ಗುಣಾತ್ಮಕ ಶಿಕ್ಷಣ ಎಂಬುದು ಹಳ್ಳಿಯಿಂದ ದಿಲ್ಲಿಯವರೆಗೆ ನಡೆಯುವ ಒಂದು ಸಾಮಾನ್ಯ ಚರ್ಚೆಯ ವಿಷಯ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಬೇಕು ಎಂಬುದು ನಿರ್ವಿವಾದದ ಸಂಗತಿ. ಹೀಗಾಗಿ, ಶಿಕ್ಷಣದ ಗುಣಮಟ್ಟ ಸುಧಾರಿಸುವುದು ನಮ್ಮ ದೇಶ ಮತ್ತು ಎಲ್ಲಾ ರಾಜ್ಯಗಳ ಆದ್ಯತೆಯ ವಿಷಯವಾಗಿದೆ. ಕಾಲಕಾಲಕ್ಕೆ ರೂಪು
ತಳೆಯುವ ರಾಷ್ಟ್ರೀಯ ಶಿಕ್ಷಣ ನೀತಿಗಳು ಇದನ್ನು ಪ್ರಸ್ತಾಪಿಸುತ್ತಲೇ ಬಂದಿವೆ.

ಗುಣಮಟ್ಟ ಸಾಧಿಸುವ ದಿಸೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ, ಸಮಾರಂಭ, ಸಮಾವೇಶ, ವಿಚಾರಸಂಕಿರಣ, ಕಮ್ಮಟದಂತಹವನ್ನು ಸರ್ಕಾರ ಮತ್ತು ಶಿಕ್ಷಣಾಸಕ್ತ ಸಂಘ-ಸಂಸ್ಥೆಗಳು ಆಯೋಜಿಸುತ್ತಲೇ ಬಂದಿವೆ. ಶಿಕ್ಷಕರಿಗೆ ಸೇವಾಪೂರ್ವ ಹಾಗೂ ಸೇವಾ ಅವಧಿಯ ತರಬೇತಿಗಳು ನಿರಂತರವಾಗಿ ನಡೆಯುತ್ತಿವೆ. ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದ ವಿಷಯದಲ್ಲಿ ಅಸಂಖ್ಯಾತ ಸಂಶೋಧನೆಗಳು ನಡೆದು, ಪುಸ್ತಕಗಳು ಪ್ರಕಟವಾಗಿವೆ. ಇಷ್ಟೆಲ್ಲ ನಿರಂತರ ಪ್ರಯತ್ನಗಳ ನಡುವೆಯೂ ನಿರೀಕ್ಷಿತ ಸುಧಾರಣೆ ಸಾಧ್ಯವಾಗಿಲ್ಲವೆಂಬ ಆತಂಕವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಶಿಕ್ಷಣದ ಗುಣಮಟ್ಟ ಸುಧಾರಿಸಲು ಏನಾಗಬೇಕು ಎಂಬುದು ಸಾರ್ವತ್ರಿಕವಾದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಈ ದಿಸೆಯಲ್ಲಿ ಅಳವಡಿಸಿಕೊಳ್ಳಬಹುದಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವ ಮುನ್ನ, ಕೆಲವು ಸರಳ ವಿಚಾರಗಳನ್ನು ಅರಿಯಬೇಕಿದೆ. ಗುಣಮಟ್ಟ ಸುಧಾರಣೆಯ ಬಗ್ಗೆ ಚರ್ಚಿಸುವಾಗ, ಅದಕ್ಕೆ ಅಗತ್ಯವಾಗಿ ಇರಲೇಬೇಕಾದ ಕನಿಷ್ಠ ಅಗತ್ಯಗಳ ಲಭ್ಯತೆಯನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಉದಾಹರಣೆಗೆ, ನಮ್ಮ ರಾಜ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಒಂದರಿಂದ ಐದನೇ ತರಗತಿಯವರೆಗೆ ಕಲಿಯುತ್ತಾರೆ. ಪ್ರತಿ ತರಗತಿಯಲ್ಲಿ ನಾಲ್ಕು ವಿಷಯಗಳನ್ನು, ಅಂದರೆ, ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನವನ್ನು ಕಲಿಯಬೇಕು. ತರಗತಿಗೊಬ್ಬ ಶಿಕ್ಷಕರನ್ನು ನಿರೀಕ್ಷಿಸುವುದು ಅಸಾಧ್ಯ. ಆದರೆ, ಕಲಿಯಬೇಕಾದ ವಿಷಯವಾರು ಆಧಾರದಲ್ಲಿ ಕನಿಷ್ಠ ನಾಲ್ವರು ಶಿಕ್ಷಕರನ್ನು ಒದಗಿಸದೆ ಗುಣಾತ್ಮಕ ಶಿಕ್ಷಣದ ಕನಸು ನನಸಾಗಲು ಸಾಧ್ಯವಿಲ್ಲ.

ಇದೇ ರೀತಿ, ಹಿರಿಯ ಪ್ರಾಥಮಿಕ ಶಾಲೆಯು ಒಂದರಿಂದ ಐದನೇ ತರಗತಿಯ ಜೊತೆಗೆ ಆರರಿಂದ ಎಂಟನೇ ತರಗತಿಯವರೆಗೆ ತರಗತಿಗಳನ್ನು ಹೊಂದಿರುತ್ತದೆ. ಆರರಿಂದ ಎಂಟನೇ ತರಗತಿಯವರೆಗೆ ಮಕ್ಕಳು ಆರು ವಿಷಯಗಳನ್ನು, ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ಅಧ್ಯಯನವನ್ನು ಕಲಿಯಬೇಕು. ಜೊತೆಗೆ ದೈಹಿಕ ಶಿಕ್ಷಣವೂ ಸೇರುತ್ತದೆ. ಒಂದರಿಂದ ಏಳು ಅಥವಾ ಎಂಟನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ನಾವು ವಿಷಯವಾರು ಲೆಕ್ಕದಲ್ಲಿ ಶಿಕ್ಷಕರ ಅಗತ್ಯವನ್ನು ನೋಡಿದಾಗ, ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ ಕನಿಷ್ಠ ಆರು ಜನ ಶಿಕ್ಷಕರ ಅಗತ್ಯವಿದೆ. ಆದರೆ, ವಾಸ್ತವದಲ್ಲಿ ಪರಿಸ್ಥಿತಿ ಬೇರೆ ಇದೆ.

2023-24ರ ಯುಡೈಸ್ ವರದಿಯ ಅನ್ವಯ, ದೇಶದಲ್ಲಿ 1,10,971 ಏಕೋಪಾಧ್ಯಾಯ ಶಾಲೆಗಳಿವೆ. ಕರ್ನಾಟಕದಲ್ಲಿ ಈ ಸಂಖ್ಯೆ 7,821. ದಕ್ಷಿಣದಲ್ಲಿ ಆಂಧ್ರಪ್ರದೇಶ ಅತಿ ಹೆಚ್ಚು (12,611) ಏಕೋಪಾಧ್ಯಾಯ ಶಾಲೆಗಳನ್ನು ಹೊಂದಿರುವ ರಾಜ್ಯವಾದರೆ, ಉತ್ತರದ ಮಧ್ಯಪ್ರದೇಶದಲ್ಲಿ ಇಂತಹ ಹೆಚ್ಚು ಶಾಲೆಗಳಿವೆ (13,198). ಇಷ್ಟು ದೊಡ್ಡ ಸಂಖ್ಯೆಯ ಏಕೋಪಾಧ್ಯಾಯ ಶಾಲೆಗಳನ್ನು ಇಟ್ಟುಕೊಂಡು ಗುಣಾತ್ಮಕ ಶಿಕ್ಷಣವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂಬುದನ್ನು ನಮ್ಮ ನೀತಿ ನಿರೂಪಕರು ಅರ್ಥಮಾಡಿಕೊಳ್ಳಬೇಕಿದೆ.

ಇನ್ನು ಲಭ್ಯವಿರುವ ಶಿಕ್ಷಕರ ಪೈಕಿ, ಎಷ್ಟು ಮಂದಿ ಸರಿಯಾದ ಸಮಯಕ್ಕೆ ಶಾಲೆ ತಲುಪುತ್ತಾರೆ, ಶಾಲೆ ತಲುಪಿದವರಲ್ಲಿ ಎಷ್ಟು ಶಿಕ್ಷಕರು ತರಗತಿ ಕೋಣೆಗಳನ್ನು ತಲುಪುತ್ತಾರೆ, ತರಗತಿ ಕೋಣೆ ತಲುಪಿದ ಎಷ್ಟು ಶಿಕ್ಷಕರು ಮಾನಸಿಕವಾಗಿ ಕಲಿಸಲು ಸಿದ್ಧತೆ ಮಾಡಿಕೊಂಡಿರುತ್ತಾರೆ, ಅವರಲ್ಲಿ ಎಷ್ಟು ಜನ ಅರ್ಥಪೂರ್ಣವಾಗಿ ಕಲಿಸುತ್ತಾರೆ, ಕಲಿಸಿದ್ದನ್ನು ಮಕ್ಕಳು ಕಲಿತ ಬಗ್ಗೆ ದಿನನಿತ್ಯ ಹೇಗೆ ಖಚಿತಪಡಿಸಿಕೊಳ್ಳುತ್ತಾರೆ ಎಂಬಂತಹ ವಿಷಯಗಳು ಗುಣಮಟ್ಟವನ್ನು ಸಾಧಿಸುವಲ್ಲಿ ನಿರ್ಣಾಯಕ ಅಂಶಗಳಾಗುತ್ತವೆ. ಆದರೆ, ವಾಸ್ತವದಲ್ಲಿ ನಮ್ಮ ಶಿಕ್ಷಕರು ಕಲಿಸುವುದಕ್ಕಿಂತ ಕಲಿಕೇತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದೇ ಹೆಚ್ಚು. ಸಾಮಾನ್ಯವಾಗಿ ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಇರುವ ಒಂದು ಮಾತೆಂದರೆ, ಅವರು ಕಲಿಸುವುದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಮಾಡುತ್ತಾರೆ ಎಂಬುದು. ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆ ಹಾಗೂ ಕಲಿಕೆಗೆ ಪೂರಕ
ವಾದ ಕೆಲಸಗಳನ್ನು ಹೊರತುಪಡಿಸಿ ಇತರ ಕೆಲಸಗಳಿಂದ ಮುಕ್ತಗೊಳಿಸದಿದ್ದರೆ ಗುಣಾತ್ಮಕ ಶಿಕ್ಷಣ ಎಂದಿಗೂ ಸಾಧ್ಯವಿಲ್ಲವೆಂಬ ಅಭಿಪ್ರಾಯ ಶಿಕ್ಷಕರ ವಲಯದಲ್ಲಿ ದಟ್ಟವಾಗಿದೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಡಳಿತಾತ್ಮಕ ಹಾಗೂ ಕಲಿಕೇತರ ಕೆಲಸಗಳನ್ನು ನಿರ್ವಹಿಸಲು ಯಾವುದೇ ಸಿಬ್ಬಂದಿ ಇರುವುದಿಲ್ಲ ಎಂಬುದು ಗಮನಾರ್ಹ ಸಂಗತಿ.

ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸುವುದರ ಭಾಗವಾಗಿ, ಕಲಿಕೆಗೆ ಪೂರಕವಾಗುವ ಮತ್ತು ಮಕ್ಕಳು ನೆಮ್ಮದಿಯಿಂದ ಕಲಿಯಲು ಅಗತ್ಯವಾದ ಕನಿಷ್ಠ ಮೂಲ ಸೌಕರ್ಯಗಳು ಎಲ್ಲಾ ಶಾಲೆಗಳಲ್ಲಿ ಇರಲೇಬೇಕಾಗುತ್ತದೆ. ಈ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆಯು ಒಂದು ಶಾಲೆಯಲ್ಲಿ ಇರಲೇಬೇಕಾದ ಕನಿಷ್ಠ ಒಂಬತ್ತು ಸೌಲಭ್ಯಗಳನ್ನು ನಿಗದಿಪಡಿಸಿ, 2013ರ ಒಳಗಾಗಿ ಎಲ್ಲ ಶಾಲೆಗಳೂ ಕಡ್ಡಾಯವಾಗಿ ಇವುಗಳನ್ನು ಹೊಂದಿರಲೇಬೇಕೆಂಬುದನ್ನು ಕಾನೂನುಬದ್ಧಗೊಳಿಸಿತ್ತು. ಅದರಂತೆ, ಶಿಕ್ಷಕರ ಲಭ್ಯತೆ, ಪ್ರತಿ ಶಿಕ್ಷಕರಿಗೆ ತರಗತಿ ಕೊಠಡಿ, ಮುಖ್ಯೋಪಾಧ್ಯಾಯರ ಕಚೇರಿ, ಮಧ್ಯಾಹ್ನದ ಬಿಸಿಯೂಟಕ್ಕೆ ಸುರಕ್ಷಿತ ಅಡುಗೆ ಮನೆ, ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಸುರಕ್ಷಿತ ಕುಡಿಯುವ ನೀರು, ಆಟದ ಮೈದಾನ, ಕಾಂಪೌಂಡ್ ಹಾಗೂ ವಿಶೇಷ ಅಗತ್ಯವಿರುವ ಮಕ್ಕಳಿಗೆ ತಡೆರಹಿತ ಪ್ರವೇಶದ ಅವಕಾಶ ಕಲ್ಪಿಸಲೇಬೇಕು.

ಇದಲ್ಲದೆ, ಶೈಕ್ಷಣಿಕ ಪ್ರಗತಿ ಸಾಧಿಸಲು ಅನುವಾಗುವಂತೆ ಗುಣಾತ್ಮಕ ಕಲಿಕಾ ಮಾನದಂಡಗಳನ್ನು ಸಹ ಗೊತ್ತುಪಡಿಸಲಾಗಿದೆ. ಅದರಂತೆ, ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಐದನೇ ತರಗತಿಯವರೆಗೆ 200 ಕಾರ್ಯನಿರ್ವಹಣಾ ದಿನಗಳು ಮತ್ತು 800 ಕಲಿಕಾ ಗಂಟೆಗಳು, ಆರರಿಂದ ಎಂಟನೇ ತರಗತಿಯವರೆಗೆ 220 ಕಾರ್ಯ ನಿರ್ವಹಣಾ ದಿನಗಳು ಮತ್ತು ಒಂದು ಸಾವಿರ ಬೋಧನಾ ಗಂಟೆಗಳು, ಶಿಕ್ಷಕರಿಗೆ ಪ್ರತಿವಾರ ಕನಿಷ್ಠ 45 ಬೋಧನಾ ಗಂಟೆಗಳು, ಪ್ರತಿ ತರಗತಿಗೆ ಅಗತ್ಯವಿರುವ ಬೋಧನಾ-ಕಲಿಕಾ ಉಪಕರಣ; ಪ್ರತಿ ಶಾಲೆಯಲ್ಲಿ ವೃತ್ತ ಪತ್ರಿಕೆ, ನಿಯತಕಾಲಿಕಗಳು, ಕಥೆ ಪುಸ್ತಕಗಳನ್ನು ಒಳಗೊಂಡಂತೆ ಎಲ್ಲ ವಿಷಯಗಳ ಕುರಿತಾದ ಪುಸ್ತಕಗಳಿರುವ ಗ್ರಂಥಾಲಯ ಮತ್ತು ಪ್ರತಿ ತರಗತಿಗೆ ಅಗತ್ಯವಿರುವಷ್ಟು ಆಟದ ಸಾಮಗ್ರಿ ಹಾಗೂ ಕ್ರೀಡೋಪಕರಣಗಳು ಇರಬೇಕೆಂದು ಗೊತ್ತುಪಡಿಸಲಾಗಿದೆ.

ಮೇಲಿನ ಭೌತಿಕ ಹಾಗೂ ಶೈಕ್ಷಣಿಕ ಮೂಲ ಸೌಕರ್ಯಗಳು ಗುಣಾತ್ಮಕ ಶಿಕ್ಷಣದ ಗುರಿಯನ್ನು ಸಾಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಕನಿಷ್ಠ ಸೌಲಭ್ಯಗಳು ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗುತ್ತವೆ. ಆದರೆ, ಕರ್ನಾಟಕದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯು ಕಾನೂನು ಬದ್ಧಗೊಳಿಸಿರುವ ಈ ಎಲ್ಲಾ ಸೌಲಭ್ಯಗಳ ಅನುಪಾಲನೆ ತೀರಾ ಕೆಳಗಿದೆ. 100 ಸರ್ಕಾರಿ ಶಾಲೆಗಳ ಪೈಕಿ 26 ಕಿರಿಯ ಪ್ರಾಥಮಿಕ ಮತ್ತು 30 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಈ ಎಲ್ಲಾ ಸೌಲಭ್ಯಗಳಿವೆಯೆಂದು ಅಂಕಿಅಂಶ ಹೇಳುತ್ತದೆ. ಉಳಿದ ಶಾಲೆಗಳಲ್ಲಿ ಈ ಸೌಲಭ್ಯಗಳ ಲಭ್ಯತೆ ಶಾಲೆಯಿಂದ ಶಾಲೆಗೆ ಬದಲಾಗುತ್ತದೆ. ಕೆಲವು ಶಾಲೆಗಳಲ್ಲಂತೂ ತೀರಾ ಕಳಪೆಯಾಗಿದೆ. ಶಾಲೆಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಗುಣಮಟ್ಟವನ್ನು ಸುಧಾರಿಸು
ವುದಾದರೂ ಹೇಗೆ ಎಂಬ ಮೂಲಭೂತ ಪ್ರಶ್ನೆ ಎದುರಾಗುತ್ತದೆ.

ಕನಿಷ್ಠ ಭೌತಿಕ ಹಾಗೂ ಶೈಕ್ಷಣಿಕ ಮೂಲ ಸೌಕರ್ಯಗಳ ಕೊರತೆ, ದಿನದಿಂದ ದಿನಕ್ಕೆ ಶಿಕ್ಷಕರಿಗೆ ಹೆಚ್ಚುತ್ತಿರುವ ಕಲಿಕೇತರ ಕಾರ್ಯಭಾರ, ಆಡಳಿತಾತ್ಮಕ ಕಾರ್ಯಗಳಿಗೆ ಅಗತ್ಯ ಸಿಬ್ಬಂದಿ ಕೊರತೆ, ಎರಡು-ಮೂರು ತರಗತಿಗಳನ್ನು ಜೊತೆಗೂಡಿಸಿ ಬಹುವರ್ಗ ಬೋಧನೆ, ಒಂದೇ ಶಾಲೆಯಲ್ಲಿ ಬುನಾದಿ ಶಿಕ್ಷಕರೆನ್ನುವ ಬದಲು ಪ್ರಾಥಮಿಕ ಶಿಕ್ಷಕ (ಪಿಎಸ್ಟಿ) ಹಾಗೂ ಪದವೀಧರರೆಂಬ (ಜಿಪಿಟಿ) ಎರಡು ವೃಂದಗಳ ವಿಭಜನೆ, ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಸಕಾರಾತ್ಮಕ ವೃತ್ತಿಪರ ಬೆಳವಣಿಗೆಗೆ ಪ್ರೋತ್ಸಾಹಕ ಯೋಜನೆಗಳ ಕೊರತೆ ಇದೆ. ಅಲ್ಲದೆ, ಶಿಕ್ಷಕರಲ್ಲಿ ಉತ್ಸಾಹ ಹೆಚ್ಚಿಸಲು, ಸೃಜನಶೀಲತೆಯನ್ನು ಉದ್ದೀಪಿಸಲು ಪೂರಕವಾದ ಮೇಲುಸ್ತುವಾರಿ ವ್ಯವಸ್ಥೆಯ ತೀವ್ರ ಕೊರತೆಯು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸವಾಲಾಗಿ ಪರಿಣಮಿಸಿದೆ. ಇಂತಹ ಸವಾಲುಗಳನ್ನು ಎದುರಿಸಲು ಸಮರ್ಥ ಯೋಜನೆ ರೂಪಿಸ
ದಿದ್ದರೆ ಗುಣಮಟ್ಟದ ಶಿಕ್ಷಣ ಸದಾಕಾಲ ಸವಾಲಾಗಿಯೇ ಉಳಿದುಬಿಡುವ ಸಾಧ್ಯತೆ ದಟ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.