಡು ಹೋಗಿದ್ದೆವಲ್ವಾ? ಮತ್ತೆ ಹೆಚ್ಚಿಗೆ ಕಾಸು ಎಲ್ಲಿಂದ ಬಂತು ಅಂತ’
‘ಅದೆಲ್ಲಾ ಹೇಳಲೇ ಬೇಕಾ?’

‘ಹೇಳೋಕೆ ಇಷ್ಟ ಇಲ್ಲಾಂದ್ರೆ ಬಿಡು’

‘ಅಯ್ಯಯ್ಯ...ಹಂಗೇನಿಲ್ಲ. ಹೇಳಿದ್ರೆ ನೀನು ಬೇಜಾರು ಮಾಡಿಕೊಳ್ಳಲ್ಲ ಅಂತ ಮಾತು ಕೊಡ್ತೀಯಾ?’

ವಾಕ್ ಮಾಡುತ್ತಿದ್ದ ವಿಜಿ ಗಕ್ಕನೆ ನಿಂತಳು. ಕಳೆದ ಸಾರಿ ರಶ್ಮಿ ಹಿಂಗೆ ಮೊದಲಿಗೇ ‘ಬಯ್ಯಲ್ಲಾಂತ ಮಾತು ಕೊಡು’ ಅಂತ ಕೇವಿಯಟ್ ಹಾಕಿಕೊಂಡಾಗಲೇ ಒಂದು ಅನಾಹುತ ಕುತ್ತಿಗೆಗೆ ಬರುವುದರಲ್ಲಿ ಮಿಸ್ ಆಗಿತ್ತು. ಈಗ ಯಾವ ಹೊಸ ಬಾಣ ಪ್ರಯೋಗವಾಗಲಿದೆ ಎಂದು ಚಿಂತಿಸುತ್ತಲೇ ವಿಜಿ ಕೇಳಿದಳು.

‘ಏನ್ ಮಾಡಿದೆ ಈಗ?’

‘ಇಲ್ಲ ಏನಿಲ್ಲ. ತೊಂದರೆ ಆಗುವಂಥದ್ದಲ್ಲ’

ಬರುವುದೆಲ್ಲ ಬರಲಿ, ಜೀವನ ಹಿಂಗೇ ಇರಲಿ ಎಂದು ನಿಡಿದಾದ ಉಸಿರು ಬಿಟ್ಟು ಹೇಳಿದಳು.

‘ಹೇಳಮ್ಮ ಮಹಾತಾಯಿ’

ರಶ್ಮಿ ಲೂನಾ ಕೀ ತರಲು ಮೇಲೆ ಹೋದಳಲ್ಲ, ಆಗ ಇವರು ಬಿಲ್ ಕೊಟ್ಟ ಫೋಲ್ಡರ್ ಅಲ್ಲೇ ಇತ್ತಂತೆ. ತೆಗೆದು ನೋಡಿದರೆ ಐದು ರೂಪಾಯಿಯೂ ಮುಗ್ಧ ಮಗು ನಿದ್ದೆ ಮಾಡುತ್ತಿರುವ ಹಾಗೆ ನೀಟಾಗಿ ಒಳಗೆ ಬೆಚ್ಚಗೆ ಮಲಗಿತ್ತು. ಅದನ್ನು ನೋಡಿದ ಕೂಡಲೆ ರಶ್ಮಿಗೆ ಐಸ್ಕ್ರೀಮಿನ ಚಿತ್ರ ಕಣ್ಮುಂದೆ ಬಂದು ಲಾಲಾರಸ ಸ್ರವಿಸಿ, ನಾಲಿಗೆ ಥೈ ಥೈ ಮಾಡತೊಡಗಿತು. ಆಚೀಚೆ ನೋಡಿದಳು. ಯಾರೂ ಗಮನಿಸುವಂತೆ ಕಾಣಲಿಲ್ಲ. ಮೆಲ್ಲಗೆ ಐದು ರೂಪಾಯಿ ಎತ್ತಿಕೊಂಡಳು.

ಅಷ್ಟು ಹೊತ್ತಿಗೆ ಸರಿಯಾಗಿ ಇವರ ಪಾರ್ಸಲ್ ಕಟ್ಟಿದ ವೇಟರ್ ಬಂದುಬಿಟ್ಟ. ಇವಳು ದುಡ್ಡು ತಗೊಳ್ಳೋದನ್ನ ನೋಡಿ ದೊಡ್ಡ ಕಣ್ಣು ಮಾಡಿ ‘ಏನ್ರೀ ಅದು?’ ಅಂದ.

ಇವಳು ಮೊದಲೇ ಮಳ್ಳಿ. ‘ಏನಿಲ್ಲ, ಸ್ವಲ್ಪ ಈ ಕಡೆ ಬನ್ನಿ. ಜೋರಾಗಿ ಮಾತಾಡಬೇಡಿ’ ಅಂದು ಜನವಿಲ್ಲದ ಜಾಗದಲ್ಲಿ ಬಾಗಿಲ ಹತ್ತಿರ ನಿಂತಳು.
‘...ಅದೂ ನಿಮಗೆ ಅಂತ ಟಿಪ್ಸ್ ಬಿಟ್ಟಿದ್ವಲ್ಲ... ಆ ದುಡ್ಡು ಬೇಕಿತ್ತು ಸರ್. ನೀವು ಒಪ್ಪಿದ್ರೆ ತಗೊಳ್ತೀನಿ’

ಒಳ್ಳೆಯ ತನವನ್ನು ಪರೀಕ್ಷೆಗೆ ಒಡ್ಡುವ ಸಂದರ್ಭ ಬಂದಾಗ ಮೌನವಾಗಿದ್ದುಬಿಟ್ಟರೆ ಎಷ್ಟೋ ಸಮಸ್ಯೆಗಳು ತಾವಾಗೇ ಬಗೆಹರಿದುಬಿಡುತ್ತವಲ್ಲ, ಹಾಗೆ ಅವನೂ ಸುಮ್ಮನಿದ್ದ.

‘ನನ್ ಫ್ರೆಂಡ್ ಬಂದಿದ್ಲಲ್ಲ? ಅವಳಿಗೆ ಹುಣ್ಣಿಮೆ ದಿನ ತುಂಬಾ ಟೆನ್ಷನ್ ಆಗುತ್ತೆ ಸರ್. ಊಟಕ್ಕೆ ಮೊಟ್ಟೆ ಕೊಟ್ಟು ಆಮೇಲೆ ಗುಳಿಗೆ ಕೊಡ್ಬೇಕು. ಮೊಟ್ಟೆ ಇಲ್ಲೇ ತಗೊಂಡ್ವಲ್ಲ? ಗುಳಿಗೆ ತಗೊಳ್ಳೋದು ಮರ್ತು ಹೋಯ್ತು. ಈಗ ನೋಡಿದ್ರೆ ದುಡ್ಡಿಲ್ಲ ಅಂತಾಳೆ’

ಮೊದಲನೆ ಫ್ಲೋರಿನ ಹೋಟಲಿನಿಂದ ವೇಟರ್ ಬಗ್ಗಿ ಕೆಳಗೆ ನೋಡಿದ. ವಿಜಿ ಲೂನಾ ಪಕ್ಕ ನಿಂತಿದ್ದು ಕಾಣಿಸಿತು.

‘ಗುಳಿಗೆ ಕೊಟ್ಟಿಲ್ಲ ಅಂದ್ರೆ ಏನಾಗುತ್ತೆ?’

‘ರಾತ್ರಿಯೆಲ್ಲ ಕೂಗಾಡ್ತಾಳೆ ಸರ್’

‘ಅಯ್ಯೋ ದೇವ್ರೆ, ಮೊದ್ಲು ಈ ದುಡ್ಡು ತಗೊಂಡು ಹೋಗಿ ಗುಳಿಗೆ ಕೊಡಿಸ್ರೀ’ ಅಂದ. ಇಷ್ಟನ್ನೂ ಹೇಳಿ ಮುಗಿಸುವ ಹೊತ್ತಿಗೆ ರಶ್ಮಿ ವಿಜಿಯಿಂದ ಸ್ವಲ್ಪ ದೂರವೇ ನಿಂತಿದ್ದಳು. ವಿಜಿಗೆ ಸಿಟ್ಟು-ನಗು ಒಟ್ಟೊಟ್ಟಿಗೇ ಬರುತ್ತಿತ್ತು. ಓಡಿ ಹೋಗಿ ರಶ್ಮಿಯ ಬೆನ್ನ ಮೇಲೆ ಢಂ ಎಂದು ಗುದ್ದಿ ನಗಲು ಶುರು ಮಾಡಿದಳು. ಗುದ್ದಿಸಿಕೊಂಡ ರಭಸಕ್ಕೆ ರಶ್ಮಿಗೆ ಉಸಿರೇ ನಿಂತಂತಾಯಿತು.

‘ಕರ್ಮ... ಐಸ್ಕ್ರೀಮ್ ಕೊಡಿಸಿದ್ರೂ ನಮಗೇ ಹೊಡ್ತ ಬೀಳುತ್ತೆ. ಇದಕ್ಕೆ ಒಳ್ಳೆಯವರಿಗೆ ಕಾಲ ಇಲ್ಲ ಅನ್ನೋದು..’ ಎಂದು ಗೊಣಗುತ್ತಾ ಬೆನ್ನು ಉಜ್ಜಿಕೊಂಡಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT