ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔದ್ಯೋಗಿಕ ನಿರುಪಯುಕ್ತತೆ – ಕಾಲೇಜು ಶಿಕ್ಷಣ

ಶೈಕ್ಷಣಿಕ ಆಸಕ್ತಿಗಿಂತ ರಾಜಕಾರಣದ ಲೆಕ್ಕಾಚಾರ ಕ್ರಿಯಾಶೀಲವಾಗಿರುವುದು ದುರಂತ
Last Updated 26 ಡಿಸೆಂಬರ್ 2018, 19:58 IST
ಅಕ್ಷರ ಗಾತ್ರ

ರಾಷ್ಟ್ರದ ಅಭಿವೃದ್ಧಿ ಸೂಚ್ಯಂಕವು ನಿರಂತರವಾಗಿ ಏರುಗತಿಯಲ್ಲಿರಬೇಕು ಮತ್ತು ಶಿಕ್ಷಣ ವ್ಯವಸ್ಥೆ ತನ್ನ ಕಲಿಕಾ ಯೋಜನೆಗಳ ಮೂಲಕ ಈ ಆಶಯವನ್ನು ಬೆಂಬಲಿಸ ಬೇಕು ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿ–2005ರ ಬೋಧೆಯಾಗಿದೆ. ಆದರೆ ನಮ್ಮ ದೇಶದ ಉನ್ನತ ಶಿಕ್ಷಣ ಪಡೆದ ಯುವಕ- ಯುವತಿಯರಲ್ಲಿ ಶೇ 53ರಷ್ಟು ಮಂದಿ ಯಾವುದೇ ಉದ್ಯೋಗಕ್ಕೆ ಅಗತ್ಯವಾದ ಮಾನವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಈಚೆಗೆ ನೀತಿ ಆಯೋಗ ಹೇಳಿದೆ. ಜನಸಂಖ್ಯೆಯಲ್ಲಿ ಶೇ 40ರಷ್ಟು ಯುವ ಸಮುದಾಯ ಇದೆ. ಈ ಮಾನವ ಸಂಪನ್ಮೂಲದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಮಗೆ, ನೀತಿ ಆಯೋಗದ ವರದಿಯಲ್ಲಿ ಉಲ್ಲೇಖವಾಗಿರುವ ಅಂಶಗಳು ಆಘಾತಕಾರಿ. ಜಾಗತೀಕರಣಕ್ಕೆ ತೆರೆದುಕೊಂಡ ನಂತರ ದೇಶದ ಪ್ರಗತಿ ನಾಗಾಲೋಟದಲ್ಲಿದೆ ಎಂದು ನಂಬಿರುವ ಜನಸಮುದಾಯಕ್ಕೆ ನಾಳಿನ ಪ್ರಜೆಗಳು ಹೀಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರುಪಯುಕ್ತವಾದದ್ದು ಹೇಗೆ ಎಂಬ ಪ್ರಶ್ನೆ ಬೇತಾಳನಂತೆ ತಲೆ ಕೆಡಿಸಬಲ್ಲದು. ಅಲ್ಲದೇ ಇದು, ನಮ್ಮಲ್ಲಿ ಜಾರಿಯಲ್ಲಿರುವ ಶಿಕ್ಷಣ ಪದ್ಧತಿಯ ದೋಷಗಳನ್ನು ಎತ್ತಿ ತೋರಿಸಿದೆ.

ರಾಷ್ಟ್ರದ ಅಭಿವೃದ್ಧಿಯ ಚಲನೆಗೆ ಯುವಜನತೆಯ ಕೌಶಲ ನಿರುಪಯುಕ್ತತೆಯು ಅಡ್ಡಿಯಾಗಿದ್ದರೆ, ಈ ಸಾಮಾಜಿಕ ವಾಸ್ತವವನ್ನು ಬದಲಿಸುವುದು ಹೇಗೆ ಎಂಬ ಚಿಂತನೆನಡೆಯಬೇಕಾಗುತ್ತದೆ. ಕಾಲಕಾಲಕ್ಕೆ ನಡೆದ ಅಧ್ಯಯನಗಳಾಗಲೀ ಫಲಿತಗಳಾಗಲೀ ನಮ್ಮ ಆಳುವವರ ಗಮನ ಸೆಳೆಯುವುದು ಸಾಧ್ಯವಿಲ್ಲ ಎಂಬುದಕ್ಕೆ ರಾಜ್ಯದಲ್ಲಿ ಉನ್ನತಶಿಕ್ಷಣ ಇಲಾಖೆಯನ್ನು ನಿರ್ವಹಿಸುತ್ತಿರುವ ವಿಧಾನವೇ ಸಾಕ್ಷಿಯಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದ ಅಂಕಿಅಂಶಗಳನ್ನು ಆಧರಿಸಿದ ಅಭಿವೃದ್ಧಿ ಸೂಚ್ಯಂಕಗಳು, ಉನ್ನತ ಶಿಕ್ಷಣ ಕಾರ್ಯಕ್ರಮಗಳು ಸೊಬಗಿನ ನೋಟವನ್ನು ಕಣ್ಣಮುಂದೆ ಇಡುತ್ತವೆ. ಅದಕ್ಕೆ ತದ್ವಿರುದ್ಧ ಎಂಬಂತೆ, ಕಾಲೇಜು ಶಿಕ್ಷಣಕ್ಕೆ ಬಂದ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗಳ ಗುಣಮಟ್ಟ ಇಳಿಮುಖವಾಗುತ್ತಿದೆ.

ಈ ಇಬ್ಬಗೆಯ ನಿರೂಪಣೆಗಳನ್ನು ಗ್ರಹಿಸುವುದಕ್ಕೆ ಕರ್ನಾಟಕದಲ್ಲಿ ಕಾಲೇಜು ಶಿಕ್ಷಣದಲ್ಲಿ ಕಳೆದ ದಶಕದಲ್ಲಿ ಆದ ಪಲ್ಲಟಗಳನ್ನು ಗಮನಿಸುವುದು ಅವಶ್ಯವಾಗಿದೆ. 2007ರವರೆಗೆ ಕರ್ನಾಟಕದಲ್ಲಿ ಇದ್ದದ್ದು 178 ಪ್ರಥಮ ದರ್ಜೆ ಕಾಲೇಜುಗಳು ಮಾತ್ರ. ಈಗ ಈ ಸಂಖ್ಯೆ 412ಕ್ಕೆ ಏರಿದೆ. ಈ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಇದು ಉನ್ನತ ಶಿಕ್ಷಣಕ್ಕೆ ಕೊಟ್ಟ ಆದ್ಯತೆ ಎಂದು ಸರ್ಕಾರ ಘೋಷಿಸಿಕೊಂಡಿದೆ. ಆದರೆ ಈ ಬೆಳವಣಿಗೆಯಲ್ಲಿ ಶೈಕ್ಷಣಿಕ ಆಸಕ್ತಿಗಿಂತ ರಾಜಕಾರಣದ ಲೆಕ್ಕಾಚಾರ ಕ್ರಿಯಾಶೀಲವಾಗಿದ್ದನ್ನು ಗಮನಿಸಬೇಕು. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಅಲ್ಲಿಯವರಿಗೆ ಇದ್ದದ್ದು ಜಾತಿ ಸಂಘಟನೆಗಳ ಅಥವಾ ಮಠಗಳ ಆಡಳಿತದಲ್ಲಿದ್ದ ಖಾಸಗಿ ಕಾಲೇಜುಗಳು. ಈ ಸಂಸ್ಥೆಗಳು ತಮ್ಮ ರಾಜಕೀಯ ಪ್ರಭಾವಗಳನ್ನು ಬಳಸಿ ತಮ್ಮ ನಗರ, ಪಟ್ಟಣಗಳಲ್ಲಿ ಸರ್ಕಾರಿ ಕಾಲೇಜುಗಳು ಆರಂಭವಾಗದಂತೆ ನೋಡಿಕೊಂಡಿದ್ದವು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

2000ದ ಹೊತ್ತಿಗೆ ಜಾಗತೀಕರಣದ ಫಲಶ್ರುತಿಯ ತರತಮಗಳು ಅನುಭವಕ್ಕೆ ಬರಲಾರಂಭಿಸಿದವು. ಉನ್ನತ ಶಿಕ್ಷಣ ವಲಯಕ್ಕೂ ಖಾಸಗೀಕರಣದ ಬಿಸಿ ನೇರವಾಗಿ ತಟ್ಟಲಾರಂಭಿಸಿತು. ಶಿಕ್ಷಣವನ್ನು ಉದ್ದಿಮೆಯಾಗಿಸಿದ ಕಾರ್ಪೊರೇಟ್ ವಲಯವು ಶಿಕ್ಷಣ ಸಂಸ್ಥೆಗಳು ಸ್ವಯಂ ವರಮಾನರೂಢಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು ಎಂಬ ಸಲಹೆಯನ್ನು ಆಳುವ ಸರ್ಕಾರಗಳಿಗೆ ನೀಡಿತು. ಇದರ ತಕ್ಷಣದ ಪರಿಣಾಮ ಶುಲ್ಕದ ಮೇಲೆ ಬಿತ್ತು.ಎಂಬತ್ತು, ತೊಂಬತ್ತರ ದಶಕಗಳಲ್ಲಿ ₹ 100ರ ಗಡಿ ದಾಟದೇ ಇದ್ದ ಕಾಲೇಜುಗಳ ಪ್ರವೇಶ ಮತ್ತು ಪರೀಕ್ಷಾ ಶುಲ್ಕಗಳು ಇದ್ದಕ್ಕಿದ್ದಂತೆ ₹ 1000ದ ಗಡಿ ದಾಟಿದವು. ಖಾಸಗಿ ಕಾಲೇಜುಗಳಲ್ಲಿ ಈ ಶುಲ್ಕ ನಾಲ್ಕೈದು ಪಟ್ಟು ಜಾಸ್ತಿಯಾಯಿತು. ಅನುದಾನರಹಿತ ಕಾಲೇಜುಗಳ ಶುಲ್ಕಗಳು ಗಗನಮುಖಿಯಾದವು. ಇದರಿಂದ ಸಮಾಜದ ತಳ ವರ್ಗಗಳು ದಿಕ್ಕುಗಾಣದೆ ಜನಪತ್ರಿನಿಧಿಗಳ ಮೇಲೆ ಒತ್ತಡ ಹಾಕಲಾರಂಭಿಸಿದವು. ಕಲಾ ವಿಭಾಗದ ವಿದ್ಯಾರ್ಥಿ ವರ್ಷವೊಂದಕ್ಕೆ ಸರ್ಕಾರಿ ಕಾಲೇಜಿಗೆ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕಗಳ ರೂಪದಲ್ಲಿ ₹ 6000ದಷ್ಟು ವ್ಯಯಿಸಬೇಕಾಯಿತು (ಶೈಕ್ಷಣಿಕ ವರ್ಷದ ಕೊನೆಗೆ ಬಡ ವಿದ್ಯಾರ್ಥಿಗಳಿಗೆ ಈ ಹಣವನ್ನು ಸರ್ಕಾರ ಹಿಂದಿರುಗಿಸುತ್ತದೆ ಎಂಬುದು ಬೇರೆ ಮಾತು). ಇನ್ನು ಖಾಸಗಿ ಕಾಲೇಜುಗಳ ಶುಲ್ಕ ಪ್ರಮಾಣ ಅವರವರ ಊಹೆಗೆ ಬಿಟ್ಟದ್ದು.

ಶುಲ್ಕ ಏರಿಕೆಯು ಗ್ರಾಮಾಂತರ ಪ್ರದೇಶಗಳ ಬಡಕುಟುಂಬಗಳಿಗೆ; ನಗರಗಳ ಕೆಳ ಮಧ್ಯಮ ಹಾಗೂ ತಳವರ್ಗಗಳಿಗೆ ಹೊರೆಯಾಗಿ ಪರಿಣಮಿಸಿತು. ಇಬ್ಬರು ಮಕ್ಕಳನ್ನು ಓದಿಸಬೇಕಾದ ಕುಟುಂಬಗಳು ಒಬ್ಬರನ್ನು ಅನಿವಾರ್ಯವಾಗಿ ಶಿಕ್ಷಣದಿಂದ ಬಿಡಿಸುವ ಮೂಲಕ ಕುಟುಂಬಗಳು ಆರ್ಥಿಕ ಹೊರೆಯನ್ನು ನಿಭಾಯಿಸುವ ಕೆಲಸಕ್ಕೆ ಮುಂದಾದವು. ಇಂತಹ ಸಂದರ್ಭಗಳಲ್ಲಿ ಶಿಕ್ಷಣದಿಂದ ಹೊರಗೆ ಉಳಿಯುವ ಪಾಳಿ ಹೆಣ್ಣುಮಕ್ಕಳಿಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿದ ಸಾರ್ವಜನಿಕ ಒತ್ತಡದ ಫಲವಾಗಿ 2007-2010ರ ನಾಲ್ಕು ವರ್ಷಗಳ ಅವಧಿಯಲ್ಲಿ 250ಕ್ಕೂ ಮಿಗಿಲು ಪದವಿ ಕಾಲೇಜುಗಳನ್ನು ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲೂ ಆರಂಭಿಸಲಾಯಿತು. ಈ ಪ್ರಯೋಗದಿಂದ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣವು ಶೇ 14ರಿಂದ ಶೇ 24ಕ್ಕೆ ಜಿಗಿಯಿತು. ಗ್ರಾಮೀಣ ಭಾಗದಲ್ಲಿ ಉನ್ನತ ಶಿಕ್ಷಣದಿಂದ ಹೊರಗುಳಿಯುತ್ತಿದ್ದ ಬೃಹತ್ ಪ್ರಮಾಣದ ಹೆಣ್ಣುಮಕ್ಕಳು ಉನ್ನತ ಶಿಕ್ಷಣಕ್ಕೆ ಮರಳಿ ಬರುವಂತಾಯಿತು. ಇಂದು ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವವರಲ್ಲಿ ಶೇ 56ರಷ್ಟು ಮಂದಿ ವಿದ್ಯಾರ್ಥಿನಿಯರು. ಹುಡುಗರ ದಾಖಲಾತಿ ಪ್ರಮಾಣ ಶೇ 44ರಷ್ಟು.

ಈ ಅಂಕಿಅಂಶಗಳು ಪ್ರಗತಿಯ ಪ್ರಮಾಣವನ್ನು ಲೆಕ್ಕ ಹಾಕುವುದಕ್ಕೆ ಸಹಾಯಕ್ಕೆ ಬರುತ್ತವೆ. ಆದರೆ ಈ ಕಾಲೇಜುಗಳಲ್ಲಿ ಈ ವಿದ್ಯಾರ್ಥಿಗಳಿಗೆ ದೊರಕುತ್ತಿರುವ ಶಿಕ್ಷಣವಾದರೂ ಎಂಥದ್ದು? ಕಾಲೇಜುಗಳನ್ನು ಆರಂಭಿಸುವ ಉತ್ಸಾಹ ತೋರಿಸಿದ ಸರ್ಕಾರ ನಂತರದಲ್ಲಿ ಆ ಕಾಲೇಜಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವ ಬದ್ಧತೆ ತೋರಿಸಿಲ್ಲ. ಇಂದಿಗೂ ಹತ್ತು ಸಾವಿರಕ್ಕೂ ಮಿಗಿಲು ಅತಿಥಿಉಪನ್ಯಾಸಕರಿಂದ ಕಾಲೇಜುಗಳು ನಡೆಯುತ್ತಿವೆ. ಸರಿಸುಮಾರು 400 ಕಾಲೇಜುಗಳು ಕಳೆದ ಹತ್ತು ವರ್ಷಗಳಿಂದ ಕಾಯಂ ಪ್ರಾಂಶುಪಾಲರಿಲ್ಲದೆ ತಬ್ಬಲಿ ಮಕ್ಕಳಂತಿವೆ.

ಈಗಲೂ ನೂರಾರು ಕಾಲೇಜುಗಳು ಒಂದೆರಡು ರೂಮ್‌ಗಳಲ್ಲಿ, ಜೂನಿಯರ್ ಕಾಲೇಜುಗಳ ಅಥವಾ ಪ್ರೌಢಶಾಲೆಗಳ ಹಂಗಿನಲ್ಲಿ, ಪಾಳಿಗಳಲ್ಲಿ ಕುಂಟುತ್ತಾ ಸಾಗುತ್ತಿವೆ. ಬೆಂಗಳೂರು ನಗರದಲ್ಲಿ ಇರುವ ಯಡಿಯೂರಿನ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು ನೋಡಿದರೆ ಸಾಕು; ಸರ್ಕಾರದ ಅನಾದರಣೆಯ ಮುಖ ಪರಿಚಯವಾಗುವುದು. ಯಾವುದೇ ರೀತಿಯ ಶೈಕ್ಷಣಿಕ ವಾತಾವರಣ ಇಲ್ಲದ ಕಟ್ಟಡಗಳು, ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಜೀವನೋಪಾಯಕ್ಕಾಗಿ ತರಗತಿ ಮುಗಿಸಿ ಓಡುವ ಅತಿಥಿ ಉಪನ್ಯಾಸಕರು, ಉಪಯುಕ್ತ ಪುಸ್ತಕ ಭಂಡಾರಗಳಿಲ್ಲದಗ್ರಂಥಾಲಯಗಳು, ಸೃಜನ ಚಟುವಟಿಕೆಗಳಿಗೆ ಆಸ್ಪದವೇ ಇಲ್ಲದ ಬಯಲು ಸೆರೆಮನೆಗಳಂತಿವೆ ಕೆಲವು ಕಾಲೇಜುಗಳು.

ಉನ್ನತ ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳನ್ನು ನಡೆಸುತ್ತಾ ವಿದಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಹಂಚುವ ಪ್ರಕ್ರಿಯೆ ಎಂಬಂತಾಗಿದೆ. ಶಿಕ್ಷಣ ಪ್ರಕ್ರಿಯೆಯಲ್ಲಿ ಕಲಿಕಾರ್ಥಿಗಳಲ್ಲಿ ಅಂತಸ್ಥವಾಗಿರುವ ಸ್ವತಂತ್ರವಾಗಿ ಗ್ರಹಿಸುವ, ಆಲೋಚಿಸುವ, ಅಭಿವ್ಯಕ್ತಿಸುವ ಸಾಮರ್ಥ್ಯ ಬಲಗೊಳಿಸುವ ವಿಧಾನಗಳು ಹಿಂದೆ ಬಿದ್ದಿವೆ. ರಾಷ್ಟ್ರದ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಳ್ಳುವ ಹೊಣೆ ಹೊತ್ತ ನೀತಿ ಆಯೋಗವು ರಾಷ್ಟ್ರದಲ್ಲಿ ಹಳಿ ತಪ್ಪಿರುವ ಉನ್ನತ ಶಿಕ್ಷಣದ ಗುಣಾತ್ಮಕತೆಯನ್ನು ಕಾಯ್ದುಕೊಳ್ಳಲು ಮುಂದಾಗಬೇಕು. ಕಾರ್ಪೊರೇಟ್ ವಲಯದ ಸಲಹೆಗಳನ್ನು ಬದಿಗಿಟ್ಟು ಶಿಕ್ಷಣ ತಜ್ಞರ ಸಲಹೆಗಳಿಗೆ ಅನುಗುಣವಾಗಿ ಶಿಕ್ಷಣ ಇಲಾಖೆ-ಸಂಸ್ಥೆಗಳನ್ನು ನಡೆಸುವ ಮೂಲಕ ಯುವ ಜನತೆಯ ಉದ್ಯೋಗ ಸಾಮರ್ಥ್ಯವನ್ನು ಗುಣಾತ್ಮಕವಾದ ಶಿಕ್ಷಣದ ಮೂಲಕ ಸಂವರ್ಧಿಸುವ ಕೆಲಸಕ್ಕೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT