ಸೋಮವಾರ, ಜೂನ್ 1, 2020
27 °C
ಅಧಿಕಾರಸ್ಥರ ಕೈಗೊಂಬೆಯಾಗಿರುವ ಸಿಬಿಐಗೆ ‘ಮುಕ್ತಿ’ ಕಾಣಿಸುವ ಇಚ್ಛಾಶಕ್ತಿ ಇದೆಯೇ?

‘ಗಿಣಿ’ ಪಂಜರದಲ್ಲಿದೆ ಆಗಲೂ ಈಗಲೂ

ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ Updated:

ಅಕ್ಷರ ಗಾತ್ರ : | |

ಅಧಿಕಾರಕ್ಕೆ ಬಂದಾಗ ಜನರು ತಮ್ಮ ಆಳ್ವಿಕೆ ಶಾಶ್ವತ ಎಂಬ ಭ್ರಮೆ ಬೆಳೆಸಿಕೊಳ್ಳುತ್ತಾರೆ. ಇಲ್ಲದಿದ್ದರೆ, ಅಧಿಕಾರದಿಂದ ಕೆಳಗೆ ಇಳಿದಾಗ ತಮಗೇ ತಿರುಗುಬಾಣ ಆಗಬಹುದಾದ ಕಾನೂನುಗಳನ್ನು ರಚಿಸುವ ಅವರ ವರ್ತನೆಯನ್ನು ಏನೆಂದು ವಿವರಿಸುವುದು? ತಾವು ಇತರರಿಗಾಗಿ ರೂಪಿಸುವ ನಿಯಮಗಳಿಗೆ ಅನುಗುಣವಾಗಿ ಅಧಿಕಾರದಲ್ಲಿ ಇದ್ದಾಗಲೂ, ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಬದುಕುವುದು ಒಳ್ಳೆಯದು ಎಂಬುದು ಒಳ್ಳೆಯ ಪಾಠ. ಆದರೆ, ಮತ್ತೆ ಅಧಿಕಾರಕ್ಕೆ ಏರಿದ ತಕ್ಷಣ ದುರಹಂಕಾರ ಮತ್ತು ಲೋಭಗಳೆಂಬ ಎರಡು ಭೂತಗಳು ಅವರನ್ನು ಹಿಡಿದುಕೊಳ್ಳುತ್ತವೆ.

ಈಗ, ನಮ್ಮ ಮಾಜಿ ಹಣಕಾಸು ಸಚಿವ ಚಿದಂಬರಂ ಅವರನ್ನೇ ನೋಡಿ. ಸಿಬಿಐ, ಐಬಿ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪಗಳ ತನಿಖೆ ನಡೆಸುತ್ತಾ ಚಿದಂಬರಂ ಮತ್ತು ಅವರ ಮಗನ ಬೆನ್ನು ಬಿದ್ದಿವೆ. ಚಿದಂಬರಂ ಅವರು ಹಿಂದೆ ವಿವಿಧ ಸಂದರ್ಭಗಳಲ್ಲಿ ಹಣಕಾಸು, ಗೃಹ ಮತ್ತು ಆಂತರಿಕ ಭದ್ರತೆ ಸಚಿವರಾಗಿದ್ದಾಗ ಈ ಸಂಸ್ಥೆಗಳು ಅವರ ಕೈಕೆಳಗೇ ಇದ್ದವು. ‘ನ್ಯಾಷನಲ್‌ ಹೆರಾಲ್ಡ್‌’ ಮತ್ತು ಇತರ ಪ್ರಕರಣಗಳಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ವಿರುದ್ಧವೂ ವಿವಿಧ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈಗ ಸ್ಫೋಟಗೊಂಡಿರುವ ರಫೇಲ್‌ ವಿವಾದದಿಂದ ಜನರ ಗಮನ ಬೇರೆಡೆ ಸೆಳೆಯಲು, ಬಹಳ ಹಿಂದೆಯೇ ಸಮಾಧಿಯಾದ ಬೊಫೋರ್ಸ್‌ ಪ್ರಕರಣದ ಅಸ್ಥಿಪಂಜರ ಹೊರಗೆಳೆಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಇದು ಮೋದಿ ನೇತೃತ್ವದ ಸರ್ಕಾರದ ರಾಜಕೀಯ ದ್ವೇಷ ಎಂಬ ಮಾಮೂಲಿ ಪ್ರತ್ಯಾರೋಪವನ್ನೂ ಮಾಡಲಾಗುತ್ತಿದೆ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬುದು ಇಲ್ಲಿ ನಿಜಕ್ಕೂ ಅನ್ವಯ.

ಯುಪಿಎ–2ನೇ ಅವಧಿಯ 2012–13ರಲ್ಲಿ ಅಣ್ಣಾ ಹಜಾರೆ ತಮ್ಮ ಇಂಡಿಯಾ ಅಗೇನ್‌ಸ್ಟ್‌ ಕರಪ್ಶನ್‌ ಸಂಸ್ಥೆಯ ಮೂಲಕ ದೇಶದ ಯುವಜನರು ಮತ್ತು ಮಧ್ಯಮ ವರ್ಗದ ಮೇಲೆ ಮೋಡಿ ಮಾಡಿದ್ದರು. ಯುಪಿಎ ಸರ್ಕಾರ ಈ ಚಳವಳಿಯನ್ನು ತೃಣವೆಂದು ಪರಿಗಣಿಸಿ ನಿರ್ಲಕ್ಷಿಸಿತ್ತು. ಹಜಾರೆ ಅವರನ್ನು ವಿಲಕ್ಷಣವಾದ ಹಳ್ಳಿ ಗುಗ್ಗು ಎಂದು ಭಾವಿಸಿತ್ತು. ಆದರೆ, ಅದಕ್ಕೆ ಪಶ್ಚಾತ್ತಾಪಪಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಪ್ರಶಾಂತ್‌ ಭೂಷಣ್‌ ಮತ್ತು ಅರವಿಂದ ಕೇಜ್ರಿವಾಲ್‌ ಅವರಂತಹ ಬದ್ಧತೆ ಮತ್ತು ಹುರುಪಿನ ಅನುಯಾಯಿಗಳ ಗಟ್ಟಿ ಬೆಂಬಲದಿಂದ ಯುಪಿಎ ಆಡಳಿತದ ಕೊನೆಯ ಕೆಲವು ತಿಂಗಳಲ್ಲಿ ಅಣ್ಣಾ ದೊಡ್ಡ ಚಳವಳಿ ಕಟ್ಟಿದರು. ಅಣ್ಣಾ ಅವರ ಆಮರ
ಣಾಂತ ಉಪವಾಸವು ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರ ತತ್ತರಗೊಳ್ಳುವಂತೆ ಮಾಡಿತು. ಪ್ರಧಾನಿಯನ್ನೂ ಸೇರಿಸಿ ಯಾವುದೇ ಪ್ರಾಧಿಕಾರದ ವಿರುದ್ಧ ತನಿಖೆ ನಡೆಸುವ ಅಧಿಕಾರ ಇರುವ ಸ್ವಾಯತ್ತ ಜನಲೋಕಪಾಲ ಮಸೂದೆಯ ಬೇಡಿಕೆ ದೇಶದಾದ್ಯಂತ ಅನುರಣಿಸಿತು. ಸಿಬಿಐಯನ್ನು ಲೋಕಪಾಲದ ಅಡಿಯಲ್ಲಿ ತರಬೇಕು ಎಂಬುದು ಜನಲೋಕಪಾಲದ ಜತೆಗೇ ಇದ್ದ ಬೇಡಿಕೆ. ಇದು ಬಹಳ ಸರಳವಾದ ಮತ್ತು ನೇರವಾಗಿ ಯಾರಿಗಾದರೂ ಅರ್ಥ ಆಗುವಂತಹ ಬೇಡಿಕೆಯಾಗಿತ್ತು. ತಮ್ಮ ಅಥವಾ ತಮ್ಮ ಅನುಯಾಯಿಗಳಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವುದಕ್ಕೆ ಅಧಿಕಾರದಲ್ಲಿರುವ ಭ್ರಷ್ಟ ರಾಜಕಾರಣಿಗಳು ಅನುಮತಿ ನೀಡುತ್ತಾರೆ ಎಂದು ಜನರು ನಂಬುವುದು ಹೇಗೆ ಸಾಧ್ಯ? ಅದೂ ಅಲ್ಲದೆ, ಈ ತನಿಖೆ ನಡೆಸುವ ಸಂಸ್ಥೆಗಳ ಮೇಲ್ವಿಚಾರಣೆ ಇವರದ್ದೇ ಆಗಿರುತ್ತದೆ. ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂದು ಹಳ್ಳಿಯ ಜನರು ಇದನ್ನೇ ಹೇಳುವುದು.

ಚುನಾವಣೆ ಹತ್ತಿರವಾಗಿದ್ದ ಆ ಸಂದರ್ಭದಲ್ಲಿ ಇದ್ದ ಅವಕಾಶವನ್ನು ಗಮನಿಸಿದ ಬಿಜೆಪಿ ಮತ್ತು ಅದರ ಹಿರಿಯ ಮುಖಂಡರು ಕಾಪಟ್ಯದಿಂದಲೇ ಅಣ್ಣಾ ಚಳವಳಿಗೆ ಬೆಂಬಲ ನೀಡಿ ಯುಪಿಎ ಸರ್ಕಾರದ ಮೇಲೆ ಮುಗಿಬಿದ್ದರು. ಗೊಣಗುತ್ತಲೇ ಆದರೂ ಆ ಸರ್ಕಾರ ಬೇಡಿಕೆಗಳಿಗೆ ಮಣಿಯಿತು; ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಿತು; ದೇಶ ಆನಂದಪರವಶವಾಯಿತು. ಅನಪೇಕ್ಷಿತ ಅಂಶವೊಂದು ಇದ್ದರೂ ಆಡಳಿತದ ಹೊಸತೊಂದು ದಿಗಂತ ಗೋಚರಿಸತೊಡಗಿತು. ಲೋಕಪಾಲ ಮಸೂದೆಯು ಸಿಬಿಐಯನ್ನು ಲೋಕಪಾಲದಿಂದ ಹೊರಗೆ ಇರಿಸಿತ್ತು. 

ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ ಅಂಗೀಕಾರ ಬಹಳ ತಡವಾಗಿತ್ತು. ಹಾಗಾಗಿ, ಅದರ ಪ್ರಯೋಜನ ಪಡೆದುಕೊಳ್ಳುವುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಜಯಭೇರಿ ಬಾರಿಸಿದರು. 

ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ನತದೃಷ್ಟ ಸಿಬಿಐ ಒಂದಾದ ನಂತರ ಒಂದರಂತೆ ವಿವಾದಗಳಿಗೆ ಸಿಲುಕುತ್ತಲೇ ಹೋಯಿತು. ಅಣ್ಣಾ ಅವರ ಮಾತಿನಲ್ಲಿಯೇ ಹೇಳುವುದಾದರೆ, ‘ಭ್ರಷ್ಟಾಚಾರ ವಿರುದ್ಧದ ಚಳವಳಿ ಸೃಷ್ಟಿಸಿದ ಅಲೆಯ ಮೇಲೇರಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ, ಆ ಬಗ್ಗೆ ಬಿಜೆಪಿಗೆ ಕೃತಜ್ಞತಾ ಭಾವ ಇಲ್ಲ. ಅಷ್ಟೇ ಅಲ್ಲ, ಅಧಿಕಾರಕ್ಕೆ ಬಂದ ಕೂಡಲೇ ಅದೆಲ್ಲವನ್ನು ಮರೆತೂಬಿಟ್ಟಿತು’. ಅಂತಃಕಲಹದಿಂದಾಗಿ ಸಿಬಿಐಯ ವರ್ಚಸ್ಸು ಪಾತಾಳಕ್ಕಿಳಿದಿದೆ. ಇತ್ತೀಚೆಗೆ, ಕೋಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳ ಪೊಲೀಸರ ವಿರುದ್ಧ ನಡೆಸಿದ ಸಂಘರ್ಷ ಇನ್ನಷ್ಟು ಕೆಸರು ಎರಚಿದೆ. ಮೊದಲೇ ಪಾರ್ಶ್ವವಾಯುಪೀಡಿತವಾದ ಸಿಬಿಐ ಈಗ ರಾಜಕೀಯದ ಸುಳಿಗಾಳಿಗೆ ಸಿಕ್ಕಿ ತರಗೆಲೆಯಂತಾಗಿದೆ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಕೇಜ್ರಿವಾಲ್‌, ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ಅಂಥವರು ತಮ್ಮನ್ನು ಸಂಭಾವಿತರು ಎಂದು ಬಿಂಬಿಸಿಕೊಂಡು ಮೋದಿ ನೇತೃತ್ವದ ಸರ್ಕಾರವು ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಹಗೆ ತೀರಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ಆರೋಪಗಳಲ್ಲಿ ಹುರುಳಿಲ್ಲ ಎನ್ನಲಾಗದು. ಆದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ಮಾತ್ರ ಅದನ್ನು ನಿಯಂತ್ರಿಸುವ ಅಧಿಕಾರಸ್ಥರ ಕೈಗೊಂಬೆ ಎಂಬ ಆರೋಪಕ್ಕೆ ಒಳಗಾಗಿರುವುದಲ್ಲ. ರಾಜ್ಯದ ತನಿಖಾ ಸಂಸ್ಥೆಯಾದ ಸಿಐಡಿ ಮತ್ತು ರಾಜ್ಯದ ಭ್ರಷ್ಟಾಚಾರ ತಡೆ ಘಟಕಗಳನ್ನು (ಎಸಿಬಿ) ಎಲ್ಲ ಮುಖ್ಯಮಂತ್ರಿಗಳು ತಮ್ಮಿಷ್ಟ ಬಂದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. 

ಯುಪಿಎ ಸರ್ಕಾರದ ವಿರುದ್ಧ ಸಮರ ಸಾರಿದ್ದ ಅಣ್ಣಾ ಈ ಕಾರಣಕ್ಕಾಗಿಯೇ, ತಾವು ಸರ್ಕಾರದ ಬದಲಾವಣೆಯನ್ನು ಆಗ್ರಹಿಸುತ್ತಿಲ್ಲ, ಬದಲಿಗೆ ವ್ಯವಸ್ಥೆ ಬದಲಾಗಬೇಕು ಎಂದು ಪದೇ ಪದೇ ಹೇಳಿದ್ದರು. ವ್ಯವಸ್ಥೆಯಲ್ಲಿ ಬದಲಾವಣೆ ಆಗದೇ ಇದ್ದರೆ ಹೊಸದಾಗಿ ಬರುವ ಸರ್ಕಾರವು ಈಗ ಇರುವ ಸರ್ಕಾರಕ್ಕಿಂತಲೂ ಹೆಚ್ಚು ಭ್ರಷ್ಟವಾಗಬಹುದು ಎಂದು ಅವರು ಆಗಲೇ ಭವಿಷ್ಯ ನುಡಿದಿದ್ದರು.  

ತೀರಾ ಇತ್ತೀಚೆಗೆ, ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಅಣ್ಣಾ ಮತ್ತೆ ಉಪವಾಸ ನಡೆಸಿದರು. ಅದು, ಅಧಿಕಾರಕ್ಕೆ ಬಂದು ಐದು ವರ್ಷವಾದರೂ ಲೋಕಪಾಲರನ್ನು ನೇಮಕ ಮಾಡದ ಕೇಂದ್ರದ ಮತ್ತು ಲೋಕಾಯುಕ್ತ ನೇಮಕ ವಿಚಾರದಲ್ಲಿ ಹಾರಿಕೆಯ ಉತ್ತರ ನೀಡುತ್ತಿರುವ ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್‌ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ. 

ಗುಜರಾತ್‌ ಗಲಭೆ ಸಂದರ್ಭದಲ್ಲಿ ನಡೆದ ಹತ್ಯೆ–ದೊಂಬಿಗಳ ಹಿಂದಿನ ವ್ಯಕ್ತಿ ಎಂದು ತಮ್ಮನ್ನು ಸಿಲುಕಿಸಲು ಕಾಂಗ್ರೆಸ್‌ ಸರ್ಕಾರವು ಸಿಬಿಐ, ಐಬಿ ಮೇಲೆ ನಿರಂತರ ಹತ್ತು ವರ್ಷ ಪ್ರಭಾವ ಬೀರಿತ್ತು ಎಂದು ಮೋದಿ ಅಳಲು ತೋಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಬಾಗಿಲು ಬಡಿಯುತ್ತಿದೆ. ಮತದಾರನ ಮನದಲ್ಲೇನಿದೆ ಎಂಬುದನ್ನು ಯಾರೂ ಹೇಳಲಾಗದು. 

‘ಪಂಜರದ ಗಿಣಿ’ಯನ್ನು (ಸಿಬಿಐ) ಹಾರಿಬಿಡಲು ಈಗಿನ ಸರ್ಕಾರಕ್ಕೆ ಅವಕಾಶ ಇದೆ. ಈ ಸಂಸ್ಥೆಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಿ ಲೋಕಪಾಲದ ಅಡಿಯಲ್ಲಿ ತರಬಹುದು. ಆಗ ಇದು ನಿಷ್ಪಕ್ಷಪಾತವಾಗಿ ಕೆಲಸ ಮಾಡಿ, ಎಲ್ಲ ಅನುಮಾನಗಳಿಂದಲೂ ಮುಕ್ತವಾಗಬಹುದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು