ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಸತ್ಯ ಮತ್ತು ಅಸಹಜ ಭಯ

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಇದೊಂದು ತೀರಾ ಸರಳವಾದ ಕಥೆ. ಇದನ್ನು ಕಥೆ ಎನ್ನುವುದೂ ತಪ್ಪು. ಇದು ಎಲ್ಲ ಹೆಣ್ಣುಗಳ ಕನಸು, ಕನವರಿಕೆ. ಹೆಣ್ಣುಮಕ್ಕಳು ಅದರಲ್ಲೂ ಸ್ತ್ರೀವಾದಿಗಳು ಎಲ್ಲವನ್ನೂ ಭೂತಕನ್ನಡಿಯಲ್ಲಿ ನೋಡುತ್ತಾ ಅತಿ ಮಾಡುತ್ತಾರೆ, ಕಾಲ ಬದಲಾಗಿಲ್ಲವೆ, ಗಂಡೂ ಬದಲಾಗಿಲ್ಲವೆ? ಎಲ್ಲ ಅವಕಾಶಗಳು ಅವರಿಗೂ ಸಿಗುತ್ತಿಲ್ಲವೆ? ಇನ್ನೇನು ಗುನುಗು ಎನ್ನ್ನುವವರು ಅಲ್ಲಿ ಇಲ್ಲಿ ಅಲ್ಲ, ನಮ್ಮ ಮನೆಯಲ್ಲೇ ಇರುತ್ತಾರಲ್ಲ. ಅವರೆಲ್ಲ ಸುಮ್ಮನೆ ಅವರ ಏಕಾಂತದಲ್ಲಿ ಓದಿ, ಅವರನ್ನು, ಅವರ ನಿಜದಲ್ಲಿ ನೋಡಿಕೊಳ್ಳಬಹುದಾದ ಕನ್ನಡಿಯ ಹಾಗಿದೆ ಈ ಕಥೆ.

ಬಿ.ಎಂ. ಸುಹರಾ ಮಲೆಯಾಳದ ಪ್ರತಿಭಾವಂತ ಕಥೆಗಾರ್ತಿಯರಲ್ಲಿ ಒಬ್ಬರು. ‘ಕಿನಾವ್’ ಇವರ ಮುಖ್ಯವಾದ ಕಾದಂಬರಿಗಳಲ್ಲಿ ಒಂದು. ಇದನ್ನು ಸಾರಾ ಅಬೂಬಕರ್ ‘ಬಲೆ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಇರುಟ್ಟು’ (ಕತ್ತಲು), ‘ನಿಲಾವ್’ (ಬೆಳದಿಂಗಳು) ಮೊದಲಾದ ಕಾದಂಬರಿಗಳನ್ನೂ ಕೆಲವು ಕಥಾ ಸಂಕಲನಗಳನ್ನೂ ಸುಹರಾ ಪ್ರಕಟಿಸಿದ್ದಾರೆ. ಮಲೆಯಾಳದ ಪ್ರಸಿದ್ಧ ವಿಮರ್ಶಕ ಬಶೀರ್ ಇವರ ಪತಿ.

‘ಹುಚ್ಚು’ ಎನ್ನುವುದು ಈ ಕಥೆಯ ಹೆಸರು. ಈ ಕಥೆಯನ್ನು ಓದುವವರಿಗೆ ಸಹಜವಾಗಿಯೇ ಬರ್ನಾಡ್ ಷಾನ ಮಾತೊಂದು ನೆನಪಾಗುತ್ತದೆ. ‘ಮನುಷ್ಯ ಹುಲಿಯನ್ನು ಕೊಂದರೆ ಅದು ಶೌರ್ಯ, ಹುಲಿ ಮನುಷ್ಯನನ್ನು ಕೊಂದರೆ ಅದು ಕ್ರೌರ್ಯ’. ಗಂಡು ಹೆಣ್ಣಿನ ನಡುವಿನ ಅಧಿಕಾರ ನಿರ್ದೇಶಿತ ಸಂಬಂಧಕ್ಕೂ ಈ ಮಾತು ಸರಿಯಾಗಿಯೇ ಅನ್ವಯಿಸುತ್ತದೆ.

ಅವಳು ಯಃಕಶ್ಚಿತ್ ಎಂದು ತಿರಸ್ಕಾರಕ್ಕೆ ಒಳಗಾಗುವ ಗೃಹಿಣಿಯೇ ಇರಲಿ, ಕಂಪನಿಯೊಂದರ ಸಿಇಒ ಆಗಿರಲಿ ಅವಳನ್ನು ಮೊದಲು ಗಮನಿಸುವುದೇ ಸಂಸಾರದ ಆಗುಹೋಗುಗಳನ್ನು ಅವಳ ಪರಮಾತಿಪರಮ ಕರ್ತವ್ಯವೆಂದು ಅಥವಾ ಅದು ಅವಳ ವ್ಯಕ್ತಿತ್ವದ ಅಭಿನ್ನ ಭಾಗವೆಂದು. ಗಂಡಸರೂ ಸಂಸಾರದ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಿದ್ದಾರೆ, ನಿಧಾನವಾಗಿ ಗಂಡು ಹೆಣ್ಣಿನ ಸಮೀಕರಣದ ವಿನ್ಯಾಸಗಳು ಬದಲಾಗುತ್ತಿವೆ ಎನ್ನುವುದು ನಿಜ.

ಆದರೆ ಪೆಪ್ಸಿ ಕಂಪನಿಯ ಸಿಇಒ ಇಂದ್ರಾ ನೂಯಿ ಅವರ ಸಂದರ್ಶನದ ಸಾಮಾನ್ಯ ಸ್ವರೂಪ ಹೇಗಿರುತ್ತದೆ? ಈ ಸಂದರ್ಶನ  ಮಾಡುವ ಯಾರೂ ಮರೆಯದೇ ಕೇಳುವ ಒಂದು ಪ್ರಶ್ನೆ ಇದೆ ಎಂದಾದರೆ ಅದು ಯಾವುದು? ಇದನ್ನು ಕ್ಷಣ ಮಾತ್ರವೂ ಯೋಚನೆ ಮಾಡದೆ ನಾವು ಹೇಳಬಹುದು. ‘ನೀವು ಸಂಸಾರ ಮತ್ತು ವೄತ್ತಿ ಎರಡನ್ನೂ ಹೇಗೆ ನಿಭಾಯಿಸುತ್ತೀರಿ?’.

ಇದಕ್ಕೆ ಸಂಬಂಧಿಸಿದ ಉಪಪ್ರಶ್ನೆಗಳು ಸಾಮಾನ್ಯವಾಗಿ ಹೀಗಿರುತ್ತವೆ... ‘ಕಷ್ಟವಾಗುವುದಿಲ್ಲವೆ? ಮನೆಯವರ ಸಹಕಾರವಿದೆಯೆ? ತಾಯಿಯಾಗಿ ಮಕ್ಕಳಿಗೆ ಎಲ್ಲವನ್ನೂ ಕೊಟ್ಟಿದ್ದೀರಿ ಎನ್ನುವ ತೃಪ್ತಿ ನಿಮಗಿದೆಯೆ?’– ಇಂಥ ಪ್ರಶ್ನೆಗಳನ್ನು ಗಂಡಸರಿಗೆ ಕೇಳುವುದನ್ನು ಊಹಿಸಿಕೊಳ್ಳುವುದೇ ಅಸಂಬದ್ಧವಾಗಿ ಕಾಣಿಸುತ್ತದೆಯಲ್ಲವೆ?

ಹೆಣ್ಣು ಮತ್ತು ಸಂಸಾರದ ನಡುವೆ ಇರುವ ಕರುಳುಬಳ್ಳಿಯ ಸಂಬಂಧ ಅವಳ ಜೀವನ ಕೇಂದ್ರಗಳಲ್ಲಿ ಒಂದು ಮಾತ್ರವಲ್ಲ ಅವಳ ಶಕ್ತಿ ಕೇಂದ್ರವೂ ಹೌದು. ಆದರೆ ಅದನ್ನು ಯಾವ ಅಧಿಕೃತತೆಯಿಲ್ಲದೆ, ಮನ್ನಣೆಯಿಲ್ಲದೆ ಅವಳು ನಡೆಸಬೇಕು. ಅದು ಅವಳು, ಅವಳು ಮಾತ್ರವೇ ಮಾಡಬೇಕು ಎನ್ನುವ ನೂರು ಕೆಲಸಗಳು ಹೆಣ್ಣಿನ ಎದುರಿಗೆ ಪ್ರತಿಗಳಿಗೆಯೂ ಸಾಲುಗಟ್ಟಿ ನಿಂತಿರುತ್ತವೆ.

ಇದು ಬಹುಪಾಲು, ನೂರಕ್ಕೆ ತೊಂಬತ್ತರಷ್ಟು ಎಂದು ಧಾರಾಳವಾಗಿ ಹೇಳಬಹುದಾದ ಪ್ರಮಾಣದಲ್ಲಿ ಈಗಲೂ ಜಾರಿಯಲ್ಲಿದೆ. ಗಂಡು ಹೆಣ್ಣು ಇಬ್ಬರೂ ಮನೆಯ ಕೆಲಸಗಳನ್ನು ಅಹಂಕಾರಗಳಿಲ್ಲದೆ ಮಾಡುವ ಕುಟುಂಬಗಳು ಈಗಲೂ ಅಲ್ಪಸಂಖ್ಯಾತ ಎನ್ನುವುದನ್ನು ಗಮನಿಸಿದರೆ ಹೆಣ್ಣಿನ ಹೋರಾಟದ ನಿರಂತರತೆ ಮತ್ತು ಸವಾಲುಗಳ ವಾಸ್ತವ ಅರಿವಿಗೆ ಬರುತ್ತದೆ.

ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಮತ್ತು ಅವರ ಹೆಂಡತಿ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರನ್ನೂ ಸಂದರ್ಶನ ಮಾಡಿದ ಪತ್ರಕರ್ತೆಯೊಬ್ಬಳು ‘ಶೂಟಿಂಗ್ ಮುಗಿದ ಮೇಲೆ ನಿಮ್ಮ ದಿನಚರಿ ಏನು?’ ಎಂದು ಕೇಳಿದಳು. ಮೃಣಾಲ್ ಸೇನ್‌ರನ್ನೇ ದಿಟ್ಟಿಸುತ್ತಾ ಆಕೆ ಉತ್ತರಿಸಿದರು– ‘ಅವರು ರೆಸ್ಟ್ ಮಾಡೋಕೆ ರೂಮಿಗೆ ಹೋಗ್ತಾರೆ, ನಾನು ರಾತ್ರಿಯ ಅಡುಗೆ ಮಾಡೋಕೆ ಅಡುಗೆ ಮನೆಗೆ’.


ಮೃಣಾಲ್ ಸೇನ್‌ರ ಮುಖದಲ್ಲಿ ಮುಗುಳ್ನಗೆ ಇತ್ತು ಎಂದು ಪತ್ರಕರ್ತೆ ಬ್ರಾಕೆಟ್‌ನಲ್ಲಿ ಬರೆದಳು. ಎಂದೋ ಓದಿದ ಈ ಸಂದರ್ಶನ ನೆನಪಿಗೆ ಬರುತ್ತಿರುವುದು ಈಗಲೂ ಪರಿಸ್ಥಿತಿ ತುಂಬಾ ಏನು ಬದಲಾಗಿಲ್ಲ ಅಲ್ಲವೇ ಎನ್ನುವುದಕ್ಕಿರಬೇಕು. ಇನ್ನೊಬ್ಬ ಮುಖ್ಯ ನಿರ್ದೇಶಕಿ ಅಪರ್ಣಾ ಸೇನ್‌ರ ಸಂದರ್ಶನವನ್ನೂ ಇದೇ ಸುಮಾರಿನಲ್ಲಿ ಓದಿದ್ದೆ.

‘ಇವತ್ತಿನ ಚಿತ್ರೀಕರಣಕ್ಕೆ ನಟ ನಟಿಯರು, ತಂತ್ರಜ್ಞರು ಈ ಎಲ್ಲರೂ ಬರುತ್ತಾರೋ ಇಲ್ಲವೋ ಎನ್ನುವುದರ ಜೊತೆಗೇ ಮನೆಯಲ್ಲಿ ಗ್ಯಾಸ್ ಮುಗಿದಿದೆ, ಸಿಲಿಂಡರ್ ಬುಕ್ ಮಾಡಬೇಕು ಅನ್ನುವುದನ್ನೂ ನಾನು ಯಾವ ಕಾರಣಕ್ಕೂ ಮರೆಯೋಕ್ಕೆ ಸಾಧ್ಯವಿಲ್ಲ’. ಈ ಎಲ್ಲವನ್ನೂ ಊಹಿಸಲಸಾಧ್ಯವಾದ ದಕ್ಷತೆಯಲ್ಲಿ ಹೆಣ್ಣು ನಿಭಾಯಿಸುತ್ತಾಳೆ. ಆದರೆ ಪ್ರಶ್ನೆ ಇರುವುದು ಅದು ಅವಳನ್ನು ಕುರಿತ, ಅವಳ ಪಾತ್ರ ನಿರ್ವಹಣೆಯನ್ನು ಕುರಿತ ಕರಾರಾಗುವುದರಲ್ಲಿ ಮತ್ತು ಅದನ್ನು ನಿರೀಕ್ಷಿಸುವುದು ಗಂಡಿನ ಹಕ್ಕು ಎನ್ನುವ ದೃಷ್ಟಿಕೋನದಲ್ಲಿ.

ಇದು ಇರಬೇಕಾದ್ದೇ ಹೀಗೆ ಎನ್ನುವ ನೆಲೆ ಹೆಣ್ಣಿನ ಕೊನೆಯಿಲ್ಲದ ಈ ಗೃಹವ್ಯಾಪಾರವನ್ನು ಅನಧಿಕೃತಗೊಳಿಸುತ್ತಾ ಅದರ ಮೌಲ್ಯವನ್ನು ಅಪಮೌಲ್ಯ ಗೊಳಿಸುತ್ತಾ ಹೋಗುತ್ತದೆ. ಅವಳ ವ್ಯಕ್ತಿತ್ವವನ್ನು ಕುಬ್ಜಗೊಳಿಸುವ ಕ್ರೌರ್ಯವನ್ನು ಅಧಿಕೃತಗೊಳಿಸುವ ಈ ಮೌಲ್ಯವ್ಯವಸ್ಥೆ ನಾಗರಿಕತೆ ಸೃಷ್ಟಿಸಿರುವ, ಕಟ್ಟಿರುವ ವ್ಯವಸ್ಥೆಗಳಲ್ಲೆಲ್ಲಾ ಕುಟುಂಬವೇ ಅತಿ ಶ್ರೇಷ್ಠ ಎಂದು ಬೀಗುತ್ತದೆ. ನಮ್ಮ ಪ್ರಾಥಮಿ ಕ ಶಾಲೆಗಳ ಬಸವ – ಕಮಲ ಏನು ಮಾಡುತ್ತಾರೆ ಎನ್ನುವುದು ಪೂರ್ತಿಯಾಗಿ ಬದಲಾಗಿಲ್ಲ ಎನ್ನುವುದೇ ವಾಸ್ತವವನ್ನು ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ.

ಅರೆ ಏನು ಮಾಡುತ್ತಿದ್ದೀ ನೀನು?
ಮರೆತೇ ಹೋಯಿತೆ ನೀನು ಹುಡುಗಿ ಎಂದು?
ಕಣ್ತೆರೆದರೆ, ಕನಸು!
ಕನಸಿನ ಮೇಲೂ ಇವರ ದಬ್ಬಾಳಿಕೆಯೆ?
ಇರಲಿ ಬಿಡು, ನಿದ್ದೆ ಎಚ್ಚರಗಳಲ್ಲಿ ನಾನು ಹೆಣ್ಣೆಂದು ಮರೆಯದಿರುವುದು ಒಳ್ಳೆಯದು
ನನಗೆ, ನನಗಿಂತ ಹೆಚ್ಚಾಗಿ ಇವರಿಗೆ

ಎನ್ನುವ ಕವಿತೆಯೊಂದರ ಸಾಲುಗಳು ನೆನಪಾಗುತ್ತವೆ. ಸುಹಾರ ಅವರ ಕಥೆ ಈ ಕವಿತೆಯ ವಿವರಣೆಯಂತಿದೆ. ಒಂದಾನೊಂದು ದಿನ, ಈ ಕಥೆಯ ನಾಯಕಿಗೆ ಅಲಾರಾಂ ಕೇಳಿದರೂ ಏಳಬೇಕು ಅನಿಸುವುದಿಲ್ಲ. ವರ್ಷಗಟ್ಟಲೆಯಿಂದ ದೇಹಕ್ಕೆ, ಮನಸ್ಸಿಗೆ ಏನೇ ನೋವಾಗಿದ್ದರೂ ಅಲಾರಾಂ ಕೇಳಿದ ತಕ್ಷಣ ಎದ್ದು ತನ್ನ ಕೆಲಸಗಳನ್ನು ಅರ್ಥಾತ್ ಮನೆಯ ಕೆಲಸಗಳನ್ನು ಅರ್ಥಾತ್ ಗಂಡ ಮಕ್ಕಳ ಕೆಲಸಗಳನ್ನು, ಅವರಿಗೆ ತಿಂಡಿ, ಕಾಫಿ, ಹಾಲು, ಊಟದ ಡಬ್ಬಿ, ಯೂನಿಫಾರಂ, ಪಾತ್ರೆ, ಬಟ್ಟೆ, ಕಸ... ಇತ್ಯಾದಿ ಶುರುವಾಗಬೇಕು.

ಆದರೆ ಅವತ್ತು ಯಾಕೋ ಅವಳಿಗೆ, ಯಾಕೆ ಅಂತ ಗೊತ್ತಿಲ್ಲ, ಏಳಬೇಕು ಅಂತಾಗಲೀ, ಕಷ್ಟಪಟ್ಟಾದರೂ ಎಲ್ಲವನ್ನೂ ಮಾಡಬೇಕು ಅಂತಾಗಲೀ ಮನಸ್ಸಾಗುತ್ತಿಲ್ಲ. ದೇಹ -ಮನಸ್ಸು ಎರಡೂ ಪ್ರತಿಭಟಿಸುತ್ತಿವೆ. ಯಾವತ್ತಿಂದ ಇತ್ತೋ ಮನಸ್ಸಿನಲ್ಲಿ ಆ ಪ್ರಶ್ನೆ, ಅದು ಇವತ್ತು ಪ್ರಕಟವಾಗಿದೆ.

ನಾನು ಒಂದು ದಿನ ಬೇಗ ಏಳದಿದ್ದರೆ, ಎಂದೂ ಮುಗಿಯುವುದೆಂದೇ ತೋರದ ದಿನನಿತ್ಯದ ಕೆಲಸಗಳನ್ನು ಮಾಡದಿದ್ದರೆ ಏನಾಗುತ್ತದೆ? ಭೂಮಿ ತನ್ನ ಚಲನೆಯನ್ನು ನಿಲ್ಲಿಸುತ್ತದೆಯೆ? ಆಕಾಶ ಕಳಚಿ ಬೀಳುತ್ತದೆಯೆ? ಪ್ರಶ್ನೆ ಸ್ಪಷ್ಟವಾದದ್ದೇ ಅವಳು ಹೊದಿಕೆಯನ್ನು ಇನ್ನಷ್ಟು ಎಳೆದು ಹೊದ್ದುಕೊಂಡು ಮತ್ತೆ ಮಲಗುತ್ತಾಳೆ.

ಗಂಡನಿಗೆ ಎಚ್ಚರವಾಗಿ, ಹೆಂಡತಿಯನ್ನು ಅಲುಗಾಡಿಸಿ, ‘ನೋಡು, ಅಲಾರಾಂ ಹೊಡೆದುಕೊಳ್ತಾ ಇದೆ, ಏಳು’ ಅಂದ. ಪ್ರಶ್ನೆ ಬುದ್ಧಿ ಭಾವ ಎರಡಕ್ಕೂ ಸ್ಪಷ್ಟವಾಗಿತ್ತಲ್ಲ, ಹೆಂಡತಿ ಉತ್ತರಿಸಿದಳು– ‘ನೀವು ಏಳಿ’. ರಾಯರು ಎದ್ದು ಲೈಟ್ ಹಾಕಿ, ಹೆಂಡತಿಯ ಹೊದಿಕೆ ಸರಿಸಿ, ತನ್ನ ಆಜನ್ಮಸಿದ್ಧ ಹಕ್ಕಿನ ಧ್ವನಿಯಲ್ಲಿ ‘ಎದ್ದು ಚಹಾ ಮಾಡು’ ಎಂದ.

ಯಾವಾಗ ಹೆಂಡತಿ ಏಳುವುದು ಸಾಧ್ಯವಿಲ್ಲ ಅಂದಳೋ ಆತನಿಗೆ ತುಸು ದಿಗಿಲಾಯಿತು. ಧ್ವನಿ ಎತ್ತರಿಸಿ, ‘ನಿನಗೇ ಹೇಳಿದ್ದು ಚಹಾ ಮಾಡು’ ಅಂತ ಅಂದಿದ್ದೇ, ಅವಳು ತಾನು ಬಿಲ್ ಕುಲ್ ಚಹಾ ಮಾಡುವುದಿಲ್ಲ ಅಂತಲೂ ಆತನೇ ಹೋಗಿ ಚಹಾ ಮಾಡಬೇಕು ಅಂತಲೂ ಅವಳನ್ನು ಸಿಟ್ಟಿಗೇಳಿಸಬಾರದು ಅಂತಲೂ ಉದ್ದಕ್ಕೆ ಹೇಳುತ್ತಾಳೆ.

ಬದಲಾದ ಅವಳ ನೋಟವನ್ನು ಎದುರಿಸಲಾಗದೇ ಗಂಡ ಹೋಗಿ ಚಹಾ ಮಾಡಿ ತರುತ್ತಾನೆ. ಅವನು ಚಹಾ ಮಾಡಿ ತಂದ ಮೇಲೆ ಅವಳಿಗೆ ಅನಿಸುತ್ತದೆ, ಹದಿನೈದು ವರ್ಷಗಳ ದಾಂಪತ್ಯದಲ್ಲಿ ಈ ತನಕ ಒಮ್ಮೆಯಾದರೂ ನಾನು ಯಾಕೆ ಇದನ್ನು ಪ್ರಯೋಗಿಸಲಿಲ್ಲ ಎಂದು. ಗಂಡ ಸಿಟ್ಟಿನಿಂದ ಚಹಾ ಇಟ್ಟು ಹೋದ ಮೇಲೆ ಎಷ್ಟೋ ವರ್ಷಗಳ ಬಳಿಕ ಹಾಸಿಗೆಯಲ್ಲಿ ಕುಳಿತು ಚಹಾ ಕುಡಿಯುತ್ತಿರುವ ತನ್ನ ಸೌಭಾಗ್ಯವನ್ನು ಆನಂದಿಸುತ್ತಾಳೆ.

ಚಹಾ ಕುಡಿದು ಬಂದು ನೋಡಿದರೆ, ಗಂಡ ಮುಖ ಊದಿಸಿಕೊಂಡು ಪೇಪರ್ ಓದುತ್ತಾ ಕೂತಿದ್ದಾನೆ. ಈಗಷ್ಟೇ ಆರಂಭವಾದ ಸುಖದ ಕ್ಷಣಗಳಿಗೆ ಕುತ್ತು ಬಂದಂತ ಅನುಭವವಾಗಿ ಅವಳು ರೋಷದಿಂದ– ‘ಇದೊಳ್ಳೇ ಕತೆಯಾಯ್ತಲ್ಲಾ, ಪೇಪರೋದ್ತಾ ಕೂತ್ರಲ್ಲ... ಇನ್ನೂ ಅಡಿಗೆ ಮನೆಗೆ ಹೋಗಲೇ ಇಲ್ಲವೆ? ಎಂಟು ಗಂಟೆಗೆ ಮಕ್ಕಳ ಸ್ಕೂಲ್ ಬಸ್ ಬರುತ್ತೆ ಅಂತ ಗೊತ್ತಿಲ್ವಾ’ ಎಂದು ಸಿಡುಕುತ್ತಾಳೆ.

ಅವನ ಕೈಯಲ್ಲಿದ್ದ ಪೇಪರನ್ನು ಕಿತ್ತುಕೊಂಡು, ‘ಹೋಗಿ ಪುಟ್ಟು ಮಾಡಿ, ಹಪ್ಪಳ ಸುಟ್ಟು ಮಕ್ಕಳ ಊಟದ ಡಬ್ಬಿ ರೆಡಿ ಮಾಡಿ’ ಎಂದು ಹೇಳುತ್ತಾಳೆ. ಅಯೋಮಯವಾದ ಧ್ವನಿಯಲ್ಲಿ ಗಂಡ ತನಗೆ ‘ಪುಟ್ಟು ಮಾಡೋಕೆ ಬರೋಲ್ಲ’ ಎನ್ನುತ್ತಾನೆ. ‘ಆಮ್ಲೆಟ್ ಮಾಡೋಕೆ ಬರುತ್ತಾ’ ಎನ್ನುವ ಪ್ರಶ್ನೆಗೆ ‘ಹೂಂ’ ಎನ್ನುವ ಉತ್ತರ ಬರುತ್ತದೆ. ಇವತ್ತಿನ ಮಟ್ಟಿಗೆ ಬ್ರೆಡ್ ಮತ್ತು ಆಮ್ಲೆಟ್ ಮಾಡಿ.

ನಾಳೆಯಿಂದ ಏನಾದರೂ ರುಚಿಯಾಗಿರುವುದನ್ನು ಮಾಡೋಕೆ ಕಲೀರಿ ಎಂದು ಹೇಳುತ್ತಾ ನೇಂದ್ರ ಬಾಳೆಹಣ್ಣನ್ನಾದರೂ ತನ್ನಿ, ಅದನ್ನು ಸುಟ್ಟು ತಿನ್ನಬಹುದು ಎನ್ನುವ ಸಲಹೆ ಕೊಡುತ್ತಾಳೆ. ಅಂಗಡಿಗೆ ಹೊರಟ ಗಂಡನಿಗೆ ಆದ ಆಘಾತದಿಂದ ಹೊರಬರುವುದೇ ಕಷ್ಟಾಗುತ್ತದೆ. ಗಂಡ ಕೈಚೀಲ ತೆಗೆದುಕೊಂಡು ಹೊರಟದ್ದನ್ನು ನೋಡಿ ಇವಳಿಗೆ ಸಂತೋಷ! ದಾರಿಯಲ್ಲಿ ಅವನು ಮತ್ತೆ ಮತ್ತೆ ಸಂದೇಹದಿಂದ ಪೇಪರ್ ಓದುತ್ತಾ ಕುಳಿತಿರುವ ಇವಳನ್ನೇ ನೋಡುತ್ತಾ ಹೋಗುತ್ತಾನೆ.

ಪೇಪರ್ ಓದಿದ ನಂತರ ನಾಯಕಿಗೆ ಸ್ನಾನ ಮಾಡುವ ಮನಸ್ಸಾಗುತ್ತದೆ. ಬೆಳಗಿನ ಸ್ನಾನ ಯಾವಾಗಲೂ ಒಳ್ಳೆಯದು ನಿಜ. ಆದರೆ, ಮದುವೆಯಾದ ಮೇಲಿಂದ ಮನೆ ಕೆಲಸವೆಲ್ಲ ಮುಗಿಯುವ ಹೊತ್ತಿಗೆ, ಮಧ್ಯಾಹ್ನ, ಆ ಹೊತ್ತಿಗೆ ಬಿಸಿಯಾದ ಟ್ಯಾಂಕಿನ ನಿೋರಿನ ಸ್ನಾನದಿಂದ ಆಯಾಸವೇ ಹೊರತು ಉಲ್ಲಾಸವಿಲ್ಲ.

ಆ ಉಲ್ಲಾಸವೇನಿದ್ದರೂ ತಾನು ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಮಾತ್ರ. ಈಗ ಅದೆಲ್ಲ ಕಳೆದ ಜನ್ಮದ ನೆನಪಿನಂತೆ. ಇವತ್ತು ಅಂಥ ಸಂದರ್ಭ ಮರಳಿ ದೊರಕಿದೆ. ಸ್ನಾನಕ್ಕೆ ಹೊರಟರೆ ಗಂಡ ಟೆಲಿಫೋನ್ ಡೈರಕ್ಟರಿಯಲ್ಲಿ ನಂಬರ್ ಹುಡುಕುತ್ತಿದ್ದಾನೆ, ಯಾರಿಗೋ ಫೋನ್ ಮಾಡಲು. ಮತ್ತೆ ಇವಳು ಅವನನ್ನು ಬಲವಂತವಾಗಿ ಅಲ್ಲಿಂದ ಏಳಿಸಿ ಅಡುಗೆ ಮನೆಗೆ ತಳ್ಳಿ ತಾನು ಸ್ನಾನಕ್ಕೆ ಹೋಗುತ್ತಾಳೆ.

ಯಾಂತ್ರಿಕವಾದ ಸ್ನಾನದ ಬದಲು ಇಂದು ತನ್ನಿಚ್ಛೆಯ, ಲೋಕೋವಿರಾಮದ, ತನ್ನ ದೇಹ ಮನಸ್ಸು ಎರಡನ್ನೂ ಬೆಳಗಬಲ್ಲ ಸ್ನಾನವನ್ನು ಮನಸೋ ಇಚ್ಛೆಯಾಗಿ ಮಾಡುತ್ತಾಳೆ. ಸ್ನಾನ ಮಾಡುತ್ತಲೇ ಗಂಡ ಫೋನ್ ಮಾಡುತ್ತಿದ್ದದ್ದು ನೆನಪಾಗಿ ತಾನೂ ಯಾರಿಗಾದರೂ ಫೋನ್ ಮಾಡಬೇಕು ಎಂದು ಯೋಚಿಸುತ್ತಾಳೆ. ಈ ತನಕ ತನ್ನ ಗೃಹಕೃತ್ಯದಲ್ಲಿ ಫೋನ್ ಕೂಡ ಅನಿವಾರ್ಯ ಸಂದರ್ಭಗಳಲ್ಲಿ, ಬಿಡುವಿದ್ದಾಗ ಮಾತ್ರ ಬಳಸಬಹುದಾದ ಸವಲತಾಗಿತ್ತು.

ಇವತ್ತು ತನಗೆ ಬೇಕಾಗಿ ಯಾರಿಗಾದರೂ ಮಾಡಬೆಕು ಎಂದುಕೊಂಡರೂ ಅವಳಿಗೆ ತಾನು ಯಾರಿಗೆ ಮಾಡಬಹುದು ಎನ್ನುವುದೇ ಹೊಳೆಯುವುದಿಲ್ಲ. ತಾಯಿಯೊಬ್ಬಳಿದ್ದಾಳೆ, ಅವಳಿಗೆ ಕಿವಿ ಕೇಳಿಸುವುದಿಲ್ಲ. ಸಂಸಾರದ ಆರಂಭದ ಮೊದಲ ಒಂದೆರಡು ದಶಕಗಳು ಹೆಣ್ಣು ತನ್ನನ್ನು ಇಡಿಯಾಗಿ ಸಂಸಾರಕ್ಕೆ ಕೊಟ್ಟುಕೊಳ್ಳಬೇಕಾದ ಅವಧಿ. ಅನೇಕ ಬಾರಿ ಲೋಕದೊಂದಿಗೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಲು ಅಸಾಧ್ಯವಾಗುವ ಸನ್ನಿವೇಶವೂ ಇರುತ್ತದೆ. ತನು ಮನ ಎನ್ನುವುದು ಅಕ್ಷರಶಃ ನಿಜವಾಗಿಬಿಡುತ್ತದೆ.

ಸ್ನಾನ ಮುಗಿಸಿ ತನ್ನಿಷ್ಟದ ಸೀರೆ ಉಟ್ಟು, ವಿರಾಮವಾಗಿ ತಲೆಬಾಚಿ, ತನಗೆ ಪ್ರಿಯವಾದ ಹಾಡೊಂದನ್ನು ಗುನುಗುತ್ತಾ ಬಾಗಿಲ ಬಳಿ ಬಂದರೆ, ಕೋಣೆಯ ಬಾಗಿಲು ಮುಚ್ಚಿದೆ. ತೆಗೆಯಲು ಹೋದರೆ ಹೊರಗಿನಿಂದ ಚಿಲಕ ಹಾಕಿದ್ದಾರೆ. ಏನಾಯಿತು ಎಂದು ಯೋಚಿಸುತ್ತಾ ಇರುವಾಗಲೇ ಗಂಡ ಯಾರ ಬಳಿಯೋ ಫೋನ್‌ನಲ್ಲಿ ಮಾತನಾಡುತ್ತಿರುವುದು ಕೇಳಿಸುತ್ತದೆ. ಗಮನವಿಟ್ಟು ಕೇಳಿಸಿಕೊಂಡರೆ, ಆತ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ, ತನ್ನ ಹೆಂದತಿ ಬೆಳಿಗ್ಗೆಯಿಂದ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ಹೇಳುತ್ತಿದ್ದಾನೆ.

ಮದುವೆಯಾದ ಇಷ್ಟು ವರ್ಷಗಳಲ್ಲಿ ಹೆಂಡತಿ ಎಂದೂ ತನ್ನ ಮಾತು ಮೀರಿದ್ದಿಲ್ಲವೆಂದೂ, ಎದುರಾಗಿ ತುಟಿ ಪಿಟಕ್ ಎಂದದ್ದಿಲ್ಲವೆಂದೂ ಆತಂಕದಲ್ಲಿ ಬಡಬಡಿಸುತ್ತಿದ್ದಾನೆ. ಗೆಳೆಯನ ಸಹಾಯವನ್ನು ಯಾಚಿಸುತ್ತಾ ಅವನು, ಆಂಬ್ಯುಲೆನ್ಸ್ ಜೊತೆಗೆ ಒಂದಿಬ್ಬರನ್ನು ಸಹಾಯಕ್ಕೂ ಕಳಿಸುವಂತೆ ಕೇಳುತ್ತಾನೆ.

ಹುಚ್ಚು ಹಿಡಿದಿರುವ ಹೆಂಡತಿಯನ್ನು ಆಸ್ಪತ್ರೆಗೆ ಸಾಗಿಸಲು ಅವನಿಗೆ ಈ ಎಲ್ಲವೂ ಬೇಕು. ಗಂಡನ ಮಾತುಗಳನ್ನು ಕೇಳುತ್ತಿದ್ದ ಹೆಂಡತಿ ತಲೆಯನ್ನು ಬಾಗಿಲಿಗೆ ಚಚ್ಚಿಕೊಳ್ಳುತ್ತಾ ಕೂಗುತ್ತಾಳೆ, ‘ಬಾಗಿಲು ತೆಗೀರಿ... ನನಗೆ ಏನೂ ಆಗಿಲ್ಲರೀ... ನಾನು ಸುಮ್ಮನೆ... ಪ್ಲೀಸ್ ಬಾಗಿಲು ತೆಗೀರಿ,... ನನಗೆ ಏನೂ ಆಗಿಲ್ಲರೀ... ಸುಮ್ಮನೆ ತಮಾಷೆಗೆ... ಬಾಗಿಲು ತೆಗೀರಿ. ನನಗೆ ಅಡುಗೆ ಮನೆಯಲ್ಲಿ ಕೆಲಸವಿದೆ... ತೆಗೀರಿ ಪ್ಲೀಸ್...’.

ಹೀಗೆ ಕಥೆ ಮುಗಿಯುತ್ತದೆ. ಯಥಾವತ್ ಹೀಗೆ ಆಗುವ ಸಂದರ್ಭಗಳು ಎಷ್ಟಿವೆ ಎನ್ನುವುದಕ್ಕಿಂತ ಇದರ ಅದೆಷ್ಟು ರೂಪಾಂತರಗಳು ನಮ್ಮ ನಡುವೆ ಘಟಿಸುತ್ತಲೇ ಇದ್ದಾವೆ ಎನ್ನುವುದು ಮುಖ್ಯ. ದೈನಿಕದಲ್ಲಿನ ಬದಲಾವಣೆ ಎನ್ನುವುದು ಅಸಾಧ್ಯ ಎನ್ನುವ ಮನಸ್ಥಿತಿ ಬದಲಾಗದ ತನಕ ಯಾವುದು ಹೆಣ್ಣಿನ ಮಟ್ಟಿಗೆ ನಿಜವಾದ ಬದಲಾವಣೆಯಾಗಲು ಸಾಧ್ಯ? ಅದರ ಒಂದು ಸಣ್ಣ ಪ್ರಯೋಗ, ಸಣ್ಣ ಸಾಧ್ಯತೆಗಳು ಅದು ಯಾಕೆ ಗಂಡಸರಲ್ಲಿ ಅಂಥ ಭಯ ಹುಟ್ಟಿಸುತ್ತವೆ?

ಅದೊಂದು ನೈಸರ್ಗಿಕ ನಿಯಮವೋ ಸಂಗತಿಯೋ ಅನ್ನಿಸುವ ಶಾಶ್ವತೆಯಲ್ಲಿ ಅದನ್ನು ಹೆಣ್ಣಿಗೇ ಹೊಂದಿಸುವ ಹಟ ಶೌರ್ಯವಲ್ಲ, ಕ್ರೌರ್ಯ. ಈ ಕಥೆಯನ್ನೇ ನೋಡಿ. ಒಂದು ದಿನದ ಮಟ್ಟಿಗೆ ಆ ಹೆಣ್ಣು ತನ್ನ ದೈನಿಕದಿಂದ ತಪ್ಪಿಸಿಕೊಳ್ಳಲು ಮಾಡುವ ಮಾನವ ಸಹಜ ಪ್ರಯತ್ನ ಅವಳ ಸಂಸಾರದಲ್ಲಿ ಉತ್ಪಾತಗಳಿಗೆ ಕಾರಣವಾಗುತ್ತದೆ. ಗಂಡು ಅವನ ದೈನಿಕದಲ್ಲಿ ಯಾವ ಪ್ರಮಾಣದ ಬದಲಾವಣೆಗಳನ್ನು ಬೇಕಾದರೂ ಮಾಡುವುದು ಸಹಜವಾಗಿ ಒಪ್ಪಿತವಾಗುತ್ತದೆ.

ಹೆಣ್ಣು ಸಂಸಾರದ ಕಣ್ಣು, ಅವಳೇ ಕೇಂದ್ರ ಎನ್ನುವ ವಾದವನ್ನು ಈ ಸಂದರ್ಭದಲ್ಲಿಯೂ ಮಂಡಿಸುವ ವಕೀಲರಿಗೇನೂ ಕಡಿಮೆಯಿಲ್ಲ. ಆದರೆ ಆ ಹೆಣ್ಣನ್ನು ಕಣ್ಣಿನಷ್ಟು ಜತನವಾಗಿ ನೋಡಿಕೊಳ್ಳುವ ಮನಸ್ಥಿತಿಯೂ ಇರಬೇಕಲ್ಲವೆ? ‘ಸತ್ಯ ಸರಳವೆಂದರೆ ಸರಳವಾಗಿರುತ್ತದೆ’ ಎನ್ನ್ನುವ ಗಾಂಧಿಯ ಮಾತು ಹೆಣ್ಣಿನ ಮಟ್ಟಿಗೆ ನಿಜವಾಗುವುದು ಹೀಗೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT