ಶುಕ್ರವಾರ, ಜನವರಿ 27, 2023
19 °C
ಜನವರಿ 1 ಹೊಸ ವರ್ಷಾಚರಣೆಯಷ್ಟೇ ಅಲ್ಲ, ಅಸ್ಪೃಶ್ಯತೆ ವಿರುದ್ಧದ ವಿಜಯೋತ್ಸವ

PV Web Exclusive | ಕೋರೆಗಾಂವ್ ಕದನ ಎಂಬ ಶೋಷಿತರ ದಿಗ್ವಿಜಯ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಅವರು, ತಮ್ಮ ಜೀವಿತಾವಧಿಯಲ್ಲಿ ಪ್ರತಿ ವರ್ಷ ಜನವರಿ 1ರಂದು ಮಹಾರಾಷ್ಟ್ರದ ಕೋರೆಗಾಂವ್ (ಪುಣೆ ಜಿಲ್ಲೆ) ಎಂಬ ಸ್ಥಳಕ್ಕೆ ತಪ್ಪದೇ ಭೇಟಿ ನೀಡುತ್ತಿದ್ದರು. ಭೀಮಾ ನದಿ ತೀರದ ಈ ಐತಿಹಾಸಿಕ ಸ್ಥಳದಲ್ಲಿರುವ ಮಹಾರ್ ಸ್ತಂಭ (ಸ್ಮಾರಕ) ಅಥವಾ ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಿದ್ದರು.

ಮಹಾರ್ ಸೈನಿಕರು, ಕರಾಳ ಅಸ್ಪೃಶ್ಯತೆ ಆಚರಣೆ ವಿರುದ್ಧ ನಡೆಸಿದ ಕದನ ಕ್ರಾಂತಿಯ ಪ್ರತೀಕ ಆ ಸ್ತಂಭ. 65 ಅಡಿ ಎತ್ತರದ ಈ ವಿಜಯ ಸ್ತಂಭದ ಹಿಂದಿರುವ ಚರಿತ್ರೆ ಮೈ ನವಿರೇಳಿಸುವುದಷ್ಟೇ ಅಲ್ಲ, ಅಸ್ಪೃಶ್ಯತೆಯ ಕರಾಳ ದರ್ಶನವನ್ನೂ ಮಾಡಿಸುತ್ತದೆ.

ಎರಡನೇ ಬಾಜಿರಾವ ಪೇಶ್ವೆಯ ಆಡಳಿತಾವಧಿಯಲ್ಲಿ ಅಸ್ಪೃಶ್ಯತೆ ಆಚರಣೆ ತುತ್ತತುದಿ ತಲುಪಿತ್ತು. ಮನುಸ್ಮೃತಿಯಲ್ಲಿ ಉಲ್ಲೇಖಿಸಿದ್ದ ಎಲ್ಲಾ ರೀತಿಯ ಆಚರಣೆಗಳು ಅಂದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದವು. ಸವರ್ಣಿಯರ ಮೇಲೆ ಅಸ್ಪೃಶ್ಯರ ನೆರಳು ಕೂಡ ಬೀಳುವಂತಿರಲಿಲ್ಲ. ಸೂರ್ಯ ನೆತ್ತಿ ಮೇಲೆ ಬಂದಾಗಷ್ಟೇ ಅವರು ಹೊರಗೆ ಬರಬೇಕಿತ್ತು. ತಾವು ನಡೆದುಕೊಂಡು ಹೋಗುವ ದಾರಿಯಲ್ಲಿ ಹೆಜ್ಜೆ ಗುರುತುಗಳು ಕಾಣದಂತೆ ಗುಡಿಸಿಕೊಂಡು ಹೋಗಲು ಸೊಂಟದ ಹಿಂಭಾಗಕ್ಕೆ ಪೊರಕೆ ಹಾಗೂ ಉಗುಳಲು ಕುತ್ತಿಗೆಗೆ ಒಂದು ಕುಡಿಕೆ ಕಟ್ಟಿಕೊಂಡಿರಬೇಕಿತ್ತು.

ಉಗುಳು ನೆಲಕ್ಕೆ ಬಿದ್ದರೆ ದಾರಿ ಮೈಲಿಗೆಯಾಗುತ್ತದೆ, ಹೆಜ್ಜೆ ಗುರುತನ್ನು ದಾಟಿದರೆ ಅಪವಿತ್ರ ಎಂಬ ಕಾಲವದು. ಅಸ್ಪೃಶ್ಯರಾಗಿದ್ದ ಮಹಾರ್, ಮಾಂಗ, ಚಮ್ಮಾರ ಜಾತಿಗಳ ವಾಸಸ್ಥಳ ಊರ ಹೊರಗಿತ್ತು. ತಮ್ಮ ಹಕ್ಕು ಎಂಬಂತೆ ಮೇಲ್ವರ್ಗದವರು ಅಸ್ಪೃಶ್ಯರ ಮೇಲೆ ಶೋಷಣೆ ನಡೆಸುತ್ತಿದ್ದರು.

ಛತ್ರಪತಿ ಶಿವಾಜಿ ಸೈನ್ಯದಲ್ಲಿ ಮಹಾರರು ಸೇರಿದಂತೆ ಕೆಳ ಸಮುದಾಯದವರು ಪ್ರಮುಖ ಸ್ಥಾನ ಪಡೆದಿದ್ದರು. ಶಿವಾಜಿ ಕಾಲವಾದ ನಂತರ ಆಡಳಿತದಲ್ಲಿ ವರ್ಣವ್ಯವಸ್ಥೆ ನುಸುಳಿತು. ಅಸ್ಪೃಶ್ಯತೆ ಆಚರಣೆ ಚಾಲ್ತಿಗೆ ಬಂತು. ಕ್ರಮೇಣ ಸೇನೆಯಲ್ಲಿ ಶೋಷಿತರು ಗೌಣವಾದರು. ಭಾರತದಲ್ಲಿ ತಮ್ಮ ಆದಿಪತ್ಯ ಸ್ಥಾಪನೆಗೆ ಹೊಂಚು ಹಾಕುತ್ತಿದ್ದ ಬ್ರಿಟಿಷರು ಅಸ್ಪೃಶ್ಯತೆಯನ್ನು ಲೆಕ್ಕಿಸದೆ, ತಮ್ಮ ಸೈನ್ಯದಲ್ಲಿ ಶೋಷಿತ ಸಮುದಾಯಗಳಿಗೆ ಅವಕಾಶ ನೀಡಿದ್ದರು.

ಪೇಶ್ವೆ ಮತ್ತು ಬ್ರಿಟಿಷರ ಮಧ್ಯೆ 1818 ಜನವರಿ 1ರಂದು ಐತಿಹಾಸಿಕ ಕೋರೆಗಾಂವ್ ಯುದ್ಧ ನಡೆಯಿತು. ಬ್ರಿಟಿಷ್ ಸೈನ್ಯ ಹಿಂದೆಂದೂ ಊಹಿಸದ ಗೆಲುವು ಪಡೆಯಿತು. ಈ ವಿಜಯಕ್ಕೆ ಕಾರಣರಾದವರು 500 ಮಹಾರ್ ಸೈನಿಕರು. ಬಾಂಬೆ ನೇಟಿವ್ ರೆಜಿಮೆಂಟ್ ಇನ್ಫೆಂಟ್ರಿಯಲ್ಲಿದ್ದ ಈ ಸೈನಿಕರು, ಪೇಶ್ವೆಗಳ 25 ಸಾವಿರ ಸೈನಿಕರನ್ನು ಧೂಳಿಪಟ ಮಾಡಿದರು. ಬೆಳಿಗ್ಗೆ 9ಕ್ಕೆ ಆರಂಭಗೊಂಡು ರಾತ್ರಿ 9ರ ಹೊತ್ತಿಗೆ ಅಂತ್ಯಗೊಂಡ ಕಾದಾಟದಲ್ಲಿ ಮಹಾರರು ಶತ್ರುಗಳನ್ನು ಚೆಂಡಾಡಿದರು. ಬಾಜಿರಾಯ ಯುದ್ಧದಲ್ಲಿ ಸೋತು, ಜೀವ ಉಳಿಸಿಕೊಳ್ಳಲು ಪಲಾಯನ ಮಾಡಿದ. ಹನ್ನೆರಡು ತಾಸು ನಡೆದ ಈ ಕಾಳಗದಲ್ಲಿ 22 ಮಹಾರ ಸೈನಿಕರು ಹುತಾತ್ಮರಾದರು.

ಮಹಾರರ ಶೌರ್ಯವನ್ನು ಮೆಚ್ಚಿದ ಬ್ರಿಟಿಷರು, ಗೌರವಾರ್ಥವಾಗಿ 1822ರಲ್ಲಿ ಇಲ್ಲಿ ಸ್ಮಾರಕ ನಿರ್ಮಿಸಿದರು. One of the proudest triumps of the British Army in the East (ಪೂರ್ವ ಭಾರತದಲ್ಲಿ ಬ್ರಿಟಿಷ್ ಸೇನೆ ಸಾಧಿಸಿದ ಗೆಲುವುಗಳಲ್ಲೇ ಅತ್ಯಂತ ಹೆಮ್ಮೆಯ ವಿಜಯ) ಎಂಬ ಸಾಲುಗಳ ಜತೆಗೆ, ಕದನದಲ್ಲಿ ಹುತಾತ್ಮರಾದ ಮಹಾರ್ ಸೈನಿಕರ ಹೆಸರನ್ನು ಸ್ಮಾರಕದಲ್ಲಿ ಬರೆಯಲಾಗಿದೆ.

ಇತಿಹಾಸದಲ್ಲಿ ನಡೆದ ಎಷ್ಟೋ ಯುದ್ಧಗಳಲ್ಲಿ ಭೀಮಾ– ಕೋರೆಗಾಂವ್ ಕದನ ಕೂಡ ಒಂದು ಎಂದು ಮೇಲ್ನೋಟಕ್ಕೆ ಅನಿಸಿದರೂ, ಈ ಯುದ್ಧದ ಹಿಂದೆ ಇದ್ದದ್ದು ಅಸ್ಪೃಶ್ಯತೆ ಆಚರಣೆ ವಿರುದ್ಧದ ಕಿಚ್ಚು. ನಿರಂತರ ಶೋಷಣೆಯಿಂದ ಬೆಂದಿದ್ದ ಮಹಾರರ ಪಾಲಿಗೆ, ಆ ಯುದ್ಧ ಕೇವಲ ರಾಜ್ಯಗಳ ಮೇಲಿನ ಹಿಡಿತಕ್ಕಾಗಿ ನಡೆದದ್ದಷ್ಟೇ ಆಗಿರಲಿಲ್ಲ. ಅಸ್ಪೃಶ್ಯತೆ ಆಚರಣೆಯ ಸಂಕೋಲೆ ಬಿಡುಗಡೆಯ ಕ್ರಾಂತಿಯಾಗಿತ್ತು. ಬೃಹತ್ ಸೈನ್ಯದ ಎದುರು ಬೆರಳೆಣಿಕೆಯ ಸೈನಿಕರು ಸಾಧಿಸಿದ ಜಯ, ಅಸ್ಪೃಶ್ಯತೆ ವಿರುದ್ಧ ಸಾಧಿಸಿದ ವಿಜಯವೂ ಆಗಿತ್ತು.


ತಮ್ಮ ಬೆಂಬಲಿಗರೊಂದಿಗೆ ಕೋರೆಗಾಂವ್ ಯುದ್ಧ ಸ್ಮಾರಕಕ್ಕೆ 1927ರಲ್ಲಿ ಭೇಟಿ ನೀಡಿದ್ದ ಡಾ.ಬಿ.ಆರ್. ಅಂಬೇಡ್ಕರ್ (ಚಿತ್ರ ಕೃಪೆ: ಲಡಾಯಿ ಪ್ರಕಾಶನ)

ಮರೆತೇ ಹೋಗಿದ್ದ ಮಹಾರ್ ಸೈನಿಕರ ಈ ಸಾಹಸಗಾಥೆಯ ಇತಿಹಾಸವನ್ನು ಕೆದಕಿ ತೆಗೆದ ಅಂಬೇಡ್ಕರ್, 1927 ಜನವರಿ 1ರಂದು ಮೊದಲ ಸಲ ಇಲ್ಲಿಗೆ ಭೇಟಿ ನೀಡಿದರು. ‘ಬ್ರಿಟಿಷರ ಪರವಾಗಿ ಮಹಾರ್ ಯೋಧರು ಯುದ್ಧ ಮಾಡಿದ್ದು ಅಭಿಮಾನಪಡುವ ಸಂಗತಿಯಲ್ಲದಿದ್ದರೂ, ಬ್ರಿಟಿಷರ ಪರ ಯಾಕೆ ಹೋದರು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡುತ್ತದೆ. ಮತ್ತೇನು ಮಾಡಲು ಸಾಧ್ಯವಿತ್ತು? ಹಿಂದೂಗಳೆನಿಸಿಕೊಂಡವರು ಮಹಾರರನ್ನು ಅಸ್ಪೃಶ್ಯರೆಂದು ಪರಿಗಣಿಸಿದರು. ನಾಯಿ, ನರಿಗಳಿಗಿಂತಲೂ ಕಡೆಯಾಗಿ ಕಂಡರು. ಈ ಅವಮಾನ ಸಹಿಸಿಕೊಂಡು ಎಷ್ಟು ದಿನ ಬದುಕುವುದು? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಹಿಟ್ಟಿಗಾಗಿ ಅವರು ಅನಿವಾರ್ಯವಾಗಿ ಬ್ರಿಟಿಷ್ ಸೇನೆ ಸೇರಿದರೆಂಬುದನ್ನು ಎಲ್ಲರೂ ಗಮನಿಸಬೇಕು’ ಎಂದು  ಮಹಾರರ ಹೋರಾಟವನ್ನು ಅಂಬೇಡ್ಕರ್ ಸಮರ್ಥಿಸಿದ್ದರು.

ಅಸ್ಪೃಶ್ಯರ ಶೋಷಣೆ ತಮ್ಮ ಹಕ್ಕು ಎಂಬ ಸವರ್ಣಿಯರ ದಾರ್ಷ್ಟ್ಯತೆ, ನಮ್ಮ ಪೂರ್ವಜನ್ಮದ ಫಲವೇ ಈ ಶೋಷಣೆ ಎಂಬ ಅಸ್ಪೃಶ್ಯರ ಅಜ್ಞಾನದ ಮಸುಕನ್ನು ಕೋರೆಗಾಂವ್ ಚರಿತ್ರೆ ಬಹುಮಟ್ಟಿಗೆ ಅಳಿಸಿತು. ‘ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ’ ಎಂದ ಅಂಬೇಡ್ಕರ್, ಚರಿತ್ರೆಯಲ್ಲಿ ಹುದುಗಿ ಹೋಗಿದ್ದ ಇಂತಹ ಎಷ್ಟೋ ಘಟನೆಗಳನ್ನು ಹೆಕ್ಕಿ ತೆಗೆದು, ಅಸ್ಪೃಶ್ಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ಪರಿವರ್ತನೆಯ ತೇರನ್ನು ಬದುಕಿನುದ್ದಕ್ಕೂ ಒಂಟಿಯಾಗಿ ಎಳೆದ ಅವರು, ಅಂತಿಮವಾಗಿ ಸಂವಿಧಾನದಲ್ಲಿ ಶೋಷಿತರು ಕೂಡ ಎಲ್ಲರಂತೆ ಘನತೆಯಿಂದ ಬದುಕುವ ಹಕ್ಕುಗಳನ್ನು ನೀಡಿದರು.

ಅಂಬೇಡ್ಕರ್ ಅವರು ಕೋರೆಗಾಂವ್‌ ಸ್ಮಾರಕಕ್ಕೆ ಭೇಟಿ ನೀಡಿದಾಗಿನಿಂದ ಈ ಸ್ಥಳ ಶೋಷಿತ ಸಮುದಾಯಗಳ ಪಾಲಿಗೆ ವಿಜಯ ಯಾತ್ರಾ ಸ್ಥಳವಾಗಿದೆ. ಜನವರಿ 1ನೇ ತಾರೀಖು ಶೋಷಿತರ ಪಾಲಿಗೆ ಕೇವಲ ಹೊಸ ವರ್ಷದ ಸಂಭ್ರಮಾಚರಣೆಯಷ್ಟೇ ಅಲ್ಲ, ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದು ಮಹಾರ ಸೈನಿಕರು ಸಾಧಿಸಿದ ವಿಜಯದ ದಿನವೂ ಆಗಿದೆ. ಹಾಗಾಗಿಯೇ, ಈ ದಿನವನ್ನು ‘ಕೋರೆಗಾಂವ್ ವಿಜಯೋತ್ಸವ’ವಾಗಿ ಶೋಷಿತರು ಆಚರಿಸುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಕೋರೆಗಾಂವ್ ಗ್ರಾಮಕ್ಕೆ ಭೇಟಿ ನೀಡಿ, ಸ್ಮಾರಕ್ಕೆ ಗೌರವ ಸಲ್ಲಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು