ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಮತ ಬ್ಯಾಂಕ್‌ಗಾಗಿ ಮೀಸಲಾತಿ ಅಸ್ತ್ರ

Last Updated 28 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಎಲ್ಲ ಸಮುದಾಯಗಳನ್ನು ಒಳಗೊಂಡ ಧರ್ಮವಾಗಿದೆ. ಬಸವಣ್ಣನವರು ‘ಇವ ನಮ್ಮವ, ಇವ ನಮ್ಮವ, ಇವ ನಮ್ಮವ’ ಎನ್ನುತ್ತ ಅಂದಿನ ಕಾಲದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲ ಸಮುದಾಯಗಳನ್ನು ಅಪ್ಪಿಕೊಂಡರು. ಹೀಗಾಗಿ ಲಿಂಗಾಯತ ಶೋಷಿತರ, ದಮನಿತರ, ಶ್ರಮಿಕರ, ವಂಚಿತರ ಧರ್ಮವಾಗಿ ಬೆಳೆಯಿತು. ಅದು ಕಾಯಕಜೀವಿಗಳ ಧರ್ಮವಾಯಿತು.

ಕಲ್ಯಾಣ ಪ್ರತಿಕ್ರಾಂತಿಯ ನಂತರ ಕಾಯಕವನ್ನೇ ಜಾತಿಯಾಗಿ ಬಿಂಬಿಸಲಾಯಿತು. ಹೀಗಾಗಿ ಇಂದು ಲಿಂಗಾಯತರಲ್ಲಿ 102 ಉಪ ಪಂಗಡಗಳು ಕಾಣಿಸುತ್ತವೆ. ಇದರಲ್ಲಿ ಬಹುಸಂಖ್ಯಾತ ಉಪಪಂಗಡಗಳು ಹಿಂದುಳಿದ ವರ್ಗದಲ್ಲಿಯೇ ಬರುತ್ತವೆ. ಅದರಲ್ಲಿ ಕೆಲವು ಉಪ ಪಂಗಡಗಳಿಗೆ ಮೀಸಲಾತಿ ಇದೆ. ಇನ್ನೂ ಕೆಲವರು ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ.

ಮೀಸಲಾತಿಯ ಉದ್ದೇಶ ಹಿಂದುಳಿದವರ ಬೆಳವಣಿಗೆಯೇ ಆಗಿದ್ದರೂ ಅದು ಇಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿರುವ ಕಾರಣ ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ಗಟ್ಟಿಯಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಮತ ಬ್ಯಾಂಕ್‌ಗಾಗಿ ಮೀಸಲಾತಿಯ ಅಸ್ತ್ರವನ್ನು ಬಳಸುತ್ತಿರುವುದರಿಂದ ಅದರ ಮೂಲ ಉದ್ದೇಶ ಮಾಯವಾಗಿ ದಿನೇ ದಿನೇ ಮೀಸಲಾತಿಯ ಹೋರಾಟ ಜೋರಾಗುತ್ತ ಸರ್ಕಾರಕ್ಕೆ ತಲೆನೋವು ಆಗುತ್ತಿದೆ. ಮೀಸಲಾತಿಯ ಮೂಲ ಉದ್ದೇಶದ ಕಡೆ ನಾವು ಗಮನ ಕೊಟ್ಟರೆ ನಿಜವಾದ ಬಡವರಿಗೆ ಇದರ ಸೌಲಭ್ಯ ಸಿಗಬೇಕು. ಹಿಂದುಳಿದ ಸಮುದಾಯಗಳು ಸರ್ವಾಂಗೀಣವಾಗಿ ಬೆಳೆಯಬೇಕು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಕೆಲವರು ಧರ್ಮ ಒಡೆಯುವ ಹುನ್ನಾರ ಎಂದು ಅಪಪ್ರಚಾರ ಎಬ್ಬಿಸಿದ್ದರು. ಆದರೆ ಇದು ಧರ್ಮ ಒಡೆಯುವ ಕೆಲಸವಲ್ಲ. ಧರ್ಮವನ್ನು ಒಗ್ಗೂಡಿಸುವ ಕಾರ್ಯ. ಲಿಂಗಾಯತ ಸಿದ್ಧಾಂತವೇ ಕೂಡಿಸುವ ಸಿದ್ಧಾಂತವಾಗಿದೆ. ತುಂಡು ತುಂಡು ಬಟ್ಟೆಗಳನ್ನು ಸೂಜಿಯಿಂದ ಜೋಡಿಸಿ ಅಖಂಡ ಬಟ್ಟೆ ಮಾಡಿದಂತೆ ಲಿಂಗಾಯತ ಧರ್ಮದಲ್ಲಿರುವ 102 ಉಪಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕೆಲವರು ಪ್ರತ್ಯೇಕ ಧರ್ಮ ಹೋರಾಟ ನಿಂತುಹೋಗಿದೆ ಎನ್ನುತ್ತಿದ್ದಾರೆ. ಆದರೆ, ಇದು ನಮ್ಮ ಗುರಿ ಮುಟ್ಟುವವರೆಗೂ ನಿಲ್ಲದ ಹೋರಾಟವಾಗಿದೆ.

ಲಿಂಗಾಯತ ಧರ್ಮದ ಸಿದ್ಧಾಂತವೇ ಸಮಾನತೆ ತರುವ ಸಿದ್ಧಾಂತವಾಗಿದೆ. ಅರ್ಹತೆ ಇದ್ದರೆ ಪೇಪರ್ ಮಾರುವವ ರಾಷ್ಟ್ರಪತಿ ಆಗಬಹುದು, ಆಗಿದ್ದಾರೆ. ಚಹಾ ಮಾರುವವ ದೇಶದ ಪ್ರಧಾನಿಯಾದಂತೆ, ಅರಿವು-ಆಚಾರ-ಅನುಭಾವ ಇರುವವರು ಗುರುವಾಗಬಹುದು. ಜಗದ್ಗುರುವಾಗಬಹುದು. ಇದು ಬಸವ ಸಿದ್ಧಾಂತ. ಇದು ಒಡೆಯುವ ಕಾರ್ಯ ಹೇಗೆ ಆಗುತ್ತದೆ? ಆದರೆ, ಕೆಲವರು ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ, ನಿಜದ ಬಣ್ಣ ಬಯಲಾಗುತ್ತಿದೆ ಎಂಬ ಕಾರಣ ಧರ್ಮ ಒಡೆದಿದ್ದಾರೆ ಎಂದು ಕೋಲಾಹಲ ಎಬ್ಬಿಸಿ ತಮ್ಮ ಸ್ವಾರ್ಥ ಸಾಧಿಸುತ್ತಿದ್ದಾರೆ.

‘ಲಿಂಗಾಯತ ಸ್ವತಂತ್ರ ಧರ್ಮ’ ಎಂಬುದು ಹಿಂದೆ ಇತ್ತು. ಇಂದೂ ಇದೆ. ಎಂದೆಂದಿಗೂ ಇರುತ್ತದೆ. ಅದಕ್ಕೆ ಸಾಂವಿಧಾನಿಕ ಮಾನ್ಯತೆ ಬೇಕು ಅಷ್ಟೇ. ಒಂದಿಲ್ಲ ಒಂದು ದಿವಸ ಮಾನ್ಯತೆ ಸಿಕ್ಕೇ ಸಿಗುತ್ತದೆ ಎಂಬ ನೂರಕ್ಕೆ ನೂರರಷ್ಟು ವಿಶ್ವಾಸ ನಮಗಿದೆ.

ಲಿಂಗಾಯತರಲ್ಲಿ ಇರುವ ಪಂಚಮಸಾಲಿ, ಹಡಪದ, ಡೋಹರ, ಮೇದರ, ಮಡಿವಾಳ, ಅಂಬಿಗ, ಉರಿಲಿಂಗಪೆದ್ದಿ ಮುಂತಾದ ಗುರುಪೀಠಗಳು ಸಮಸ್ತ ಲಿಂಗಾಯತರಿಗೆ ಗುರುಗಳು. ತಮ್ಮ ಒಳಪಂಗಡಕ್ಕೆ ಮಾತ್ರ ಗುರುಗಳು ಅಲ್ಲ ಎಂಬುದು ತಿಳಿದುಕೊಳ್ಳಬೇಕು. ಉದಾಹರಣೆಗೆ ಮಂತ್ರಿಗಳು ಇರುತ್ತಾರೆ. ಮಂತ್ರಿಗಳು ಅಧಿಕಾರ ಸ್ವೀಕರಿಸಿದಾಗ ಸಮಸ್ತ ಕರ್ನಾಟಕಕ್ಕೆ ಮಂತ್ರಿಗಳು ಆಗಿರುತ್ತಾರೆ. ಆದರೆ, ಒಂದು ಜಿಲ್ಲೆಗೆ ಉಸ್ತುವಾರಿ ಮಂತ್ರಿಯಾಗುತ್ತಾರೆ. ಅದರ ಉದ್ದೇಶ ಆ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ಮಾಡುವುದು. ಅದೇ ರೀತಿ ಒಳಪಂಗಡಗಳ ಗುರುಪೀಠ ಎಷ್ಟೇ ಇದ್ದರೂ ಸಮಸ್ತ ಲಿಂಗಾಯತ ಸಮಾಜಕ್ಕೆ ಅವರು ಗುರುಗಳು. ಆಯಾ ಒಳಪಂಗಡಕ್ಕೆ ಉಸ್ತುವಾರಿ ಮಂತ್ರಿಗಳಿದ್ದ ಹಾಗೆ, ವಿಶೇಷ ಕಾಳಜಿವಹಿಸಿ ಆ ಸಮುದಾಯಗಳಿಗೆ ಬಸವಸಿದ್ಧಾಂತ ತಿಳಿಸಬೇಕು ಎಂಬುದೇ ಮೂಲ ಉದ್ದೇಶವಾಗಿದೆ.

ಕಲಬುರ್ಗಿ ಗಡಿಭಾಗದಲ್ಲಿ ಒಳಪಂಗಡಗಳ ಭೇದವೇ ಇಲ್ಲ. ಲಿಂಗಾಯತ ಎಂಬುದು ಒಂದೇ ಆಗಿದೆ. ಲಿಂಗಾಯತರಲ್ಲಿ ನೀವು ಯಾರು ಎಂದರೆ ಹೇಳಲಿಕ್ಕೆ ಬರುವುದಿಲ್ಲ. ಅಷ್ಟೊಂದು ಸಾಮರಸ್ಯ ಇದೆ ಎಂದು ಹೆಮ್ಮೆಯಿಂದ ಹೇಳಬಹುದು. ಲಿಂಗಾಯತ ಧರ್ಮದಲ್ಲಿ ಪಂಚಮಸಾಲಿ ಪಂಗಡ ಆರ್ಥಿಕವಾಗಿ ಹೇಗೆ ಇದೆ ಎಂಬುದು ಅಧ್ಯಯನ ಮಾಡಿ ನಿರ್ಣಯಿಸಿ ಸೌಲಭ್ಯ ಒದಗಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ. ಆದರೆ, ಅವರ ಹೋರಾಟವು ಲಿಂಗಾಯತ ಧರ್ಮ ವಿಭಜಿಸುವ ಪ್ರಯತ್ನವಂತೂ ಖಂಡಿತವಾಗಿ ಅಲ್ಲವೇ ಅಲ್ಲ. ಪಂಚಮಸಾಲಿ ಗುರುಪೀಠ ಸಮಸ್ತ ಲಿಂಗಾಯತ ಸಮಾಜಕ್ಕೆ ಗುರುಗಳು ಆಗಿದ್ದಾರೆ ಎಂಬುದು ಮರೆಯಬಾರದು. ಅವರ ಹಕ್ಕಿಗೆ ಅವರು ಹೋರಾಟ ಮಾಡಿದರೆ ಲಿಂಗಾಯತ ಧರ್ಮ ವಿಭಜಿಸುವ ಹುನ್ನಾರು ಹೇಗಾದೀತು? ಬಸವಣ್ಣನವರೇ ನಮ್ಮ ಧರ್ಮಗುರು, ವಚನ ಸಾಹಿತ್ಯ ಧರ್ಮಗ್ರಂಥ ಎಂದು ಈ ಸಿದ್ಧಾಂತ ಒಪ್ಪಿಕೊಳ್ಳುವ ನಾವೆಲ್ಲ ಲಿಂಗಾಯತ ಧರ್ಮದವರಾಗಿದ್ದೇವೆ. ಎಂದೆಂದಿಗೂ ಒಂದೇ ಆಗಿರುತ್ತೇವೆ.

(ಲೇಖಕ: ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ, ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷ)

ನಿರೂಪಣೆ: ಚಂದ್ರಕಾಂತ ಮಸಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT