ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ, ದೇವರು, ಭಾಷೆಯ ಮಧ್ಯಸ್ಥಿಕೆ: ಪುರುಷೋತ್ತಮ ಬಿಳಿಮಲೆ ಅವರ ವಿಶ್ಲೇಷಣೆ

ಧಾರ್ಮಿಕ ಭಾಷೆಯು ಅನ್ಯ ಧರ್ಮೀಯರಿಗೆ ಒಲಿಯುವುದಿಲ್ಲವೇ?
Published 26 ಆಗಸ್ಟ್ 2023, 0:42 IST
Last Updated 26 ಆಗಸ್ಟ್ 2023, 0:42 IST
ಅಕ್ಷರ ಗಾತ್ರ

ಭಾಷೆ ಮತ್ತು ಮತ ಧರ್ಮಗಳ ನಡುವಣ ಸೂಕ್ಷ್ಮ ಹಾಗೂ ಗಂಭೀರ ಸಂಬಂಧಗಳ ಕುರಿತು ನಮ್ಮಲ್ಲಿ ಹೆಚ್ಚು ಚರ್ಚೆಗಳು ನಡೆದಿಲ್ಲ. ಹೀಬ್ರೂ, ಅರೇಬಿಕ್‌ ಮತ್ತು ಸಂಸ್ಕೃತದಲ್ಲಿ ಒಂದಷ್ಟು ಗಂಭೀರ ಚರ್ಚೆಗಳು ನಡೆದಿರುವುದು ಹೌದಾದರೂ ಅವಿನ್ನೂ ಸಾಮಾನ್ಯ ಓದುಗರಿಗೆ ತಲುಪಿಲ್ಲ.

ಇತ್ತೀಚಿನ ದಿನಗಳಲ್ಲಿ ಕೆಲವರು ಧರ್ಮವು ಸಮಾಜವನ್ನು ಮುನ್ನಡೆಸಬೇಕು ಎಂದು ವಾದಿಸುತ್ತಿದ್ದಾರೆ. ಹಾಗೆ ಹೇಳುವವರು ಧರ್ಮವನ್ನು ಮುನ್ನಡೆಸಲು ಬೇಕಾದ ಸಾಮಾಜಿಕ ಭಾಷೆಯೊಂದನ್ನು ತಾವೇ ಸೃಷ್ಟಿಸಿಕೊಂಡು, ತಮಗೆ ಹೇಳಬೇಕಾಗಿರುವುದನ್ನು ದೇವರ ಬಾಯಿಯಿಂದ ಹೇಳಿಸುತ್ತಾರೆ. ಇಸ್ಲಾಂ, ಕ್ರೈಸ್ತ ಮತ್ತು ಜುದಾಯಿಸಂನಂತಹ ಧರ್ಮಗಳು, ಪ್ರಜಾಪ್ರಭುತ್ವಕ್ಕಿಂತ ದೇವಪ್ರಭುತ್ವವೇ ಮೇಲು ಎಂದೂ ವಾದಿಸುವುದುಂಟು. ಇಂಥ ಅಭಿಜಾತ ಭಾಷೆಗಳ ಜೊತೆಗೆ, ಬುಡಕಟ್ಟು ಧರ್ಮಗಳಲ್ಲಿ ಬಳಕೆಯಾಗುವ ಹಾಡು, ಮಂತ್ರ, ಪ್ರಾರ್ಥನೆ, ನುಡಿಗಟ್ಟುಗಳ ಕುರಿತೂ ನಮಗೆ ಅಧ್ಯಯನ ಮಾಡಲು ಸಾಧ್ಯವಾದರೆ ಭಾಷೆ ಮತ್ತು ಧರ್ಮದ ನಡುವಣ ಸಂಬಂಧಗಳ ಕುರಿತಾದ ಚರ್ಚೆಗಳಿಗೆ ಹೊಸ ಆಯಾಮ ಪ್ರಾಪ್ತವಾಗಬಲ್ಲುದು.

ಧಾರ್ಮಿಕ ಭಾಷೆಯ ಕುರಿತು ನಮ್ಮಲ್ಲಿ ಏಕಾಭಿಪ್ರಾಯವಿಲ್ಲ. ಅವುಗಳಲ್ಲಿ ಮುಖ್ಯವಾದವುಗಳೆಂದರೆ- 1. ಧಾರ್ಮಿಕ ಭಾಷೆಯು ಒಂದು ವಿಭಿನ್ನ ಭಾಷೆಯಾಗಿದ್ದು, ಇದನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಎಚ್ಚರದಿಂದ ಬಳಸಲಾಗುತ್ತದೆ. 2. ಧಾರ್ಮಿಕ ವ್ಯಕ್ತಿ, ಧಾರ್ಮಿಕ ಉಪದೇಶ ಅಥವಾ ಧಾರ್ಮಿಕ ಪಠ್ಯಕ್ಕೆ ವಿಶೇಷವಾದ ಪದಗಳು ಅಗತ್ಯವಾಗಿ ಬೇಕಾಗುತ್ತವೆ. ಅವು ಮಾಮೂಲಿ ಅರ್ಥಗಳನ್ನು ಮೀರಿ ಸಾಂಕೇತಿಕವಾಗುತ್ತವೆ. ಆಗ ಅದರ ವ್ಯಾಕರಣವೇ ಬೇರೆಯಾಗುತ್ತದೆ. ಅದನ್ನು ಭಾಷೆಯ ಒಳಗಿನವರಿಗೆ ಕೂಡಾ ಸುಲಭವಾಗಿ ಗ್ರಹಿಸಲಾಗುವುದಿಲ್ಲ. ಎಷ್ಟೋ ಬಾರಿ ಧಾರ್ಮಿಕ ಭಾಷೆ ಅಸ್ಪಷ್ಟವಾಗಿರುವುದು ಅಗತ್ಯ.

3. ಧಾರ್ಮಿಕ ಭಾಷೆಯು ದೇವರ ಬಗ್ಗೆ ಹೇಳುವ ಮಾತುಗಳನ್ನು ಅರಿಯುವ ಕ್ರಮ ಹೇಗೆ ಎಂಬುದು ಖಚಿತವಿಲ್ಲ. ದೇವರು ಅನಂತನಾಗಿದ್ದರೆ ಅದನ್ನು ಅನಂತವಲ್ಲದ ನಾವು ಮತ್ತು ನಮ್ಮಲ್ಲಿರುವ ಸಾಮಾನ್ಯ ಪದಗಳು ಹೇಗೆ ವಿವರಿಸಬಲ್ಲವು? ದೇವರು ನಿರಾಕಾರ, ಅನಂತ ಮತ್ತು ಕಾಲಾತೀತ ಎಂದಾದರೆ ಭಾಷೆಗೂ ಅಂಥ ಗುಣಗಳು ಬೇಕಾಗುತ್ತವೆ. 4. ಧಾರ್ಮಿಕ ಭಾಷೆಯ ಕುರಿತಾದ ಚರ್ಚೆಗಳು, ದೇವರು ಅಸ್ತಿತ್ವದಲ್ಲಿದ್ದರೆ ದೇವರ ಬಗ್ಗೆ ಹೇಗೆ ಮಾತನಾಡಬಹುದು ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತವೆ.

ಈ ಸಮಸ್ಯೆಗೆ ಈಗ ಇನ್ನೊಂದು ಸಮಸ್ಯೆ ಸೇರಿಕೊಂಡಿದೆ. 2019ರಲ್ಲಿ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಫಿರೋಜ್‌ ಖಾನ್‌ ಎಂಬುವರನ್ನು ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ಸಾಹಿತ್ಯ ವಿಭಾಗದಲ್ಲಿ ಸಹ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಲಾಯಿತು. ಆದರೆ ಇದನ್ನು ಕೆಲವು ಹಿಂದೂ ಸಂಘಟನೆಗಳು ವಿರೋಧಿಸಿದವು. ‘ಒಬ್ಬ ಹಿಂದೂ ಹೇಗೆ ಮದರಸಾದಲ್ಲಿ ಪಾಠ ಮಾಡಲಾರನೋ ಅದೇ ರೀತಿ ಮುಸ್ಲಿಮನೊಬ್ಬ ಗುರುಕುಲದಲ್ಲಿ ಬೋಧಿಸಲಾರ’ ಎಂಬ ವಾದದ ಜೊತೆಗೆ, ‘ಗುರುಕುಲ ಪರಂಪರೆಯಲ್ಲಿ ಶಿಷ್ಯರು ಗುರುವಿನ ಪಾದ ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ನಾವು ಮುಸ್ಲಿಂ ಗುರುವಿನ ಪಾದ ಮುಟ್ಟಲಾರೆವು’ ಎಂದು ಈ ಸಂಘಟನೆಗಳು ವಾದಿಸಿದವು. ಕೊನೆಗೆ ಫಿರೋಜ್‌ ಖಾನ್‌ ಅವರನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿದ ನಂತರ ವಿವಾದ ಕೊನೆಗೊಂಡಿತು. ಈ ಪ್ರಕರಣವು ಧಾರ್ಮಿಕ ಭಾಷೆಯು ಬೇರೆ ಧರ್ಮೀಯರಿಗೆ ಒಲಿಯುವುದಿಲ್ಲ ಎಂಬ ಅಂಶವನ್ನು ನಮ್ಮ ಮುಂದಿಟ್ಟಿತು.

ಮೇಲಿನ ವಾದವನ್ನು ಒಪ್ಪಿಕೊಂಡರೆ, ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಅದೆಂದರೆ, ಹಿಂದೂಗಳಲ್ಲದ ಮ್ಯಾಕ್ಸ್‌ ಮುಲ್ಲರ್‌, ಮೋನಿಯರ್‌ ವಿಲಿಯಮ್ಸ್‌ ಮೊದಲಾದ ವಿದೇಶಿ ವಿದ್ವಾಂಸರು ಸಂಸ್ಕೃತದ ಬಗ್ಗೆ ನಡೆಸಿದ ಅಧ್ಯಯನಗಳು ಹಾಗಾದರೆ ಮೌಲಿಕವೇ? ಸಾಯಣರ ಋಗ್ವೇದ ಸಂಹಿತವನ್ನು ಮುಲ್ಲರ್‌ ಇಂಗ್ಲಿಷಿಗೆ ತಂದಾಗ ಋಗ್ವೇದದ ಪಾವಿತ್ರ್ಯಕ್ಕೆ ಭಂಗ ಬಂತೇ ಎಂಬಂಥ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಜೊತೆಗೆ, ಆಧುನಿಕ ಭಾಷಾಶಾಸ್ತ್ರಜ್ಞರು ಹೇಳುವ- ‘ಒಂದು ಭಾಷೆಯನ್ನು ಕಲಿಯಲು ನೀವು ತೋರುವ ಪ್ರೀತಿ ಮತ್ತು ಹಾಕುವ ಶ್ರಮವು ಆ ಭಾಷೆಯನ್ನು ಕಲಿಸಲು ನಿಮ್ಮನ್ನು ಅರ್ಹರನ್ನಾಗಿ ಮಾಡುತ್ತದೆ’ ಎಂಬ ಮಾತನ್ನು ತಿರಸ್ಕರಿಸುತ್ತದೆ. ಇವೆಲ್ಲದರ ಒಟ್ಟು ಅರ್ಥ ಇಷ್ಟೆ- ಧರ್ಮ ಮತ್ತು ಭಾಷೆಯ ನಡುವಣ ಸಂಬಂಧಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ. ಅವು ಕಾಲ, ದೇಶ, ಸಮುದಾಯ ಮತ್ತು ವ್ಯಕ್ತಿಗಳ ಅಗತ್ಯಗಳಿಗೆ ಅನುಗುಣವಾಗಿ ತಮ್ಮನ್ನು ಮರು ವ್ಯಾಖ್ಯಾನಿಸಿಕೊಂಡು ಬೆಳೆಯುತ್ತವೆ. ಈ ಕಾರಣಗಳಿಂದಲೇ ವೇದಗಳನ್ನು ಆಧರಿಸಿ ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ಶಕ್ತಿ ವಿಶಿಷ್ಟಾದ್ವೈತ, ದ್ವೈತಾದ್ವೈತ, ಶುದ್ಧಾದ್ವೈತ ಮೊದಲಾದವುಗಳು ಹುಟ್ಟಿಕೊಂಡವು. ಇವು ಮೂಲತಃ ಧಾರ್ಮಿಕ ಭಾಷೆಯನ್ನು ತಮ್ಮ ಕಾಲಕ್ಕೆ ಅನುಗುಣವಾಗಿ ವಿರಚಿಸಿಕೊಂಡು ಮತ್ತೆ ಕಟ್ಟುವ ಬಗೆಯೇ ಆಗಿವೆ.

ಹಿಂದೂ ಧರ್ಮದ ಹಾಗೆಯೇ ಇತರ ಧರ್ಮಗಳು ಕೂಡ ತಮಗೆ ವಿಶಿಷ್ಟವಾದ ಭಾಷೆಗಳನ್ನು ಸೃಷ್ಟಿಸಿಕೊಂಡಿವೆ. ಎಲ್ಲ ಧರ್ಮಗಳೂ ದೇವರನ್ನು ಸರ್ವಶಕ್ತ ಎಂದು ನಂಬುತ್ತವೆ. ಆದರೆ ಆ ದೇವರು ಯಾವ ಭಾಷೆಯಲ್ಲಿ ಮಾತಾಡುತ್ತಾರೆ? ಸಂಸ್ಕೃತ, ಅರೇಬಿಕ್, ಗ್ರೀಕ್, ಕನ್ನಡ, ತುಳು ಎಂದೆಲ್ಲಾ ಹೇಳಬಹುದು. ಪ್ರಪಂಚದ ಪ್ರತಿಯೊಂದು ಶಬ್ದವೂ ದೇವರ ಧ್ವನಿಯೇ ಆಗಿದೆ ಎಂದು ವೈಯಾಕರಣಿಗಳೂ ಮೌನವೇ ದೇವರ ಭಾಷೆ ಎಂದು ಸೂಫಿಗಳೂ ಹೇಳಿದ್ದಾರೆ. ಪ್ರಕೃತಿಯ ಪ್ರತಿಯೊಂದು ಪ್ರಕರಣವೂ ದೇವರ ಮಾತು ಎಂದು ಕುವೆಂಪು ಹೇಳುತ್ತಾರೆ.

ಈ ಹಂತದಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಅದೆಂದರೆ, ಧಾರ್ಮಿಕ ಭಾಷೆಯು ಆಚರಣೆಯಲ್ಲಿ ಪ್ರಕಟವಾಗುವ ರೀತಿ. ಉದಾಹರಣೆಗೆ, ಭಕ್ತಿಯ ಅಮೂರ್ತತೆಯು ಹಾಡು, ಮಂತ್ರ, ಕುಣಿತ, ಬಲಿ, ನಟನೆ ಮೊದಲಾದವುಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತಾ ಮೂರ್ತವಾಗುತ್ತದೆ. ಸಂಸ್ಕೃತದಲ್ಲಿ ಬಳಕೆಯಾಗುವ ‘ಯೋಗ’ ಕೂಡ ಮೂಲತಃ ಇದೇ ಅರ್ಥವುಳ್ಳದ್ದು. ಅದಕ್ಕೆ ‘ಜೋಡಿಸು’ ‘ಸೇರಿಸು’ ‘ಕೂಡಿಸು’ ಎಂಬ ಅರ್ಥ ಇದೆ. ಆಚರಣೆಗಳು ಕೂಡ ಜನರನ್ನು ಭಗವಂತನೊಂದಿಗೆ ಜೋಡಿಸುವ ಉದ್ದೇಶವನ್ನು ಹೊಂದಿರುತ್ತವೆ. ಹೀಗೆ ಭಕ್ತಿಯು ಪ್ರದರ್ಶನದ ರೂಪದಲ್ಲಿ ಕಾಣಿಸಿಕೊಳ್ಳುವಾಗ ಅದು ಅದೇ ಹೊತ್ತಿಗೆ ಭಕ್ತರನ್ನು ಒಳಗೊಳ್ಳುತ್ತಾ ಅವರನ್ನೂ ವ್ಯಾಖ್ಯಾನಿಸುತ್ತದೆ. ಜಪಮಾಲೆ ಎಣಿಸುವುದು, ಧಾರ್ಮಿಕ ಮೆರವಣಿಗೆ ನಡೆಸುವುದು, ಧರ್ಮೋಪದೇಶ ಮಾಡುವಂತಹ ಕ್ರಿಯೆಗಳು ಭಕ್ತಿಯ ಆಚರಣಾ ರೂಪಕ್ಕೆ ತನ್ನದೇ ಆದ ಸಾಂಕೇತಿಕತೆ ಮತ್ತು ಭಾಷೆಯನ್ನು ತಂದುಕೊಡುತ್ತವೆ. ಈ ಅರ್ಥದಲ್ಲಿ ಆಚರಣೆಗಳ ಭಾಷೆಯನ್ನು ನಾವು ಇನ್ನಷ್ಟು ಎಚ್ಚರದಿಂದ ಅಭ್ಯಾಸ ಮಾಡಬೇಕಾಗಿದೆ.

ವಿಶ್ವದ ಕೆಲವೆಡೆಗಳಲ್ಲಿ ಧಾರ್ಮಿಕ ಭಾಷೆಯನ್ನು ಸರಳಗೊಳಿಸುವ ಪ್ರಯತ್ನಗಳು ಮತ್ತೆ ಮತ್ತೆ ನಡೆದಿವೆ. ಹಳೆಯ ಒಡಂಬಡಿಕೆಯನ್ನು ಮೂಲತಃ ಹೀಬ್ರೂ ಭಾಷೆಯಲ್ಲಿ ಬರೆಯಲಾಗಿದೆ. ಆದರೆ ಇದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಇದಕ್ಕಾಗಿ ಧಾರ್ಮಿಕ ನೇತಾರರು ಸರಳವಾದ ಭಾಷೆಯಲ್ಲಿ ಜನರಿಗೆ ಅದನ್ನು ವಿವರಿಸಿ ಹೇಳುವ ಕೆಲಸ ಮಾಡಿದ್ದುಂಟು. ಕನ್ನಡದಲ್ಲಿ ಹರಿದಾಸರು ಮತ್ತು ದಾಸರು ಬಳಸಿದ ಭಾಷೆ ಸರಳವೇ ಹೌದು. ಆದರೆ ಎಲ್ಲ ಕಡೆಯೂ ಹೀಗಾಗಿಲ್ಲ. ಧರ್ಮವೊಂದರ ಮೇಲೆ ಹಿಡಿತ ಸಾಧಿಸಲು ಪವಿತ್ರ ಭಾಷೆಯ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದವರೂ ಇದ್ದಾರೆ. ಹೀಗೆ ಭಾಷೆಯನ್ನು ಜಟಿಲಗೊಳಿಸುವ ಮತ್ತು ಸರಳಗೊಳಿಸುವ ಕೆಲಸಗಳು ಇತಿಹಾಸದುದ್ದಕ್ಕೂ ನಡೆದೇ ಇವೆ.

ಪವಿತ್ರ ಭಾಷೆಯೆಂಬ ಬಿರುದು ಹೊತ್ತಿದ್ದ ಹೀಬ್ರೂವನ್ನು ಮಾರ್ಟಿನ್ ಲೂಥರ್ ಅವರು ಜರ್ಮನ್ ಭಾಷೆಗೆ ಅನುವಾದಿಸಿದಾಗ ಬಹಳಷ್ಟು ಗೊಂದಲ ಉಂಟಾಯಿತು. ಆದರೆ ಈ ಕೆಲಸ ಬೈಬಲ್ಲನ್ನು ಇತರ ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲು ಸಹಾಯಕವಾಗಿ ಬಹುತೇಕ ಜನ ಬೈಬಲ್ಲನ್ನು ಅವರ ತಾಯ್ನುಡಿಯಲ್ಲಿಯೇ ಓದುವಂತಾಯಿತು. ಕ್ರೈಸ್ತ ಮಿಷನರಿಗಳು 1842ರಷ್ಟು ಹಿಂದೆಯೇ ತುಳುವಿನಲ್ಲಿ ಹೊಸ ಒಡಂಬಡಿಕೆಯನ್ನು ಪ್ರಕಟಿಸಿ ಅದನ್ನು ಸತ್ಯವೇದ ಎಂದು ಕರೆದರು. ಇಂಥ ಕೆಲಸಗಳು ಸ್ಥೂಲವಾಗಿ ಧರ್ಮ ಮತ್ತು ಭಾಷೆಗಳ ನಡುವಣ ಸಂಬಂಧವನ್ನು ಸ್ವಲ್ಪ ಸಡಿಲಗೊಳಿಸಿದ್ದುಂಟು. ಆದರೆ ಅದು ಕ್ರೈಸ್ತ ಧರ್ಮವನ್ನು ಎಲ್ಲ ಕಡೆಯೂ ಹರಡುವಲ್ಲಿ ಯಶಸ್ವಿಯಾಯಿತು.

ಏನಿದ್ದರೂ ಭಾಷೆಯ ಮಧ್ಯಸ್ಥಿಕೆ ಇಲ್ಲದಿದ್ದರೆ ಧರ್ಮವೂ ಇಲ್ಲ, ದೇವರೂ ಇಲ್ಲ, ಆಚರಣೆಗಳೂ ಇಲ್ಲ. ಪುರಾಣಗಳೂ ಇಲ್ಲ. ಈ ಸೃಷ್ಟಿಕ್ರಿಯೆಯು ಅಧ್ಯಯನ ಯೋಗ್ಯವಾದ ವಿಚಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT