ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಆರ್ಥಿಕತೆ ಬೆಳೆಯುತ್ತಿದೆ, ಉದ್ಯೋಗ ಸಿಗುತ್ತಿದೆಯೇ?

ಬೆಳವಣಿಗೆ-– ಉದ್ಯೋಗದ ನಡುವಿನ ಕೊಂಡಿ ಕಳಚಿರುವುದಕ್ಕೆ ಕಾರಣ ದೇಶದ ಅಸಮಾನ ಪ್ರಗತಿಯಲ್ಲಿ ಇದೆ
Last Updated 17 ಜೂನ್ 2022, 20:18 IST
ಅಕ್ಷರ ಗಾತ್ರ

ಅಂಕಿ–ಅಂಶಗಳಲ್ಲಿ ದೇಶದ ಅರ್ಥ ವ್ಯವಸ್ಥೆಯು ಬಹಳ ಯಶಸ್ವಿ ವರ್ಷವನ್ನು ಪೂರೈಸಿದೆ. ರಫ್ತು ಪ್ರಮಾಣವು ದಾಖಲೆಯ ಮಟ್ಟದಲ್ಲಿದೆ. ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಲಾಭವು ದುಪ್ಪಟ್ಟಾಗಿದೆ. ದೇಶದ ಚೈತನ್ಯಶಾಲಿ ಮಧ್ಯಮ ವರ್ಗವು ಸಿನಿಮಾ ವೀಕ್ಷಿಸಲು, ಕಾರು ಖರೀದಿಸಲು, ನಿವೇಶನ ಅಥವಾ ಫ್ಲ್ಯಾಟ್ ಕೊಳ್ಳಲು, ರಜಾ ದಿನಗಳನ್ನು ಕಳೆಯಲು ಹೆಚ್ಚು ಹೆಚ್ಚು ಹಣ ಖರ್ಚು ಮಾಡುತ್ತಿದೆ.

ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ. ಅಂಕಿ–ಅಂಶಗಳು ಬಹಳ ಚೆನ್ನಾಗಿದ್ದರೂ, ಇವು ದೇಶದ ಕೋಟ್ಯಂತರ ಜನರ ವಾಸ್ತವವನ್ನು ಪ್ರತಿಫಲಿಸುತ್ತಿಲ್ಲ. ಆರ್ಥಿಕ ಬೆಳವಣಿಗೆಯು ಸುಶಿಕ್ಷಿತ ಯುವಕರಿಗೆ ಅಗತ್ಯವಿರುವ ಉದ್ಯೋಗಗಳಾಗಿ ಪರಿವರ್ತನೆ ಕಾಣುತ್ತಿಲ್ಲ. ದೇಶದ ಬಹುದೊಡ್ಡ ವರ್ಗವು ಅಸಂಘಟಿತ ವಲಯದಲ್ಲಿ ಜೀವನೋಪಾಯ ಕಂಡುಕೊಂಡಿದೆ. ಈ ವರ್ಗವು ಈಚಿನ ತಿಂಗಳುಗಳಲ್ಲಿ ಹೆಚ್ಚಿನ ಹಣದುಬ್ಬರ, ಅದರಲ್ಲೂ ಮುಖ್ಯವಾಗಿ ಆಹಾರ ವಸ್ತುಗಳ ಹಣದುಬ್ಬರದ ಬಿಸಿ ಅನುಭವಿಸುತ್ತಿದೆ.

ಬೆಳವಣಿಗೆ ಮತ್ತು ಉದ್ಯೋಗದ ನಡುವಿನ ಕೊಂಡಿ ಕಳಚಿರುವುದಕ್ಕೆ ಕಾರಣ ದೇಶದ ಅಸಮಾನ ಪ್ರಗತಿಯಲ್ಲಿ ಇದೆ. ಬೆಳವಣಿಗೆಯ ಪ್ರಯೋಜನವು ದೇಶದ ನಗರವಾಸಿ ಮಧ್ಯಮ ವರ್ಗಕ್ಕಿಂತ ಕೆಳಗಿನ ವರ್ಗಗಳತ್ತ ಹರಿದು
ಬರುತ್ತಿಲ್ಲ. ಈ ಅಂತರವನ್ನು ಕೋವಿಡ್‌ ಸಾಂಕ್ರಾಮಿಕವು ಇನ್ನಷ್ಟು ಹೆಚ್ಚಿಸಿದೆ. ದೇಶದ ಕೋಟ್ಯಂತರ ಜನ ಬಡತನದ ಕೂಪಕ್ಕೆ ಬಿದ್ದಿದ್ದಾರೆ. ಆದರೆ, ದೇಶದ ಶತಕೋಟ್ಯಧೀಶರ ಸಂಖ್ಯೆಯು ಹೆಚ್ಚಾಗಿದೆ ಎಂದು ಆಕ್ಸ್‌ಫ್ಯಾಮ್‌ ವರದಿಯು ಹೇಳಿದೆ.

ಹೇಗಾದರೂ ಮಾಡಿ ಬೆಳವಣಿಗೆ ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ಮಹತ್ವಾಕಾಂಕ್ಷೆ ಕೂಡ ಸಂಪತ್ತು ಕೆಲವರಲ್ಲಿ ಮಾತ್ರಕ್ರೋಡೀಕೃತವಾಗಿರಲು ಕಾರಣ. ಮೋದಿ ಅವರು 2019ರಲ್ಲಿ ಮರುಆಯ್ಕೆ ಆದಾಗ, 2024ರೊಳಗೆ ದೇಶದ ಅರ್ಥ ವ್ಯವಸ್ಥೆಯ ಗಾತ್ರವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ್ದರು. ಮಾರ್ಚ್‌ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯು ಶೇಕಡ 8.7ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಕೇಂದ್ರ ಸರ್ಕಾರ ಈಚೆಗೆ ತಿಳಿಸಿದೆ. ಆದರೆ ದೇಶಿ ಹೂಡಿಕೆ ಮಂದಗತಿಯಲ್ಲಿದೆ,ಸರ್ಕಾರದ ಕಡೆಯಿಂದ ಆಗುವ ನೇಮಕಾತಿಗಳು ನಿಧಾನಗತಿಗೆ ತಿರುಗಿವೆ. ಹೀಗಾಗಿ, ನಿರುದ್ಯೋಗವನ್ನುನಿಭಾಯಿಸಲು ದೇಶವು ಇಂಧನ, ಆಹಾರ ಮತ್ತು ವಸತಿಗೆ ಸಬ್ಸಿಡಿ ನೀಡುತ್ತಿದೆ. ದೇಶದ 130 ಕೋಟಿಗೂ ಹೆಚ್ಚಿನ ಜನಸಂಖ್ಯೆಯಲ್ಲಿ ಮೂರನೆಯ ಎರಡರಷ್ಟು ಜನರಿಗೆ ಉಚಿತ ಆಹಾರ ಧಾನ್ಯ ತಲುಪುತ್ತಿದೆ.

ಈ ಕ್ರಮಗಳಿಂದಾಗಿ ದೇಶದಲ್ಲಿನ ಅಸಮಾನತೆಯು ದಶಕಗಳ ಕನಿಷ್ಠ ಮಟ್ಟ ತಲುಪಿದೆ ಎಂದು ಕೆಲವು ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ, ಉದ್ಯೋಗ ಸೃಷ್ಟಿ ಅಗತ್ಯ ಪ್ರಮಾಣದಲ್ಲಿ ಆಗುತ್ತಿಲ್ಲದಿರುವುದನ್ನು
ಮರೆಮಾಚಲು ಸಬ್ಸಿಡಿಗಳನ್ನು ಶಾಶ್ವತವಾಗಿ ಬಳಸಿಕೊಳ್ಳಲು ಆಗುವುದಿಲ್ಲ ಎಂದು ಸರ್ಕಾರದ ಟೀಕಾಕಾರರು ಹೇಳುತ್ತಿದ್ದಾರೆ. ಕಾಲೇಜಿನಿಂದ ಪದವಿ ಪಡೆದು ಹೊರಬರುವ, ಕೃಷಿ ಜಮೀನಿನಿಂದ ಬರುವ ಲಕ್ಷಾಂತರ ಜನ ಕೃಷಿಯೇತರ ಉದ್ಯೋಗವನ್ನು ಮುಂದಿನ ವರ್ಷಗಳಲ್ಲಿ ಅರಸಲಿದ್ದಾರೆ ಎಂಬ ಕಾರಣಕ್ಕೆ ಟೀಕಾಕಾರರ ಮಾತುಗಳು ಸತ್ಯ ಅನಿಸುತ್ತವೆ.

‘ಬೆಳವಣಿಗೆ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗ ಸೃಷ್ಟಿ ಆಗದಿರುವುದು ಭಾರತದ ಬೆಳವಣಿಗೆಯ ಕಥನದಲ್ಲಿ ಹಿಂದಿನಿಂದಲೂ ಕಾಣುವಂಥದ್ದು’ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಹೇಳುತ್ತಾರೆ. ಹರಿಯಾಣದ ಸ್ವೀಟಿ ಸಿನ್ಹಾ ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಆದರೆ ಕೊರೊನಾ ವೈರಾಣುವಿನ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯು 2020–21ರಲ್ಲಿ ಕುಸಿತ ದಾಖಲಿಸಿತು. ವಿದ್ಯಾರ್ಥಿಗಳು ಶಾಲೆ ತೊರೆದರು, ಸ್ವೀಟಿ ಅವರು ಕೆಲಸ ಕಳೆದುಕೊಂಡರು. ಸ್ವೀಟಿ ಈಗ ಮತ್ತೆ ಕೆಲಸ ಅರಸುತ್ತಿದ್ದಾರೆ. ವೇತನ ಕಡಿಮೆ ಎಂದು ಕೆಲವು ಅವಕಾಶ ಕೈಬಿಟ್ಟಿದ್ದಾರೆ. ‘ನನಗೆ ಕೆಲಸವೇ ಸಿಗದಿದ್ದರೆ ಹೇಗೆ ಎಂದು ಕೆಲವೊಮ್ಮೆ ಭಯವಾಗುತ್ತದೆ. ನಿರುದ್ಯೋಗದ ಕಾರಣದಿಂದಾಗಿ ನನ್ನ ಸ್ನೇಹಿತರೂ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

ಆದರೆ, ಭಾರತದ ರಾಜಕಾರಣಿಗಳು ನಿರುದ್ಯೋಗಕ್ಕಿಂತಲೂ ಹೆಚ್ಚಿನ ಗಮನವನ್ನು ಹಣದುಬ್ಬರದ ಕಡೆ ನೀಡಿದ್ದಾರೆ ಎಂದು ವ್ಯಾಸ್ ಹೇಳುತ್ತಾರೆ. ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಪ್ರಯತ್ನಿಸಿವೆ. ಗೋಧಿ, ಸಕ್ಕರೆ ರಫ್ತಿಗೆ ನಿರ್ಬಂಧ ಹೇರಿದ್ದಾರೆ, ಬಡ್ಡಿ ದರ ಹೆಚ್ಚಿಸಿದ್ದಾರೆ, ಇಂಧನದ ಮೇಲಿನ ಸುಂಕ ತಗ್ಗಿಸಿದ್ದಾರೆ.

ಬ್ಯಾಂಕ್‌ ಆಫ್ ಇಂಗ್ಲೆಂಡ್, ಅಮೆರಿಕದ ಫೆಡರಲ್ ರಿಸರ್ವ್‌ ತಮ್ಮ ದೇಶಗಳು ಬೆಲೆ ಏರಿಕೆಯ ಪರಿಣಾಮವಾಗಿ ಕಡಿಮೆ ಪ್ರಮಾಣದ ಬೆಳವಣಿಗೆ ದರವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿವೆ. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ರೀತಿ ಹೇಳುತ್ತಿಲ್ಲ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್‌ ಸಂಸ್ಥೆಯಲ್ಲಿ ವಿಶ್ಲೇಷಕಿಯಾಗಿರುವ ಪ್ರಿಯಾಂಕಾ ಕಿಶೋರ್ ಹೇಳುತ್ತಾರೆ. ‘ಭಾರತಕ್ಕೆ ಬೆಳವಣಿಗೆ ದರ ಮುಖ್ಯ. ಅದರ ಹಿಂದೆ ರಾಜಕೀಯ ಉದ್ದೇಶ ಇದೆ’ ಎಂದು ಅವರು ವಿವರಿಸುತ್ತಾರೆ.

ಉಕ್ರೇನ್‌ನ ಬಂದರುಗಳ ಮೇಲೆ ರಷ್ಯಾ ದಿಗ್ಬಂಧನ ಹೇರಿದ ನಂತರದಲ್ಲಿ ಜಾಗತಿಕ ಮಟ್ಟದಲ್ಲಿ ಧಾನ್ಯಗಳ ಕೊರತೆಯಾಯಿತು. ಏಪ್ರಿಲ್‌ನಲ್ಲಿ ಮೋದಿ ಅವರು, ಜಗತ್ತಿಗೆ ಆಹಾರ ನೀಡಲು ಭಾರತದ ರೈತರು ನೆರವಾಗಬಹುದು ಎಂದು ಹೇಳಿದ್ದರು. ಆದರೆ, ಜಾಗತಿಕ ಮಟ್ಟದಲ್ಲಿ ಗೋಧಿಯ ಕೊರತೆಯು ಬೆಲೆ ಏರಿಕೆಗೆ ಕಾರಣವಾದಾಗ, ದೇಶಿ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ಕೇಂದ್ರ ಸರ್ಕಾರವು ಗೋಧಿ ರಫ್ತು ನಿಷೇಧಿಸಿತು.

ಬೃಹತ್ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದಕ್ಕಿಂತಲೂ ಇಂತಹ ತಾತ್ಕಾಲಿಕ ಕ್ರಮಗಳು ಹೆಚ್ಚು ಸುಲಭದವು. ‘ಗೋದಾಮಿನಲ್ಲಿ ಗೋಧಿ ಇರುತ್ತದೆ. ಅದನ್ನು ಮನೆ ಬಾಗಿಲಿಗೆ ತಲುಪಿಸಿ ತಕ್ಷಣದ ಸಮಾಧಾನ ಹೊಂದಬಹುದು. ಆದರೆ, ಉದ್ಯೋಗದ ವಿಚಾರವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುವುದು ದೀರ್ಘಾವಧಿಯವು, ಅವುಗಳ ಪರಿಣಾಮ ಅನುಭವಕ್ಕೆ ಸಿಗುವುದೂ ಇಲ್ಲ’ ಎಂದು ವ್ಯಾಸ್ ಹೇಳಿದರು. ಇನ್ನೂ ಅಭಿವೃದ್ಧಿ ಹೊಂದಿಲ್ಲದ ತಯಾರಿಕಾ ವಲಯವನ್ನು ಗಟ್ಟಿಗೊಳಿಸಲು ಕ್ರಮ ಕೈಗೊಳ್ಳಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ವಾಣಿಜ್ಯೋದ್ಯಮ ನಡೆಸುವುದನ್ನು ಕಷ್ಟವಾಗಿಸುವ ನಿಯಮಗಳನ್ನು ಸಡಿಲಗೊಳಿಸುವ ಕೆಲಸವನ್ನೂ ಮಾಡಬೇಕು ಎಂದು ಅವರು ಹೇಳುತ್ತಾರೆ.

ರಫ್ತು ಭಾರತದ ಅರ್ಥ ವ್ಯವಸ್ಥೆಯ ಪಾಲಿಗೆ ಹಿಂದಿನಿಂದಲೂ ಶಕ್ತಿ ಇದ್ದಂತೆ. ಈಗ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿದಿದೆ. ಇದು ಸಾಮಾನ್ಯವಾಗಿ ರಫ್ತು ಹೆಚ್ಚಿಸಲು ನೆರವಾಗುತ್ತದೆ. ಆದರೆ, ಅಮೆರಿಕದಲ್ಲಿನ ಹಣದುಬ್ಬರ ಮತ್ತು ಯುರೋಪಿನಲ್ಲಿನ ಯುದ್ಧದ ಸಂದರ್ಭವು ಭಾರತದ ಬಟ್ಟೆಯ ರಫ್ತಿನ ಮೇಲೆ ದುಷ್ಪರಿಣಾಮ ಬೀರಲು ಆರಂಭಿಸಿವೆ ಎಂದು ತಮಿಳುನಾಡಿನ ವ್ಯಾಪಾರಿಗಳ ಸಂಘವೊಂದರ ಅಧ್ಯಕ್ಷ ರಾಜಾ ಎಂ. ಷಣ್ಮುಗಂ ಹೇಳುತ್ತಾರೆ. ‘ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ನಾವು ಮೊದಲು ಬಹಳ ಸಣ್ಣ ಪ್ರಮಾಣದ ಲಾಭ ಇಟ್ಟುಕೊಳ್ಳುತ್ತಿದ್ದೆವು. ಈಗ ನಷ್ಟ ಅನುಭವಿಸುತ್ತಿದ್ದೇವೆ. ಹೀಗಾಗಿ, ರಫ್ತು ಮಾಡುವವರಿಗೆ ಸಾಮಾನ್ಯವಾಗಿ ಖುಷಿ ಕೊಡುವ ಸಂದರ್ಭವು ಈಗ ಖುಷಿ ಕೊಡುತ್ತಿಲ್ಲ’ ಎಂದು ಅವರು ಪರಿಸ್ಥಿತಿ ತೆರೆದಿಡುತ್ತಾರೆ.

ಭಾರತದ ಶ್ರಮಿಕ ವರ್ಗ ಹಾಗೂ ನಿರುದ್ಯೋಗಿಗಳ ಸಂಕಷ್ಟವು ಆರ್ಥಿಕ ಬೆಳವಣಿಗೆಗೆ ತೊಡಕಾಗಿ ಪರಿಣಮಿಸಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಸಾಂಕ್ರಾಮಿಕಕ್ಕೂ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗಿನ ಆದಾಯವು ಅರ್ಧದಷ್ಟು ಮಾತ್ರವಿದೆ ಎಂದು ತುಮಕೂರಿನ ಆಟೊ ಚಾಲಕ ಜಿಯಾ ಉಲ್ಲಾ ಹೇಳುತ್ತಾರೆ. ಅವರ ಮೂವರು ಮಕ್ಕಳು ಮೊದಲು ಶಾಲೆಗೆ ಹೋಗುತ್ತಿದ್ದರು. ಈಗ ಇಬ್ಬರನ್ನು ಶಾಲೆಯಿಂದ ಬಿಡಿಸಲಾಗಿದೆ. ಅವರು ಕೆಲಸ ಅರಸುತ್ತಾರೆ, ಒಬ್ಬಳು ಮಾತ್ರ ಶಾಲೆಗೆ ಹೋಗುತ್ತಾಳೆ.

ವಿಶ್ಲೇಷಣೆ: ಎಮಿಲಿ ಶ್ಮಾಲ್, ಸಮೀರ್ ಯಾಸಿರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT