ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಿಗಳಾಗುತ್ತಿದ್ದಾರೆಯೇ... ಮಕ್ಕಳು?

Last Updated 3 ಅಕ್ಟೋಬರ್ 2020, 19:40 IST
ಅಕ್ಷರ ಗಾತ್ರ

ನಾವೀಗ ಎಚ್ಚೆತ್ತುಕೊಳ್ಳದಿದ್ದಲ್ಲಿ, ನಮ್ಮ ಮಕ್ಕಳು, ಸ್ಥೂಲಕಾಯದವರಾಗಿ, ಕನ್ನಡಕ ಹಾಕಿಕೊಂಡು, ಸ್ವಾರ್ಥಿಗಳಾಗಿ ಬೆಳೆಯುತ್ತಾರೆ. ಹಾಗೆ ಬೆಳೆಯಲು ಅಗತ್ಯ ಇರುವ ಎಲ್ಲವನ್ನೂ ಪೂರೈಸುತ್ತಿದ್ದೇವೆ ನಾವು...

ಗಾಬರಿಯಾಯಿತೆ? ಆದರೆ ಇದು ನಿಜ.

ದಿನದ ಐದಾರು ಗಂಟೆಗಳ ಕಾಲ ಸ್ಕ್ರೀನ್‌ ಮುಂದೆ ಕಣ್ಣಿಟ್ಟು ಕೂರುವ ಮಕ್ಕಳಿಗೆ ಮಾಹಿತಿಗಷ್ಟೇ ಅಲ್ಲ, ಮನರಂಜನೆಗೂ ಸ್ಕ್ರೀನ್‌ ಸಾಧನವಾಗಿದೆ. ಮೊದಲು ಆನ್‌ಲೈನ್‌ ಕಲಿಕೆಗೆ ಮನಸ್ಸು ಒಗ್ಗಿಸಬೇಕಾಗಿತ್ತು. ಆದರೀಗ ಅದೇ ಕಲಿಕೆ ಅವರಲ್ಲಿ ಒತ್ತಡವನ್ನೂ ಹುಟ್ಟುಹಾಕುತ್ತಿದೆ.

ಆಟವಾಡಲೂ ಸ್ಕ್ರೀನ್‌ಗಳನ್ನೇ ಬಳಸುವ ಮಕ್ಕಳು, ಸೋಲನ್ನು, ಸೋಲೆಂದು ಸ್ವೀಕರಿಸುತ್ತಿಲ್ಲ. ಪ್ರತಿಸಲವೂ ತಾವು ಗೆಲ್ಲಬೇಕು ಎನ್ನುವ ಹಟವಿರುತ್ತದೆ. ಜೊತೆಗೆ ತಾವೇ ಗೆಲ್ಲಬೇಕೆನ್ನುವ ಚಟವೂ ಸೇರುವುದರಿಂದ ಅವರು ಆಟಗಳಲ್ಲಿಯೇ ತಮ್ಮನ್ನು ಮರೆಯತೊಡಗುತ್ತಾರೆ. ಹಸಿವು ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ಆನ್‌ಲೈನ್‌ ಕ್ಲಾಸ್‌ಗಳಲ್ಲಿ ಶಿಕ್ಷಕ– ಶಿಕ್ಷಕಿಯರ ಜೊತೆಗೆ ಐ ಕಾಂಟ್ಯಾಕ್ಟ್‌ (ನೇರ ನೋಟ) ಏರ್ಪಡುವುದಿಲ್ಲ. ಇದರಿಂದಾಗಿ ಕಲಿಕೆಯಲ್ಲಿ ಕೇಳುವಿಕೆ ಪರಿಪೂರ್ಣ ಆಗುವುದಿಲ್ಲ. ಕೇಳುವಿಯಲ್ಲಿಯೇ ತೊಂದರೆ ಇದ್ದಲ್ಲಿ, ಗ್ರಹಿಕೆ ಮತ್ತು ದಾಖಲೀಕರಣ ಎರಡೂ ಕ್ರಿಯೆಗಳು ಸಮರ್ಪಕವಾಗುವುದಿಲ್ಲ. ಈ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಮಾಡಬೇಕಿರುವುದೇನು?

ಮಕ್ಕಳ ಮನಶಾಸ್ತ್ರಜ್ಞೆ ಸುಜ್ಞಾನಿ ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ:

* ಮಕ್ಕಳಿಗೆ ಅಗತ್ಯವಿರುವ ಸ್ಕ್ರೀನ್‌ ಟೈಮ್‌ ಅನ್ನು ಅವರೊಂದಿಗೆ ಚರ್ಚಿಸಿ, ದಿನಚರಿ ರಚಿಸಿ

* ಪ್ರತಿದಿನವೂ ಅವರೊಂದಿಗೆ ಚರ್ಚಿಸಲು ಒಂದಷ್ಟು ಸಮಯ ನೀಡುವುದು

* ಆನ್‌ಲೈನ್‌ ಪಾಠ ನೆನಪಿನಲ್ಲಿ ಉಳಿಯುವುದು ಕಷ್ಟ. ಓದೂ ಅಗತ್ಯ ಎಂಬುದನ್ನು ಮನವರಿಕೆ ಮಾಡಿ

* ಇದು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಾದ ಸಂದರ್ಭ. ವಿನಾಕಾರಣ ಒತ್ತಡ ಸೃಷ್ಟಿಸಿಕೊಳ್ಳುವುದು ಬೇಡ.

ದೃಷ್ಟಿದೋಷದ ಸಮಸ್ಯೆ

ಮೊಬೈಲ್‌ ಸ್ಕ್ರೀನ್‌ ನಿರಂತರ ನೋಡುವುದರಿಂದ ಮಕ್ಕಳಲ್ಲಿ ದೃಷ್ಟಿದೋಷದ ಸಮಸ್ಯೆಗಳು ಈ ಹಿಂದೆಯೂ ಕಂಡುಬರುತ್ತಿದ್ದವು. ಲಾಕ್‌ಡೌನ್‌ ಅವಧಿಯಿಂದ ಈಚೆಗೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ಪ್ರಮಾಣ ಅಂದಾಜು ಶೇ 20ರಷ್ಟು ಹೆಚ್ಚಾಗಿದೆ.

ಯಾವುದೇ ಎಲೆಕ್ಟ್ರಾನಿಕ್‌ ಸ್ಕ್ರೀನ್‌ ಅನ್ನು ಬಿಟ್ಟೂಬಿಡದೇ ದೃಷ್ಟಿಸುವುದರಿಂದ ಎಳೆಯ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಚಿತ. ಇದರಿಂದ ತಲೆನೋವು, ಡ್ರೈ ಐ ಸಿಂಡ್ರೋಂ (ಕಣ್ಣು ಒಣಗುವುದು) ಸಮಸ್ಯೆ ಉಂಟಾಗುತ್ತದೆ. ಕಣ್ಣಿನಲ್ಲಿ ಕನಿಷ್ಠ ತೇವಾಂಶ ಇರಬೇಕಾಗುತ್ತದೆ. ಆದರೆ, ಒಂದೇ ಕಡೆ ಕುಳಿತು ಸ್ಕ್ರೀನ್‌ ನೋಡುವುದರಿಂದ ಈ ತೇವಾಂಶ ಇಲ್ಲವಾಗುತ್ತದೆ. ಇದರಿಂದ ಮೆಳ್ಳಗಣ್ಣು ಆಗಹುದು. ಸರಿಯಾದ ಚಿಕಿತ್ಸೆ ಸಿಗದಿರುವ ಕಾರಣ ಕಾಯಂ ಕುರುಡು ಕೂಡ ಆಗಬಹುದು.

ಡಾ.ಮಾಲಿನಿ ಪ್ರಭುಗೌಡ, ನೇತ್ರ ತಜ್ಞರು, ಅನುಗ್ರಹ ನೇತ್ರ ಆಸ್ಪತ್ರೆ‌, ಕಲಬುರ್ಗಿ

ಪಠ್ಯದ ಹೊರೆ ಬೇಡ

‘ಪೋಷಕರು ಮಕ್ಕಳನ್ನು ಬಲವಂತವಾಗಿ ದಿನವೂ ಓದಿಸುವ ಪರಿಸ್ಥಿತಿ ಇದೆ. ಮುಂದಿನ ದಿನಗಳಲ್ಲಿ ಶಾಲೆಗಳು ಮತ್ತೆ ಪ್ರಾರಂಭವಾದಾಗ ಮಕ್ಕಳಿಗೆ ಖಂಡಿತವಾಗಿಯೂ ಕಷ್ಟ ಆಗಲಿದೆ. ಶಿಸ್ತುಬದ್ಧವಾಗಿ ತರಗತಿಯಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಗುತ್ತದೆ. ಈ ಹಿಂದೆ ಜೂನ್‌ ತಿಂಗಳಲ್ಲಿ ಶಾಲೆ ಪ್ರಾರಂ ಭವಾದ ಸಂದರ್ಭದಲ್ಲಿ ಹೇಗೆ ನೇರವಾಗಿ ಪಾಠವನ್ನು ಪ್ರಾರಂಭಿಸದೆ, ಹಲವು ಪಠ್ಯೇತರ ಚಟುವಟಿಕೆಗಳ ಮುಖಾಂತರ ಮಕ್ಕ ಳನ್ನು ಮತ್ತೆ ಶಾಲೆಯ ವಾತಾವರಣಕ್ಕೆ ಹೊಂದಿಸಿಕೊಂಡು ಹೋಗುತ್ತಿದ್ದರೋ ಅದೇ ಮಾದರಿಯನ್ನು ಶಿಕ್ಷಕರು ಮುಂದೆ ಅನುಸರಿಸಬೇಕು.

‘ಶಾಲೆ ಪ್ರಾರಂಭವಾದ ಕೂಡಲೇ ಮಕ್ಕಳಿಗೆ ಪಠ್ಯದ ಹೊರೆ ಹೊರಿಸಿದರೆ, ಖಂಡಿತವಾಗಿಯೂ ಮಕ್ಕಳು ಇದಕ್ಕೆ ಒಗ್ಗಿಕೊಳ್ಳಲು ಸಾಧ್ಯವಿಲ್ಲ. ಮನೆಯ ವಾತಾವರಣಕ್ಕೇ ಹೊಂದಿಕೊಂಡಿದ್ದ ಮಕ್ಕಳಿಗೆ ಗಮನಕೊಟ್ಟು ಕುಳಿತು ಪಾಠ ಕೇಳಲು ಸಾಧ್ಯವಾಗುವುದಿಲ್ಲ.

ಡಾ. ಶಶಿಧರ್‌ ಎಚ್‌.ಎನ್‌., ಸ್ಥಾನಿಕ ವೈದ್ಯಾಧಿಕಾರಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್‌)

ಪೋಷಕರ ಅಭಿಪ್ರಾಯ

ಮಕ್ಕಳು ಮಕ್ಕಳ ಜೊತೆಗೇ ಬೆರೆತಾಗ ಮಾತ್ರ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ನಾಲ್ಕು ಗೋಡೆ ಮಧ್ಯದ ಆನ್‌ಲೈನ್‌ ಶಿಕ್ಷಣ ಮಕ್ಕಳು ಮೊಬೈಲ್‌ ದಾಸರಾಗುವಂತೆ ಮಾಡುತ್ತಿದೆ.

ಶಶಿಕಲಾ ಟಿ.ಎಸ್‌, ಸಹಾಯಕ ಪ್ರಾಧ್ಯಾಪಕಿ, ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜು, ದಾವಣಗೆರೆ (ವರ್ಕ್‌ ಫ್ರಮ್‌ ಹೋಂ)

ಅಪ್ಪ–ಅಮ್ಮ ಇಬ್ಬರೂ ದುಡಿಯುವ ಕುಟುಂಬದಲ್ಲಿ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ವರದಾನ. ವರ್ಕ್‌ ಫ್ರಂ ಹೋಂನಲ್ಲಿ ಪೋಷಕರ ಕೆಲಸದ ಒತ್ತಡಗಳೂ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತವೆ. ಈ ಹಿಂದೆ ಮಕ್ಕಳಿಗೆ ರಾಮಾಯಣ–ಮಹಾಭಾರತದ ಕಥೆ ಹೇಳಿ ಮಲಗಿಸುತ್ತಿದ್ದೆ. ಆದರೆ,ಈಗ ಹೇಗೆ ಬದುಕಬೇಕು ಎಂದು ಹೇಳಿಕೊಡುತ್ತಿದ್ದೇನೆ.

ಶಾಂತಲಾ, ಉದ್ಯೋಗಿ, ಬೆಂಗಳೂರು

ಈ ಸಂಕಷ್ಟದ ಅನಿವಾರ್ಯವನ್ನು ಪೋಷಕರು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಶಿಕ್ಷಕರ ಸ್ಥಾನವನ್ನು ಪೋಷಕರು ತುಂಬುವ ಅವಕಾಶ ಸಿಕ್ಕಿದೆ. ಮಕ್ಕಳ ಜತೆ ನಾವೂ ಆನ್‌ಲೈನ್‌ ಪಾಠ ಕೇಳುತ್ತ ಅವರಿಗೆ ಅರ್ಥವಾಗದಿರುವುದನ್ನು ಹೇಳಿಕೊಡಬೇಕು.

ಲತಾ ಯೋಗಿರಾಜ್‌, ಶಿರಾಳಕೊಪ್ಪ, ಶಿವಮೊಗ್ಗ ಜಿಲ್ಲೆ. (ಗೃಹಿಣಿ)

ಮಗ ಶಾಲೆಯನ್ನು ಮಿಸ್ ಮಾಡಿಕೊಳ್ತಾ ಇದ್ದ. ಆದರೆ, ಆನ್‌ಲೈನ್ ತರಗತಿಯ ಜತೆಗೆ ಪೋಷಕರು ಆಟಗಳತ್ತಲೂ ಗಮನ ಹರಿಸಬೇಕು. ನಾವು ಕೇರಂ, ಚೆಸ್ಆಟದ ಜೊತೆಗೆ ಪುಸ್ತಕ ಓದುವ ಹವ್ಯಾಸ ರೂಢಿಸಿದೆವು. ಇದರಿಂದ ಮಗ ಖುಷಿಯಾಗಿದ್ದಾನೆ.

ಶ್ವೇತಾ ಮಠದ, ಗೃಹಿಣಿ, ಹಿರೇಕೆರೂರು, ಹಾವೇರಿ ಜಿಲ್ಲೆ

ದಿನದ ಅರ್ಧ ಭಾಗ ಕೊರೊನಾ ಸೋಂಕಿತರ ನಡುವೆಯೇ ಇರುತ್ತೇನೆ. ಮಕ್ಕಳನ್ನು ಸ್ಪರ್ಶಿಸಿ ಪಾಠ ಹೇಳಿಕೊಡಲು ಆಗುವುದಿಲ್ಲ. ಏನಿದ್ದರೂ ದೂರದಿಂದಲೇ ನಮ್ಮ ಸಂವಹನ. ಶಾಲೆಗಳೂ ಬಂದ್‌ ಆಗಿರುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆಗೂ ಕುತ್ತು ಬಂದಿದೆ.

ವಿದ್ಯಾಶ್ರೀ, ಜಿಲ್ಲಾ ಕೋವಿಡ್‌ ಆಸ್ಪತ್ರೆಯ ಐಸಿಯುನಲ್ಲಿ ಶುಶ್ರೂಷಕಿ (ಸ್ಟಾಫ್ ನರ್ಸ್‌), ತುಮಕೂರು (ಕೊರೊನಾ ವಾರಿಯರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT