ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಬಂಡವಾಳ ಕೇಂದ್ರಿತ ಖಾಸಗೀಕರಣದತ್ತ...

Last Updated 25 ಜುಲೈ 2021, 19:30 IST
ಅಕ್ಷರ ಗಾತ್ರ

ಭಾರತ ಸರ್ಕಾರವು ‘ಸಹಕಾರ ಸಚಿವಾಲಯ’ ಸ್ಥಾಪಿಸಿ ಅದರ ಚುಕ್ಕಾಣಿಯನ್ನು ಗೃಹ ಸಚಿವ ಅಮಿತ್ ಶಾ ಅವರ ಕೈಗೆ ಒಪ್ಪಿಸಿದೆ. ಈ ಘಟನೆಯು ಸಹಕಾರಿ ರಂಗದ ಭವಿಷ್ಯ ಮತ್ತು ಶಾ ಅವರ ಮುಂದಿನ ನಡೆಯು ಏನಿರಬಹುದು ಎನ್ನುವುದರ ಕುರಿತು ದೇಶದಲ್ಲಿ ಬಹಳಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಉದಯಕುಮಾರ್‌ ಇರ್ವತ್ತೂರು
ಉದಯಕುಮಾರ್‌ ಇರ್ವತ್ತೂರು

ಅರ್ಥ ವ್ಯವಸ್ಥೆಗೆ ಬಲ ತುಂಬಲು ಸಹಕಾರ ಕ್ಷೇತ್ರವನ್ನು ಹೇಗೆ ಬಳಸಿಕೊಳ್ಳಹುದು ಎಂಬುದರ ಬಗ್ಗೆ ಇರುವ ಪೂರ್ವಗ್ರಹಗಳನ್ನು, ಹೊಸತಾಗಿ ಅಸ್ತಿತ್ವಕ್ಕೆ ಬಂದ ಸಹಕಾರ ಸಚಿವಾಲಯವು ಬದಿಗೆ ಇರಿಸಬೇಕು. ದೇಶದ ಇಂದಿನ ಪರಿಸ್ಥಿತಿಯಲ್ಲಿ ಸಹಕಾರಿ ರಂಗದಲ್ಲಿ ಲಭ್ಯವಿರುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಸ್ತುನಿಷ್ಠವಾಗಿ ಯೋಚಿಸಬೇಕು. ಅದರ ಜತೆಗೆ, ಬಿಜೆಪಿಯಲ್ಲಿ ಅಮಿತ್ ಶಾಅವರ ಪಾತ್ರ ಹಾಗೂ ಪ್ರಭಾವದ ಹಿನ್ನೆಲೆಯಲ್ಲಿ ಕಟುಟೀಕಾಕಾರರು ಎತ್ತಿರುವ ಪ್ರಶ್ನೆಗಳಿಗೆ, ಅನುಮಾನಗಳಿಗೆ, ಉತ್ತರವನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುವಮೂಲಕ ಆರೋಗ್ಯಪೂರ್ಣ ಸಂವಾದಗಳಿಗೆ ಅವಕಾಶವನ್ನೂಒದಗಿಸಬೇಕಿದೆ.

1904ರಿಂದ ಆರಂಭಿಸಿ 2005ರಲ್ಲಿ ವೈದ್ಯನಾಥನ್ ಸಮಿತಿಯ ವರದಿಯಲ್ಲಿರುವ ಶಿಫಾರಸು ವರೆಗೆ, ಕಾಲದಿಂದ ಕಾಲಕ್ಕೆ ಸಹಕಾರಿ ರಂಗದಬಲವರ್ಧನೆಗೆ ಹಲವಾರು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಷ್ಟ್ರೀಯಸಹಕಾರ ನೀತಿ 2002 ಅನ್ನು ಉದಾರೀಕರಣದ ಭಾಗವಾಗಿ ಅರ್ಥೈಸಿಕೊಳ್ಳಬೇಕಿದೆ; ಮತ್ತು ಬಹುರಾಜ್ಯಸಹಕಾರಿ ಸಂಘಗಳ ಶಾಸನ ಜಾರಿಗೆ ಬಂದು ಅಂತರರಾಜ್ಯ ಸಹಕಾರ ಸಂಸ್ಥೆಗಳು ಕಾರ್ಯಾರಂಭ ಮಾಡಿದ ನಂತರ ಸಹಕಾರವು ರಾಜ್ಯಪಟ್ಟಿಯಲ್ಲಿ ಇದ್ದರೂ, ಕೇಂದ್ರ ಪಟ್ಟಿಗೆ ಪ್ರವೇಶಪಡೆಯಿತೆಂದೇ ಹೇಳಬಹುದು. ಹೊಸ ಆರ್ಥಿಕ ನೀತಿಯಮಂದುವರಿದ ಭಾಗವಾಗಿಯೇ ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕಿದೆ.

ಸರ್ಕಾರವು ಉದಾರೀಕರಣದ ನಂತರದ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಉದ್ಯಮಶೀಲತೆಯ ತನ್ನ ಪಾತ್ರದ ಮಹತ್ವವನ್ನು ಹಂತ ಹಂತವಾಗಿ ಮಿತಿಗೊಳಿಸಿ, ಖಾಸಗಿ ಮತ್ತು ಸಹಕಾರಿ ರಂಗಕ್ಕೆ ಹೆಚ್ಚಿನ ಮಹತ್ವ ನೀಡಲು ಮುಂದಾಗಿದೆ. ಆ ಪ್ರಯತ್ನದ ಒಂದು ಪರ್ಯಾಯ ಕ್ರಮವಾಗಿಯೂ ಕೇಂದ್ರದ ಸಹಕಾರ ಸಚಿವಾಲಯವನ್ನು ನಾವು ನೋಡಬಹುದು. ಸದ್ಯ ಕೃಷಿ ಸಚಿವಾಲಯದ ಒಂದು ಭಾಗವಾಗಿರುವ ಸಹಕಾರಿ ಇಲಾಖೆಯು ರಾಜ್ಯಗಳೊಂದಿಗೆ ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದು ಕಷ್ಟದ ಕೆಲಸವೇ. ಪ್ರತ್ಯೇಕ ಸಚಿವಾಲಯ ಬಂದಾಗ ಅದಕ್ಕೆ ಸ್ವತಂತ್ರ ಅಸ್ತಿತ್ವ ಮತ್ತು ಪ್ರತ್ಯೇಕ ಬಜೆಟ್ ‌ಅನುದಾನ ದೊರಕುತ್ತದೆ.

ದೇಶದಲ್ಲಿ ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂನಂತಹರಾಜ್ಯಗಳಲ್ಲಿ ಆರ್ಥಿಕ ಪ್ರಗತಿಗೆ ಸಹಕಾರಿ ರಂಗದ ಕೊಡುಗೆದೊಡ್ಡದಿದೆ. ಅದೇ ಮಾದರಿಯಲ್ಲಿ ಉಳಿದ ರಾಜ್ಯಗಳಲ್ಲಿಯೂ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಸಚಿವಾಲಯ ಪ್ರಯತ್ನಿಸುವಉದ್ದೇಶವಿದ್ದರೆ ಅದು ಸ್ವಾಗತಾರ್ಹವೇ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಳೆದ ಸಾಲಿನಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ಸಾಮಾಜಿಕ ಷೇರು ಬಂಡವಾಳವಿನಿಮಯ ವ್ಯವಸ್ಥೆಈಗಾಗಲೇ ಪ್ರಸ್ತಾಪಿಸಿದ ಹೊಸ ತಳಿಯಸಹಕಾರಿ ಸಂಸ್ಥೆಗಳಿಗೆ ಅಗತ್ಯ ಸಂಪನ್ಮೂಲ ಕ್ರೋಡೀಕರಿಸಲುಸಹಾಯ ಮಾಡಬಹುದಾಗಿದೆ. ಆದುದರಿಂದ ಸಹಕಾರಿ ಸಚಿವಾಲಯ ಸ್ಥಾಪನೆಯನ್ನು ಈ ದಿಸೆಯಲ್ಲಿ ಸಕಾರಾತ್ಮಕ ಹೆಜ್ಜೆ ಎಂದು ನೋಡಬಹುದು.

ಕೃಷಿಸಚಿವಾಲಯವನ್ನು ಈಗಿರುವ ಸಹಕಾರಿ ರಂಗದ ಜವಾಬ್ದಾರಿಯಿಂದಮುಕ್ತಗೊಳಿಸಿ ಕೃಷಿಕ್ಷೇತ್ರದ ಉತ್ಪಾದಕತೆಗೆ ಅಗತ್ಯವಿರುವಹನಿ ನೀರಾವರಿ, ಹೊಸ ಬೆಳೆಗಳು, ಸುಧಾರಿತ ಸಾವಯವ ಕೃಷಿಪದ್ಧತಿ, ಮುಂತಾದ ಕ್ರಮಗಳ ಕಡೆಗೆ ಹೆಚ್ಚಿನ ಗಮನಕೊಡುವಂತೆ ಮಾಡಬಹುದು. ಕೃಷಿ ಕ್ಷೇತ್ರಕ್ಕೆ ಅಗತ್ಯವಿರುವ ಮಾರುಕಟ್ಟೆ, ಗೋದಾಮು, ಸಾಲ ಸೌಲಭ್ಯದಂತಹ ಅಂಶಗಳನ್ನು ಸಹಕಾರ ಸಚಿವಾಲಯ ನಿಭಾಯಿಸಿದರೆ ಕೃಷಿ ರಂಗದ ಉತ್ಪಾದಕತೆಯೂ ಉತ್ತಮವಾಗಬಹುದು. ಮಾತ್ರವಲ್ಲ, ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ಮತ್ತು ಕೃಷಿ ಮಾರುಕ್ಟಟೆಯ ಸುಧಾರಣೆಗಳನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿಯೂ ಈ ಸಚಿವಾಲಯಕ್ಕೆ
ಮಹತ್ವ ಇದೆ.

ಯಾಕೆಂದರೆ, ಕಾಯ್ದೆಗಳು ಅನುಷ್ಠಾನಗೊಳ್ಳಬೇಕಾದ ಸಂದರ್ಭದಲ್ಲಿ ಸ್ಪಷ್ಟವಾದ ನೀತಿಯಾಗಿ ರೂಪುಗೊಳ್ಳಬೇಕಾದ ಹಲವು ಅಂಶಗಳು ಇವೆ. ಗುತ್ತಿಗೆ ಕೃಷಿಯಂತಹ ವಿಷಯಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆಯಾ ಪರಿಸ್ಥಿತಿಗೆ, ಸಂದರ್ಭಕ್ಕೆ, ಪ್ರದೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಉದ್ಭವಿಸಬಹುದು. ಅವೆಲ್ಲವನ್ನು ನಿರ್ವಹಿಸುವ ಮತ್ತು ಅವುಗಳಿಗೆ ಪರಿಹಾರೋಪಾಯ ಸೂಚಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಸಚಿವಾಲಯದಿಂದ ಕೃಷಿ ಹಾಗೂ ಸಹಕಾರಿ ರಂಗಕ್ಕೆಒಳಿತಾಗುವುದಿದ್ದರೆ ಒಳ್ಳೆಯದೇ.

ಸಹಕಾರ ಸಚಿವಾಲಯದ ಜವಾಬ್ದಾರಿ ಗೃಹ ಸಚಿವ ಅಮಿತ್ ಶಾಅವರ ಹೆಗಲಿಗೆ ಬಿದ್ದಿರುವುದು ಹಲವಾರು ಅನುಮಾನ, ಆತಂಕಮತ್ತು ಸಂಶಯಗಳನ್ನು ಹುಟ್ಟು ಹಾಕಿರುವುದಂತೂ ಸತ್ಯ.ವಿಶೇಷವಾಗಿ ಇತ್ತೀಚೆಗೆ ಜಾರಿಯಾದ, ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ವಿವಾದಾತ್ಮಕ ಕಾನೂನುಗಳಿಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಇಂತಹ ವಿರೋಧ ತೋರುತ್ತಿರುವ ರೈತಸಮುದಾಯದ ನಾಯಕರಿರುವ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನ ಸಭೆಗೆ ಚುನಾವಣೆಗಳು ನಡೆಯಲಿವೆ.ರೈತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ, ರೈತಸಮುದಾಯದ ಮೇಲಿನ ತನ್ನ ಹತೋಟಿಯನ್ನು ಮರಳಿಬಲಗೊಳಿಸಲು ಹೊಸ ಸಚಿವಾಲಯವನ್ನು ಬಳಸಿಕೊಳ್ಳಬಹುದೇ ಎನ್ನುವಪ್ರಶ್ನೆಯೂ ಜನರ ಮುಂದಿದೆ. ಅಧಿಕಾರದ ಗದ್ದುಗೆ ಹಿಡಿಯಲು ವ್ಯೂಹಾತ್ಮಕವಾದ ಕ್ರಮಗಳನ್ನು ಅನುಸರಿಸಲೇ ಬೇಕಾಗುತ್ತದೆ.

ಗುಜರಾತ್‌, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಹಕಾರ ಕ್ಷೇತ್ರವು ಸಾಕಷ್ಟುಕೊಡುಗೆ ನೀಡಿದೆ ಎನ್ನುವ ಅಂಶವನ್ನು ಮರೆಯುವ ಹಾಗಿಲ್ಲ. ಮಹಾರಾಷ್ಟ್ರದಲ್ಲಿ ಶರದ್ ಪವಾರ್‌ ಹಾಗೂ ದೇವೇಂದ್ರ ಫಡಣವೀಸ್‌ ಅವರಿಗೆ ರಾಜಕೀಯ ಶಕ್ತಿ ತುಂಬಿರುವುದು ಇದೇ ಸಹಕಾರಿ ಕ್ಷೇತ್ರ. ಕೃಷಿ ಹಾಗೂ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲ ಹರಿದುಬರುತ್ತಿದ್ದು ಅದರ ಮೇಲಿನ ಹತೋಟಿ ಪ್ರಾಪ್ತವಾದಲ್ಲಿಸಮುದಾಯದ ದೊಡ್ಡ ವರ್ಗವೊಂದನ್ನು ತನ್ನ ತೆಕ್ಕೆಗೆತೆಗೆದುಕೊಳ್ಳುವುದು ಸುಗಮವಾಗಲಿದೆ ಎನ್ನುವ ಪಕ್ಕಾಲೆಕ್ಕಾಚಾರ ಅಮಿತ್ ಶಾ ಅವರದ್ದಿರಬಹುದು. ಗುಜರಾತ್ ರಾಜ್ಯದ 17,000 ಹಳ್ಳಿಗಳ ಪೈಕಿ 16,500 ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧಿಕಾರ ಹಿಡಿಯುವ ಮೂಲಕ ತಳಮಟ್ಟದಜನರೊಂದಿಗೆ ಸಂಪರ್ಕ ಸುಲಭ ಸಾಧ್ಯವಾಗಿಸಿ ಅಧಿಕಾರದ ಗದ್ದುಗೆಏರಲು ಬಿಜೆಪಿಗೆ ಸಾಧ್ಯವಾಗಿತ್ತು. ಸಮುದಾಯದ ಸಂಪನ್ಮೂಲ ಬಳಸಿಯೇ ಮತದಾರರ ಮನಸ್ಸಿಗೆ ಲಗ್ಗೆ ಇಡುವುದೂ ಸುಲಭ ಮತ್ತುಪರಿಣಾಮಕಾರಿ.

ಈ ದಿಸೆಯಲ್ಲಿ, ಸಂಘ ಪರಿವಾರದ ಅಂಗ ಸಂಸ್ಥೆಯಾದ ಸಹಕಾರಭಾರತಿಯು ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾಡಿರುವಪ್ರಯೋಗದ ಪರಿಣಾಮ ಕೂಡಾ ಹೊಸ ಸಚಿವಾಲಯದ ಹುಟ್ಟಿನ ಹಿಂದಿರುವುದು ಗುಟ್ಟೇನು ಅಲ್ಲವೆನಿಸುತ್ತದೆ. ಒಟ್ಟಿನಲ್ಲಿ ಈಗಆಗುತ್ತಿರುವ ಎಲ್ಲ ಬದಲಾವಣೆಗಳು ಬಂಡವಾಳ ಕೇಂದ್ರಿತಖಾಸಗೀಕರಣದ ಕಡೆಗಿನ ನಡೆಯಂತೆ ಕಂಡು ಬರುತ್ತಿರುವುದಂತೂ ದಿಟ. ಇಂತಹ ಲೆಕ್ಕಾಚಾರದ ನಡೆಯನ್ನು,ಸಮಾಜದ ದುರ್ಬಲರು, ಬಿಜೆಪಿಯೇತರ ರಾಜಕೀಯ ಪಕ್ಷಗಳುಹೇಗೆ ಎದುರಿಸುತ್ತವೆ ಎನ್ನುವುದರ ಮೇಲೆ ದೇಶದ ರಾಜಕೀಯ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಬೆಳವಣಿಗೆ ನಿಂತಿದೆ ಎಂದಷ್ಟೇ ಹೇಳಬಹುದು.

ಲೇಖಕ: ಮಂಗಳೂರು ವಿಶ್ವವಿದ್ಯಾಲಯ,ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ

------------

ಸಹಕಾರ ಸಚಿವಾಲಯದಿಂದ ಇನ್ನಷ್ಟು ಸಮೃದ್ಧಿ

117 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸಹಕಾರ ಕ್ಷೇತ್ರ, ಜನಸಾಮಾನ್ಯರು, ರೈತರು ಹಾಗೂ ದುರ್ಬಲ ವರ್ಗದ ಜನರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇಂತಹ ಜನಸ್ಪಂದನೆ ಕ್ಷೇತ್ರದ ಮೇಲೆ ಅಪಾರ ನಂಬಿಕೆ, ವಿಶ್ವಾಸ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಸಹಕಾರ ಸಚಿವಾಲಯ ಸ್ಥಾಪಿಸಿರುವುದು ಅಭಿನಂದನಾರ್ಹ ಕ್ರಮ.

ಎಂ.ಎನ್‌. ರಾಜೇಂದ್ರಕುಮಾರ್‌
ಎಂ.ಎನ್‌. ರಾಜೇಂದ್ರಕುಮಾರ್‌

ಸಹಕಾರ ಕ್ಷೇತ್ರದಿಂದಲೇ ಜನರ ಸಮೃದ್ಧಿ ಎನ್ನುವುದು ಈಗ ಜಗಜ್ಜಾಹೀರವಾಗಿದೆ. ಸಹಕಾರ ಕ್ಷೇತ್ರವು ಬಹುತೇಕ ರೈತಾಪಿ ವರ್ಗವನ್ನೇ ಒಳಗೊಂಡಿದೆ. ಸಹಕಾರ ಸಂಘಗಳ ಲಾಭಕ್ಕೆ ಆದಾಯ ತೆರಿಗೆ ವಿನಾಯಿತಿ, ನಬಾರ್ಡ್‌ ಸಾಲ ಯೋಜನೆಯ ಕುರಿತು ಇರುವ ಸಮಸ್ಯೆಗಳನ್ನು ಪರಿಹರಿಸಲು ಸಹಕಾರ ಸಚಿವಾಲಯ ಸೂಕ್ತ ವೇದಿಕೆಯಾಗಲಿದೆ.

ಸಹಕಾರ ಕ್ಷೇತ್ರ ಸಮೃದ್ಧವಾದ ಕ್ಷೇತ್ರ. ಈ ಕ್ಷೇತ್ರ ಇನ್ನಷ್ಟು ಪ್ರಬಲವಾಗಿ ಬೆಳೆಯಬೇಕು ಎನ್ನುವ ಆಶಯ ಸಹಕಾರ ಸಚಿವಾಲಯದ ಸ್ಥಾಪನೆ ಹಿಂದಿದೆ. ಖಾಸಗಿ ಕ್ಷೇತ್ರದ ನಡುವೆ ಸಹಕಾರ ಕ್ಷೇತ್ರ ಇಂದು ಪೈಪೋಟಿ ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ಸಹಕಾರ ಕ್ಷೇತ್ರದ ಸಂವರ್ಧನೆಗಾಗಿ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯದ ಜೊತೆಗೆ ಅಮಿತ್ ಶಾ ಅವರನ್ನು ನೂತನ ಸಹಕಾರ ಸಚಿವರನ್ನಾಗಿ ಮಾಡಿರುವುದೂ ಸ್ವಾಗತಾರ್ಹ.

ಸಹಕಾರ ರಂಗ ಅಭಿವೃದ್ಧಿ ಆದಂತೆ, ಕೃಷಿ ಕ್ಷೇತ್ರವೂ ಪ್ರಗತಿ ಸಾಧಿಸಲು ಅನುಕೂಲ ಆಗಲಿದೆ. ಸಹಕಾರ ಸಚಿವಾಲಯದ ಮೂಲಕ ಕೃಷಿಕರ ಸಮಸ್ಯೆ ನಿವಾರಣೆ ಆಗಲಿವೆ. ಅವರಿಗೆ ಇನ್ನಷ್ಟು ಆರ್ಥಿಕ ಶಕ್ತಿ ತುಂಬಲು ಇದು ನೆರವಾಗಲಿದೆ.

- ಎಂ.ಎನ್‌. ರಾಜೇಂದ್ರಕುಮಾರ್‌,ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿಬ್ಯಾಂಕ್‌ ಅಧ್ಯಕ್ಷರು

-------------

ದುರುದ್ದೇಶವಿದ್ದರೆರೈತರಿಗೆ ಲುಕ್ಸಾನು

ಸಹಕಾರ ಕ್ಷೇತ್ರವನ್ನು ಸಬಲೀಕರಣ ಮಾಡುವ ಉದ್ದೇಶದಿಂದ ನೂತನ ಸಚಿವಾಲಯ ಸ್ಥಾಪಿಸಿದ್ದರೆ ಅದು ಒಳ್ಳೆಯದೇ. ಆದರೆ, ಬಿಜೆಪಿಯವರ ಟ್ರ್ಯಾಕ್‌ ರೆಕಾರ್ಡ್‌ ನೋಡಿದಾಗ ಅವರ ಒಳಗುರಿ ಎಲ್ಲ ಸಮಯದಲ್ಲೂ ಬೇರೆಯದೆ ಆಗಿರುವುದು ಗೋಚರ
ವಾಗುತ್ತ ಬಂದಿದೆ. ಹಾಗಾಗಿ, ನೂತನ ಸಚಿವಾಲಯ ಸ್ಥಾಪನೆಯ ಹಿಂದಿನ ಉದ್ದೇಶವನ್ನು ತತ್‌ಕ್ಷಣಕ್ಕೆ ಸ್ಪಷ್ಟವಾಗಿ ವಿಶ್ಲೇಷಿಸುವುದು ಕಷ್ಟಕರ.

ಡಿ.ಆರ್‌.ಪಾಟೀಲ
ಡಿ.ಆರ್‌.ಪಾಟೀಲ

ದೇಶದ ಇತಿಹಾಸದಲ್ಲಿ ಕೇಂದ್ರಾಡಳಿತ ಪ್ರದೇಶ ರಾಜ್ಯವಾಗಿ ಬದಲಾಗಿದೆ. ಆದರೆ, ರಾಜ್ಯವಾಗಿದ್ದ ಜಮ್ಮು ಕಾಶ್ಮೀರವನ್ನು ಬಿಜೆಪಿಯವರು ಕೇಂದ್ರಾಡಳಿತ ಪ್ರದೇಶ ಮಾಡಿದರು. ಅಂದರೆ, ಅವರು ತಮ್ಮ ಅಧಿಕಾರದ ಗುರಿ ಸಾಧನೆಗೆ ಬೇಕಾದ್ದನ್ನು ಮಾಡಲು ಸಿದ್ಧ ಎಂಬುದಕ್ಕೆ ಇದೇ ಸಾಕ್ಷಿ. ತಮಿಳುನಾಡಿನಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂಬ ಕಾರಣಕ್ಕೆ ಮುಂದೊಂದು ದಿನ ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಮಲ್ಟಿ ಸ್ಟೇಟ್‌ ಆ್ಯಕ್ಟ್‌ ಒಳಗೆ ಯಾವ್ಯಾವ ಸಹಕಾರಿ ಸಂಸ್ಥೆಗಳು ಬರುತ್ತವೆಯೋ ಅವುಗಳ ಮೇಲೆ ಸಚಿವಾಲಯದ ಮೂಲಕ ಹೆಚ್ಚಿನ ನಿಯಂತ್ರಣ ಮಾಡುವ ಅವಕಾಶ ಮುಖ್ಯಸ್ಥರಿಗೆ ಸಿಗಲಿದೆ. ಈಗ ಹೊಸ ಸಚಿವಾಲಯವು ಅಮಿತ್‌ ಶಾ ಕೈಯಲ್ಲಿರುವುದರಿಂದ ತಮ್ಮ ರಾಜಕೀಯ ಗುರಿ ಸಾಧನೆಗೆ ಅವರು ಸಹಕಾರಿ ನಿಯಮಗಳನ್ನು ಉಲ್ಲಂಘಿಸಿ ನಡೆದರೆ ರೈತಾಪಿ ವರ್ಗಕ್ಕೆ ಬಹಳ ಲುಕ್ಸಾನು ಆಗಲಿದೆ. ಆ ರೀತಿ ಆಗದಿರಲಿ ಎಂದು ಆಶಿಸೋಣ.

ದೇಶಕ್ಕೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶ ಹೊಂದಿದ್ದರೆ ಸಚಿವಾಲಯ ಸ್ಥಾಪನೆಯ ಉದ್ದೇಶ ಉತ್ತಮವೇ ಆಗಿದೆ. ಕಷ್ಟಕರ ಸಂದರ್ಭದಲ್ಲಿ ರೈತರ ಹಿತರಕ್ಷಣೆಗೆ ಮುಂದಾಗಬಹುದು. ರಾಜಕೀಯವನ್ನು ಬದಿಗಿಟ್ಟು ಕೆಲಸ ಮಾಡಿದರೆ ಸಹಕಾರ ಸಚಿವಾಲಯ ದೇಶದ ಅಭಿವೃದ್ಧಿಗೆ ಒಳ್ಳೆಯ ಅಸ್ತ್ರವಾಗಲಿದೆ.ಸಚಿವಾಲಯದ ಮುಖ್ಯಸ್ಥ ಯಾರು, ಅವರ ಒಳ ಉದ್ದೇಶ ಏನು ಎಂಬುದರ ಮೇಲೆ ಅದರ ಲಾಭ, ನಷ್ಟ ಆಗಲಿದೆ.

- ಡಿ.ಆರ್‌.ಪಾಟೀಲ,ಗದಗ ಕೋ– ಅಪರೇಟಿವ್‌ಟೆಕ್ಸ್‌ಟೈಲ್ ಮಿಲ್‌ ಅಧ್ಯಕ್ಷ

--------------------

ಸಹಕಾರವು ಕೃಷಿಗೆ ಸೀಮಿತವಲ್ಲ

ಸಹಕಾರ ಎಂಬುದು ಕೃಷಿ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿಲ್ಲ. ಕೃಷಿ ಸಾಲದಲ್ಲಿ ಸಹಕಾರ ಕ್ಷೇತ್ರದ ಪಾಲು ಶೇ 8 ರಷ್ಟು ಮಾತ್ರ. ಸಂವಿಧಾನದಲ್ಲಿ ಸಹಕಾರ ಕ್ಷೇತ್ರ ರಾಜ್ಯಪಟ್ಟಿಯಲ್ಲಿರುವ ವಿಷಯ. ಇದರಲ್ಲಿದ್ದ ಗೊಂದಲ ನಿವಾರಿಸಲು ಯುಪಿಎ–2 ಅವಧಿಯಲ್ಲಿ ಸಹಕಾರ ಕ್ಷೇತ್ರದ ತಿದ್ದುಪಡಿ ಕಾಯ್ದೆ ಮಾಡಲಾಗಿತ್ತು.

ಮನೋಹರ ಮಸ್ಕಿ
ಮನೋಹರ ಮಸ್ಕಿ

ಸಹಕಾರಕ್ಕೆ ಸಂಬಂಧಿಸಿ ರಾಜ್ಯಗಳು ಯಾವ ಕಾಯ್ದೆ ಮಾಡಬೇಕು ಎಂಬುದು ತಿದ್ದುಪಡಿ ಕಾಯ್ದೆಯಲ್ಲಿದೆ. ತಿದ್ದುಪಡಿ ಕಾಯ್ದೆಯಿಂದ ಕೇಂದ್ರದ ಸಹಕಾರ ವ್ಯಾಪ್ತಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಸದ್ಯಕ್ಕೆ ದೇಶದಲ್ಲಿ ರಾಷ್ಟ್ರೀಯ ಮಟ್ಟದ 24 ಸಹಕಾರ ಸಂಘಗಳಿವೆ. ಒಂದು ರಾಜ್ಯಕ್ಕಿಂತ ಹೆಚ್ಚು ರಾಜ್ಯಗಳ ವಿಸ್ತಾರ ಹೊಂದಿರುವ ಸಹಕಾರಿ ಮಂಡಳಗಳನ್ನು ನಿಯಂತ್ರಿಸಲು ಹೊಸ ಕಾಯ್ದೆ ಹಾಗೂ ಸಚಿವಾಲಯದಿಂದ ಸಾಧ್ಯವಾಗಲಿದೆ. ಕ್ರಿಪ್ಕೊ, ಕ್ಯಾಸ್ಕೊನಂತಹ ಮಹಾಮಂಡಳ ನಿಯಂತ್ರಣ ಇದುವರೆಗೂ ಸಾಧ್ಯವಾಗಿರಲಿಲ್ಲ.

ಕೃಷಿಗೆ ಸಂಬಂಧಿಸಿ ಕೇಂದ್ರವು ನೀಡುತ್ತಿದ್ದ ಸಹಾಯಧನವನ್ನು ಇನ್ನಷ್ಟು ಹೆಚ್ಚಿಗೆ ಪಡೆಯುವುದಕ್ಕೆ ನೂತನ ಸಚಿವಾಲಯದಿಂದ ರಾಜ್ಯಗಳಿಗೆ ಅನುಕೂಲವಾಗಲಿದೆ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ವೃದ್ಧಿಗೆ ಪೂರಕವಾಗಿ ಸಹಕಾರ ಸಚಿವಾಲಯ ಕೆಲಸ ಮಾಡಲಿದೆ. ಪ್ರತ್ಯೇಕ ಸಚಿವಾಲಯಕ್ಕೆ ತನ್ನದೇ ಆದ ಬಜೆಟ್‌ ಸಿಗುವುದರಿಂದ ಸಹಕಾರಿಗಳಿಗೆ ಅನುಕೂಲವಾಗುತ್ತದೆ.

ಕೇಂದ್ರ ಸರ್ಕಾರ ಈಚೆಗೆ ಜಾರಿಮಾಡಿದ ಹೊಸ ಕೃಷಿ ಕಾಯ್ದೆಗಳಲ್ಲಿ ಗುತ್ತಿಗೆ ಕೃಷಿಗೆ ಅವಕಾಶ ಮಾಡಲಾಗಿದೆ. ಈಗ ಸಹಕಾರ ಸಚಿವಾಲಯ ಬರುವುದರಿಂದ ಗುತ್ತಿಗೆ ಕೃಷಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

- ಮನೋಹರ ಮಸ್ಕಿ, ಮಲೆನಾಡು ನಟ್ಸ್‌ ಅಂಡ್‌ ಸ್ಪೈಸ್‌ ಪ್ರೊಡ್ಯುಸರ್‌ ಕಂಪನಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT