ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಮೋದಿ: ಯಾವ ನೆನಪುಗಳು ಸೂಕ್ತ?

ಲೋಕಸಭಾ ಚುನಾವಣೆಯ ಮತದಾನದಲ್ಲಿ ಜನರ ಹೊಟ್ಟೆ ಮಾತನಾಡಿತು
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಮೈತ್ರಿಕೂಟದ ಅನಿವಾರ್ಯಗಳು ಅಥವಾ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು ಎನ್ನಲಾದ ‘ಮೈತ್ರಿಧರ್ಮ’ ಪಾಲಿಸಬೇಕಾದ ಅನಿವಾರ್ಯವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಥಿಕ ವಿಚಾರಗಳಲ್ಲಿ ದೇಶವನ್ನು ಮಧ್ಯಮಪಂಥದಲ್ಲಿ ಒಯ್ಯಲು ಸುವರ್ಣಾವಕಾಶವೊಂದನ್ನು ಒದಗಿಸಿದೆ. ಅದಕ್ಕಿಂತ ಮುಖ್ಯವಾಗಿ, ಕೋಮು ಸೌಹಾರ್ದದ ಹೊಸ ಯುಗಕ್ಕೆ ಚಾಲನೆ ನೀಡಲು ಅವಕಾಶ ಮಾಡಿಕೊಡುತ್ತದೆ.

ಮೋದಿ ಅವರು ಪಕ್ಷದ ಒಳಿಗಿನಿಂದ ಎದುರಾಗುವ ಒತ್ತಡಗಳನ್ನು, ಆರ್‌ಎಸ್‌ಎಸ್‌ ಹಾಗೂ ಇತರ ಹಿಂದುತ್ವವಾದಿ ಸಂಘಟನೆಗಳಿಂದ ಬರುವ ಒತ್ತಡಗಳನ್ನು ಈಗ ಸುಲಭವಾಗಿ ನಿಭಾಯಿಸಬಹುದು. ಏಕೆಂದರೆ, ಮೋದಿ ನೇತೃತ್ವದ ಸರ್ಕಾರದ ಉಳಿವಿಗೆ ‘ಸೆಕ್ಯುಲರ್’ ಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಬೆಂಬಲ ಅನಿವಾರ್ಯ ಎಂಬುದು ಅವರಿಗೆ ಗೊತ್ತಿದೆ.

ಕ್ರಿಯಾಶೀಲ, ಜನರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಹಾಗೂ ಸಮರ್ಥನಾದ ನಾಯಕನೊಬ್ಬನಿಗೆ ಯಾವುದೇ ನಿಯಂತ್ರಣ ಇಲ್ಲದಿದ್ದರೆ, ಆತ ತಪ್ಪುದಾರಿಯಲ್ಲಿ ಇದ್ದಾನೆ ಎಂದಾದರೆ, ಆತ ಬೇರೆ ಬೇರೆ ಆಲೋಚನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದಾದರೆ, ಆತ ಅತ್ಯುನ್ನತ ಆಶಯಗಳೊಂದಿಗೆ ಕೆಲಸ ಮಾಡಿದರೂ ದೇಶಕ್ಕೆ ಹಾಗೂ ಸಮಾಜಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತಾನೆ. ‘ಅಧಿಕಾರದ ಮದ ಏರಿದವರು ಮನಃಪೂರ್ವಕವಾಗಿ ಅಧಿಕಾರವನ್ನು ಬಿಡುವುದು ಎಂದಿಗೂ ಆಗದ ಕೆಲಸ’ ಎಂದು ಎಡ್ಮಂಡ್ ಬರ್ಕ್ ಹೇಳಿದ್ದ. ಅತಿಯಾದ ಅಧಿಕಾರವು ಅತಿಯಾಗಿ ಮದವೇರುವಂತೆ ಮಾಡುತ್ತದೆ.

ಇದಕ್ಕಿರುವ ಒಂದೇ ಮದ್ದು, ಅಧಿಕಾರವನ್ನು ಹಿಂಪಡೆಯುವುದು. ಮೋದಿ ಅವರಿಗೆ 2014 ಹಾಗೂ 2019ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನೀಡಿದ ಜನರು, ಈ ಬಾರಿ ಸ್ಪಷ್ಟ ಬಹುಮತ ನೀಡಲು ಒಲ್ಲೆ ಎನ್ನುವ ಮೂಲಕ ಆ ಅಧಿಕಾರವನ್ನು ಹಿಂಪಡೆದರು. ಹೀಗಿದ್ದರೂ, ವಿರೋಧ ಪಕ್ಷಗಳ ಸಾಲಿನಲ್ಲಿ ಒಳ್ಳೆಯ ನಾಯಕನಿಲ್ಲ, ಆ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ ಎಂಬ ಕಾರಣಕ್ಕೆ ಮೋದಿ ಅವರೇ ಒಳ್ಳೆಯ ಆಯ್ಕೆ ಎಂದು ತೀರ್ಮಾನಿಸಿದರು. ಮೋದಿ ಅವರಿಗೆ ಸರ್ಕಾರ ನಡೆಸಲು ಮಿತ್ರಪಕ್ಷಗಳ ಬೆಂಬಲ ಅಗತ್ಯ ಎಂಬುದು ಪರೋಕ್ಷವಾಗಿ ಒಂದು ವರ. ಮೋದಿ ಅವರು ಈಗ ಅನಿಯಂತ್ರಿತವಾಗಿ ವರ್ತಿಸಲು ಅವಕಾಶವಿಲ್ಲ.

ಮೋದಿ ಅವರು ತಮ್ಮ ಹೊಸ ಮಿತ್ರಪಕ್ಷಗಳ ಮಾತುಗಳಿಗೆ ಕಿವಿಗೊಟ್ಟರೆ, ಅವರ ಜೊತೆಗೆ ಹಾಗೂ ವಿರೋಧ ಪಕ್ಷಗಳ ಜೊತೆ ಮಾತುಕತೆಗೆ ಮನಸ್ಸು ಮಾಡಿದರೆ, ನೀತಿಗಳನ್ನು ಅಂತಿಮಗೊಳಿಸುವ ಮೊದಲು ಸಹಮತ ರೂಪಿಸಲು ಅವರಿಂದ ಸಾಧ್ಯವಾದರೆ ಅವರು ಇನ್ನಷ್ಟು ಉತ್ತಮ ನಾಯಕ ಆಗುತ್ತಾರೆ. ಈಗ, ಮೈತ್ರಿಕೂಟ ಸರ್ಕಾರದ ನೇತೃತ್ವ ವಹಿಸಿರುವ ಮೋದಿ ಅವರ ಹೊಸ ಅವತಾರ ಹೇಗಿರಲಿದೆ?

ಮೋದಿ ಅವರನ್ನು ಬೆಂಬಲಿಸುವ ಹಲವರ ಪ್ರಕಾರ ಅವರು ನಿಜಕ್ಕೂ ಒಬ್ಬ ಅವತಾರ ಪುರುಷ. ದಿವ್ಯ ಶಕ್ತಿಯ ವ್ಯಕ್ತರೂಪ ತಾವು ಎಂದು ಮೋದಿ ಅವರೂ ಹೇಳಿಕೊಂಡಿದ್ದಿದೆ. ಆದರೆ ಭಾರತದ ಹಾಗೂ ಪಶ್ಚಿಮದ ದೇಶಗಳ ಉದಾರವಾದಿಗಳು, ಎಡಪಂಥೀಯರು ಹಾಗೂ ಬುದ್ಧಿಜೀವಿಗಳು ಮೋದಿ ಅವರನ್ನು ಸರ್ವಾಧಿಕಾರಿ ಎಂದು ಹೇಳುತ್ತಾರೆ. ಮೋದಿ ಅವರು ತಮ್ಮನ್ನು ಬಲಿಷ್ಠ ನಾಯಕ ಎಂದು ಚಿತ್ರಿಸಿಕೊಂಡಿದ್ದು, 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲರ ಅಭಿವೃದ್ಧಿಯನ್ನು ಪ್ರಚಾರದ ಧ್ಯೇಯವಾಗಿಸಿಕೊಂಡಿದ್ದು ದೇಶದ ಮನವನ್ನು ಸೆಳೆಯಿತು. ಮನಮೋಹನ್ ಸಿಂಗ್ ಅವರನ್ನು ಆಗ ಹಲವರು ದುರ್ಬಲ ಪ್ರಧಾನಿ ಎಂದು, ಕಾಂಗ್ರೆಸ್ ಹೈಕಮಾಂಡ್‌ನ ಕೈಗೊಂಬೆ ಎಂದು ಭಾವಿಸಿದ್ದರು. ಈ ಪರಿಸ್ಥಿತಿಯು ಮೋದಿ ಅವರ ಏಳ್ಗೆಗೆ ನೆರವಾಗಿ ಬಂತು. ದಿನಗಳು ಕಳೆದಂತೆ ಮೋದಿ ಅವರು ಒಂದು ಕೈಯಲ್ಲಿ ಸಾವರ್ಕರ್ ಚಿಂತನೆಗಳನ್ನು, ಇನ್ನೊಂದು ಕೈಯಲ್ಲಿ ಮಹಾತ್ಮ ಗಾಂಧಿಯ ಚಿಂತನೆಗಳನ್ನು ಹಿಡಿಯಲಾರಂಭಿಸಿದರು. ಆದರೆ ಈ ಇಬ್ಬರು ನಾಯಕರು ಪ್ರತಿಪಾದಿಸಿದ್ದು ಬಹಳ ಭಿನ್ನ ಚಿಂತನೆಗಳನ್ನು. ಹಲವು ಮುಖವಾಡಗಳ ಹಿಂದಿನ ನಿಜವಾದ ಮೋದಿ ಯಾರು ಎಂದು ಕೆಲವರು ಚಕಿತರಾಗಿ ಕೇಳಲಾರಂಭಿಸಿದರು.

2023ರಲ್ಲಿಯೂ ಮೋದಿ ಅವರು ಹಲವು ವ್ಯಕ್ತಿತ್ವಗಳನ್ನು ತಮ್ಮದಾಗಿಸಿಕೊಂಡು ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆ ಇರಿಸಿದ್ದರು. ಜಿ–20 ದೇಶಗಳ ಸಭೆಯ ಸಂದರ್ಭದಲ್ಲಿ ಮುತ್ಸದ್ದಿಯಾಗಿ ಜಾಗತಿಕ ವೇದಿಕೆಯಲ್ಲಿ ಕಾಣಿಸಿಕೊಂಡರು. ವಿಶೇಷವಾಗಿ ದೊಡ್ಡ ಉದ್ಯಮಗಳ ಪಾಲಿಗೆ ಸುಧಾರಕನಂತೆ, ಆಧುನಿಕ ತಂತ್ರಜ್ಞಾನವನ್ನು ಅಪ್ಪಿಕೊಂಡ ನಾಯಕನಂತೆ, ಸಂಪ್ರದಾಯವಾದಿ ಹಿಂದೂ ಶ್ರೇಷ್ಠತೆಯನ್ನು ಪ್ರತಿಪಾದಿಸುವವರ ಪಾಲಿಗೆ, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲು ದೇವರೇ ಕಳುಹಿಸಿದ ವ್ಯಕ್ತಿಯಂತೆ ಕಾಣಿಸಿಕೊಂಡರು.

ಆದರೆ, ಕೇಸರಿ ನಿಲುವಂಗಿ ಧರಿಸಿದ ಯೋಗಿಯ ಆಡಳಿತ ಇರುವ, ಕೋಮು ನೆಲೆಯಲ್ಲಿ ಅತ್ಯಂತ ಹೆಚ್ಚು ಧ್ರುವೀಕರಣ ಕಂಡಿರುವ ಉತ್ತರಪ್ರದೇಶದಲ್ಲಿ, ಮೋದಿ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ‘ಇಂಡಿಯಾ’ ಮೈತ್ರಿಕೂಟದ ಎದುರು ಸೋಲನ್ನು ಅನುಭವಿಸಬೇಕಾಯಿತು. ರಾಮನ ಜನ್ಮಸ್ಥಾನವಾಗಿರುವ ಅಯೋಧ್ಯೆ ಒಳಗೊಳ್ಳುವ ಫೈಜಾಬಾದ್‌ ಕ್ಷೇತ್ರದಲ್ಲಿಯೇ ಬಿಜೆಪಿಯ ಅಭ್ಯರ್ಥಿಯು ಸಮಾಜವಾದಿ ಪಕ್ಷದ ಅಭ್ಯರ್ಥಿಯ ಎದುರು ಸೋತರು. ಇದು ಬಹಳ ದೊಡ್ಡ ವ್ಯಂಗ್ಯ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಮುಸ್ಲಿಮರನ್ನೂ ಸೇರಿಸಿಕೊಂಡು ಹಲವು ಜಾತಿ, ಸಮುದಾಯಗಳ ಒಕ್ಕೂಟವನ್ನು ಕಟ್ಟಿದ್ದರು. ಮತದಾನ ಮಾಡುವ ಸಂದರ್ಭದಲ್ಲಿ ಜನರ ಹೊಟ್ಟೆ ಮಾತನಾಡಿತು.

2014ರಲ್ಲಿ ಮೋದಿ ಅವರು ಅಭಿವೃದ್ಧಿ ಹಾಗೂ ಉತ್ತಮ ಆಡಳಿತದ ಆಧಾರದಲ್ಲಿ ಅಧಿಕಾರ ಹಿಡಿದರು, ಆಗ ಅವರಿಗೆ ಪ್ರಾಮಾಣಿಕ, ದಕ್ಷ ಆಡಳಿತಗಾರ ಎಂಬ ಖ್ಯಾತಿ ಇತ್ತು, ಅವರ ಆಡಳಿತದ ಮಾದರಿಗೆ ದೇಶದೆಲ್ಲೆಡೆ ಆದರ ಇತ್ತು. ಮೋದಿ ಅವರು ಮುಖ್ಯಮಂತ್ರಿಯಾಗಿ ಮಾಡಿದ್ದ ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿಯೂ ತೋರಲಿ ಎಂದು ಜನ ಬಯಸಿದ್ದಾಗ, ಮೋದಿ ಅವರು ಧ್ರುವೀಕರಣದ ಹಾಗೂ ಮುಸ್ಲಿಮರನ್ನು ಕೆಟ್ಟವರು ಎಂದು ಬಿಂಬಿಸುವ ಹಿಂದುತ್ವದ ರಾಜಕಾರಣವನ್ನು ಮುನ್ನೆಲೆಗೆ ತರುವ ಅಗತ್ಯ ಏನಿತ್ತು? ಸಾಮಾಜಿಕ ಅಶಾಂತಿ, ಕೋಮು ಸಂಘರ್ಷ ನಿರಂತರವಾಗಿದ್ದರೆ ಅವರಿಗೆ ಅಭಿವೃದ್ಧಿ ಸಾಧಿಸಲು ಸಾಧ್ಯವೇ?

ಅರ್ಥ ವ್ಯವಸ್ಥೆಯ ಬಗ್ಗೆ ಗಮನಹರಿಸುವುದು, ಉದ್ಯೋಗ ಸೃಷ್ಟಿಸುವುದು ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುವುದು ಯಾವತ್ತಿಗೂ ಜನರ ಗಮನವನ್ನು ಸೆಳೆಯುವ ಚುನಾವಣಾ ವಿಷಯ. ಮೋದಿ ಅವರಿಗೆ ಚರಿಷ್ಮಾ ಇದೆ, ಮಾತಿನ ಕೌಶಲ ಅವರಿಗೆ ಸಿದ್ಧಿಸಿದೆ, ಅವರಲ್ಲಿ ಶಕ್ತಿ ಇದೆ, ಸಾಮರ್ಥ್ಯವೂ ಇದೆ. ಅಲ್ಲದೆ, ಸಮಾನ ಅವಕಾಶಗಳೊಂದಿಗೆ ದೇಶದ ಬೆಳವಣಿಗೆ ಸಾಧಿಸುವ ಹಾಗೂ ಸಮಸಮಾಜದ ಕಡೆ ದೇಶವನ್ನು ಒಯ್ಯುವ ಜನಾದೇಶ ಅವರಿಗೆ ಇತ್ತು. ಈ ಜನಾದೇಶವನ್ನು ಅವರು ವಿಷಯವೇ ಅಲ್ಲದ ಸಂಗತಿಗಳ ಮೇಲೆ, ಕಲ್ಪಿತ ಶತ್ರುಗಳ ಮೇಲೆ ಗಮನಹರಿಸಲು ಬಳಸಿದರೇ?

ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದ ನಂತರ, ಅಧ್ಯಕ್ಷ ಪುಟಿನ್ ಅವರಿಗೆ ‘ಇದು ಯುದ್ಧಗಳ ಕಾಲವಲ್ಲ’ ಎಂದು ಮೋದಿ ಅವರು ಹೇಳಿದಾಗ ವಿಶ್ವದ ನಾಯಕರು ಮೋದಿ ಅವರನ್ನು ಶ್ಲಾಘಿಸಿದ್ದರು. ಸಂಘರ್ಷಗಳಲ್ಲಿ ಸಿಲುಕಿರುವ ಜಗತ್ತು ಶಾಂತಿ, ಸೌಹಾರ್ದದ ಕಡೆ ಸಾಗುವಂತೆ ಮಾಡುವಲ್ಲಿ ಮೋದಿ ಅವರು ಮುಖ್ಯ ಪಾತ್ರ ವಹಿಸಬಲ್ಲರು. ಆದರೆ, ದೇಶದಲ್ಲಿ ನಿರಂಕುಶ ವ್ಯಕ್ತಿಯಾಗಿ ಕಂಡವನು ಜಾಗತಿಕವಾಗಿ ಮುತ್ಸದ್ದಿಯಂತೆ ಕಾಣಿಸಲಾರ.

ಕೋಮು ಸೌಹಾರ್ದಕ್ಕೆ ಬದ್ಧನಾದ, ಎಲ್ಲರ ಅಭಿವೃದ್ಧಿಯನ್ನು ಸಾಧಿಸುವ ನಾಯಕ ತಾವು ಎಂಬ ಚಿತ್ರಣವನ್ನು ರೂಪಿಸಿಕೊಳ್ಳಲು ಮೋದಿ ಅವರಿಗೆ ಮೈತ್ರಿಕೂಟ ಸರ್ಕಾರವು ಒಳ್ಳೆಯ ಅವಕಾಶವನ್ನು ಇತ್ತಿದೆ. ಈಗ ಎನ್‌ಡಿಎ ಸರ್ಕಾರವು ಆರಂಭದಲ್ಲಿಯೇ ಒಂದು ತಪ್ಪು ಮಾಡಿದೆ. ಕೇಂದ್ರ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಯಾರಿಗೂ ಪ್ರಾತಿನಿಧ್ಯ ಇಲ್ಲ. ಇಲ್ಲಿ ಆಗಿರುವ ತಪ್ಪನ್ನು ತಕ್ಷಣ ಸರಿಪಡಿಸಿಕೊಳ್ಳಬೇಕು.

ಈಗಿನ ಅವಧಿ ಮುಗಿಯುವ ಹೊತ್ತಿಗೆ ಮೋದಿ ಅವರಿಗೆ 79 ವರ್ಷ ವಯಸ್ಸಾಗಿರುತ್ತದೆ. ಆ ವಯಸ್ಸಿನಲ್ಲಿ, ತಾವು ಸಂಪಾದಿಸಬೇಕಿರುವ ಹೆಸರು ಯಾವ ಬಗೆಯದ್ದು ಎಂಬ ಬಗ್ಗೆ ಮನಸ್ಸು ಸಹಜವಾಗಿಯೇ ಆಲೋಚಿಸುತ್ತದೆ. ದೇಶವನ್ನು ಒಗ್ಗೂಡಿಸಿದ, ಆಧುನಿಕ ಭಾರತವನ್ನು ನಿರ್ಮಿಸಲು ಗಮನಹರಿಸಿ ಹೆಚ್ಚು ಜನರನ್ನು ಬಡತನದಿಂದ ಮೇಲಕ್ಕೆತ್ತಿದ ಮುತ್ಸದ್ದಿಯಾಗಿ ಜನ ತಮ್ಮನ್ನು ನೆನಪಿನಲ್ಲಿ ಇರಿಸಿಕೊಳ್ಳಲಿ ಎಂದು ಮೋದಿ ಬಯಸುವರೇ? ಅಥವಾ ಹಿಂದೂ ರಾಷ್ಟ್ರವನ್ನು ಸೃಷ್ಟಿಸಿ, ಅದನ್ನು ಗಾಯ– ವಿಭಜನೆಗಳಿಂದ ಬಿಟ್ಟುಹೋದ ಹಿಂದೂ ನಾಯಕನನ್ನಾಗಿ ನೆನಪಿಟ್ಟುಕೊಳ್ಳಲಿ ಎಂದು ಬಯಸುವರೇ?

ಮೈತ್ರಿಕೂಟದ ಪಾಲುದಾರರು ಮೋದಿ ಅವರನ್ನು ಸರಿದಾರಿಯಲ್ಲಿ ಕರೆದೊಯ್ಯುವರು ಎಂದು ಆಶಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT