ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಮಕ್ಕಳ ವಿಷಯದಲ್ಲಿ ನಿಮ್ಮದು ಓವರ್ ಪೇರೆಂಟಿಂಗಾ?

Last Updated 6 ಡಿಸೆಂಬರ್ 2020, 9:07 IST
ಅಕ್ಷರ ಗಾತ್ರ

ಈ ಬಾರಿ ಊರಿಗೆ ಹೋದಾಗ ಪಕ್ಕದ ಮನೆಯ ಅಕ್ಕ ದೂರದ ಮುಂಬೈನಲ್ಲಿರುವ ತನ್ನ ತಂಗಿಯನ್ನು ದೂರುತ್ತಿದ್ದಳು. ‘ಏನು ಇವಳಿಗಷ್ಟೇ ಮಗು ಆಗಿರುವುದಾ? ನಾವೆಲ್ಲ ಮಕ್ಕಳನ್ನು ಹೆತ್ತು ಸಾಕಿ, ಬೆಳೆಸಲಿಲ್ಲವೇ? ಇವಳ ದೊಂಬರಾಟ ನೋಡಲು ಆಗುತ್ತಿಲ್ಲ. ಆ ಮಗುವಿಗೆ ಸ್ವಾತಂತ್ರ್ಯ ಎಂಬುದೇ ಇಲ್ಲ. ಸದಾ ಅಪ್ಪ–ಅಮ್ಮ ಏನು ಹೇಳುತ್ತಾರೋ ಅದನ್ನೇ ಕೇಳಬೇಕು. ಅವರಿಷ್ಟದಂತೆ ಬದುಕಬೇಕು, ಅವರು ಹೇಳಿದ್ದೇ ತಿನ್ನಬೇಕು, ಅವರು ಹೇಳಿದ್ದಷ್ಟೇ ಓದಬೇಕು. ಊರಿಗೆ ಬಂದಾಗಲೂ ಮನೆಯಿಂದ ಹೊರಗೆ ಕಳುಹಿಸುವುದಿಲ್ಲ. ಮಣ್ಣು, ದೂಳು ಅಲರ್ಜಿ ಎನ್ನುವ ನೆಪ. ಸದಾ ಆ ಹುಡುಗಿಯ ಹಿಂದೆ– ಮುಂದೆ ತಿರುಗಿ ಹಿಂಸೆ ಮಾಡುವುದು. ಎಲ್ಲದಕ್ಕೂ ರಿಸ್ಟ್ರಿಕ್ಷನ್ ಹಾಕುವುದು.‌ ಇದೆಲ್ಲಾ ನೋಡಿದ್ರೆ ಅವಳು ಮಗಳ ಕಾಳಜಿ ಮಾಡುತ್ತಿದ್ದಾಳಾ ಅಥವಾ ಮಗಳಿಗೆ ಹಿಂಸೆ ಮಾಡುತ್ತಿದ್ದಾಳಾ ಅರಿವಾಗುವುದಿಲ್ಲ. ಹೀಗೆ ಮಾಡಿದ್ರೆ ಆ ಮಗುವಿನ ಮಾನಸಿಕ ಸ್ಥಿತಿ ಏನಾಗಬೇಕು? ಇತ್ತೀಚಿನ ಪೋಷಕರು ಮಕ್ಕಳ ಮೇಲೆ ತೋರುವ ಅತಿ ಕಾಳಜಿ ನೋಡಿದರೆ ನಮಗೇ ಕಿರಿಕಿರಿ ಎನ್ನಿಸುತ್ತದೆ, ಇನ್ನು ಆ ಮಕ್ಕಳ ಕಥೆ ಹೇಗೆ?’ ಎಂದೆಲ್ಲಾ ಬೈಯುತ್ತಿದ್ದಳು.

ಅವಳ ಮಾತು ಕೇಳಿದಾಗ ನನಗೂ ಹಾಗನ್ನಿಸಿದ್ದು ನಿಜ. ಹಿಂದೆಲ್ಲಾ ತಂದೆ–ತಾಯಿಗಳು ಮಕ್ಕಳ ಮೇಲೆ ಕಾಳಜಿ ತೋರುತ್ತಿದ್ದರು. ಆದರೆ ಅತಿ ಕಾಳಜಿ ಇರಲಿಲ್ಲ. ಮಕ್ಕಳ ಮೇಲೆ ನಿಗಾ ಇಡುತ್ತಿದ್ದರು. ಆದರೆ ಈಗಿನಂತೆ ಮಕ್ಕಳ ಪ್ರತಿ ನಿರ್ಧಾರವೂ ಪೋಷಕರದ್ದೇ ಆಗಬೇಕು ಎಂದಿರಲಿಲ್ಲ. ತಮ್ಮ ಮಕ್ಕಳು ಯಾವುದರಲ್ಲೂ ಕಡಿಮೆ ಇರಬಾರದು, ತಾವು ಹೇಳಿದ ಹಾಗೇ ಮಕ್ಕಳು ಇರಬೇಕು ಎಂಬುದೆಲ್ಲಾ ಕಡಿಮೆ ಇತ್ತು. ಮಕ್ಕಳ ಮೇಲೆ ಪೋಷಕರು ತೋರುವ ಅತೀ ಕಾಳಜಿ ಅವರ ಮನಸ್ಸಿಗೆ ಒತ್ತಡ ಹೇರುವಂತೆ ಮಾಡುತ್ತದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ ‘ಓವರ್ ಪೇರೆಂಟಿಂಗ್’ ಎನ್ನುತ್ತಾರೆ.

‘ಪಾಲನೆಯ ವಿಷಯಕ್ಕೆ ಬಂದಾಗ, ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಪೋಷಿಸಲು ತಮ್ಮ ಕೈಮೀರಿ ಪ್ರಯತ್ನಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನೂ ಹೇರುತ್ತಾರೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹುಶಃ ಅವರಿಗೆ ಅದು ಅವಶ್ಯವೂ ಅನ್ನಿಸಬಹುದು. ಆದರೆ ಪೋಷಕರ ಈ ಅತಿಯಾದ ಪ್ರೀತಿ, ಕಾಳಜಿ, ತನ್ನ ಮಗ ಅಥವಾ ಮಗಳು ಎಲ್ಲದರಲ್ಲೂ ಮುಂದಿರಬೇಕು ಎಂಬ ಹಂಬಲ ಮಕ್ಕಳಿಗೆ ಕಿರಿಕಿರಿ ತರಿಸಬಹುದು. ಪೋಷಕರ ಈ ಅತಿಯಾದ ನಿರೀಕ್ಷೆ ಕೆಲವೊಮ್ಮೆ ಅತಿರೇಕಕ್ಕೆ ಹೋಗಬಹುದು. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗಬಹುದು ಪೋಷಕರಿಂದ ವಿಷಯಗಳನ್ನು ಮಗು ಮುಚ್ಚಿಡಬಹುದು. ಅಲ್ಲದೇ ಪೋಷಕರನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬಹುದು’ ಎನ್ನುತ್ತಾರೆ ಆಪ್ತಸಮಾಲೋಚಕಿ ಪಲ್ಲವಿ ಭಟ್‌.

ಓವರ್ ಪೇರೆಂಟಿಂಗ್ ಲಕ್ಷಣಗಳು

* ಮಕ್ಕಳ ಮಾಡುವ ಸಣ್ಣ ಪುಟ್ಟ ವಿಚಾರಗಳನ್ನು ಅಥವಾ ಕೆಲಸಗಳ ಮೇಲೆ ಅತಿಯಾದ ನಿರೀಕ್ಷೆ ಇರಿಸಿಕೊಳ್ಳುವುದು.

* ಮಕ್ಕಳಿಗೆ ತಮ್ಮ ಆಯ್ಕೆ ಮಾಡಲು ಬಿಡದೇ ಹೆಣಗಾಡುವುದು

* ಮಕ್ಕಳ ಸೋಲನ್ನು ನೋಡಲಾಗದೇ ಇರುವುದು ಅಥವಾ ನಿರೀಕ್ಷೆ ಮಾಡದೇ ಇರುವುದು‌

* ಬೇರೆ ಪೋಷಕರು ತಲೆಕೆಡಿಸಿಕೊಳ್ಳದ ವಿಷಯಗಳ ಬಗ್ಗೆಲ್ಲಾತಲೆ ಕೆಡಿಸಿಕೊಳ್ಳುವುದು

* ಮಕ್ಕಳ ವಯಸ್ಸಿಗೂ ಮೀರಿ ಅವರ ಮೇಲೆ ನಿರೀಕ್ಷೆ ಇರಿಸಿಕೊಳ್ಳುವುದು

* ಮಕ್ಕಳ ಪ್ರತಿ ಕೆಲಸದಲ್ಲೂ ಮೂಗು ತೂರಿಸುವುದು, ಅವರ ಕೆಲಸಗಳನ್ನು ಅವರಿಗೆ ಮಾಡಿಕೊಳ್ಳಲು ಬಿಡದೇ ಇರುವುದು

ಹದಿವಯಸ್ಸಿನವರ ಮೇಲಾಗುವ ಪರಿಣಾಮ


* ಮಕ್ಕಳು ತಮ್ಮದಲ್ಲದ ಕೌಶಲಗಳನ್ನು ನಿಭಾಯಿಸಲು ಹೋಗಿ ಸೋತು ಅದರಿಂದ ಅವಮಾನ, ಸೋಲು ಅನುಭವಿಸಬಹುದು.

* ಮಕ್ಕಳು ಅತಿಯಾದ ಆತಂಕ ಹಾಗೂ ಒತ್ತಡಕ್ಕೆ ಒಳಗಾಗಬಹುದು

* ಖಿನ್ನತೆಯ ಸಮಸ್ಯೆ ಕಾಡಬಹುದು

* ಮಕ್ಕಳಿಗೆ ತಾವು ಮಾಡಿದ ಕೆಲಸ ಮೇಲೆ ಆತ್ಮತೃಪ್ತಿ ಸಿಗದೆ ಅದು ಮಾನಸಿಕ ಚಿಂತೆಗೆ ಕಾರಣವಾಗಬಹುದು.

ನಿಮ್ಮದು ಓವರ್ ಪೇರೆಂಟಿಂಗಾ?

ಮಕ್ಕಳಿಗೆ ಪೋಷಕರು ತಮ್ಮ ಮೇಲೆ ಅಧಿಕ ಒತ್ತಡ ಹೇರುತ್ತಿದ್ದಾರೆ, ನಮ್ಮ ಮೇಲೆ ಅತಿಯಾದ ನಿರೀಕ್ಷೆ ಇರಿಸಿಕೊಂಡಿದ್ದಾರೆ ಎಂದು ಅನ್ನಿಸುವುದು ಹದಿವಯಸ್ಸಿಗೆ ಕಾಲಿರಿಸಿದ ಮೇಲೆ. ಹಾರ್ಮೋನ್‌ಗಳಲ್ಲಿ ಬದಲಾವಣೆಯಾದಂತೆ ಮಕ್ಕಳ ವರ್ತನೆಯಲ್ಲೂ ಬದಲಾವಣೆಗಳಾಗುತ್ತವೆ. ಬೇಗನೆ ಸಿಟ್ಟು ಬರುವುದು, ಕಿರಿಕಿರಿಯಾಗುವುದು, ದೊಡ್ಡವರಿಗೆ ಎದುರುತ್ತರ ನೀಡುವುದು ಮುಂತಾದುವನ್ನು ಮಾಡಬಹುದು.

ಇಂತಹ ಸಂದರ್ಭಗಳಲ್ಲಿ ಮಕ್ಕಳ ಮೇಲೆ ಪೋಷಕರು ಇಲ್ಲದ ನೀತಿ–ನಿಯಮಗಳನ್ನು ಹೇರಲು ಪ್ರಯತ್ನಿಸುತ್ತಾರೆ. ಆಗ ಹಾರ್ಮೋನ್‌ಗಳ ಕಾರಣದಿಂದ ಬದಲಾದ ಮಕ್ಕಳಲ್ಲಿ ಇನ್ನಷ್ಟು ಕೋಪ–ತಾಪಗಳು ಹುಟ್ಟಲು ಕಾರಣವಾಗಬಹುದು. ಬೆಳೆಯುವ ಮಕ್ಕಳಿಗೆ ನೀತಿ–ನಿಯಮಗಳ ಅವಶ್ಯಕತೆ ಇದೆ. ಆದರೆ ಅದನ್ನು ಹೇಗೆ ರೂಪಿಸುತ್ತೀರಿ ಎಂಬುದರ ಮೇಲೆ ನೀತಿ– ನಿಯಮಗಳು ಮಕ್ಕಳ ವರ್ತನೆ ಅವಲಂಬಿಸುತ್ತದೆ.

ಹಾಗಾಗಿ ಮೊದಲು ನೀವು ನಿಮ್ಮ ವರ್ತನೆಯನ್ನು ಗಮನಿಸಿ. ಮಕ್ಕಳ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದ್ದೀರಾ ಎಂಬುದನ್ನು ಗಮನಿಸಿ. ಮಕ್ಕಳಿಗೆ ಪದೇ ಪದೇ ಸೂಚನೆ ಕೊಡುವುದು, ಆದೇಶ ಮಾಡುವುದು ಹಾಗೂ ಅವರ ಆಯ್ಕೆಯನ್ನು ಪ್ರಶ್ನಿಸುವುದು ಮಾಡಬಾರದು. ಯಾವಾಗ ಪರಿಸ್ಥಿತಿ ನಿಮ್ಮ ಕೈಮೀರಿ ಹೋಗುತ್ತದೆ ಎನ್ನಿಸುತ್ತದೋ ಆಗ ಮಾತ್ರ ಮಕ್ಕಳಿಗೆ ಬುದ್ಧಿ ಹೇಳಿ. ಹದಿಹರೆಯದ ಮಕ್ಕಳಿಗೆ ತಮ್ಮ ಕೆಲಸಗಳಿಂದ ಆಗಬಹುದಾದ ಆಗು–ಹೋಗುಗಳನ್ನು ತಿಳಿಯುವಷ್ಟು ಬುದ್ಧಿ ಇರುತ್ತದೆ.

ಹದಿಹರೆಯದ ಮಕ್ಕಳು ಹೆಚ್ಚು ಸ್ವಾತಂತ್ರ್ಯ ಬಯಸುತ್ತಾರೆ. ಆ ಕಾರಣಕ್ಕೆ ಮಕ್ಕಳು ಸುರಕ್ಷಿತರಾಗಿದ್ದಾರೆ, ಅಲ್ಲದೇ ಯಾವುದೇ ಕೆಟ್ಟ ಚಟ ಹಾಗೂ ಸಹವಾಸಗಳ ಹಿಂದೆ ಬಿದ್ದಿಲ್ಲ ಎಂಬುದನ್ನು ಅರಿತು ಅವರನ್ನು ಒಂಟಿಯಾಗಿ ಬಿಡುವುದು, ಸ್ವಾತಂತ್ರ್ಯ ನೀಡುವುದು ಅಗತ್ಯ. ಮಕ್ಕಳ ಮನಸ್ಸಿಗೆ ನೋವಾಗದಂತಹ, ಕಿರಿಕಿರಿಯಾಗದಂತಹ ನಿಮಯಗಳನ್ನು ರೂಪಿಸಿ. ಮನೆಯ ನಿಯಮಗಳನ್ನು ಮಕ್ಕಳಿಗೆ ಸ್ವಷ್ಟವಾಗಿಸಿ ತಿಳಿಸಿ, ಜೊತೆಗೆ ಅದು ನಿಮ್ಮ ಮಗ ಅಥವಾ ಮಗಳ ಒಳ್ಳೆಯದಕ್ಕೆ ಅವರು ಆ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಅರ್ಥ ಮಾಡಿಸಿ. ಮಕ್ಕಳಿಗೆ ನಿಮ್ಮ ಮೇಲೆ ಆತ್ಮವಿಶ್ವಾಸ ಮೂಡಿಸುವ ಕೆಲವು ತಂತ್ರ ಹಾಗೂ ದಾರಿಗಳನ್ನು ಕಂಡುಕೊಳ್ಳಿ. ಆ ಮೂಲಕ ಮಕ್ಕಳನ್ನು ಸರಿದಾರಿಗೆ ತನ್ನಿ. ಅದರಿಂದ ಮಕ್ಕಳು ಯಾವ ರೀತಿ ವರ್ತಿಸುತ್ತಾರೆ ಎಂಬುದರ ಮೇಲೆ ನೀವು ಓವರ್ ಪೇರೆಂಟಿಂಗ್ ಮಾಡುತ್ತಿಲ್ಲ ಎಂಬುದನ್ನು ಅರಿಯಿರಿ ಎನ್ನುತ್ತಾರೆ ಪಲ್ಲವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT