ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

ಮಕ್ಕಳ 'ಸ್ಕ್ರೀನ್‌ ಟೈಂ'ಗೂ ಆಹಾರ ಸೇವನೆಗೂ ಇರುವ ನಂಟಿನಲ್ಲಿದೆ ಅಪಾಯ
Published 24 ಏಪ್ರಿಲ್ 2024, 19:44 IST
Last Updated 24 ಏಪ್ರಿಲ್ 2024, 19:44 IST
ಅಕ್ಷರ ಗಾತ್ರ

ಸಮಾರಂಭವೊಂದಕ್ಕೆ ಹೋಗಿದ್ದೆ. ಮೂರು ವರ್ಷದ ಪುಟ್ಟ ಮಗುವಿಗೆ ಆ ಮಗುವಿನ ತಾಯಿ ಊಟ ಮಾಡಿಸುವ ಯತ್ನದಲ್ಲಿದ್ದರು. ಮಗು ಊಟ ಮಾಡುವುದಕ್ಕೆ ಹಟ ಮಾಡಲು ಆರಂಭಿಸಿದ್ದೇ ತಡ ತಾಯಿ ಮೊರೆ ಹೋಗಿದ್ದು ಮ್ಯಾಜಿಕ್‌ಗೆ! ಆಕೆ ಲಗುಬಗೆಯಿಂದ ತಮ್ಮ ಮೊಬೈಲ್‍ನಲ್ಲಿ ವಿಡಿಯೊ ಒಂದನ್ನು ಹಾಕಿದರು. ಮಗು ಕಣ್ಣು, ಬಾಯಿ ತೆರೆದು, ಆಹಾರದ ಬಗ್ಗೆ, ಅದರ ರುಚಿ, ಬಿಸಿ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ‘ಕಬಳಿಸಲು’ ಆರಂಭಿಸಿಯೇ ಬಿಟ್ಟಿತು!

ಕಾಗದದ ಜಾಗದಲ್ಲಿ ವಿವಿಧ ಗಾತ್ರದ ‘ತೆರೆ’ಗಳು ಬಂದು ಕುಳಿತಾಗಿದೆ. ಬದಲಾವಣೆ ಅನಿವಾರ್ಯ ಎಂಬಂತೆ ಅದನ್ನು ನಾವು ಒಪ್ಪಿಕೊಂಡೂ ಆಗಿದೆ. ಹಿಂದೆ ಪುಸ್ತಕಗಳಲ್ಲಿ ಒಳ್ಳೆಯ ಅಥವಾ ಕೆಟ್ಟ ಎಂಬ ವರ್ಗೀಕರಣ ಇದ್ದಂತೆ ಡಿಜಿಟಲ್ ಸಾಧನಗಳಲ್ಲಿಯೂ ಅದು ಸಹಜ. ಯಾವುದೇ ವಸ್ತುವಿನ ಉಪಯುಕ್ತತೆ, ಅದರಿಂದ ಉಂಟಾಗುವ ಅಪಾಯಗಳು ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಮೇಲೆಯೇ ನಿರ್ಧಾರವಾಗುತ್ತವೆ ಎಂಬುದನ್ನು ನಾವು ಅರಿತು ಒಪ್ಪಿಕೊಂಡಿದ್ದೇವೆ. ಆದರೆ ಮೊಬೈಲ್ ಮತ್ತು ಟ್ಯಾಬ್‍ಗಳಿಗೂ ಮಕ್ಕಳ ಆಹಾರ ಸೇವನೆಗೂ ಇರುವ ನಂಟಿನ ಹಲವು ಆಯಾಮಗಳನ್ನು ಗಮನಿಸಿದರೆ, ಅಪಾಯ ಮತ್ತು ಅನಾರೋಗ್ಯವೇ ಪ್ರಮುಖವಾಗಿ ತೋರುತ್ತವೆ.

ನಮ್ಮಲ್ಲಿ ಎಷ್ಟು ಜನ ಪ್ರತಿನಿತ್ಯ ಊಟ ಮಾಡುವಾಗ, ತಿಂಡಿ ತಿನ್ನುವಾಗ ಮೊಬೈಲ್ ಅನ್ನು ಬೇರೆ ಕಡೆ ಇಟ್ಟು, ಅದನ್ನು ‘ಅಗಲಿ’, ಊಟದ ಮೇಲೆ ಗಮನವನ್ನು ಕೇಂದ್ರೀಕರಿಸಿ ಆಹಾರ ಸೇವನೆ ಮಾಡುತ್ತೇವೆ? ಹಾಗೆ ಮಾಡದಿರಲು ನಮ್ಮದೇ ಆದ ಕಾರಣಗಳು ಅವೆಷ್ಟೋ! ಬೇರೆ ಸಮಯದಲ್ಲಿ ನೋಡಲಾಗಿಲ್ಲ, ವಾಟ್ಸ್‌ಆ್ಯಪ್ ಚೆಕ್ ಮಾಡಬೇಕು, ಬಹುಮುಖ್ಯವಾದ ಕೆಲಸಕ್ಕಾಗಿ ಮೆಸೇಜ್ ಮಾಡಲೇಬೇಕಾಗಿದೆ, ತುಂಬಾ ಚೆನ್ನಾಗಿರುವ ‘ರೀಲ್ಸ್’ ಎಂದೆಲ್ಲ ಕಾರಣಗಳನ್ನು ಕೊಟ್ಟುಕೊಳ್ಳುತ್ತೇವೆ.

‘ತುರ್ತು ಪರಿಸ್ಥಿತಿ’ ಎಂಬ ಕಾರಣಕ್ಕೆ ಮಾತ್ರ ಊಟದ ಮಧ್ಯೆ ‘ಊಟಕ್ಕೆಂದು ಕುಳಿತಿದ್ದರು. ತುರ್ತು ಕರೆ ಬಂದಿತು, ಹಾಗಾಗಿ ಊಟ ಬಿಟ್ಟು ಮಧ್ಯೆ ಏಳಬೇಕಾಯಿತು’ ಎಂಬ ಸನ್ನಿವೇಶ ಈಗ ತುರ್ತು ಕರೆ ಇಲ್ಲದೆಯೂ ಮತ್ತೊಬ್ಬರೊಂದಿಗೆ ಮಾತನಾಡುತ್ತಲೇ ಊಟ ಮಾಡುವ ಸಾಮಾನ್ಯ ದಿನಚರಿಯಾಗಿ ಬದಲಾಗಿಹೋಗಿದೆ. ಹಿರಿಯರೇ ತಮ್ಮ ಜೀವನಕ್ರಮವನ್ನು ಹೀಗೆ ಬದಲಾಯಿಸಿಕೊಂಡಿರುವಾಗ, ಮಕ್ಕಳು ತೆರೆಗಳ ಮೋಡಿಗೆ ಒಳಗಾಗುವುದು ಅಚ್ಚರಿಯ ಮಾತೇನಲ್ಲ.

ಹಿರಿಯರು ಆಹಾರ ತಿನ್ನುವ ರೀತಿ ಹಾಗೂ ವೈಪರೀತ್ಯಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ, ಅವು ಬೆಳವಣಿಗೆಗೆ ಸಂಬಂಧಿಸಿದವಲ್ಲ. ಮಕ್ಕಳ ವಿಷಯದಲ್ಲಿ ಹಾಗಲ್ಲ. ಅವರದ್ದು ಇನ್ನೂ ಬೆಳೆಯುವ ದೇಹ, ಅರಳುವ ಮನಸ್ಸು. ಆಹಾರದಲ್ಲಿ ಯಾವ ಪೌಷ್ಟಿಕಾಂಶಗಳು ಅವರ ದೇಹ ಸೇರುತ್ತವೆ ಎನ್ನುವ ಅಂಶ ಅವರ ವರ್ತಮಾನದ ಜೊತೆಗೆ ಭವಿಷ್ಯದ ಆರೋಗ್ಯವನ್ನೂ ನಿರ್ಧರಿಸುತ್ತದೆ. ಹೊಸತೊಂದು ಅಧ್ಯಯನವು 5ರಿಂದ 6 ವರ್ಷ ವಯಸ್ಸಿನ ಮಕ್ಕಳು ಮೊಬೈಲ್, ಟ್ಯಾಬ್ ನೋಡುವ ‘ಸ್ಕ್ರೀನ್ ಟೈಂ’, ಅಂದರೆ ಅವರು ತೆರೆಯ ಮುಂದೆ ಕಳೆಯುವ ಸಮಯಕ್ಕೂ ಹಣ್ಣು, ತರಕಾರಿಗಳನ್ನು ಕಡಿಮೆ ತಿನ್ನುತ್ತಾ ಚಿಪ್ಸ್, ಚಾಕೊಲೇಟ್, ಬಿಸ್ಕೆಟ್‌ಗಳನ್ನು ಹೆಚ್ಚಾಗಿ ತಿನ್ನುವುದಕ್ಕೂ ಸಂಬಂಧವಿದೆ ಎನ್ನುತ್ತದೆ. ಬ್ರಿಟಿಷ್ ಹಾರ್ಟ್ ಫೌಂಡೇಷನ್ ಮಾಡಿರುವ ಈ ಅಧ್ಯಯನವು ಇಂದಿನ ಮಕ್ಕಳು ದೊಡ್ಡವರಾದಾಗ ಅವರ ಹೃದಯದ ಆರೋಗ್ಯದ ಸ್ಥಿತಿಗತಿಯನ್ನು ಅಂದಾಜು ಮಾಡುವ ದೃಷ್ಟಿಯಿಂದ ನಡೆದಿದೆ.

ಇದೇ ಅಧ್ಯಯನದಲ್ಲಿ ಮಕ್ಕಳ ತಂದೆ ತಾಯಿಗೂ ಅವರ ಸ್ಕ್ರೀನ್ ಟೈಂ ಮತ್ತು ಆಹಾರ ಸೇವನೆಯ ಕ್ರಮಗಳ ಕುರಿತು ಪ್ರಶ್ನಾವಳಿಗಳನ್ನು ನೀಡಲಾಗಿತ್ತು ಎನ್ನುವುದು ಗಮನಾರ್ಹ. ನಿರೀಕ್ಷೆಯಂತೆ ಅಪ್ಪ-ಅಮ್ಮಂದಿರು ತಮ್ಮ ಊಟದ ಸಮಯದಲ್ಲಿ ಡಿಜಿಟಲ್ ಸಾಧನಗಳನ್ನು ಬಳಸುವುದು ಹೆಚ್ಚಾದಷ್ಟೂ ಮಕ್ಕಳೂ ಅವುಗಳನ್ನು ಬಳಸುತ್ತಲೇ ಊಟ ಮಾಡುವುದು ಹೆಚ್ಚಾಗಿತ್ತು. 5ರಿಂದ 6 ವರ್ಷದ ಶೇಕಡ 79ರಷ್ಟು ಮಕ್ಕಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹಣ್ಣು, ತರಕಾರಿಗಳನ್ನೂ ಹೆಚ್ಚು ಚಿಪ್ಸ್‌ನಂತಹ ಆಹಾರವನ್ನೂ ಸೇವಿಸುತ್ತಿದ್ದುದು ಕಂಡುಬಂತು.

ಇದು ಆಹಾರದಲ್ಲಿ ಯಾವುದನ್ನು ಸೇವಿಸಬೇಕು ಎಂಬ ಬಗೆಗಾದರೆ, ಆಹಾರ ಸೇವನೆಯ ಕ್ರಮಗಳನ್ನೂ ಮನೋವೈಜ್ಞಾನಿಕ ಅಧ್ಯಯನಗಳು ಗಮನಿಸಿವೆ. ನಾವೆಲ್ಲರೂ ಬಹುವಾಗಿ ಚಿಂತಿಸುವ ತೂಕ ಏರುವಿಕೆ– ಬೊಜ್ಜಿನ ಸಮಸ್ಯೆಗೂ ಆಹಾರವನ್ನು ಸೇವಿಸುವಾಗಿನ ನಮ್ಮ ನಡವಳಿಕೆಗೂ ಸಂಬಂಧವಿದೆ. ತಮ್ಮ ಬಾಯೊಳಕ್ಕೆ ಏನು ಹೋಗುತ್ತಿದೆ ಎನ್ನುವುದನ್ನು ಗಮನಿಸದೆ ಪುಸ್ತಕವನ್ನು ಓದುತ್ತಾ, ಟಿ.ವಿ. ನೋಡುತ್ತಾ, ಆಟವಾಡುತ್ತಾ ಊಟ ಮಾಡುವುದು ಮಕ್ಕಳಲ್ಲಿ ಈ ಮೊದಲು ಇದ್ದ ರೂಢಿ. ಇದಕ್ಕೆ ಹೊಸ ಸೇರ್ಪಡೆ ಹಿಂದಿನ ಹತ್ತು ವರ್ಷಗಳಲ್ಲಿ ಬೆಳೆದಿರುವ, ಮೊಬೈಲ್, ಟ್ಯಾಬ್ ನೋಡುತ್ತ ಕುಳಿತು, ಮಲಗಿ ತಿನ್ನುವ ಅಭ್ಯಾಸ. ಈ ಹಿಂದೆ ರೂಢಿಯಾಗಿದ್ದ ಟಿ.ವಿ., ಪುಸ್ತಕ, ಆಟಗಳೇ ಪರವಾಗಿರಲಿಲ್ಲ ಅನ್ನುವಷ್ಟರ ಮಟ್ಟಿಗೆ ಮೊಬೈಲ್ ವ್ಯಸನ!

ನಾವು ಊಟ ಮಾಡುವ ಬಗೆಗೇ ನಮ್ಮ ಗಮನವನ್ನು ಕೇಂದ್ರೀಕರಿಸಿ ತಿನ್ನುವಾಗ, ಮೆದುಳು ತನ್ನ ಪ್ರಚೋದನಾ ಕೇಂದ್ರಗಳನ್ನು ತಿನ್ನುವುದರ ಕಡೆಗೇ ತಿರುಗಿಸುತ್ತದೆ. ತಿಂದ ತೃಪ್ತಿ, ಆಹಾರದ ರುಚಿ, ‘ಇಷ್ಟು ಸಾಕು’ ಎಂಬ ಭಾವ ಸುಲಭವಾಗಿ ನಮ್ಮ ಅರಿವಿಗೆ ಬರುತ್ತವೆ. ಅತಿ ತಿನ್ನುವಿಕೆಯನ್ನು ಇವು ತಡೆಯುತ್ತವೆ. ಆಹಾರವನ್ನು ಮಕ್ಕಳು ಚೆನ್ನಾಗಿ ಅಗಿಯುವುದರಿಂದ, ಜೀರ್ಣಕ್ರಿಯೆ ಸುಗಮವಾಗುತ್ತದೆ. ಮಕ್ಕಳಲ್ಲಿ ಇಂದು ಸಮಸ್ಯೆಯಾಗುತ್ತಿರುವ ಬೊಜ್ಜಿನ ಸಾಧ್ಯತೆ ಗಮನಾರ್ಹವಾಗಿ ಇಳಿಯುತ್ತದೆ. ಮಕ್ಕಳು ಅಡುಗೆ ಮನೆ, ಊಟದ ಕೋಣೆಗಳಲ್ಲಿ ಹಿರಿಯರೊಂದಿಗೆ ಕುಳಿತು ಊಟ ಮಾಡುವಾಗ ಸಹಜವಾಗಿ ಅಡುಗೆಗೆ ಸಂಬಂಧಿಸಿದ ಹಲವು ಸಂಗತಿಗಳನ್ನು ಗಮನಿಸುತ್ತಾರೆ. ಇದರಿಂದ ಅಡುಗೆ ಮಾಡುವ ಕ್ರಿಯೆಯ ಬಗ್ಗೆ ಗೌರವ, ತಾನೂ ಪ್ರಯೋಗ ಮಾಡಿ ನೋಡಬೇಕೆಂಬ ಹಂಬಲ ಕ್ರಮೇಣ ಸಾಧ್ಯವಾಗುತ್ತವೆ.

ಅಪ್ಪ ಅಮ್ಮ ಗಮನಿಸಲೇಬೇಕಾದ ಸಂಗತಿಯೆಂದರೆ, ಮಕ್ಕಳು ಊಟ ಮಾಡಲೆಂಬ ಸದುದ್ದೇಶದಿಂದ ಊಟದ ಜೊತೆಗೆ ಟ್ಯಾಬ್, ಮೊಬೈಲ್‍ಗಳನ್ನು ಅವರು ಮಕ್ಕಳ ಮುಂದೆ ಹಿಡಿಯಲಾರಂಭಿಸಿದರೂ, ಕ್ರಮೇಣ ಮಕ್ಕಳಿಗೆ ಅದು ಸ್ಕ್ರೀನ್ ಟೈಮ್‌ಗಾಗಿ ಊಟವೇ ವಿನಾ ಊಟಕ್ಕಾಗಿ ಸ್ಕ್ರೀನ್ ಟೈಮ್‌ ಅಲ್ಲ ಎಂಬಂತೆ ರೂಢಿಯಾಗಿಬಿಡುತ್ತದೆ. ಹಾಗಾಗಿ ಊಟ ಮಾಡುವ ಪ್ರಕ್ರಿಯೆಗೂ ಸ್ಕ್ರೀನ್ ಟೈಮ್‌ಗೂ ಇಂತಹ ಸಂಬಂಧ ಉಂಟಾಗುವುದನ್ನು ತಡೆಯುವುದು ಮಹತ್ವದ್ದು. ಒಂದೊಮ್ಮೆ ಕೆಲಸದ ಒತ್ತಡದಿಂದ ಹಾಗೆ ಮಾಡುತ್ತಿದ್ದರೂ, ಅದನ್ನು ಆದಷ್ಟು ಕಡಿಮೆ ಅಪಾಯಕಾರಿಯಾಗುವಂತೆ ಮಾಡಬಹುದು.

ರಾತ್ರಿಯ ಊಟವನ್ನು ಎಲ್ಲರೂ ಟಿ.ವಿ. ನೋಡುತ್ತಲೇ ಒಟ್ಟಿಗೆ ಕುಳಿತು ಮಾಡುವುದು, ಕಡ್ಡಾಯವಾಗಿ 20-25 ನಿಮಿಷಗಳ ಸಮಯದಲ್ಲಿ ಎಲ್ಲರೂ ಊಟ ಮುಗಿಸುವುದು, ಅದರೊಂದಿಗೆ ಟಿ.ವಿ. ನೋಡುವುದನ್ನೂ ಮುಗಿಸುವುದು, ಊಟದ ಜೊತೆಗೆ ಟಿ.ವಿ. ನೋಡಲೇಬೇಕೆಂದರೆ, ಹಣ್ಣು, ತರಕಾರಿಗಳನ್ನೂ ಕಡ್ಡಾಯವಾಗಿ ತಿನ್ನಬೇಕು, ಕುರುಕಲು ತಿನ್ನುವಂತಿಲ್ಲ ಎಂಬ ನಿಯಮ ರೂಢಿಸಿಕೊಳ್ಳುವುದು ಉಪಯುಕ್ತ.

ಆಹಾರ-ತೆರೆಗಳ ನಡುವೆ ಇರುವ ನಂಟಿನ ಮತ್ತೊಂದು ಆಯಾಮವೆಂದರೆ, ಅದು ದೈಹಿಕ ವ್ಯಾಯಾಮ, ಚಟುವಟಿಕೆಯಿಂದ ಓಡಾಡುವುದು, ಆಟವಾಡುವುದನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಹಸಿವನ್ನು ಕೊಲ್ಲುವುದು. ಇದು, ರುಚಿಯಿಂದ, ಆಸಕ್ತಿಯಿಂದ ಆಹಾರವನ್ನು ಸವಿಯುವುದರ ಬದಲು, ಜಂಕ್ ಆಹಾರದ ವ್ಯಸನವನ್ನು ಮತ್ತಷ್ಟು ಪ್ರಚೋದಿಸುತ್ತದೆ. ಮಿದುಳಿನ ಕ್ರಿಯಾಶೀಲತೆಯನ್ನೂ ಇಳಿಸುತ್ತದೆ.

ಮಕ್ಕಳಿಗೆ ಏನನ್ನು ಹೇಗೆ ತಿನ್ನಿಸುತ್ತೇವೆ, ಅವರೇ ತಿನ್ನುವಂತೆ ಹೇಗೆ ಪ್ರಚೋದಿಸುತ್ತೇವೆ ಎನ್ನುವುದು ಹಿರಿಯರಾದ ನಮ್ಮದೇ ಗುರುತರ ಹೊಣೆ ಎಂಬುದನ್ನು ನಾವು ಅರಿಯಬೇಕಾಗಿದೆ. ಮೊದಲಿಗೆ ನಾವು ಪಾಲಿಸಿ, ಮಕ್ಕಳೂ ಅದನ್ನು ಅನುಸರಿಸುವಂತೆ ಮಾಡುವತ್ತ ಸಾಗಬೇಕಾಗಿದೆ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT