ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಚುನಾವಣಾ ಯಾತ್ರೆ | ಜನಪ್ರಿಯ ಕೆಸಿಆರ್‌ಗೆ ಭರವಸೆಗಳೇ ಭಾರ

Published 29 ನವೆಂಬರ್ 2023, 19:36 IST
Last Updated 29 ನವೆಂಬರ್ 2023, 19:36 IST
ಅಕ್ಷರ ಗಾತ್ರ

ಹೈದರಾಬಾದ್‌: ಕಾರು ಚಾಲಕ ಜಾವೇದ್‌, ನನಗೆ ಏನನ್ನೋ ತೋರಿಸುವ ತವಕದಲ್ಲಿದ್ದರು. ಅದು ಸಮೀಪಿಸುತ್ತಲೇ ‘ಇದೇ ನೋಡಿ ಹೈದರಾಬಾದ್‌ ಔಟರ್‌ ರಿಂಗ್‌ ರೋಡ್‌. ಇದರ ಕೆಲಸ ಪೂರ್ಣವಾದರೆ ಟ್ರಾಫಿಕ್‌ ಸಮಸ್ಯೆಯೇ ಇಲ್ಲವಾಗುತ್ತದೆ’ ಎಂದು ಖುಷಿಯಿಂದಲೇ ಹೇಳಿದರು.

ಕಾರು ಸಾಗುತ್ತಲೇ ಇತ್ತು, ಜಾವೇದ್‌ ಮಾತೂ ಕೂಡ. ಇಲ್ಲಿನ ರಸ್ತೆಯಲ್ಲಿ ಗುಂಡಿಗಳು ಏನಾದರು ಕಾಣಿಸಿತೆ? ಟ್ರಾಫಿಕ್‌ ಪೊಲೀಸರು ಅನಗತ್ಯವಾಗಿ ಕಿರಿಕಿರಿ ಮಾಡಿದ್ದನ್ನು ಕಂಡೀರಾ? ಅದೋ ಅಲ್ಲಿ ನೋಡಿ, ಅದು ಮಿಷನ್‌ ಭಗೀರಥ ವಾಟರ್‌ ಟ್ಯಾಂಕ್‌. ಈ ಯೋಜನೆಯಿಂದಾಗಿಯೇ ತೆಲಂಗಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ’ ಎಂದು ನೇರ ವೀಕ್ಷಕ ವಿವರಣೆಯನ್ನು ಕೊಡುತ್ತಿದ್ದರು.

ಅಷ್ಟರಲ್ಲಿ ಪಟಾನ್‌ಚೆರು ಗ್ರಾಮ ಸಿಕ್ಕಿತು. ಅಲ್ಲಿನ ಹೇರ್‌ಕಟ್‌ ಸಲೂನ್‌ ಮಾಲೀಕ ಮಲ್ಲೇಶ್‌ ಮಾತನಾಡಲು ಉತ್ಸಾಹ ತೋರಿಸಿದರು. ‘ಕೆಸಿಆರ್‌ ಅಂಥ ನಾಯಕನನ್ನು ಕಾಂಗ್ರೆಸ್‌ನಲ್ಲಿ ತೋರಿಸಿ, ನೋಡೋಣ’ ಎಂದು ಸವಾಲು ಹಾಕಿದರು.

ತಿರುಗಾಟದ ಸಂದರ್ಭದಲ್ಲಿ ರೈತ ಬಂಧು, ದಲಿತ ಬಂಧು, ಬಿ.ಸಿ.ಬಂಧು, ಅಲ್ಪಸಂಖ್ಯಾತರ ಬಂಧು ಹೆಸರುಗಳು ಜನರಿಂದ ಹೆಚ್ಚಾಗಿ ಕೇಳಿಬರುತ್ತಿದ್ದವು. ಈ ಕುರಿತು ವಿವರವನ್ನು ಕೆದಕುತ್ತಾ ಹೋದಾಗ, ಪಹಣಿ ಹೊಂದಿರುವ ರೈತನ ಪ್ರತಿ ಎಕರೆಗೆ ಮುಂಗಾರು ಮತ್ತು ಹಿಂಗಾರು ಸೇರಿ ವರ್ಷಕ್ಕೆ ₹10 ಸಾವಿರ ಕೊಡಲಾಗುತ್ತದೆ. ದಲಿತ ಬಂಧು ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ₹ 10 ಲಕ್ಷ ಅನುದಾನ, ಅಲ್ಪಸಂಖ್ಯಾತರ ಬಂಧು ಅಡಿಯಲ್ಲಿ ಕುಟುಂಬಕ್ಕೆ ₹ 1 ಲಕ್ಷ, ಬಿ.ಸಿ. ಬಂಧುವಿನಲ್ಲಿ ಹಿಂದುಳಿದ 15 ಜಾತಿಗಳ ಕುಟುಂಬಗಳಿಗೆ ತಲಾ ₹ 1 ಲಕ್ಷ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿತು. ರೈತರಿಗೆ ದಿನಪೂರ್ತಿ ತ್ರಿಫೇಸ್‌ ಉಚಿತ ವಿದ್ಯುತ್‌, ವೃದ್ಧರಿಗೆ ₹ 2 ಸಾವಿರ, ಅಂಗವಿಕಲರಿಗೆ ₹ 4 ಸಾವಿರ ಪಿಂಚಣಿ ನೀಡುತ್ತಿರುವುದನ್ನು ಹೆಚ್ಚಿನವರು ನೆನಪಿಸಿಕೊಂಡರು. ಇವೆಲ್ಲವೂ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಜಾರಿಗೆ ತಂದ ಅತ್ಯಂತ ಜನಪ್ರಿಯ ಯೋಜನೆಗಳು.

ಸದಾಶಿವಪೇಟ ಬಳಿ ಹತ್ತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ ರೆಡ್ಡಿ, ರೈತ ಬಂಧು ಯೋಜನೆಯನ್ನು ಮೆಚ್ಚುತ್ತಲೇ ತಕರಾರು ತೆಗೆದರು. ‘ರೈತ ಬಂಧು ಯೋಜನೆಯಲ್ಲಿ ಸಣ್ಣ ರೈತರಿಂದ ಹಿಡಿದು ಸಾವಿರಾರು ಎಕರೆ ಇರುವ ದೊಡ್ಡ ರೈತರಿಗೂ ಹಣ ನೀಡಲಾಗುತ್ತಿದೆ. ಇದು ಸರಿಯಲ್ಲ’ ಎಂದರು. ತಾವು ಯಾವ ಪಕ್ಷಕ್ಕೂ ಸೇರಿದವರಲ್ಲ ಎಂದು ಹೇಳಿದರೂ ಅವರ ಮೊಬೈಲ್‌ ಹಿಂಬದಿಗೆ ಅಂಟಿಸಿದ್ದ ಸ್ಟಿಕರ್‌ನಲ್ಲಿ ಕೆಸಿಆರ್‌ ಚಿತ್ರವಿತ್ತು.

ಹೈದರಾಬಾದ್‌ನ ಜನರಿಗೆ ಕೆಸಿಆರ್‌ ಬಗೆಗೆ ಅಪಾರ ಒಲವಿದೆ. ಸಣ್ಣ ವ್ಯಾಪಾರಿಯಿಂದ ಉದ್ಯಮಿಗಳ ವರೆಗೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ದಿಢೀರ್‌ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೆಸಿಆರ್‌ ಎತ್ತಿದ ಕೈ. ಆದ್ದರಿಂದಲೇ ಉದ್ಯಮಿಗಳು ಹೈದರಾಬಾದ್‌ ಕಡೆಗೆ ವಲಸೆ ಬರುತ್ತಿದ್ದಾರೆ. ಹೈಟೆಕ್‌ ಸಿಟಿಯಲ್ಲಿ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಾಲು ಮತ್ತು ಸಾಯಿ ಅವರು ಕೆಸಿಆರ್‌ ಕೆಲಸ ಮೆಚ್ಚುತ್ತಾ, ಅವರ ಪುತ್ರ ಕೆ.ಟಿ.ರಾಮರಾವ್‌ ಕುರಿತು ‘ಅವರು ಬುದ್ಧಿವಂತರು, ದೂರದೃಷ್ಟಿ ಉಳ್ಳವವರು, ಮುಖ್ಯಮಂತ್ರಿ ಆಗಲು ಅರ್ಹತೆ ಇರುವವರು’ ಎಂದು ಹೊಗಳಿಕೆಯ ಮಹಾಪೂರವನ್ನೇ ಹರಿಸಿದರು. 

‘ಅಭಿವೃದ್ಧಿ ಆಗಿಯೇ ಇಲ್ಲ ಎನ್ನುವುದಿಲ್ಲ. ಆದರೆ, ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರಿಗೆ ಮಾತ್ರ ಸಿಕ್ಕಿವೆ’ ಎಂದು ಪದವೀಧರ ಅಬ್ದುಲ್‌ ರಶೀದ್‌ ದೂರಿದರು. ಕಳೆದ ಚುನಾವಣೆಯಲ್ಲಿ ಬಿಆರ್‌ಎಸ್‌ ಪಕ್ಷದಲ್ಲಿದ್ದ ಇವರು, ಈಗ ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿದ್ದಾರೆ.

ಜೆಡ್ಚರ್ಲ ಜಿಲ್ಲಾ ಕೇಂದ್ರದ ಎಪಿಎಂಸಿ ಆವರಣದಲ್ಲಿ ಗುಂಪಾಗಿ ಕುಳಿತಿದ್ದ ರೈತರು ರಾಜಕೀಯ ಚರ್ಚೆಯಲ್ಲಿ ಮುಳುಗಿದ್ದರು. ನಾವು ಅವರೊಂದಿಗೆ ಸೇರಿಕೊಂಡೆವು. ಅವರು ಬಿಆರ್‌ಎಸ್‌ ಬಗೆಗೆ ಒಳ್ಳೆಯ ಮಾತುಗಳನ್ನು ಆಡಿದರು. ಕಳೆದ ಎರಡೂ ಚುನಾವಣೆಯಲ್ಲಿ ಆ ಪಕ್ಷಕ್ಕೇ ಮತ ಹಾಕಿದ್ದರು, ಆದರೀಗ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ‘ಹಸ್ತ’ವನ್ನು ತೋರಿಸಿದರು. ‘ಏಕೆ’ ಎಂದು ಕೇಳಿದರೆ, ‘ಕಾಂಗ್ರೆಸ್‌ಗೂ ಒಂದು ಅವಕಾಶ ಕೊಟ್ಟು ನೋಡೋಣ, ಬದಲಾವಣೆಗಾಗಿ ಬದಲಾವಣೆ’ ಎಂದು ನಗುತ್ತಾ ಹೇಳಿದರು. ಎಪಿಎಂಸಿ ಹೊರಗೆ ಹತ್ತಾರು ಮಹಿಳೆಯರು ತರಕಾರಿ ಮಾರುತ್ತಾ ಕುಳಿತಿದ್ದರು. ಅವರಲ್ಲಿ ಶಾರದಾ ಹಾಗೂ ಪಾರ್ವತಿ ಮಾತನಾಡಲು ಒಪ್ಪಿದರು. ‘ತೆಲಂಗಾಣ ನಮ್ಮದು ಎನ್ನುವ ಕಾರಣಕ್ಕಾಗಿ ಎರಡೂ ಬಾರಿ ಕಾರಿಗೆ (ಬಿಆರ್‌ಎಸ್‌ ಪಕ್ಷದ ಚಿಹ್ನೆ) ಮತ ಹಾಕಿದ್ದೆವು. ಆದರೆ, ನಮ್ಮ ಬದುಕು ಉತ್ತಮವಾಗಲಿಲ್ಲ. ಅರ್ಜಿ ಕೊಟ್ಟು, ಕೊಟ್ಟು ಸಾಕಾಯಿತು. ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುತ್ತೇವೆ’ ಎಂದು ನೇರವಾಗಿ ಹೇಳಿದರು.

ತೆಲಂಗಾಣ ರೈತರು ದಶಕಗಳಿಂದಲೂ ಏತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಲೇ ಇದ್ದರು. ಕೆಸಿಆರ್‌ ಅಧಿಕಾರಕ್ಕೆ ಬಂದ ಮೇಲೆ ಗೋದಾವರಿ ನದಿಗೆ ‘ಕಾಳೇಶ್ವರ ಬ್ಯಾರೇಜ್‌’ ನಿರ್ಮಿಸಿದರು. ಇದು ವಿಶ್ವದಲ್ಲೇ ಬೃಹತ್‌ ಏತ ನೀರಾವರಿ ಯೋಜನೆ. ಇದಕ್ಕಾಗಿ ಖರ್ಚಾಗಿದ್ದು ಸುಮಾರು ₹ 1 ಲಕ್ಷ ಕೋಟಿ. ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಲೇ ಇದ್ದವು. ಜನರು ಇದನ್ನು ‘ರಾಜಕೀಯ ಆರೋಪ’ ಎಂದು ನಿರ್ಲಕ್ಷಿಸಿದ್ದರು. ಆದರೆ, ಒಂದು ತಿಂಗಳ ಹಿಂದೆ ಮೇಡಿಗಡ್ಡ ಬಳಿ ಬ್ಯಾರೇಜ್‌ನ ಮೂರು ಪಿಲ್ಲರ್‌ಗಳು ಕುಸಿದವು. ಆನಂತರ, ಈ ಯೋಜನೆಯು ಕೆಸಿಆರ್‌ ಕುಟುಂಬಕ್ಕೆ ಎಟಿಎಂ ಆಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾಡುತ್ತಿದ್ದ ಆರೋಪ ನಿಜ ಎನ್ನುವ ಮಾತು ಕಾಳ್ಗಿಚ್ಚಿನಂತೆ ಹಬ್ಬಿದೆ. ಇದು ಚುನಾವಣೆಯ ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ.

ಇದು ಅವಿಭಜಿತ ಆಂಧ್ರಪ್ರದೇಶ ಅಸ್ತಿತ್ವದಲ್ಲಿದಾಗಿನ ಮಾತು. ತೆಲಂಗಾಣ ವ್ಯಾಪ್ತಿಯಲ್ಲಿದ್ದ ಹೈದರಾಬಾದ್‌ನಿಂದ ಬೊಕ್ಕಸಕ್ಕೆ ಹೆಚ್ಚು ಹಣ ಬರುತ್ತಿತ್ತು. ಆದರೆ, ಆಂಧ್ರಪ್ರದೇಶ ಸರ್ಕಾರ ಕರಾವಳಿ ಮತ್ತು ರಾಯಲುಸೀಮೆ ಪ್ರದೇಶಕ್ಕೆ ಹೆಚ್ಚು ಅನುದಾನ ಕೊಡುತ್ತಿತ್ತು. ಇದು ತೆಲಂಗಾಣ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು, ಅಲ್ಲದೇ ತಮ್ಮ ಬೊಕ್ಕಸದ ಹಣ ನ್ಯಾಯಯುತವಾಗಿ ತಮಗೇ ಧಕ್ಕಬೇಕು ಎನ್ನುವ ಹಕ್ಕೊತ್ತಾಯವಾಗಿತ್ತು.

ಆದರೆ, ತೆಲಂಗಾಣ ರಾಜ್ಯ ರಚನೆಯ ನಂತರ ‘ಬೊಕ್ಕಸದ ಹಣ ಕೆಸಿಆರ್‌ ಕುಟುಂಬ ಮತ್ತು ಪಕ್ಷದ ನಾಯಕರೇ ಕಬಳಿಸುತ್ತಿದ್ದಾರೆ. ಇದರಿಂದ ತಮಗೇನೂ ಅನುಕೂಲವಾಗಿಲ್ಲ’ ಎನ್ನುವ ಸಿಟ್ಟು ವಿಪರೀತವಾಗಿ ಕಂಡುಬರುತ್ತಿದೆ. ಭೋಂಗಿರ್‌ನಲ್ಲಿ ಸಿಕ್ಕ ಶ್ರೀನಿವಾಸ್‌ ‘ಬಂಧು ಯೋಜನೆಗಳಿಂದ ಶಕ್ತಿ ಬಂದಿದ್ದು, ಅಧಿಕಾರಸ್ಥರ ಬಂಧುಗಳಿಗೆ ಮಾತ್ರ’ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ.

ಕೆಸಿಆರ್‌, ತೆಲಂಗಾಣ ಪ್ರತ್ಯೇಕ ಹೋರಾಟ ಸಂದರ್ಭದಲ್ಲಿ ಸರ್ಕಾರದಲ್ಲಿ ಖಾಲಿ ಇರುವ ಗ್ರೂಪ್‌–1, ಗ್ರೂಪ್‌–2 ರ ಹುದ್ದೆಗಳನ್ನು ಪ್ರತಿವರ್ಷ ಭರ್ತಿ ಮಾಡುವುದಾಗಿ ವಾಗ್ದಾನ ಮಾಡಿದ್ದರು. ತೆಲಂಗಾಣ ರಾಜ್ಯ ಉದಯವಾಗಿ ಹತ್ತು ವರ್ಷಗಳಾಗಿವೆ. ಆದರೆ, ಪೂರ್ಣವಾಗಿ ತುಂಬಿಲ್ಲ. ಗ್ರೂಪ್‌–1 ಹುದ್ದೆಗೆ ಪರೀಕ್ಷೆ ನಡೆಸಲಾಯಿತು. ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಅದನ್ನು ರದ್ದುಪಡಿಸಲಾಯಿತು. ಆನಂತರ ನಡೆದ ಮರು ಪರೀಕ್ಷೆ ಕ್ರಮಬದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಅದನ್ನೂ ರದ್ದುಪಡಿಸಲಾಯಿತು. 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ಕೊಡಲಾಗಿತ್ತು. ಆದರೆ, 5 ಸಾವಿರ ಶಿಕ್ಷಕರ ಹದ್ದೆಗಳಿಗೆ ಮಾತ್ರ ನೋಟಿಫಿಕೇಶ್‌ ಹೊರಡಿಸಲಾಯಿತು. ಇವೆಲ್ಲ ಕಾರಣಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಭ್ರಮನಿರಶನಗೊಂಡಿದ್ದಾರೆ.

ವರಂಗಲ್‌ನಲ್ಲಿ ಸಿಕ್ಕ ಸರ್ಕಾರಿ ನೌಕರರೊಬ್ಬರು ‘ಮತಗಳಿಸುವ ಸಲುವಾಗಿ ಹತ್ತಾರು ಯೋಜನೆಗಳನ್ನು ಮುಖ್ಯಮಂತ್ರಿ ಘೋಷಿಸಿಬಿಟ್ಟಿದ್ದಾರೆ. ಅವುಗಳಿಗೆ ಹಣ ಹೊಂದಿಸಲು ನಮಗೆ ಸಂಬಳವನ್ನು ತಡವಾಗಿ ಕೊಡಲಾಗುತ್ತಿದೆ‘ ಎಂದು ಬೇಸರ ವ್ಯಕ್ತಪಡಿಸಿದರು. ಸಂಗಾರೆಡ್ಡಿ ನಗರದ ಜೆರಾಕ್ಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ‘ಬಿ.ಇಡಿ ಮಾಡಿದ್ದೇನೆ. ಉದ್ಯೋಗ ಇಲ್ಲದೇ ಇಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಸಿಟ್ಟಾದರು.

ದಲಿತ ಬಂಧು, ಬಿ.ಸಿ ಬಂಧು, ಅಲ್ಪಸಂಖ್ಯಾತರ ಬಂಧು, ಡಬಲ್‌ ಬೆಡ್‌ರೂ ಮನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಶಾಸಕರಿಗೆ ಕೊಡಲಾಗಿದೆ. ಹಲವು ಶಾಸಕರು ಫಲಾನುಭವಿಗಳಿಂದ ಕಮಿಷನ್‌ ಪಡೆದು ಸವಲತ್ತು ಕೊಟ್ಟಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿತ್ತು. ಕಮಿಷನ್‌ ಕಾರಣಕ್ಕಾಗಿ ಫಲಾನುಭವಿಗಳು ಸಿಟ್ಟಾಗಿದ್ದರೇ, ಅತ್ತ ಯೋಜನೆಯಿಂದ ವಂಚಿತರಾದ ಲಕ್ಷಾಂತರ ಮಂದಿ ಬೆಂಕಿ ಉಗುಳುತ್ತಿದ್ದಾರೆ. ಕನಿಷ್ಠ 30 ಕ್ಕೂ ಹೆಚ್ಚು ಶಾಸಕರ ವಿರುದ್ಧ ಆಕ್ರೋಶವಿದೆ. ಆದರೆ, ಅನುಭವಿ ರಾಜಕಾರಣಿ ಇದನ್ನು ಗ್ರಹಿಸುವಲ್ಲಿ ಸೋತು, ಅವರಿಗೇ ಟಿಕೆಟ್‌ ಕೊಟ್ಟಿದ್ದಾರೆ ಎಂಬ ಆಪಾದನೆ ಕೂಡ ಸುಲಭದಲ್ಲಿ ಕೇಳಿಬರುತ್ತಿತ್ತು.

‘ಕೆಸಿಆರ್‌, ಸಿದ್ದಿಪೇಟ್‌ನಲ್ಲಿರುವ ತಮ್ಮ ತೋಟದಮನೆಯಿಂದಲೇ ಕೆಲಸ ಮಾಡುತ್ತಾರೆ. ಅವರದು ಒಂದು ರೀತಿ ವರ್ಕ್‌ ಫ್ರಂ ಹೋಮ್‌’ ಎಂದು ವ್ಯಂಗ್ಯದ ಧಾಟಿಯಲ್ಲಿ ಪ್ರಸನ್ನ ಹೇಳಿದರು. ಇದಕ್ಕೆ ಕಾರಣವಿದೆ. ಕೆಸಿಆರ್‌ ಗೃಹ ಕಚೇರಿ, ಸಚಿವಾಲಯದಲ್ಲಿ ಕುಳಿತು ಕೆಲಸ ಮಾಡಿದ್ದೇ ಕಡಿಮೆ. ಹೀಗಾಗಿ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಚಾರ ಸಭೆಯಲ್ಲಿ ಕೆಸಿಆರ್‌ ಅವರನ್ನು ಶಾಶ್ವತವಾಗಿ ತೋಟದಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಮಾಡಿ ಎಂದು ಜನರಿಗೆ ಕರೆ ನೀಡಿದ್ದಾರೆ.

‘ನನ್ನ ಹೃದಯದ ಮಿಡಿತ, ರಕ್ತ ತೆಲಂಗಾಣಕ್ಕಾಗಿ ಮೀಸಲು’ ಎಂದು ಕೆಸಿಆರ್‌ ಘೋಷಿಸಿದ್ದಾರೆ. ಆದರೆ, ಮತದಾರರು....?

ಕೆಸಿಆರ್‌, ಯೋಜನೆಗಳ ಮೇಲೆ ಯೋಜನೆಗಳನ್ನು ಘೋಷಿಸುತ್ತಾ ಹೋದರು. ಅನುಷ್ಠಾನದಲ್ಲಿ ಎಡವಿದರು. ಸರ್ಕಾರ ತಮಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎನ್ನುವ ಭಾವನೆ ಜನರಲ್ಲಿ ಗಟ್ಟಿಯಾಗಿಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT