ಮನೋವ್ಯಾಪಾರದ ರೂಪದಲ್ಲಿ ವಯಸ್ಸು ಚಲಾವಣೆಯಲ್ಲಿದೆ. ಇಡೀ ಜಗತ್ತು ಯೌವನವನ್ನು ಮುದ್ದು ಮಾಡುತ್ತಿದೆ. ವ್ಯಾಪಾರ ಮತ್ತು ರಾಜಕಾರಣಕ್ಕೆ ವಯಸ್ಸು ಒಂದು ಲಾಭದಾಯಕ ಉತ್ಪನ್ನ. ಆದರೆ, ವಯಸ್ಸನ್ನು ಗೆಲ್ಲುವ ವ್ಯಸನದಲ್ಲಿ ಜಗತ್ತು ಮುದಿತನದೆಡೆಗೆ ದಾಪುಗಾಲಿಡುತ್ತಿದೆ!

ಗೆಳತಿಯೊಬ್ಬಳು ಆಳವಾಗಿ ಯೋಚಿಸುತ್ತಿದ್ದಳು. ನಲವತ್ತು ವರ್ಷಗಳ ಹಿಂದೆ, ಆಗ ಸುಮಾರು ಐವತ್ತೆಂಟು ವರ್ಷಗಳಾಗಿದ್ದ ತನ್ನ ಅಮ್ಮ ಒಂದು ದಿನ, ತಾನು ಉಡುವ ಕಾಟನ್ ಸೀರೆಯ ಸೆರಗಿಗೆ ‘ಒಂದು ಪಿನ್ ಹಾಕ್ತೀಯಾ’ ಅಂತ ಕೇಳಿದ್ದಳು. ತನ್ನ ಐದು ಮಕ್ಕಳಲ್ಲಿ ಕೊನೆಯ ಮಗಳು ಪಿಯುಸಿಯಲ್ಲಿದ್ದ ಆಕೆ, ಉಡುವ ಹತ್ತಿ ಸೀರೆಗೆ ಯಾವತ್ತೂ ಪಿನ್ ಹಾಕಿದವಳೇ ಅಲ್ಲ. ಈಗ ಇವಳಿಗೆ ಇದೆಂತ ಗಿರ ಹಿಡಿಯಿತು ಅಂತನ್ನಿಸಿ ಒಂದು ಸಣ್ಣ ಕೊಂಕು ನಗೆ ತನ್ನ ಮುಖದ ಮೇಲೆ ಹಾದುಹೋಗಿತ್ತು. ಏನನ್ನಿಸಿತೋ ಅಮ್ಮ ‘ಬ್ಯಾಡ ಬಿಡು’ ಅಂದಿದ್ದಳು. ಅದು ಅವಳೊಳಗೆ ಪಿನ್ನಿನಂತೆ ಚುಚ್ಚಿಕೊಂಡಿತ್ತು. ಇದೀಗ ತಾನೂ ಆ ವಯಸ್ಸನ್ನು ದಾಟುತ್ತಿರುವಾಗ ಆಂತರಿಕವಾಗಿ ಆಗುವ ಹೊಯ್ದಾಟವೊಂದು ಥಟ್ಟನೆ ಅವಳಿಗೆ ಗೊತ್ತಾಗುತ್ತಿದೆ.

ಹ್ಯಾಪಿ ಬರ್ತ್ಡೇ ಅಂತ್ಲೋ, ನಿವೃತ್ತಿ ಯಾವಾಗ ಅಂತ್ಲೋ ಸುತ್ತಲಿನೆಲ್ಲವೂ ವಯಸ್ಸನ್ನು ನೆನಪಿಸು ತ್ತಿರುತ್ತವೆ. ಆದರೆ, ಮನಸ್ಸು ಚಿರ ಯೌವನಿಗರಂತೆ ಚಿಮ್ಮುತ್ತಿರುತ್ತದೆ. ಕೂದಲಿಗೆ ಕಪ್ಪು ಹಚ್ಚಿಕೊಂಡಷ್ಟು ಸುಲಭವಲ್ಲ, ಮನಸ್ಸನ್ನು ದೇಹಕ್ಕೆ ಒಗ್ಗಿಸುವುದು. ಹಣ್ಣಾಗಿದ್ದರೂ ಹೊಲಗೆಲಸಕ್ಕೆ ಹೋಗುವ ಚಿನ್ನಮ್ಮನ ಹತ್ತಿರ ನಿನ್ನ ವಯಸ್ಸೆಷ್ಟು ಅಂತ ಕೇಳಿದರೆ, ‘ಯಾರಿಗ್ಗೊತ್ತು? ಆಗೋತನ್ಕ ಕೆಲ್ಸ ಮಾಡೋದು, ಅದೇನ್ ದೊಡ್ಡ ವಿಷ್ಯ?’ ಅಂತಾಳೆ. ಹುಟ್ಟಿದ ದಿನಾಂಕವೇ ಗೊತ್ತಿಲ್ಲದ ಅವಳಿಗೆ ನಿವೃತ್ತಿಯ ದಿನಾಂಕವೂ ಗೊತ್ತಿಲ್ಲ. ಅದು ಅವಳ ಮನದೊಳಗೇನೂ ಅಲ್ಲೋಲಕಲ್ಲೋಲ ಮಾಡಿಲ್ಲ.

ಅಲ್ಲೋಲಕಲ್ಲೋಲ ಅಲ್ಲದಿದ್ದರೂ ಇಂದು ಇದು ಬೇರೆ ಬೇರೆ ರಾಜಕಾರಣದ ಭಾಗವೂ ಆಗಿಹೋಗಿರುವುದು ತಮಾಷೆಯ ವಿಷಯವಲ್ಲ. ಮೊದಲೆಲ್ಲ ರಾಜಕಾರಣಿಗಳು ತಮ್ಮ ವಯಸ್ಸು ಮರೆಮಾಚುತ್ತಿರಲಿಲ್ಲ. ಈಚೆಗೆ ನೇಪಾಳದಲ್ಲಿ ‘ಜೆನ್–ಝೀ’ಗಳು ರಾಜಕಾರಣಿಗಳಿಗೂ ನಿವೃತ್ತಿ ಬೇಕು ಎಂದು ಡಿಮ್ಯಾಂಡ್ ಮಾಡಿದ್ರು. ಈ ಸೈಕಾಲಜಿ ನಮ್ಮ ಪ್ರಜೆಗಳಲ್ಲಿ ಇದೆ ಎಂದು ಮೊದಲೇ ಊಹಿಸಿದ್ದ ನಮ್ಮ ದೇಶದ ಕೆಲವು ನಾಯಕರು, ರಾಜಕಾರಣಿಗಳು 75ಕ್ಕೆ ನಿವೃತ್ತರಾಗಬೇಕೆಂಬುದು ನಮ್ಮ ನೀತಿ ಎಂದು ಪೋಸು ಕೊಟ್ಟರು. ನಾವೂ ಪುಳಕಗೊಂಡು ಎಂತಹ ಕ್ರಾಂತಿಕಾರಕ ಆಲೋಚನೆ, ಬೇರೆ ಯಾರಾದ್ರೂ ಇದನ್ನು ಮಾಡಲು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಕಾರ್ಯಾಚರಣೆ ನಡೆಯಿತು. ಆ ಪ್ರಕಾರ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಬಿ.ಎಸ್. ಯಡಿಯೂರಪ್ಪ ಎಲ್ರಿಗೂ ವಯಸ್ಸಾಯ್ತು– ಏಣಿ ಹತ್ತಲು ಕೈ ಹಿಡಿದವರು ಎಂಬ ಎಮೋಷನ್ನು ಯಾರಿಗೂ ನೆನಪಾಗದಂತೆ– ಮೂಲೆಗುಂಪು ಮಾಡಿದ್ದಾಯ್ತು. ಮತ್ತೆ ಇವ್ರೂ ಇದನ್ನು ಅನುಸರಿಸ್ತಾರಾ ಅಂತ ಯಾರೋ ಮೆತ್ತಗೆ ಕೇಳಿದರೆ ಮತ್ತೆ? ಇವ್ರಂದ್ರೆ ಯಾರು? ದೇಶಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ, ನೀವೆಂತ ಮಾರ್ರೆ, ನಿಮ್ಗೆ ಬರೀ ಅನುಮಾನ ಅಂದವರಿಗೆಲ್ಲಾ ಸಮಯಕ್ಕೆ ಸರಿಯಾಗಿ ಮರೆವಿನ ಕಾಯಿಲೆ ವಕ್ಕರಿಸಿದೆ.

ಇದೀಗ ನಮ್ಮವರಿಗೆ ಎಪ್ಪತ್ತೈದು ಆಗಿಯೂ ಆಯ್ತು, ವಿಷ್ ಮಾಡಿಯೂ ಆಯ್ತು. ಹೀಗಿರುವಾಗ, ಇನ್ನೂ ನಡುವಯಸ್ಸು, ಉತ್ಸಾಹ, ದೈಹಿಕ ದೃಢತೆ ಇದೆ, ಸಾವಿರಾರು ಕಿಲೋಮೀಟರ್ ನಡೆಯಬಲ್ಲರು, ದೇಶಕ್ಕಾಗಿ ಕೆಲವು ಕನಸುಗಳಿವೆ ಅಂತೇನಾದ್ರೂ ನೀವೊಂದು ಪರ್ಯಾಯ ಹೇಳಿಬಿಟ್ರೆ ಅವರ ಕಿರಿವಯಸ್ಸು ಅರ್ಹತೆ ಅನ್ನಿಸಿಕೊಳ್ಳುವುದೇ ಇಲ್ಲ. ಮತ್ತೀಗ, ಶಯ್ಯೆ ಹಿಡಿದಿರುವ ಅತಿಹಿರಿಯರು, ಎಂದೆಂದೂ ನಿವೃತ್ತಿಯ ಮಾತಾಡದವರು ತಮ್ಮ ಅನುಕೂಲಕ್ಕೆ ಒದಗಿ ಬಂದರೆ ಅದೇ ಎಪ್ಪತ್ತೈದರ ಪರ ಮಾತಾಡುವವರು ಅವರನ್ನು ಭೀಷ್ಮಾಚಾರ್ಯರಿಗೆ ಹೋಲಿಸಿದರೂ ಆಶ್ಚರ್ಯ ಇಲ್ಲ. ಅಬ್ಬಾ! ವಯಸ್ಸೂ ಕಾರ್ಡ್ ಆಗಬಲ್ಲ, ಇದನ್ನೆಲ್ಲಾ ಸಲೀಸು ಮಾಡಿಕೊಂಡಿರುವ ಜನರಿಂದು ವ್ಯಾಪಕವಾಗಿರುವುದರ ಹಿಂದೆ ಮನಸ್ಸನ್ನು ರೂಪಿಸುವ ಕಾರ್ಖಾನೆಗಳ ಕೊಡುಗೆ ಬಹುದೊಡ್ಡದಿದೆ. ಮನಸ್ಸುಗಳನ್ನು ರೂಪಿಸುವುದು ವ್ಯಾಪಾರ ತಂತ್ರಗಳಲ್ಲಿ ಅತಿ ಪ್ರಮುಖವಾದುದು. ತಕ್ಕಡಿಗೆ ಕಣ್ಣಿರುವುದಿಲ್ಲ.

ಯೌವನವೂ ಇಂದು ವ್ಯಾಪಾರದ ಪ್ರಮುಖ ಮಾರುಕಟ್ಟೆ. ಯೌವನದ ಗಡುವನ್ನು ಸಾರಾಸಗಟು ಹೆಚ್ಚಿಸಲಾಗುತ್ತಿದೆ. ಅದನ್ನು ಲೈಂಗಿಕತೆಗೆ ಸೀಮಿತ ಗೊಳಿಸಿ ಮಾರುಕಟ್ಟೆಯನ್ನು ವಿಸ್ತರಿಸುವ ಜಾಲ ಎಲ್ಲಿಂದೆಲ್ಲಿಗೆ ಹಬ್ಬಿಕೊಂಡಿದೆ ಎಂಬುದು ತಿಳಿದ ಸಂಗತಿ. ಆದರೆ, ವಯಸ್ಸಾಗುವುದೂ ಆಕರ್ಷಣೆಯ ವಿಷಯ ಆಗಬಹುದು ಎಂಬುದನ್ನೂ ಆಗುಮಾಡುವ, ಅದನ್ನು ಕ್ರೈಮ್ ಜೊತೆ ಬೆರೆಸುವ ವಿಕ್ಷಿಪ್ತತೆ ಗಾಬರಿ ಹುಟ್ಟಿಸುತ್ತದೆ. ಜನರ ಮನಸ್ಸನ್ನು ಎಲ್ಲವೂ ಸೇರಿ ಹೇಗೆಲ್ಲಾ ರೂಪಿಸುತ್ತವೆ ಮತ್ತು ಇದರಲ್ಲಿ ದೃಶ್ಯ ಮಾಧ್ಯಮಗಳ ಸಿಂಹಪಾಲಿರುವುದು, ಮತ್ತವು ನೈತಿಕತೆಯ ಎಲ್ಲ ಎಲ್ಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುವುದನ್ನು 2014ರ ಅಮೆರಿಕನ್ ಸಿನಿಮಾ ‘ನೈಟ್ಕ್ರಾವ್ಲರ್’ ಹಿಡಿದಿಡುವ ರೀತಿ ದಂಗುಬಡಿಸುತ್ತದೆ.

ಲೂ ಬ್ಲೂಮ್ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದವನು. ತಡರಾತ್ರಿ ನಡೆಯುವ ಅಪಘಾತ, ಕೊಲೆಗಳನ್ನು ಎಲ್ಲರಿಗಿಂತ ಮೊದಲು ಚಿತ್ರಿಸಿ ಬೆಳ್ಳಂಬೆಳಗ್ಗೆ ಪ್ರಸಾರ ಮಾಡಲು ಟಿ.ವಿ. ಕಂಪನಿಗಳಿಗೆ ಮಾರಾಟ ಮಾಡುವ ದಂಧೆ ನೋಡಿದ ಮೇಲೆ ಅದೇ ಲಾಭದಾಯಕ ಅನ್ಸುತ್ತೆ. ಅದರ ನಾಡಿ ಹಿಡಿದ ಆತ, ಕ್ರೌರ್ಯ ಎದ್ದುಕಾಣುವಂತೆ ಕ್ಲೋಸ್ಅಪ್ ಶಾಟ್ಗಳನ್ನು ಚಿತ್ರೀಕರಿಸಿ ಮೇಲಕ್ಕೇರುತ್ತಾನೆ. ತನಗಿಂತ ಎರಡು ಪಟ್ಟು ವಯಸ್ಸಾದ ನೀನಾಳ ಸೆಳೆತಕ್ಕೆ ಒಳಗಾಗ್ತಾನೆ. ಅದೇ ಕಾರಣಕ್ಕೆ ಆಕೆ ನಿರಾಕರಿಸಿದರೂ ಕಾಲಕ್ಕಾಗಿ ಕಾಯ್ತಾನೆ. ಕೊನೆಗೆ ತಾನು ಕಡಿಮೆ ಸಂಬಳಕ್ಕೆ ನೇಮಿಸಿಕೊಂಡಿದ್ದ ಬಡಪಾಯಿ ಹುಡುಗನು ಸ್ವತಃ ಕೊಲೆಗಡುಕರ ಗುಂಡಿಗೆ ಬಲಿಯಾಗುವಂತೆ ಮಾಡ್ತಾನೆ. ಜೀವ ಹೋಗುವ ಮೊದಲು, ‘ನೀನೇ ಇದನ್ನು ಗೊತ್ತಿದ್ದೂ ಮಾಡಿದೆ ಯಲ್ಲವೇ?’ ಎಂದವನು ಕೇಳುತ್ತಿದ್ದರೆ, ತಣ್ಣಗೆ ಸಮಜಾಯಿಷಿ ಕೊಟ್ಟುಕೊಳ್ತಾ, ಅವನ ಕಣ್ಣಿಂದ ಜೀವ ಹೋಗೋವರೆಗೂ ಚಿತ್ರೀಕರಿಸಿ ಫೂಟೇಜನ್ನು ಟಿ.ವಿ.ಗೆ ಮಾರಿಕೊಳ್ತಾನೆ. ಆ ಫೂಟೇಜ್ ನೋಡಿ ಅಮೇಜಿಂಗ್ ಎಂದು ಹೊಗಳುವ ನೀನಾ ತನ್ನ ವಯಸ್ಸು ಮರೆತು ಅವನಿಗೆ ವಶವಾಗುವ ಸೂಚನೆ ಕೊಡ್ತಾಳೆ.

ಗಾಂಧಿ ಹೇಳುವ ಸಪ್ತ ಮಹಾಪಾತಕಗಳಲ್ಲಿ ‘ನೀತಿಯಿಲ್ಲದ ವ್ಯಾಪಾರ’ವೂ ಒಂದು. ಇವತ್ತು ನಾವು ಬಳಸುವ ಎಷ್ಟೋ ಬ್ಯೂಟಿ ಪ್ರಾಡೆಕ್ಟ್ಗಳು ತಯಾರಾಗುವ ಮೂಲ ಅಮಾನುಷವಾಗಿರುತ್ತದೆ. ಆ್ಯಂಟಿ ಏಜಿಂಗ್ನ ಭ್ರಮೆಗೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಶೆಫಾಲಿ ಜರಿವಾಲಾ ಎಂಬ ನಟಿ ಡಾಕ್ಟರ್ ಸಲಹೆ ಕೇಳ್ಕೊಂಡೇ, ಪ್ರತಿ ದಿನ ವಯೋವಿರುದ್ಧ ಇಂಜೆಕ್ಷನ್ ತಗೊಳ್ತಿದ್ಲು. ಅದೇ ಹೊತ್ತಿಗೆ ಸತ್ಯನಾರಾಯಣ ವ್ರತಕ್ಕಾಗಿ ಉಪವಾಸವನ್ನೂ ಮಾಡುತ್ತಿದ್ದಳಂತೆ. ಮುಖದ ಮೇಲಿನ ಬಂಗು ಹೋಗೋಕೆ ಮತ್ತೇನೋ ಔಷಧ ತೆಗೆದುಕೊಳ್ಳುತ್ತಿದ್ದಳಂತೆ. ಅವಳು ಉಪವಾಸದ ಸಮಯದಲ್ಲಿ ಇದನ್ನೆಲ್ಲ ತೆಗೆದುಕೊಳ್ಳಬಾರದಿತ್ತು. ಒಂದೆಡೆ ಧಾರ್ಮಿಕ ರೀತಿ ರಿವಾಜಿನ ಅಳುಕು, ಇನ್ನೊಂದೆಡೆ ಔಷಧ ತಪ್ಪಿಸಬಾರದು ಅನ್ನೋ ನಿಯತ್ತು. ಎರಡೂ ತಾಳಮೇಳವಿಲ್ಲದೆ ಹೃದಯಾಘಾತಕ್ಕೆ ಒಳಗಾಗಿ ನಲವತ್ತೆರಡಕ್ಕೆ ಅಸುನೀಗಿದಳು (ಧಾರ್ಮಿಕ ಆಚರಣೆಗಳು ಹೀಗೇ ಇರಬೇಕು ಎಂಬುದಕ್ಕೂ ಈ ದೃಶ್ಯಮಾಧ್ಯಮಗಳ ಪೌರೋಹಿತ್ಯ ಮಿತಿ ಮೀರುತ್ತಿದೆ).

ನಟಿ ಶ್ರೀದೇವಿಯೂ ವಯೋವಿರುದ್ಧದ ಚಿಕಿತ್ಸೆಯ ಕಾರಣದಿಂದಲೇ ಅಷ್ಟು ಬೇಗ ಸತ್ತಿರಬಹುದು ಎಂಬ ಮಾತಿದೆ. ಹುಡುಗರ ವಿಷಯದಲ್ಲೂ ಇದು ನಡೆಯುತ್ತಿದೆ. ಜಿಮ್ ಬಾಡಿಯ ಅನಿವಾರ್ಯತೆ ಸೃಷ್ಟಿಸಿ ಆಗಿರುವ ದುರಂತಗಳು ಒಂದೆರಡಲ್ಲ. ನಡುವಯಸ್ಸಿನವರ ಈ ಎಲ್ಲ ನಡೆಗಳು ಯೌವನದ ಮರುವ್ಯಾಖ್ಯಾನಕ್ಕೆ ಒಡ್ಡಿಕೊಂಡವರ ಮತ್ತು ನೋಡಬಯಸುವವರ ತುಡಿತದಿಂದ ಆಗಿರುತ್ತದೆ. ಈ ಮನೋವ್ಯಾಪಾರವು ಸಾಮಾಜಿಕ ವ್ಯಾಪಾರವಾಗಿ ಕರಗಿಹೋಗಿಯಾಗಿದೆ.

ಇನ್ನೊಂದು ರಗಳೆ ಇದೆ. ನಿರ್ಲಕ್ಷ್ಯಕ್ಕೆ ಒಳಗಾದ ಹಿರಿಯರ ಗೋಳಿನ ಕತೆಯನ್ನು ಮೀಟಿ ಮೀಟಿ ಹಣ ಉದುರಿಸಿಕೊಳ್ಳಲಾಗುತ್ತದೆ. ಹಿರಿಯರನ್ನು ನೋಡಿಕೊಳ್ಳುವುದು ಬದುಕಿನೊಂದು ಭಾಗ. ತಕ್ಕಡಿಯ ಸರಕಲ್ಲ. ಹಿರಿಯರನ್ನು ನೋಡಿಕೊಳ್ಳುವುದೇ ತಾವು ಅವರಿಗೆ ಕೊಡುತ್ತಿರುವ ದೊಡ್ಡ ಸವಲತ್ತು ಎಂಬ ಬೀಗುವಿಕೆಯ ಭಾವ ಮನೆ ಮಂದಿಯಲ್ಲಿ ಹೆಚ್ಚಾದಷ್ಟೂ, ವಯಸ್ಸಾದವರಿಗೆ ತಾವು ಹಂಗಿಗೆ ಬಿದ್ದ ದುಃಖ ಹೆಚ್ಚುತ್ತದೆ.

ಇವೆಲ್ಲವೂ ಸೇರಿ ನಮ್ಮನ್ನು ಇದ್ದಂಗೆ ಇರಲು ಬಿಡುತ್ತಿಲ್ಲ. ನಾವು ಆಧುನಿಕ ಯಯಾತಿಯ ರಾಗಬೇಕಿಲ್ಲ. ಅಕಾಲ ಮುಪ್ಪಿನ ಅವನಂತೆ ಸಕಾಲ ಮುಪ್ಪಿನವರು ಒದ್ದಾಡುವ ಅಗತ್ಯವಿಲ್ಲ. ಆ ಸಹಜ ಬೆಳವಣಿಗೆಯ ಜೊತೆಗೆ ಮಾತಾಡಬೇಕಾದವರು ಸ್ವತಃ ಅವರೇ ಹೊರತು ಅದರಾಚೆಯವರಲ್ಲ. ಆಚೆಯವರು ಚೂರು ಕಿವಿಯಾದರೆ ಸಾಕು. ನಿಜ ಹೇಳಬೇಕೆಂದರೆ, ಇಂದು ಉಲ್ಟಾ ಯಯಾತಿಯರು ಹೆಚ್ಚುತ್ತಿದ್ದಾರೆ. ಅವರ ಬಗೆಗೆ ನಾವು ಹೆಚ್ಚು ಯೋಚಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಹಿರಿಯರನ್ನು ಕರೆತರುವ ಯುವಕರಷ್ಟೇ ಪ್ರಮಾಣದಲ್ಲಿ, ಯುವಕರನ್ನು ಕರೆತರುವ ಹಿರಿಯರು ಹೆಚ್ಚುತ್ತಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಕ್ಷಮತೆ ಕಳೆದುಕೊಂಡ ಇವರು ಯುವ ದೇಹದಲ್ಲಿ ಮುದಿತನ ವನ್ನು ಹೊಂದಿ ಮಂಕಾಗಿದ್ದಾರೆ. ಎಲ್ಲವನ್ನೂ ವ್ಯಾಪಾರ ಮಾಡುವ ಭರದಲ್ಲಿ ಇಡೀ ಜಗತ್ತು ಮುದಿತನದೆಡೆಗೆ ಧಾವಿಸುತ್ತಿರುವುದನ್ನು ತಡೆಯುವುದು ಹೇಗೆ?

ಮತ್ತೀಗ ಪ್ರಾಜ್ಞ ಹಿರಿಯರೆಡೆಗೆ ಕಣ್ಣು ಹಾಯಿಸ ಬೇಕು. ವಯಸ್ಸಾದವರೆಲ್ಲ ಹಿರಿಯರಾಗುವುದಿಲ್ಲ. ದುಶ್ಯಾಸನ ಎಳೆದು ತಂದಾಗ, ತುಂಬಿದ ಸಭೆಯಲ್ಲಿ ಎಲ್ಲರೂ ತಲೆತಗ್ಗಿಸಿ ಕುಳಿತಿದ್ದಾಗ, ಹಿರಿಯರಿಲ್ಲದ ಸಭೆ ಸಭೆಯಲ್ಲ ನೆರವಿ ಎಂದು ಕುಮಾರವ್ಯಾಸ ಭಾರತದ ದ್ರೌಪದಿ ಕಟು ಮಾತುಗಳನ್ನಾಡುತ್ತಾಳೆ. ಯಾರು ಅನ್ಯಾಯ, ಅಪಮಾನ, ಅಸತ್ಯ, ಅಸಭ್ಯತೆಗಳನ್ನು ವಿರೋಧಿಸುವ ಹಿರಿತನ ತೋರಲಾರರೋ ಅವರು ಹಿರಿಯರಲ್ಲ, ಕೆಲಸವಿಲ್ಲದ ಕ್ಷುದ್ರ ಜಂಗುಳಿ ಎಂಬ ಅವಳ ಮಾತು ನಮಗೆ ತೋರುತ್ತಿರುವ ದಾರಿದೀಪವೂ ಆಗಿದೆ. ವಯಸ್ಸೆಂಬ ಪ್ರಕ್ರಿಯೆ ಮನೋವ್ಯಾಪಾರದ ದಾಳವಾದ ವ್ಯಾಪಾರವಾಗದೇ ಅದೊಂದು ಮಾಗುವಿಕೆ ಎಂಬ ಸಹಜತೆ ಬೆಳೆದಾಗ ಕಿರಿಬೆರಳು ನಡುಬೆರಳು ಹಿರಿಬೆರಳುಗಳು ಬೆಸೆದು ಪೂರ್ಣತೆಯೆಡೆಗೊಂದು ಪಯಣ ಶುರುವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.