ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪದಕ- ಪರೀಕ್ಷೆ

Published 10 ಅಕ್ಟೋಬರ್ 2023, 19:27 IST
Last Updated 10 ಅಕ್ಟೋಬರ್ 2023, 19:27 IST
ಅಕ್ಷರ ಗಾತ್ರ

‘ಇಷ್ಟು ದಿನ ಏಷ್ಯನ್ ಗೇಮ್ಸ್ ಆಯ್ತು, ಇನ್ನು ಕ್ರಿಕೆಟ್, ನಿಮ್ಮನ್ನು ಮಾತಾಡ್ಸೋ ಹಾಗಿಲ್ಲ, ಟೀವಿಲೇ ಮುಳುಗಿಬಿಡ್ತೀರಿ’ ನನ್ನವಳು ಕೆಣಕಿದಳು.

‘107 ಪದಕಗಳಲ್ಲಿ 28 ಚಿನ್ನ... ಶತಕಗಳ ಭರಾಟೆ ಶುರು, ಕ್ರಿಕೆಟ್ ಆಚೆಗೂ ಹೋಗಿ ಗೇಮ್ಸ್‌
ನಲ್ಲಿ ಬಂದಿರೋದು ಎಷ್ಟು ಚಂದ, ಸಿಂಗಾರ ಸಿರಿಯೆ, ಬಂಗಾರ ಗರಿಯೆ’ ಪುಟ್ಟಿಯ ಸಂಭ್ರಮ.

‘ನಿಮ್ಮ ಧಾರಾವಾಹಿಗಳ ಹಾಗೆ ಎಳೆಯೋಲ್ಲ. ಪಂದ್ಯದ ಅಂತ್ಯದಲ್ಲಿ ಸೋಲೋ ಗೆಲುವೋ ಕೊನೆಗೆ ಡ್ರಾನೋ ಏನೋ ಒಂದು
ನಿರ್ಧಾರವಾಗುತ್ತೆ’ ನಾನೆಂದೆ. 

‘ಶತಕ ಅಂದಕೂಡಲೇ ನೆನಪಾಯ್ತು, ಬದುಕಿರೋವ್ರನ್ನು ಸಾಯಿಸೋ ಈ ಸುಳ್ಳು ಸುದ್ದಿ ಹುಟ್ಟಿಸೋವ್ರಿಗೆ ಹೇಗೆ ಬುದ್ಧಿ ಕಲಿಸಬೇಕೋ? ಓಂ ಶಾಂತಿ ಸಂದೇಶಗಳು ಬಿದ್ದಿದ್ದೂ ಬಿದ್ದಿದ್ದೇ’ ಅತ್ತೆ ಕಿಡಿಕಾರಿದರು.

‘ನಿಜ, ಹುಷಾರಿಲ್ಲ ಅಂತ ಆಸ್ಪತ್ರೆಗೆ ಸೇರಿದ ಕೂಡಲೇ ಅದೇನು ಊಹಾಪೋಹ! ಪಾಪ, ಈ ಬಾರಿ ಸಾಲುಮರದ ತಿಮ್ಮಕ್ಕನ ಹೆಸರು’ ನನ್ನವಳೂ ಬೇಸರಗೊಂಡಳು.

‘ಕೇಂದ್ರ ಪಠ್ಯಕ್ರಮದಲ್ಲಿ ಹತ್ತು, ಹನ್ನೆರಡನೇ ತರಗತಿಯವರಿಗೆ ಎರಡು ಪರೀಕ್ಷೆಯಂತೆ, ಐಚ್ಛಿಕವಂತೆ, ಏನೂ ಅರ್ಥವಾಗದು. ಸದ್ಯ ಒಂದನ್ನು ಎದುರಿಸೋದೇ ಕಷ್ಟ’ ಅತ್ತೆ ಪೇಪರಿನಲ್ಲಿ ಕಣ್ಣಾಡಿಸಿದರು.

‘ನಮ್ಮಲ್ಲಿ ಮೂರು ಪರೀಕ್ಷೆಗಳು. ಅಜ್ಜೀ...
ಬೆಸ್ಟ್ ಆಫ್  ಥ್ರೀ. ಸಾವಕಾಶವಾಗಿ ಬೇಕಾದ ವಿಷಯವನ್ನು ಹೆಚ್ಚು ವಿಶ್ವಾಸದಿಂದ ಬರೆಯ
ಬಹುದು’ ಪುಟ್ಟಿ ಹಲ್ಕಿರಿದಳು.

ಅಷ್ಟರಲ್ಲೇ ಕಂಠಿ ಬಂದ ‘ಪಟಾಕಿ ಚೀಟಿ ಮುಗೀತು’ ರಸೀತಿ ಕೊಟ್ಟ. ‘ಏನು ಪಟಾಕಿ ಹೊಡೆಯೋದು? ನಡೆದಿರೋ ದುರಂತ ಸಾಲದೇ?’ ಅತ್ತೆ ಅತ್ತಿಬೆಲೆ ಅವಘಡ ನೆನೆದು ಸಿಡಿಯತೊಡಗಿದರು.

‘ಪಟಾಕಿ ಬದಲು ಸಿಂಥೆಟಿಕ್ ಸೀರೆ ಕೊಡ್ತಾರೆ. ಅದು ಬೇಡ ಅಂದ್ರೆ, ಮೇಲೆ ಒಂಚೂರು ದುಡ್ಡು ಕೊಟ್ರೆ ಒಳ್ಳೆ ರೇಷ್ಮೆ ಸೀರೆ...’ ಕಂಠಿಯಿಂದ ಕ್ಲ್ಯಾರಿಟಿ.

‘ಅಯ್ಯೋ! ಕೊಟ್ಟರಾಯ್ತು, ಅದಕ್ಕೇನಂತೆ, ಅಲ್ವೇ?’ ನನ್ನವಳು ನನ್ನತ್ತ ನೋಡಿದಾಗ ಹೊಸ ಪರೀಕ್ಷೆ ಎದುರಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT