ಗುರುವಾರ , ಫೆಬ್ರವರಿ 9, 2023
30 °C

ಚುರುಮುರಿ: ಪೊಲಿಟಿಕಲ್ ಡಿಎಲ್‍ಎಸ್

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಸಾ, ಐಪಿಎಲ್ ಆಟದಲ್ಲಿ ಮಳೆ ಬಂದು ಡಿಎಲ್‍ಎಸ್ ನಿಯಮದ ದೆಸಿಂದ ಒಳ್ಳೊಳ್ಳೆ ಟೀಮುಗಳೇ ನೀರು ಕುಡಿತಾವೆ!’ ಅಂತಂದೆ.

‘ಹ್ಞೂಂ ಕಯ್ಯಾ, ಮಳೆ ನಮಗೇ ಅಲ್ಲ ಕ್ರಿಕೆಟ್ಟಿನೋರಿಗೂ ರೋಸ್ತದೆ’ ಅಂತ ದನಿಗೂಡಿಸಿದರು.

‘ಡಿಎಲ್‍ಎಸ್ ನಿಯಮ ಕಂಡಿಡಿದೋರು ಯಾರು ಸಾ?’ ಕುತೂಹಲ ತೋರಿಸಿದೆ.

‘ಡಕ್ವರ್ತ್ ಲೂಯಿಸ್‌ ಸ್ಟರ್ನ್‌ ನಿಯಮ ಕಂಡಿಡಿದೋರು ರಾಜಕೀಯದೋರೆ ಕಲಾ! ಆ್ಯಕ್ಟ್ ಆಫ್‌ ಗಾಡ್‍ಗೆ ವಿರುದ್ಧವಾಗಿ ಮನುಷ್ಯನ ಆಟ ಇದು!’ ತುರೇಮಣೆ ಮಾತು ಕೇಳಿ ನನಗೆ ಆಶ್ಚರ್ಯ ಆಯ್ತು.

‘ಅದೆಂಗೆ?’ ಅಂತ ಪ್ರಶ್ನೆ ಕೇಳಿದೆ.

‘ಮಳೆ ಬಂದಾಗ ಆಟಕ್ಕೆ ಒಂದು ಪಲಿತಾಂಶ ಅಂತ ಬರೂದು ಬ್ಯಾಡವೇ? ಅದುಕ್ಕೇ ಇಷ್ಟು ಓವರ್ ಕೊಡ್ತೀವಿ ಇಷ್ಟು ರನ್ ಹೊಡದ್ರೆ ಗೆಲ್ಲತೀರ ಅಂತ ಟಾರ್ಗೆಟ್ಟು ಕೊಡ್ತರೆ!’ ಅವರ ಮಾತು ನನಗೇನೂ ಅರ್ಥಾಗಲಿಲ್ಲ.

‘ಅದೇನು ಅಂತ ಬುಡಸೇಳಿ ಸಾ?’ ಅಂತ ಗೋಗರೆದೆ.

‘ನೋಡ್ಲಾ, ಎಲೆಕ್ಷನ್ ಫೈನಲ್ ಗೆಲ್ಲಕ್ಕೆ ಎಲ್ಲ ಪಕ್ಸಗಳು 150 ಪಾಯಿಂಟ್ ಟಾರ್ಗೆಟ್ ಮಾಡಿಕ್ಯಂಡವೆ. ಸರ್ಕಾರ ಮಾಡಕ್ಕೆ ಬೇಕಾದೋಟು ಸೀಟು ಬರದೇ ಇದ್ರೆ ಏನು ಮಾಡದು? ಆಗ ಸಾಂದರ್ಭಿಕ ಶಿಶು ‘ನನ್ನ ಕಡೆ ಸೀಟು ಇಷ್ಟು ನಿಮಗೆ ಕೊಟ್ಟೇನು, ಆದ್ರೆ ಸಿಎಂ ಮಾತ್ರ ನಾನೇ ಆಗಬೇಕು’ ಅಂತ ಯವಾರ ಸುರುಮಾಡ್ತದೆ. ಪಕ್ಸಗಳು ‘ಜನದ ಮನೆ ಹಾಳಾಗ್ಲಿ, ಅಧಿಕಾರ ಮುಖ್ಯ. ಜನದ ತಾವಿರೋ ಹದಿನೇಳು ಲಕ್ಷ ಕೋಟಿ ಕ್ಯಾಶು ನಮ್ಮ ತಿಜೋರಿಗೆ ಬಂದು ಬೀಳಬಕು!’ ಅಂತ ರೆಸಾರ್ಟಲ್ಲಿ ಸೀಟು ಪಾಲಾಕಿಕೊಳ್ಳೋ ಐನಾತಿ ಆಟಕ್ಕೆ ಸಮ್ಮಿಶ್ರ ಸರ್ಕಾರ ಅಂತ ಹೆಸರು ಕೊಟ್ಕಂದ್ರು!’

‘ಗೊತ್ತಾಯ್ತು ಬುಡಿ! ಡಿಎಲ್‍ಎಸ್ ಅಥವಾ ಡೆಪ್ಲಾಯಿಂಗ್ ಲೆಜಿಸ್ಲೇಚರ್ ಸೀಟ್ಸ್ ನಿಯಮದ ಮೂಲ ಕರ್ನಾಟಕವೇ ಅನ್ನಿ!’ ಅಂದು ನಮ್ಮ ರಾಜ್ಯದ ಸಾಧನೆ ಬಗ್ಗೆ ಹೆಮ್ಮೆಪಟ್ಟುಕೊಂಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು