ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಹೈಕೋರ್ಟ್‌ಗಳ ಮೇಲೆ ಜಾಮೀನು ಹೊರೆ

‘ಅಪರಾಧ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ತತ್ವ ಎತ್ತಿಹಿಡಿಯುವ ಕೆಲಸ ಆಗಬೇಕು
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಲಿಯಾ ವರ್ಗೀಸ್, ಸ್ಮಿತಾ ಮಠ್

ದೇಶದ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಜಾಮೀನು ಅರ್ಜಿಗಳ ಸಂಖ್ಯೆಯು ಈ ಎಂಟು ವರ್ಷಗಳ ಅವಧಿಯಲ್ಲಿ ಶೇಕಡ 35ರಷ್ಟು ಹೆಚ್ಚಾಗಿದೆ. ಜಾಮೀನು ಕೊಡುವುದು ಸಹಜವಾಗಿರಬೇಕು ಎಂಬುದನ್ನು ಸುಪ್ರೀಂ ಕೋರ್ಟ್‌ ಹತ್ತು ಹಲವು ಬಾರಿ ಹೇಳಿದ್ದರೂ ಜಿಲ್ಲಾ ನ್ಯಾಯಾಲಯಗಳು ಜಾಮೀನು ನಿರಾಕರಿಸುವುದನ್ನು ಸಹಜವಾಗಿಸಿವೆ. ದೇಶದ ಜೈಲುಗಳಲ್ಲಿನ ವಿಚಾರಣಾಧೀನ ಕೈದಿಗಳ ಪ್ರಮಾಣವು 2019ರಲ್ಲಿ ಶೇ 68ರಷ್ಟು ಇದ್ದುದು 2021ರಲ್ಲಿ ಶೇ 77ಕ್ಕೆ ಹೆಚ್ಚಳವಾಗಿದೆ.

ಜಾಮೀನು ನೀಡುವುದರಿಂದ ವಿಚಾರಣಾಧೀನ ಕೈದಿಗಳಿಗೆ ಜೈಲುವಾಸದಿಂದ ತಾತ್ಕಾಲಿಕ ಬಿಡುಗಡೆ ದೊರೆಯುತ್ತದೆ. ಜಾಮೀನು ನೀಡುವುದು ‘ಅಪರಾಧ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ತತ್ವವನ್ನು ಎತ್ತಿಹಿಡಿಯುವ ಕೆಲಸವೂ ಹೌದು. ಇದು ಜೈಲುಗಳ ಮೇಲಿನ ಒತ್ತಡವನ್ನು ತಗ್ಗಿಸುತ್ತದೆ. ಆದರೆ ಜಾಮೀನು ಪ್ರಕರಣಗಳ ವಿಶ್ಲೇಷಣೆ ನಡೆಸಿದರೆ, ದೇಶದ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯಲ್ಲಿನ ದೋಷಗಳು ತೆರೆದುಕೊಳ್ಳುತ್ತವೆ. ದೇಶದಲ್ಲಿ ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ಅತಿಯಾಗಿ ಇರಿಸಿಕೊಳ್ಳುವ ಪದ್ಧತಿ ಬಹುಕಾಲದಿಂದ ಇರುವುದರ ಮೇಲೆ ಬೆಳಕು ಚೆಲ್ಲುತ್ತದೆ. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಲ್ಲಿ ವಿಚಾರಣೆಯ ಹಂತದಲ್ಲಿ ಇರುವ ಎಲ್ಲ ಬಗೆಯ ಪ್ರಕರಣಗಳ ಸಂಖ್ಯೆ ದೊಡ್ಡದಿದೆ. ಇವುಗಳ ಜೊತೆಯಲ್ಲಿ, ಜಾಮೀನು ಪ್ರಕರಣಗಳೂ ಸೇರಿ ನ್ಯಾಯಾಂಗದ ಮೇಲಿನ ಹೊರೆಯು ಇನ್ನಷ್ಟು ಹೆಚ್ಚುತ್ತದೆ.

ಹೈಕೋರ್ಟ್‌ಗಳಲ್ಲಿನ ಜಾಮೀನು ಪ್ರಕರಣಗಳನ್ನು ಪರಿಶೀಲಿಸಿ, ಅವುಗಳ ಇತ್ಯರ್ಥಕ್ಕೆ ಬೇಕಾದ ಸಮಯ ಎಷ್ಟು ಎಂಬುದನ್ನು ಅರಿಯಲು ಈ ಲೇಖಕರು ಪ್ರಯತ್ನಿಸಿದರು. ಸುಪ್ರೀಂ ಕೋರ್ಟ್‌ನ ವಾರ್ಷಿಕ ವರದಿಗಳಲ್ಲಿನ ದತ್ತಾಂಶದ ಪ್ರಕಾರ, 2015–16ರಿಂದ 2019–20ರ ನಡುವಿನ ಅವಧಿಯಲ್ಲಿ ಜಾಮೀನು ಅರ್ಜಿಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳ ಕಂಡುಬಂದಿದೆ. 2019–20ರಿಂದ 2020–21ರ ನಡುವಿನ ಅವಧಿಯಲ್ಲಿ ಅತಿಹೆಚ್ಚಿನ ಪ್ರಮಾಣದ (ಶೇ 18ರಷ್ಟು) ಹೆಚ್ಚಳ ದಾಖಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‌ಸಿಆರ್‌ಬಿ) ಬಂದೀಖಾನೆ ಅಂಕಿ–ಅಂಶಗಳ ಪ್ರಕಾರ, ಇದೇ ಅವಧಿಯಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಕೋವಿಡ್‌–19 ಸಾಂಕ್ರಾಮಿಕವು ದೇಶದಲ್ಲಿ ಹರಡಿದ್ದು ಕೂಡ ಇದೇ ಅವಧಿಯಲ್ಲಿ. ಈ ಸಂದರ್ಭದಲ್ಲಿ ಜೈಲುಗಳ ಮೇಲಿನ ಒತ್ತಡವನ್ನು ತಗ್ಗಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಯಿತು. 2020ರ ಮಾರ್ಚ್‌ನಲ್ಲಿ ಆದೇಶವೊಂದನ್ನು ಹೊರಡಿಸಿದ ಸುಪ್ರೀಂ ಕೋರ್ಟ್‌, ಮಧ್ಯಂತರ ಜಾಮೀನು, ಪೆರೋಲ್ ಬಗ್ಗೆ ಶಿಫಾರಸು ಮಾಡಲು ಉನ್ನತಾಧಿಕಾರ ಸಮಿತಿ ರಚಿಸುವಂತೆ ರಾಜ್ಯಗಳಿಗೆ ಸೂಚಿಸಿತು.

ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ (ಸಿಎಚ್‌ಆರ್‌ಐ) ಸಂಶೋಧನೆಯು ಈ ಕ್ರಮದ ಅ‌ಲ್ಪಾವಧಿ ಪರಿಣಾಮವನ್ನು ತೋರಿಸಿಕೊಟ್ಟಿದೆ. 2020ರ ಏಪ್ರಿಲ್‌ 1ರಿಂದ ಜೂನ್‌ 30ರ ನಡುವೆ ಜೈಲುವಾಸಿಗಳ ಸಂಖ್ಯೆಯು ಶೇ 10.42ರಷ್ಟು ಕಡಿಮೆ ಆಯಿತು. ಆದರೆ, ಬಿಹಾರ, ಜಾರ್ಖಂಡ್ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳು ಕೈದಿಗಳ ಸಂಖ್ಯೆ ಹೆಚ್ಚಿರುವ ಒಂದು ಜೈಲಿನಿಂದ, ಇನ್ನೊಂದು ಜೈಲಿಗೆ ಕೈದಿಗಳನ್ನು ವರ್ಗಾವಣೆ ಮಾಡಿದವು. ಅಂದರೆ ಅವು, ಹೊರೆಯನ್ನು ತಗ್ಗಿಸುವ ಬದಲು, ಅದನ್ನು ಇನ್ನೊಂದೆಡೆ ವರ್ಗಾಯಿಸಿದವು. ಡಿಸೆಂಬರ್‌ ವೇಳೆಗೆ ಪರಿಸ್ಥಿತಿ ತಿರುವುಮುರುವಾಗಿತ್ತು. ಒಂದು ವರ್ಷದ ಹಿಂದಿನ ಅವಧಿಗಿಂತ, ಆಗ ವಿಚಾರಣಾಧೀನ ಕೈದಿಗಳ ಸಂಖ್ಯೆಯು ಹೆಚ್ಚಾಗಿತ್ತು. 2020ರಲ್ಲಿ ಜಾಮೀನು ಪಡೆದ ಕೈದಿಗಳ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 18ರಷ್ಟು ಕಡಿಮೆ ಆಯಿತು ಎಂದು ಎನ್‌ಸಿಆರ್‌ಬಿಯ ಬಂದೀಖಾನೆಗೆ ಸಂಬಂಧಿಸಿದ ಅಂಕಿ–ಅಂಶಗಳು ಹೇಳುತ್ತವೆ.

ಹೈಕೋರ್ಟ್‌ಗಳಲ್ಲಿ ಜಾಮೀನು ಅರ್ಜಿಗಳು ಹೆಚ್ಚುತ್ತಿರುವುದಷ್ಟೇ ಅಲ್ಲ, ಇತರ ಎಲ್ಲ ಪ್ರಕರಣಗಳ ಜೊತೆ ಹೋಲಿಸಿದರೆ ಜಾಮೀನು ಅರ್ಜಿಗಳ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಸಾಂವಿಧಾನಿಕ ಕೋರ್ಟ್‌ಗಳು ತಮ್ಮ ಸಮಯವನ್ನು ಕಾನೂನಿನ ವ್ಯಾಖ್ಯಾನಕ್ಕೆ ಹೆಚ್ಚು ತೊಡಗಿಸಿದರೆ ಚೆನ್ನ. ಆದರೆ, ಜಾಮೀನು ಅರ್ಜಿಗಳ ಕಾರಣದಿಂದಾಗಿ ಅವು ತಮ್ಮ ಸಮಯದಲ್ಲಿ ದೊಡ್ಡ ಭಾಗವನ್ನು ಇದಕ್ಕೆ ಮೀಸಲಾಗಿಸಬೇಕಾಗುತ್ತದೆ. 2021–22ರಲ್ಲಿ ಹಲವು ಹೈಕೋರ್ಟ್‌ಗಳಲ್ಲಿ ಒಟ್ಟು ಪ್ರಕರಣಗಳಲ್ಲಿ ಜಾಮೀನು ಪ್ರಕರಣಗಳ ಸಂಖ್ಯೆಯು ಹೆಚ್ಚಾಯಿತು. ಅದರಲ್ಲೂ ಮುಖ್ಯವಾಗಿ ಪಟ್ನಾ, ಜಾರ್ಖಂಡ್ ಹೈಕೋರ್ಟ್‌ಗಳಲ್ಲಿ ಒಟ್ಟು ಪ್ರಕರಣಗಳಲ್ಲಿ ಕ್ರಮವಾಗಿ ಶೇ 50 ಹಾಗೂ ಶೇ 60ಕ್ಕಿಂತ ಹೆಚ್ಚು ಪ್ರಕರಣಗಳು ಜಾಮೀನಿಗೆ ಸಂಬಂಧಿಸಿದ್ದವು. ಇಂತಹ ಪರಿಸ್ಥಿತಿಯು ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. 

ಪಟ್ನಾ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳ ಹೊರೆಯು ಎದ್ದುಕಾಣುವಂತಿದೆ. ಅಲ್ಲಿ ಎಂಟು ನ್ಯಾಯಪೀಠಗಳ ಪೈಕಿ ಐದು ಪೀಠಗಳು ಜಾಮೀನು ಅರ್ಜಿಗಳ ವಿಚಾರಣೆ ನಡೆಸುತ್ತಿವೆ. ಇದಕ್ಕೆ ಒಂದು ಕಾರಣ ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧ ಕಾನೂನು ಆಗಿರಬಹುದು. 2021ರ ಡಿಸೆಂಬರ್‌ 31ರ ಮಾಹಿತಿ ಪ್ರಕಾರ, ಬಿಹಾರದ ಜೈಲುಗಳಲ್ಲಿನ 17,642 ವಿಚಾರಣಾಧೀನ ಕೈದಿಗಳು ಬಂಧನಕ್ಕೆ ಒಳಗಾಗಿದ್ದು ಅಬಕಾರಿ ಮತ್ತು ಪಾನನಿಷೇಧ ಕಾನೂನುಗಳ ಅಡಿಯಲ್ಲಿ. ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ಅರ್ಜಿಗಳ ಹೊರೆಯನ್ನು ತಗ್ಗಿಸಿಕೊಳ್ಳಲು ಪ್ರತ್ಯೇಕ ಕ್ರಮವೊಂದನ್ನು ಕೈಗೊಂಡಿತು. ಇದನ್ನು ವಕೀಲರು ಆಡುಮಾತಿನಲ್ಲಿ ‘ಜಾಮೀನು ಮೇಳ’ ಎಂದು ಕರೆದರು.

ಜಾಮೀನು ಪ್ರಕರಣಗಳ ಇತ್ಯರ್ಥಕ್ಕೆ ತೆಗೆದುಕೊಂಡ ಸಮಯವನ್ನು ಪರಿಶೀಲಿಸಲಾಯಿತು. 2010ರಿಂದ 2021ರವರೆಗಿನ ಜಾಮೀನು ಅರ್ಜಿಗಳ ದತ್ತಾಂಶವನ್ನು ಪರಿಶೀಲಿಸಲಾಯಿತು. 15 ಹೈಕೋರ್ಟ್‌ಗಳ 9.27 ಲಕ್ಷ ಜಾಮೀನು ಪ್ರಕರಣಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತು. ಸಾಮಾನ್ಯವಾಗಿ ಜಾಮೀನು ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಜಾಮೀನು ಪ್ರಕರಣಗಳಲ್ಲಿ ನ್ಯಾಯಾಧೀಶರು, ಆರೋಪಿಗಳು ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸ ಬೇಕಾಗಿಲ್ಲ. ಹೀಗಿದ್ದರೂ, ಜಾಮೀನು ಅರ್ಜಿಗಳ ವಿಚಾರವಾಗಿ ಆದೇಶ ಹೊರಡಿಸಲು ಹೈಕೋರ್ಟ್‌ಗಳಲ್ಲಿ ಸರಾಸರಿ 23 ದಿನಗಳು ಬೇಕಾಗಿದ್ದವು.

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಇತ್ಯರ್ಥಕ್ಕೆ ಸರಾಸರಿ 156 ದಿನಗಳು ಬೇಕಾಗಿದ್ದವು. ಒಡಿಶಾ ಹೈಕೋರ್ಟ್‌ ಮತ್ತು ಬಾಂಬೆ ಹೈಕೋರ್ಟ್‌ ಕ್ರಮವಾಗಿ ಸರಾಸರಿ 61 ಹಾಗೂ 56 ದಿನಗಳನ್ನು ತೆಗೆದುಕೊಂಡವು. ಈಗ ಇತ್ಯರ್ಥವಾಗಿರುವ ಸರಿಸುಮಾರು ಶೇ 40ರಷ್ಟು ಜಾಮೀನು ಅರ್ಜಿಗಳು ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ಬಾಕಿ ಇದ್ದವು. ದೇಶದ ನ್ಯಾಯಾಲಯಗಳಲ್ಲಿ ಅರ್ಜಿಯೊಂದರ ಇತ್ಯರ್ಥಕ್ಕೆ ಒಂದು ತಿಂಗಳ ಅವಧಿ ಬೇಕಾಗುವುದು ದೊಡ್ಡದೇನೂ ಅಲ್ಲ ಎಂದು ಒಮ್ಮೆ ಅನ್ನಿಸಬಹುದು. ಆದರೆ ವಿಳಂಬವು ವ್ಯಕ್ತಿಗಳ ಸ್ವಾತಂತ್ರ್ಯದ ಮೇಲೆ ಬೀರುವ ಪರಿಣಾಮವನ್ನು ನಾವು ಹಗುರವಾಗಿ ಕಾಣಲು ಆಗದು. 

ಅರ್ಜಿಯ ಇತ್ಯರ್ಥ ಆಗುವವರೆಗೆ ವಿಚಾರಣಾಧೀನ ಕೈದಿ ಜೈಲಿನಲ್ಲಿ ಇರಬೇಕಾಗುತ್ತದೆ. ಜಿಲ್ಲಾ ನ್ಯಾಯಾಲಯಗಳು ಜಾಮೀನು ನಿರಾಕರಿಸಿದ ಕಾರಣಕ್ಕೆ ಇಂತಹ ಪ್ರಕರಣಗಳು ಸಾಮಾನ್ಯವಾಗಿ ಹೈಕೋರ್ಟ್‌ ಮೆಟ್ಟಿಲೇರಿರುತ್ತವೆ. ಅಂದರೆ, ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಕಾಲ ಕಳೆಯುವ ಸಮಯವು ಸಾಮಾನ್ಯವಾಗಿ, ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವುದಕ್ಕೆ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನದಾಗಿರುತ್ತದೆ. ಈ ರೀತಿಯಲ್ಲಿ ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ಇರಿಸುವುದು ‘ಅಪರಾಧ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ತತ್ವಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುವ ಕ್ರಿಯೆ. ಇದು ಆರೋಪಿಗಳ ಜೀವನ ಹಾಗೂ ಅವರ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು.

ಜಾಮೀನು ಅರ್ಜಿಗಳ ಇತ್ಯರ್ಥಪಡಿಸುವಿಕೆಯಲ್ಲಿ ಜಿಲ್ಲಾ ನ್ಯಾಯಾಲಯಗಳ ವಿವೇಚನಾ ಅಧಿಕಾರವನ್ನು ಕಡಿಮೆ ಮಾಡಲು ಮಾರ್ಗಸೂಚಿ ರೂಪಿಸುವ ಗಂಭೀರ ಅಗತ್ಯ ಇದೆ. ಈ ಮಾರ್ಗಸೂಚಿಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮಸೂದೆಯಲ್ಲಿ ಅಳವಡಿಸಬಹುದಿತ್ತು. ಆದರೆ ಈ ವಿಚಾರವಾಗಿ ಮಸೂದೆಯಲ್ಲಿ ಹೆಚ್ಚೇನೂ ಇಲ್ಲ. ವಿಚಾರಣಾಧೀನ ಕೈದಿಗಳನ್ನು ಬಹುದೀರ್ಘ ಅವಧಿಗೆ ಜೈಲಿನಲ್ಲಿ ಇರಿಸುವ ವ್ಯವಸ್ಥೆಯು ನ್ಯಾಯ ಹಾಗೂ ಸಮಾನತೆಯ ತತ್ವದ ಮಹತ್ವವನ್ನು ಕುಗ್ಗಿಸುತ್ತಿರುತ್ತದೆ.

(ಲೇಖನದ ಇಂಗ್ಲಿಷ್ ಆವೃತ್ತಿಯು ‘ದಿ ಪ್ರಿಂಟ್‌’ನಲ್ಲಿ ಪ್ರಕಟವಾಗಿತ್ತು. ಲಿಯಾ ಅವರು ಬೆಂಗಳೂರಿನ ದಕ್ಷ್ ಸಂಸ್ಥೆಯಲ್ಲಿ ಸಂಶೋಧನಾ ನಿರ್ವಾಹಕಿ, ಸ್ಮಿತಾ ಅವರು ದತ್ತಾಂಶ ವಿಭಾಗದ ಮುಖ್ಯಸ್ಥೆ)

ಲಿಯಾ ವರ್ಗೀಸ್

ಲಿಯಾ ವರ್ಗೀಸ್

ಸ್ಮಿತಾ ಮಠ್

ಸ್ಮಿತಾ ಮಠ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT