ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕನ್ನಡ ಮಾತು ಮರೆಯಾಗುವ ಬಗೆ

ಕನ್ನಡ ಒಂದೇ ಗೊತ್ತಿದ್ದರೆ ಮೆಣಸಿನಕಾಯಿ, ಲಿಂಬೆಹಣ್ಣು, ಬೆಳ್ಳುಳ್ಳಿಯು ಸಿಗುವುದಿಲ್ಲ!
Last Updated 31 ಅಕ್ಟೋಬರ್ 2020, 9:58 IST
ಅಕ್ಷರ ಗಾತ್ರ

ಬೆಂಗಳೂರು: ಮನೆ, ಕಚೇರಿಗಳಲ್ಲಿ ಸದಾ ಸುದ್ದಿ ಬಿತ್ತರಿಸುತ್ತಲೇ ಇರುವ ವಿದ್ಯುನ್ಮಾನ ಸುದ್ದಿವಾಹಿನಿಗಳ ಪ್ರಭಾವ, ಆಂಗ್ಲ, ಹಿಂದಿ, ಉರ್ದು, ತಮಿಳು, ತೆಲುಗು, ಮರಾಠಿ ಮಾತನಾಡುವವರ ಜತೆಗಿನ ಹೊಕ್ಕುಬಳಕೆಯ ಪರಿಣಾಮದಿಂದಾಗಿ ಕನ್ನಡ ನುಡಿಗಟ್ಟು, ಪದಗಳ ಬಳಕೆಯೇ ಮರೆವೆಯತ್ತ ಸರಿಯುತ್ತಿರುವುದು ಬೆಂಗಳೂರಿನ ಕತೆ–ವ್ಯಥೆ. ಮನೆಯೊಳಗಷ್ಟೇ ಕನ್ನಡ, ಹೊರಗೆ ಸಂಕರಗನ್ನಡ ಇದು ಸದ್ಯದ ಸ್ಥಿತಿ.

ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರು ‘ಕನ್ನಡ ಮಾತು ತಲೆಯೆತ್ತುವ ಬಗೆ’ಯ ಕುರಿತು 110 ವರ್ಷಗಳ ಹಿಂದೆ ಮನಮುಟ್ಟುವಂತೆ ಹೇಳಿದ್ದರು.‘ಕನ್ನಡ ಮಾತು ಮರೆಯಾಗುವ ಬಗೆ’ಯ ಕುರಿತು ಮಾತನಾಡಬೇಕಾದ ಕಾಲದ ಆತಂಕ ಇಂದು ಎದುರಾಗಿದೆ.

ಹತ್ತಾರು ವರ್ಷಗಳ ಹಿಂದೆ ಬಳಸುತ್ತಿದ್ದ ಕನ್ನಡ ಪದಗಳ ಜಾಗದಲ್ಲಿ ಆಂಗ್ಲ ಭಾಷೆಯ ಪದ ಬಂದು ಕುಳಿತುಬಿಟ್ಟಿವೆ. ದೈನಂದಿನ ಜೀವನ ವಿಧಾನ ಬದಲಾಗುತ್ತಿದ್ದಂತೆ ಉಪಯೋಗಿಸುವ ಪದವೂ ಅದಕ್ಕೆ ತಕ್ಕಂತೆ ಬದಲಾಗಿಬಿಟ್ಟಿವೆ. ನಿತ್ಯದ ಚಟುವಟಿಕೆಗಳಿಂದ ಹಿಡಿದು ವೃತ್ತಿ ಬದುಕು, ವ್ಯವಹಾರ ಹೀಗೆ ಎಲ್ಲವೂ ಆಂಗ್ಲಮಯವಾಗಿ ಹೋಗಿದೆ.

ಹಿಂದೆಲ್ಲ ಹಿರಿಯರನ್ನು, ಆಡುವ ಮಕ್ಕಳನ್ನೋ ಹುಡುಕಿಕೊಂಡು ಬಂದಾಗ ಅವರು ಗುಡ್ಡದ ಕಡೆ, ಹಳ್ಳದ ಕಡೆ, ಚೊಂಬು ಹಿಡ್ಕೊಂಡು ಹೋಗಿದ್ದಾರೆ ಎಂದು ಹೇಳುತ್ತಿದ್ದುದುಂಟು. ಗುಡ್ಡ, ಚೊಂಬಿನ ಪದ್ಧತಿ ಬದಲಾಗಿ ಎಲ್ಲದಕ್ಕೂ ‘ಟಾಯ್ಲೆಟ್’ ಬಂದು ಕುಳಿತ ಮೇಲೆ ಈ ರೀತಿಯ ಪದ ಬಳಕೆಯೇ ಮಾಯವಾಗಿದೆ.

ಉಗುರು ತೆಗೆಯುವುದಕ್ಕೆ ನೈಲ್ ಕಟ್‌, ಕಸೂತಿಗೆ ಎಂಬ್ರಾಯಡರಿ ಹೀಗೆ ಏನೇನೋ ಬದಲಾವಣೆಗಳಾಗಿವೆ, ಅಡುಗೆ ಮನೆಯಗೆ ಸೆಳೆಯುತ್ತಿದ್ದ ತರಹೇವಾರಿ ಮೇಲೋಗರಗಳಿಗಿದ್ದ ಹೆಸರುಗಳ ಜಾಗವನ್ನು ಸಾಂಬಾರ್‌, ರಸಂ ಆವರಿಸಿಕೊಂಡು ಬಿಟ್ಟಿವೆ. ಹುಳಿ, ಸಾರು, ತೊವ್ವೆ, ಮಜ್ಜಿಗೆಹುಳಿ, ಸಾಸುವೆ, ಹಸಿವಾಳೆ, ಕಾಯಿರಸ ಇಂತಹ ಬಗೆಬಗೆಯ ಮೇಲೋಗರಗಳ ಬಳಕೆಯಂತೂ ಹೊಸ ತಲೆಮಾರಿನ ಜನರಿಗೆ ಗೊತ್ತೇ ಇಲ್ಲದಂತಾಗಿದೆ. ಮಕ್ಕಳೆಲ್ಲ ‘ಇಂಗ್ಲಿಷು ಮೀಡಿಯಮ್ಮು’ ಕಲಿತ ಮೇಲೆ ಮನೆಯಲ್ಲಿ ಬೇಳೆ ಕಾಳುಗಳ ಹೆಸರುಗಳ ಆಂಗ್ಲ ಪದಗಳನ್ನು ಕಲಿಯಬೇಕಾದ ಅನಿವಾರ್ಯ ಹಿರೀಕರದ್ದಾಗಿಬಿಟ್ಟಿದೆ.

ಕಿರಿದಾದ ಜಗತ್ತಾಗಿರುವ ಬೆಂಗಳೂರಿನಲ್ಲಂತೂ ಅಲ್ಪಸ್ವಲ್ಪ ಅಚ್ಚ ಕನ್ನಡದಲ್ಲಿ ಮಾತನಾಡುವವರನ್ನು ಹುಡುಕಬೇಕಾದರೆ ಈಗಲೂ ಬಸವನಗುಡಿ, ಮಲ್ಲೇಶ್ವರದ ಆಸುಪಾಸು ಓಡಾಡಬೇಕು.

ಕನ್ನಡದಲ್ಲೇ ವ್ಯವಹರಿಸುತ್ತೇನೆ ಎಂದು ಹಟಕ್ಕೆ ಬಿದ್ದರೆ ನೆಟ್ಟಗೆ ಲಿಂಬೆ ಹಣ್ಣು, ಮೆಣಸಿನಕಾಯಿಯನ್ನು ಖರೀದಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹಳೆಯ ಬೆಂಗಳೂರು (ಬ್ರಿಟಿಶರ ಕಾಲದ್ದಲ್ಲ) ಪ್ರದೇಶವನ್ನು ಬಿಟ್ಟು 30–40 ವರ್ಷಗಳಲ್ಲಿ ಬೆೆಳೆದಿರುವ ರಾಜಧಾನಿಯ ಹಲವು ಪ್ರದೇಶಗಳ ವ್ಯಾಪಾರಿಗಳು ಕನ್ನಡಿಗರಲ್ಲ. ಮಾರ್ವಾಡಿಗಳ ಸಂಖ್ಯೆ ಒಂದಿಷ್ಟು ಇದ್ದರೆ ಮಲೆಯಾಳಿ, ಉರ್ದು, ತಮಿಳು ಮಾತನಾಡುವ ವ್ಯಾಪಾರಿಗಳ ಸಂಖ್ಯೆಯೇ ಹೆಚ್ಚಿದೆ. ಹೊಸದಾಗಿ ಬಂದಿರುವ ಸಣ್ಣಪುಟ್ಟ ‘ಮಾಲ್‌’ಗಳೆಲ್ಲ ಮಲೆಯಾಳಿ, ಹಿಂದಿ ಮಾತನಾಡುವವರ ಒಡೆತನದಲ್ಲಿದೆ. ಮನೆಯ ಅಕ್ಕಪಕ್ಕದ ಶೆಟ್ಟರ ಅಂಗಡಿಗಳೆಲ್ಲ ಮಾಯವಾಗಿ ಅಲ್ಲಿ ‘ಚೇಟ’ (ಮಲೆಯಾಳಿಯಲ್ಲಿ ಅಣ್ಣ)ಗಳ ಅಂಗಡಿಗಳು ಬಂದಿವೆ. ಅಲ್ಲಿ ಹೋಗಿ ಲಿಂಬೆಹಣ್ಣು, ಮೆಣಸಿನ ಕಾಯಿ, ಈರುಳ್ಳಿ, ಮೊಟ್ಟೆ, ಬೆಳ್ಳುಳ್ಳಿ, ತೆಂಗಿನಕಾಯಿ ಹೀಗೆ ಯಾವುದೇ ನಿತ್ಯ ಬಳಕೆಯ ವಸ್ತುಗಳನ್ನು ಕನ್ನಡದಲ್ಲೇ ಕೇಳಿದರೆ ನಿಮಗೆ ಏನೂ ಸಿಗುವುದಿಲ್ಲ. ಅದರ ಹಿಂದಿ ಅಥವಾ ಮಲೆಯಾಳಿ ಪರ್ಯಾಯ ಪದಗಳ ಗೊತ್ತಿದ್ದರೆ ಮಾತ್ರ ಮನೆಗೆ ‘ಉಪ್ಪು–ಹುಳಿ‘ ಬಂದೀತು. ಇಲ್ಲದಿದ್ದರೆ ಸಪ್ಪೆ ಅನ್ನವನ್ನೇ ತಿನ್ನಬೇಕಾಗುತ್ತದೆ.

ಇದು ಜನವಸತಿ ಪ್ರದೇಶದ ಕತೆಯಾದರೆ, ದೊಡ್ಡ ’ಮಾಲ್‌‘ಗಳು, ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಂತೂ ಕನ್ನಡದ ಕಣ್ಮರೆ. ಅಲ್ಲೆಲ್ಲ ಇಂಗ್ಲಿಷ್ ವೈಭವೀಕರಣ– ಹಿಂದಿಯ ವಿಜೃಂಭಣೆ. ಬ್ಯಾಂಕುಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗದೇ ಇರುವುದರಿಂದ ಖಾಸಗಿ ಬ್ಯಾಂಕ್ ಹೋಗಲಿ, ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡಿದರೆ ನಿಮಗೆ ಯಾವ ಕೆಲಸವೂ ಆಗದು. ನೀವೇ ಜಗ್ಗಾಡಿ ಹಿಂದಿಯ ಒಂದೆರಡು ಪದ ಬಳಸಿ ವ್ಯವಹರಿಸಬೇಕಾಗುತ್ತದೆ. ಸಹಾಯಕರ ಕೆಲಸ ಮಾಡುವವರಿಗೆ ಅಷ್ಟೋ ಇಷ್ಟೋ ಕನ್ನಡ ಬರುತ್ತದೆ. ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಗುಮಾಸ್ತರು, ನಗದು ಕೇಂದ್ರಗಳಲ್ಲಿ ಕುಳಿತವರಿಗೆ ಕನ್ನಡವೇ ಬರುವುದಿಲ್ಲ.

ಇನ್ನು ಓಲಾ, ಊಬರ್ ಕಾರುಗಳನ್ನು ಹತ್ತಿದರೆ ಚಾಲಕರಿಗೆ ಕನ್ನಡ ಬರುತ್ತದೆಯಾದರೂ ಅವರಲ್ಲಿ ಬಹುತೇಕರು ಅನ್ಯಭಾಷೆಯಲ್ಲೇ ಮಾತನಾಡುತ್ತಾರೆ. ಕನ್ನಡವನ್ನು ಮಾತನಾಡಿದರಷ್ಟೇ ಅವರು ಕನ್ನಡ ಬಳಸುತ್ತಾರೆ. ಹೀಗಿದೆ ಕನ್ನಡದ ಕತೆ.

ಇಂಗ್ಲಿಷ್‌ನಲ್ಲೇ ಕನ್ನಡ ಪಾಠ:ಗ್ರಾಮೀಣ ಪ್ರದೇಶದ ಆಂಗ್ಲಮಾಧ್ಯಮ ಶಾಲೆಗಳಲ್ಲಿ ‘ಇಂಗ್ಲಿಷ್‌’ನ ಪಠ್ಯವನ್ನು ಕನ್ನಡದಲ್ಲಿ, ಸಂಸ್ಕೃತ ಪಾಠವನ್ನು ಕನ್ನಡದಲ್ಲಿ ಹೇಳಿಕೊಡುವ ರೂಢಿ ಇಂದಿಗೂ ಇದೆ. ಬೆಂಗಳೂರಿನಲ್ಲಿ ಇದಕ್ಕೆ ತದ್ವಿರುದ್ದ.

ಇಲ್ಲಿನ ಬಹುತೇಕ ಸಿಬಿಎಸ್‌ಸಿ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಕಲಿಸುವ ಪರಿಪಾಟವಿದೆ. ಹೆಚ್ಚಿನ ಮಕ್ಕಳು ಕನ್ನಡೇತರರರಾಗಿರುವುದರಿಂದಾಗಿ ಕನ್ನಡವನ್ನು ಇಂಗ್ಲಿಷ್‌ನಲ್ಲೇ ಕಲಿಸಲಾಗುತ್ತದೆ. ಕನ್ನಡದ ಒಂದು ವಾಕ್ಯವನ್ನು ಅರ್ಧ ಓದಿ, ಅದಕ್ಕೆ ಇಂಗ್ಲಿಷ್‌ನ ಪರ್ಯಾಯ ಪದ ಏನೆಂದು ಹೇಳಿ, ಇಂಗ್ಲಿಷ್‌ನಲ್ಲೇ ವಿವರಿಸಲಾಗುತ್ತದೆ. ಹಾಗಂತ ಈ ಶಿಕ್ಷಕ/ಶಿಕ್ಷಕಿಯರು ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡುತ್ತಾರೆಯೇ ಎಂದರೆ ಅವರು ತಮಿಳು ಅಥವಾ ತೆಲುಗು ಮಾತ್ರಭಾಷೆಯವರಾಗಿರುತ್ತಾರೆ. ಐದಾರನೇ ತರಗತಿಯಲ್ಲಿ ಓದುವ ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗೆ ಬರುವಷ್ಟು ಕನ್ನಡ ಬರುತ್ತಿರುವುದಿಲ್ಲ. ಹೀಗಿದೆ ಕನ್ನಡದ ಸ್ಥಿತಿ.

ಕನ್ನಡವನ್ನು ಮೇಲಿಂದ ಹೇರಿದರೆ ಅದು ಜೀವಂತ ಭಾಷೆಯಾಗಿ ಉಳಿಯುವುದಿಲ್ಲ. ಮನೆಯಲ್ಲಿ, ಬೀದಿಯಲ್ಲಿ, ಗಲ್ಲಿಯಲ್ಲಿ ಹೀಗೆ ನಿತ್ಯದ ನಡೆಗಳಲ್ಲಿ ಕನ್ನಡ ಬಳಸುತ್ತಿದ್ದರೆ ಮಾತ್ರ ಕನ್ನಡ ಉಳಿದೀತು. ಇಲ್ಲದಿದ್ದರೆ ಕನ್ನಡ–ಕನ್ನಡಿಗ ತಲೆ ಎತ್ತಿ ನಿಂತು ನಡೆಯಬೇಕಾದ ಜಾಗೆಯಲ್ಲಿ ಕನ್ನಡ ಮರೆಯಾಗುವ, ಕನ್ನಡಿಗ ಮರುಳಾಗುವ ಬಗೆಗಳನ್ನು ಕಾಣಬೇಕಾದೀತು. . .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT