ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ ಹೆಗಡೆ ಬರಹ: ಡಿಎನ್‌ಎ ಡೇಟಾ ಖಜಾನೆಗೆ ಕನ್ನ

ಅಪರಾಧ ಘಟಿಸಿದಲ್ಲಿ ಸಿಕ್ಕ ಜಿನೋಮ್‌ ಕುಂಡಲಿ ನಿಮ್ಮ ಜನ್ಮವನ್ನೇ ಜಾಲಾಡೀತು ಅಥವಾ ಬಚಾವ್‌ ಮಾಡೀತು
Last Updated 13 ಏಪ್ರಿಲ್ 2022, 19:45 IST
ಅಕ್ಷರ ಗಾತ್ರ

ಕಾಡಿನ ಬೆಂಕಿಯಂತೆ ಕೋಮುದ್ವೇಷ ವ್ಯಾಪಿಸುತ್ತಿದೆ. ಶಾಂತಿ, ಸೌಹಾರ್ದತೆಗೆ ಒತ್ತಾಯಿಸಿ ನೂರಿನ್ನೂರು ಜನರು ಮೌನ ಮೆರವಣಿಗೆ ನಡೆಸುತ್ತಾರೆ ಎಂದುಕೊಳ್ಳಿ. ಈ ಗುಂಪಿನ ಮೇಲೆ ಯಾರೋ ಕಲ್ಲು ತೂರುತ್ತಾರೆ. ಚೀರಾಟ, ಅತ್ತಿತ್ತ ದೌಡಾಟ, ಲಾಠೀಚಾರ್ಜ್‌ ಎಲ್ಲ ನಡೆಯುತ್ತದೆ. ಹತ್ತಾರು ಜನರನ್ನು ದಸ್ತಗಿರಿ ಮಾಡಿ ಠಾಣೆಗೆ ಒಯ್ದು ಪೊಲೀಸರು ನೆಪಮಾತ್ರದ ತನಿಖೆ ನಡೆಸಿ ಬಿಡುಗಡೆ ಮಾಡುತ್ತಾರೆ. ಮೆರವಣಿಗೆಯಲ್ಲಿದ್ದ ಶಾಂತಮ್ಮ ಎಂಬವರ ಚೀಲದಲ್ಲಿದ್ದ ಬಾಚಣಿಗೆಯನ್ನು ಪೊಲೀಸರು ತಮ್ಮಲ್ಲೇ ಉಳಿಸಿಕೊಂಡಿರುತ್ತಾರೆ.‌

ಆ ಬಾಚಣಿಗೆಯಲ್ಲಿ ಶಾಂತಮ್ಮನ ವಂಶಾವಳಿಯ ಚರಿತ್ರೆಯೇ ಇರುತ್ತದೆ. ಅದರ ಹಲ್ಲುಗಳ ಮಧ್ಯೆ ಸಿಕ್ಕಿಕೊಂಡ ಚೂರು ಕೂದಲು, ಹೊಟ್ಟು- ಅವೆಲ್ಲ ಶಾಂತಮ್ಮನದೇ ಆಗಿರಬಹುದು ಅಥವಾ ಅವಳ ಮನೆಯ ಯಾರದೂ ಆಗಿರಬಹುದು. ಮನೆಗೆ ಬಂದಿದ್ದ ದೊಡ್ಡಮ್ಮನ ಮಗಳ ತಲೆಯಲ್ಲಿದ್ದ ಹೇನಿನ ಮೊಟ್ಟೆಯ ಕವಚ ಅಥವಾ ಹೊಂಗೆ ಹೂವಿನ ಪರಾಗ ಕಣ ಇರಬಹುದು. ಅಂತೂ ಅವೆಲ್ಲ ಶಾಂತಮ್ಮನ ಹೆಸರಿನಲ್ಲಿ ಪೊಲೀಸ್‌ ದಾಖಲೆಗೆ ಸೇರುತ್ತವೆ. ಮುಂದೆಲ್ಲೋ ಗಂಭೀರ ಅಪರಾಧ ಘಟಿಸಿದ ಜಾಗದಲ್ಲಿ ಸಿಕ್ಕ ಡಿಎನ್‌ಎ ತುಣುಕನ್ನು ಪೊಲೀಸ್‌ ದಾಖಲೆಯ ಡಿಎನ್‌ಎಗಳೊಂದಿಗೆ ಹೋಲಿಸುವಾಗ ಶಾಂತಮ್ಮ ಅರೆಸ್ಟ್‌ ಆಗಲೂಬಹುದು.

ಡಿಎನ್‌ಎ ಮೂಲಕ ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಣೆಯ ವಿಧಿವಿಧಾನಗಳ ಬಗ್ಗೆ ಎರಡು ವಾರಗಳ ಹಿಂದೆ ಸಂಸತ್ತಿನಲ್ಲಿ ಹೊಸ ಮಸೂದೆಯೊಂದನ್ನು ಸರ್ಕಾರ ಮಂಡಿಸಿತು. ಅದು ತೀರ ಉಗ್ರವಾದುದೆಂದೂ ನಿರಪರಾಧಿಗೂ ಜೈಲಾಗುವ ಸಂಭವ ಇದೆಯೆಂದೂ ಪ್ರತಿಪಕ್ಷಗಳು ಏಕತ್ರವಾಗಿ ಮಸೂದೆಯನ್ನು ವಿರೋಧಿಸಿದವು. ಇದು ಕಾಯ್ದೆಯಾದರೆ ಪ್ರಜೆಗಳ ಸ್ವಾತಂತ್ರ್ಯದ ಮೇಲೆ, ಪ್ರಜಾಪ್ರಭುತ್ವದ ಮೇಲೆ ದೂರಗಾಮೀ ಪರಿಣಾಮ ಕರಾಳವಾದೀತೆಂದೂ ವಾದಿಸಿದವು. ಮಸೂದೆಯ ಎಲ್ಲ ಆಯಾಮಗಳ ಅಧ್ಯಯನ ಮತ್ತು ಚರ್ಚೆಯ ನಂತರವೇ ಅದರ ಮಂಡನೆ ಆಗಬೇಕೆಂದು ಒತ್ತಾಯಿಸಿದವು. ಅವನ್ನೆಲ್ಲ ಬದಿಗೊತ್ತಿ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಆ ಮಸೂದೆಯನ್ನು ಪಾಸ್‌ ಮಾಡಿಸಿಯೇಬಿಟ್ಟರು. ‘ಸದ್ಯಕ್ಕೆ ಹೀಗೇ ಹೋಗಲಿ; ಅಗತ್ಯ ಬಂದರೆ ತಿದ್ದುಪಡಿ ಮಾಡೋಣ’ ಎಂಬರ್ಥದ ಮಾತುಗಳನ್ನೂ ಹೇಳಿದರು.

ಶಾಂತಮ್ಮನ ಬಾಚಣಿಗೆ ಈ ಹೊಸ ಕಾನೂನಿನ ಪ್ರಕಾರ, ಮುಂದೆ 75 ವರ್ಷಗಳವರೆಗೆ ಪೊಲೀಸರ ದಾಖಲೆಯಲ್ಲಿರುತ್ತದೆ. ಆಮೇಲೆ ಅದನ್ನು ನಾಶ ಮಾಡಬಹುದು. ಶಾಂತಮ್ಮ ನಿರಪರಾಧಿ ಎಂದು ನ್ಯಾಯಾಲಯದಲ್ಲಿ ಸಾಬೀತಾದರೆ ಆ ಸಾಕ್ಷ್ಯವನ್ನು ಕೂಡಲೇ ನಾಶ ಮಾಡಬೇಕೆಂದು ಆಕೆ ದಾವೆ ಹೂಡಬಹುದು, ಗೆಲ್ಲಲೂಬಹುದು.

ಅಪರಾಧಗಳ ತನಿಖೆಗೆ ನಮ್ಮ ಪೊಲೀಸರು ಈಗ ಬಳಸುತ್ತಿರುವ ವಿಧಾನ ಹಳೇ ಕಾಲದ್ದು ನಿಜ. ಭಾರತಕ್ಕೆ ಏರೋಪ್ಲೇನ್‌ ಮೊದಲ ಬಾರಿ ಬಂದಾಗಿನ ಕಾಲದ್ದು. ಈಗಲೂ ಏರೋಪ್ಲೇನ್‌ ಶಿಕ್ಷೆಯೇ ಆದ್ಯತೆಯ ತನಿಖಾ ವಿಧಾನವಾಗಿದೆ. ಆದರೆ ನಿರಪರಾಧಿಯನ್ನೂ ತನಿಖೆಯ ಹೆಸರಿನಲ್ಲಿ ಬಂಧಿಸಲು ಪೊಲೀಸರು ನಿರ್ಧರಿಸಿದರೆ ಅತ್ಯಾಧುನಿಕ ತಂತ್ರವೂ ಬಳಕೆಗೆ ಬರುತ್ತದೆ. ದಲಿತಪರ ಚಿಂತಕ (ಅಂಬೇಡ್ಕರ್‌ರ ಮೊಮ್ಮಗಳ ಗಂಡ) ಪ್ರೊ. ಆನಂದ ತೇಲ್ತುಂಬ್ಡೆಯವರನ್ನು ಬಂಧಿಸುವ ಮೊದಲು ಅವರ ಇ–ಮೇಲ್‌ಗೆ ಅವರದೇ ವಿರುದ್ಧ ಸಾಕ್ಷ್ಯಗಳು ಹೇಗೋ ಸೇರಿಕೊಂಡಿದ್ದವು. ಬೇಹುಗಾರಿಕೆಗೆಂದೇ ಸೃಷ್ಟಿಯಾದ ಇಸ್ರೇಲೀ ಮೂಲದ ಕುಖ್ಯಾತ ‘ಪೆಗಾಸಸ್‌’ ಬೇಹುಳವಂತೂ (spyware) ಅವರ ಮೊಬೈಲ್‌ನಲ್ಲೇ ಅವಿತು ಕೂತಿತ್ತು.

ಅದು ಡಿಜಿಟಲ್‌ ಗೂಢಚಾರಿಕೆ. ಯಾರನ್ನಾದರೂ ಬೆನ್ನಟ್ಟಲು, ಬೆಂಡೆತ್ತಲು ಬಳಕೆಯಾಗಬಲ್ಲ ಆಯುಧ. ಆದರೆ ಡಿಎನ್‌ಎ ಪತ್ತೆದಾರಿಕೆ ಹಾಗಲ್ಲ. ಆರೋಪಿಗೆ ಶಿಕ್ಷೆ ವಿಧಿಸಲು ನೆರವಾಗಬಲ್ಲ ತಂತ್ರಜ್ಞಾನ ಅದು. ಅಪರಾಧ ನಡೆದ ತಾಣದಲ್ಲಿ ರಕ್ತ, ಕೂದಲು ಅಥವಾ ವೀರ್ಯಕಲೆ ಸಿಕ್ಕರೂ ಸಾಕು, ಲ್ಯಾಬಿನಲ್ಲಿ ಅದರ ವಿಶ್ಲೇಷಣೆ ಸಾಧ್ಯವಿದೆ. ನಮ್ಮ ಒಂದೊಂದು ಜೀವಕಣದಲ್ಲೂ 23 ಜೋಡಿ ವಂಶವಾಹಿ ಡಿಎನ್‌ಎ ಸುರುಳಿ ಇರುತ್ತದೆ. ಆ ಸುರುಳಿಯನ್ನು ಜಗ್ಗಿದರೆ ಎರಡು ಮೀಟರ್‌ ಉದ್ದವಾಗಬಹುದು. ಅದರಲ್ಲಿರುವ ತಳಿನಕ್ಷೆಯನ್ನು (‘ಜಿನೋಮ್‌’) ಬಿಚ್ಚಿ ನೋಡಿದರೆ ಅದರ ಸ್ವರೂಪ ಒಬ್ಬೊಬ್ಬರಲ್ಲೂ ಒಂದೊಂದು ರೀತಿ ಇರುತ್ತದೆ. ತದ್ರೂಪಿ ಅವಳಿಗಳಲ್ಲಿ ಮಾತ್ರ ಏಕರೂಪ ಇರುತ್ತದೆ. ಅಪರಾಧ ಘಟಿಸಿದಲ್ಲಿ ಸಂಗ್ರಹಿಸಿದ ಅಂಗಾಂಶದ ನಕ್ಷೆಯನ್ನು ವಿಧಿವಿಜ್ಞಾನಿಗಳು ಸಂಶಯಿತ ವ್ಯಕ್ತಿಯ ರಕ್ತದ ಅಥವಾ ಜೊಲ್ಲಿನ ತಳಿನಕ್ಷೆಯ ಜೊತೆ ಹೋಲಿಸಿ ನೋಡುತ್ತಾರೆ. 2008ರಲ್ಲಿ ರೋಹಿತ್‌ ಶೇಖರ್‌ ಎಂಬಾತ ತಾನು ಆಂಧ್ರಪ್ರದೇಶದ ರಾಜ್ಯಪಾಲ ಎನ್‌.ಡಿ.ತಿವಾರಿಯವರ ಮಗನೆಂದೂ ಡಿಎನ್‌ಎ ಹೋಲಿಕೆ ಆಗಬೇಕೆಂದೂ ದಾವೆ ಹೂಡಿದ್ದ. ರಾಜ್ಯಪಾಲರು ಒಪ್ಪದಿದ್ದರೂ ನ್ಯಾಯಾಂಗ ಕಡ್ಡಾಯವಾಗಿ ಅವರ ಡಿಎನ್‌ಎಯನ್ನು ತರಿಸಿ ಅವರೇ ತಂದೆಯೆಂದು ಘೋಷಿಸಿತು. ತಿವಾರಿ ಒಪ್ಪಿಕೊಂಡರು, ಹುದ್ದೆಗೆ ರಾಜೀನಾಮೆ ಕೊಟ್ಟರು. ಮುಂದೆ ಆ ಮಗನೇ ಕೊಲೆಯಾಗಿ, ಆತನ ಪತ್ನಿ ಜೈಲುಪಾಲಾಗಿದ್ದಾಳೆ. ಎಲ್ಲ ಡಿಎನ್‌ಎ ಕಮಾಲ್‌.

ಈಗಂತೂ ಡಿಎನ್‌ಎ ಪರೀಕ್ಷೆ ಅದೆಷ್ಟು ಚುರುಕಾಗಿದೆ ಎಂದರೆ ಆರೋಪಿಯ ಟೂಥ್‌ ಬ್ರಶ್ ಸಿಕ್ಕರೂ ಸಾಕು, ಇಡೀ ವಂಶಾವಳಿಯನ್ನೇ ಜಾಲಾಡಬಹುದು. ಖಾಸಗಿ ಡಿಎನ್‌ಎ ಪರೀಕ್ಷಾ ಸೌಲಭ್ಯಗಳು ನಮ್ಮ ಎಲ್ಲ ದೊಡ್ಡ ನಗರಗಳಲ್ಲೂ ಇವೆ. ಗಂಡ ಹೆಂಡತಿಯ ಅನೈತಿಕ ಸಂಬಂಧ ಪತ್ತೆಗೆ, ಆಸ್ತಿ ವಿವಾದ ಪರಿಹಾರಕ್ಕೆ, ಪೂರ್ವಿಕರ ವಂಶಾವಳಿ ಪತ್ತೆಗೆ, ಅದಕ್ಕೆ ಇದಕ್ಕೆಂದು ಆರೆಂಟು ಸಾವಿರ ರೂಪಾಯಿಗಳಲ್ಲೇ ಡಿಎನ್‌ಎ ಸರ್ಟಿಫಿಕೇಟ್‌ ಪಡೆಯಲು ಸಾಧ್ಯವಿದೆ. ಅದು ನಿಮ್ಮ ಜಿನೋಮ್‌ಕುಂಡಲಿ ಯಾನೆ, ವೈಜ್ಞಾನಿಕ ಜನ್ಮಕುಂಡಲಿ.

ಕೌಟುಂಬಿಕ ಅಪರಾಧದ ಪತ್ತೆ ಸುಲಭ. ಪತಿಯ ಒಳವಸ್ತ್ರಕ್ಕೆ ಅಂಟಿದ ಡಿಎನ್‌ಎ ತನ್ನದಲ್ಲ ಎಂದು ವಾದಿಸಿ ಗೆಲ್ಲಲು ಎರಡೇ ಸ್ಯಾಂಪಲ್‌ ಸಾಕು. ತನ್ನ ಮತ್ತು ತನ್ನದಲ್ಲದ ಡಿಎನ್‌ಎಗಳ ತಳಿನಕ್ಷೆಯ ನಿರ್ದಿಷ್ಟ ತಾಣಗಳ ಚಿಕ್ಕ ಭಾಗವನ್ನು ಹೋಲಿಸಿದರಾಯಿತು. ಆದರೆ ಅಪರಾಧಿ ಯಾರೆಂದೇ ಗೊತ್ತಿಲ್ಲದಾಗ, ಸಂಶಯಿತ ನೂರಾರು ಜನರ ತಳಿನಕ್ಷೆಯನ್ನು ಹೋಲಿಸಿ ನೋಡಬೇಕು. ಮೊದಲ ಬಾರಿ ಅಪರಾಧ ಮಾಡಿ ಕಣ್ಮರೆ ಆದವನ ಡಿಎನ್‌ಎಯನ್ನು ಯಾರೊಂದಿಗೆ ಹೋಲಿಸುವುದು? ಅದಕ್ಕೇ ಪೊಲೀಸ್‌ ಇಲಾಖೆ ಲಕ್ಷೋಪಲಕ್ಷ ಡಿಎನ್‌ಎ ಸ್ಯಾಂಪಲ್‌ಗಳ ಡೇಟಾ ಖಜಾನೆಯನ್ನೇ ಇಟ್ಟುಕೊಂಡಿರಬೇಕು.

ಸುಧಾರಿತ ದೇಶಗಳಲ್ಲಿ ಜನರ ಅಂಗಾಂಶಗಳನ್ನು ಪೊಲೀಸರೇ ಎಗರಿಸಿ ಡಿಎನ್‌ಎಗಳ ಡೇಟಾ ಖಜಾನೆಯನ್ನು ತುಂಬಿಸಲು ನಾನಾ ತಂತ್ರಗಳನ್ನು ಬಳಸುತ್ತಾರೆ. ಅದಕ್ಕೆ ‘ಡ್ರಾಗ್‌ನೆಟ್‌ ವಿಧಾನ’ ಎನ್ನುತ್ತಾರೆ. ಸಮುದ್ರ ಅಥವಾ ನದಿತಳದಲ್ಲಿ ವಿಶಾಲ ಬಾಚುಬಲೆಯನ್ನು ಹರಡಿ ಎಳೆಯುತ್ತ ಹೋಗಿ, ಅದರೊಳಕ್ಕೆ ಸಿಕ್ಕದ್ದನ್ನೆಲ್ಲ ಬಾಚಿ ಗುಡ್ಡೆ ಹಾಕಿ, ತಮಗೆ ಬೇಕಿದ್ದ ಮೀನು, ಏಡಿ, ಸೀಗಡಿ, ಆಕ್ಟೊಪಸ್‌ಗಳನ್ನು ಎತ್ತಿಕೊಂಡು, ಬೇಡವಾಗಿದ್ದನ್ನು ಬಿಸಾಡುವ ವಿಧಾನ ಅದು. ‌ತನಿಖಾ ವಿಧಿವಿಜ್ಞಾನವೂ ಹೀಗೆ ಸಮಾಜದ ಎಲ್ಲರ ಮೇಲೆ ವ್ಯಾಪಕವಾಗಿ ಬಲೆಬೀಸಿ ಡಿಎನ್‌ಎ ಡೇಟಾ ಸಂಗ್ರಹ ಮಾಡುವುದಕ್ಕೆ ಅಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಖಾಸಗಿ ಕಂಪನಿಗಳಿಗೆ ಅಂಥ ಡೇಟಾ ಸಿಕ್ಕರಂತೂ ವೈದ್ಯರು, ವಿಮಾ ಕಂಪನಿಗಳು ಅಷ್ಟೇಕೆ, ನಿಮ್ಮ ಭಾವೀ ಸಂಗಾತಿಯೂ ಅದರ ಲಾಭ ಪಡೆಯಬಹುದು. ಅದಕ್ಕೇ ‘ನನ್ನ ಡಿಎನ್‌ಎ ಎಗರಿಸಬೇಡಿ’ ಎಂಬ ಅಭಿಯಾನವೇ ನಡೆದಿದೆ. ಲಿಲಿ ಹಾಸ್ಕೆಲ್‌ (Lily Haskell) ಎಂಬ ನಿರಪರಾಧಿ ಮಹಿಳೆ ತನ್ನ ಡಿಎನ್‌ಎ ರಕ್ಷಣೆಗೆ ನಡೆಸಿದ ಸುದೀರ್ಘ ಹೋರಾಟದ ನೈಜ ಕಥನ ಅಂತರ್ಜಾಲದಲ್ಲಿ ಸಿಗುತ್ತದೆ. ನಮ್ಮ ಶಾಂತಮ್ಮನದೇ ಕತೆ ಅದು.

ನಮ್ಮಲ್ಲೂ ಅಂಥ ಕಾನೂನು ಬರಲಿದೆ. ಅಪರಾಧ ಪತ್ತೆಗೆಂದು ಪೊಲೀಸರ ಕೈಗೆ ಹೊಸ ಬಾಚುಬಲೆ ಸಿಗಲಿದೆ. ಡಿಎನ್‌ಎ ತಜ್ಞರಿಗೆ ಮತ್ತು ನ್ಯಾಯವಾದಿಗಳಿಗೆ ಹಬ್ಬದ ದಿನಗಳು ಬರಲಿವೆ. ದಯವಲ್ಲ, ‘ಭಯವೇ ಧರ್ಮದ ಮೂಲವಯ್ಯಾ!’ ಎಂಬುದು ಪ್ರಭುತ್ವದ ಮೂಲ ಮಂತ್ರವಾಗುತ್ತದೆ. ಈಗ ಧರ್ಮಾಂಧರ ಬಾಯಲ್ಲಿರುವ ಮಂತ್ರವೇ ಆಗ ಅಧಿಕೃತವಾಗಿ ಸರ್ಕಾರದ್ದೂ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT