ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಅವಕಾಶ ನಿರಾಕರಣೆ ಯುವ ರಾಜಕಾರಣಿಗಳಿಗೆ ರಾಜಕೀಯ ನಿರಾಸಕ್ತಿ

Published : 10 ಮಾರ್ಚ್ 2023, 19:30 IST
ಫಾಲೋ ಮಾಡಿ
Comments

ರಾಜ್ಯದಲ್ಲಿ ಯುವಜನರ ರಾಜಕಾರಣವು ಪಕ್ಷಗಳ ಬಾಹ್ಯ ಕಾರ್ಯಚಟುವಟಿಕೆಗಳಿಗೆ ಸೀಮಿತವಾಗಿದೆ. ಪಕ್ಷದ ಸಂಘಟನಾತ್ಮಕ ಹುದ್ದೆಗಳ ನೇಮಕಕ್ಕೆ ಹೆಚ್ಚಿನ ಪಕ್ಷಗಳು ಚುನಾವಣೆ ನಡೆಸುವ ಬದಲು ನಾಯಕರೇ ಆಯ್ಕೆ ಮಾಡುತ್ತಾರೆ. ಇದರಿಂದಾಗಿ ಯುವ ಸಮುದಾಯದ ಅವಕಾಶಗಳು ಕ್ಷೀಣಿಸಿವೆ. ಯುವಜನರಿಗೆ ವಿವಿಧ ಹಂತಗಳಲ್ಲಿ ರಾಜಕೀಯ ಸ್ಥಾನ ನೀಡಿಕೆ, ಚುನಾವಣಾ ರಾಜಕಾರಣದಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು ಇತ್ಯಾದಿ, ಪಕ್ಷಗಳು ಮತ್ತು ಅವುಗಳ ಯುವ ಘಟಕಗಳ ಹೊಣೆಗಾರಿಕೆಯಾಗಿದೆ.

**

‘ರಾಜಕೀಯ ಪಕ್ಷ ಕೇವಲ ಸಮುದಾಯವಲ್ಲ, ಒಗ್ಗೂಡಿದ ಸಮುದಾಯಗಳಾಗಿವೆ’ ಎಂಬ ಫ್ರೆಂಚ್ ನ್ಯಾಯಶಾಸ್ತ್ರಜ್ಞ ಮೌರಿಸ್‌ ಡುವೆರೇಜರ್ ಅವರ ಹೇಳಿಕೆಯು ಆಧುನಿಕ ರಾಜಕೀಯ ಪಕ್ಷಗಳ ಅವಲೋಕನದಲ್ಲಿ ಪ್ರಸ್ತುತವಾಗಿದೆ. ರಾಜಕೀಯ ಪಕ್ಷಗಳು ಸಮಷ್ಟಿವಾದದ ಪ್ರತೀಕಗಳಾಗಿವೆ. ಈ ಪಕ್ಷಗಳು ಪಕ್ಷಪಾತ ರಹಿತವಾಗಿ ಜಾತಿ, ಜನಾಂಗ, ವರ್ಣ, ಧರ್ಮ, ಲಿಂಗವನ್ನು ಪ್ರತಿನಿಧಿಸುವ ಮೂಲಕ ಪ್ರಜಾಪ್ರಭುತ್ವದ ಭದ್ರ ಅಡಿಪಾಯಗಳಾಗಿವೆ. ರಾಜಕೀಯ ಪಕ್ಷಗಳ ಸಾಂಸ್ಥಿಕ ರಚನೆ ಮತ್ತು ಚಟುವಟಿಕೆಗಳು ನಾಗರಿಕ ಸಮಾಜದ ಎಲ್ಲ ವರ್ಗಗಳನ್ನೂ ಒಳಗೊಳ್ಳಬೇಕು.

ಪ್ರಸ್ತುತ ಕರ್ನಾಟಕ ರಾಜಕಾರಣ ವ್ಯವಸ್ಥೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ ದಳ (ಜಾತ್ಯತೀತ) ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಈ ಪಕ್ಷಗಳು ಎಲ್ಲ ವರ್ಗಗಳನ್ನೂ ಸಮಾನವಾಗಿ ಪ್ರತಿನಿಧಿಸುತ್ತಿವೆಯೇ ಎಂಬುದನ್ನು ಅವಲೋಕಿಸಿದಾಗ ರಾಜಕೀಯದಲ್ಲಿ ಯುವ ಸಮುದಾಯವೆಂಬ ಬಲಿಷ್ಠ ವರ್ಗದ ಪ್ರಾತಿನಿಧ್ಯ ಕುರಿತು ಚರ್ಚೆ ಅಗತ್ಯ ಎಂದೆನಿಸುತ್ತದೆ. ಈ ಮೂರೂ ಪಕ್ಷಗಳ ಯುವ ಘಟಕಗಳಾದ ಪ್ರದೇಶ ಯುವ ಕಾಂಗ್ರೆಸ್, ಭಾರತೀಯ ಜನತಾ ಯುವ ಮೋರ್ಚಾ ಮತ್ತು ಯುವ ಜನತಾದಳವು ಕರ್ನಾಟಕದಲ್ಲಿ ಯುವ ಜನರ ರಾಜಕಾರಣಕ್ಕೆ ಇರುವ ವೇದಿಕೆಗಳಾಗಿವೆ.

ಕರ್ನಾಟಕ ಯುವ ನೀತಿಯ ಕರಡು 2022ರ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ 15ರಿಂದ 29 ವಯೋಮಾನ
ದವರು ಶೇ 30ರಷ್ಟಿದ್ದಾರೆ. ಕೆಲವು ಅಂದಾಜುಗಳ ಪ್ರಕಾರ 18ರಿಂದ 40ರ ವಯೋಮಾನದವರು ಶೇ 50ರಷ್ಟಿದ್ದಾರೆ. ಇದರಿಂದಾಗಿಯೇ ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರುವ ಮಹತ್ತರ ಅಂಶಗಳಲ್ಲಿ ಯುವ ಸಮುದಾಯವೂ ಒಂದು.

ಭಾರತದ ಪಕ್ಷಗಳು 18ರಿಂದ 40 ವರ್ಷದೊಳಗಿನವರನ್ನು ಯುವ ಜನರು ಎಂದೇ ಪರಿಗಣಿಸುತ್ತವೆ. 18 ವರ್ಷ ತುಂಬಿದವರು ಮತದಾನ ಮಾಡಲು ಅರ್ಹರು. ಇದರ ಜೊತೆಗೆ ಅವರು ರಾಜಕೀಯ ಪಕ್ಷದ ಸದಸ್ಯತ್ವ ಪಡೆಯಬಹುದು ಮತ್ತು ರಾಜಕೀಯ ಚಟು
ವಟಿಕೆಗಳಲ್ಲಿ ಭಾಗವಹಿಸಬಹುದು. ಸಾಮಾನ್ಯವಾಗಿ ಯುವ ಜನರು ಪಕ್ಷವೊಂದರ ಯುವ ಘಟಕದ ಸದಸ್ಯತ್ವ ಪಡೆಯುವ ಮೂಲಕ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಸೇರುತ್ತಾರೆ. ಆದರೆ ಕೆಲವೊಮ್ಮೆ ಯುವ ಘಟಕದ ಸದಸ್ಯತ್ವ ಪಡೆಯದವರಿಗೆ ನೇರವಾಗಿ ಮಾತೃಪಕ್ಷದ ಸದಸ್ಯತ್ವ ನೀಡುವ ಕ್ರಮವೂ ಇದೆ. ಇದು ಸರಿಯಾದ ಕ್ರಮವೇ ಎಂಬುದು ಚರ್ಚಾರ್ಹ.

ಈ ಯುವ ಸದಸ್ಯತ್ವ ನೋಂದಣಿ ಕಾರ್ಯವನ್ನು ಈ ಮೂರೂ ರಾಜಕೀಯ ಪಕ್ಷಗಳು ಮತಗಟ್ಟೆ ಹಂತದಿಂದಲೇ ಪ್ರಾರಂಭಿಸುತ್ತವೆ. ಸದಸ್ಯತ್ವ ನೋಂದಣಿಯನ್ನು ಪಕ್ಷಗಳು ಹುರುಪಿನಿಂದಲೇ ಮಾಡುತ್ತವೆ. ಆದರೆ, ಮುಂದೆ ಯುವ ಜನರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುವುದಿಲ್ಲ. ಯುವ ಜನರ ರಾಜಕೀಯ ಚಟುವಟಿಕೆಗಳು ಕುಂಟುತ್ತಾ ಸಾಗುತ್ತವೆ. ಪಕ್ಷದ ಸಿದ್ಧಾಂತಗಳು, ಕಾರ್ಯಚಟುವಟಿಕೆಗಳು, ರಾಜಕೀಯ ಸ್ಥಾನ ಭರ್ತಿಯ ಅವಕಾಶಗಳು, ನಾಯಕರ ವರ್ತನೆ ಮತ್ತು ಅವರ ರಾಜಕೀಯ ತೀರ್ಮಾನಗಳ ಮೇಲಿನ ವೈರುಧ್ಯಗಳು ಇದಕ್ಕೆ ಕಾರಣವಾಗಿರುತ್ತವೆ.

ಯುವ ಜನರು ಪಕ್ಷದ ಸದಸ್ಯತ್ವ ಪಡೆದಿದ್ದರೂ ಪಕ್ಷದ ನಂತರದ ವಿವಿಧ ಹಂತಗಳ ಹುದ್ದೆಗಳಿಗೆ ಅವರ ನೇಮಕಾತಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ ಅಷ್ಟಕ್ಕಷ್ಟೆ. ಇದರಿಂದಾಗಿ ಪಕ್ಷದ ಸಾಂಸ್ಥಿಕ ರಚನೆಯು ದುರ್ಬಲಗೊಳ್ಳುತ್ತದೆ. ಯುವ ರಾಜಕಾರಣವನ್ನು ನಿರ್ಲಕ್ಷಿಸಿದ ಕಾರಣದಿಂದಾಗಿ ಯುವ ಜನರಲ್ಲಿ ರಾಜಕೀಯ ಹುರು‍ಪು ಕುಂಠಿತಗೊಳ್ಳುತ್ತಿದೆ.

ಯುವಜನರು ಪಕ್ಷದ ತೆರೆಮರೆಯ ಚಟುವಟಿಕೆಗಳಿಗೆ ಸೀಮಿತರಾಗುತ್ತಾರೆ. ಪಕ್ಷದ ಸಿದ್ಧಾಂತದ ಪ್ರತಿಪಾದನೆ, ಪಕ್ಷದ ಚುನಾವಣಾ ಪ್ರಚಾರ, ಸಾರ್ವಜನಿಕ ವೇದಿಕೆಗಳ ಸಿದ್ಧತೆ, ಪಕ್ಷದ ಪರ-ವಿರೋಧ ವಿಚಾರಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ರೂಪಿಸುವಿಕೆ, ಟೀಕೆ-ಟಿಪ್ಪಣಿಗಳ ವಿಮರ್ಶೆಯಲ್ಲಿ ಈ ಮೂರು ರಾಜಕೀಯ ಪಕ್ಷಗಳ ಬೆನ್ನೆಲುಬಾಗಿ ಯುವ ಸದಸ್ಯರು ಕೆಲಸ ಮಾಡುತ್ತಾರೆ. ಆದರೆ ಇದಕ್ಕೆ ಸಮಾನಾಂತರವಾಗಿ ಈ ಕ್ರಿಯಾಶೀಲ ಯುವ ಸಮುದಾಯ ತಮ್ಮ ಪಕ್ಷದ ಸಾಂಸ್ಥಿಕ ರಚನೆಯಲ್ಲಿನ ಉನ್ನತ ಸ್ಥಾನಗಳನ್ನು ಪಡೆಯಲು ಶ್ರಮಿಸುತ್ತಾರೆ; ಮತ್ತು ವಿವಿಧ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕಾಗಿ ಪಕ್ಷದ ಟಿಕೆಟ್‌ಗಾಗಿಯೂ ನಿರಂತರ ಪ್ರಯತ್ನ ನಡೆಸುತ್ತಾರೆ. ಹೀಗಿದ್ದರೂ ಹಿರಿಯ ರಾಜಕಾರಣಿಗಳ ಮಹತ್ವಾಕಾಂಕ್ಷೆಯ ಮುಂದೆ ಯುವಜನರ ಶ್ರಮವು ಬಹುತೇಕ ಸಂದರ್ಭದಲ್ಲಿ ವಿಫಲವೇ ಆಗುತ್ತದೆ.

ರಾಜ್ಯ ರಾಜಕಾರಣದ ಈ 20 ವರ್ಷಗಳ ಅವಧಿಯಲ್ಲಿ ಈ ಮೂರೂ ಪಕ್ಷಗಳು ವಿಧಾನಸಭಾ ಚುನಾವಣೆಗಳಲ್ಲಿ ಯುವಜನರಿಗೆ ನೀಡಿದ ಪ್ರಾತಿನಿಧ್ಯ ಶೇ 10.45ರಷ್ಟು ಮಾತ್ರ. ಉಳಿದ ಶೇ 89.54ರಷ್ಟು ಸ್ಥಾನಗಳು ಹಿರಿಯ ರಾಜಕಾರಣಿಗಳಿಗೇ ಸಿಕ್ಕಿವೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕಿದ್ದರೆ ವ್ಯಕ್ತಿಗೆ ಕನಿಷ್ಠ 25 ವರ್ಷಗಳಾಗಿರಬೇಕು. ಆದರೆ, ಯುವ ಜನರಲ್ಲಿ ರಾಜಕೀಯ ಪ್ರಜ್ಞೆಯು ಈ ವಯೋಮಾನಕ್ಕೆ ಮೊದಲೇ ಮೂಡಿರುತ್ತದೆ (ಮತದಾನದ ವಯಸ್ಸು 18 ವರ್ಷ, ಸ್ಥಳೀಯ ಸಂಸ್ಥೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ). ಆದ್ದರಿಂದ ಈ ಮೇಲ್ಕಂಡ ದತ್ತಾಂಶಗಳ ವಿಶ್ಲೇಷಣೆಯಲ್ಲಿ ರಾಜಕೀಯ ಪ್ರಾತಿನಿಧ್ಯದ ವಯೋಮಾನವನ್ನು 21 ವರ್ಷಗಳಿಂದ ಪ್ರಾರಂಭಿಸಿ, ವಿಧಾನಸಭಾ ಚುನಾವಣಾ ಅಭ್ಯರ್ಥಿಯ ಅರ್ಹತಾ ವಯಸ್ಸಿನ ಅನುಸಾರವಾಗಿ ಗರಿಷ್ಠ 40 ವರ್ಷಗಳಿಗೆ ಸೀಮಿತಗೊಳಿಸಿ ವಿವರಿಸಲಾಗಿದೆ.

ಪಕ್ಷದ ಸಂಘಟನಾತ್ಮಕ ಹುದ್ದೆಗಳ ನೇಮಕಕ್ಕೆ ಹೆಚ್ಚಿನ ಪಕ್ಷಗಳು ಚುನಾವಣೆ ನಡೆಸುವ ಬದಲು ನಾಯಕರೇ ಆಯ್ಕೆ ಮಾಡುತ್ತಾರೆ. ಇದರಿಂದಾಗಿ ಯುವ ಸಮುದಾಯದ ಅವಕಾಶಗಳು ಕ್ಷೀಣಿಸಿವೆ. ಯುವಜನರಿಗೆ ವಿವಿಧ ಹಂತಗಳಲ್ಲಿ ರಾಜಕೀಯ ಸ್ಥಾನ ನೀಡಿಕೆ, ಚುನಾವಣಾ ರಾಜಕಾರಣದಲ್ಲಿ ಪ್ರಾತಿನಿಧ್ಯ ಇತ್ಯಾದಿ ಕಲ್ಪಿಸುವುದು ಪಕ್ಷಗಳು ಮತ್ತು ಅವುಗಳ ಯುವ ಘಟಕಗಳ ಹೊಣೆಗಾರಿಕೆಯಾಗಿದೆ. ಈ ಹೊಣೆಗಾರಿಕೆ ಯಶಸ್ವಿಯಾಗಿ ನಿರ್ವಹಣೆಯಾದರೆ, ಯುವ ಸಮುದಾಯದ ರಾಜಕೀಯ ಅನುಭವವು ಪರಿಪಕ್ವಗೊಳ್ಳಲು ನೆರವಾಗುತ್ತದೆ.

ರಾಜಕಾರಣದಿಂದ ನಿವೃತ್ತಿಗೆ ಒಂದು ನಿಶ್ಚಿತ ವಯಸ್ಸಿನ ನಿಗದಿಯ ಅಗತ್ಯವೂ ಇದೆ. ಹಾಗಾದಾಗ ಯುವ ಜನರಿಗೆ ತನ್ನಿಂತಾನಾಗಿಯೇ ಅವಕಾಶಗಳು ಸೃಷ್ಟಿಯಾಗುತ್ತವೆ. ಹಿರಿಯರನ್ನೊಳಗೊಂಡ ಸಲಹಾ ಸಮಿತಿ ರಚನೆಯಾದರೆ ಯುವ ಜನರಿಗೆ ಸಮರ್ಪಕ ಮಾರ್ಗದರ್ಶನವೂ ದೊರೆತಂತಾಗುತ್ತದೆ. ರಾಜಕೀಯ ಪಕ್ಷಗಳ ಯುವಘಟಕಗಳನ್ನು ತರಬೇತಿ ಮತ್ತು ಅನುಭವಗಳ ರಾಜಕೀಯ ಪ್ರಯೋಗಶಾಲೆಗಳನ್ನಾಗಿ ಮಾರ್ಪಡಿಸುವುದರ ಮೂಲಕ ಯುವ ರಾಜಕಾರಣದ ರಾಜಕೀಯ ಭಾಗವಹಿಸುವಿಕೆ ಎಲ್ಲಾ ಹಂತಗಳಲ್ಲಿ ಗರಿಷ್ಠಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದು. ಇದು ಯುವ ಸಮುದಾಯದ ರಾಜಕೀಯ ಪ್ರಜ್ಞೆ ಮತ್ತು ಹಿತಾಸಕ್ತಿಯನ್ನು ಇಮ್ಮಡಿಗೊಳಿಸಬಹುದು; ಅವರಲ್ಲಿರುವ ಸಾಮಾಜಿಕ ಹಿತಾಸಕ್ತಿಯೊಂದಿಗೆ ರಾಜಕೀಯ ಪ್ರಜ್ಞೆಯೂ ಸೇರಿಕೊಂಡು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಸಾಧ್ಯವಾಗಬಹುದು.

ಲೇಖಕ: ಸಹಾಯಕ ಪ್ರಾಧ್ಯಾಪಕ, ರಾಜ್ಯಶಾಸ್ತ್ರ ವಿಭಾಗ, ಕ್ರಿಸ್ತು ಜಯಂತಿ ಕಾಲೇಜ್ (ಸ್ವಾಯತ್ತ) ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT