ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧ್ವಂಸಕ ಗುಣದ ಬುಲ್ಡೋಜರ್ ವಿಮರ್ಶೆ

ವಿಮರ್ಶೆಯ ಹೆಸರಿನಲ್ಲಿ ಬಲಿಪೀಠಗಳಾಗುತ್ತಿರುವ ಸಾಮಾಜಿಕ ಜಾಲತಾಣಗಳು
Published : 24 ಆಗಸ್ಟ್ 2021, 21:45 IST
ಫಾಲೋ ಮಾಡಿ
Comments

ಜನಪ್ರಿಯ ಲೇಖಕರನ್ನು ಶಿಲುಬೆಗೇರಿಸುವ ಪ್ರಯತ್ನ ಕನ್ನಡ ಸಾಹಿತ್ಯಲೋಕಕ್ಕೆ ಹೊಸತೇನಲ್ಲ. ಸಾಮಾಜಿಕ ಜಾಲತಾಣಗಳ ಅಬ್ಬರದ ಈ ದಿನಗಳಲ್ಲಂತೂ ಕನ್ನಡ ಲೇಖಕರನ್ನು ರುಬ್ಬುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದುವರೆಗೂ ಕನ್ನಡದ ಲೇಖಕರೇ ತಮ್ಮ ಸರೀಕರು ಮತ್ತು ಹಿರಿಯರನ್ನು ತಕರಾರಿನ ಕಟಕಟೆಗೆ ನಿಲ್ಲಿಸುತ್ತಿದ್ದರು. ಈಗ ವಿಮರ್ಶಕರ ಪಾಳಯದಲ್ಲಿ ಮಿಂಚುತ್ತಿರುವುದು ಸಮಾಜಶಾಸ್ತ್ರದ ವಿದ್ಯಾರ್ಥಿಗಳು. ಆಯುರ್ವೇದ ವೈದ್ಯರೂ ಶಸ್ತ್ರಚಿಕಿತ್ಸೆ ನಡೆಸಬಹುದು ಎನ್ನುವ ಸರ್ಕಾರದ ನಂಬಿಕೆ, ಸಮಾಜಶಾಸ್ತ್ರದ ಸಲಕರಣೆಗಳನ್ನು ಬಳಸಿ ಸಾಹಿತ್ಯ ವಿಮರ್ಶೆ ನಡೆಸಲು ಪ್ರೇರಣೆಯಾಗಿರಬಹುದು.

ವ್ಯಕ್ತಿಯ ಹಿನ್ನೆಲೆ ಬೇರೆಯಾಗಿದ್ದ ಮಾತ್ರಕ್ಕೆ ವಿಮರ್ಶೆಯನ್ನು ಸಲ್ಲದು ಎನ್ನಲಾಗದು. ಆದರೆ, ವಿಮರ್ಶೆ ಮಾಡುವ ವ್ಯಕ್ತಿ ತಾಯಿಗುಣವನ್ನು ಹೊಂದಿರುವುದು ಅಗತ್ಯ. ಜೀವಪರ ಗುಣವನ್ನು ಬಿಟ್ಟುಕೊಟ್ಟ ವಿಮರ್ಶೆ ಹಲ್ಲೆಯ ರೂಪು ಪಡೆದುಕೊಳ್ಳುತ್ತದೆ. ‘ಇದು ಜೀವಪರ ಸಾಹಿತ್ಯವಲ್ಲ’ ಎಂದು ಸಾಧಿಸಲು ಹೊರಟ ವಿಮರ್ಶೆಯೇ ಜೀವಪರ ಗುಣವನ್ನು ಕಳೆದುಕೊಂಡಾಗ ನಡೆಯುವುದು ವಿಧ್ವಂಸಕ ಕೃತ್ಯ.

ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ಸಾಹಿತಿಗಳ ಪೋಸ್ಟ್‌ ಮಾರ್ಟಂಗೆ ಮತ್ತೆ ಮತ್ತೆ ಒಳಗಾಗುತ್ತಿರುವುದು ಗೋಪಾಲಕೃಷ್ಣ ಅಡಿಗರು. ಅವರ ಕವಿತೆಗಳಲ್ಲಿನ ‍ಪುರಾಣ ಪ್ರತಿಮೆಗಳು ವೈದಿಕಪ್ರಜ್ಞೆಯನ್ನು ಹೇಗೆ ಪೋಷಿಸುತ್ತಿವೆ ಎನ್ನುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಗೆದು ಬಗೆದು ತೋರಿಸಲಾಗುತ್ತಿದೆ. ವಿಮರ್ಶಕರ ಹತ್ಯಾರಗಳಿಗೆ ಬೇಂದ್ರೆ, ಮಾಸ್ತಿ, ಡಿವಿಜಿಯವರೂ ಮಿಕಗಳಾಗುತ್ತಿದ್ದಾರೆ. ಈ ಹೊಸಬಗೆಯ ವಿಮರ್ಶೆ, ಕನ್ನಡದ ಓದುಗರ ಈವರೆಗಿನ ಓದು ಹಾಗೂ ವಿಮರ್ಶಾ ಪ್ರಜ್ಞೆಯ ಮರು ಮೌಲ್ಯಮಾಪನಕ್ಕೆ ಒತ್ತಾಯಿಸು ತ್ತಿದೆ. ಅದು ತಪ್ಪಲ್ಲ. ಸಮಸ್ಯೆ ಎನ್ನಿಸುತ್ತಿರುವುದು, ಸಾಹಿತ್ಯಿಕ ನೆಲೆಗಟ್ಟಿನಲ್ಲಿ ನಡೆಸಬೇಕಾದ ವಿಮರ್ಶೆ–ವಿಶ್ಲೇಷಣೆಯನ್ನು ಸಾಮಾಜಿಕ ಪರಿವೇಷದ ಹಿನ್ನೆಲೆಯಲ್ಲಿ ನಡೆಸುತ್ತಿರುವುದರಲ್ಲಿ. ಕಾವ್ಯದ ತೊಗಲು ಸಿಗಿದು, ಅಸ್ಥಿಪಂಜರ ಮುಂದಿಟ್ಟು, ‘ಇದೇ ನೋಡಿ, ಈವರೆಗೆ ನೀವು ಮೆಚ್ಚಿಕೊಂಡಿದ್ದ ಸಾಹಿತ್ಯ ಅಥವಾ ಒಳ್ಳೆಯ ಕಾವ್ಯ ಎಂದು ನಿಮ್ಮನ್ನು ನಂಬಿಸಲಾಗಿದ್ದ ಕಾವ್ಯದ ಅಸಲಿ ರೂಪ’ ಎಂದು ಹೇಳಲಾಗುತ್ತಿದೆ. ಪದಗಳನ್ನು ಸುಲಿದು ಬಿಡಿಬಿಡಿಯಾಗಿಸಿ, ಧ್ವನಿಶಕ್ತಿ, ರೂಪಕಶಕ್ತಿಗಳನ್ನು ಕಾವ್ಯದಿಂದ ದೂರ ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಒಪ್ಪದವರ ಸಂವೇದನೆಯಲ್ಲಿ ಐಬು ಹುಡುಕಲಾಗುತ್ತದೆ.

ಸಾಮಾಜಿಕ ಸರ್ಜನ್ನರ ವಿಮರ್ಶೆಯ ಪ್ರಕಾರ ಅಡಿಗರು ಕೋಮುವಾದಿ. ಬೇಂದ್ರೆಯವರ ಸಾಹಿತ್ಯದ ಸಂಗ(ಘ)ದಲ್ಲೂ ಕೋಮುವಾಸನೆಯಿದೆ. ಈ ತೀರ್ಮಾನಗಳು ನಿಜವಾಗಿದ್ದಲ್ಲಿ, ಈವರೆಗೆ ಬೇಂದ್ರೆ–ಅಡಿಗರನ್ನು ಓದಿದ ಕಾರಣಕ್ಕೆ ಕೋಮುವಾದಿಗಳಾದವರ ದೊಡ್ಡ ಗುಂಪನ್ನೇ ನಾವು ನೋಡಬೇಕಾಗಿತ್ತು. ಆದರೆ, ಕೋಮುವಾದಿ ಎನ್ನಲಾಗುತ್ತಿರುವ ಕಾವ್ಯದಿಂದ ಸಹೃದಯರ ಮನೋವಿಕಾಸವಾಗಿರುವುದನ್ನು, ರಸಮೊಗ್ಗುಗಳು ಚುರುಕಾಗಿರುವುದನ್ನು ಕಂಡಿದ್ದೇವೆ. ಸಾಹಿತ್ಯವನ್ನು ರಾಜಕೀಯ ಅಜೆಂಡಾದ ಭಾಗವಾಗಿಸಿಕೊಂಡ ಲೇಖಕರು ನಮ್ಮಲ್ಲಿದ್ದಾರೆ. ಫೇಸ್‌ಬುಕ್‌ ಬರಹಗಳ ಮೂಲಕ ಸಮಾಜದಲ್ಲಿ ಬಿರುಕುಗಳನ್ನು ಮೂಡಿಸುತ್ತಿರುವವರು ಇದ್ದಾರೆ. ಅವರು ಪಡೆದ ಯಶಸ್ಸು ‘ಕೋಮುವಾದಿ’ ಅಡಿಗರಿಗೆ, ಬೇಂದ್ರೆಗೆ ಯಾಕೆ ಸಾಧ್ಯವಾಗಿಲ್ಲ? ಇದಕ್ಕೆ ಉತ್ತರವನ್ನು ಹೀಗೆ ಹೇಳಬಹುದು: ಬೇಂದ್ರೆ–ಅಡಿಗರ ಕಾವ್ಯದಲ್ಲಿ ಪ್ರಮುಖ ವಾಗಿರುವುದು ಅವ್ಯವಸ್ಥೆಯ ಬಗೆಗಿನ ಅಸಹನೆಯೇ ಹೊರತು ಕೋಮುವಾದವಲ್ಲ. ಅವರ ಕಾವ್ಯದ ಅಜೆಂಡಾ ಮತೀಯವಾದವಲ್ಲ.

ಹಾಗಾದರೆ, ಅವರ ಕಾವ್ಯದಲ್ಲಿ ಧಾರ್ಮಿಕ ಅಸಹನೆಯ ಅಂಶಗಳಿಲ್ಲವೇ? ಇಲ್ಲವೆನ್ನಲಾಗದು. ಆದರದು ನಗಣ್ಯ. ಅಗುಳಿನ ಮೇಲೆ ಅನ್ನದ ಪರೀಕ್ಷೆ ಎನ್ನುವುದು ಕವಿಯೊಬ್ಬನ ಮೌಲ್ಯಮಾಪನಕ್ಕೆ ಸಲ್ಲದು. ಅಡಿಗರಾಗಲೀ ಬೇಂದ್ರೆಯವರಾಗಲೀ ಸಮಾಜ ಕಟ್ಟಲಿಕ್ಕೆ, ಮನಸ್ಸುಗಳನ್ನು ಆರ್ದ್ರಗೊಳಿಸಲಿಕ್ಕೆ ತಮ್ಮ ಸಾಹಿತ್ಯವನ್ನು ಬಳಸಿದ್ದಾರೆಯೇ ಹೊರತು ಒಡೆಯಲಿಕ್ಕಲ್ಲ ಎನ್ನುವುದಕ್ಕೆ ಅವರ ಸಾಹಿತ್ಯದಲ್ಲಿಯೇ ಹೇರಳ ಉದಾಹರಣೆಗಳಿವೆ. ಅವುಗಳನ್ನು ಪಕ್ಕಕ್ಕಿಟ್ಟು ದುರ್ಬಲ ರಚನೆಗಳನ್ನು ಹೆಕ್ಕಿಕೊಂಡು ಕವಿಯ ಒಟ್ಟಾರೆ ಸಾಹಿತ್ಯವನ್ನು, ವ್ಯಕ್ತಿತ್ವವನ್ನು ಬೆಲೆಗಟ್ಟಲು ಹೊರಡುವುದು ವಿಮರ್ಶೆಯ ಹೆಸರಿನ ಕಸರತ್ತೇ ಹೊರತು ಕಸುಬುದಾರಿಕೆಯಲ್ಲ.

ಸಮಕಾಲೀನ ಸಾಹಿತ್ಯ ಸಂದರ್ಭ ಒಡೆದ ಕನ್ನಡಿ ಯಂತಹದ್ದು. ಅಡಿಗರು ಕೋಮುವಾದಿ. ಬೇಂದ್ರೆ ಕೋಮುವಾದಿ. ಅಡಿಗರ ಬಗ್ಗೆ ಮೃದು ಧೋರಣೆ ಹೊಂದಿದ್ದರಿಂದಾಗಿ ಲಂಕೇಶ್‌ ವೈಚಾರಿಕತೆಯೂ ಶಂಕಾಸ್ಪದ. ಕುವೆಂಪು ಆಳದಲ್ಲಿ ಸನಾತನಿ. ಅನಂತ ಮೂರ್ತಿ ಅವರಿಗೆ ಬ್ರಾಹ್ಮಣ್ಯ ಬಿಡಲಾಗಲಿಲ್ಲ. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂದ ದೇವನೂರರನ್ನು ದಲಿತ ಹುಡುಗರೇ ತಡವಿಕೊಂಡಿರುವುದಿದೆ. ಹಾಗಾದರೆ ಯಾರು ನಮಗೆ ಮಾದರಿ–ದಾರಿ? ಕನ್ನಡ ಸಾಹಿತ್ಯದ ಸಾಲುದೀಪಗಳನ್ನೆಲ್ಲ ಬಯಲಿಗೆ ತಂದು ಗಾಳಿಗೊಡ್ಡಿದ್ದೇವೆ. ವೈದಿಕತೆಯನ್ನು ವಿರೋಧಿಸುವ ಪ್ರಯತ್ನದಲ್ಲಿ ತೊಡಗಿರುವ ಕೆಲವರು ತಾವು ಯಾವುದನ್ನು ವಿರೋಧಿ ಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೋ ಅದೇ ಭಾಷೆ ಹಾಗೂ ಧೋರಣೆಯನ್ನು ಮೈಗೂಡಿಸಿಕೊಂಡಿದ್ದಾರೆ. ಈ ದುಡುಕಿನಿಂದಾಗಿ, ಸಮಗ್ರ ಕನ್ನಡಿಗರನ್ನು ಪ್ರತಿನಿಧಿಸುವ, ಎಲ್ಲರ ಪ್ರೀತಿಗೊಳಗಾದ ಲೇಖಕ ವರ್ತಮಾನದಲ್ಲಿರಲಿ, ಭೂತಕಾಲದಲ್ಲೂ ಇರದಂತಹ ಸ್ಥಿತಿಯನ್ನು ಸೃಷ್ಟಿಸುತ್ತಿದ್ದೇವೆ. ಕನ್ನಡದ ಪ್ರಾತಿನಿಧಿಕ ಸಾಹಿತಿ ಎಂದು ಕನ್ನಡಮನಸ್ಸುಗಳು ಗೌರವಿಸಿಕೊಂಡು ಬಂದವರನ್ನು ಸಾಮಾಜಿಕ ಜಾಲತಾಣಗಳ ಕಾಲಘಟ್ಟ ಚಿಂದಿ ಚಿಂದಿ ಮಾಡಿಬಿಟ್ಟಿದೆ.

ಸಾಹಿತ್ಯ ಮಾತ್ರವಲ್ಲ, ಯಾವುದೇ ಬಗೆಯ ವಿಮರ್ಶೆಯಲ್ಲಿ ತೊಡಗಿರುವವರು ಕಾಲುಹಾದಿಯ ಪಥಿಕರಾಗಿರಬೇಕು. ಆಗಷ್ಟೇ ಸಮೀಪನೋಟ, ಒಳ ನೋಟಗಳು ಗೋಚರಿಸುತ್ತವೆ; ಚೌಕಟ್ಟುಗಳೂ ಅರ್ಥವಾಗುತ್ತವೆ. ಕಾಲುಹಾದಿಯನ್ನು ತೊರೆದು ಬುಲ್ಡೋ
ಜರ್‌ನಲ್ಲಿ ಕುಳಿತು ಹೊರಟಾಗಿನ ಅಂತರ ಮತ್ತು ಎತ್ತರದ ಸ್ಥಾನ ನಮ್ಮ ನೋಟಕ್ಕೆ ಪೂರ್ವಗ್ರಹಗಳನ್ನು ಸೇರಿಸುತ್ತವೆ. ಆಗ ಉಂಟಾಗುವುದು ವಿಧ್ವಂಸಕ ಕೃತ್ಯವಷ್ಟೇ. ತರ ತಮಗಳ ಬಗ್ಗೆ ಮಾತನಾಡುವವರು, ಜಾತೀಯತೆಗೆ ನೋಯುವವರು, ಧರ್ಮ ನಿರಪೇಕ್ಷತೆ ಹಾಗೂ ಮಾನವತಾವಾದಕ್ಕೆ ಹಂಬಲಿಸುವವರು ಬುಲ್ಡೋಜರ್‌ ಸವಾರಿಯಿಂದ ದೂರವಿರುವುದು ಅಗತ್ಯ. ಇರುವ ರೂಪಕಗಳನ್ನು ಒಡೆಯಲು ಮುಂದಾಗುವವನಿಗೆ ಹೊಸ ರೂಪಕಗಳನ್ನು ಸೃಜಿಸುವ ಶಕ್ತಿಯೂ ಇರಬೇಕಾಗುತ್ತದೆ.

ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು ಎನ್ನುವ ನಿರೀಕ್ಷೆ ಸರಿಯಾದುದು. ಆದರೆ, ಸಾಹಿತ್ಯದ ಕಾಳಜಿ ಅರ್ಥ ಮಾಡಿಕೊಳ್ಳಲು ನಾವು ಅನುಸರಿಸಬೇಕಾದ ಮಾರ್ಗ ದುಡುಕಿನದಾದರೆ, ಕಳೆದುಕೊಳ್ಳು ವುದೇ ಹೆಚ್ಚು. ಇದಕ್ಕೆ ಉದಾಹರಣೆಯಾಗಿ, ಕಳೆದ ವಾರ ಕನ್ನಡ ಲೇಖಕರಿಬ್ಬರು ನೀಡಿದ ಹೇಳಿಕೆಗಳಿಗೆ ವ್ಯಕ್ತ ವಾದ ಸ್ಪಂದನವನ್ನು ಗುರ್ತಿಸಬಹುದು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲವೂ ಸುಂದರವಾಗಿದೆ ಎಂದು ಕಥೆಗಾರರೊಬ್ಬರು ಫೇಸ್‌ಬುಕ್‌ನಲ್ಲಿ ಬರೆದು ಕೊಂಡರು. ಸೋರುವ ನಲ್ಲಿ ರಿಪೇರಿಯಂಥ ಸಣ್ಣ ಕೆಲಸಕ್ಕೆ ಒಂದು ದಿನದ ಕೂಲಿ ಕೇಳುವ ಪ್ಲಂಬರ್‌ನ ದುರಾಸೆಯನ್ನು ಸಮಾಜದ ಭ್ರಷ್ಟತೆಗೆ ಉದಾಹರಣೆಯನ್ನಾಗಿ ಕಾದಂಬರಿಕಾರರೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕಥೆಗಾರನ ಬೀಸುಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ ಸಾಮಾಜಿಕ ಜಾಲತಾಣಗಳ ವಿಮರ್ಶೆ, ಆತನನ್ನು ಸ್ವಘೋಷಿತ ಪ್ರಗತಿಪರರ ಗುಂಪಿ ನಿಂದ ಹೊರಹಾಕಿದೆ.

ಈ ಉಗ್ರ ವಿಮರ್ಶಕಗಡಣ, ಬಡಪಾಯಿ ನಲ್ಲಿರಿಪೇರಿ ಕೆಲಸಗಾರನಲ್ಲಿ ಅಪ್ರಾಮಾಣಿಕತೆ, ಭ್ರಷ್ಟತೆಯನ್ನು ಕಂಡ ಕಾದಂಬರಿಕಾರರ ಬಗ್ಗೆ ಹೆಚ್ಚು ಗಮನಹರಿಸಲಿಲ್ಲ. ಬಹುಶಃ ಅವರು ಈಗಾಗಲೇ ಮತ್ತೊಂದು ಗುಂಪಿನಲ್ಲಿ ಗುರ್ತಿಸಿಕೊಂಡಿರುವುದರಿಂದ ನಿರ್ಲಕ್ಷಿಸಿರಬಹುದೇನೊ? ಈ ಘಟನೆಗಳಿಗೆ ಬಂದ ಪ್ರತಿಕ್ರಿಯೆಯೇ ಈ ಹೊತ್ತಿನ ವಿಮರ್ಶೆಯ ಧೋರಣೆಯನ್ನು, ಅದರಿಂದ ನಾವು ಗಳಿಸುತ್ತಿರುವುದೇನು, ಕಳೆದುಕೊಳ್ಳುತ್ತಿರುವುದೇನು ಎನ್ನುವುದನ್ನು ಸೂಚಿಸುತ್ತಿರುವಂತಿದೆ.

ಈವರೆಗೆ ಮನಸ್ಸುಗಳನ್ನು ಬೆಸೆಯುವ ಮದ್ದಿನ ರೂಪದಲ್ಲಿ ಸಾಹಿತ್ಯವನ್ನು ನೋಡುತ್ತಿದ್ದೆವು. ‘ಮದ್ದು ಹಾಕು’ ಎನ್ನುವುದನ್ನು ಕೆಡುಕಿನ ಅರ್ಥದಲ್ಲೂ ಬಳಸುತ್ತೇವೆ. ನಮಗೆ ಬೇಕಾದುದು ಔಷಧ ರೂಪದ ಮದ್ದು. ಈಗ ಹೆಚ್ಚು ಚಾಲ್ತಿಯಲ್ಲಿರುವ ಕೇಡಿನ ಮದ್ದು ವಿಷವಷ್ಟೇ ಅಲ್ಲ; ಸಿಡಿಯುವ ವಿಧ್ವಂಸಕ ಶಕ್ತಿಯನ್ನೂ ಹೊಂದಿರುವಂತಹದ್ದು. ಈ ವಿಧ್ವಂಸಕ ಮಾರ್ಗದಲ್ಲಿ ಹೋದಲ್ಲಿ ಇಡೀ ಕನ್ನಡ ಸಾಹಿತ್ಯವೇ ನಿರರ್ಥಕ ಎನ್ನುವಂತಾಗುತ್ತದೆ. ಧಾರ್ಮಿಕ ರಾಜಕಾರಣದಲ್ಲಿ ತೊಡಗಿರುವವರು ಹೇಳುತ್ತಿರುವ ಮಾತೂ ಅದೇ: ‘ನೀವು ಈವರೆಗೆ ನಡೆದು ಬಂದ ಹಾದಿ ಸರಿಯಾದುದಲ್ಲ.’

ರಘುನಾಥ ಚ.ಹ.
ರಘುನಾಥ ಚ.ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT