ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಅಭಿವೃದ್ಧಿಯ ಬಲೆಯಲ್ಲಿ ಅಳಿವಿನಂಚಿನ ಜೀವಿ

ಶಕ್ತಿಶಾಲಿ ಔದ್ಯೋಗಿಕ ಸಂಸ್ಥೆಗಳು ಮತ್ತು ಎರ್ಲಡ್ಡು ಹಕ್ಕಿಗಳ ನಡುವಿನ ಸೆಣಸಾಟ ನಿರ್ಣಾಯಕ ಹಂತದಲ್ಲಿದೆ

ಅದಾನಿ ಗ್ರೀನ್, ಟಾಟಾ ಪವರ್, ರಿನ್ಯೂ ಪವರ್, ಹೀರೊ ಫ್ಯೂಚರ್ ಎನರ್ಜೀಸ್, ಜೆ.ವಿ. ರಾಜಸ್ಥಾನ್ ಸೋಲಾರ್ ಪವರ್, ಭಾರತದ ರಾಷ್ಟ್ರೀಯ ಸೋಲಾರ್ ಪ್ರತಿಷ್ಠಾನ, ಸೌರಶಕ್ತಿ ಉತ್ಪಾದಕರ ರಾಷ್ಟ್ರೀಯ ಒಕ್ಕೂಟ, ಪವನ ವಿದ್ಯುತ್ ಉತ್ಪಾದಕರ ರಾಷ್ಟ್ರೀಯ ಸಂಘಟನೆ ಮುಂತಾದ ಪ್ರತಿಷ್ಠಿತ, ಶಕ್ತಿಶಾಲಿ ಔದ್ಯೋಗಿಕ ಸಂಸ್ಥೆಗಳೆಲ್ಲ ಒಂದು ಕಡೆ. ಮೂರು ಅಡಿ ಎತ್ತರದ, 15ರಿಂದ 18 ಕಿಲೊಗ್ರಾಂ ತೂಕದ, ಅಳಿವಿನಂಚಿನಲ್ಲಿರುವ ಸುಮಾರು 100 ಎರ್ಲಡ್ಡು ಹಕ್ಕಿಗಳು (ಗ್ರೇಟ್ ಇಂಡಿಯನ್ ಬಸ್ಟರ್ಡ್) ಇನ್ನೊಂದು ಕಡೆ. ಈ ಎರಡರ ನಡುವಿನ ಸೆಣಸಾಟ ಈಗ ನಿರ್ಣಾಯಕ ಹಂತ ತಲುಪಿದೆ.

ಗುಜರಾತ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರಗಳ ಸ್ಥಾಪಿತ ಸಾಮರ್ಥ್ಯ 44.12 ಗಿಗಾವಾಟ್. ಇದರಲ್ಲಿ ನವೀಕರಿಸಬಹುದಾದ ಮೂಲಗಳಿಂದ17.1 ಗಿಗಾವಾಟ್ ಬರುತ್ತದೆ. 2030ರ ವೇಳೆಗೆ ಇದು 17.1ರಿಂದ 60 ಗಿಗಾವಾಟ್‍ಗೆ ಏರುವ ನಿರೀಕ್ಷೆಯಿದೆ. ಈ ಹೆಚ್ಚಳದ ಬಹುಭಾಗ ಬರುವುದು ಗುಜರಾತ್‍ನ ಕಚ್ ಪ್ರದೇಶದಲ್ಲಿ ತಲೆಯೆತ್ತಲಿರುವ ಸ್ಥಾವರಗಳಿಂದ. 72,000 ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಬರಲಿರುವ, ಪ್ರಪಂಚದ ಅತಿದೊಡ್ಡ ನವೀಕರಿಸಬಹುದಾದ ಶಕ್ತಿ ಉದ್ಯಾನಕ್ಕೂ ಕಚ್ ನೆಲೆಯಾಗಲಿದೆ. ರಾಜಸ್ಥಾನದ ಜೈಸಲ್ಮೇರ್ ಮತ್ತು ಬಾರ್ಮೇರ್ ಜಿಲ್ಲೆಗಳಲ್ಲೂ ಈ ಯೋಜನೆಗಳ ಕೆಲಸ ಭರದಿಂದ ಸಾಗಿದೆ. ಉತ್ಪಾದನೆಯಾಗುವ ವಿದ್ಯುತ್ತನ್ನು ಸಾಗಿಸಲು ಬೃಹದಾಕಾರದ ಪೈಲಾನ್‍ಗಳು, ಅಧಿಕ ವೋಲ್ಟೇಜ್ ವಿದ್ಯುತ್ ಪ್ರಸರಣ ತಂತಿಗಳು, ಎತ್ತರದ ಗಾಳಿಯಂತ್ರದ ಸ್ತಂಭಗಳಿಗೆ ಅಳವಡಿಸಿರುವ ಉದ್ದನೆಯ ಅಲಗುಗಳು ಮುಂತಾದವುಗಳನ್ನು ವ್ಯಾಪಕವಾಗಿ ಸ್ಥಾಪಿಸಲಾಗುತ್ತಿದೆ. ಈ ನಡುವೆ ವಿದ್ಯುತ್ ತಂತಿಗಳು, ಪೈಲಾನುಗಳು ಮತ್ತು ಗಾಳಿಯಂತ್ರಗಳಿಗೆ ಡಿಕ್ಕಿ ಹೊಡೆದು ಸಾಯುವ ಹಕ್ಕಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಗುಜರಾತ್‍ನ ಕಚ್ ಜಿಲ್ಲೆಯ ಅಬ್ದಾಸಾ ಪ್ರದೇಶದಲ್ಲಿ ಪ್ರತಿವರ್ಷ ಸುಮಾರು 30,000 ಹಕ್ಕಿಗಳು ಈ ಕಾರಣದಿಂದ ಸಾಯುತ್ತಿವೆ ಎಂದು ವನ್ಯಜೀವಿ ಸಂರಕ್ಷಣಾ ಕ್ಷೇತ್ರದ ಸ್ವಯಂಸೇವಾ ಸಂಸ್ಥೆ ‘ಕಾರ್ಬೆಟ್ ಪ್ರತಿಷ್ಠಾನ’ ವರದಿ ಮಾಡಿದೆ.

ಡೆಹ್ರಾಡೂನ್‍ನ ವೈಲ್ಡ್ ಲೈಫ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಧ್ಯಯನದಂತೆ, ರಾಜಸ್ಥಾನದ ಥಾರ್, ಜೈಸಲ್ಮೇರ್ ಮತ್ತು ಬಾರ್ಮೇರ್ ಪ್ರದೇಶಗಳಲ್ಲಿ ವಾರ್ಷಿಕ ಒಂದು ಲಕ್ಷ ಹಕ್ಕಿಗಳು ಸಾಯುತ್ತಿವೆ. ಇವುಗಳಲ್ಲಿ ಅಳಿವಿನಂಚಿನಲ್ಲಿರುವ ಎರ್ಲಡ್ಡುಗಳೂ ಸೇರಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. 2018ರಲ್ಲಿ ಈ ಹಕ್ಕಿಗಳ ಆವಾಸದಲ್ಲಿ ನಡೆದ ಗಣತಿಯಂತೆ, ಜೈಸಲ್ಮೇರ್ ಜಿಲ್ಲೆಯಲ್ಲಿ 122, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತಲಾ 10 ಹಕ್ಕಿಗಳಿರಬಹುದೆಂಬ ಅಂದಾಜಿತ್ತು. ಈಗ ಈ ಹಕ್ಕಿಗಳ ಸಂಖ್ಯೆ 100ಕ್ಕಿಂತ ಹೆಚ್ಚಿರಲಾರದು ಎಂಬುದು ವಿಜ್ಞಾನಿಗಳ ಊಹೆ.

ಎರ್ಲಡ್ಡು ಹಕ್ಕಿಗಳು ಸಂಪೂರ್ಣವಾಗಿ ಅಳಿದೇ ಹೋಗುವ ಸಾಧ್ಯತೆ ಕಂಡುಬಂದಿದ್ದರಿಂದ ಸ್ಥಳೀಯ ಬೈಷ್ಣೋಯಿ ಸಮುದಾಯ, ಗುಜರಾತ್ ಮತ್ತು ರಾಜಸ್ಥಾನದ ವನ್ಯಜೀವಿ ಸಂಘಟನೆಗಳು, ನಿವೃತ್ತ ಐಎಎಸ್ ಅಧಿಕಾರಿ ಮತ್ತು ವನ್ಯಜೀವಿ ಸಂರಕ್ಷಣಾಸಕ್ತ ರಂಜಿತ್ ಸಿಂಗ್ ಜ್ಹಾಲಾ ಅವರ ನೇತೃತ್ವದಲ್ಲಿ 2019ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದವು. ವಿವರವಾದ ವಿಚಾರಣೆ ನಡೆಸಿದ ಕೋರ್ಟ್‌, 2021ರ ಏಪ್ರಿಲ್‍ನಲ್ಲಿ ಎರ್ಲಡ್ಡುಗಳ ಸಂರಕ್ಷಣೆಗೆ ಸ್ಪಷ್ಟ ನಿರ್ದೇಶನ ನೀಡಿತು.

ಸುಪ್ರೀಂ ಕೋರ್ಟ್‌ನ ಆಜ್ಞೆಯಂತೆ ‘ಎರ್ಲಡ್ಡುಗಳ ಆವಾಸದಲ್ಲಿ ತಾಂತ್ರಿಕವಾಗಿ ಸಾಧ್ಯವಾಗುವ ಎಲ್ಲ ಜಾಗಗಳಲ್ಲಿ ಹೈ ಟೆನ್ಷನ್ ವಿದ್ಯುತ್ ಕೇಬಲ್‍ಗಳನ್ನು ನೆಲದಡಿಯಲ್ಲಿ ಹಾಕಬೇಕು. ಇದು ಯಾವುದೇ ತಾಂತ್ರಿಕ ಕಾರಣಗಳಿಂದ ಅಸಾಧ್ಯವೆನಿಸಿದರೆ ಅಂಥ ಕಾರಣಗಳನ್ನು ನಮೂದಿಸಿ, ವಿವರವಾದ ದಾಖಲೆಗಳೊಡನೆ, ಸುಪ್ರೀಂ ಕೋರ್ಟ್‌ ನೇಮಿಸುವ ವಿಶೇಷ ಪರಿಣತರ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಸಮಿತಿ ಈ ಅರ್ಜಿಗಳನ್ನು ಪರಿಶೀಲಿಸುತ್ತಿರುವ ಸಮಯದಲ್ಲಿ ಎರ್ಲಡ್ಡುಗಳಿಗೆ ಯಾವುದೇ ಹಾನಿಯಾಗಕೂಡದು. ಹೀಗಾಗಿ ಎಲ್ಲ ವಿದ್ಯುತ್ ಉತ್ಪಾದನಾ ಕಂಪನಿಗಳೂ ಈ ಹಕ್ಕಿಗಳ ಆವಾಸದಲ್ಲಿ ಹಾದುಹೋಗುವ ಹೈ ಟೆನ್ಷನ್ ತಂತಿಗಳಲ್ಲಿ, ನಿರ್ದಿಷ್ಟ ಅಂತರಗಳಲ್ಲಿ, ಹಕ್ಕಿಗಳನ್ನು ಮುಂಚಿತವಾಗಿಯೇ ಎಚ್ಚರಿಸಿ ಹಾರಾಟದ ಮಾರ್ಗ ಬದಲಿಸುವಂತೆ ಮಾಡುವ ‘ಬರ್ಡ್‌ ಡೈವರ್ಟರ್ಸ್’ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ನೆಲದಡಿ ಕೇಬಲ್‍ಗಳನ್ನು ಅಳವಡಿಸುವ ಹೆಚ್ಚಿನ ವೆಚ್ಚವನ್ನು ಸರ್ಕಾರದ ಅನುಮತಿ ಪಡೆದು ಬಳಕೆದಾರರಿಗೆ ವರ್ಗಾಯಿಸಬಹುದು. ಎರ್ಲಡ್ಡುಗಳು ಮೊಟ್ಟೆಯಿಡುವ ಪ್ರದೇಶದ ಸುತ್ತ ಈ ಕೂಡಲೇ ಬೇಲಿ ಹಾಕಬೇಕು. ಅಗತ್ಯ ಸಂದರ್ಭಗಳಲ್ಲಿ ಮೊಟ್ಟೆಗಳನ್ನು ಸಂತಾನೋತ್ಪಾದನಾ ಕೇಂದ್ರಕ್ಕೆ ಎಚ್ಚರಿಕೆಯಿಂದ ರವಾನಿಸಬಹುದು. ಈ ಎಲ್ಲ ಕೆಲಸಗಳೂ 2022ರಏಪ್ರಿಲ್ ಒಳಗೆ ಮುಗಿದಿರಬೇಕು’. ಮೂವರು ಪರಿಣತ ಸದಸ್ಯರನ್ನು ಒಳಗೊಂಡ ಸಮಿತಿಯನ್ನೂ ಕೋರ್ಟ್‌ ರಚಿಸಿತು.

ಕೋರ್ಟ್‌ ನಿರ್ದೇಶನದಂತೆ ‘ಗುಜರಾತ್ ಎನರ್ಜಿ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್’ ಎರ್ಲಡ್ಡುಗಳನ್ನು ಸಂರಕ್ಷಿಸಲು ಅದರ ಆವಾಸದಲ್ಲಿರುವ ಕುನತಿಯಾ ಹಳ್ಳಿಯ ಬಳಿ 10 ಕಿ.ಮೀ. ಉದ್ದಕ್ಕೆ 66 ಕಿಲೊವೋಲ್ಟ್ ಕೇಬಲ್‍ಗಳನ್ನು ನೆಲದಡಿ ಹಾಕುವ ಕೆಲಸ ಪ್ರಾರಂಭಿಸಿದೆ. ಈಗಾಗಲೇ ಹಾಕಿರುವ ವಿದ್ಯುತ್ ಪ್ರಸರಣ ತಂತಿಗಳಿಗೆ, ₹ 29.25 ಕೋಟಿ ವೆಚ್ಚದಲ್ಲಿ 18,000 ಬರ್ಡ್ ಡೈವರ್ಟರ್ಸ್‍ಗಳನ್ನು ಅಳವಡಿಸುವ ಕೆಲಸವನ್ನು ಪ್ರಾರಂಭಿಸಿದೆ. ಬೆಳಿಗ್ಗೆ ಸೂರ್ಯನ ಬೆಳಕನ್ನು ಪ್ರತಿಫಲಿಸುವ ಈ ಉಪಕರಣ ರಾತ್ರಿಯಲ್ಲಿ ಮಿಂಚು ಹುಳದಂತೆ ಬೆಳಕು ಬೀರಿ, ಪಕ್ಷಿಗಳನ್ನು ಸುಮಾರು 50 ಮೀಟರ್ ದೂರದಿಂದಲೇ ಎಚ್ಚರಿಸಿ, ಅವು ಹಾರಾಟದ ದಾರಿ ಬದಲಿಸುವಂತೆ ಮಾಡುತ್ತದೆ.

ಸೌರ ಮತ್ತು ವಾಯು ವಿದ್ಯುತ್ ಉತ್ಪಾದನೆಯ ಖಾಸಗಿ ಸಂಸ್ಥೆಗಳಿಗೆ ಕೋರ್ಟ್‌ ನಿರ್ದೇಶನ ನುಂಗಲಾರದ ತುತ್ತಾಗಿದೆ. 2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ 450 ಗಿಗಾವಾಟ್‍ಗಳಷ್ಟು ವಿದ್ಯುತ್ತನ್ನು ಉತ್ಪಾದಿಸುವ ಸರ್ಕಾರದ ಯೋಜನೆಗೆ ತೀವ್ರ ಹಿನ್ನಡೆ ಉಂಟಾಗಲಿದೆ ಎನ್ನುವುದು ಉದ್ಯಮಿಗಳ ಅಭಿಪ್ರಾಯ. ನೆಲದಡಿ ಕೇಬಲ್‍ಗಳನ್ನು ಅಳವಡಿಸಲು ಪ್ರತೀ ಕಿ.ಮೀ.ಗೆ ₹ 12 ಕೋಟಿ ಬೇಕಿದ್ದು, ಯೋಜನೆಯ ವೆಚ್ಚ ಅತಿ ದುಬಾರಿಯಾಗಲಿದೆ ಎಂಬುದು ಅವರ ಅಳಲು.

ನ್ಯಾಯಾಲಯದ ತೀರ್ಪು ರಾಜಸ್ಥಾನದ 78,580 ಚದರ ಕಿ.ಮೀ. ಮತ್ತು ಗುಜರಾತ್‍ನ 2,108 ಚದರ ಕಿ.ಮೀ. ಪ್ರದೇಶದಲ್ಲಿ ನೆಲದಡಿಯಲ್ಲಿ ಹೈ ಟೆನ್ಷನ್ ವಿದ್ಯುತ್ ಕೇಬಲ್‍ಗಳನ್ನು ಹಾಕುವಂತೆ ಸೂಚಿಸಿದೆ. ಆದರೆ ಎರ್ಲಡ್ಡುಗಳು ಕಂಡುಬರುವುದು ಈ ವ್ಯಾಪ್ತಿಯ ಶೇ 1 ಭಾಗದಲ್ಲಿ ಮಾತ್ರ. ಹೀಗಾಗಿ ಈ ಭಾಗಕ್ಕೆ ಮಾತ್ರ ನ್ಯಾಯಾಲಯದ ನಿರ್ದೇಶನ ಅನ್ವಯವಾಗಬೇಕೆಂಬುದು ಉತ್ಪಾದಕರ ಕೋರಿಕೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಮರುಪರಿಶೀಲಿಸಬೇಕೆಂಬ ಅರ್ಜಿಯನ್ನು ಕೇಂದ್ರ ಸರ್ಕಾರ 2021ರ ಡಿಸೆಂಬರ್‌ನಲ್ಲಿ ಸಲ್ಲಿಸಿದೆ. ಈ ಅರ್ಜಿಯನ್ನು ಪರಿಶೀಲಿಸುವ ಮುನ್ನ ಇದುವರೆವಿಗೂ ತನ್ನ ನಿರ್ದೇಶನಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಿರುವ ಕೆಲಸಗಳ ಬಗ್ಗೆ ಜುಲೈ 20ರ ಒಳಗಾಗಿ ವರದಿ ನೀಡುವಂತೆ ಗುಜರಾತ್, ರಾಜಸ್ಥಾನ ಸರ್ಕಾರಗಳಿಗೆ ನ್ಯಾಯಾಲಯ ಸೂಚನೆ ನೀಡಿದೆ.

ಈ ಮಧ್ಯೆ, ನಿರ್ದೇಶನಗಳನ್ನು ಉಲ್ಲಂಘಿಸಿ ಹೊಸದಾಗಿ ತಂತಿಗಳನ್ನು ಎಳೆದಿರುವ, ಡೆಗ್ರೈ ಹುಲ್ಲುಗಾವಲು ಬಳಿ ಹೊಸದಾಗಿ ಸೋಲಾರ್ ಪಾರ್ಕ್ ಅಸ್ತಿತ್ವಕ್ಕೆ ಬಂದಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವನ್ಯಜೀವಿ ಸಂಘಟನೆಗಳು ಅರ್ಜಿ ಸಲ್ಲಿಸಿವೆ. ನೆಲದಡಿಯಲ್ಲಿ ಹೈ ಟೆನ್ಷನ್ ಕೇಬಲ್‍ಗಳನ್ನು ಹಾಕುವುದು ಆರ್ಥಿಕವಾಗಿ, ತಾಂತ್ರಿಕವಾಗಿ ಸಾಧ್ಯವೆಂಬುದನ್ನು ಗುಜರಾತ್ ಎನರ್ಜಿ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಮಾಡಿ ತೋರಿಸಿದೆ. ಅದು ಖಾಸಗಿ ಉತ್ಪಾದಕರಿಗೆ ಮಾದರಿಯಾಗಿ, ಎರ್ಲಡ್ಡುಗಳು ಉಳಿಯಬೇಕೆಂಬುದು ವನ್ಯಜೀವಿ ಸಂಘಟನೆಗಳ ಕೋರಿಕೆ.

ಹಾಗೆ ನೋಡಿದರೆ ಇದು ಎರ್ಲಡ್ಡುಗಳ ಪ್ರಶ್ನೆ ಮಾತ್ರವಲ್ಲ. ಅಬ್ದಾಸಾ ಪ್ರದೇಶದಲ್ಲಿಯೇ ಅಪಾಯದ ಅಂಚಿನಲ್ಲಿರುವ 25 ಪಕ್ಷಿ ಪ್ರಭೇದಗಳಿವೆ. ರಾಣ್ ಆಫ್ ಕಚ್‍ನ ಖಾದಿರ್ ದ್ವೀಪವು ಫ್ಲೆಮಿಂಗೊಗಳಿಗೆ ಹೆಸರುವಾಸಿಯಾದ ತಾಣ. ಇವುಗಳನ್ನು ರಕ್ಷಿಸುವ ಅಂತರರಾಷ್ಟ್ರೀಯ ಒಡಂಬಡಿಕೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಪರಿಸ್ಥಿತಿಯಲ್ಲಿ ಮುಂದಿನ ತಿಂಗಳ 20ರ ವೇಳೆಗೆ, ಸುಪ್ರೀಂ ಕೋರ್ಟ್‌ ನೇಮಿಸಿದ್ದ ಪರಿಣತರ ಸಮಿತಿಯ ವರದಿಯೂ ಬರಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಯಾವ ನಿರ್ದೇಶನಗಳನ್ನು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT