ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬರಗಾಲ: ‘ಕೊರೊನಾ ವೈರಾಗ್ಯ’ ಆಗದಿರಲಿ!

ಸಂಕೀರ್ಣ ವರ್ತಮಾನದ ನಿರ್ವಹಣೆ ಆಧರಿಸಿ ನಿರ್ಧಾರವಾಗಲಿದೆ ಮನುಷ್ಯಜೀವಿಯ ಭವಿಷ್ಯ
Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಹಿಂದಿನ ವಾರ ಕೊಪ್ಪಳ ಬಳಿಯ ಗೆಳೆಯರೊಬ್ಬರ ಸಹಜಕೃಷಿ ತೋಟಕ್ಕೆ ಭೇಟಿ ನೀಡಿದ್ದೆ. ಈ ಗೆಳೆಯರೊಂದಿಗಿನ ಸಮಾಜಮುಖಿ ಮಾತುಕತೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿದ್ದು ಜಾಗತಿಕ ತಾಪಮಾನದ ಏರಿಕೆ. ಅವರು, ‘ಹವಾಮಾನ ಬದಲಾವಣೆ ಬಗ್ಗೆ ಬರೀ ಮಾತಾಡುವುದೆಲ್ಲ ವೇಸ್ಟ್. ಅದು ನಮ್ಮ ಬುಡಕ್ಕೇ ಬಂದಿದೆ. ಅದರಲ್ಲೂ ರೈತ ಸಮುದಾಯ ಈ ಬಿಕ್ಕಟ್ಟಿನ ಬಹುದೊಡ್ಡ ಬಲಿಪಶು’ ಎಂದು ವಿವರಿಸುತ್ತಾ ತಮ್ಮ ತೋಟದಲ್ಲಿನ ಬೆಳವಣಿಗೆಗಳನ್ನು ತೋರಿಸಿದರು. ಮಾವಿನ ಸೀಸನ್ ಮುಗಿಯುವ ಹೊತ್ತಿಗೆ ಕೊನೆಯ ಫಸಲಾಗಿ ದೊರೆಯಬೇಕಿದ್ದ ಮಲ್ಲಿಕಾ ಮಾವು ಏಪ್ರಿಲ್‌ನಲ್ಲೇ ತೊನೆದಾಡತೊಡಗಿದೆ. ನವೆಂಬರ್-ಡಿಸೆಂಬರ್ ಸಮಯದಲ್ಲಿ ಹೂವು ಕಾಣಿಸಿ ಇಷ್ಟೊತ್ತಿಗೆ ಕಾಯಿ ಕಚ್ಚಬೇಕಾದ ಆಪೂಸು ತಳಿಯ ಗಿಡದಲ್ಲಿ ಇದೀಗ ಏಳನೇ ಬಾರಿ ಪುನಃ ಹೂವು ಅರಳುವ, ಎಲೆ ಚಿಗುರುವ ವೈಚಿತ್ರ್ಯ ಘಟಿಸುತ್ತಿದೆ.

ಮಾನವನಿರ್ಮಿತ ಪ್ರಕೃತಿಯ ತಲ್ಲಣ ಮತ್ತು ಹವಾಮಾನ ಬದಲಾವಣೆಗಳು ಮನುಷ್ಯನ, ವಿಶೇಷವಾಗಿ ರೈತಾಪಿವರ್ಗದ ಬದುಕಿನ ಜೊತೆಗೆ ಗಿಡಮರಗಳಲ್ಲೂ ಗೊಂದಲ ಮೂಡಿಸಿವೆ. ಪರಿಸರದೊಂದಿಗಿನ ಸಾವಿರಾರು ವರ್ಷಗಳ ಒಡನಾಟ, ಅನುಭವ, ಕಲಿಕೆಯ ಮೂಲಕ ಸಂಪಾದಿಸಿದ ಮನುಷ್ಯನ ಸಹಯಾನದ ಜ್ಞಾನ ಕೆಲವೇ ವರ್ಷಗಳ ಪುಟ್ಟ ಅವಧಿಯಲ್ಲಿ ನುಚ್ಚುನೂರಾದ ಸನ್ನಿವೇಶವಿದು. ‘ಜಾಗತಿಕ ತಾಪಮಾನ ಏರಿಕೆ ಆಗುತ್ತದೆ, ಮಂಜುಗಡ್ಡೆಗಳು ಕರಗುತ್ತವೆ, ಸಮುದ್ರ ಮಟ್ಟ ಹೆಚ್ಚಾಗುತ್ತದೆ...’ ಎಂದೆಲ್ಲಾ ಪುಸ್ತಕ, ಭಾಷಣಗಳಿಂದ ತಿಳಿಯುವ ಕಾಲ ಮುಗಿದುಹೋಯಿತು. ಇದೀಗ ಪರಿಸರ ವೈಪರೀತ್ಯದ ‘ಬಿಸಿ’ ನಮ್ಮ ನೆತ್ತಿಯನ್ನೇ ಹತ್ತಿ ಸುಡತೊಡಗಿದೆ!

ಮಳೆಗಾಲವನ್ನು ನೆಚ್ಚಿಕೊಂಡ ಬಯಲುಸೀಮೆಯ ಬಹುಪಾಲು ಕೃಷಿಕರು ಈ ಬಾರಿ ಮುಂಗಾರು-ಹಿಂಗಾರು ಒಟ್ಟಿಗೇ ಕೈಕೊಟ್ಟ ಪರಿಣಾಮವಾಗಿ, ಎರಡೆರಡು ಸಲ ಬಿತ್ತಿದ ಹೊಲವನ್ನು ಹರಗುವ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ನದಿಪಾತ್ರಗಳು ಆಟದ ಮೈದಾನದಂತೆ ಬಟಾಬಯಲು. ಕೊಳವೆಬಾವಿ ನಂಬಿ ತೋಟ ಕಟ್ಟುವ, ಅಡಿಕೆ ಬೆಳೆಯುವ ಸಾಹಸ ಮಾಡಿದ ರೈತರು ಪಾತಾಳಕ್ಕೆ ಕುಸಿಯುವಂತಾಗಿದೆ. ಮಲೆನಾಡಿನ ನೀರಿನ ಮೂಲಗಳೂ ಬತ್ತಿಹೋಗಿವೆ. ಕುಡಿಯುವ ನೀರಿಗೇ ಹಾಹಾಕಾರ ಇರುವಾಗ ಕೃಷಿಗೆ ನೀರು ಒದಗಿಸುವುದು ದೂರವೇ ಉಳಿಯಿತು. ಮೂಕಪ್ರಾಣಿಗಳ ದಾಹ, ಗೋಳು ಹೇಳತೀರದು.

ಸಾಮಾನ್ಯವಾಗಿ ಬರ ಮತ್ತು ಪ್ರವಾಹದ ಪರಿಣಾಮ ಅನುಭವಿಸುವವರು ಗ್ರಾಮೀಣ ಪ್ರದೇಶದ ಜನ ಎಂದೇ ನಂಬಿ ಸದಾ ಸುರಕ್ಷಿತ ಭಾವದಲ್ಲಿದ್ದ ನಗರ-ಪಟ್ಟಣ ಭಾಗದ ಜನರಿಗೂ ಈ ವರ್ಷ ಜಲಕ್ಷಾಮದ ಬವಣೆ ತಟ್ಟಿದೆ. ರಾಜ್ಯದ ಬಹುಪಾಲು ಭಾಗಗಳಲ್ಲಿ ತಾಪಮಾನ 40 ಡಿಗ್ರಿ ದಾಟಿರುವ ಪರಿಣಾಮವಾಗಿ, ಶಾಖಾಘಾತಕ್ಕೆ ಈಡಾದವರ ಸಂಖ್ಯೆ ಈಗಾಗಲೇ ಆರುನೂರು ಮೀರಿದೆ.

ಸ್ವಾತಂತ್ರ್ಯೋತ್ತರದ ಎಪ್ಪತ್ತೇಳು ವರ್ಷಗಳ ನಂತರವೂ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಪಡೆಯದ ಪಟ್ಟಣ, ನಗರಗಳ ದೈನೇಸಿ ಸ್ಥಿತಿ ಒತ್ತಟ್ಟಿಗಿರಲಿ, ಬೆಂಗಳೂರಿನಂತಹ ರಾಜಧಾನಿ ನಗರ ಕೂಡ ನೀರಿನ ಅಭಾವದಿಂದ ನರಳುವಂತಾಗಿದೆ. ನೀರಿನ ಬಳಕೆಯ ಬಗೆಗೆ ಜಲಮಂಡಳಿ ನಿರ್ಬಂಧ, ದಂಡ ಪ್ರಕಟಿಸಿದೆ. ಆದಾಗ್ಯೂ ನಾಗರಿಕ ಪ್ರಜ್ಞೆಯ ಕೊರತೆಯಿಂದ ಎಲ್ಲೆಡೆ ನಿಯಮಗಳ ಉಲ್ಲಂಘನೆ ಕಾಣಬಹುದು.

ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮ ಮತ್ತು ಪರಿಹಾರ ಈವರೆಗೆ ಯಾರಿಗೂ ತಮಗೆ ಸಂಬಂಧಿಸಿದ ವಿದ್ಯಮಾನ ಎಂದು ಅನ್ನಿಸದೇ ಇರುವುದು ಆತಂಕಕಾರಿ ಸಂಗತಿ. ಈ ಸಮಸ್ಯೆಯ ಸೃಷ್ಟಿಗೆ ಸಾಮಾನ್ಯ ವ್ಯಕ್ತಿಯಿಂದ ವಿಶ್ವ ಸಮುದಾಯದ ತನಕ ಎಲ್ಲರೂ ತಮ್ಮ ಶಕ್ತ್ಯಾನುಸಾರ ‘ಕೊಡುಗೆ’ ನೀಡಿರುವುದು, ನೀಡುತ್ತಲೇ ಇರುವುದು ಸ್ಫಟಿಕ ಸ್ಪಷ್ಟ. ಅಂತಿಮವಾಗಿ ಇವೆಲ್ಲಾ ಪರಿಸರ ವಿರೋಧಿ ಚಟುವಟಿಕೆಗಳ ಕಹಿ ಉಣ್ಣಬೇಕಾದವರು ತಾವೇ ಎಂಬ ಕಟುಸತ್ಯವನ್ನು ಮುದ್ದಾಂ ಮರೆಮಾಚುವುದರಲ್ಲಿ ಅದೇನು ಜಾಣತನವೋ!

ಹವಾಮಾನ ವೈಪರೀತ್ಯದ ಕಾರಣಗಳು, ಪರಿಣಾಮಗಳು ಹಾಗೂ ನಿಯಂತ್ರಣ ಕ್ರಮಗಳನ್ನು ಕುರಿತ ಜಾಗತಿಕ ಮಟ್ಟದ ಸಂಶೋಧನೆಗಳು ಬಹಳಷ್ಟು ಪ್ರಗತಿಯನ್ನು ಸಾಧಿಸಿವೆ. ಹಾಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದಾಗ ರಾಜ್ಯಕ್ಕೆ ಬರಗಾಲ ಕಾಡುತ್ತದೆ, ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗ ಪ್ರವಾಹ ಎದುರಾಗುತ್ತದೆ ಎಂಬ ಮೂಢ ವ್ಯಾಖ್ಯಾನಕ್ಕೆ ಇಲ್ಲಿ ಆಸ್ಪದವಿಲ್ಲ. ಎಲ್ಲವೂ ಕಾರ್ಯಕಾರಣ ಸೂತ್ರಕ್ಕೆ ಬದ್ಧ.

ಆಧುನಿಕ ಮಾನವನ ಸ್ವಾರ್ಥಕೇಂದ್ರಿತ ಜೀವನಶೈಲಿ, ನಿಲುವು, ನೀತಿ ನಿರ್ಧಾರಗಳಲ್ಲಿ ಪರಿಸರ ಜಾಗೃತಿ ವ್ಯಕ್ತಗೊಳ್ಳುವ ಸಂದರ್ಭ ತೀರಾ ಅಪರೂಪ. ಆದರೆ ಜಾಗತಿಕ ತಾಪಮಾನ ಏರಿಕೆಯ ವಿರುದ್ಧದ ಹೋರಾಟದಲ್ಲಿ ಸಾಮಾನ್ಯ ವ್ಯಕ್ತಿಯ ಜವಾಬ್ದಾರಿ ಬಹುಮುಖಿಯಾದುದು. ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವುದು ನಾಗರಿಕರ ಪ್ರಾಥಮಿಕ ಜವಾಬ್ದಾರಿಗಳಲ್ಲಿ ಒಂದು. ನೀರಿನ ಸಂರಕ್ಷಣೆ, ಮರುಬಳಕೆ, ತ್ಯಾಜ್ಯದ ಉತ್ಪತ್ತಿಯಲ್ಲಿ ಕಡಿತದ ಮೂಲಕ ಪರಿಸರ ರಕ್ಷಣೆಗೆ ಜನರು ಕೊಡುಗೆ ನೀಡಬಹುದು. ಹೀಗೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪರಿಸರಸ್ನೇಹಿ, ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜನರಿಗೆ ಬೇಕಾದಷ್ಟು ಅವಕಾಶಗಳಿರುತ್ತವೆ.

ಇದೀಗ ಬಿರುಬಿಸಿಲಿನಲ್ಲಿ ನೀರಿನ ಅಭಾವದಿಂದ ಚಡಪಡಿಸುತ್ತಿರುವ ನಾಗರಿಕರು ಜಾಗತಿಕ ತಾಪಮಾನ ಏರಿಕೆಯ ತಕ್ಷಣದ ಪರಿಣಾಮಗಳು ಹಾಗೂ ಭವಿಷ್ಯದ ಅಪಾಯಗಳ ಬಗ್ಗೆ ಒಂದಿಷ್ಟು ಅರಿವು ಮೂಡಿಸಿಕೊಂಡಂತೆ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಹವಾಮಾನದಲ್ಲಿ ಅಲ್ಲ, ತಮ್ಮಲ್ಲಿ ಬದಲಾವಣೆ ಆಗಬೇಕಿದೆ ಎಂದು ಕೆಲವರಿಗಾದರೂ ಅನ್ನಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಈ ಪಾಠ ಕೂಡ ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕಾಣಿಸಿಕೊಂಡು ಮಾಯವಾದ ‘ಕೊರೊನಾ ವೈರಾಗ್ಯ’ ಆಗಬಾರದಷ್ಟೇ!

ಇತ್ತೀಚೆಗಿನ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟು, ‘ಹವಾಮಾನ ಬದಲಾವಣೆಯಿಂದ ಸಾಂವಿಧಾನಿಕ ಹಕ್ಕಿಗೆ ಧಕ್ಕೆ’ ಆಗುತ್ತದೆಂದು ಸ್ಪಷ್ಟವಾಗಿ ಗುರುತಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ, ಮನೋಜ್‌ ಮಿಶ್ರಾ ಅವರ ಪೀಠವು, ‘ಹವಾಮಾನ ಬದಲಾವಣೆಯು ಸಂವಿಧಾನ ನೀಡಿರುವ ಸಮಾನತೆಯ ಹಕ್ಕಿನ ಮೇಲೆ ಪರಿಣಾಮ ಉಂಟುಮಾಡಬಹುದು. ಸ್ವಚ್ಛವಾದ ಪರಿಸರ ಇಲ್ಲದಿದ್ದರೆ ಜೀವಿಸುವ ಸ್ವಾತಂತ್ರ್ಯವು ಪೂರ್ಣಪ್ರಮಾಣದಲ್ಲಿ ಸಾಕಾರಗೊಳ್ಳುವುದಿಲ್ಲ. ವಾಯುಮಾಲಿನ್ಯ, ತಾಪಮಾನ ಹೆಚ್ಚಳ, ಬರ, ಆಹಾರ ಪೂರೈಕೆಯಲ್ಲಿ ಕೊರತೆ, ಪ್ರವಾಹದಂತಹ ಪರಿಸ್ಥಿತಿಯಿಂದಾಗಿ ಆರೋಗ್ಯದ ಹಕ್ಕಿನ ಮೇಲೆ ಪರಿಣಾಮ ಉಂಟಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಪ್ರತಿ ವ್ಯಕ್ತಿಯೂ ಸ್ವಚ್ಛವಾದ, ಸುರಕ್ಷಿತವಾದ ಹಾಗೂ ಆರೋಗ್ಯಕರ ಜೀವನಕ್ಕೆ ಪೂರಕವಾದ ಪರಿಸರದಲ್ಲಿ ಬದುಕು ಸಾಗಿಸುವ ಹಕ್ಕು ಹೊಂದಿದ್ದಾನೆ ಎಂಬ ತತ್ವವನ್ನು ಆರೋಗ್ಯಕರ ಪರಿಸರದ ಹಕ್ಕು ಒಳಗೊಳ್ಳುತ್ತದೆ. ಆರೋಗ್ಯಕರ ಪರಿಸರದ ಹಕ್ಕನ್ನು, ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಂದ ಮುಕ್ತವಾಗಿರುವ ಹಕ್ಕನ್ನು ಗುರುತಿಸುವ ಮೂಲಕ ರಾಜ್ಯ ಸರ್ಕಾರಗಳು ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗುತ್ತದೆ. ಆ ಮೂಲಕ ಅವು ಹವಾಮಾನ ಬದಲಾವಣೆಯ ಮೂಲ ಕಾರಣವನ್ನು ಸರಿಪಡಿಸಬೇಕಾಗುತ್ತದೆ’ ಎಂದು ಪೀಠ ಹೇಳಿದೆ.

‘ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ತನ್ನ ಮೇಲಿರುವ ಹೊಣೆಗಳನ್ನು ಭಾರತ ನಿರ್ವಹಿಸಬೇಕಾಗುತ್ತದೆ. ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವ, ಹವಾಮಾನ ಬಲಾವಣೆಗಳಿಗೆ ತಕ್ಕಂತೆ ಬದಲಾವಣೆಗಳನ್ನು ತಂದುಕೊಳ್ಳುವ ಹಾಗೂ ಆರೋಗ್ಯಕರ ಮತ್ತು ಸುಸ್ಥಿರ ಪರಿಸರದಲ್ಲಿ ಬದುಕುವ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ’ ಎಂದು ಕೂಡ ಪೀಠ ವಿವರಿಸಿದೆ.

ಇಂಥ ಸಂಕೀರ್ಣ ವರ್ತಮಾನವನ್ನು ಜನಸಾಮಾನ್ಯರು, ಸರ್ಕಾರ, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅಂತರರಾಷ್ಟ್ರೀಯ ಸಮುದಾಯ ಹಾಗೂ ಪರಿಸರಪ್ರೇಮಿ ಬಳಗಗಳು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಆಧರಿಸಿ ಮನುಷ್ಯಜೀವಿಯ ಭವಿಷ್ಯ ನಿರ್ಧರಿಸಲ್ಪಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT