ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಯಾತ್ರೆ | ತೆಲಂಗಾಣ ಕಾಂಗ್ರೆಸ್‌ನ ‘ಫೀನಿಕ್ಸ್‌’ ಕಥನ...

Published 28 ನವೆಂಬರ್ 2023, 21:28 IST
Last Updated 28 ನವೆಂಬರ್ 2023, 21:28 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ರಾಜ್ಯ ಉದಯದ ನಂತರ ನಡೆದ ವಿಧಾನಸಭೆಯ ಎರಡೂ ಚುನಾವಣೆ ಗಳಲ್ಲಿ ಕಾಂಗ್ರೆಸ್‌ ಪಕ್ಷ ನೆಲಕಚ್ಚಿ ಮಲಗಿತ್ತು. ಒಟ್ಟು 119 ಸ್ಥಾನಗಳಲ್ಲಿ ಕಾಂಗ್ರೆಸ್‌ 2014ರಲ್ಲಿ 21 ಸ್ಥಾನ, 2018ರಲ್ಲಿ 19 ಸ್ಥಾನ ಗಳಿಸುವಷ್ಟರಲ್ಲೇ ಸುಸ್ತಾಗಿತ್ತು. ಸೋಲಿನ ನಂತರ ಕಾಂಗ್ರೆಸ್‌ ಗಾಢನಿದ್ರೆಗೆ ಜಾರಿತ್ತು. ಮೂರು ವರ್ಷಗಳ ಹಿಂದೆ ನಡೆದ ಗ್ರೇಟರ್‌ ಹೈದರಾಬಾದ್‌ ಮುನಿಸಿಪಲ್‌ ಕಾರ್ಪೋರೇಷನ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು 150 ಸ್ಥಾನಗಳಲ್ಲಿ 2 ಕಡೆ ಮಾತ್ರ. ಈ ಎಲ್ಲಾ ಘಟನೆಗಳಿಂದ ಬಹಳ ಹಳೆ ಪಕ್ಷವಾದ ಕಾಂಗ್ರೆಸ್‌ನ ಕತೆ ಮುಗಿದೇ ಹೋಯಿತು ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಪಕ್ಷದ ನಾಯಕರೂ ಕೂಡ ಇದಕ್ಕೆ ಇಂಬು ಕೊಡುವಂತೆಯೇ ನಿಷ್ಕ್ರಿಯರಾಗಿದ್ದರು.

ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇದೆ. ಆದರೆ, ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಅಚ್ಚರಿ ಆಗುತ್ತದೆ. ಕತೆ ಮುಗಿದೇ ಹೋಯಿತು ಎನ್ನುತ್ತಿರುವಾಗಲೇ ಇದ್ದಕ್ಕಿದ್ದಂತೆ ಕಾಂಗ್ರೆಸ್‌ ಮೈಕೊಡವಿ ಎದ್ದು ನಿಂತಿರುವ ಬಗೆಯಾದರೂ ಹೇಗೆ ಎನ್ನುವ ನನ್ನ ಪ್ರಶ್ನೆಗೆ ಸುತ್ತಾಟದ ಸಮಯದಲ್ಲಿ ಉತ್ತರ ಸಿಗುತ್ತಾ ಹೋಯಿತು.

‘ಪಕ್ಕದ ಕರ್ನಾಟಕದಲ್ಲಿ ಆರು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ನಂತರದ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ಗೆ ‘ಬೂಸ್ಟರ್ ಡೋಸ್‌’ನಂತೆ ಆಯಿತು’ ಎಂದು ಮುಚಿಂತಲ್‌ ಗ್ರಾಮದಲ್ಲಿ ಸಿಕ್ಕ ಕಾರ್ಯಕರ್ತ ವಿನೋದ್‌ಕುಮಾರ್‌ ಹೇಳಿದರು. ನನ್ನ ಮುಂದಿನ ಸುತ್ತಾಟದ ಸಮಯದಲ್ಲಿ ಇದು ನಿಜವೆನಿಸತೊಡಿತು.

ಹೈದರಾಬಾದ್‌ ಸೇರಿದಂತೆ ತೆಲಂಗಾಣದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿಯೇ ಇದೆ. ಕಳೆದ ಎರಡೂ ಚುನಾವಣೆಯಲ್ಲಿ ಮುಸ್ಲಿಮರು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಪರವಾಗಿಯೇ ಇದ್ದರು. ಇದಕ್ಕೆ ಕಾರಣ, ಕೆಸಿಆರ್‌ ಅಲ್ಪಸಂಖ್ಯಾತರಿಗಾಗಿ ತಂದಿದ್ದ ಯೋಜನೆಗಳು ಮತ್ತು ಕೋಮುಗಲಭೆ ತಲೆ ಎತ್ತದಂತೆ ಮಾಡಿದ್ದು. ಆದರೆ, ಈಗ ಕಾಲ ಬದಲಾಗಿದೆ. ಕರ್ನಾಟಕದ ಚುನಾವಣೆ ವೇಳೆ ಜೆಡಿಎಸ್‌, ಬಿಜೆಪಿಯ ‘ಬಿ ಟೀಂ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಾರಿ ಸಾರಿ ಹೇಳಿದ್ದರು. ಇದರಿಂದಾಗಿ ಮುಸ್ಲಿಮರು ‘ತೆನೆ ಹೊತ್ತ ಮಹಿಳೆ’ಗೆ ಬೆನ್ನು ತೋರಿಸಿದ್ದರು. ಜೆಡಿಎಸ್‌ನ ಶಾಸಕರ ಸಂಖ್ಯೆ 19ಕ್ಕೆ ಕುಸಿಯಿತು. ಅದೇ ತಂತ್ರವನ್ನು ತೆಲಂಗಾಣದಲ್ಲೂ ರಾಹುಲ್‌ ಗಾಂಧಿ ಬಳಸುತ್ತಿದ್ದಾರೆ. ಬಿಆರ್‌ಎಸ್‌, ಬಿಜೆಪಿಯ ‘ಬಿ ಟೀಂ’ ಎನ್ನುವ ಮಾತನ್ನು ಪ್ರತಿ ಸಭೆಯಲ್ಲೂ ಕೂಗಿ ಕೂಗಿ ಹೇಳುತ್ತಿದ್ದಾರೆ. ರಾಜಕೀಯ ಕುರಿತು ಆಸಕ್ತಿ ಇರುವ ತರಕಾರಿ ವ್ಯಾಪಾರಿ ಮನ್ಮಥಪ್ಪಸ್ವಾಮಿ, ‘ಕರ್ನಾಟಕದಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಒಮ್ಮತದಿಂದ ಮತ ಹಾಕಿದ್ದರಿಂದಲೇ ಭರ್ಜರಿಯಾಗಿ ಗೆದ್ದು ಅಧಿಕಾರಕ್ಕೆ ಬಂದಿದೆ. ಇಲ್ಲಿನ ಮುಸ್ಲಿಮರೂ ಅದೇ ಹಾದಿ ತುಳಿದರೆ ಕಾಂಗ್ರೆಸ್‌ಗೆ ಸಿಹಿ, ಬಿಆರ್‌ಎಸ್‌ಗೆ ಕಹಿ...’ ಎಂದು ತಮ್ಮದೇ ಧಾಟಿಯಲ್ಲಿ ವಿಶ್ಲೇಷಿಸಿದರು.

ಈಟೆಲ ರಾಜೇಂದರ್‌ ಹಿಂದುಳಿದ ಮುದಿರಾಜ ಜಾತಿಯ ಪ್ರಭಾವಿ ನಾಯಕ. ಬಿಆರ್‌ಎಸ್‌ ಸರ್ಕಾರದಲ್ಲಿ ಸಚಿವರಾಗಿದ್ದರು. ಮುಖ್ಯಮಂತ್ರಿ ಕೆಸಿಆರ್‌ಗೆ ಬಲಗೈನಂತೆ ಇದ್ದರು. ಕೆಸಿಆರ್‌ ಮುಂದಿನ ದಿನಗಳಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡುವ ಬದಲು ಪುತ್ರ, ಸಚಿವ ಕೆ.ಟಿ.ರಾಮರಾವ್‌ ಅವರನ್ನು ಆ ಕುರ್ಚಿಗೆ ತರಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸೂಚನೆ ಅವರಿಗೆ ಸಿಕ್ಕಿತ್ತು. ಅಸಮಾಧಾನ ಹೊಗೆಯಾಡಿತು. ಇಬ್ಬರ ನಡುವೆ ಕಂದಕ ದೊಡ್ಡದಾಯಿತು. ಕೆಸಿಆರ್‌, ಈಟೆಲ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದುಹಾಕಿದಲ್ಲದೇ ಕೇಸುಗಳನ್ನೂ ಹಾಕಿಸಿದ್ದರು. ಇಷ್ಟಲ್ಲದೇ ಈ ಚುನಾವಣೆಯಲ್ಲಿ ಈಟೆಲ ಪ್ರತಿನಿಧಿಸುವ ಜಾತಿಗೆ ಬಿಆರ್‌ಎಸ್‌ ಒಂದೂ ಟಿಕೆಟ್‌ ನೀಡಿಲ್ಲ. ಈ ಕಾರಣಕ್ಕಾಗಿ ಮುದಿರಾಜ ಜಾತಿ ಮತಗಳಲ್ಲಿ ಒಂದಷ್ಟು ಮತಗಳು ಕಾಂಗ್ರೆಸ್‌ಗೂ ಬರುತ್ತವೆ ಎನ್ನುವುದು ಮುಖಂಡರ ನಂಬಿಕೆ.

ಜನಪ್ರಿಯ ಮತ್ತು ಧಾಡಸಿ ಗುಣದ ಕೆಸಿಆರ್‌ ಅವರನ್ನು ಪ್ರಶ್ನಿಸುವ ಧೈರ್ಯವನ್ನು ಯಾವ ರಾಜಕಾರಣಿಯೂ ಮಾಡುತ್ತಿರಲಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್‌ ನಾಯಕರು ಕೆಸಿಆರ್‌ ಜೊತೆ ಗುಟ್ಟಾಗಿ ಉತ್ತಮ ಬಾಂಧವ್ಯ ಹೊಂದಿರುತ್ತಿದ್ದರು. ಹೀಗಾಗಿಯೇ ಯಾದಗಿರಿಗುಟ್ಟದ ಶ್ರೀನಿವಾಸ್‌, ‘ಕಾಂಗ್ರೆಸ್‌ ಅನ್ನ ಗೆಲ್ಲಿಸಿದರೂ, ಕೆಸಿಆರ್‌ ಅವರನ್ನು ಹೇಗಿದ್ದರೂ ಖರೀದಿ ಮಾಡುತ್ತಾರೆ’ ಎಂದು ಗೇಲಿ ಮಾಡಿದರು. ಆದರೆ, ಇದಕ್ಕೆ ಅಪವಾದ ಎನ್ನುವಂತೆ ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ ರೆಡ್ಡಿ ‘ಸೇರಿಗೆ ಸವ್ವಾಸೇರು’ ಎನ್ನುವಂತೆ ಕೆಸಿಆರ್‌ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ರೇವಂತ ರೆಡ್ಡಿ, ಕೆಸಿಆರ್‌ ಜೊತೆ ರಾಜಿ ಮಾಡಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎನ್ನುವ ನಂಬಿಕೆ ಜನರಿಗೆ ಬಂದಂತೆ ಕಾಣುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ‘ಚುನಾವಣಾ ತಂತ್ರಗಾರಿಕೆ’ಯನ್ನು ಹೇಳಿಕೊಟ್ಟ ಬಳ್ಳಾರಿ ಮೂಲದ ಸುನಿಲ್‌ ಕನುಗೋಲ್‌, ಇಲ್ಲಿಯೂ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ. ಕರ್ನಾಟಕದಲ್ಲಿ ಐದು ಗ್ಯಾರಂಟಿಗಳನ್ನು ಕೊಟ್ಟರೆ, ಇಲ್ಲಿ ಒಂದು ಬೋನಸ್‌ ಎನ್ನುವಂತೆ ಆರು ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಕರ್ನಾಟಕದಲ್ಲಿ ಗ್ಯಾರಂಟಿಗೆ ಮತದಾರರು ಮಾರುಹೋಗಿದ್ದಾರೆಂದು ಎಲ್ಲ ಪಕ್ಷಗಳ ನಂಬಿಕೆ. ಆದ್ದರಿಂದಲೇ ಕಾಂಗ್ರೆಸ್‌ ಇಲ್ಲಿ ಬಿಆರ್‌ಎಸ್‌ ಮತ್ತು ಬಿಜೆಪಿಗಿಂತ ಮೊದಲೇ ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಅವುಗಳ ಬಗೆಗೆ ಜನರು ಒಲವು ತೋರುವ ಲಕ್ಷಣವನ್ನು ಗುರುತಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌, ಅವರ ಪುತ್ರ, ಸಚಿವ ಕೆ.ಟಿ.ರಾಮರಾವ್‌ ಪ್ರತಿದಾಳಿಗೆ ಮುಂದಾದರು. ಆಡಳಿತ ಪಕ್ಷದ ಕ್ರಿಯೆಗೆ, ವಿರೋಧ ಪಕ್ಷಗಳು ಪ್ರತಿಕ್ರಿಯೆ ಕೊಡುವುದು ಸಾಮಾನ್ಯ. ಇಲ್ಲಿ ವಿರೋಧ ಪಕ್ಷದ ಕ್ರಿಯೆಗೆ ಆಡಳಿತ ಪಕ್ಷ ಪ್ರತಿಕ್ರಿಯೆ ಕೊಡುವಂತಾಗಿದೆ. ಇದೇ ರೀತಿ ಕರ್ನಾಟಕದಲ್ಲಿ, ಅಂದಿನ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌ನ ಕ್ರಿಯೆಗೆ, ಪ್ರತಿಕ್ರಿಯೆ ಕೊಡುವುದರಲ್ಲೇ ಕಾಲಹರಣ ಮಾಡಿತ್ತು.

ರಾಹುಲ್‌ ಗಾಂಧಿ ಕೈಗೊಂಡ ಭಾರತ್‌ ಜೋಡೊ ಯಾತ್ರೆ ತೆಲಂಗಾಣದಲ್ಲಿ 375 ಕಿಲೊಮೀಟರ್‌ ಸಾಗಿ ಹೋದ ಹಾದಿಯಲ್ಲಿ ನಾನು ಇಡೀ ದಿನ ಸುತ್ತಾಡಿದೆ. ಮೆಹಬೂಬ್ ನಗರದ ರಸ್ತೆಬದಿ ಎಳನೀರು ವ್ಯಾಪಾರ ಮಾಡುತ್ತಿದ್ದ ಗೋಪಾಲ, ‘ಇದೇ ರಸ್ತೆಯಲ್ಲಿ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೊ ಯಾತ್ರೆ ಸಾಗಿತ್ತು. ನಾನು ಅದನ್ನು ಇಲ್ಲೇ ನಿಂತು ನೋಡಿದೆ. ಐದು ಕಿಲೊಮೀಟರ್‌ ವರೆಗೆ ಜನ ಸಾಗರದಂತೆ ಇದ್ದರು’ ಎಂದು ಕಣ್ಣುಗಳನ್ನು ಅರಳಿಸಿ ಹೇಳಿದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಹೊಸ ಖದರ್‌ ತಂದುಕೊಟ್ಟಿದ್ದು ರಾಹುಲ್‌ ಗಾಂಧಿಯ ಯಾತ್ರೆ ಎಂದರೆ ತಪ್ಪಾಗಲಾರದು.  ‘ಈ ಚುನಾವಣೆ ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಯುದ್ಧವಲ್ಲ, ಬದಲಿಗೆ ‘ದೊರಲ ತೆಲಂಗಾಣ V/S ಪ್ರಜಲ ತೆಲಂಗಾಣ’ ದ ಯುದ್ಧ. ತೆಲಂಗಾಣದ ನಾಲ್ಕು ಕೋಟಿ ಜನರು, ನಾಲ್ಕು ದೊರೆಗಳ (ಕೆಸಿಆರ್‌, ಪುತ್ರ ಕೆ.ಟಿ.ರಾಮರಾವ್‌, ಪುತ್ರಿ ಕೆ.ಕವಿತಾ, ಸೋದರಳಿಯ, ಸಚಿವ ಹರೀಶ್‌ ರಾವ್‌) ಮೇಲೆ ಮಾಡುತ್ತಿರುವ ಯುದ್ಧ’ ಎಂದು ಆರಂಭದಲ್ಲೇ ರಾಹುಲ್‌ ಗುಡುಗಿದರು. ಇದರ ಪರಿಣಾಮವೆಂಬಂತೆ ‘ಕೆಸಿಆರ್‌ ಅವರ ಅಹಂಕಾರವನ್ನು ಈ ಬಾರಿ ಕೊನೆಗಾಣಿಸುತ್ತೇವೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ತುರುಸಿನಿಂದ ಓಡಾಡುತ್ತಿದ್ದಾರೆ.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಆರು ಗ್ಯಾರಂಟಿಗಳಿಗೆ ಆರು ಮುಖ್ಯಮಂತ್ರಿಗಳನ್ನು ಮಾಡುತ್ತಾರೆ’ ಎಂದು ಪೆದ್ದಾಪುರದ ಬಿಆರ್‌ಎಸ್‌ ಕಾರ್ಯಕರ್ತ ವೆಂಕಟೇಶ್‌ ವ್ಯಂಗ್ಯವಾಡಿದರು. ಏಕೆಂದರೆ, ಕಾಂಗ್ರೆಸ್‌ನಲ್ಲಿ ರೇವಂತ ರೆಡ್ಡಿ, ಮಲ್ಲು ಭಟ್ಟಿ ವಿಕ್ರಮಾರ್ಕ, ಉತ್ತಮಕುಮಾರ್‌ ರೆಡ್ಡಿ, ಕೋಮಟಿ ರೆಡ್ಡಿ, ವೆಂಕಟ ರೆಡ್ಡಿ ಅವರ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. ಇಷ್ಟೇ ಅಲ್ಲದೇ ಕಾಂಗ್ರೆಸ್‌ ಅನ್ನು ಇಲ್ಲಿನ ಜನರು ‘ರೆಡ್ಡಿಗಳ ಪಕ್ಷ’ ಎಂದು ಕರೆಯುತ್ತಾರೆ. ಪ್ರಮುಖ ನಾಯಕರೆಲ್ಲಾ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ತೆಲಂಗಾಣವನ್ನೇ ಧ್ಯಾನಿಸುವ ಮತ್ತು ಇಲ್ಲಿನ ಸಂಸ್ಕೃತಿ, ಸಮಾಜ, ಆರ್ಥಿಕತೆ, ರಾಜಕೀಯ, ಜನರ ನಾಡಿಮಿಡಿತವನ್ನು ಅರಿಯುವುದರಲ್ಲಿ ನಿಸ್ಸೀಮನಾದ ಕೆಸಿಆರ್‌ನಂತಹ ನಾಯಕ ಕಾಂಗ್ರೆಸ್‌ನಲ್ಲಿಲ್ಲ.

ಇಷ್ಟೆಲ್ಲಾ ಕೊರತೆಗಳ ನಡುವೆ ಬೂದಿಯಿಂದ ಮೇಲೆದ್ದು ಬಂದ ಫೀನಿಕ್ಸ್‌ ಹಕ್ಕಿಯ ಕತೆಯಂತೆ ಕಾಂಗ್ರೆಸ್‌ ನಳನಳಿಸುತ್ತಿರುವುದು ಎಲ್ಲೆಲ್ಲೂ ಕಂಡುಬರುತ್ತಿದೆ. ಬಹುಶಃ ಆಡಳಿತ ಪಕ್ಷದ ಮೇಲಿನ ಅತೃಪ್ತಿಯಿಂದಾಗಿ ಕಾಂಗ್ರೆಸ್‌ ನ ಹಲವಾರು ಕೊರತೆಗಳು ಗೌಣವಾಗಿಬಿಟ್ಟಿವೆ.

ರಾಜಕಾರಣದಲ್ಲಿ ಎಲ್ಲವೂ ಮುಗಿದೇ ಹೋಯಿತು, ಸರ್ವನಾಶವಾಯಿತು ಎನ್ನುವ ಮಾತು ಸುಳ್ಳಾಗುತ್ತಲೇ ಇರುವುದನ್ನು ಇತಿಹಾಸ ನೆನಪಿಸುತಿರುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT