ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಸಾತ್ವಿಕ ಮಾರ್ಗಕ್ಕೆ ಸೂತ್ರ- ಡಾ. ಜ್ಯೋತಿ ಲೇಖನ

ದೇಶದಲ್ಲಿ ವಿಚಾರಕ್ರಾಂತಿಗೆ ಮರು ಆಹ್ವಾನ ನೀಡುವ ಕಾಲ ಸನ್ನಿಹಿತವಾಗಿದೆ
Last Updated 15 ಫೆಬ್ರುವರಿ 2023, 3:45 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಭುಗಳ ಸ್ಥಾನ ಪಡೆಯುವುದು ಚುನಾವಣೆ ಸಮೀಪಿಸಿದಾಗ ಮಾತ್ರ. ಚುನಾವಣೆ ಮುಗಿದ ಮೇಲೆ ನಾವು ಆರಿಸಿದ ‘ದೊರೆ’ಗಳು ನಮ್ಮ ಮುಖಕ್ಕೆ ದೂಳೆಬ್ಬಿಸಿ ಭದ್ರತೆಯೊಂದಿಗೆ ಕಣ್ಮರೆಯಾಗುತ್ತಾರೆ. ಮತ್ತೆ ಅವರನ್ನು ನಾವು ನೋಡುವುದು ಮುಂದಿನ ಚುನಾವಣಾಪೂರ್ವದಲ್ಲಿ ಮಾತ್ರ. ಈ ಮಧ್ಯೆ, ತಮ್ಮ ಮತಕ್ಷೇತ್ರದ ಸಭೆ– ಸಮಾರಂಭಗಳಲ್ಲಿ ಪೀಠ
ಅಲಂಕರಿಸುವುದನ್ನು ದೂರದಿಂದ ಕಂಡರೂ, ಜನ ಸಾಮಾನ್ಯರ ಸಮಸ್ಯೆಗಳಿಗೆ ಅವರು ಪ್ರಾಮಾಣಿಕವಾಗಿ ಸ್ಪಂದಿಸುವುದು ವಿರಳ. ಅವರು ಕೈಕುಲುಕುವುದೇನಿದ್ದರೂ ಕೊಡು–ಕೊಳ್ಳುವ ವ್ಯವಹಾರಸ್ಥರೊಂದಿಗೆ.

ಇದನ್ನು ಷೇಕ್ಸ್‌ಪಿಯರ್ ತನ್ನ ನಾಟಕ ‘ಜೂಲಿಯಸ್ ಸೀಸರ್’ನಲ್ಲಿ ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾನೆ. ಜೂಲಿಯಸ್ ಸೀಸರ್‌ನ ಕುರಿತು ಬ್ರೂಟಸ್ ಹೀಗೆ ಹೇಳುತ್ತಾನೆ- ‘ನಮ್ಮನ್ನು ಆಳಲಿರುವ ದೊರೆಗಳನ್ನು ಏಣಿ ಹತ್ತಿಸಿ ಎತ್ತರದ ಪೀಠದಲ್ಲಿ ಕೂರಿಸುವವರು ನಾವೇ. ಆದರೆ, ಏಣಿ ಹತ್ತಿದ ಮೇಲೆ ಅವರಿಗೆ, ಕೆಳಗೆ ನಿಂತ ನಾವು ಹುಲುಮಾನವರಂತೆ ಕಂಡು, ಏಣಿಯನ್ನು ಜಾಡಿಸಿ ಒದ್ದು, ತೇಲಾಡುವ ಮೋಡಗಳೊಂದಿಗೆ (ಇಂದಿನ ಸಂದರ್ಭದಲ್ಲಿ ಉದ್ಯಮಿಗಳು, ಸೆಲೆಬ್ರಿಟಿಗಳು) ಮಾತ್ರ ಅವರು ಕೈಕುಲುಕುತ್ತಾರೆ. ಹಾಗಾಗಿ, ನಾವು ಈ ವಿಷದ ಮೊಟ್ಟೆಗಳಿಗೆ ಕಾವು ಕೊಟ್ಟು ಜೀವ ನೀಡುವ ಮೊದಲು ಚೆನ್ನಾಗಿ ಯೋಚಿಸಬೇಕು, ಅವು ಮುಂದೆ ನಮ್ಮನ್ನೇ ಕಡಿದು ಸಾಯಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’.

ನಮ್ಮ ದೇಶದಲ್ಲಿ ಚುನಾವಣೆಗಳು ಹತ್ತಿರವಾದಂತೆ, ಮತದಾರರು ವಿಐಪಿಗಳಾಗಿಬಿಡುತ್ತಾರೆ. ಈ ಅಲ್ಪಕಾಲಿಕ ಗೌರವ ಪಡೆಯುವ ಸಾಮಾನ್ಯ ಜನರನ್ನು ಭೇಟಿಯಾಗಲು, ಚುನಾವಣಾನಂತರ ಭದ್ರತೆಯೊಂದಿಗೆ ಬುಲೆಟ್‌ಪ್ರೂಫ್ ವಾಹನದಲ್ಲಿ ಓಡಾಡಲಿರುವವರು ಬರುತ್ತಾರೆ, ಕಾಲಿಗೆ ಬೀಳುತ್ತಾರೆ, ಕಾಣಿಕೆಗಳನ್ನು ನೀಡುತ್ತಾರೆ, ಸಭೆಗಳಿಗೆ ಕರೆಸಿಕೊಂಡು ಭಕ್ಷೀಸು, ಬಾಡೂಟ ಕೊಡುತ್ತಾರೆ. ಹಾಗಾಗಿ, ಚುನಾವಣೆಗಳೆಂದರೆ ಜನಸಾಮಾನ್ಯರಿಗೆ ಒಂದು ಹಬ್ಬದಂತೆ.

ಇಲ್ಲಿ ಪ್ರಜೆಗಳಿಗೆ ಅರಿವಾಗದ ವಿಷಯವೆಂದರೆ, ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಮತ (ನಂಬರ್) ಮುಖ್ಯ. ಈ ಸಂದರ್ಭದಲ್ಲಿ, ವ್ಯಕ್ತಿ ನಂಬರ್ ಆಗಿ ಮಾರ್ಪಡುತ್ತಾನೆ. ಒಂದು ಮನೆಯಲ್ಲಿ ಎಷ್ಟು ವೋಟುಗಳಿವೆ ಅನ್ನುವುದರ ಮೇಲೆಯೇ ಆ ಮನೆಯವರೊಂದಿಗೆ ವ್ಯವಹಾರ ನಡೆಯುತ್ತದೆ. ಹೀಗೆ, ಮತದಾನದ ಹಕ್ಕು ಇರುವ ನಾಗರಿಕ, ಅದನ್ನು ಆಮಿಷಗಳಿಗೆ ಕುರುಡಾಗಿ ಮಾರಿಕೊಂಡು, ಆ ಮೂಲಕ ಭ್ರಷ್ಟರನ್ನು ಆಯ್ಕೆ ಮಾಡಿ, ಅವರಿಂದ ಇನ್ನಷ್ಟು ಆರ್ಥಿಕ ಅಸಮತೋಲನ ಮತ್ತು ಪರಿಸರ ಹಾನಿಗೆ ಕಾರಣನಾಗುತ್ತಾನೆ.
ಪಾರದರ್ಶಕವಾಗಿ ಇರಬೇಕಾಗಿದ್ದ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಇಂತಹ ದುಃಸ್ಥಿತಿ ಹೇಗೆ ಸಾಧ್ಯವಾಯಿತು?

ಮತಗಳನ್ನು ಆಮಿಷಗಳಿಗೆ ಮಾರಿಕೊಳ್ಳುವ ಪ್ರವೃತ್ತಿ ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ ಎನ್ನುವುದಕ್ಕೆ 1974ರಲ್ಲಿ ಕುವೆಂಪು ಅವರು ಮಾಡಿದ ‘ವಿಚಾರಕ್ರಾಂತಿಗೆ ಆಹ್ವಾನ’ ಭಾಷಣವೇ ನಿದರ್ಶನ. ಅವರೇ ಹೇಳಿದಂತೆ- ‘ನಿಜವಾದ ಪ್ರಜಾಸತ್ತೆಯೆಂದರೆ, ಪ್ರಜೆಗಳು ಅನಿರ್ಬಂಧಿತ ಇಚ್ಛಾ ಸ್ವಾತಂತ್ರ್ಯದಿಂದ ಸರ್ವರ ಅಭ್ಯುದಯಕ್ಕಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ಆದರೆ, ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಪ್ರಾಮಾಣಿಕ, ಸಂಭಾವಿತ ಮತ್ತು ಸುಸಂಸ್ಕೃತ ವ್ಯಕ್ತಿ ಅದರ ಹತ್ತಿರ ಸುಳಿಯಲಾರ. ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲುವ ಯಾವುದೇ ವ್ಯಕ್ತಿ ಅಥವಾ ಪಕ್ಷವು ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವಿಲ್ಲ. ಹಾಗಾಗಿ, ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಛೆಯಿದ್ದವರು ಇಂದಿನ ಧನಾಶ್ರಿತ ಚುನಾವಣಾ ಪದ್ಧತಿಯನ್ನು ಬದಲಾಯಿಸಿ ಗುಣಾಶ್ರಿತವನ್ನಾಗಿ ಪರಿವರ್ತಿಸುವ ಹೊಣೆಗಾರಿಕೆ ವಹಿಸಬೇಕಾಗಿದೆ. ಒಂದು ಉಗ್ರ ಕ್ರಾಂತಿ ಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯಸಾಧಕರು, ಗೂಂಡಾಗಳು, ಖದೀಮರು, ಚಾರಿತ್ರ್ಯಹೀನರು ಸರ್ವಾಧಿಕಾರ ನಡೆಸಲು ಅವಕಾಶ ಪಡೆಯುತ್ತಾರೆ’.

ಸುಮಾರು ಅರ್ಧ ಶತಮಾನದ ಹಿಂದೆ ವಿಚಾರ ಕ್ರಾಂತಿಗೆ ಕುವೆಂಪು ನೀಡಿದ ಆಹ್ವಾನ ಇಂದಿಗೂ ಪ್ರಸ್ತುತ ವಾಗಿದೆ, ಮಾತ್ರವಲ್ಲ, ಪ್ರಜಾಪ್ರಭುತ್ವದ ಅಡಿಪಾಯವಾದ ಮತದಾನ ಇನ್ನಷ್ಟು ಕೆಳಮಟ್ಟದ ಹರಾಜಿಗೆ ತೆರೆದುಕೊಂಡಿದೆ. ಇಲ್ಲಿ ಸಾಂದರ್ಭಿಕ ಪ್ರಶ್ನೆಗಳೆಂದರೆ-
ಇಂತಹ ಪರಿಸ್ಥಿತಿಯಲ್ಲಿ ಮತದಾನಕ್ಕೆ ಮೌಲ್ಯ ಪುನರ್‌ ಸ್ಥಾಪಿಸುವುದು ಹೇಗೆ? ಕ್ಷಣಿಕ ಆಮಿಷಗಳಿಗೆ ಬಲಿ ಯಾಗದೆ, ಜವಾಬ್ದಾರಿಯಿಂದ ಮತ ಚಲಾಯಿಸಿ ಎಂದು ಜನರಿಗೆ ತಿಳಿಹೇಳಲು ಸಾಧ್ಯವೇ? ನಮ್ಮನ್ನು ಆಳುವವರು ನಿಜಾರ್ಥದ ಪ್ರಜಾಚಿಂತಕರಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಸೂತ್ರವೆಲ್ಲಿದೆ? ಚುನಾವಣೆಗೆ ನಿಂತ ಅಭ್ಯರ್ಥಿಗಳಲ್ಲಿ ಯಾರೂ ಆಯ್ಕೆಗೆ ಅರ್ಹರಲ್ಲವೆನಿಸಿದರೆ ಮತದಾರ ಏನು ಮಾಡಬಹುದು?

ವರ್ತಮಾನದ ಮತದಾನ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸದೇ ಹೋದಲ್ಲಿ ಪ್ರಜಾಸತ್ತೆಗೆ ಉಳಿಗಾಲವಿಲ್ಲ. ಪಕ್ಷಗಳು ಅಭ್ಯರ್ಥಿಗಳನ್ನು ಮತದಾರರ ಮೇಲೆ ತಮ್ಮ ಇಚ್ಛೆಯನುಸಾರ ಹೇರುತ್ತವೆ ಮತ್ತು ಅವರನ್ನೇ ಆಯ್ಕೆ ಮಾಡಲು ಆಮಿಷಗಳನ್ನು ಒಡ್ಡುತ್ತವೆ. ಅಂದರೆ, ಅಭ್ಯರ್ಥಿಯಾಗುವವನು ಹಣದ ಪ್ರಭಾವದಿಂದ ಆಯ್ಕೆಯಾದಲ್ಲಿ, ಹಣ ಗಳಿಸುವುದನ್ನಷ್ಟೇ
ಧ್ಯಾನಿಸುತ್ತಾನೆಯೇ ವಿನಾ ಪ್ರಜಾಕಲ್ಯಾಣವನ್ನಲ್ಲ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಪ್ರಜಾ ಪ್ರಭುತ್ವದ ಆಶಯಗಳನ್ನು ಹೊತ್ತ ಮತದಾರರ ಮುಂದಿರುವ ಆಯ್ಕೆಯೇನು?

ಸದ್ಯ, ಮತದಾರನ ನಿಯಂತ್ರಣದಲ್ಲಿರುವ ಆಶಾದಾಯಕ ಆಯ್ಕೆಯೆಂದರೆ ನೋಟಾ (NOTA), ಅಂದರೆ ‘ಮೇಲಿನ ಯಾವುದೂ ನನ್ನ ಆಯ್ಕೆಯಲ್ಲ’. ಸದ್ಯಕ್ಕೆ ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದೆಯೇ ವಿನಾ ಯಾವುದೇ ಚುನಾವಣಾ ಮೌಲ್ಯ ಹೊಂದಿಲ್ಲ. ಯಾಕೆಂದರೆ, ಅಕಸ್ಮಾತ್ ನೋಟಾಕ್ಕೆ ಅತಿ ಹೆಚ್ಚಿನ ಮತ ಚಲಾವಣೆಯಾದರೂ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಆದರೂ ಗಮನಾರ್ಹ ಅಂಶವೆಂದರೆ, ಪ್ರಜ್ಞಾವಂತ ಮತದಾರರು ನೋಟಾವನ್ನು ಹೆಚ್ಚೆಚ್ಚು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಕಣದಲ್ಲಿರುವ ಅಭ್ಯರ್ಥಿಗಳಿಗೆ ಅಸಮ್ಮತಿ ಸೂಚಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೂಡ, ‘ದೇಶದ ಆಡಳಿತ ಸೂತ್ರ ಹಿಡಿಯಲು ಮೌಲ್ಯಾಧಾರಿತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯ ಮತ್ತು ಈ ದಿಸೆಯಲ್ಲಿ ‘ನೋಟಾ’ ಸಮರ್ಥ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

ಈಚಿನ ಚುನಾವಣೆಗಳಲ್ಲಿ ನೋಟಾಕ್ಕೆ ಗಣನೀಯ ಸಂಖ್ಯೆಯಲ್ಲಿ ಮತಗಳು ಬೀಳುತ್ತಿವೆ. ಇದು, ಜನರು ದೇಶದ ಪ್ರಜಾಸತ್ತೆಯಲ್ಲಿ ಸುಧಾರಣೆ ಬಯಸು ತ್ತಿದ್ದಾರೆ ಎನ್ನುವುದಕ್ಕೆ ನಿದರ್ಶನ. ಆದರೆ, ಪ್ರಜಾಸತ್ತೆ ಬಲವರ್ಧನೆಗೆ, ಚುನಾವಣಾ ಆಯೋಗವು ನೋಟಾಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ. ಈ ದಿಸೆಯಲ್ಲಿ ತೆಗೆದು ಕೊಳ್ಳಬಹುದಾದ ಕ್ರಮಗಳೆಂದರೆ: ಒಂದು ವೇಳೆ ನೋಟಾ ಅತಿಹೆಚ್ಚು ಮತಗಳನ್ನು ಪಡೆದರೆ, ಆ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳೊಂದಿಗೆ ಮರುಚುನಾವಣೆಯನ್ನು ನಡೆಸಬೇಕು ಮತ್ತು ಸೋತ ರಾಜಕೀಯ ಪಕ್ಷಗಳೇ ಚುನಾವಣಾ ವೆಚ್ಚ ಭರಿಸಬೇಕು (ಸರಿಯಾದ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸದಿದ್ದಕ್ಕಾಗಿ) ಹಾಗೂ ಸೋತ ಅಭ್ಯರ್ಥಿಗಳು ಒಂದು ನಿರ್ದಿಷ್ಟ ಅವಧಿಯವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು.

ನೋಟಾವನ್ನು ನಾಗರಿಕರು ಸಮರ್ಪಕವಾಗಿ ಬಳಸಿದಲ್ಲಿ ಮರುಚುನಾವಣೆ ನಡೆಸಬೇಕಾಗುತ್ತದೆ ಮತ್ತು ಇದರಿಂದ ಚುನಾವಣಾ ವೆಚ್ಚ ಹೆಚ್ಚುತ್ತದೆ ನಿಜ. ಆದರೆ, ಕಳಂಕಿತ ಅಭ್ಯರ್ಥಿಗಳು ಆಯ್ಕೆಯಾಗಿ ದೇಶದ ಸಂಪತ್ತು ಲೂಟಿ ಹೊಡೆಯುವುದರ ಮುಂದೆ ಈ ಖರ್ಚು ನಗಣ್ಯ.

ಇದೊಂದು ದೇಶಸೇವೆಯೂ ಹೌದು. ಆದ್ದರಿಂದ, ಸದ್ಯಕ್ಕೆ ದೇಶದ ಕುರಿತು ಪ್ರಾಮಾಣಿಕವಾಗಿ ಚಿಂತಿಸು ವವರಿಗೆ ಇರುವ ಆಶಾದಾಯಕ ಆಯ್ಕೆಯೆಂದರೆ, ನೋಟಾದ ಕುರಿತು ಜನಜಾಗೃತಿ ಮೂಡಿಸಿ, ಭ್ರಷ್ಟರು ನಮ್ಮನ್ನು ಆಳದಂತೆ ನೋಡಿಕೊಳ್ಳುವುದು. ಅಂದರೆ, ದೇಶದಲ್ಲಿ ವಿಚಾರಕ್ರಾಂತಿಗೆ ಮರು ಆಹ್ವಾನ ನೀಡುವ ಕಾಲ ಸನ್ನಿಹಿತವಾಗಿದೆ ಎನ್ನಬಹುದು. ಸ್ವಸ್ಥ ಸಮಾಜ ಮತ್ತು ಪಾರದರ್ಶಕ ವ್ಯವಸ್ಥೆ ರೂಪಿಸುವ ಪ್ರಯತ್ನಗಳನ್ನು, ನಾವೇ ನಮ್ಮ ಅಲ್ಪಕಾಲಿಕ ವೈಯಕ್ತಿಕ ಹಿತಾಸಕ್ತಿಗಳನ್ನು ಬಿಟ್ಟು ಪ್ರಾಮಾಣಿಕವಾಗಿ ಮಾಡಬೇಕು. ಯಾಕೆಂದರೆ, ಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ಮಾನವ ನಿರ್ಮಿತ ಅವಘಡಗಳಿಗೆ ನಮ್ಮ ಹದಗೆಟ್ಟಿರುವ ವ್ಯವಸ್ಥೆಯೇ ಕಾರಣ. ಅದನ್ನು ಸರಿ ಮಾಡುವುದರಲ್ಲಿಯೇ ನಮ್ಮ ಉಳಿವು ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT