ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಸಮಸ್ತ ಭಾರತೀಯರ ಸಾಂವಿಧಾನಿಕ ಹಕ್ಕು
ಏಕರೂಪ ನಾಗರಿಕ ಸಂಹಿತೆ ಚರ್ಚೆ: ಸಮಸ್ತ ಭಾರತೀಯರ ಸಾಂವಿಧಾನಿಕ ಹಕ್ಕು
Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಭಾರತೀಯ ಸಂವಿಧಾನದ ಮೂಲ ಆಶಯವನ್ನು ಸರ್ವರಿಗೂ ತಲುಪಿಸುವ, ಸರ್ವರನ್ನೂ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯುತ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಪಕ್ಷದ ಸೈದ್ಧಾಂತಿಕ ಬದ್ಧತೆಯ ಪ್ರತೀಕ ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಯುಸಿಸಿಯು ಶೀಘ್ರವೇ ಜಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

***

‘ಕುಟುಂಬದ ಒಬ್ಬ ಸದಸ್ಯನಿಗೆ ಒಂದು ನಿಮಯ, ಇನ್ನೊಬ್ಬ ಸದಸ್ಯನಿಗೆ ಮತ್ತೊಂದು ನಿಯಮ ಇರುವ ಪದ್ಧತಿ ಜಾರಿಯಲ್ಲಿದ್ದರೆ ಅಂಥ ಕುಟುಂಬವು ನೆಮ್ಮದಿ, ಶಾಂತಿಯಿಂದ ಬದುಕಲು ಸಾಧ್ಯವೇ? ಹಾಗೆಯೇ, ಭಾರತದಂಥ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಕಾನೂನು, ನಾಗರಿಕ ಸಂಹಿತೆ ಜಾರಿಯಾಗಬೇಕಿರುವುದು ಸಂವಿಧಾನದಲ್ಲಿಯೇ ಸೂಚಿತಗೊಂಡಿದೆ’– ಪ್ರಧಾನಿ ನರೇಂದ್ರ ಮೋದಿ.

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ವಿರೋಧ ಪಕ್ಷಗಳು ಅಂತೆ–ಕಂತೆಗಳನ್ನು ಹಬ್ಬಿಸುತ್ತಿವೆ. ಜೊತೆಗೆ, ಈ ಕಾಯ್ದೆಗೆ ಹಿಂದೂ–ಮುಸ್ಲಿಂ ಬಣ್ಣ ಬಳಿದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಅಪರಾಧವೇ ಸರಿ. ಮುಸ್ಲಿಂ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಅಂಗೀಕರಿಸಿರುವ ಎಷ್ಟೊಂದು ರಾಷ್ಟ್ರಗಳಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಈಗಾಗಲೇ ಜಾರಿಯಲ್ಲಿದೆ.

ಜಗತ್ತಿನ ಎಷ್ಟೋ ದೇಶಗಳಲ್ಲಿ ತ್ರಿವಳಿ ತಲಾಖ್‌ ರದ್ದಾಗಿದೆ. ಇದನ್ನು ಕೂಡ ಮುಸ್ಲಿಂ ವಿರೋಧಿ ಎಂಬ ರೀತಿಯಲ್ಲಿ ಬಿಂಬಿಸಿ, ಅಲ್ಪಸಂಖ್ಯಾತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಇರಿಸುವ ಕಾರ್ಯ ಚಾಲ್ತಿಯಲ್ಲಿತ್ತು. ಮಹಿಳಾ ಹಕ್ಕುಗಳ ಸಂರಕ್ಷಣೆ, ಗೌರವ, ಆತ್ಮರಕ್ಷಣೆ, ಸ್ವಾತಂತ್ರ್ಯಗಳೆಲ್ಲವನ್ನೂ ಗಾಳಿಗೆ ತೂರಿದ ವಿಪಕ್ಷಗಳು ಈ ವಿಷಯವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿದ್ದು ಅಕ್ಷಮ್ಯ.

ಯುಸಿಸಿಯನ್ನು ವಿರೋಧಿಸುತ್ತಿರುವವರು ಮಹಿಳಾ ಹಕ್ಕುಗಳು ಹಾಗೂ ಆಧುನಿಕ ಮನಃಸ್ಥಿತಿಯ ವಿರೋಧಿಗಳು ಎಂಬುದು ಸ್ಪಷ್ಟವಾಗಿದೆ. ತ್ರಿವಳಿ ತಲಾಖ್‌ ರದ್ದತಿಯಿಂದ ದೇಶದ ಕೋಟ್ಯಂತರ ಮುಸ್ಲಿಂ ಮಹಿಳೆಯರ ಆತ್ಮಗೌರವ, ಹಕ್ಕುಗಳ ರಕ್ಷಣೆಯಾಗಿದೆ. ಆದ್ದರಿಂದ ಈ ಬಗ್ಗೆ ಕೇವಲ ರಾಜಕೀಯದ ಉದ್ದೇಶವಿಟ್ಟುಕೊಂಡು ಮಾಡುತ್ತಿರುವ ವಿರೋಧವನ್ನು ವಿಪಕ್ಷಗಳು ನಿಲ್ಲಿಸಬೇಕು. ಭಾರತೀಯರ ಮೂಲಭೂತ ಹಕ್ಕುಗಳ ಸಂರಕ್ಷಣೆಯೆಡೆಗೆ ಯುಸಿಸಿ ಒಂದು ಮಾದರಿ ಕಾನೂನು ಆಗಲಿದೆ.

ಯುಸಿಸಿ ಇಂದಾಗಿ ಧಾರ್ಮಿಕ ಆಚರಣೆಗಳು, ಮದುವೆ ಪದ್ಧತಿಗಳಲ್ಲಿ ಬದಲಾವಣೆ ಬರಬಹುದು ಎನ್ನುವ ತಪ್ಪು ಕಲ್ಪನೆ ಸಾರ್ವಜನಿಕರಲ್ಲಿದೆ. ಆದರೆ, ಧಾರ್ಮಿಕ ಪದ್ಧತಿ, ಆಚರಣೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉದಾಹರಣೆಗೆ, ಲಿಂಗಾಯತರು ಮೃತರನ್ನು ಮಣ್ಣು ಮಾಡುವುದಾಗಲಿ ಅಥವಾ ಬ್ರಾಹ್ಮಣರು ದಹನ ಮಾಡುವಂಥ ಪ್ರಕ್ರಿಯೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇವಲ ಆಸ್ತಿ ಹಕ್ಕುಗಳು, ಉತ್ತರಾಧಿಕಾರ, ಒಬ್ಬರಿಗೆ ಎಷ್ಟು ಮದುವೆ ಇಂಥ ವಿಷಯಗಳಲ್ಲಿ ಏಕರೂಪ ಕಾನೂನು ತರುವ ದಿಸೆಯಲ್ಲಿ ಯುಸಿಸಿ ನಿಯಮಾವಳಿಗಳು ಇರಲಿವೆ. 

ಯುಸಿಸಿ ಕುರಿತ ಚರ್ಚೆ ಇಂದಿನದಲ್ಲ. ಸಂವಿಧಾನ ರಚನೆ ಸಂದರ್ಭದಲ್ಲಿಯೂ ಈ ಕುರಿತು ನಡೆದಿರುವ ಗೊಂದಲಗಳು, ಅಂಬೇಡ್ಕರ್‌ ಆದಿಯಾಗಿ ಇತರರು ಯುಸಿಸಿ ಜಾರಿಯಾಗಲೇಬೇಕು ಎಂಬುದರ ಕುರಿತಾಗಿ ಸಂಸತ್ತಿನಲ್ಲಿ ಮಂಡಿಸಿರುವ ಅಭಿಪ್ರಾಯ ಕೂಡ ಗಣನೆಗೆ ಅರ್ಹ. ದೇಶದಲ್ಲಿ ಯುಸಿಸಿಯ ಅಗತ್ಯ ಹಾಗೂ ಜಾರಿಗೊಳಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸರ್ಕಾರಗಳಿಗೆ ಸೂಚಿಸಿದ್ದು ಗಮನಾರ್ಹ.

ವಿವಿಧ ಧರ್ಮ, ಸಮುದಾಯಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವೈಯಕ್ತಿಕ ಕಾನೂನುಗಳಿವೆ. ಯುಸಿಸಿಯ ಮೂಲ ಆಶಯ, ಅಸಮಾನತೆಗೆ ಕಾರಣವಾಗುವ ಅಂಶಗಳನ್ನು ತೊಡೆದುಹಾಕಿ, ಸರ್ವರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸುವುದು. ಜನಸಂಘದ ಕಾಲದಿಂದಲೂ ಪಕ್ಷವು ಏಕರೂಪ ನಾಗರಿಕ ಸಂಹಿತೆಯ ಪರವಾಗಿ ಧ್ವನಿ ಎತ್ತುತ್ತಾ ಬಂದಿದ್ದು, 1967ರಲ್ಲಿ ಪ್ರಥಮ ಬಾರಿಗೆ ತನ್ನ ಪ್ರಣಾಳಿಕೆಯ ಭಾಗವಾಗಿ ಯುಸಿಸಿಯನ್ನು ಪರಿಗಣಿಸಿದ್ದು, ನಮ್ಮ ಪಕ್ಷದ ಸೈದ್ಧಾಂತಿಕ ಬದ್ಧತೆಗೆ ಸಾಕ್ಷಿ.

ಅಲ್ಪಸಂಖ್ಯಾತ ತುಷ್ಟೀಕರಣದ ನೀತಿಯನ್ನೇ ಕಾಂಗ್ರೆಸ್‌ ತನ್ನ ಆದ್ಯತೆಯನ್ನಾಗಿ ಮಾಡಿಕೊಂಡಿತು. 1985ರ ಶಾಬಾನೊ ಪ್ರಕರಣವು ಆ ಪಕ್ಷದ ಮುಖವಾಡವನ್ನೇ ಕಳಚಿತು. ಸುಪ್ರೀಂ ಕೋರ್ಟಿನ ತೀರ್ಪನ್ನು ರಾಜೀವ್ ಗಾಂಧಿ ಅವರು ಸಂಸತ್ತಿನಲ್ಲಿ ರದ್ದುಗೊಳಿಸಿದ್ದು, ತುಷ್ಟೀಕರಣದ ತನ್ನ ನೀತಿಗೆ ಸಂಪೂರ್ಣ ಶರಣಾಗಿದ್ದನ್ನು ಗಮನಿಸಬಹುದು. ಭಾರತದ ಸಂವಿಧಾನದ ಮೂಲ ಆಶಯವೇ ಸಮಾನತೆ. ಧಾರ್ಮಿಕ ಕಾರಣಗಳಿಗಾಗಿ ಹಾಗೂ ವೈಯುಕ್ತಿಕ ಹಿತಾಸಕ್ತಿಗಳಿಗಾಗಿ ಸಂವಿಧಾನವನ್ನು ಮೂಲೆಗುಂಪು ಮಾಡುವುದನ್ನು ಬಿಜೆಪಿ ವಿರೋಧಿಸುತ್ತಲೇ ಬಂದಿದೆ.

ಯುಸಿಸಿ ಪರವಾಗಿ ಸುಪ್ರೀಂ ಕೋರ್ಟ್‌ 1995ರಲ್ಲಿ ಮತ್ತೊಮ್ಮೆ ಸರ್ಕಾರಗಳಿಗೆ ನಿರ್ದೇಶನ ನೀಡಿತು. ದೇಶದ ಶೇ 80ರಷ್ಟು ಜನರು ಈಗಾಗಲೇ ಸಮಾನವಾದ ಏಕರೂಪ ನಿಯಮಗಳಿಗೆ ಒಳಪಟ್ಟಿದ್ದು, ಕೇವಲ ಧಾರ್ಮಿಕ ಕಾರಣಗಳಿಗಾಗಿ ಇದರಿಂದ ದೂರವಿರುವ ಅಲ್ಪಸಂಖ್ಯಾತ ವರ್ಗದ ಮಹಿಳೆಯರಿಗೂ ಸಮಾನ ಹಕ್ಕುಗಳಿಂದ ವಂಚಿತರನ್ನಾಗಿಸುವುದನ್ನು ತಪ್ಪಿಸುವ ಕಾಯ್ದೆಗಳನ್ನು ರೂಪಿಸಿ ಎಂದು ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದೆ.

‘44ನೇ ವಿಧಿಗೆ (ಏಕರೂಪ ನಾಗರಿಕ ಸಂಹಿತೆ) ತಿದ್ದುಪಡಿ ತಂದು, ದೇಶದ ಸಮಸ್ತ ನಾಗರಿಕರಿಗೆ ಒಂದೇ ಕಾನೂನು ಜಾರಿಗೆ ತರಲು ಸಾಧ್ಯವಾಗದಿರುವುದು ವಿಷಾದನೀಯ. ಯುಸಿಸಿ ಅನ್ನು ಜಾರಿಗೆ ತರಲು ಸಾಧ್ಯವಾಗದಿರುವುದಿಕ್ಕೆ ಸರ್ಕಾರಗಳು ನೀಡುತ್ತಿರುವ ಕಾರಣಗಳು ತೀರಾ ಬಾಲಿಶವಾಗಿವೆ. ಮತಬ್ಯಾಂಕ್ ರಾಜಕಾರಣಕ್ಕೆ ಮಣಿದು, ರಾಷ್ಟ್ರದ ಸಮಗ್ರತೆಗೆ ಧಕ್ಕೆ ತಂದಿರುವುದು ವಿಷಾದನೀಯ’ ಎಂದು ಸುಪ್ರೀಂ ಕೋರ್ಟ್ 1995ರಲ್ಲಿ ಹೇಳಿರುವುದು ವಿಪರ್ಯಾಸ. ರಾಜಕೀಯ ಕಾರಣಗಳಿಗಾಗಿ ಬಿಜೆಪಿಯು ಯುಸಿಸಿ ಅನ್ನು ಜಾರಿಗೆ ತರುತ್ತಿದೆ ಎಂದು ಬೊಬ್ಬೆ ಇಡುತ್ತಿರುವವರಿಗೆ ದೇಶದ ಸುಪ್ರೀಂ ಕೋರ್ಟ್‌ ನೀಡಿರುವ ಚಾಟಿ ಏಟು ಮರೆತಂತಿದೆ. ಸುಪ್ರೀಂ ಕೋರ್ಟ್‌ ಯುಸಿಸಿ ಪರವಾಗಿ ನೀಡಿದ ಅಭಿಪ್ರಾಯದ ಮೇರೆಗೆ ಬಿಜೆಪಿಯು ಯುಸಿಸಿ ಪರವಾಗಿ ಪ್ರತಿಪಾದಿಸುತ್ತಿದೆ. ಈ ವಿಷಯ ವಿರೋಧ ಪಕ್ಷಗಳಿಗೆ ಅರ್ಥವಾಗದಿರುವುದು ಅಕ್ಷಮ್ಯ.

ಸಾಮಾಜಿಕ ಸುಧಾರಣೆ, ಲಿಂಗ ಸಮಾನತೆ ಹೆಸರಿನಲ್ಲಿ ಸಾಕಷ್ಟು ವಿರೋಧ ಇದ್ದರೂ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಹಿಂದೂ ಕೋಡ್‌ ಬಿಲ್‌ ಅನ್ನು ಜಾರಿಗೆ ತಂದರು. ಇದೇ ಮಾನದಂಡಗಳನ್ನು ಇಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯಗಳ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಯಾಕೆ ಮಾಡಲಿಲ್ಲ? ಇದು ಇಂದಿಗೂ ಯಕ್ಷಪ್ರಶ್ನೆಯೇ ಅಲ್ಲವೇ? ಸಮಾನತೆ, ಸಾಮಾಜಿಕ ಸುಧಾರಣೆಗಳು ಪ್ರತಿ ಧರ್ಮಕ್ಕೂ ಬೇರೆ ಬೇರೆ ಎನ್ನುವುದಾದರೆ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಅನ್ಯಾಯ ಎಸಗಿದಂತೆಯೇ ಅಲ್ಲವೇ?

ಅಂಬೇಡ್ಕರ್‌ ಅವರ ಅನಿಸಿಕೆ

ಯುಸಿಸಿ ಕುರಿತು ಅತ್ಯಂತ ಸ್ಪಷ್ಟತೆ ಹೊಂದಿದ್ದ ಸಂವಿಧಾನಶಿಲ್ಪ ಡಾ. ಅಂಬೇಡ್ಕರ್‌ ಅವರು 1948ರ ನವೆಂಬರ್‌ 23ರಂದು ನಡೆದ ಸಂವಿಧಾನ ರಚನೆ ಸಂದರ್ಭದ ಚರ್ಚೆಯಲ್ಲಿ ಭಾಗವಾಹಿಸಿ, ‘1935ರ ವರೆಗೆ ನಾರ್ಥ್‌ ವೆಸ್ಟ್ ಫ್ರಾಂಟಿಯರ್ ಪ್ರಾವಿನ್ಸ್‌ನ (ಎನ್‌ಡಬ್ಲ್ಯುಎಫ್‌ಪಿ) ಜನರು ಷರಿಯಾ ಕಾನೂನುಗಳನ್ನು ಅನುಸರಿಸುತ್ತಿರಲಿಲ್ಲ. ಮದುವೆ, ಉತ್ತರಾಧಿಕಾರ, ಆಸ್ತಿ ಹಸ್ತಾಂತರ ಹಾಗೂ ಇತರೆ ವಿಷಯಗಳಲ್ಲಿ ಹಿಂದೂ ಕಾನೂನುಗಳನ್ನು ಅನುಸರಿಸುತ್ತಿದ್ದರು. 1939ರ ನಂತರ ತಿದ್ದುಪಡಿ ತರಲಾಯಿತು. ಮಧ್ಯ ಪ್ರಾಂತ್ಯ, ಬಾಂಬೆ ಪ್ರಾಂತ್ಯ ಹಾಗೂ ಯುನೈಟೆಡ್‌ ಪ್ರಾಂತ್ಯಗಳಲ್ಲಿ ಉತ್ತರಾಧಿಕಾರಿ ವಿಷಯಕ್ಕೆ ಸಂಬಂಧಿಸಿ ಹಿಂದೂ ಪದ್ಧತಿಯನ್ನೇ ಅನುಸರಿಸಲಾಗುತ್ತಿತ್ತು. ತೀರಾ ಇತ್ತೀಚಿನವರೆಗೆ ಭಾರತದ ಹೆಚ್ಚಿನ ಮುಸ್ಲಿಮರು ಹಿಂದೂ ಕಾನೂನನ್ನೇ ಅನುಸರಿಸುತ್ತಿದ್ದರು. ಆದ್ದರಿಂದ, ಯುಸಿಸಿಯಿಂದ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ ಆಗುತ್ತದೆ ಎಂಬ ವಾದವೇ ಅಪ್ರಸ್ತುತವಾಗುತ್ತದೆ’ ಎಂದು ಅಂಬೇಡ್ಕರ್‌ ಅವರು ಅಭಿಪ್ರಾಯಪಟ್ಟಿದ್ದರು.‌

ಬಿಜೆಪಿಯ ಸೈದ್ಧಾಂತಿಕ ಬದ್ಧತೆ

ತನ್ನ ಸೈದ್ಧಾಂತಿಕ ಬದ್ಧತೆಯ ಕಾರಣದಿಂದಲೇ ಕೇವಲ 2 ಸಂಸದರಿಂದ ರಾಜಕೀಯ ಆರಂಭಿಸಿದ ಬಿಜೆಪಿಯಿಂದ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದೆ. ಭಾರತದ ಸಮಗ್ರತೆ, ಅಖಂಡತೆ, ಸಮಾನತೆ ವಿಷಯಗಳಲ್ಲಿ ಇತರ ಪಕ್ಷಗಳಿಗೆ ಗೊಂದಲವಿದೆ. ಆದರೆ, ಜನಸಂಘ ಹಾಗೂ ನಂತರದ ಬಿಜೆಪಿಗೆ ಮಾತ್ರ ಇಂಥ ವಿಷಯಗಳಲ್ಲಿ ಗೊಂದಲಗಳಿಲ್ಲ. ರಾಮಮಂದಿರ ನಿರ್ಮಾಣ, 370ನೇ ವಿಧಿ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ, ಯುಸಿಸಿ ಕುರಿತಾಗಿ ಪಕ್ಷವು ಮೊದಲಿನಿಂದಲೂ ತನ್ನ ಸೈದ್ಧಾಂತಿಕ ಬದ್ಧತೆ ಪ್ರದರ್ಶಿಸಿದೆ.

ಭಾರತೀಯ ಸಂವಿಧಾನದ ಮೂಲ ಆಶಯವನ್ನು ಸರ್ವರಿಗೂ ತಲುಪಿಸುವ, ಸರ್ವರನ್ನೂ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯುತ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಯುಸಿಸಿ ಜಾರಿಗೆ ಇಷ್ಟು ವರ್ಷಗಳ ಕಾಲ ಅಡ್ಡಗಾಲು ಹಾಕಿ, ಅದನ್ನು ರಾಜಕೀಯ ಕಾರಣಗಳಿಗಾಗಿ ಬಳಸಿದ್ದು ಯಾವ ಪಕ್ಷಗಳು ಎಂಬುದು ಇಂದು ದೇಶದ ಜನತೆಗೆ ತಿಳಿದಿದೆ. ಬಿಜೆಪಿಯ ಸೈದ್ಧಾಂತಿಕ ಬದ್ಧತೆಯ ಪ್ರತೀಕ ಹಾಗೂ ದೇಶದ ಜನರ ಹಿತದೃಷ್ಟಿಯಿಂದ ಯುಸಿಸಿಯು ಶೀಘ್ರವೇ ಜಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಲೇಖಕ: ಸಂಸದ, ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ

ಏಕರೂಪ ಅಲ್ಲ, ಸಮಾನ ನಾಗರಿಕ ಸಂಹಿತೆ ಬೇಕು

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸಮಾನ ನಾಗರಿಕ ಸಂಹಿತೆ (ಇಸಿಸಿ) ತರುವ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ನಡೆದಿತ್ತು. ಬಿಜೆಪಿ ಪ್ರತಿಪಾದಿಸುವಂತೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ಬಗ್ಗೆ ಅಲ್ಲ. ಸಮಾನ ನಾಗರಿಕ ಸಂಹಿತೆಗೂ ಏಕರೂಪ ನಾಗರಿಕ ಸಂಹಿತೆಗೂ ವ್ಯತ್ಯಾಸ ಇದೆ. ‘ಏಕರೂಪ’ ಎನ್ನುವುದೇ ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಸಮಾನ ನಾಗರಿಕ ಸಂಹಿತೆ ಕುರಿತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನ ರಚನಾ ಸಭೆಯಲ್ಲಿ ಚರ್ಚಿಸಿದ್ದರು. ಆದರೆ, ಮತ ಧರ್ಮಗಳನ್ನು ಆಧರಿಸಿದ ವೈಯಕ್ತಿಕ ಕಾನೂನುಗಳು ಹಾಗೂ ಆ ಕಾಲಘಟ್ಟದಲ್ಲಿ ದೇಶ ವಿಭಜನೆ ನಡೆದಿತ್ತು. ಕೆಲವು ಸಂಸ್ಥಾನಗಳು ಇನ್ನೂ ಭಾರತವನ್ನು ಸೇರದೆ ಉಳಿದಿದ್ದವು. ಈ  ಕಾರಣಗಳಿಂದ ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಿಂದ ಅವರು ಹಿಂದೆ ಸರಿದಿದ್ದರು.

ಜಾತಿ ಆಧಾರಿತ ತಾರತಮ್ಯ ತಗ್ಗಿಸುವುದು, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡುವುದು ಸೇರಿದಂತೆ ಹಿಂದೂ ವೈಯಕ್ತಿಕ ಕಾನೂನಿನಲ್ಲಿ ಕೆಲವು ಸಮಾನ ಕೋಡ್‌ಗಳನ್ನು ಸೇರಿಸಲು ಅಂಬೇಡ್ಕರ್‌ ಮುಂದಾಗಿದ್ದರು. ಆದರೆ, ಹಿಂದೂ ಮಹಾಸಭಾ ಮತ್ತು ಆರ್‌ಎಸ್‌ಎಸ್‌ ವಿರೋಧಿಸಿದ್ದವು. ಭಾರತದ ಜನರ ಹಿತಕ್ಕಾಗಿ ಈಗ ಬಿಜೆಪಿ ಮತ್ತು ಆರ್‌ಎಸ್‌ಎಸ್‌, ಅನುಷ್ಠಾನದ ಪ್ರಸ್ತಾವವನ್ನು ಮುಂದಿಟ್ಟಿಲ್ಲ. ಬದಲಾಗಿ ಇವರ ರಾಜಕೀಯ ಹಿತಕ್ಕಾಗಿ ಈ ಹೆಜ್ಜೆ ಇಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಇಚ್ಛೆ ಇದ್ದರೆ ದೇಶದಲ್ಲಿ ಎಲ್ಲ ಮತ, ಧರ್ಮ, ಜಾತಿಗಳ ಹುಡುಗ ಮತ್ತು ಹುಡುಗಿ ಮುಕ್ತವಾಗಿ ವಿವಾಹವಾಗಲು ಅವಕಾಶ ಕಲ್ಪಿಸುವ ಕಾನೂನು ತರಲಿ. ಬಿಜೆಪಿಯು ತನ್ನ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಒಂದು ರಾಷ್ಟ್ರ, ಒಂದು ಧರ್ಮ, ಒಂದು ಭಾಷೆಯಂತೆಯೇ ಏಕರೂಪ ನಾಗರಿಕ ಸಂಹಿತೆಯನ್ನು ಮುಂದಿಟ್ಟಿದೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರದ ಭಾಗವಾಗಿದೆ. ಇದಕ್ಕೆ ನಮ್ಮ ವಿರೋಧವಿದೆ.

-ಸಿದ್ದನಗೌಡ ಪಾಟೀಲ, ಸಿಪಿಐ ಮುಖಂಡ

**

‘ಜನಾಭಿಪ್ರಾಯ ಪಡೆಯದಿದ್ದರೆ ಹೇರಿಕೆ’

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಹಾಗೂ ಹೊಸ ಶಿಕ್ಷಣ ನೀತಿ ಜಾರಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಚರ್ಚೆಯನ್ನೇ ನಡೆಸಿರಲಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರದಲ್ಲೂ ಚರ್ಚೆ ನಡೆಸಿ ಜನಾಭಿಪ್ರಾಯ ಪಡೆಯದಿದ್ದರೆ ಅದು ಹೇರಿಕೆ ಆಗಲಿದೆ. ರಾಜಕೀಯ ಕಾರಣಕ್ಕೆ ಪದೇ ಪದೇ ಕೇಂದ್ರವು ಒಂದು ಸಮುದಾಯವನ್ನು ಗುರಿಯಾಗಿಸಿ ಕಾನೂನು ಜಾರಿಗೊಳಿಸುತ್ತಿದೆ. ಸದ್ಯಕ್ಕೆ ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರವು ಗೊಂದಲದಿಂದ ಕೂಡಿದೆ. ಜಾರಿ ಉದ್ದೇಶದ ಹಿಂದೆ ಆರ್‌ಎಸ್‌ಎಸ್‌ ಬ್ರಾಹ್ಮಣ್ಯದ ವೈದಿಕ ಹುನ್ನಾರ ಅಡಗಿರುವಂತೆ ಕಾಣಿಸುತ್ತಿದೆ. ಪ್ರಾಮಾಣಿಕ ಉದ್ದೇಶವೇ ಇದ್ದಿದ್ದರೆ ದೇಶದಾದ್ಯಂತ ಚರ್ಚೆ ನಡೆಸಬೇಕಿತ್ತು. ಜನಹಿತಕ್ಕೆ ಆದ್ಯತೆ ನೀಡಬೇಕಿತ್ತು. ಸಂವಿಧಾನ ತಜ್ಞರು ಹಾಗೂ ವಿಚಾರವಂತರಿಗೆ ದೇಶದಲ್ಲಿ ಬರವಿಲ್ಲ. ಅವರ ಸಲಹೆಯಾದರೂ ಪಡೆದುಕೊಳ್ಳಬಹುದಿತ್ತು. ಅದನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ.

–ಮಾವಳ್ಳಿ ಶಂಕರ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT