ಪಾಕಿಸ್ತಾನ ಮತ್ತು ಅದರ ವಿಭಜನೆಯ ಕುರಿತು ಆಲೋಚಿಸುವಾಗ, ಬಹುತೇಕ ಜನರಿಗೆ 1971ರ ಯುದ್ಧ ನೆನಪಾಗುತ್ತದೆ. ಆ ವರ್ಷ ಪಾಕಿಸ್ತಾನವನ್ನು ವಿಭಜಿಸಿ, ಪ್ರತ್ಯೇಕ ಸ್ವತಂತ್ರ ರಾಷ್ಟ್ರವಾದ ಬಾಂಗ್ಲಾದೇಶದ ಉಗಮವಾಗಿತ್ತು. ಆದರೆ, ಈಗ ಪಾಕಿಸ್ತಾನ ಬೇರೆ ರೀತಿಯ ವಿಭಜನೆಯ ಕುರಿತು ಮಾತನಾಡುತ್ತಿದ್ದು, ಈ ಬಾರಿ ಪಾಕಿಸ್ತಾನದ ಸರ್ಕಾರವೇ ವಿಭಜನೆಗೆ ಒತ್ತು ನೀಡುತ್ತಿದೆ!

ಡಿಸೆಂಬರ್ 7ರಂದು ಪಾಕಿಸ್ತಾನದ ಕೇಂದ್ರ ಸಚಿವರಾದ ಅಬ್ದುಲ್ ಅಲೀಂ ಖಾನ್ ಅವರು ಪಾಕಿಸ್ತಾನ ಖಂಡಿತವಾಗಿಯೂ ಹೊಸದಾದ, ಸಣ್ಣದಾದ ಪ್ರಾಂತ್ಯಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ. ಈ ರೀತಿ ಪ್ರಾಂತ್ಯಗಳನ್ನು ಸಣ್ಣದಾಗಿಸುವುದರಿಂದ, ಆಡಳಿತ ಮತ್ತು ನೆರವು ಎಲ್ಲ ಪ್ರದೇಶಗಳ ಜನರಿಗೆ ಸುಲಭವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತದೆ ಎಂದು ಅಲೀಂ ಖಾನ್ ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಬಹಳಷ್ಟು ತಜ್ಞರು ಈ ಕ್ರಮದ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಇದರಿಂದ ಪಾಕಿಸ್ತಾನಕ್ಕೆ ಆಡಳಿತಾತ್ಮಕವಾಗಿ ಸಹಾಯವಾಗುವ ಬದಲು, ಇನ್ನೂ ದೊಡ್ಡ ತೊಂದರೆಗಳೇ ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ಪ್ರಾಂತೀಯ ವ್ಯವಸ್ಥೆ ಹೇಗಿದೆ?

ಮೊದಲಿಗೆ ನಾವು ಪಾಕಿಸ್ತಾನದ ಪ್ರಾಂತೀಯ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ. 1947ರಲ್ಲಿ ಪಾಕಿಸ್ತಾನ ಸ್ವತಂತ್ರವಾದಾಗ, ಅದು ಐದು ಪ್ರಾಂತ್ಯಗಳನ್ನು ಹೊಂದಿತ್ತು. ಅವೆಂದರೆ: ಪೂರ್ವ ಬಂಗಾಳ, ಪಶ್ಚಿಮ ಪಂಜಾಬ್, ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯ, ಮತ್ತು ಬಲೂಚಿಸ್ತಾನ. 1971ರ ಭೀಕರ ಯುದ್ಧದ ಬಳಿಕ, ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿ ಹೊರಹೊಮ್ಮಿತು. ಪಶ್ಚಿಮ ಪಂಜಾಬ್ ಹೆಸರನ್ನು ಪಂಜಾಬ್ ಎಂದಷ್ಟೇ ಕರೆಯಲಾಯಿತು. ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯವನ್ನು ಖೈಬರ್ ಪಖ್ತೂನ್ಖ್ವಾ ಎಂದು ಮರು ನಾಮಕರಣ ಮಾಡಲಾಯಿತು. ಸಿಂಧ್ ಮತ್ತು ಬಲೂಚಿಸ್ತಾನಗಳ ಹೆಸರುಗಳು ಮಾತ್ರ ಹಾಗೇ ಉಳಿದವು. ಹೀಗಾಗಿ, ಈಗ ಪಾಕಿಸ್ತಾನದ ಬಳಿ ನಾಲ್ಕು ಪ್ರಾಂತ್ಯಗಳಿವೆ. ಪಾಕಿಸ್ತಾನ ಸರ್ಕಾರ ಈ ನಾಲ್ಕು ಪ್ರಾಂತ್ಯಗಳನ್ನು ವಿಭಜಿಸಿ, ಪ್ರತಿಯೊಂದು ಪ್ರಾಂತ್ಯವನ್ನೂ ಸಣ್ಣದಾದ ಮೂರು ಹೊಸ ಪ್ರಾಂತ್ಯಗಳಾಗಿ ರೂಪಿಸುವ ಯೋಜನೆ ಹಾಕಿಕೊಂಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಈಗಿರುವ ನಾಲ್ಕು ಪ್ರಾಂತ್ಯಗಳ ಬದಲಾಗಿ ಹನ್ನೆರಡು ಪ್ರಾಂತ್ಯಗಳು ನಿರ್ಮಾಣಗೊಳ್ಳಲಿವೆ.

ಪಾಕಿಸ್ತಾನದ ನೆರೆ ರಾಷ್ಟ್ರಗಳು ಬಹಳಷ್ಟು ಸಣ್ಣದಾದ ಪ್ರಾಂತ್ಯಗಳನ್ನು ಹೊಂದಿದ್ದು, ಪಾಕಿಸ್ತಾನವೂ ಈ ಕ್ರಮವನ್ನು ಅನುಸರಿಸಬೇಕು ಎಂದಿದ್ದಾರೆ. ಅಲೀಂ ಖಾನ್ ಅವರ ರಾಜಕೀಯ ಪಕ್ಷವಾದ ಇಶ್ತೆಕಾಮ್ ಇ ಪಾಕಿಸ್ತಾನ್ ಪಾರ್ಟಿ (ಪಾಕಿಸ್ತಾನ ಸ್ಥಿರತಾ ಪಕ್ಷ ಎಂದರ್ಥ) ಪ್ರಧಾನಿ ಶೆಹಬಾಜ್ ಶರೀಫ್ ಸರ್ಕಾರದ ಭಾಗವಾಗಿದ್ದು, ಅಲೀಂ ಖಾನ್ ಯೋಜನೆಗೆ ಬೆಂಬಲ ನೀಡುತ್ತಿದೆ. ಮುತ್ತಹಿದಾ ಕ್ವಾಮಿ ಮೂವ್ಮೆಂಟ್ ಪಾಕಿಸ್ತಾನ್ (ಸಂಘಟಿತ ರಾಷ್ಟ್ರೀಯ ಚಳವಳಿ – ಪಾಕಿಸ್ತಾನ ಎಂಬ ಅರ್ಥ) ಎಂಬ ಸಿಂಧ್ ಪ್ರಾಂತ್ಯದ ಮೂಲದ ಇನ್ನೊಂದು ಪಕ್ಷವೂ ಹೊಸ ಪ್ರಾಂತ್ಯಗಳನ್ನು ನಿರ್ಮಿಸುವುದಕ್ಕೆ ಬೆಂಬಲ ಸೂಚಿಸಿದೆ. ಸಾಂವಿಧಾನಿಕ ತಿದ್ದುಪಡಿಯ ಮೂಲಕ ಈ ಕ್ರಮ ಕೈಗೊಳ್ಳಲು ಏನೇನು ಮಾಡಬಹುದೋ, ಅದೆಲ್ಲವನ್ನೂ ತಾನು ಪ್ರಯತ್ನಿಸುವುದಾಗಿ ಪಕ್ಷ ಹೇಳಿಕೊಂಡಿದೆ.

ಇಲ್ಲಿಂದ ವಿಚಾರಗಳು ಹೆಚ್ಚು ಆಸಕ್ತಿಕರವಾಗುತ್ತವೆ. ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಶೆಹಬಾಜ್ ಶರೀಫ್ ಸರ್ಕಾರದಲ್ಲಿ ಅಲೀಂ ಖಾನ್ ಪಕ್ಷಕ್ಕಿಂತಲೂ ದೊಡ್ಡ ಭಾಗ ಹೊಂದಿದ್ದು, ಇದು ಸಿಂಧ್ ಪ್ರಾಂತ್ಯದ ವಿಭಜನೆಗೆ ಸಂಪೂರ್ಣ ವಿರುದ್ಧವಿದೆ. ನವೆಂಬರ್ ತಿಂಗಳಲ್ಲಿ, ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ತಮ್ಮ ಪ್ರಾಂತ್ಯವನ್ನು ವಿಭಜಿಸುವ ಯಾವುದೇ ಯೋಜನೆಯನ್ನೂ ತಮ್ಮ ಪಕ್ಷ ಒಪ್ಪಲು ಸಿದ್ಧವಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ವಿಭಜನಾ ಯೋಜನೆಯ ಕುರಿತು ಸರ್ಕಾರದೊಳಗೇ ಸಹಮತವಿಲ್ಲ ಎನ್ನುವುದನ್ನು ಈ ಬೆಳವಣಿಗೆಗಳು ಸಾಬೀತುಪಡಿಸಿವೆ.

ಹಾಗೆಂದು ಪಾಕಿಸ್ತಾನದ ಪ್ರಾಂತ್ಯಗಳನ್ನು ವಿಭಜಿಸಿ, ಇನ್ನಷ್ಟು ಸಣ್ಣದಾದ ಪ್ರಾಂತ್ಯಗಳನ್ನು ನಿರ್ಮಿಸುವ ಕುರಿತು ಚರ್ಚೆಯಾಗುತ್ತಿರುವುದು ಇದೇ ಮೊದಲ ಬಾರಿಯಲ್ಲ. ಹಲವಾರು ವರ್ಷಗಳ ಕಾಲ ಈ ವಿಚಾರದ ಬಗ್ಗೆ ಸಮಾಲೋಚನೆಗಳು ನಡೆದಿವೆ. ಆದರೆ, ಈ ಬಾರಿ ಚರ್ಚೆ ಯಾಕೋ ಹೆಚ್ಚು ಗಂಭೀರವಾಗಿ ನಡೆಯುತ್ತಿರುವಂತೆ ಕಾಣುತ್ತಿದೆ. ಪಾಕಿಸ್ತಾನಿ ಚಿಂತಕರು, ರಾಜಕೀಯ ಪಕ್ಷಗಳು ಸಕ್ರಿಯವಾಗಿ ಟಿ.ವಿ. ಚರ್ಚೆಯಲ್ಲಿ ಭಾಗವಹಿಸುತ್ತಿದ್ದು, ಪತ್ರಿಕೆಗಳಲ್ಲೂ ಈ ಕುರಿತು ಬರೆಯುತ್ತಿದ್ದಾರೆ.

ಹೀಗಿರುವಾಗ, ತಜ್ಞರು ಏಕೆ ಪ್ರಾಂತೀಯ ವಿಘಟನೆಯ ಕುರಿತು ಆತಂಕ ಹೊಂದಿದ್ದಾರೆ? ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಮತ್ತು ಮಾಜಿ ಉನ್ನತ ಪೊಲೀಸ್ ಅಧಿಕಾರಿಯಾದ ಸೈಯದ್ ಅಖ್ತರ್ ಅಲಿ ಷಾ ಅವರು ಪಾಕಿಸ್ತಾನ ಮೊದಲು ತನ್ನ ಇತಿಹಾಸದಲ್ಲಿ ಸಾಕಷ್ಟು ವಿವಿಧ ಆಡಳಿತ ಪ್ರಯೋಗಗಳನ್ನು ನಡೆಸಿದೆ ಎಂದಿದ್ದಾರೆ. ವಿಭಿನ್ನ ಆಡಳಿತ ವ್ಯವಸ್ಥೆಗಳಿಂದ, ವಿವಿಧ ಸುಧಾರಣೆಗಳ ತನಕ ಪಾಕಿಸ್ತಾನ ಪ್ರಯತ್ನ ನಡೆಸಿದ್ದರೂ, ಅಲ್ಲಿನ ಸಮಸ್ಯೆಗಳು ಯಾವುದಕ್ಕೂ ನೇರ ಪರಿಹಾರ ಸಿಗದ ಕಾರಣದಿಂದ ಅವ್ಯಾವುವೂ ಸಫಲವಾಗಿಲ್ಲ ಎಂದು ಅಖ್ತರ್ ಅಲಿ ಷಾ ಹೇಳಿದ್ದಾರೆ. ಅವರ ಪ್ರಕಾರ, ಪಾಕಿಸ್ತಾನದ ನಿಜವಾದ ಸಮಸ್ಯೆಗಳೆಂದರೆ ದುರ್ಬಲ ಸಂಸ್ಥೆಗಳು, ಕಾನೂನು ಜಾರಿಯಲ್ಲಿ ಅಸಮಾನತೆ, ದುರ್ಬಲವಾದ ಸ್ಥಳೀಯ ಆಡಳಿತ ಮತ್ತು ಹೊಣೆಗಾರಿಕೆಯ ಕೊರತೆ. ಸುಮ್ಮನೆ ಕುಳಿತು ಹೊಸ ಪ್ರಾಂತ್ಯವಾರು ರಚನೆಗಳನ್ನು ಕೈಗೊಂಡರೆ, ಅದರಿಂದ ಪಾಕಿಸ್ತಾನ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವೇ ಇಲ್ಲ.

ಇದನ್ನು ಒಂದು ಉದಾಹರಣೆಯೊಡನೆ ಗಮನಿಸೋಣ...

ನಿಮ್ಮ ಮನೆಯ ತಳಪಾಯ ದುರ್ಬಲವಾಗಿದ್ದು, ಪೈಪ್ಗಳಲ್ಲಿ ಸೋರಿಕೆ ಕಾಣಿಸಿಕೊಂಡಿದೆ ಎಂದುಕೊಳ್ಳಿ. ಇದಕ್ಕೆ ಪರಿಹಾರ ನೀಡೋಣ ಎಂದು ಮನೆಯ ಕೋಣೆಗಳಿಗೆ ಹೊಸ ಬಣ್ಣ ಬಳಿದರೆ ಅದರಿಂದ ನಿಜವಾದ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ? ಪರಿಹಾರ ಬೇಕಾದರೆ, ಮೊದಲು ನೀವು ಮನೆಯ ತಳಪಾಯ ಮತ್ತು ಸೋರುತ್ತಿರುವ ಪೈಪ್ಗಳನ್ನು ಸರಿಪಡಿಸಿಕೊಳ್ಳಬೇಕು. ಅದೇ ರೀತಿ ಪಾಕಿಸ್ತಾನದ ಆಡಳಿತ ಸಮಸ್ಯೆಗಳು ಅದರ ಪ್ರಾಂತ್ಯದ ಗಾತ್ರ ಮತ್ತು ಸಂಖ್ಯೆಯನ್ನು ಮೀರಿವೆ.

ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಲೆಜಿಸ್ಲೇಟಿವ್ ಡೆವಲಪ್ಮೆಂಟ್ ಆಂಡ್ ಟ್ರಾನ್ಸ್ಪರೆನ್ಸಿ ಎಂಬ ಪಾಕಿಸ್ತಾನಿ ಥಿಂಕ್ ಟ್ಯಾಂಕ್ ಮುಖ್ಯಸ್ಥರಾದ ಅಹ್ಮದ್ ಬಿಲಾಲ್ ಮೆಹಬೂಬ್ ಅವರು ಈ ದೃಷ್ಟಿಕೋನಕ್ಕೆ ಸಹಮತಿ ಸೂಚಿಸಿದ್ದಾರೆ. ಪಾಕಿಸ್ತಾನಕ್ಕೆ ಈಗ ಹೊಸ ಪ್ರಾಂತ್ಯಗಳನ್ನು ಸೃಷ್ಟಿಸುವುದು ಹೆಚ್ಚು ವೆಚ್ಚದಾಯಕವಾಗಿದ್ದು, ಅತ್ಯಂತ ಸಂಕೀರ್ಣ ಕಾರ್ಯವಾಗಲಿದೆ. ಈ ನಡೆ ರಾಜಕೀಯವಾಗಿಯೂ ಅಪಾಯಕಾರಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಪಾಕಿಸ್ತಾನದ ಪ್ರಾಂತ್ಯಗಳು ಬಹಳಷ್ಟು ದೊಡ್ಡದಾಗಿರುವುದು ಸಮಸ್ಯೆಯಲ್ಲ ಎಂದಿರುವ ಮೆಹಬೂಬ್, ಅಲ್ಲಿನ ಸ್ಥಳೀಯ ಆಡಳಿತಕ್ಕೆ ಸರಿಯಾಗಿ ಆಡಳಿತ ನಡೆಸಲು ಸಾಕಷ್ಟು ಅಧಿಕಾರ ಇಲ್ಲದಿರುವುದೇ ಸಮಸ್ಯೆ ಎಂದಿದ್ದಾರೆ. ಪಾಕಿಸ್ತಾನದ ಸಂವಿಧಾನವೂ ಸಹ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಿ, ಅವುಗಳನ್ನು ಸಬಲೀಕರಣಗೊಳಿಸಬೇಕು ಎಂದಿದೆ. ಆದರೆ, ಈ ಹೆಜ್ಜೆಯನ್ನು ಇಲ್ಲಿಯತನಕ ಪರಿಣಾಮಕಾರಿಯಾಗಿ ಇಡಲಾಗಿಲ್ಲ.

ಇದರೊಡನೆ, ಕ್ರಮ ಕೈಗೊಳ್ಳುವ ಸಮಯದ ಕುರಿತಾದ ಸವಾಲೂ ದೊಡ್ಡದಾಗಿದೆ. ಪಾಕಿಸ್ತಾನ ಈಗಾಗಲೇ ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯಗಳಲ್ಲಿ ಭಾರೀ ಅಶಾಂತಿ ಎದುರಿಸುತ್ತಿದ್ದು, ಈ ಪ್ರದೇಶಗಳು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಾ, ಪಾಕಿಸ್ತಾನದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿವೆ. ಈ ಸಮಯದಲ್ಲಿ ವಿಭಜನೆಯ ಪ್ರಯತ್ನ ಪಾಕಿಸ್ತಾನಕ್ಕೆ ಅಪಾಯಕಾರಿಯಾಗಿದೆ. ಈಗಾಗಲೇ ವಿವಿಧ ಪ್ರಾಂತ್ಯಗಳು ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಅವುಗಳನ್ನು ವಿಭಜಿಸಲು ಹೊರಟರೆ ಅದು ಪಾಕಿಸ್ತಾನಕ್ಕೆ ತಿರುಮಂತ್ರವಾಗುವ ಸಾಧ್ಯತೆಗಳೇ ಹೆಚ್ಚು.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಷಾ, ಪಾಕಿಸ್ತಾನದ ಮೂಲಭೂತ ಸಮಸ್ಯೆಗಳಾದ ಸಾಂಸ್ಥಿಕ ದುರ್ಬಲತೆ ಮತ್ತು ಅಸಮರ್ಥ ಆಡಳಿತಗಳನ್ನು ಸರಿಪಡಿಸಿಕೊಳ್ಳದೆ, ಇನ್ನಷ್ಟು ಪ್ರಾಂತ್ಯಗಳನ್ನು ಸೃಷ್ಟಿಸುವುದರಿಂದ ಈಗಾಗಲೇ ತಲೆದೋರಿರುವ ಅಸಮಾನತೆಗಳು ಇನ್ನಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರಾಂತ್ಯಗಳೆಂದರೆ, ಇನ್ನೂ ಹೆಚ್ಚು ಪ್ರಾಂತೀಯ ಸರ್ಕಾರಗಳೂ ಬೇಕಾಗುತ್ತದೆ. ಆಡಳಿತ ವ್ಯವಸ್ಥೆಯೂ ಹೆಚ್ಚಾಗಿ, ಖರ್ಚೂ ದುಬಾರಿಯಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ಭ್ರಷ್ಟಾಚಾರವೂ ಹೆಚ್ಚುತ್ತದೆ. ವಿಪರ್ಯಾಸವೆಂದರೆ, ಸರ್ಕಾರ ಪಾಕಿಸ್ತಾನದ ಜನಸಾಮಾನ್ಯರು ಪ್ರತಿದಿನವೂ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಿಪಡಿಸದೆಯೇ ಈ ಸುಧಾರಣೆಗಳನ್ನು ತರಲು ಪ್ರಯತ್ನಿಸುತ್ತಿದೆ.

ಹೊಸ ಪ್ರಾಂತ್ಯಗಳ ನಿರ್ಮಾಣದ ಕುರಿತು ಪಾಕಿಸ್ತಾನದಲ್ಲಿ ಗಂಭೀರ ಚರ್ಚೆಗಳಾಗುತ್ತಿದ್ದು, ಇದು ಪಾಕಿಸ್ತಾನ ಸರಿಯಾದ ಆಡಳಿತ ಮಾದರಿಯನ್ನು ಕಂಡುಕೊಳ್ಳಲು ಇನ್ನೂ ಕಷ್ಟಪಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ತಜ್ಞರು ಈಗಾಗಲೇ ಹೇಳಿರುವಂತೆ, ಪ್ರಾಂತ್ಯಗಳ ಸಂಖ್ಯೆ ನೈಜ ಸಮಸ್ಯೆಯೇ ಅಲ್ಲ. ಪಾಕಿಸ್ತಾನಕ್ಕೆ ಈಗ ನಿಜಕ್ಕೂ ಸಾಂಸ್ಥಿಕ ಸುಧಾರಣೆ, ನ್ಯಾಯಯುತವಾದ ಕಾನೂನು ವ್ಯವಸ್ಥೆ, ಮತ್ತು ಸ್ಥಳೀಯ ಆಡಳಿತಗಳ ಬಲವರ್ಧನೆ, ಮತ್ತು ಜನರ ಕುರಿತು ಹೊಣೆಗಾರಿಕೆ ಹೊಂದಿರುವ ನಾಯಕರ ಅಗತ್ಯವಿದೆ. ಈ ಮೂಲಭೂತ ಸುಧಾರಣೆಗಳನ್ನು ಪಾಕಿಸ್ತಾನ ಕೈಗೊಳ್ಳದ ಹೊರತು, ಪ್ರಾಂತೀಯ ನಕ್ಷೆಯನ್ನು ಹೇಗೆ ಮರು ರಚಿಸಿದರೂ ಅದು ಮುಳುಗುತ್ತಿರುವ ಹಡಗಿನಲ್ಲಿ ಆಸನಗಳನ್ನು ಮರುಜೋಡಿಸಿದಂತಾಗುತ್ತದಷ್ಟೇ!

ಪಾಕಿಸ್ತಾನ ಇವೆಲ್ಲ ಯೋಚನೆ – ಯೋಜನೆಗಳೊಡನೆ ಮುಂದೆ ಹೆಜ್ಜೆ ಇಡುತ್ತಿದ್ದು, ಈ ರೀತಿಯ ಆಡಳಿತ ವ್ಯವಸ್ಥೆಯ ಮರು ಜೋಡಣೆ ನಿಜಕ್ಕೂ ಸುಧಾರಣೆ ತರುತ್ತದೆಯೋ, ಅಥವಾ ಈಗಾಗಲೇ ಕುಸಿಯುತ್ತಿರುವ ಪಾಕಿಸ್ತಾನಕ್ಕೆ ಇನ್ನಷ್ಟು ಸಮಸ್ಯೆ ತಂದೊಡ್ಡುತ್ತದೋ ಎಂದು ಕಾಲವೇ ಉತ್ತರಿಸಬೇಕಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.