ನಾಡು–ನುಡಿಯ ಬಗೆಗಿನ ನಮ್ಮ ಕಾಳಜಿಯಲ್ಲಿ ಪರಿಸರವೂ ಸೇರಿಕೊಳ್ಳಬೇಕು. ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಕನ್ನಡ–ಕರ್ನಾಟಕದ ಸಂಗೋಪನೆ ಬೇರೆಯಲ್ಲ. ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವುದು ಈ ನಾಡಿನ ನಾಳೆಗಳ ನೆಮ್ಮದಿಯಿಂದ ಅಗತ್ಯವಾದುದು.

ಮಲೆನಾಡಿನಲ್ಲಿ ಈ ಬಾರಿಯ ಮಳೆಗಾಲ ಮುಗಿಯುತ್ತಲೇ ಇಲ್ಲ. ಮಲೆನಾಡೊಂದೇ ಅಲ್ಲ, ಬಯಲು ಸೀಮೆಯಲ್ಲೂ ಅಕಾಲ ಮಳೆಯಿಂದಾಗಿ ಬೆಳೆದು ನಿಂತಿರುವ ಪೈರು ನಾಶವಾಗಿದೆ. ಅಕಾಲ ಮಳೆಯಿಂದಾಗಿ ರಾಜ್ಯದಲ್ಲಿ ಸಂಭವಿಸಿದ ನಷ್ಟವನ್ನು ಭರಿಸಿಕೊಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆಹೋಗಿದೆ.

ಹಿಮಾಚಲ ಪ್ರದೇಶದಲ್ಲೂ ಇದೇ ಕಥೆ. ಕಳೆದ ನಾಲ್ಕು ವರ್ಷಗಳಲ್ಲಿ, ನೈಸರ್ಗಿಕ ವಿಕೋಪ ಹಾಗೂ ಹವಾಗುಣ ಬದಲಾವಣೆಯಿಂದಾಗಿ 46 ಸಾವಿರ ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ವರದಿಯೊಂದು ಹೇಳಿದೆ. ವಿಶ್ವಸಂಸ್ಥೆಯ ಸಹಯೋಗ ದೊಂದಿಗೆ ಹಿಮಾಚಲ ಪ್ರದೇಶದ ಪರಿಸರ ವಿಜ್ಞಾನ ವಿಭಾಗವು ತಯಾರಿಸಿದ ವರದಿಯಲ್ಲಿನ ಅಂಕಿ–ಅಂಶಗಳು ಆತಂಕ ಹುಟ್ಟಿಸುವಂತಿವೆ.

ಅಕಾಲಿಕ ಮಳೆಯಿಂದಾಗಿ ಹಳ್ಳಿಗಳ ಜನರು ವಲಸೆ ಹೋಗುತ್ತಿದ್ದಾರೆ. ಕಳೆದ ಐದು ಮುಂಗಾರು ಋತುಗಳಲ್ಲಿ 1700 ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಷ್ಣಾಂಶದಲ್ಲಿ ಗಣನೀಯ ಏರಿಕೆಯಾಗಿದೆ. ಮೇಘಸ್ಫೋಟ, ಹಿಮ ಸರೋವರ ಗಳ ಉಕ್ಕುವಿಕೆ ಮತ್ತು ಕಾಡ್ಗಿಚ್ಚಿನಿಂದಾಗಿ ಮುಂದಿನ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳಲಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ, ಅಪಾರ ಪ್ರಮಾಣದ ಮಂಜುಗಡ್ಡೆ ಕರಗುತ್ತ, ಹೊಸ ಹೊಸ ಹಿಮನದಿ– ಸರೋವರಗಳು ಸೃಷ್ಟಿಯಾಗುತ್ತವೆ. ನೈಸರ್ಗಿಕವಾದ ಅಣೆಕಟ್ಟಿನಂತೆ ವರ್ತಿಸುವ ಹಿಮನದಿ– ಸರೋವರಗಳ ಹಿಂಭಾಗದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸೇರಿಕೊಂಡು ನಿರಂತರ ಒತ್ತಡ ಸೃಷ್ಟಿ ಮಾಡುತ್ತದೆ. ಈ ನೀರು ಗುಡ್ಡದ ಕೆಳಭಾಗದಲ್ಲಿ ವಾಸಿಸುವ ವಸತಿ ಪ್ರದೇಶಗಳಿಗೆ, ಅಣೆಕಟ್ಟು, ಬೆಳೆ, ರಸ್ತೆ, ಸೇತುವೆ, ವಿದ್ಯುತ್ ಕೇಂದ್ರ ಇತ್ಯಾದಿಗಳಿಗೆ ಕಂಟಕವಾಗುತ್ತದೆ. ಹಿಮಾಚಲ ಪ್ರದೇಶದ ಸಟ್ಲೆಜ್ ಪರಿಸರದಲ್ಲಿ 2019ರಲ್ಲಿ 562 ಹಿಮನದಿ– ಸರೋವರಗಳಿದ್ದವು. 2023ರ ಹೊತ್ತಿಗೆ ಆ ಸಂಖ್ಯೆ 1048ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕುಲು ಮತ್ತು ಕಿನೌರ್ ಜಿಲ್ಲೆಗಳಲ್ಲೂ ಈ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಆಗುತ್ತಿರುವ ಆರ್ಥಿಕ ನಷ್ಟಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಹವಾಗುಣ ಬದಲಾವಣೆ ಸಂಕಷ್ಟಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು 10,000 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಹೇಳಲಾಗಿದೆ. ವರದಿಯನ್ನು ಬಿಡುಗಡೆ ಮಾಡಿರುವ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ‘ಹವಾಗುಣ ಬದಲಾವಣೆಯು ಗಂಭೀರ ಜಾಗತಿಕ ಸಮಸ್ಯೆಯಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ, ವರ್ತಮಾನ ಮತ್ತು ಭವಿಷ್ಯದಲ್ಲಿ ಅದರ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

2025ರ ಜೂನ್ನಿಂದ ಸೆಪ್ಟೆಂಬರ್ವರೆಗೆ 47 ಮೇಘಸ್ಫೋಟಗಳು, 98 ಹಿಮನದಿ ಪ್ರವಾಹಗಳು, 148 ಪ್ರಮುಖ ಭೂಕುಸಿತಗಳು ಸಂಭವಿಸಿವೆ ಎಂದು ಹಿಮಾಚಲ ತುರ್ತು ಕಾರ್ಯಾಚರಣೆ ಕೇಂದ್ರ ಹೇಳಿದೆ. ಜಾಗತಿಕ ತಾಪಮಾನದ ಕಾರಣಕ್ಕೆ ಇಡೀ ರಾಜ್ಯವು ಅತಿಯಾದ ಮಳೆ, ಪ್ರವಾಹ ಮತ್ತು ಭೂಕುಸಿತಗಳಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ.

ಹಿಮಾಚಲ ಪ್ರದೇಶದ ಸ್ಥಿತಿಯ ಕೆಲವು ಲಕ್ಷಣಗಳು ನಮ್ಮಲ್ಲೂ ಗೋಚರಿಸುತ್ತಿವೆ. ಹಿಮಾಲಯ ಪರ್ವತಶ್ರೇಣಿ ಸೃಷ್ಟಿಯಾಗುವುದಕ್ಕೂ ಬಹಳ ಮೊದಲೇ ಪಶ್ಚಿಮಘಟ್ಟಗಳು ಸೃಷ್ಟಿಯಾಗಿವೆ. ಹಿಮಗಡ್ಡೆಗಳು ಕರಗುವುದರಿಂದಾಗಿ ಹಿಮಾಲಯದಲ್ಲಿ ನದಿಗಳು ಹುಟ್ಟಿದರೆ, ಪಶ್ಚಿಮಘಟ್ಟಗಳ ದಟ್ಟಾರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳು ನದಿಗಳ ಉಗಮಕ್ಕೆ ಕಾರಣವಾಗಿವೆ. ಹವಾಗುಣ ಬದಲಾವಣೆಯಿಂದಾಗಿ ಎರಡೂ ಪರ್ವತ ಶ್ರೇಣಿಗಳು ಅಪಾಯವನ್ನು ಎದುರಿಸುತ್ತಿವೆ. ಗುಡ್ಡ ಕುಸಿತ ಘಟನೆಗಳು ಎರಡೂ ಪ್ರದೇಶಗಳಲ್ಲೂ ಸಾಮಾನ್ಯ ಎನ್ನುವಂತೆ ಸಂಭವಿಸುತ್ತಿವೆ.

ಕರ್ನಾಟಕದಲ್ಲೂ ಹಿಮಾಚಲ ಮಾದರಿಯ ಅಧ್ಯಯನ ನಡೆದಿದೆ. ಹವಾಗುಣ ಬದಲಾವಣೆ ಯಿಂದಾಗಿ ಏನೆಲ್ಲಾ ಅನಾಹುತಗಳಾಗುತ್ತವೆ ಎನ್ನುವುದರ ಬಗ್ಗೆ ಹಲವು ವರದಿಗಳು ಬೆಳಕು ಚೆಲ್ಲಿವೆ. ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರದಲ್ಲಿ ಏನನ್ನು ಮಾಡಬಾರದು ಎಂಬುದನ್ನು ನಿಖರವಾಗಿ ಹೇಳಿರುವ ವೈಜ್ಞಾನಿಕ ವರದಿಗಳಿವೆ. ಇಡೀ ಪಶ್ಚಿಮಘಟ್ಟ ಭೂಕುಸಿತದ ಅಪಾಯವನ್ನು ಎದುರಿಸುತ್ತಿದ್ದು, ಗುಡ್ಡವನ್ನು ಸೀಳುವಂತಹ, ಕೊರೆಯುವಂತಹ ಕಾಮಗಾರಿಗಳಿಗೆ ನಿಷೇಧ ಹೇರಬೇಕು ಎಂಬುದು ಎಲ್ಲಾ ವರದಿಗಳ ತಾತ್ಪರ್ಯ.

ವಿಜ್ಞಾನಿಗಳು ನೀಡಿದ ವರದಿಗಳನ್ನು ಪರಿಗಣಿಸುವ ಸ್ಥಿತಿಯಲ್ಲಿ ಸರ್ಕಾರಗಳು ಇಲ್ಲ. ಸರ್ಕಾರಗಳಿಗೆ ಅವುಗಳದ್ದೇ ಆದ ಕಾರಣಗಳಿವೆ. ಎತ್ತಿನಹೊಳೆ ನದಿ ತಿರುವು ಯೋಜನೆಯಿಂದ ಆದ ಪ್ರಮಾದಗಳಿಗೆ ಅಲ್ಲಿನ ಸ್ಥಳೀಯರು ಬೆಲೆ ತೆರಬೇಕಾಗಿದೆ. ಮಾನವ–ಆನೆ ಸಂಘರ್ಷ ತಾರಕಕ್ಕೇರಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಪ್ರವಾಸೋದ್ಯಮದ ಮೂಲಕ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಅತಿಯಾದ ಸಫಾರಿ ಆಯೋಜಿಸಲಾಗುತ್ತದೆ. ಪ್ರವಾಸಿಗರ ಒತ್ತಡದ ಕಾರಣಕ್ಕೆ ಹುಲಿಗಳು ನಾಡಂಚಿಗೆ ಬರುವುದು, ಜನರ ಪ್ರಾಣಕ್ಕೆ ಎರವಾಗು ವುದು ನಡೆಯುತ್ತಿದೆ. ಹವಾಗುಣ ಬದಲಾವಣೆ ಎನ್ನುವುದು ಮಾನವ ನಿರ್ಮಿತವಾಗಿದೆ ಎಂಬುದು ನಿರ್ವಿವಾದ. ಆದರೆ, ಅದಕ್ಕೆ ಮಾನವ ಮಾತ್ರವಲ್ಲದೆ, ಇತರ ಜೀವಿವೈವಿಧ್ಯವೂ ಬಲಿಯಾಗುತ್ತಿದೆ.

ಆರ್ಥಿಕತೆ ಅಥವಾ ಜಿಡಿಪಿಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಪರಿಸರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕ ಗಗನಮುಖಿ ಆಗಬೇಕು ಎಂದರೆ, ಅದಕ್ಕೆ ಈಗಿರುವ ವನ್ಯಸಂಪತ್ತನ್ನು ರಾಜಿ ಮಾಡಿಕೊಳ್ಳದೆ ರಕ್ಷಣೆ ಮಾಡುವುದೊಂದೇ ಏಕೈಕ ಮಾರ್ಗ. ರೈಲು, ರಸ್ತೆ, ಕೇಬಲ್ ಕಾರು, ಬುಲೆಟ್ ಟ್ರೈನ್ ಮುಂತಾದ ಪಾಶ್ಚಾತ್ಯ ಮಾದರಿಗಳನ್ನು ಅಳವಡಿಸಿಕೊಳ್ಳಲು ಆತುರ ತೋರುವ ನಾವು, ಪರಿಸರ ಸಂರಕ್ಷಣೆಯ ಪಾಶ್ಚಾತ್ಯ ಮಾದರಿಯನ್ನು ಅಳವಡಿಸಿಕೊಳ್ಳಲು ಸೋಲುತ್ತಿದ್ದೇವೆ.

ಪಶ್ಚಿಮಘಟ್ಟಗಳು ಭಾರತದ ದಕ್ಷಿಣ ಭಾಗದ ಜೀವನಾಡಿ. ಈ ಶ್ರೇಣಿಗಳು ಕರ್ನಾಟಕದ ಹವಾಮಾನ, ನೀರು, ಮಣ್ಣು ಮತ್ತು ಜೀವಿವೈವಿಧ್ಯವನ್ನು ಹದವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಶ್ಚಿಮಘಟ್ಟಗಳಿಲ್ಲದೇ ಬೆಂಗಳೂರು ಸೇರಿದಂತೆ ಕರ್ನಾಟಕದ ಒಳನಾಡು ಜಿಲ್ಲೆಗಳ ಒಟ್ಟಾರೆ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಪಶ್ಚಿಮಘಟ್ಟಗಳು ಮಳೆಗಾಲದ ವಾಯುಚಲನೆಯನ್ನು ನಿಯಂತ್ರಿಸುವುದರ ಮೂಲಕ ಒಳನಾಡಿಗೆ ಮಳೆಯನ್ನು ಸುರಿಸುವ ಕೆಲಸವನ್ನು ಮಾಡುತ್ತವೆ. ಪಶ್ಚಿಮಘಟ್ಟಗಳು ದುರ್ಬಲಗೊಳ್ಳುವುದರ ಪರಿಣಾಮ ಕೃಷಿ, ಕುಡಿಯುವ ನೀರಿನ ಪೂರೈಕೆ ಮತ್ತು ನದಿಗಳ ಮೇಲಾಗುತ್ತದೆ. ಕಾವೇರಿ, ತುಂಗಭದ್ರಾ, ಶರಾವತಿ ಮುಂತಾದ ನದಿಗಳ ಮೂಲ ಪಶ್ಚಿಮಘಟ್ಟಗಳೇ ಆಗಿವೆ. ಈ ನೀರನ್ನೇ ನಂಬಿಕೊಂಡ ಬೆಂಗಳೂರಿನಂತಹ ನಗರಗಳು ನೀರಿನ ಅಲಭ್ಯತೆಗೆ ಸಿಲುಕುತ್ತವೆ. ತಾಪಮಾನ ಏರಿಕೆ, ಹವಾಗುಣ ಅಸ್ಥಿರತೆ ಮತ್ತು ಅಂತರ್ಜಲ ಮಟ್ಟವನ್ನು ನಿಯಂತ್ರಿಸುವ ಪಶ್ಚಿಮಘಟ್ಟಗಳು ನಾಶವಾದಲ್ಲಿ, ಆಹಾರ ಭದ್ರತೆಗೆ ಧಕ್ಕೆಯಾಗುತ್ತದೆ. ಘಟ್ಟಗಳ ಪರಿಸರ ಸೇವೆಗಳಾದ ನೀರಿನ ಭದ್ರತೆ, ಮಣ್ಣಿನ ಸಂರಕ್ಷಣೆ, ಇಂಗಾಲಾಮ್ಲ ಹೀರುವಿಕೆ, ತಾಪಮಾನ ನಿಯಂತ್ರಣ ಇತ್ಯಾದಿಗಳಿಗೆ ತತ್ವಾರವಾಗುತ್ತದೆ.

ಪಶ್ಚಿಮಘಟ್ಟಗಳನ್ನು ಕಳೆದುಕೊಂಡು ಬೆಂಗಳೂರು ಮತ್ತಿತರ ಆರ್ಥಿಕ ಕೇಂದ್ರಿತ ಮಹಾನಗರಗಳು ಮತ್ತು ಕೆಲವು ಮಟ್ಟಿಗೆ ಒಳನಾಡು ಜಿಲ್ಲೆಗಳು ತಾಂತ್ರಿಕವಾಗಿ ಬದುಕಬಲ್ಲವು. ಆದರೆ, ಅಂತಹ ಬದುಕು ಬಹಳ ಕಷ್ಟಕರ, ದುಬಾರಿ, ಗುಣಮಟ್ಟದಲ್ಲಿ ತೀರಾ ಕಳಪೆಯಾಗಿರಲಿದೆ.

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಬರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಮಣಿಪುರ ರಾಜ್ಯಗಳಲ್ಲಿ, ಆಂತರಿಕ ಪ್ರವೇಶ ಪರವಾನಗಿ (ಇನ್ನರ್ ಲೈನ್ ಪರ್ಮಿಟ್– ಐಎಲ್ಪಿ) ಎನ್ನುವ ಒಂದು ಕಾನೂನಿದೆ. 1873ರಲ್ಲಿ ಬ್ರಿಟಿಷ್ ಆಡಳಿತ ‘ಬೆಂಗಾಲ್ ಈಸ್ಟ್ರನ್ ಫ್ರಾಂಟಿಯರ್ ಆ್ಯಕ್ಟ್’ ಜಾರಿಗೆ ತಂದಿತು. ಅದರ ಉದ್ದೇಶ, ಸ್ಥಳೀಯ ಸಂಸ್ಕೃತಿ, ಪರಿಸರ, ಬುಡಕಟ್ಟು ಜನಾಂಗದ ಮೇಲೆ ಹೊರಗಿನ ದಾಳಿಯನ್ನು ನಿಯಂತ್ರಿಸುವುದಾಗಿತ್ತು. ಅದರ ಮತ್ತೊಂದು ಆವೃತ್ತಿಯೇ ‘ಐಎಲ್ಪಿ’. ನಾವು ಆ ನಾಲ್ಕು ರಾಜ್ಯಗಳಿಗೆ ಹೋಗಬೇಕು ಎಂದರೆ, ಐಎಲ್ಪಿ ಕಡ್ಡಾಯವಾಗಿ ಪಡೆಯಬೇಕು. ಅಲ್ಲಿ ಶಾಶ್ವತವಾಗಿ ನೆಲೆಯೂರುವಂತಿಲ್ಲ. ನಿಗದಿತ ಸಮಯದಲ್ಲಿ ಮರಳಿ ಬರಬೇಕು. ಪಶ್ಚಿಮಘಟ್ಟಗಳನ್ನು ಉಳಿಸಲು ಕೂಡ ಇಂಥ ಕಾನೂನು ಅಗತ್ಯವಾಗಿದೆ. ಮಲೆನಾಡಿನ ಮೇಲೆ ಹೊರರಾಜ್ಯದ ಒತ್ತಡ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ, ಇನ್ನು ಕೆಲವೇ ವರ್ಷಗಳಲ್ಲಿ ಸ್ಥಳೀಯರು ಹೊರರಾಜ್ಯದ ದಬ್ಬಾಳಿಕೆಗೆ ಸಿಲುಕಲಿದ್ದಾರೆ. ಅದನ್ನು ತಡೆಯಬೇಕು ಎಂದರೆ, ಐಎಲ್ಪಿ ಮಾದರಿ ನಮಗೂ ಅಗತ್ಯವಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಯಾದರೆ, ಬಿಹಾರದಿಂದ ಸುಮಾರು 10 ಸಾವಿರ ಕೂಲಿ ಕಾರ್ಮಿಕರು ಬಂದು ಎಂದೆಂದಿಗೂ ಇಲ್ಲೇ ನೆಲೆಸುತ್ತಾರೆ. ಅವರು ಬಂದು, 18,000 ಟನ್ ಕೈಗಾರಿಕಾ ಸ್ಫೋಟಕಗಳನ್ನು ಬಳಸಿ 21 ಕಿ.ಮೀ. ಸುರಂಗ ಕೊರೆಯಲಿದ್ದಾರೆ. ಅದರಿಂದ ಹೊರಬರುವ 12 ದಶಲಕ್ಷ ಟನ್ ವಿಷಕಾರಿ ತ್ಯಾಜ್ಯ ಶರಾವತಿ ನದಿ ಸೇರಲಿದೆ.

ಪಶ್ಚಿಮಘಟ್ಟಗಳನ್ನು ನಾಶ ಮಾಡುವ ಯೋಜನೆಗಳನ್ನು ಸರ್ಕಾರ ನಿಲ್ಲಿಸಬೇಕು. ಕರ್ನಾಟಕದ ಸಮಷ್ಟಿ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಭಾಗದ ರೈತರು, ರೈತ ಕಾರ್ಮಿಕರು ಹಾಗೂ ಮಹಿಳೆಯರನ್ನೊಳಗೊಂಡ ಸಮುದಾಯ ಸುಸ್ಥಿರ ಬದುಕು ಕಟ್ಟಿಕೊಳ್ಳುವುದಕ್ಕೆ ಪೂರಕವಾಗಿ ನೀತಿ–ನಿಯಮ ರೂಪಿಸಬೇಕು. ಕನ್ನಡ ನೆಲ, ಭಾಷೆ, ಸೊಗಡು, ಅಸ್ಮಿತೆ ಉಳಿಯಬೇಕು ಎಂದರೆ ಪಶ್ಚಿಮಘಟ್ಟ ಉಳಿಸುವ ಕೆಲಸವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.