ಮಂಗಳವಾರ, ನವೆಂಬರ್ 29, 2022
29 °C
ಬಿಕ್ಕಟ್ಟು ಪರಿಹಾರವಾಗುವುದು ಜಾಗತಿಕ ಹಿತದೃಷ್ಟಿಯಿಂದ ಒಳ್ಳೆಯದು

ಯುರೋಪ್ ಬಿಕ್ಕಟ್ಟು: ಮುಗಿಯದ ಕಥೆ? ಟಿ.ಎಸ್.ವೇಣುಗೋಪಾಲ್ ಲೇಖನ

ವೇಣುಗೋಪಾಲ್‌ ಟಿ.ಎಸ್‌. Updated:

ಅಕ್ಷರ ಗಾತ್ರ : | |

ಬ್ರಿಟನ್‌ ಇಂದು ಸಂಕಷ್ಟದಲ್ಲಿದೆ. ಈ ಪ್ರಯುಕ್ತ ಬ್ರಿಟನ್ನಿನ ಲಿಜ್‌ ಟ್ರಸ್‌ ನೇತೃತ್ವದ ಸರ್ಕಾರವು ಮಿನಿ ಬಜೆಟ್ ಪ್ರಕಟಿಸಿದೆ. ಅದರಲ್ಲಿ ಅತಿ ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಕಡಿತ ಮಾಡಲಾಗಿತ್ತು. ಇದರಿಂದ ಶ್ರೀಮಂತರು ಹೂಡಿಕೆ ಹೆಚ್ಚಿಸುತ್ತಾರೆ, ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎನ್ನುವುದು ಅದರ ಹಿಂದಿನ ತರ್ಕ. ಆದರೆ ಇಂತಹ
ದ್ದೊಂದು ಕಲ್ಪನೆಯೇ ಒಂದು ಮಿಥ್ಯೆ ಎಂಬುದನ್ನು ಪಾಲ್ ಕ್ರುಗ್ಮನ್ ಅಂತಹ ಅರ್ಥಶಾಸ್ತ್ರಜ್ಞರು ತೋರಿಸಿದ್ದಾರೆ. ತೆರಿಗೆ ಕಡಿತಗೊಳಿಸುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಸರ್ಕಾರ ಅದನ್ನು ಹಿಂತೆಗೆದುಕೊಂಡಿದ್ದರೂ ಬಿಕ್ಕಟ್ಟು ಮುಂದುವರಿದೇ ಇದೆ.

ತೆರಿಗೆ ಕಡಿತಗೊಳಿಸುವ ಬ್ರಿಟನ್ನಿನ ಪ್ರಸ್ತಾವವನ್ನು ಐಎಂಎಫ್ ಕೂಡ ವಿರೋಧಿಸಿತ್ತು. ಮಾರುಕಟ್ಟೆ ತೀವ್ರವಾಗಿ ಕುಸಿದಿದ್ದರಿಂದ ಆರ್ಥಿಕತೆಯಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ದೀರ್ಘಕಾಲೀನ ಬಾಂಡುಗಳನ್ನು ಕೊಳ್ಳಲು ಕೇಂದ್ರ ಬ್ಯಾಂಕ್‌ ತಕ್ಷಣ ಮುಂದಾಯಿತು. ನಿಜ, ಬ್ರಿಟನ್ ಅರ್ಜೆಂಟೀನಾ ಅಲ್ಲ. ಅದಕ್ಕೆ ಸರಿಪಡಿಸಿಕೊಳ್ಳುವ ಸಾಮರ್ಥ್ಯವಿದೆ. ಆದರೆ ಮಾರುಕಟ್ಟೆಯ ಪ್ರತಿಕ್ರಿಯೆ ಹಾಗೂ ಮಧ್ಯಪ್ರವೇಶಿಸಲು ಕೇಂದ್ರ ಬ್ಯಾಂಕ್ ತೋರಿದ ಆತುರ ನೋಡಿದರೆ ಸರ್ಕಾರದ ಬಗ್ಗೆ ಇರುವ ವಿಶ್ವಾಸದ ಕೊರತೆ ಕಾಣುತ್ತಿದೆ.

ರಷ್ಯಾದಿಂದ ನೈಸರ್ಗಿಕ ಇಂಧನ ಬರುವುದು ನಿಂತ ಮೇಲೆ ಅದರ ಬೆಲೆ ವಿಪರೀತವಾಯಿತು. ಸಾಮಾನ್ಯರ ಕೈಗೆಟುಕದ ಸರಕಾಯಿತು. ಹಣದುಬ್ಬರವೂ ಸೇರಿಕೊಂಡಿತು. ಇಷ್ಟು ಸಾಲದೆಂಬಂತೆ ಪೌಂಡ್ ಮೌಲ್ಯವು ಡಾಲರ್‌ಗಿಂತ ಕಡಿಮೆಯಾಯಿತು. ಸಾಮಾನ್ಯರಿಗೆ ಬದುಕುವುದಕ್ಕೆ ಸರ್ಕಾರದ ನೆರವು ಅನಿವಾರ್ಯ
ವಾಯಿತು. ಕೆಲವು ಕಾರ್ಪೊರೇಟ್‌ ಉದ್ದಿಮೆಗಳು ಪೆಟ್ರೋಲ್ ಮಾರಿ ವಿಪರೀತ ಲಾಭ ಮಾಡಿಕೊಂಡದ್ದೂ ವಾಸ್ತವ. ಅವರ ಲಾಭದ ಮೇಲೆ ತೆರಿಗೆ ಹಾಕಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕೆ ಸರ್ಕಾರ ತಯಾರಿಲ್ಲ ಅನ್ನುವುದು ದುರಂತ. ಬ್ರಿಟನ್ ಮಾತ್ರವಲ್ಲ, ಇಡೀ ಯುರೋಪ್ ಇಂಥದ್ದೇ ಬಿಕ್ಕಟ್ಟಿನಲ್ಲಿದೆ. ಏರುತ್ತಿರುವ ಇಂಧನದ ಬೆಲೆಯನ್ನು ನಿಭಾಯಿಸಲಾರದೆ ಸಾವಿರಾರು ಪ್ರಮುಖ ಕೈಗಾರಿಕೆಗಳು ಮುಚ್ಚಿಹೋಗುತ್ತಿವೆ. ಇದಕ್ಕೆ ಕೊರೊನಾ ಅಥವಾ ಉಕ್ರೇನ್ ಯುದ್ಧವನ್ನು ಹೊಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಇದಕ್ಕೂ ಮೊದಲೇ ಯುರೋಪಿಯನ್ ಒಕ್ಕೂಟ ಸಮಸ್ಯೆಯಲ್ಲಿತ್ತು. ಯುದ್ಧದಿಂದ ಸಮಸ್ಯೆ ಬಿಗಡಾಯಿಸಿದೆ.

ಜಾಗತಿಕ ಯುದ್ಧಗಳು ಯುರೋಪನ್ನು ಬಹಳಷ್ಟು ನಾಶ ಮಾಡಿದ್ದವು. ಎರಡನೆಯ ಮಹಾಯುದ್ಧದ ನಂತರ ಅದರ ಪುನರ್‌ನಿರ್ಮಾಣಕ್ಕೆ ಐಎಂಎಫ್ ಉದಾರವಾಗಿ, ಬೃಹತ್ ಪ್ರಮಾಣದಲ್ಲಿ ನೆರವು ನೀಡಿತು. ನೀವು ಅದನ್ನು ಇಂದು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಪರಿಸ್ಥಿತಿ ಹಾಗಿತ್ತು. ಬೆಳೆಯುತ್ತಿದ್ದ ಸಮಾಜವಾದಿ ಅಲೆಯಿಂದ ಅಮೆರಿಕ ಆತಂಕಗೊಂಡಿತ್ತು. ಯುರೋಪಿನ ಆರ್ಥಿಕ ಪ್ರಗತಿಗೆ ರಫ್ತು ಅನಿವಾರ್ಯವಾಗಿತ್ತು. ಅದಕ್ಕಾಗಿ ಐರೋಪ್ಯ ರಾಷ್ಟ್ರಗಳ ನಡುವೆ ವ್ಯಾಪಾರವನ್ನು ಪ್ರೋತ್ಸಾಹಿಸಲಾಯಿತು. ಅದು ಅವುಗಳ ನಡುವೆ ಏಕತೆಗೆ ಕಾರಣವಾಯಿತು. ಜನಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ಬಂದವು. ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ, ಪ್ರಗತಿ, ಉದ್ಯೋಗ, ಕಾರ್ಮಿಕರ ಸ್ಥಿತಿಯಲ್ಲಿ ಸುಧಾರಣೆ ಸಾಧ್ಯವಾಗಿತ್ತು. ಅದು ಬಂಡವಾಳಶಾಹಿ ವ್ಯವಸ್ಥೆಯ ಸುವರ್ಣಯುಗವೆಂದು ಅನಿಸಿಕೊಂಡಿತ್ತು.

ಪರಿಸ್ಥಿತಿ ಹಾಗೇ ಉಳಿಯಲಿಲ್ಲ. ಹಣದುಬ್ಬರ ಕಾಣಿಸಿಕೊಂಡಿತು. ಅಗತ್ಯ ವಸ್ತುಗಳು, ಅದರಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿತು. ಜೊತೆಗೆ ಆರ್ಥಿಕ ಸ್ಥಗಿತತೆಯೂ ಸೇರಿಕೊಂಡು ಸ್ಟಾಗ್‍ಫ್ಲೇಷನ್- ಸ್ಥಗಿತದುಬ್ಬರದ ಸ್ಥಿತಿ ನಿರ್ಮಾಣವಾಯಿತು. ನವಉದಾರವಾದಿ ಆರ್ಥಿಕತೆ ಪ್ರಾರಂಭವಾಗಿದ್ದೂ
ಆಗಲೇ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂಡವಾಳ ಹರಿದುಹೋಗಲು ಅವಕಾಶ ಮಾಡಿಕೊಡಲಾಯಿತು. ಹೆಚ್ಚು ಲಾಭ ಸಿಗುವ ಕಡೆಗೆ ಬಂಡವಾಳ ಹರಿದು ಹೋಗುವುದಕ್ಕೆ ಪ್ರಾರಂಭಿಸಿತು. ಇದರಿಂದ ಆರ್ಥಿಕತೆಯಲ್ಲಿ ಅಸ್ಥಿರತೆ ಪ್ರಾರಂಭವಾಯಿತು. ಹಾಗೆಯೇ ವಿನಿಮಯ ದರದಲ್ಲಿ ಏರಿಳಿತ ಶುರುವಾಯಿತು.

ಕಾರ್ಪೊರೇಟ್ ಉದ್ದಿಮೆಗಳನ್ನು ಓಲೈಸಿಕೊಳ್ಳುವುದಕ್ಕೆ ಬೇಕಾದಂತೆ ಆರ್ಥಿಕ ನೀತಿಗಳನ್ನು ಅವು ರೂಪಿಸಲಾರಂಭಿಸಿದವು. ಅನಿಲ ಹಾಗೂ ವಿದ್ಯುತ್ ವಿತರಣೆ ಖಾಸಗೀಕರಣಗೊಂಡವು. ಇಂದಿನ ಇಂಧನ ಬಿಕ್ಕಟ್ಟನ್ನು ಬಳಸಿಕೊಂಡು ತೈಲ ಕಂಪನಿಗಳು ಹೇರಳ ಲಾಭ ಮಾಡಿಕೊಳ್ಳುತ್ತಿವೆ. ಹಾಗೆಯೇ ಯುದ್ಧದಲ್ಲಿ ಉಕ್ರೇನಿಗೆ ನೆರವಾಗುತ್ತೇವೆಂಬ ನೆವದಲ್ಲಿ ಶಸ್ತ್ರೋದ್ಯಮ ಲಾಭ ಮಾಡಿಕೊಂಡಿತು. ಇಂಧನವನ್ನೇ ನೆಚ್ಚಿಕೊಂಡ ಉದ್ದಿಮೆಗಳು ಒಂದೊಂದಾಗಿ ಮುಚ್ಚತೊಡಗಿವೆ. ಸಣ್ಣ ಉದ್ದಿಮೆಗಳು ಹಾಗೂ ಸಾಮಾನ್ಯರ ಸ್ಥಿತಿಯಂತೂ ಕೇಳುವುದೇ ಬೇಡ. ಇದೇ ಸಮಯಕ್ಕೆ ಪ್ರಗತಿ ಹಾಗೂ ಸ್ಥಿರತೆಯನ್ನು ಸಾಧಿಸುವ ದೃಷ್ಟಿಯಿಂದ ಕೆಲವು ‘ಶಿಸ್ತು’ ಪಾಲಿಸಲು ಈ ರಾಷ್ಟ್ರಗಳು ಒಪ್ಪಂದವೊಂದನ್ನು ಮಾಡಿಕೊಂಡವು. ಉದಾಹರಣೆಗೆ, ವಿತ್ತೀಯ ಕೊರತೆಯು ಜಿಡಿಪಿಯ ಶೇ 3ರಷ್ಟನ್ನು ಮೀರಬಾರದು, ಸಾರ್ವಜನಿಕ ಸಾಲವು ಜಿಡಿಪಿಯ ಶೇ 60ರಷ್ಟನ್ನು ಮೀರಬಾರದು. ಈ ಸಂಖ್ಯೆಗಳ ಆಯ್ಕೆಗೆ ಒಂದು ನಿರ್ದಿಷ್ಟ ಕಾರಣವಿಲ್ಲ. ಸಾಲದ ಪ್ರಮಾಣವು ಹೂಡಿಕೆಯಿಂದ ಬರುವ ವರಮಾನವನ್ನು ಆಧರಿಸಿರುತ್ತದೆ. ಜಪಾನಿನ ಸಾಲದ ಪ್ರಮಾಣವು ಜಿಡಿಪಿಯ ಶೇ 240ರಷ್ಟಿದೆ. ಅಲ್ಲಿ ಅಂತಹ ಸಮಸ್ಯೆಯಿಲ್ಲ. ಅದೇ ಸ್ಪೇನಿನಲ್ಲಿ ಶೇ 53ರಷ್ಟು ಮಾತ್ರ ಇದೆ. ಆದರದು ತೀವ್ರ ಸಮಸ್ಯೆಯಲ್ಲಿದೆ.

ವಿತ್ತೀಯ ಕೊರತೆಯು ಶೇ 3ರಷ್ಟನ್ನು ಮೀರಬಾರದು ಎಂದಾಗ ಸರ್ಕಾರದ ವೆಚ್ಚದಲ್ಲಿ ಕಡಿತ ಅನಿವಾರ್ಯವಾಯಿತು. ಆರೋಗ್ಯ, ಶಿಕ್ಷಣ, ಸಾರ್ವಜನಿಕ ನೈರ್ಮಲ್ಯವು ನಿರ್ಲಕ್ಷ್ಯಕ್ಕೆ ಒಳಗಾದವು. ಎಷ್ಟೋ ಸಬ್ಸಿಡಿಗಳು ನಿಂತವು. ಇದರಿಂದಾಗಿ ಬೇಡಿಕೆಗೂ ಹೊಡೆತ ಬಿತ್ತು. ಉದ್ಯೋಗಾವಕಾಶಗಳು ಕಮ್ಮಿಯಾದವು. ಅಸಮಾನತೆ ಏರ
ತೊಡಗಿತು. ಜನರಲ್ಲಿ ಅಸಮಾಧಾನ, ಅತೃಪ್ತಿಯೂ ಹೆಚ್ಚಿತು. ಇದಕ್ಕೊಂದು ಬಲಿಪಶು ಬೇಕು. ಈಗ ಸದ್ಯಕ್ಕೆ ವಲಸಿಗರ ಕಡೆ ಕೈತೋರಿಸಲಾಗುತ್ತಿದೆ. ‘ಅವರು ನಮ್ಮ ಕೆಲಸ ಕಸಿದಿದ್ದಾರೆ’ ಎಂದು ಪ್ರಚಾರ ಮಾಡಲಾಗುತ್ತಿದೆ. ನಮಗಿಂತ ಪ್ರಬಲರಲ್ಲದವರನ್ನು ವಿರೋಧಿಸುವುದು ಸುಲಭ. ಕೈಗೆ ಸಲೀಸಾಗಿ ಸಿಗುತ್ತಾರೆ. ತಮಾಷೆಯೆಂದರೆ, ವಲಸಿಗರು ಕಡಿಮೆ ಇರುವೆಡೆ ವಿರೋಧ ಹೆಚ್ಚಿಗೆ ಇದೆ. ಜನರ ಹತಾಶೆಗೆ ನಿಜವಾದ ಕಾರಣ ಆರ್ಥಿಕ ಸಮಸ್ಯೆ. ಅದಕ್ಕೆ ಕಾರಣ ಸರ್ಕಾರದ ಆರ್ಥಿಕ ನೀತಿ.

ಹವಾಮಾನ ವೈಪರೀತ್ಯ, ಇಂಗಾಲದ ಹೊರ ಸೂಸುವಿಕೆ ಈಗ ಮುಖ್ಯ ಸಮಸ್ಯೆಗಳಾಗಿಲ್ಲ. ಪಳೆಯುಳಿಕೆ ಇಂಧನದ ಉತ್ಪಾದನೆ ಹೆಚ್ಚಿಸುವುದರಲ್ಲಿ ಎಲ್ಲರೂ ಟ್ರಂಪ್‌ ಅವರನ್ನು ಮೀರಿಸಹೊರಟಿದ್ದಾರೆ. ಬೈಡೆನ್ ಅವರು ಟ್ರಂಪ್‌ ಅವರನ್ನು ಮೀರಿಸಿ ಕಲ್ಲಿದ್ದಲು ಉತ್ಪಾದಿಸ ಹೊರಟಿದ್ದಾರೆ. ಪಳೆಯುಳಿಕೆ ಇಂಧನದ ಉತ್ಪಾದನೆ
ಯನ್ನು ನಿಯಂತ್ರಿಸಿ, ಪುನರ್‌ಬಳಕೆ ಇಂಧನದ ಉತ್ಪಾದನೆಗೆ ಗಮನ ಕೊಡಬೇಕು ಅನ್ನುವುದನ್ನು ಸರ್ಕಾರಗಳು ಮರೆತಿವೆ. ರಾಜಕೀಯ ಪರಿಣಾಮ ಅಂದರೆ, ಇಂದು ಯುರೋಪಿನಲ್ಲಿ ಬಲಪಂಥೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿವೆ. ಇಟಲಿಯಲ್ಲಿ ಅಧಿಕಾರಕ್ಕೆ ಬಂದಿರುವ ಪಕ್ಷವು ವಲಸಿಗರ ವಿರುದ್ಧ ಗಟ್ಟಿಯಾಗಿ ಸದ್ದು ಮಾಡುತ್ತಿದೆ. ಈ ಸರ್ಕಾರಗಳು ಆರ್ಥಿಕ ಪ್ರಗತಿಗೆ ಕಾರ್ಪೊರೇಟ್‌ ಸಂಸ್ಥೆಗಳನ್ನು ನೆಚ್ಚಿಕೊಂಡಿವೆ. ಬ್ರಿಟನ್ನಿನ ಮಿನಿ ಬಜೆಟ್ ಇದನ್ನು ಸ್ಪಷ್ಟವಾಗಿ ಹೇಳಿದೆ.

ಆರ್ಥಿಕತೆಯ ದಿಕ್ಕು ಬದಲಾಗಬೇಕೆಂಬುದು ಸ್ಪಷ್ಟ. ಬಿಕ್ಕಟ್ಟನ್ನು ಸೃಷ್ಟಿಸಿದ ಆರ್ಥಿಕ ನೀತಿಗಳೇ ಬಿಕ್ಕಟ್ಟನ್ನು ಪರಿಹರಿಸುತ್ತವೆ ಎಂದು ಭಾವಿಸುವುದು ಸೂಕ್ತವಲ್ಲ. ಕಾರ್ಪೊರೇಟ್ ಸಂಸ್ಥೆಗಳ ಲಾಭಕ್ಕೆ ಕಡಿವಾಣ ಬೇಕು. ಬಿಕ್ಕಟ್ಟನ್ನು ತೀವ್ರಗೊಳಿಸುವ ಯುದ್ಧ ನಿಲ್ಲಬೇಕು. ಯುರೋಪ್ ಒಕ್ಕೂಟವಾಗಿ ಉಳಿಯುವ ದೃಷ್ಟಿಯಿಂದಲೂ ಇದು ಅವಶ್ಯಕ. ಜೊತೆಗೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಯಾವುದೇ ದೇಶದ ಬಿಕ್ಕಟ್ಟು ಆ ದೇಶದ ಬಿಕ್ಕಟ್ಟಾಗಿಯಷ್ಟೇ ಉಳಿಯುವುದಿಲ್ಲ. ಅದಕ್ಕೆ ಸಂಬಂಧಪಡದ ರಾಷ್ಟ್ರದ ದುರ್ಬಲರನ್ನೂ ಬಾಧಿಸುತ್ತದೆ.

ರಷ್ಯಾದಲ್ಲಿ ನಾಯಕತ್ವ ಬದಲಿಸುವುದು ನಮ್ಮ ಗುರಿಯಾಗಬೇಕಾಗಿಲ್ಲ. ಮಿನ್ಸ್ಕ್ ಒಪ್ಪಂದವನ್ನು ಫ್ರಾನ್ಸ್ ಹಾಗೂ ಜರ್ಮನಿ ಬೆಂಬಲಿಸಿದ್ದವು. ವಿವಾದಕ್ಕೆ ಅದು ಪರಿಹಾರವೆಂದು ಭಾವಿಸಲಾಗಿತ್ತು. ಅಂತಹ ಒಂದು ಒಪ್ಪಂದ ಸಾಧ್ಯವಾದರೆ ಹೆಚ್ಚಿನ ಅನಾಹುತ ತಪ್ಪುತ್ತದೆ. ಅಮೆರಿಕಕ್ಕೆ ಯುರೋಪ್ ಸಾಮಂತನಾಗಿ ಕೆಲಸ ಮಾಡದೆ, ಸ್ವತಂತ್ರ ನಿಲುವು ತೆಗೆದುಕೊಂಡು, ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ನೆರವಾದರೆ ಎಲ್ಲರಿಗೂ ಒಳ್ಳೆಯದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು