‘ಹಿಂದೆಲ್ಲ ಬಹಳ ಚೆನ್ನಾಗಿತ್ತು. ಈಗ ಕಾಲ ಕೆಟ್ಟಿದೆ’ ಎನ್ನುವುದು ಒಂದು ಮಾನಸಿಕತೆಯೇ ವಿನಾ ವಾಸ್ತವ ಅಲ್ಲ. ಹಿಂದೆಯೂ ಬಹಳಷ್ಟು ಕೆಟ್ಟ ಪರಿಸ್ಥಿತಿ ಇತ್ತು ಎನ್ನಲು ಐತಿಹಾಸಿಕ ಸಾಕ್ಷ್ಯಗಳಿವೆ. ಆದರೆ ‘ಹಿಂದಿನ ಕಾಲ ಚೆನ್ನಾಗಿತ್ತು’ ಎಂಬ ಆಲೋಚನಾ ಕ್ರಮದಲ್ಲಿ ವರ್ತಮಾನದ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಮಾನಸಿಕ ಸ್ಥಿತಿ ಇರುತ್ತದೆ. ಈ ಮಾನಸಿಕ ಸ್ಥಿತಿ ತೀರಾ ಅವಾಸ್ತವಿಕ ವಾದದ್ದನ್ನು ಪ್ರತಿಪಾದಿಸಿದಾಗ ಅದರ ಸತ್ಯಾಸತ್ಯತೆಯ ಪರಿಶೀಲನೆ ಬೇಕಾಗುತ್ತದೆ.

ಈಗಿನ ಸಣ್ಣ ಕುಟುಂಬಗಳಲ್ಲಿ ತಂದೆ– ತಾಯಿ ಇಬ್ಬರೂ ಉದ್ಯೋಗಿಗಳಾಗಿರುವುದರಿಂದ ಮಕ್ಕಳ ಪಾಲನೆಯಲ್ಲಿ ಸರಿಯಾಗಿ ಮುತುವರ್ಜಿ ವಹಿಸಲು ಆಗುತ್ತಿಲ್ಲ ಎಂಬ ನಂಬಿಕೆಯನ್ನು ಆಧರಿಸಿ, ತಂದೆ– ತಾಯಿ ತಮ್ಮನ್ನು ಅಗತ್ಯವಿದ್ದಷ್ಟು ಗಮನಿಸುತ್ತಿಲ್ಲ ಎಂದು ಮಕ್ಕಳು ಕೊರಗಿ ಕೊರಗಿ ತಂದೆ–ತಾಯಿ ಬಗ್ಗೆ ಅಕಾರಣ ಸಿಟ್ಟನ್ನು ಮಾಡಿಕೊಳ್ಳುವುದು, ಅಗತ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗಂಡ ಮತ್ತು ಹೆಂಡತಿ ಪರಸ್ಪರ ಅಸಮಾಧಾನ, ಅಸಹನೆಯನ್ನು ಬೆಳೆಸಿಕೊಳ್ಳುವಂತಹ ಸ್ಥಿತಿ ಉಂಟಾಗಿದೆ.

ಆದರೆ ಬಹಳ ಭವ್ಯವಾಗಿತ್ತು ಎಂದು ಕಲ್ಪಿಸಿಕೊಂಡ ಕೂಡು ಕುಟುಂಬಗಳ ಪರಿಸ್ಥಿತಿ ನಿಜವಾಗಿ ಹೇಗಿತ್ತು? ಪುರುಷ ಸದಸ್ಯರು ಸಾಮಾನ್ಯವಾಗಿ ಹೊಲಗಳ ಕೆಲಸ, ಕಟ್ಟೆಪುರಾಣ, ಕೆಲವರು ಕೆಲವು ಚಟಗಳನ್ನು ಹೊಂದಿದವರಾಗಿರುತ್ತಿದ್ದರು. ಅವರೂ ಹೆಂಡತಿ– ಮಕ್ಕಳನ್ನು ಸಿನಿಮಾ, ಹೋಟೆಲ್ ಎಂದು ಸುತ್ತಾಡಿಸುತ್ತಿರಲಿಲ್ಲ. ವರ್ಷಕ್ಕೊಮ್ಮೆಯೇನಾದರೂ ದೇವಸ್ಥಾನಕ್ಕೊ, ಜಾತ್ರೆಗೊ ಕರೆದೊಯ್ದರೆ ಮುಗಿಯಿತು ಅಷ್ಟೆ. ಮಹಿಳೆಯರ ಸ್ಥಿತಿ ಸದಾ ಒಲೆಯ ಮುಂದೆಯೇ ಇರುತ್ತಿತ್ತು. ದೊಡ್ಡ ಕುಟುಂಬ, ಬಿಡುವಿಲ್ಲದ ದಿನಚರಿಯಲ್ಲಿ ಮಕ್ಕಳಿಗೆ ಬೇಕಾದ್ದನ್ನು ಕೊಡಿಸಲು, ತಿರುಗಾಡಿಸಲು ಅವರಿಗೂ ಸಮಯ ಇರುತ್ತಿರಲಿಲ್ಲ.

ಮಕ್ಕಳು ತಂದೆಯನ್ನು ಕಂಡರೇನೆ ಭಯಪಡುತ್ತಿದ್ದರು. ಮಕ್ಕಳಿಗೆ ಏನಾದರೂ ಬೇಕಾದರೆ ತಾಯಿಯ ಮೂಲಕ ತಂದೆಯ ಬಳಿ ಅಂಜಿಕೆಯಿಂದ ಕೇಳಿಸಬೇಕಿತ್ತು. ನೇರವಾಗಿ ಕೇಳುವ ಸ್ವಾತಂತ್ರ್ಯವೇ ಮಕ್ಕಳಿಗಿರಲಿಲ್ಲ. ತಂದೆಯೊಂದಿಗೆ ಗೆಳೆತನದಿಂದ ವ್ಯವಹರಿಸಲು ಸಾಧ್ಯವಾಗಿರುವುದೇ ಇಂದಿನ ತಲೆಮಾರಿನಲ್ಲಿ. ತಾಯಿಯೊಂದಿಗೆ ಸ್ವಲ್ಪ ಸ್ನೇಹ ಇರುತ್ತಿತ್ತು. ಆದರೆ ತಾಯಿಗೆ ಮಕ್ಕಳೊಂದಿಗೆ ಒಡನಾಡಲು ಸಮಯವೇ ಸಿಗುತ್ತಿರಲಿಲ್ಲ. ಮಹಿಳೆಯರು ಬರಿಯ ಯಂತ್ರಗಳಂತಾಗುತ್ತಾರೆ ಎನ್ನುವ ಕಾರಣಕ್ಕೇನೆ ರಾಮಮನೋಹರ ಲೋಹಿಯಾ ಅವರು ಕೂಡು ಕುಟುಂಬವನ್ನು ವಿರೋಧಿಸಿದ್ದರು. ಈಗಿನ ವಿಭಕ್ತ ಕುಟುಂಬಗಳಲ್ಲಿ ಉದ್ಯೋಗಸ್ಥ ಮಹಿಳೆ ಉದ್ಯೋಗವನ್ನು ಮಾಡಲು ಸಾಧ್ಯವಾಗಿರುವುದು ‘ಬೇಯಿಸುವ ಮತ್ತು ತೊಳೆಯುವ’ ಕೆಲಸ ಬಹಳಷ್ಟು ಕಡಿತವಾದುದರಿಂದಾಗಿ ಎಂಬುದು ಗಮನಾರ್ಹ ಅಂಶ.

ಕೂಡು ಕುಟುಂಬಗಳಲ್ಲಿ ತಂದೆ– ತಾಯಿಯೇ ಮಕ್ಕಳ ಕಾಳಜಿ ತೆಗೆದುಕೊಂಡು ನಿರ್ವಹಿಸುತ್ತಿದ್ದುದು ಕಡಿಮೆಯೇ. ಆದರೆ ಅಣ್ಣಂದಿರು, ಅಕ್ಕಂದಿರು ಕಿರಿಯರ ನಿರ್ವಹಣೆಯಲ್ಲಿ ಪಾತ್ರ ವಹಿಸುತ್ತಿದ್ದರು. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದನ್ನು ಕಲಿತುಕೊಳ್ಳಲು ಕೂಡು ಕುಟುಂಬಗಳು ಸಹಾಯ ಮಾಡುತ್ತಿದ್ದವು. ಆದರೆ ಹೊಂದಾಣಿಕೆಯ ಬದುಕು ಛಲ, ದಿಟ್ಟತನ ಮತ್ತು ಸವಾಲುಗಳನ್ನು ಎದುರಿಸುವ ಪ್ರವೃತ್ತಿಯನ್ನು ಕಡಿಮೆಯೂ ಮಾಡುತ್ತದೆ. ಸ್ವಯಂ ಸಾಮರ್ಥ್ಯ ಪ್ರಕಟಗೊಳ್ಳಲು ಅವಕಾಶ ಕಡಿಮೆ ಇರುತ್ತದೆ. ಅಲ್ಲದೆ, ಕೂಡು ಕುಟುಂಬದಲ್ಲಿ ಬೆಳೆದವರೆಲ್ಲ ಅಪಾರ ನೈತಿಕ ಪ್ರಜ್ಞೆಯ ಸಚ್ಚಾರಿತ್ರ್ಯವಂತರು ಎಂದೂ ಹೇಳಲು ಆಗುವುದಿಲ್ಲ. ಪುಂಡು ಪೋಕರಿಗಳು ಆಗಲೂ ಇದ್ದರು.

ತಂದೆ– ತಾಯಿ ತನಗೆ ಸ್ಪಂದಿಸಲು ಸಮಯ ಇರಿಸಿ ಕೊಳ್ಳಬೇಕು ಎಂದು ಭಾವಿಸುವುದು ಮಗುವಿನ ಹಕ್ಕು. ಆದರೆ ತನ್ನ ತಂದೆ– ತಾಯಿಗೆ ಅವರ ಅಜ್ಜ– ಅಜ್ಜಿ ಅಪಾರ ಸಮಯವನ್ನು ಕೊಟ್ಟು ಎಲ್ಲದಕ್ಕೂ ಸ್ಪಂದಿಸುತ್ತಿದ್ದರು, ಆದರೆ ತನಗೆ ಮಾತ್ರ ತನ್ನ ತಂದೆ– ತಾಯಿ ಸ್ಪಂದಿಸಲು ಸಮಯ ಕೊಡುತ್ತಿಲ್ಲ ಎಂದು ಮಗು ಭಾವಿಸಿದರೆ ಅದು ತಪ್ಪು ತಿಳಿವಳಿಕೆ. ವಾಸ್ತವದಲ್ಲಿ ಈಗಿನ ತಲೆಮಾರಿನ ತಂದೆ– ತಾಯಿ ಅವರ ಮಕ್ಕಳ ಬಗ್ಗೆ ಹಿಂದೆಂದಿಗಿಂತಲೂ ಜಾಸ್ತಿ ಯೋಚಿಸುತ್ತಾರೆ. ಮಕ್ಕಳ ಭವಿಷ್ಯ, ಉದ್ಯೋಗ, ಅವರು ಕಲಿಯಬೇಕಾದ ವಿಷಯಗಳ ಬಗ್ಗೆಯೆಲ್ಲ ಜಾಸ್ತಿ ಚಿಂತಿಸುತ್ತಾರೆ. ಆದರೆ ಈ ಅತಿಯಾದ ಕಾಳಜಿಯು ಕೆಲವು ಸಂದರ್ಭಗಳಲ್ಲಿ ಮಕ್ಕಳ ಸ್ವಂತಿಕೆಯನ್ನೇ ನಾಶಪಡಿಸಿ ಅವರಿಗೆ ಶಾಪವಾಗಿ ಪರಿಣಮಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಭೂತಕಾಲದ ಭವ್ಯತೆಯ ಕಲ್ಪನೆಯಿಂದ ಹೊರಬರಬೇಕು ಮತ್ತು ಮಕ್ಕಳಿಗೆ ಮೊದಲಿಗೆ ಸಹಜ ಬದುಕಿನ ಸಹಜ ಸ್ಥಿತಿಯನ್ನು ಅರ್ಥ ಮಾಡಿಸಬೇಕು.

ಪ್ರತಿ ಕುಟುಂಬದ ಸ್ಥಿತಿಯೂ ಭಿನ್ನವಾಗಿರುತ್ತದೆ. ಕೆಲವು ಸಲ ಮಕ್ಕಳ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲು ಆಗದೇ ಇದ್ದರೆ ಅದು ಇನ್ನಿತರ ಕಾರಣಗಳಿಂದಾಗಿಯೇ ವಿನಾ ಮಕ್ಕಳ ಬಗೆಗಿನ ನಿರ್ಲಕ್ಷ್ಯ ಆಗಿರುವುದಿಲ್ಲ ಎನ್ನುವ ಅರಿವನ್ನು ಮಕ್ಕಳಲ್ಲಿ ಹುಟ್ಟಿಸಬೇಕು. ಕೆಲವೊಮ್ಮೆ ತಾಯಿ– ತಂದೆ ಮಕ್ಕಳಿಗೆ ಸಮಯ ಕೊಡದೇ ಇದ್ದರೆ ಆ ಸಮಯದಲ್ಲಿ ಮಕ್ಕಳು ಸ್ವಂತ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ
ಚಟುವಟಿಕೆಗಳನ್ನು ಮಾಡಲು ಸಾಧ್ಯವಿದೆ ಎಂಬುದನ್ನು ತಿಳಿಯಪಡಿಸಬೇಕು. ಇದಿಷ್ಟನ್ನು ಸಾಧಿಸಿದರೆ ಮಕ್ಕಳಲ್ಲಿ ತಾಯಿ– ತಂದೆಯ ಬಗ್ಗೆ ಅಸಹನೆ ಬೆಳೆಯುವುದಿಲ್ಲ. ಮಕ್ಕಳು ತಮ್ಮ ಬಗ್ಗೆ ತಾವೇ ಮರುಕಪಟ್ಟುಕೊಂಡು ಹತಾಶೆಗೆ ಈಡಾಗುವುದಿಲ್ಲ. ತಾಯಿ– ತಂದೆ ಅಪರಾಧಿ ಭಾವದಿಂದ ಒಳಗೊಳಗೇ ಹಿಂಸೆ ಅನುಭವಿಸಬೇಕಾಗುವುದೂ ಇಲ್ಲ.

ಎರಡನೆಯದಾಗಿ, ಮಕ್ಕಳ ನಿರ್ವಹಣೆಯ ಬಗ್ಗೆ ತಾಯಿ– ತಂದೆ ಒಂದು ಸಾಮಾನ್ಯ ಪರಿಕಲ್ಪನೆಯನ್ನು ಕಂಡುಕೊಳ್ಳಬೇಕು. ಮಕ್ಕಳು ಬದುಕುವ ತನಕವೂ ತಾಯಿ– ತಂದೆ ಬದುಕದೇ ಇರುವುದು ಪ್ರಕೃತಿ ಧರ್ಮ. ಆದ್ದರಿಂದ ತಾವಿಲ್ಲದ ಜಗತ್ತಿನಲ್ಲಿಯೂ ಮಕ್ಕಳು ಬಾಳಬೇಕು, ಅದಕ್ಕಾಗಿ ಅವರಲ್ಲಿ ಸ್ವತಂತ್ರ ಸಾಮರ್ಥ್ಯಗಳು ಬರಬೇಕು ಎಂಬ ಅರಿವು ತಾಯಿ– ತಂದೆಗೆ ಇರಬೇಕು. ಆಗ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ತಾವು ಸಹಾಯಕರಾಗಿರಬೇಕೇ ವಿನಾ ತಮ್ಮ ನಿರ್ಧಾರವನ್ನೇ ಮಕ್ಕಳು ಅನುಷ್ಠಾನ ಮಾಡುವಂತೆ ಆಗಬಾರದು ಎಂದು ಗೊತ್ತಾಗುತ್ತದೆ. ಕೆಲವು ಕುಟುಂಬಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ತಾಯಿ– ತಂದೆಯ ನಿರ್ಧಾರವನ್ನೇ ಮಕ್ಕಳು ಅನುಷ್ಠಾನಗೊಳಿಸಬೇಕಾಗಿದ್ದಾಗ ಆ ನಿರ್ಧಾರದ ಔಚಿತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು, ಅವರು ಆ ನಿರ್ಧಾರವನ್ನು ಸ್ವೀಕರಿಸುವಂತೆ ಮಾಡಬೇಕು.

ಮಕ್ಕಳಿಗಾಗಿ ತಾಯಿ– ತಂದೆ ಸಮಯ ಕೊಡಬೇಕಾದ ಅಗತ್ಯ ಇರುತ್ತದೆ. ಆದರೆ ಅದು ಒಂದು ವ್ಯವಸ್ಥೆಯ ಹಾಗೆ ಆಗದೆ ಮಕ್ಕಳು ಬಯಸಿದಾಗ ಸ್ಪಂದನೆಗೆ ತನ್ನ ತಂದೆ– ತಾಯಿ ಸಿಗುತ್ತಾರೆ ಎನ್ನುವ ಭಾವನಾತ್ಮಕ ಭದ್ರತೆಯನ್ನು ಒದಗಿಸುವ ರೂಪದಲ್ಲಿರಬೇಕು. ಇಲ್ಲಿ ಆಗಬೇಕಾದ್ದು ತಾಯಿ– ತಂದೆಯ ಬಗ್ಗೆ ಮಕ್ಕಳಲ್ಲಿ ನಂಬಿಕೆ ಹುಟ್ಟಿಸುವ ಕೆಲಸವೇ ವಿನಾ ಮಕ್ಕಳೊಂದಿಗೆ ಇರುವ ಸಮಯ ಮಾತ್ರವಷ್ಟೇ ಬಹಳ ಮುಖ್ಯದ್ದಲ್ಲ. ಈ ನಂಬಿಕೆ ಎಷ್ಟು ಸಶಕ್ತವಾಗಿ ಇರಬೇಕು ಎಂದರೆ ತಾನು ತಪ್ಪೇ ಮಾಡಿದ್ದರೂ ತಾಯಿ– ತಂದೆಯ ಬಳಿ ಹೇಳಿದರೆ ಅವರು ತನ್ನ ಸಹಾಯಕ್ಕೆ ಬಂದೇ ಬರುತ್ತಾರೆ ಎಂದು ಮಕ್ಕಳಿಗೆ ಖಾತರಿ ಇರಬೇಕು. ‘ನೀವು ಬಯಸಿದ್ದನ್ನು ಮಾಡಲು ಸ್ವತಂತ್ರರು. ಆದರೆ ಮಾಡುವ ಮೊದಲು ನಮಗೆ ತಿಳಿಸಿರಬೇಕು’ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು.

ಸಾಮಾನ್ಯವಾಗಿ ಮಕ್ಕಳು ತಪ್ಪು ದಾರಿ ತುಳಿದರು ಎನ್ನುವ ಸ್ಥಿತಿ ಎರಡು ಕಾರಣಗಳಿಂದ ನಿರ್ಮಾಣ ಆಗುತ್ತದೆ. ಮೊದಲನೆಯದು, ತಾಯಿ– ತಂದೆಯ ಸಂಪರ್ಕ ಕಡಿಮೆಯಾದಾಗ ಬೆಳೆಯುವ ಅಹಿತಕರ ಒಡನಾಟಗಳಿಂದ. ಆದ್ದರಿಂದ ಮಕ್ಕಳಿಗಾಗಿ ಹೆಚ್ಚು ಸಮಯ ಕೊಡಲು ಆಗದೇ ಇದ್ದರೂ ಅವರೊಂದಿಗೆ ತಾಯಿ– ತಂದೆ ಯಾವಾಗಲೂ ಸಂಪರ್ಕ ಇರಿಸಿಕೊಳ್ಳಬೇಕು. ಎರಡನೆಯದಾಗಿ, ಮಕ್ಕಳು ನಿಷ್ಕ್ರಿಯರಾಗಿ ದ್ದಾಗ ಅವರಲ್ಲಿ ಬೆಳೆಯುವ ನಕಾರಾತ್ಮಕ ಚಿಂತನೆಗಳು ತಪ್ಪು ದಾರಿಗೆ ಕಾರಣವಾಗುತ್ತವೆ. ಆದ್ದರಿಂದ ನಿದ್ದೆಯ ಸಮಯವನ್ನು ಬಿಟ್ಟರೆ ಉಳಿದಂತೆ ಮಕ್ಕಳು ಭೌತಿಕವಾಗಿ ಅಥವಾ ಬೌದ್ಧಿಕವಾಗಿ ಸೃಜನಶೀಲವಾದ ಚಟುವಟಿಕೆಗಳಲ್ಲಿ ನಿರತರಾಗಿರುವಂತೆ ಅವರಲ್ಲಿ ಚಿಂತನೆಯನ್ನು ರೂಪಿಸಬೇಕು. ಮಕ್ಕಳ ನಡವಳಿಕೆಯನ್ನು ಖಾತರಿಪಡಿಸಿಕೊಳ್ಳಲು ದಿನಕ್ಕೊಮ್ಮೆ ಒಂದೆರಡು ನಿಮಿಷ ಅವರ ದೈನಂದಿನ ಚಟುವಟಿಕೆಗಳನ್ನು ಕೇಳಿ ತಿಳಿದುಕೊಳ್ಳಬೇಕು. ಇದರಲ್ಲಿ ಗಂಡುಮಕ್ಕಳು, ಹೆಣ್ಣುಮಕ್ಕಳೆಂಬ ತಾರತಮ್ಯ ಇರಕೂಡದು. ಇಷ್ಟನ್ನು ಮಾಡಿದರೆ ಮಕ್ಕಳ ವಿಕಾಸ ಚೆನ್ನಾಗಿಯೇ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.